ಚರಿತ್ರೆ ಹಾಗೂ ಸೃಷ್ಟಿಯ ರಹಸ್ಯವನ್ನು ಬಿಚ್ಚಿಡುವ 'ಲಚುಮಿ ಅತ್ತೆ'


ಪ್ರೇಮ, ವಿವಾಹ, ಸ್ವಾತಂತ್ಯ್ರ, ಕಾಮ, ಶಿಕ್ಷಣ, ಬಡತನ, ಹುಟ್ಟು, ಸಾವು, ಸಮಾಜ, ವ್ಯಕ್ತಿ, ಪರಿಸರ, ತತ್ವ, ಪ್ರಜಾಪ್ರಭುತ್ವ, ಜೀವನ-ಮುಂತಾದವುಗಳ ಕುರಿತು ನಾಯಕವರ ಪರಿಕಲ್ಪನೆಗಳು ಅವರದೇ ಆದ ‘ವ್ಯಕ್ತಿ ವಿಶಿಷ್ಟವಾದ ಸಿದ್ಧಾಂತ’ಗಳಾಗಿ ಕಂಡುಬರುತ್ತವೆ. ಕೌಟುಂಬಿಕ ವಿರಸಗಳನ್ನೇ ಕೇಂದ್ರವಾಗಿರಿಸಿಕೊಂಡಿರುವ ಇಲ್ಲಿನ ಕೆಲವು ಕಥೆಗಳು ವಿವಾಹೇತರ ಸಂಬಂಧಗಳನ್ನು ಬಹು ಸೂಕ್ಷ್ಮವಾಗಿ ಪರೀಕ್ಷಿಸುತ್ತವೆ. ಲೇಖಕ ಪ್ರೊ. ಕೃಷ್ಣ ನಾಯಕ ಅವರ ‘ಲಚುಮಿ ಅತ್ತೆ’ ಕೃತಿಯ ಬಗ್ಗೆ ವಿಮರ್ಶಕ ಸಿ.ಎಸ್. ಭೀಮರಾಯ (ಸಿಎಸ್ಬಿ) ಅವರ ವಿಮರ್ಶೆ ನಿಮ್ಮ ಓದಿಗಾಗಿ..

ಪ್ರೊ. ಕೃಷ್ಣ ನಾಯಕ ಸಮಕಾಲೀನ ಪ್ರಮುಖ ಕಥೆಗಾರರಲ್ಲೊಬ್ಬರು. ಲಂಬಾಣಿ ಜನಾಂಗದಿಂದ ಬಂದ ಕೃಷ್ಣ ನಾಯಕರು ಸಹಜವಾಗಿ ತಮ್ಮ ಸಮಾಜದ ದುಃಖ ದುಮ್ಮಾನಗಳಿಗೆ ತಮ್ಮ ಕಥೆಗಳಲ್ಲಿ ಧ್ವನಿ ನೀಡಿದ್ದಾರೆ. ಸಣ್ಣಕಥೆಯು ಕೃಷ್ಣ ನಾಯಕರಿಗೆ ವಿಶೇಷತಃ ಒಗ್ಗಿದ ಸಾಹಿತ್ಯ ಪ್ರಕಾರ. ಅವರು ಕಳೆದ ಎರಡು ದಶಕಗಳಿಂದ ಕಥಾ ಕ್ಷೇತ್ರದಲ್ಲೇ ತಮ್ಮ ಸೃಜನಶೀಲ ಪ್ರತಿಭೆಯನ್ನು ಅನಾವರಣಗೊಳಿಸುತ್ತ ಮುನ್ನಡೆದಿದ್ದಾರೆ.

