ಅಸಾಮಾನ್ಯ ನಾಳೆಗಳನ್ನು ತೋರಿದ ಆಸೀಮೋವ

Date: 16-10-2020

Location: ಬೆಂಗಳೂರು


ಅಮೆರಿಕೆಯ ಅಧ್ಯಕ್ಷ ಚುನಾವಣೆಯ ನೆಪದಲ್ಲಿ ಚುನಾವಣಾ ವ್ಯವಸ್ಥೆಯು ರೂಪುಗೊಳ್ಳುತ್ತಿರುವ ಕ್ರಮ-ರೀತಿಯನ್ನು ಅರ್ಧ ಶತಮಾನಕ್ಕೂ ಹಿಂದೆ ಅಂದಾಜಿಸಿ ಬರೆದ ಐಸಾಕ್‌ ಆಸಿಮೋವ್‌ ಅವರ ಬರೆಹದ ಹಿನ್ನೆಲೆಯಲ್ಲಿ ಪತ್ರಕರ್ತ ಹೃಷಿಕೇಶ ಬಹದ್ದೂರ ದೇಸಾಯಿ ಅವರು ಈ ಬರೆಹದಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಫ್ರೆಡ್ರಿಕ ಟ್ರಂಪ್ ಅವರು ನವಂಬರ್ ಮೂರನೇ ತಾರೀಕು ಮಂಗಳವಾರ ತಮಗೆ ತಾವೇ ವೋಟು ಹಾಕಿಕೊಳ್ಳಲಿದ್ದಾರೆ. ಇತರ 25 ಕೋಟಿ ಮತದಾರರಲ್ಲಿ ಅವರಿಗೆ ಇನ್ನು ಎಷ್ಟು ಜನ ವೋಟು ಹಾಕುತ್ತಾರೆ ಅನ್ನುವುದರ ಮೇಲೆ ಅವರು ಪೋಟಸ - ಫ್ಲೋಟಸ ಹನಿಮೂನಗೆ ಲಂಡನ್ನಿಗೆ ಹೋಗುತ್ತರೋ ಇಲ್ಲವೋ ಅನ್ನುವುದು ನಿರ್ಧಾರವಾಗುತ್ತದೆ.

ಹೊಸತಾಗಿ ಚುನಾವಣೆ ಗೆದ್ದ ಅಧ್ಯಕ್ಷರು ತಮ್ಮ ಕುಟುಂಬದ ಸಮೇತ ಕ್ರಿಸ್ಮಸ್ ರಜೆ ಹಾಗೂ ಹೊಸ ವರ್ಷ ದ ಹಬ್ಬ ಆಚರಿಸಲು ಲಂಡನ್ ಗೆ ಹೋಗುವುದಕ್ಕೆ ಪತ್ರಿಕೆ ಗಳು `ಪೋಟಸ - ಫ್ಲೋಟಸ ಹನಿಮೂನ್' ಅಂತ ಹೆಸರು ಕೊಟ್ಟಿವೆ. ಪೋಟಸ ಅಂದರೆ ಪ್ರೆಸಿಡೆಂಟ್ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಮತ್ತು ಫ್ಲೋಟಸ ಅಂದರೆ ಫಸ್ಟ್ ಲೇಡಿ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಅಂತ .

ಇನ್ನು ನಮ್ಮಲ್ಲಿ ಇದ್ದಂತೆ ಅಮೆರಿಕ ಅಧ್ಯಕ್ಷ ಚುನಾವಣೆ ದಿನಾಂಕವನ್ನು ಅಲ್ಲಿನ ಚುನಾವಣಾ ಆಯೋಗ ಪ್ರತಿ ಬಾರಿ ಘೋಷಿಸಬೇಕಾಗಿಲ್ಲ. ಅದು `ಪ್ರತಿ ನಾಲ್ಕು ವರ್ಷದ ನಂತರ ನವಂಬರ್ ಮೊದಲ ಸೋಮವಾರದ ನಂತರ ಬರುವ ಮಂಗಳವಾರ' ಎಂದು ನಿಶ್ಚಯವಾಗಿ ಬಿಟ್ಟಿದೆ. ಒಬ್ಬ ಅಭ್ಯರ್ಥಿ ಕೇವಲ ಎರಡು ಬಾರಿ ಅಧ್ಯಕ್ಷ ಚುನಾವಣೆ ಎದುರಿಸಬಹುದು, ಅವನು ಸೋಲಲಿ- ಗೆಲ್ಲಲಿ, ಅವನಿಗೆ ಮತ್ತೆ ಅವಕಾಶ ಇಲ್ಲ. ಇದು ಅಲ್ಲಿನ ನಿಯಮ.

