ಬದುಕನ್ನೇ ಕತೆಯಾಗಿಸಿದ ಲೇಖಕ ವೈಕಂ. ಮೊಹಮದ್ ಬಷೀರ್


ತಲಯೋಲಪ್ಪರಂಬಿನ ನದೀ ತೀರದಲ್ಲಿ ಕಾಯಿ ಅಬ್ದುರ್ರಹ್ಮಾನರಿಗೆ ಸೇರಿದ ಎಂಟೆಕರೆ ಜಮೀನು. ಅದರ ಮೂಲೆಯಲ್ಲಿ ತೆಂಗಿನ ಮಡಲಿನಿಂದ ಕಟ್ಟಿದ ಗುಡಿಸಲು. ಗುಡಿಸಲ ಒಲೆಯಲ್ಲಿ ಭತ್ತ ಬೇಯುತ್ತಿದೆ. ಕಂಚಿನ ಪಾತ್ರೆಯಲ್ಲಿ ಕುದಿ ಬರತೊಡಗಿದಾಗ ಹತ್ತು ತಿಂಗಳ ತುಂಬು ಗರ್ಭಿಣಿ ಅಬ್ದುರ್ರಹ್ಮಾನರ ಪತ್ನಿ ಕುಂಞಾಮಿನ ಅದನ್ನು ಕೆಳಗಿಳಿಸಿದರು. ಬೆಂದ ಭತ್ತವನ್ನು ಹೊರಗೆ ತಂದು ಚಾಪೆಯಲ್ಲಿ ಒಣಗಲು ಹಾಕುವಾಗಲೇ ತನಗೆ ಹೆರಿಗೆಯಾಗಿದೆ ಎಂದು ಆಕೆಗೆ ಗೊತ್ತಾಗುವುದು. ಯಾ ರಬ್ಬೇ ಎಂದು ಮನೆ ಕಡೆ ನೋಡಿದರೆ, ಮನೆ ಹೊತ್ತಿ ಉರಿಯುತ್ತಿದೆ. ಒಲೆಯಿಂದ ಹಾರಿದ ಕಿಡಿ ಮಡಲಿನ ಮನೆಯನ್ನು ಸುಡುತ್ತಿತ್ತು. ಹೇಗೋ ಒಳಗೆ ಹೋಗಿ ನೋಡಿದರೆ ಮಗು ನೆಲದಲ್ಲಿ ಬಿದ್ದುಕೊಂಡಿದೆ. ಎತ್ತಿಕೊಂಡು ಬಂದು ಅದೇ ಭತ್ತ ಒಣಗಿಸುವ ಚಾಪೆಯಲ್ಲಿ ಮಲಗಿಸಿದರು ಆ ತಾಯಿ. ಹೀಗೆ ಬಷೀರರ ಹುಟ್ಟು ಕೂಡ ಬದುಕಿನಷ್ಟೇ ವಿಕ್ಷಿಪ್ತ. ತನ್ನ ಬದುಕನ್ನೇ ಕತೆಯಾಗಿಸಿದ ಬಷೀರ್ ಹುಟ್ಟಿನ ಕತೆಯನ್ನು ಮಾತ್ರ ಬಹಳ ವರ್ಷಗಳ ಕಾಲ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಎಂ.ಎ ರಹಮಾನ್ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ಪಡೆದ “ದಿ ಮ್ಯಾನ್” ಡಾಕ್ಯುಮೆಂಟರಿಯ ಮೂಲಕ ಈ ಕತೆ ಹೊರ ಜಗತ್ತಿಗೆ ಮೊತ್ತ ಮೊದಲ ಬಾರಿ ತಿಳಿಯಿತು.