ಪ್ರಸ್ತುತ ‘ಲಚುಮಿ ಅತ್ತೆ’ ಪ್ರೊ. ಕೃಷ್ಣ ನಾಯಕರ ಮೂರನೆಯ ಕಥಾಸಂಕಲನ. ಈ ಕೃತಿ ಒಂಬತ್ತು ವರ್ಷಗಳ ಅನಂತರ ಪ್ರಕಟವಾಗಿದೆ. ಈ ಸಂಕಲನ ಒಂಬತ್ತು ಕಥೆಗಳನ್ನು ಒಳಗೊಂಡಿದೆ. ಸಂಕಲನದ ಎಲ್ಲಾ ಕಥೆಗಳು ನಾಯಕರ ಜೀವನಾನುಭವದ ಪಕ್ವತೆಯನ್ನು, ದೃಷ್ಟಿಕೋನದ ವೈವಿಧ್ಯವನ್ನೂ ಸೂಚಿಸುವ ರೀತಿಯಲ್ಲಿ ರಚನೆಯಾಗಿವೆ. ಕೃಷ್ಣ ನಾಯಕರ ಎಲ್ಲ ಕಥೆಗಳ ಅನುಭವ ಜಗತ್ತು ವಿಜಯಪುರ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ತಾಂಡ್ಯಗಳಲ್ಲಿಯೇ ಘಟಿಸುತ್ತದೆ. ಈ ಜಿಲ್ಲೆಗಳ ತಾಂಡ್ಯಗಳಲ್ಲಿ ವಾಸಿಸುವ ಲಂಬಾಣಿ ಜನಾಂಗದ ಜೀವನವನ್ನು ಲೇಖಕರು ತುಂಬಾ ಆಪ್ತವಾಗಿ, ಅಥೆಂಟಿಕ್ ಆಗಿ ಚಿತ್ರಿಸಿದ್ದಾರೆ. ಇಲ್ಲಿಯ ತಾಂಡ್ಯಗಳ ಲಂಬಾಣಿಗರದ್ದೆ ಒಂದು ವಿಶಿಷ್ಟ ರೀತಿಯ ಬದುಕು. ಹಳ್ಳಿ-ನಗರ ಪ್ರದೇಶಗಳಲ್ಲಿ ಅದು ಕಾಣಸಿಗದು. ಈ ಜನಾಂಗದ ಕುಟುಂಬ ವ್ಯವಸ್ಥೆ, ಆರ್ಥಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ ರೀತಿ-ನೀತಿಗಳು ಯಾವುದೇ ಲೇಖಕನಿಗೆ ಚಾಲೆಂಜ್ ಸ್ವರೂಪದವಾಗಿವೆ. ಕೃಷ್ಣ ನಾಯಕರ ಕಥನ ಪ್ರತಿಭೆಯ ಎಲ್ಲ ಪರಿಕರಗಳೂ ಅಲ್ಲಿ ಕೆಲಸ ಮಾಡುತ್ತವೆ. ಕೃಷ್ಣ ನಾಯಕರ ಎಲ್ಲ ಕಥೆಗಳಲ್ಲಿ ಲಂಬಾಣಿಗರ ಜೀವನದ ವೈವಿಧ್ಯ ತಾನೇ ತಾನಾಗಿ ವ್ಯಕ್ತವಾಗಿದೆ. ಪ್ರೀತಿ, ಹಸಿವು, ಕಾಮ, ಹುಟ್ಟು, ಸಾವು, ಮದುವೆ, ಅಸಹಾಯಕತೆ, ವಲಸೆ, ಬಡತನ, ಅನಕ್ಷರತೆ, ಮೂಢನಂಬಿಕೆ, ಹೋರಾಟ, ಹಾದರ, ಕ್ರೌರ್ಯ, ಜೀತಪದ್ಧತಿ, ಪಾಳೇಗಾರಿಕೆ, ಹಬ್ಬ, ಜಾತ್ರೆ, ಬರಗಾಲ, ನ್ಯಾಯ, ಕೃಷ್ಣ ನಾಯಕರ ಕಥೆಗಳ ಮೂಲದ್ರವ್ಯ. ನಾಯಕರು ಇವನ್ನೆಲ್ಲ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾರೆ; ಓದುಗರ ಕಣ್ಣು ತೆರೆಯುವಂತೆ ಚಿತ್ರಿಸುತ್ತಾರೆ. ಆದರೆ ಇಲ್ಲಿ ಕಥೆಗಾರರು ‘ಕಂಡ’ ವಿಷಾದ ಮಡುಗಟ್ಟಿದೆಯೇ ಹೊರತು ‘ಉಂಡ’ ವಿಷಾದವಲ್ಲ. ಲಂಬಾಣಿಗರ ವಿವಿಧ ಮುಖಗಳು ನಾಯಕರ ಕಥೆಗಳಲ್ಲಿ ಬಂದು ಇಡೀ ಸಾಹಿತ್ಯದಲ್ಲಿ ಹೊಸ ಸಂವೇದನೆ ಪ್ರವೇಶವಾಗುತ್ತದೆ. ಮಾನವಿಕ ಶಾಸ್ತç ಒಳಹೊಕ್ಕು ನೋಡದ ಜನಾಂಗದ ಸ್ಥಿತಿ-ಗತಿಗಳು ಇಲ್ಲಿವೆ. ಉಪಸಂಸ್ಕೃತಿಯ ಅಧ್ಯಯನಕ್ಕೂ ಕೃಷ್ಣ ನಾಯಕರು ವಿಪುಲ ಸಾಮಗ್ರಿಯನ್ನು ಒದಗಿಸಿದ್ದಾರೆ.

‘ಲದೇಣಿಯಾ’ (2005) ಮತ್ತು ‘ಕತ್ತಲು ಕರಗುವ ಸಮಯ’ (2010) ಕಥಾಸಂಕಲನಗಳ ನಂತರ ಪ್ರಕಟವಾದ ‘ಲಚುಮಿ ಅತ್ತೆ’ ಕಥಾಸಂಕಲನವು ಕೃಷ್ಣ ನಾಯಕರು, ನಿರೂಪಣೆಯಲ್ಲಿ ಮೇಲುನೋಟಕ್ಕೆ ಸರಳವೆನ್ನಿಸಿದರೂ ಆಳದಲ್ಲಿ ಸಂಕೀರ್ಣತೆ ಸಾಧಿಸಿದ ವಿನ್ಯಾಸದ ದೃಷ್ಟಿಯಿಂದ ಗಮನಾರ್ಹವಾಗಿದೆ. ‘ಲದೇಣಿಯಾ’ ಮತ್ತು ‘ಕತ್ತಲು ಕರಗುವ ಪರಿ’ ಕಥಾಸಂಕಲನಗಳಲ್ಲಿ ಕಾಣುವ ಬೆಳವಣಿಗೆ ನಾಯಕರ ಸೃಜನಶೀಲ ಪ್ರತಿಭೆ ಹೇಗೆ ಹೊಸ ಹುಡುಕಾಟದಲ್ಲಿ ನಿರಂತರ ತನ್ನನ್ನು ತೊಡಗಿಸಿಕೊಂಡಿದೆ ಎಂಬುದನ್ನು ಸೂಚಿಸುತ್ತದೆ. ಕೃಷ್ಣ ನಾಯಕರ ಕಥಾಸಾಹಿತ್ಯವನ್ನು ನಾನು ಕಳೆದ ಇಪ್ಪತ್ತು ವರ್ಷಗಳಿಂದ ಗಮನಿಸುತ್ತ ಬಂದಿದ್ದೇನೆ. ಅವರು