ಈ ಬಾರಿ ಎರಡನೇ ಮತ್ತು ಕೊನೆಯ ಬಾರಿ ಚುನಾವಣೆ ಎದುರಿಸುತ್ತಿರುವ ಟ್ರಂಪ್ ಅವರು ಮೂರನೇ ತಾರೀಕಿಗೂ ಮುಂಚೆ ಮತ ಚಲಾಯಿಸುವುದಾಗಿ ಘೋಷಿಸಿದ್ದಾರೆ . ಅಲ್ಲಿನ ಚುನಾವಣೆ ಕ್ರಮದಲ್ಲಿ ಅದಕ್ಕೆ ಅವಕಾಶ ಇದೆ. ಅಲ್ಲಿನ ಮತಗಟ್ಟೆಗಳು ತಿಂಗಳು ಗಟ್ಟಲೆ ತೆಗೆದಿರುತ್ತವೆ. ಅಮೆರಿಕ ರಾಷ್ಟ್ರಪತಿ ನೇರವಾಗಿ ಜನರಿಂದ ಚುನಾಯಿತನಾದ್ರೂ ಕೂಡ ಅಲ್ಲಿನ ಮತದಾನ ಪ್ರಕ್ರಿಯೆ ನಮ್ಮಲ್ಲಿನ ದಷ್ಟು ಸರಳ ಇಲ್ಲ. ಅಲ್ಲಿ ಮೂರು ಬಾರಿ ಚುನಾವಣೆ ನಡೆಯುತ್ತದೆ. ಮೊಟ್ಟ ಮೊದಲಿಗೆ, ಅಲ್ಲಿನ ಮತದಾರರು ಡೆಮೋಕ್ರೆಟಿಕ್ ಮತ್ತು ರಿಪಬ್ಲಿಕನ್ ಪಕ್ಷದ ಮತದಾರರು ಅಂತ ಹಣೆ ಪಟ್ಟಿ ಕಟ್ಟಿಸಿಕೊಳ್ಳುತ್ತಾರೆ.

ತಮ್ಮ ಪಕ್ಷ ಈ ಅಭ್ಯರ್ಥಿ ಯನ್ನು ಚುನಾವಣೆಗೆ ನಿಲ್ಲಿಸಬೇಕು ಅಂತ ಅವರು ಮೊದಲ ಬಾರಿ ಮತ ಹಾಕುತ್ತಾರೆ. ನಂತರ ಇರುವ ಇಬ್ಬರು- ಮೂವರು ಅಭ್ಯರ್ಥಿಗಳಲ್ಲಿ ಅಧ್ಯಕ್ಷ ನನ್ನು ಯಾರು -ಯಾರು ಆರಿಸಬೇಕು ಅನ್ನುವುದನ್ನು ನಿರ್ಧರಿಸಲಿಕ್ಕೆ ಇನ್ನೊಂದು ಬಾರಿ ಮತ ಹಾಕುತ್ತಾರೆ. ಆ ರೀತಿ ಆಯ್ಕೆ ಆದ ಜನ ಪ್ರತಿನಿಧಿಗಳು ಕೊನೆಗೆ ರಾಷ್ಟ್ರಾಧ್ಯಕ್ಷರ ಚುನಾವಣೆ ಮಾಡುತ್ತಾರೆ. ಅಲ್ಲಿನ ಮತ ಎಣಿಕೆ ನಮ್ಮಲ್ಲಿ ಇರುವಂತೆ ಮತಗಳ ಸಂಖ್ಯೆ ಆಧಾರದ ಮೇಲೆ ನಡೆಯುವುದಿಲ್ಲ. ಅವುಗಳ ಮೌಲ್ಯಗಳ ಮೇಲೆ ನಡೆಯುತ್ತದೆ. (ಅಲ್ಲಮಾ ಇಕ್ಬಾಲ್ ಹೇಳಿದರಲ್ಲ `ಪ್ರಜಾಸತ್ತೆ ಯಲ್ಲಿ ನಾವು ಜನರನ್ನು ಎಣಿಸುತ್ತೇವೆ. ಅಳೆಯುವುದಿಲ್ಲ. ಅದೇ ಸಮಸ್ಯೆ ’ ಅಂತ!.)

ಅಮೆರಿಕ ಸಂಯುಕ್ತ ಸಂಸ್ಥಾನದ 51 ರಾಜ್ಯಗಳಲ್ಲಿ ಕೆಲವು ದೊಡ್ಡವೂ- ಕೆಲವು ಸಣ್ಣವು ಇವೆ. ಅವುಗಳ ಜನಸಂಖ್ಯೆಯ ಲೆಕ್ಕದಲ್ಲಿ ಅಲ್ಲಿನ ಜನ ಪ್ರತಿನಿಧಿಗಳ ಸಂಖ್ಯೆ ನಿರ್ಧಾರ ಆಗುತ್ತದೆ. ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಅಸಮರ್ಪಕ ವಾಗಿ ಹೆಚ್ಚಿನ ಮತ ದೊರೆಯುತ್ತದೆ . ಅವರಿಗೆ ರಾಷ್ಟ್ರಪತಿ ಆಯ್ಕೆಯಲ್ಲಿ ನ್ಯಾಯಸಮ್ಮತವಲ್ಲದ ಬಲ ದೊರೆತು ಸಣ್ಣ ರಾಜ್ಯಗಳ ಹಿತಾಸಕ್ತಿ ಗೆ ಧಕ್ಕೆ ಬರಬಹುದು. ಇದನ್ನು ತಪ್ಪಿಸಲು ಆಯಾ ರಾಜ್ಯಗಳ ಪ್ರಾತಿನಿಧಿಕ ಮತಗಳ ಸಂಖ್ಯೆಯನ್ನು ಮೊದಲೇ ನಿಗದಿ ಮಾಡಲಾಗಿದೆ.

ಅವುಗಳನ್ನು ಭಾರತದ ರಾಜ್ಯಸಭೆಯ ಸದಸ್ಯರ ಆಯ್ಕೆಯ ರೀತಿಯಲ್ಲಿ ಲೆಕ್ಕ ಹಾಕಲಾಗುತ್ತದೆ. ಅವು `ಸಮ ಪ್ರಮಾಣ ಕ್ಕೆ ಅನುಗುಣವಾಗಿ ವರ್ಗಾವಣೆ ಆಗುವ ಪ್ರತಿನಿಧಿ ಮತದಾನ’ ಪದ್ಧತಿಯಲ್ಲಿ ದಾಖಲಾಗುತ್ತವೆ. ನವಂಬರ್‌ನಲ್ಲಿ ಸಾಮಾನ್ಯ ಮತದಾರರು ಮತ ಚಲಾವಣೆ ಮಾಡಿದರೂ ಕೂಡ ಪ್ರಾತಿನಿಧಿಕ ಮತಗಳ ಚಾಲನೆ ಆಗುವುದು ಜನವರಿಯಲ್ಲಿ. ನವಂಬರ್ನಲ್ಲಿ ಮತದಾರರ ಮೂಡು ನೋಡಿ ಇವರು ಗೆದ್ದರು- ಅವರು ಸೋತರು ಅಂತ ಪತ್ರಿಕೆ- ಚಾನೆಲ್ - ಪೋರ್ಟಲ್ಗಳು ಘಂಟಾ ಘೋಷ ಗದ್ದಲ ಮಾಡಿದರು ಕೂಡ ನಿಜವಾದ ಆಯ್ಕೆ ಆಗುವುದು ಜನವರಿಯಲ್ಲಿಯೇ. ಆ ನಂತರ ಅಧ್ಯಕ್ಷರು ಅಧಿಕಾರ ಸ್ವೀಕಾರ ಮಾಡುತ್ತಾರೆ. ಅದಕ್ಕೂ ಮೊದಲು ಸಪತ್ನೀಕರಾಗಿ ಲಂಡನ್ ಗೆ ಹೋಗಿ ಬರುತ್ತಾರೆ.

ಟ್ರಂಪ್ ಅವರಿಗೆ ಕೋರೋನಾ ಆಗಿ ಮೊನ್ನೆ ಮೊನ್ನೆ ಆಸ್ಪತ್ರೆ ಸೇರಿದ್ದರು. ನಾಲ್ಕೇ ದಿನಕ್ಕೆ ಹೊರಗೆ ಬಂದು ಚುನಾವಣೆ ಪ್ರಚಾರ ಆರಂಭಿಸಿದರು. ಅವರ ಪ್ರಚಾರಕ್ಕೆ ಎರಡು ವರ್ಷ ಸಮಯ ಇದ್ದರೂ ಕೂಡ ಅವರಿಗೆ ಸಮಾಧಾನ ಆಗಿಲ್ಲ. ’ಈ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬಂದರೆ ಅದನ್ನು ನಾನು ಒಪ್ಪಬೇಕು ಅಂತ ಏನೂ ಇಲ್ಲ,’ ಅಂತ ಈಗಾಗಲೇ ಅವರು ಹೇಳಿಕೆ ಕೊಟ್ಟಿದ್ದಾರೆ.

ಚುನಾವಣೆಯಲ್ಲಿ ರಷಿಯಾದ ದೊಡ್ಡ ದೊಡ್ಡ ಖಾಸಗಿ ಕಂಪನಿ ಮಾಲೀಕರು ಫೇಸುಬುಕ್ಕು ಮುಂತಾದ ಆನ್ಲೈನ್ ಅಂಗಣಗಳ ಮೂಲಕ ಜನರ ದಿಕ್ಕು ತಪ್ಪಿಸುವ ಜಾಹೀರಾತು ಕೊಡಬಹುದು’ ಅಂತ ಅಲ್ಲಿನ ಸಂಸತ್ತು ಗುಮಾನಿ ವ್ಯಕ್ತ ಪಡಿಸಿದೆ. `ಟ್ರಂಪ್ ಆಡಳಿತ ಕರಿಯರು ಇರುವ ಪ್ರದೇಶಗಳಲ್ಲಿ ಮತಗಟ್ಟೆಗಳ ಸಂಖ್ಯೆ ಕಮ್ಮಿ ಮಾಡಿದೆ, ಲಕ್ಷಾಂತರ ಸಕ್ರಿಯ ಮತದಾರರ ಹೆಸರನ್ನ ಪಟ್ಟಿಯಿಂದ ತೆಗೆದು ಹಾಕಿದ್ದಾರೆ' ಅಂತ ಅಲ್ಲಿ ಕೆಲ ಜನ ಪರ ಹೋರಾಟಗಾರರು ದೂರಿದ್ದಾರೆ.

ಇಷ್ಟೆಲ್ಲಾ ಅಳುಕುಗಳ ನಡುವೆ ಅಲ್ಲಿನ ನೋಂದಾಯಿತ ಮತದಾರರು ಮೂರನೇ ತಾರೀಕು ಮನೆಯಿಂದ ಹೊರಬಿದ್ದು ಮತ ಹಾಕಲಿದ್ದಾರೆ. ಕೆಲ ವರ್ಷಗಳ ಹಿಂದೆ ಅಲ್ಲಿನ ಸಂಸತ್ ಸಮಿತಿಯೊಂದು ಮತದಾನಕ್ಕೆ ಕಾಗದ ಬಳಕೆಯೇ ಸೂಕ್ತ . ಎಲೆಕ್ಟ್ರಾನಿಕ್ ಯಂತ್ರಗಳು ದುರ್ಬಳಕೆ ಆಗಬಹುದು ಅಂತ ವರದಿ ನೀಡಿದ್ದರಿಂದ ಅಲ್ಲಿ ಇನ್ನೂ `ಕಾಗದ ಹಾಗೂ ಕಡ್ಡಿ'ಯ ಬಳಕೆ ಆಗುತ್ತದೆ.