ಬಷೀರರ ಹುಟ್ಟಿನೊಂದಿಗೆ ತಳುಕು ಹಾಕಿಕೊಂಡಿರುವ ಇನ್ನೊಂದು ಸ್ವಾರಸ್ಯಕರ ಘಟನೆಯಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ಘೋಷಣೆಯಾದಾಗ ಜನನ ಪ್ರಮಾಣಪತ್ರ ಬೇಕಾಗಿ ಬಂತು. ಹುಟ್ಟಿದ ದಿನವೇ ಗೊತ್ತಿಲ್ಲದ ಅವರಿಗೆ ಪ್ರಮಾಣಪತ್ರ ಎಲ್ಲಿಂದ ಸಿಗಬೇಕು. ಆದರೆ ಸಹಾಯಕ್ಕೆ ಒಂದು ಘಟನೆಯಿತ್ತು. ತಲಯೋಲಪ್ಪರಂಬಿನ ಗುಡಿಸಲಿಗೆ ಬೆಂಕಿ ಬಿದ್ದ ಅದೇ ದಿನ ಹುಟ್ಟಿದ ಇನ್ನೊಬ್ಬ ಗೆಳೆಯನಿದ್ದ. ಪಡಬಾರದ ಪಾಡು ಪಟ್ಟು ಆತನ ಜಾತಕ ಹುಡುಕಿ ತೆಗೆದು ಜನವರಿ 21 1908ರಲ್ಲಿ ತಾನು ಹುಟ್ಟಿದೆ ಎಂದು ತಿಳಿದುಕೊಂಡರಂತೆ. ಹುಟ್ಟುಹಬ್ಬದಂದು ದಿನವಿಡೀ ಹೊಟ್ಟೆಗಿಲ್ಲದೆ ರಾತ್ರಿ ಕದ್ದು ತಿನ್ನಬೇಕಾಗಿ ಬಂದ ಕತೆಯನ್ನು ಕೂಡ ತಮಾಷೆಯಾಗಿ ಹೇಳಬಲ್ಲ ಕತೆಗಾರ ಬಷೀರ್.

ಗಾಂಧೀಜಿಯ ಪ್ರಭಾವದಿಂದ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದರು. ಅದಕ್ಕಾಗಿ ರಾಜಾಡಳಿತವಿದ್ದ ತಿರುವಾಂಕೂರು ಸಂಸ್ಥಾನದಿಂದ ಮನೆಬಿಟ್ಟು ಮಲಬಾರ್ ಪ್ರಾಂತ್ಯಕ್ಕೆ ಓಡಿ ಬಂದರು. ಉಪ್ಪು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸುತ್ತಿದ್ದಾಗಲೇ ಪೋಲೀಸರು ಹಿಡಿದು ಜೈಲು ಸೇರಿಸಿದರು. ನಂತರ ಭಗತ್ ಸಿಂಗ್ ಮತ್ತು ಸಂಗಾತಿಗಳ ಪ್ರಭಾವಕ್ಕೆ ಸಿಲುಕಿದರು. ‘ಉಜ್ಜೀವನ’ ಎಂಬ ಕ್ರಾಂತಿಕಾರಿ ಪತ್ರಿಕೆಯನ್ನು ಹೊರ ತಂದರು. ಅದರ ದೆಸೆಯಿಂದಾಗಿ ಅರೆಸ್ಟ್ ವಾರೆಂಟ್. ಕೊನೆಗೆ ಕೇರಳ ಬಿಡಬೇಕಾಗಿ ಬಂತು. ಹೀಗೆ ಕೇರಳ ಬಿಟ್ಟ ಬಷೀರ್ ದೇಶದ ಉದ್ದಗಲ ಸಂಚರಿಸಿದರು. ಅಫಘಾನಿಸ್ತಾನದಿಂದ ‍ಆಫ್ರಿಕಾದ ತನಕವೂ ಯಾತ್ರೆ ಮಾಡಿದರು. ಹೊಟ್ಟೆ ಪಾಡಿಗೆ ಒಬ್ಬ ಮನುಷ್ಯ ಮಾಡಬಹುದಾದ ಎಲ್ಲ ಉದ್ಯೋಗಗಳನ್ನೂ ಮಾಡಿದರು.