ಬರೆದದ್ದು ಕಡಿಮೆ; ಆದರೆ ಅವರು ಬರೆದಿದ್ದೆಲ್ಲವೂ ಗಟ್ಟಿ. ಮೂರು ಕಥಾಸಂಕಲನಗಳನ್ನು ಪ್ರಕಟಿಸಿರುವ ಕೃಷ್ಣ ನಾಯಕರ ಕಥೆಗಳಲ್ಲಿ ಹೊರ ಜಗತ್ತನ್ನು ಪಾತ್ರಗಳ ಮನಸ್ಸಿನಿಂದ ನೋಡುವ ಪ್ರಯತ್ನವಿದೆ. ಮೂರು ಪ್ರಮುಖ ಕಥಾಸಂಕಲನಗಳನ್ನು ಪ್ರಕಟಿಸಿರುವ ಕೃಷ್ಣ ನಾಯಕರ ಕಥಾಸಾಹಿತ್ಯದ ಬಗ್ಗೆ ಕನ್ನಡ ವಿಮರ್ಶಾಲೋಕ ಹೆಚ್ಚು ಚರ್ಚಿಸದಿರುವುದು ಆಶ್ಚರ್ಯದ ಸಂಗತಿ. ನಾಯಕರ ಕಥೆಗಳನ್ನು ಓದುತ್ತಿದ್ದಂತೆ ಓದುಗನಿಗೆ ಒಂದು ಹೊಸ ಲೋಕ ಪ್ರವೇಶಿಸಿದಂತಾಗುತ್ತದೆ. ವಿಭಿನ್ನ ಭಾಷೆ, ದೇಸಿ ಸಂಸ್ಕೃತಿ ಹಾಗೂ ಜೀವನ ವಿಧಾನ ತಕ್ಷಣ ಓದುಗರ ಗಮನ ಸೆಳೆಯುತ್ತದೆ.

ಪ್ರೇಮ, ವಿವಾಹ, ಸ್ವಾತಂತ್ಯ್ರ, ಕಾಮ, ಶಿಕ್ಷಣ, ಬಡತನ, ಹುಟ್ಟು, ಸಾವು, ಸಮಾಜ, ವ್ಯಕ್ತಿ, ಪರಿಸರ, ತತ್ವ, ಪ್ರಜಾಪ್ರಭುತ್ವ, ಜೀವನ-ಮುಂತಾದವುಗಳ ಕುರಿತು ನಾಯಕವರ ಪರಿಕಲ್ಪನೆಗಳು ಅವರದೇ ಆದ ‘ವ್ಯಕ್ತಿ ವಿಶಿಷ್ಟವಾದ ಸಿದ್ಧಾಂತ’ಗಳಾಗಿ ಕಂಡುಬರುತ್ತವೆ. ಕೌಟುಂಬಿಕ ವಿರಸಗಳನ್ನೇ ಕೇಂದ್ರವಾಗಿರಿಸಿಕೊಂಡಿರುವ ಇಲ್ಲಿನ ಕೆಲವು ಕಥೆಗಳು ವಿವಾಹೇತರ ಸಂಬಂಧಗಳನ್ನು ಬಹು ಸೂಕ್ಷ್ಮವಾಗಿ ಪರೀಕ್ಷಿಸುತ್ತವೆ. ಸಾಮಾಜಿಕ ಪಲ್ಲಟಗಳನ್ನು, ವೈಯಕ್ತಿಕ ಮಾದರಿಗಳನ್ನೂ ಚಿತ್ರಿಸುವಾಗ ನಾಯಕರು ತಮ್ಮ ಅವಲೋಕನವನ್ನು ಒಂದೇ ವರ್ಗಕ್ಕೇ ಸೀಮಿತಗೊಳಿಸದಿರುವುದು ಗಮನಾರ್ಹವಾಗಿದೆ. ಇದರಿಂದಾಗಿ ಅವರ ಕಥೆಗಳಲ್ಲಿ ಮೂಡಿಬರುವ ಜೀವನಾನುಭವವು ತುಂಬ ವೈವಿಧ್ಯವನ್ನು ತೋರಿಸುತ್ತದೆ.