ಸರಿ ಸುಮಾರು ಇಂಥವೇ ಆದ ಕೆಲವು ಆರೋಪಗಳು ನಮ್ಮ ವ್ಯವಸ್ಥೆ ಬಗ್ಗೆಯೂ ಆಗಾಗ ಕೇಳಿ ಬರುತ್ತವೆ. `ಆಳುವ ಪಕ್ಷದವರು ಈವಿಎಮ್ ಮತ ಯಂತ್ರಗಳನ್ನು ತಿರುಚಿದ್ದಾರೆ, ಸುಳ್ಳು ಸುದ್ದಿಗಳನ್ನು ನಿಜ ಎಂಬಂತೆ ಹಬ್ಬಿಸಿ ಮುಗ್ಧ ಜನರ ತಲೆ ಕೆಡಿಸಿದ್ದಾರೆ, ಟಿವಿ ಮಾಧ್ಯಮ, ಪತ್ರಿಕೆ, ಪೋರ್ಟಲ್ಗಳ ಮಾಲೀಕರು ಸರಕಾರ ದೊಡನೆ ಶಾಮೀಲು ಆಗಿ ಒಮ್ಮುಖ ಸುದ್ದಿ ನೀಡುತ್ತಾ ಇದ್ದರೆ, ಅಧಿಕಾರ ರೂಢರು ಚುನಾವಣೆ ಆಯೋಗದ ಸ್ವಾತಂತ್ರವನ್ನು ಕಸಿದುಕೊಂಡು ಬಿಟ್ಟಿದ್ದಾರೆ, ಜನರ ಚಿಂತನಾ ಶಕ್ತಿ ಕಳೆದು ಹೋಗುವಂತೆ ಲೇಖನ, ಭಾಷಣ, ವಿಡಿಯೋ, ಹಾಡುಗಳ ಮೂಲಕ ಸಿದ್ಧ ಅಭಿಪ್ರಾಯ ಗಳನ್ನು ರೂಪಿಸಿ ಬಿಡುತ್ತಿದ್ದಾರೆ' ಅಂತ ಆಳುವವರ ವಿರುದ್ಧ ಆರೋಪಗಳು ಇವೆ.

ಈಗ ಇಲ್ಲಿಗೆ ಒಂದು ಬ್ರೇಕು ತೆಗೆದುಕೊಳ್ಳೋಣ.

ಇವೆಲ್ಲ ಒಂದು ಪರ್ಯಾಯ ವಿಶ್ವದಲ್ಲಿ ನಡೆಯುತ್ತಿವೆ ಅಂದು ಕೊಳ್ಳೋಣ. ಪೋಟಸ ಹೆಸರನ್ನು ಕನ್ನಡೀಕರಿಸಿದರೆ ಅದು ದಾನಪ್ಪ ಫಕೀರಪ್ಪ ತುತ್ತೂರಿ ಅಂತ ಆಗಬಹುದು, - ಫ್ಲೋಟಸ ಅವರು ಕೃಷ್ಣ ವರ್ಣಿ ಅಥವಾ ಕಿಟ್ಟವ್ವ ಆಗಬಹುದು. ಅವರು ಏನೇನು ಮಾತಾಡಬಹುದು? ಹೇಗೆಲ್ಲಾ ಆಟ ಕಟ್ಟಬಹುದು? ಗೆದ್ದರೆ ಹೇಗೆ ಆಡಬಹುದು?, ಸೋತರೆ ಅವರು ಏನು ಮಾಡಬಹುದು?

ಈಗ ಹೋಗಲಿ, ಇನ್ನು ಅರವತ್ತು ವರ್ಷಗಳ ನಂತರದ ಚುನಾವಣೆ ಯಲ್ಲಿ ಏನು ಆಗಬಹುದು? ಯಾವ ರೀತಿಯ ಸ್ವಾರಸ್ಯಕರ ಘಟನೆ- ತಂತ್ರಜ್ಞಾನ, ಪ್ರಚಾರ ತಂತ್ರ, ಅಲ್ಲಿ ಬಳಕೆ ಆಗ ಬಹುದು? ಅದನ್ನು ನಾವು ಈಗ ಊಹಿಸಬಲ್ಲೆವೆ?

