ಭೀಮಾ-ಕಾಗಿಣಾ ನಿರ್ಲಕ್ಷಿಸಿದರೆ ’ಕಾವೇರಿಯಿಂದಮಾ…’ ಎಂಬ ಅಭಿಮಾನ ಬರುವುದೆಂತು?

Date: 04-02-2020

Location: ಕಲಬುರಗಿ


ಕೃಷ್ಣಾ ನದಿ ಕೊಳ್ಳದಲ್ಲಿ ಬರುವ ಕಲಬುರಗಿ ಪರಿಸರದ ಪ್ರಮುಖ ನದಿ ಭೀಮಾ. ಕಾಗಿಣಾ ಅದರ ಉಪನದಿ. ಈ ನದಿಗಳು ಸಾವಿನೆಡೆಗೆ ಮುಖಮಾಡಿರುವುದು ಸಂಸ್ಕೃತಿ ಸಾಗುತ್ತಿರುವ ದಿಕ್ಕಿನ ಸೂಚನೆಯ ಹಾಗಿದೆ. ಪತ್ರಕರ್ತ ವೆಂಕಟೇಶ ಮಾನು ಅವರು ನದಿಗಳ ಉಳಿಸಿಕೊಳ್ಳಲಾಗದಿದ್ದರೆ ಕವಿರಾಜಮಾರ್ಗದ ಕಾವೇರಿಯಿಂದಮಾ.. ಎಂಬ ಹೆಮ್ಮೆಗೆ ಅರ್ಥವೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

 

‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ’ ಕನ್ನಡ ನಾಡಿನ ಗಡಿ ರೇಖೆ ಗುರುತಿಸಲು ಅಂದಿನ ಕವಿ ನದಿಯ ಭೂ ನಕ್ಷೆಯನ್ನು ಆಧರಿಸಿದರೆ, ಕೇವಲ ಕಾವೇರಿ ಮಾತ್ರ ಕನ್ನಡ ನಾಡಿನಲ್ಲಿದೆ ಎಂಬಂತೆ ಇತ್ತೀಚಿನ ವಿದ್ಯಮಾನಗಳು ನಡೆಯುತ್ತಿವೆ.  ’ಕಾವೇರಿಯಿಂದಮಾ…’ ಎಂದು ಹೇಳಿದ ಕವಿ ಸಹ ಕಾವೇರಿ ನೆಲದವರಲ್ಲ; ಅವರು ಕಲಬುರಗಿ ಜಿಲ್ಲೆಯ ಭೀಮಾ-ಕಾಗಿಣಾದಂತಹ ನದಿ ಪಾತ್ರದವರೇ. ಗಡಿ ರೇಖೆಯನ್ನು ಗುರುತಿಸುವಾಗ ಭೀಮಾ-ಕಾಗಿಣಾ ನದಿಗಳ ಹೆಸರು ಪ್ರಸ್ತಾಪ ಅನಗತ್ಯ. ಆದರೆ, ಗಡಿ ಸಮಸ್ಯೆಯಡಿ ಕಾವೇರಿ ಸುದ್ದಿಯಲ್ಲಿದೆ. ಅಂದಮಾತ್ರಕ್ಕೆ,  ಅದಕ್ಕೆ ಪ್ರಾಮುಖ್ಯತೆ ನೀಡುವುದು; ಕನ್ನಡ ನಾಡಿನದೇ ಆದ ಭೀಮಾ-ಕಾಗಿಣಾ ಅಸ್ತಿತ್ವದ ಕಡೆಗಣಿಸುವುದು ಇಲ್ಲಿಯ ಸಮಸ್ಯೆ.

ನೀರಿಗೆ ತಾತ್ಸಾರ

ಮಹಾರಾಷ್ಟ್ರದಲ್ಲಿ ಮಳೆಯಾದಾಗಲೇ ‘ಭೀಮಾ’ ತುಂಬಿಕೊಳ್ಳುವುದು. ಬೆಣ್ಣೆತೊರಾ-ಕಾಗಿಣಾ ನದಿಗಳು ಸಣ್ಣವಾದರೂ ಪ್ರಾದೇಶಿಕ ಸಮೃದ್ಧತೆಯಿಂದ ಇವು ಮಹತ್ವದ ನದಿಗಳು. ಕಾಗಿಣಾ ನದಿಗುಂಟ ಇರುವ ಸಿಮೆಂಟ್ ಕಾರ್ಖಾನೆಗಳ ಗಲೀಜು ನೀರು ಜನ ಮಾತ್ರವಲ್ಲ; ಎಮ್ಮೆ ತೊಳೆಯಲೂ ಅನಾರೋಗ್ಯಕರವಾಗಿದೆ. 

ನೀರೆತ್ತಲು ಹಲವು ಗುಮ್ಮಿಗಳನ್ನು ನಿರ್ಮಿಸಿದ್ದರೂ ನಿಷ್ಫಲ. ನೀರೇ ಹೊಲಸಾಗಿರುವಾಗ ಇದನ್ನು ಕುಡಿಯಲು ಯೋಗ್ಯವಾಗಿಸಲು ಈವರೆಗಿನ ತಾಂತ್ರಿಕತೆ ಸಾಕಾಗದು. ಹೀಗಾಗಿ, ನದಿ ಇದ್ದರೂ ಕುಡಿಯುವ ನೀರಿಗೆ ವರ್ಷದುದ್ದಕ್ಕೂ ತಾಪತ್ರಯ ತಪ್ಪಿದ್ದಲ್ಲ. 