ಕೃಷ್ಣ ನಾಯಕರ ಇಲ್ಲಿನ ಬಹುತೇಕ ಕಥೆಗಳಲ್ಲಿ ಹದಿಹರೆಯದ, ಮಧ್ಯವಯಸ್ಸಿನ ಹಾಗೂ ವಾರ್ಧಕ್ಯದಲ್ಲಿರುವ ಹೆಂಗಸರು ತಮ್ಮ ಬದುಕಿನ ಕಥೆಗಳನ್ನು ಹೇಳಿಕೊಂಡಿದ್ದಾರೆ. ವಿಷಮ ದಾಂಪತ್ಯದ ಅಸೌಖ್ಯವನ್ನು ಮೀರುವ ಹವಣಿಕೆಯಲ್ಲಿ ಇಲ್ಲಿಯ ಹೆಂಗಸರು ಸಾಂಪ್ರದಾಯಿಕ ಲಕ್ಷö್ಮಣ ರೇಖೆಗಳನ್ನು ದಾಟುತ್ತಾರೆ. ಇದು ದಂಗೆ ಏಳುವ ಪರಿಯೆನಿಸಿದರೂ ನಿಜವಾದ ಬಂಡಾಯ ಹಾಗೂ ನೈತಿಕತೆಯ ಕೆಲವು ಪ್ರಶ್ನೆಗಳು ಇಲ್ಲಿ ಹುಟ್ಟಿಕೊಳ್ಳುತ್ತವೆ. ಪುರುಷ ನಿರ್ಮಿತ ನಿಯಮಗಳನ್ನು ಮುರಿಯುವಲ್ಲಿ ಇಲ್ಲಿಯ ಮಹಿಳೆಯರು ಯಶಸ್ವಿಯಾಗುತ್ತಾರೆ. ಭಾರತೀಯ ಸಮಾಜದ ಡಾಂಭಿಕತೆಯನ್ನು ಒಡೆಯುವ ಕೃಷ್ಣ ನಾಯಕರು ಸ್ವಚ್ಛಂದ ಮನಸ್ಸಿನ ಮಹಿಳೆಯ ಮನೋವ್ಯಾಪಾರವನ್ನು ಚಿತ್ರಿಸುತ್ತ ಕಥೆಗಳಿಗೆ ವಿಶಾಲ ಪರಿಪ್ರೇಕ್ಷ್ಯವನ್ನು ಒದಗಿಸಿದ್ದಾರೆ. ನಾಯಕರು ಚಿತ್ರಿಸುವ ಕೆಲವು ಮಹಿಳೆಯರು ನಿರ್ಭಿಡೆಯ ವ್ಯಕ್ತಿತ್ವವುಳ್ಳವರು, ಅಪರಿಮಿತ ಸ್ವಾತಂತ್ಯ್ರವನ್ನು ಬಳಸಲು ಇಚ್ಛೆಪಡುವವರು, ಕದ್ದುಮುಚ್ಚಿಯಾದರೂ ಸರಿ ಅಥವಾ ಬಹಿರಂಗವಾದರೂ ಸರಿ ಬೇರೆ ಪುರುಷನೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವವರು.