ಅಮೆರಿಕದ ಅಪ್ರತಿಮ ಪ್ರತಿಭಾಶಾಲಿ ಸಾಹಿತಿ, ಆಧುನಿಕ ಕಾಲದ ವಿಜ್ಞಾನ ಸಾಹಿತ್ಯದ ಪ್ರವರ್ತಕ ರಲ್ಲಿ ಒಬ್ಬ ಎಂದು ಹೆಸರಾದ ಐಸಾಕ ಆಸೀಮೋವ ಅವರ ಎದುರು ಇದೇ ಪ್ರಶ್ನೆ 1955ಕ್ಕೆ ಎದುರಾಗಿತ್ತು. ಅಸೀಮ ಕಲ್ಪನಾ ಶಕ್ತಿಯ ಆಸೀಮೋವ ಅವರು ಭವಿಷ್ಯದ ತಂತ್ರಜ್ಞಾನದ ಬಗ್ಗೆ ಬರೆಯುವಾಗ ಮುಂದಿನ ದಿನಗಳ ಸಮಾಜದ ಬಗ್ಗೆ, ಅರ್ಥ ವ್ಯವಸ್ಥೆ, ಜನ ಜೀವನ, ಕಲೆ- ಸಂಸ್ಕೃತಿ ಬಗ್ಗೆ ಕೂಡ ಬರೆದರು. ಅವರ ಕತೆ- ಕಾದಂಬರಿ ಗಳು ಸುಮಾರು 500 ಪುಸ್ತಕಗಳಲ್ಲಿ ಪ್ರಕಟವಾಗಿವೆ. ಅವು ಮರು ಮುದ್ರಣಗೊಳ್ಳುತ್ತಲೇ ಇರುತ್ತವೆ.

ಅವರು ಬರೆದ ಕೆಲವು ಕತೆಗಳನ್ನು ಜನ ಈಗ ಹುಡುಕಿ ಕೊಂಡು ಓಡುತ್ತಾ ಇದ್ದಾರೆ. ಒಂದರ ಹೆಸರು `ದ ಲಾಸ್ಟ್ ಟ್ರಂಪ್' (ಕೊನೆಯ ತುತ್ತೂರಿ) ಇನ್ನೊಂದು `ಫ್ರಾಂಛೈಸ್’. ಇದನ್ನು `ಮತಾಧಿಕಾರ' ಅಂತಲೂ ನೋಡಬಹುದು, `ದಲ್ಲಾಳಿ ವ್ಯವಹಾರ' ಅಂತಲೂ ತಿಳಿಯಬಹುದು.

ಇದು 1955 ರಲ್ಲಿ ಬರೆದದ್ದು. ಆದರೆ ಇದರಲ್ಲಿ ನಡೆಯುವ ಘಟನೆಗಳು 2008ರವು. ಈ ಕತೆಯನ್ನು ನಾನು `ಪೌರಶ್ರೀ' ಅನ್ನುವ ಹೆಸರಿನಲ್ಲಿ ಅನುವಾದ ಮಾಡಿದ್ದೇನೆ.

ನಮ್ಮ ಮಟ್ಟಿಗೆ 2008ನೇ ವರ್ಷ ಭೂತಕಾಲ ಇರಬಹುದು. ಆದರೆ ಈ ಕತೆಯ ಪಾತ್ರಗಳಿಗೆ ಅದು ಭವಿಷ್ಯ ಕಾಲ. ಇಲ್ಲಿನ ನಾಯಕ ಕಿರಾಣಿ ಅಂಗಡಿ ಕಾರಕೂನ. ನಾರ್ಮನ್ ಅನ್ನುವ ಹೆಸರಿನ ಈತ ಅಗದೀ ನಾರ್ಮಲ್ ಮನುಷ್ಯ. ನಾವು ಅವನನ್ನು ಮಾಮೂಲಪ್ಪ ಅಂತ ಕರೆಯಬಹುದೇನೋ.

ಇವನೊಬ್ಬ `ಆವೆರೇಜ್ ಜೋ’, ಅಥವಾ ಸಾಮಾನ್ಯರಲ್ಲಿ ಸಾಮಾನ್ಯ . ತನ್ನ ದೇಶದ ಕೋಟ್ಯಂತರ ಸಾಮಾನ್ಯರ ಜೀವನದಂತೆ ಇವನ ಜೀವನವೂ ಕೂಡ ಅನೇಕ ದಶಕಗಳಿಂದ ಒಂದೇ ಹಳಿಯ ಮೇಲೆ ಓಡುವ ಗೂಡ್ಸ್ ಗಾಡಿಯಂತೆ ಸಾಗುತ್ತಿದೆ. ಯಾವ ರೋಚಕ ಕ್ರಿಯೆಗೆ, ಸಾಹಸಕ್ಕೆ ಕೈ ಹಾಕದೇ, ತಾನು ಆಯಿತು, ತನ್ನ ಕೆಲಸ ಆಯಿತು ಅಂತ ಇದ್ದಾನೆ.

ಇವನ ಮನೆಯಲ್ಲಿ ಮಡದಿ, ಮಗಳು ಹಾಗೂ ಹೆಣ್ಣು ಕೊಟ್ಟ ಮಾವ ಇದ್ದಾರೆ. ಆ ಮಾವ ಎಲ್ಲ ಮುದುಕರಂತೆ `ಹಳೆ ದಿನಗಳು ಶ್ರೇಷ್ಟ, ಈಗ ಕಾಲ ಕೆಟ್ಟು ಹೋಗಿದೆ' ಅಂತ ಬೈದುಕೊಂಡು ಇಡೀ ದಿನ ಪೇಪರ್ ಓದುತ್ತಾ ಇರುತ್ತಾನೆ. ತನ್ನ ಮಗಳೊಂದಿಗೆ ರಾಜಕೀಯ ಮಾತಾಡುವ ಈತ, ಅಳಿಯನೊಂದಿಗೆ ಆ ವಿಷಯ ಎತ್ತುವುದೇ ಇಲ್ಲ. ಒಂದು ದಿನ ಬೆಳಿಗ್ಗೆ ಚಾ ವೇಳೆಗೆ ಅವರು ರಾಷ್ಟ್ರಪತಿ ಚುನಾವಣೆ ಬಗ್ಗೆ ಮಾತಾಡುತ್ತಾ ಕೂತಿರುತ್ತಾರೆ. ಓದುಗರು ಇಲ್ಲಿ ಒಂದು ವಿಷಯ ಗಮನಿಸಬೇಕು. ಭವಿಷ್ಯದ , ಅಂದರೆ ಈ ಕತೆಯಲ್ಲಿ ಬರುವ ಮತದಾನ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಮುಂದಿನ ರಾಷ್ಟ್ರಾಧ್ಯಕ್ಷನ ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನು ಮಲ್ಟಿ ವ್ಯಾಕ ಅನ್ನುವ ದೈತ್ಯ ಕಂಪ್ಯೂಟರ್ ಗೆ ವಹಿಸಲಾಗಿದೆ.