ನೀರು ಸ್ವಾಹ: ಸಿಮೆಂಟ್ ಕಾರ್ಖಾನೆಗಳದ್ದೇ ಸಿಂಹಪಾಲು

ಈ ಕಾಗಿಣಾ ನೀರು ಕಂದಕೂರಿಗೆ ತಲುಪುವಷ್ಟರಲ್ಲೇ ಶೇ. 80 ರಷ್ಟು ನೀರು ಸಿಮೆಂಟ್ ಕಾರ್ಖಾನೆಗಳೇ ಸ್ವಾಹ ಮಾಡುತ್ತಿವೆ. ಭೀಮಾ ನದಿಗೂ ಕಾಗಿಣಾ ತಲುಪದು. ಬೆಣ್ಣೆತೊರಾ ಜಲಾಶಯದ ನೀರು ಕಂದಕೂರು ಸಮೀಪದ  ಜಾಕ್ವೆಲ್ ಬಳಿ ಸಂಗ್ರಹಿಸಬೇಕೆನ್ನುವ ನಿಯಮವೂ ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಬೇಸಿಗೆ ಬಂತೆಂದರೆ ನದಿ ಪಾತ್ರದ ಎಲ್ಲ ಜಮೀನುಗಳೂ ಸಹ ಬಂಜರು ಪ್ರದೇಶಗಳಾಗುತ್ತವೆ. ಇನ್ನೂ ಒಳ ಪ್ರದೇಶದ ಜನರ ಸ್ಥಿತಿ ಊಹಿಸಿ. ಸಾಮಾನ್ಯವಾಗಿ ಮಾರ್ಚ್ ನಂತರ ಬೇಸಿಗೆ ಆರಂಭವಾಗುತ್ತಿದ್ದರೆ ಈ ಭಾಗದಲ್ಲಿ ಫೆಬ್ರವರಿ ಆರಂಭಕ್ಕೇ ಕುಡಿಯುವ ನೀರಿಗೆ ಕೊಡಗಳ ಬಡಿದಾಟದ ಸದ್ದು ಸಾಮಾನ್ಯವಾಗಿರುತ್ತದೆ. 

ಮರಳು ಮಾಫಿಯಾ

ಚಿತ್ತಾಪುರ, ಸೇಡಂ, ಅಫಜಲಪುರ, ಆಳಂದ ಹೀಗೆ ತಾಲೂಕುಗಳು ನದಿಗುಂಟ ಇದ್ದರೂ, ಇಲ್ಲಿಯ ನೀರಿನ ಸದ್ಬಳಕೆಗಿಂತ ಇಲ್ಲಿಯ ಮರಳನ್ನು ಮುಂಬೈಗೆ ಕಳುಹಿಸಲು ಹೆಚ್ಚು ಆಸಕ್ತಿ ಇದೆ. ಈ ಪ್ರಕ್ರಿಯೆಯಲ್ಲಿ, ರಾಜಕೀಯ ಪುಢಾರಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಸಾಕಷ್ಟು ಹಮ್ಮಿಣಿ ದೊರೆಯುತ್ತದೆ. ನದಿ ಪಾತ್ರದ ಹೊಲಗಳಲ್ಲಿ ಮರಳು ಸಂಗ್ರಹಿಸುವ ದೊಡ್ಡ ದೊಡ್ಡ ಬ್ಲಾಕ್ ಗಳಿದ್ದರೂ ಜಿಲ್ಲಾಡಳಿತದ ಕಣ್ಣಿಗೆ ಕಾಣಿಸುತ್ತಿಲ್ಲ.ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2015ರಲ್ಲಿ ನಡೆಸಿದ ಸಮೀಕ್ಷೆ ಅನ್ವಯ ಕರ್ನಾಟಕದ 15 ನದಿಗಳು ಮಲಿನಗೊಂಡಿದ್ದು, ಆ ಪೈಕಿ, ಭೀಮಾ -ಕಾಗಿಣಾ ಸೇರಿವೆ ಎಂಬ ಸಂಗತಿಗೆ ಜಿಲ್ಲಾಡಳಿತ ಜಾಣ ಕುರುಡು ಪ್ರದರ್ಶಿಸುತ್ತಿದೆ.

ಗಡಿ ವಿವಾದ ಕೇಂದ್ರಿತ ಕಾವೇರಿ ಕುರಿತು ಸಾಕಷ್ಟು ಚರ್ಚೆಯಾಗಿದೆ. ಒಳನಾಡಿನ  ಕಲಬುರಗಿಯಲ್ಲಿಯ ಭೀಮಾ-ಕಾಗಿಣದಂತಹ ನದಿಯ ಸಮಸ್ಯೆಗಳು ಕಾವೇರ”ಗಿಂತ ಗಂಭೀರ ಸ್ವರೂಪದ್ದಾಗಿವೆ. ಈ ಸಮ್ಮೇಳನದಲ್ಲಿ, ಇಂತಹ ನದಿಗಳ ಕುರಿತು ಹೆಚ್ಚು ಚರ್ಚೆಯಾದರೆ ‘ಕಾವೇರಿಯಿಂದಮಾ….’ ಎಂದು ಹೇಳಲು ಅಭಿಮಾನವೆನಿಸುವದು.

 

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...