ಸಂಕಲನದ ಮೊದಲ ಕಥೆ ‘ಮನೆ ಮನೆ ದೇವರು’ ಖೇಮಣ್ಣ ನಾಯಕನೆಂಬ ತಾಂಡ್ಯದ ನಾಯಕ ಮತ್ತು ಅವನ ಆಳುಮಗ ನೀಲುವಿನ ಕೌಟುಂಬಿಕ ಜೀವನವನ್ನು ಚಿತ್ರಿಸುತ್ತದೆ. ಖೇಮಣ್ಣ ನಾಯಕ ಜಮೀನ್ದಾರ, ತಾಂಡ್ಯದ ನಾಯಕ ಮತ್ತು ಧೈವಭಕ್ತ. ನೀಲು ಖೇಮಣ್ಣ ನಾಯಕನ ಮನೆಯಲ್ಲಿ ಕೆಲಸ ಮಾಡುವ ಆಳುಮಗ. ತಾಂಡ್ಯದಲ್ಲಿ ಕೂಲಿ-ಕುಂಬಳಿ ಕೆಲಸ ಮಾಡುತ್ತಿದ್ದ ನೀಲುನ ತಂದೆ-ತಾಯಿ ಮಹಾರಾಷ್ಟçದ ರತ್ನಾಗಿರಿಗೆ ಹೋದಾಗ, ನೀಲುಗೆ ಖೇಮಣ್ಣ ನಾಯಕನ ಮನೆಯಲ್ಲಿ ಕೆಲಸ ಮಾಡಲು ಬಿಟ್ಟು ಹೋಗಿರುತ್ತಾರೆ. ನೀಲು ಚಿಕ್ಕವಯಸ್ಸಿನಲ್ಲಿಯೇ ನಾಯಕನ ಮನೆ ಸೇರಿಕೊಂಡು ಮನೆಮಗನಂತೆ ಬಹಳ ನಿಷ್ಠೆಯಿಂದ ದುಡಿಯುತ್ತಾನೆ. ಖೇಮಣ್ಣ ನಾಯಕ ನೀಲುನ ಕೆಲಸದಲ್ಲಿನ ನಿಷ್ಠೆ, ಪ್ರಾಮಾಣಿಕತೆಯನ್ನು ಮೆಚ್ಚಿಕೊಳ್ಳುತ್ತಾನೆ. ನೀಲುನದು ಬಡತನದ ಕುಟುಂಬ. ನೀಲು ಕುಡಿತದ ಚಟಕ್ಕೆ ಬಲಿಯಾಗಿ ದಾಂಪತ್ಯ ಸುಖವನ್ನು ಮರೆಯುತ್ತಾನೆ. ಅವನ ಹೆಂಡತಿ ಪುನಕಾ ದಾಂಪತ್ಯ ಸುಖವನ್ನು ಮತ್ತು ಸಂತಾನ ಭಾಗ್ಯವನ್ನು ಮಳೆಗಾಗಿ ಪ್ರಾರ್ಥನೆ ಮಾಡಲು ಬಂದ ಬೇರೆ ಊರಿನ ಭಜನೆಯ ಹುಡುಗನಲ್ಲಿ ಕಂಡುಕೊಳ್ಳುತ್ತಾಳೆ. ಗಂಡು-ಹೆಣ್ಣಿನ, ಗಂಡ-ಹೆಂಡತಿಯ ಸಂಬಂಧದ ಸಂಕೀರ್ಣ ಸ್ವರೂಪವನ್ನು ಕಥೆ ದಾಖಲಿಸುವ ಬಗೆ ಅನನ್ಯವಾಗಿದೆ. ಈ ಕಥೆಯಲ್ಲಿ ಪಿತೃಪ್ರಧಾನ ವ್ಯವಸ್ಥೆಯಿಂದ ಬಿಡುಗಡೆಗೊಳ್ಳುವ ಹೆಣ್ಣೊಬ್ಬಳ ಕಥನವಿದೆ. ‘ಪುನಕಾ’ಳ ಬದುಕು ಇಲ್ಲಿ ನೋವಿನ ನೆಲೆಯದು. ಅವಳ ವೈಯಕ್ತಿಕ ಬದುಕಲ್ಲಿ ಈಡೇರದ ಕಾಮಜ್ವಾಲೆ ಇಲ್ಲಿ ಹೊಸ ಆಯಾಮ ಪಡೆದುಕೊಳ್ಳುತ್ತದೆ. ಇದು