ಅದು `ಸ್ಯಾಂಪಲ್ ಸರ್ವೇ' ಸೂತ್ರದ ಆಧಾರದ ಮೇಲೆ ಚುನಾವಣೆ ನಡೆಸುತ್ತದೆ. ಅನೇಕ ದಶಕ ಚುನಾವಣೆ ನಡೆಸಿದ ಅನುಭವ ದಿಂದಾಗಿ ಆ ಕಂಪ್ಯೂಟರ್ ಗೆ ಅಮಾನುಷ ಕೌಶಲ್ಯ ಸಿದ್ಧಿಸಿದೆ. ಅದು ಬರ್ತಾ ಬರ್ತಾ ತನ್ನ ಮಾದರಿಯ ಪ್ರಮಾಣ ಕಮ್ಮಿ ಮಾಡುತ್ತಿದೆ. ಕಳೆದ ಕೆಲವು ಚುನಾವಣೆಗಳಲ್ಲಿ ಅದು ಕೇವಲ ಒಬ್ಬ ಮತದಾರನ ಮನಸ್ಸು ಅರಿತುಕೊಂಡು ಸಂಪೂರ್ಣ ಮತದಾರರ ಮನೋಭಾವನೆ ತಿಳಿದು ಕೊಂಡಿದೆ. ಅದರ ಆಧಾರದ ಮೇಲೆ ಅದು ಚುನಾವಣೆ ಫಲಿತಾಂಶದ ನಿರ್ಧಾರ ಮಾಡುತ್ತದೆ. ಆ ರೀತಿಯಲ್ಲಿ ಚುನಾಯಿತ ನಾಗುವ ಮತದಾರನಿಗೆ `ಸಿಟಿಜನ್ ಆಫ್ ದಿ ಇಯರ್' ಅಥವಾ ಪೌರಶ್ರೀ ಅಂತ ಬಿರುದು ಕೊಡುತ್ತಾರೆ.

ಹೀಗಾಗಿ ಅಧ್ಯಕ್ಷ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿ ಗಳಷ್ಟೇ ಪ್ರಾಮುಖ್ಯತೆ ಪೌರಶ್ರೀ ಗೆ ಬಂದಿದೆ. ಚಹಾ ಅಂಗಡಿಗಳಲ್ಲಿ, ಮನೆ ಮನೆ ಗಳಲ್ಲಿ, ಚರ್ಚೆ ಯ ಸ್ವರೂಪ ಬದಲಾಗಿದೆ. ಪ್ರಮುಖ ಪಕ್ಷದವರು ಯಾರಿಗೆ ಟಿಕೆಟ್ ಕೊಟ್ಟಿದಾರೆ ಅನ್ನುವ ಚರ್ಚೆ ಈಗ ಹಿಂದೆ ಸರಿದಿದೆ. ಈಗ ಚರ್ಚೆ ಇರುವುದು ಪೌರಶ್ರೀ ಬಗ್ಗೆ.

ನಮಂಥ 25 ಕೋಟಿ ಜನರಲ್ಲಿ ಯಾವ ಪುಣ್ಯಾತ್ಮನನ್ನು ಅಧಿಕೃತ ಮತದಾರ ಅಂತ ಆಯ್ಕೆ ಮಾಡಲಾಗುತ್ತದೆ? ಅವನು ಯಾರೋ ಏನೋ? ಅವನು ನಮ್ಮ ವಿಚಾರದ ವನು ಇದ್ದಾನೋ ಇಲ್ಲವೋ? ಅವನು ಹೇಗೆ ಆಯ್ಕೆ ಮಾಡುತ್ತಾನೋ? ಅವನು ನಮ್ಮನ್ನು ಸರಿಯಾಗಿ ಪ್ರತಿನಿಧಿಸುತ್ತಾನೋ ಇಲ್ಲವೋ? ಅವನ ಕೈಯಿಂದ ಏನಾದರೂ ತಪ್ಪು ಆದರೆ ಏನು ಕತೆ?’’ ಅನ್ನುವ ಮಾತುಗಳು ಎಲ್ಲ ಕಡೆ.