ಮೊದ ಮೊದಲಿಗೆ ತನ್ನ ಪುಸ್ತಕಗಳನ್ನು ತಲೆ ಮೇಲೆ ಹೊತ್ತು ಮನೆ ಮನೆ ತಿರುಗಿ ಮಾರಿದವರು ಬಷೀರ್. ನಂತರ ಎರ್ನಾಕುಳಂನಲ್ಲಿ ಎರಡು ಪುಸ್ತದಂಗಡಿಗಳನ್ನು ನಡೆಸಿದರು. ''ಗಾಂಧೀಜಿಯನ್ನು ಮುಟ್ಟದೇ ಇರುತ್ತಿದ್ದರೆ? ನಾಯರ್ ಹುಡುಗಿಯನ್ನು ಪ್ರೀತಿಸದೇ ಇರುತ್ತಿದ್ದರೆ? ಮನೆ ಬಿಟ್ಟು ಓಡಿ ಹೋಗದೇ ಇರುತ್ತಿದ್ದರೆ? ನಾನು ವೈಕ್ಕಂ ಮುಹಮ್ಮದ್ ಬಷೀರ್ ಆಗುತ್ತಲೇ ಇರಲಿಲ್ಲ'' ಎಂದು ಹೇಳುತ್ತಿದ್ದರು. ಐವತ್ತರ ಹೊಸ್ತಿಲಲ್ಲಿ ಮದುವೆಯಾದರು. ಫಾಬಿಯೊಂದಿಗಿನ ದಾಂಪತ್ಯದ ಸರಸ ವಿರಸಗಳೂ ಕಾಲಾತೀತ ಕತೆಗಳಾದವು.

ಒಮ್ಮೆ ಒಬ್ಬ ಧರ್ಮಗುರು ನೀನ್ಯಾಕೆ ಮಸೀದಿಗೆ ಬಂದು ನಮಾಜ್ ಮಾಡುವುದಿಲ್ಲ ಎಂದು ಕೇಳಿದರಂತೆ. ಗಿಡಗಳು ಬಾಡದ ಹಾಗೆ ದಿನಾ ನೀರು ಹಾಕುತ್ತೇನೆ. ಇದಕ್ಕಿಂತ ದೊಡ್ಡ ನಮಾಜ್ ನನಗೆ ಬೇರೆ ಇಲ್ಲ ಎಂದರಂತೆ ಬಷೀರ್. "ನಾನು ಹಾಲು ಜೇನು ಕೊಟ್ಟು ಸಾಕುತ್ತಿರುವ ಜೀರುಂಡೆಗೆ ಯಾರಾದರು ತೊಂದರೆ ಕೊಟ್ಟರೆ ಅವರ ಕೈ ಮುರಿಯುತ್ತೇನೆ." ದಿ ಮ್ಯಾನ್ ಚಿತ್ರೀಕರಣ ಸಮಯದಲ್ಲಿ ಒಂದೇ ಸಮನೆ ಸದ್ದು ಮಾಡುತ್ತಿದ್ದ ಜೀರುಂಡೆಯನ್ನು ಓಡಿಸಲು ಪ್ರಯತ್ನಿಸುತ್ತಿದ್ದ ಚಿತ್ರತಂಡಕ್ಕೆ ಹೀಗೆ ಜೋರು ಮಾಡಿದ್ದರಂತೆ. ಕುಡಿದ ಚಾ ಗ್ಲಾಸಿನಲ್ಲಿ ಇರುವೆಗಳು ಬಿದ್ದು ಸಾಯಬಾರದು ಎಂದು ಗ್ಲಾಸನ್ನು ಮಗುಚಿಡುತ್ತಿದ್ದರು. ನಿಮ್ಮ ಧರ್ಮ ಯಾವುದು ಅಂತ ಕೇಳಿದರೆ ತಕ್ಷಣ ನಾನೊಬ್ಬ ನಂಬರ್ ವನ್ ಮುಸಲ್ಮಾನ ಎನ್ನುತ್ತಿದ್ದರು. ಬದುಕು ಪೂರ್ತಿ ಅನಲ್ ಹಕ್ ಜಪ ಮಾಡುತ್ತಿದ್ದರು. ಸಾಧು ಸಂತರೊಂದಿಗೂ ಸೂಫೀ ದರ್ವೇಶಿಗಳೊಂದಿಗೂ ಅಪ್ಪಟ ಮನುಷ್ಯನಾಗಿ ಒಡನಾಡಿದ್ದರು. 