ನಾರ್ಮನ್ ಕುಟುಂಬ ಇರೋದು `ಇಂಡಿಯಾನಾ' ರಾಜ್ಯದ `ಬ್ಲೂಮೀಂಗಟನ' ಅನ್ನೋ ಊರಿನಲ್ಲಿ. ಅದನ್ನು ನಾವು `ಅರಳಿ ಕಟ್ಟೆ' ಅನ್ನುಬಹುದೋ? ಅಲ್ಲಿ ಮಹಿಳೆಯರ ಸಂಘದಲ್ಲಿ ಒಂದು ಗಾಳಿ ಮಾತು ಹುಟ್ಟಿ ಊರೆಲ್ಲ ಹರಡುತ್ತದೆ. `ಈ ವರ್ಷದ ಪೌರಶ್ರೀ ಆಗಲಿರುವವರು ಇಂಡಿಯಾನಾ ರಾಜ್ಯದ ಒಬ್ಬ ಮತದಾರ,’ ಅಂತ. ಅದನ್ನ ನಾರ್ಮನ್ನ ಹೆಂಡತಿ ತನ್ನ ಅಪ್ಪನ ಹತ್ತಿರ ಖುಶಿ- ಆಶ್ಚರ್ಯ ದಿಂದ ಹೇಳುತ್ತಾಳೆ. ಅವಳ ಅಪ್ಪ. `ಅದೇನು ಅಸಡ್ಡಾಳು ವ್ಯವಸ್ಥೆ? ನಮ್ಮ ಕಾಲವೇ ಚನ್ನಾಗಿತ್ತು. ನಾವು ಎಲ್ಲರೂ ವೋಟು ಹಾಕುತ್ತಿದ್ದೆವು,’ ಅಂತ ಹೇಳಿ ಮತ್ತೆ ಪತ್ರಿಕೆಗೆ ಮರಳುತ್ತಾನೆ. ಅವನ ಮೊಮ್ಮಗಳಿಗೆ ಆಶ್ಚರ್ಯ ಆಗುತ್ತದೆ. ಯಾಕೆ ಅವಳು ಹುಟ್ಟಿದಾಗಿನಿಂದ ಎಲ್ಲರೂ ಮತ ಹಾಕುವ ದೃಶ್ಯವನ್ನು ಅವಳು ನೋಡಿಯೇ ಇಲ್ಲ.

ಅದರಲ್ಲಿ ಆಸಕ್ತಿ ಇಲ್ಲದ ನಾರ್ಮನ್, ’ಅದೆಲ್ಲ ರಾಜಕೀಯ ನಮಗೆ ಏಕೆ ಬೇಕು' ಎಂದು ಸುಮ್ಮನಾಗುತ್ತಾನೆ. ಅಷ್ಟರಲ್ಲಿ ಬಾಗಿಲು ಕರೆ ಗಂಟೆ ಬಾರಿಸುತ್ತದೆ. ಅಮೆರಿಕ ರಹಸ್ಯ ಪಡೆಯ ಏಜೆಂಟ್ ಒಬ್ಬ ಒಳ ಬಂದು ತನ್ನ ಪರಿಚಯ ಮಾಡಿಕೊಂಡು `ಮಲ್ಟಿವ್ಯಾಕ ಕಂಪ್ಯೂಟರ್ ಈ ಬಾರಿ ನಾರ್ಮನ್ ಅವರನ್ನ ಪೌರಶ್ರೀ ಆಗಿ ಆಯ್ಕೆ ಮಾಡಿದೆ' ಎಂಬ ಸುದ್ದಿ ಹೇಳುತ್ತಾನೆ. `ಇವತ್ತಿನಿಂದ ಚುನಾವಣೆ ವರೆಗೂ ನಾನು ನಿಮ್ಮ ಕುಟುಂಬದ ರಕ್ಷಣೆಗಾಗಿ ನಿಮ್ಮ ಮನೆಯಲ್ಲಿಯೇ ಇರುತ್ತೇನೆ' ಎಂದು ಅಲ್ಲಿಯೇ ಕುರ್ಚಿ ಸರಿಸಿಕೊಂಡು ಕೂಡುತ್ತಾನೆ.

ಇದರಿಂದ ನಾರ್ಮನ್ಗೆ ಆಘಾತವಾಗುತ್ತದೆ. `ಇಡೀ ದೇಶದ ಭವಿಷ್ಯ ನನ್ನ ಮೇಲೆ ಇದೆ. ನಾನು ಹೇಗೆ ಸಂಭಾಳಿಸಲಿ?’ ಅಂತ ತಲೆ ಚಚ್ಚಿಕೊಳ್ಳುತ್ತಾನೆ. ಆದರೆ ಗರ್ವದಿಂದ ಅವನ ಪತ್ನಿಯ ಎದೆ ತುಂಬಿ ಬರುತ್ತದೆ. ಚುನಾವಣೆ ದಿನ ಪೊಲೀಸರು, ರಕ್ಷಣಾ ಪಡೆಯವರು ನಾರ್ಮನ್ ಒಬ್ಬನನ್ನೇ ಒಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಮಲ್ಟಿ ವ್ಯಾಕ ಯಂತ್ರವನ್ನು ನೋಡಿ ಕಣ್ಣು ತುಂಬಿಕೊಳ್ಳಬೇಕು ಎಂದು ಕೊಂಡಿದ್ದ ಅವನಿಗೆ ನಿರಾಶೆಯಾಗುತ್ತದೆ. ಯಾರ ಕಣ್ಣಿಗೂ ಕಾಣದಂತೆ ಅದನ್ನು ನೆಲದ ಅಳದಲ್ಲಿ ಹುಗಿದು ಬಿಟ್ಟಿದ್ದಾರೆ. ಮತದಾರ ಅದನ್ನು ನೋಡೋದಿಲ್ಲ. ಅದು ಸಿದ್ಧ ಪಡಿಸಿದ ಕೆಲವು ಪ್ರಶ್ನೆಗಳಿಗೆ ಆತ ಉತ್ತರ ಹೇಳಿದ ಮೇಲೆ ವೈದ್ಯರು ದೂರ ಸಂದೇಶ ಮೂಲಕ ಅದಕ್ಕೆ ಉತ್ತರ ರವಾನಿಸುತ್ತಾರೆ .