ಸಾಲ ಕೊಡುವಾಗ ಚೆಕ್ಕಿಗೆ ಇಂಗ್ಲೀಷಿನಲ್ಲಿ ಸಹಿ ಹಾಕಿದರೆ ತೀರಿಸಬೇಕೆಂದೂ ಮಲಯಾಳದಲ್ಲಿ ಸಹಿ ಮಾಡಿದರೆ ಇದು ಸಾಲವಲ್ಲ ಎಂದೂ ಅರ್ಥವಿತ್ತು ಅಂತ ನಟ ಮಮ್ಮುಕೋಯ ನೆನಪಿಸಿಕೊಳ್ಳುತ್ತಾರೆ. ಆಸ್ಪತ್ರೆಯಲ್ಲಿದ್ದ ಕೊನೆಯ ದಿನಗಳಲ್ಲಿ ಬಷೀರರ ಜೊತೆಗಿದ್ದ ಅವರು ಆಗಲೂ ತೆಳು ಹಾಸ್ಯದಿಂದಲೇ ಜೀವಂತಿಕೆ ಉಳಿಸಿಕೊಂಡಿದ್ದರೆಂದು ಹೇಳುತ್ತಾರೆ. ಹಾಸ್ಯದ ಧಾಟಿಯಲ್ಲಿ ಹೇಳಿದರೆ ಜನರಿಗೆ ನೆನಪಿರುತ್ತದೆ. ಗಂಭೀರತೆಗೆ ಪ್ರಾಯ ಕಮ್ಮಿ ಎಂಬುದು ಅವರ ವಾದ. ಆ ವಾದವನ್ನು ಅವರ ಕೃತಿಗಳು ಎತ್ತಿ ಹಿಡಿದವು.

ಬಷೀರರ ಕತೆಗಳನ್ನು ಓದದ ಒಬ್ಬನೇ ಒಬ್ಬ ಮಲಯಾಳಿ ಓದುಗ ಇರಲಾರ ಎಂದರೆ ಅತಿಶಯೋಕ್ತಿಯಲ್ಲ. ಈಗಲೂ ಯುವ ಓದುಗರು ಬಷೀರ್ ಕೃತಿಗಳನ್ನು ಇಷ್ಟದಿಂದ ಓದುತ್ತಾರೆ. ಮಲಯಾಳಿಗಳ ಸ್ಮೃತಿಪಟಲದಲ್ಲಿ ಬಷೀರ್ ಕೃತಿಗಳ ಜೊತೆಗೆ ಉಳಿದಿರುವ ಕೆಲವು ಸಂಗತಿಗಳಿವೆ; ಮಾಂಗೋಸ್ಟೀನ್ ಮರ, ಗ್ರಾಮಾಫೋನ್, ಕನ್ನ ಚಾ, ಆರಾಮ ಕುರ್ಚಿ, ಬೆರಳುಗಳೆಡೆಯಲ್ಲಿ ತುಂಡು ಬೀಡಿ.

(ಚಿತ್ರಕೃಪೆ: ಅಂತರ್ಜಾಲ)


ಸುನೈಫ್

ಸುನೈಫ್, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದವರು. ಸದ್ಯ ಉದ್ಯೋಗ ನಿಮಿತ್ತ ಕಲ್ಲಿಕೋಟೆಯಲ್ಲಿ ವಾಸವಿದ್ದಾರೆ. ಕವಿತೆ ಮತ್ತು ಅನುವಾದ ಇವರ ಇಷ್ಟದ ಹವ್ಯಾಸ .ಮಲೆಯಾಳಂ ಭಾಷೆಯಿಂದ ಹಲವು ಕಥೆ ಮತ್ತು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸೂಫಿ ಕಾವ್ಯಾನುವಾದಲ್ಲೂ ತೊಡಗಿಸಿಕೊಂಡಿದ್ದಾರೆ. ಮಲೆಯಾಳಂ ಪ್ರಮುಖ ಕತೆಗಾರ ವೈ.ಕಂ. ಮುಹಮದ್ ಬಷೀರ್ ಅವರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ‘ಭೂಮಿಯ ಹಕ್ಕುದಾರರು’ ಅವರ ಪ್ರಕಟಿತ ಕೃತಿ.

 

MORE FEATURES

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...

ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ!

26-04-2024 ಬೆಂಗಳೂರು

‘ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ! ಹಾಗಾಗಿ ಮಾನಸಿಕ ಸಮಸ್ಯೆಗಳ ಬಗ್ಗೆ ನನಗೆ ತಿಳಿದಷ್ಟು ವ...

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...