ಅವರು `ಪ್ರಶ್ನೆ ಶುರು ಮಾಡೋಣ' ಅಂತ ಹೇಳಿದಾಗ ನಾರ್ಮನ್ ಉತ್ಸುಕನಾಗುತ್ತಾನೆ. ಆದರೆ ಆ ಪ್ರಶ್ನೆಗಳನ್ನು ನೋಡಿ ಅವನಿಗೆ ಗಾಬರಿ- ಗಲಿಬಿಲಿ. ಅವು ಯಾವುವೂ ರಾಜಕೀಯಕ್ಕೆ ಸಂಬಂದ ಪಟ್ಟ ವಲ್ಲ. `ನಿಮಗೆ ಯಾವ ಬಣ್ಣ ಇಷ್ಟ? ನಿಮ್ಮ ಊರಲ್ಲಿ ವಾತಾವರಣ ಹೇಗೆ ಇದೆ? ನಿಮ್ಮ ಪೈಕಿ ಯಾರ ಮದುವೆ- ನಿಶ್ಚಿತಾರ್ಥ ಆಯಿತು ಸದ್ಯದಲ್ಲಿ? ನಿಮಗೆ ಮಾವಿನ ಹಣ್ಣು ಇಷ್ಟವೇ?’ ಇತ್ಯಾದಿ, ಅವನು ಬಂದಿರುವ ಕೆಲಸಕ್ಕೂ, ಅವನು ಕಲ್ಪಿಸಿಕೊಂಡ ಗುರುತರ ಜವಾಬ್ದಾರಿಗೂ ಇಲ್ಲಿನ ಪ್ರಶ್ನೆ ಗಳಿಗೂ ಸಂಬಂಧವೇ ಇಲ್ಲ! `ಇದು ಹೀಗೆ ಏಕೆ' ಅಂತ ಅವನು ಕೇಳಿದಾಗ. `ಇದು ಹೀಗೆಯೇ. ಹಿಂದಿನ ಎಲ್ಲ ಪೌರಶ್ರೀ ಗಳಿಗೆ ಇದೆ ರೀತಿಯ ಪ್ರಶ್ನೆ ಕೇಳಲಾಗಿತ್ತು. ಅದು ನಾರ್ಮಲ್'’ ಅಂತ ಅವರು ನಾರ್ಮನ್ \ನಿಗೆ ಹೇಳುತ್ತಾರೆ.

`ಮಲ್ಟಿವ್ಯಾಕ ತುಂಬ ಸುಧಾರಿತ ಯಂತ್ರ. ಅದು ನಿಮ್ಮ ವಿಚಾರ ಲಹರಿ ನೋಡಿ ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ'’ ಅಂತ ವಿವರಣೆ ನೀಡುತ್ತಾರೆ.

ಪ್ರಶ್ನೋತ್ತರ ದ ನಂತರ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದು ಹೊರಬಂದ ನಾಯಕನಿಗೆ ಪ್ರಶ್ನೆಗಳು ಅಮುಖ್ಯ ಅನ್ನಿಸಿ, ಮರೆತು ಹೋಗುತ್ತವೆ. ಆದರೆ ಅವನ ಆತಂಕ ಕಮ್ಮಿ ಆಗಿದೆ. `ನಾನು ಪೌರಶ್ರೀ ಆಗಿದ್ದಕ್ಕೂ ಸಾರ್ಥಕ ವಾಯಿತು. ಈ ರಾಷ್ಟ್ರದ ಸಂವಿಧಾನದ ಅಶಯದಂತೆ ನನ್ನ ಮೂಲಕ ಎಲ್ಲ ಮತದಾರರು ಯಾವುದೇ ಹೆದರಿಕೆ ಇಲ್ಲದೇ, ಸ್ವತಂತ್ರವಾಗಿ, ಸಾಕಾರಣವಾಗಿ, ಸರಿಯಾದ ಅಭ್ಯರ್ಥಿಗೆ ಮತ ಹಾಕಿದಂತೆ ಆಯಿತು'’ ಅಂತ ನಿರುಮ್ಮಳವಾಗಿ ಮನೆಗೆ ಹೋಗುತ್ತಾನೆ.

ಆಸೀಮೋವ ಅವರು ತಮ್ಮ ಮಾಮೂಲಪ್ಪ ನನ್ನು ಇಂಡಿಯಾನಾ ಅನ್ನೋ ರಾಜ್ಯದಲ್ಲಿ ಯಾಕೆ ಸೃಷ್ಟಿಸಿದರೋ ಗೊತ್ತಿಲ್ಲ. ಆದರೆ ಕಲೆ- ಸಾಹಿತ್ಯ ಕ್ಕೆ ಗಡಿಗಳು ಇಲ್ಲ. ಅವು ಸರ್ವತ್ರಿಕವಾದವು ಅನ್ನುವುದನ್ನು ಈ ಕತೆ ನೆನಪಿಸುತ್ತದೆ.

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...