ಫಿನಿಕ್ಸ್ ಹಕ್ಕಿಯಂತೆ ಬದುಕಿನ ಫಲದಲ್ಲಿ ಹೊಸ ವ್ಯಕ್ತಿತ್ವವೊಂದು ಸಿಡಿದು ಬರುವ ಉಜ್ವಲ ಚಿತ್ರವನ್ನು ಕೊಡುತ್ತದೆ. ಇದು ಕೇವಲ ಲೈಂಗಿಕ ಅತೃಪ್ತ ಹೆಣ್ಣಿನ ತೊಳಲಾಟವಾಗದೆ, ಒಂದು ಸ್ಥಗಿತ ಸಮಾಜ, ಕೊಳೆತ ಸಮಾಜದ ಕಪಿಮುಷ್ಠಿಯಲ್ಲಿ ರೂಪುಗೊಂಡು ಸ್ಫೋಟಿಸಬೇಕಾದ ಪ್ರತಿಭಟನೆಯಾಗಿ ಕಾಣುತ್ತದೆ. ಪುನಕಾಳ ಹೊಸ ಬದುಕಿನ ರೀತಿಯಲ್ಲಿ ಕಥೆ ಮುಕ್ತಾಯವಾಗುತ್ತದೆ. ಅವಳು ವ್ಯವಸ್ಥೆಯ ವಿರುದ್ಧವಾಗಿ ಪ್ರತಿಭಟಿಸುತ್ತಾಳೆ; ಹೊಸ ಬದುಕಿಗಾಗಿ ಹಂಬಲಿಸುತ್ತಾಳೆ. ಈ ಕಥೆ ಗಂಡನ ತಪ್ಪು ನಡೆ ಮತ್ತು ಹೆಂಡತಿಯ ಬಿಗುಮಾನ, ಅಳುಕುಗಳಿಂದಾಗಿ ವಿಷಮ ದಾಂಪತ್ಯಕ್ಕೆ ಚಾಚಿಕೊಳ್ಳುತ್ತದೆ.

‘ಬದುಕು ಹುಡುಕುತ್ತ’ ಕಥೆ ಈ ಸಂಕಲನದ ಯಶಸ್ವೀ ಕಥೆಗಳಲ್ಲೊಂದು. ಈ ಕಥೆ ಸಂಕಲನದ ಉಳಿದ ಕಥೆಗಳಿಂದ ಸ್ವಲ್ಪ ಭಿನ್ನವಾಗಿ ನಿಲ್ಲುತ್ತದೆ. ಇದು ಚಂದಾಪುರ ತಾಂಡ್ಯದ ಲಕ್ಕು ಎಂಬ ಬಡಕುಟುಂಬದ ಒಂದು ದುರಂತ ಕಥೆ. ಈ ಕಥೆಯ ಲಕ್ಕುನ ಪಾತ್ರ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ. ಚಂದಾಪುರ ತಾಂಡ್ಯದ ಅನಾಥ ಹುಡುಗ ಲಕ್ಕು ದನಕಾಯುತ್ತ, ಧರಮಗೌಡರ ಮನೆಯ ಜೀತದಾಳಾಗಿ, ಜೀತಮುಕ್ತಿ ಹೊಂದಿ ಸ್ವಂತ ಭೂಮಿಯುಳ್ಳ ರೈತನಾಗಿ, ಹೆಗಲೆಣಿಯಾಗಿ ಹೊಲದಲ್ಲಿ ದುಡಿಯುವ ಹೆಂಡತಿ ಚೆನ್ನಿಯ ಗಂಡನಾಗಿ ಏರುಗತಿಯ ಬದುಕನ್ನು ನಡೆಸುತ್ತಿರುವಾಗ ವಿಧಿ ವಿಲಾಸ ತನ್ನ ಅಟ್ಟಹಾಸವನ್ನು ಪ್ರಾರಂಭಿಸುತ್ತದೆ. ಹೆರಿಗೆ ಸಂದರ್ಭದಲ್ಲಿ ಹೆಂಡತಿ ಅಧಿಕ ರಕ್ತಸ್ರಾವದಿಂದ ಅಸುನೀಗುತ್ತಾಳೆ. ಹೆಂಡತಿ ಬಿಟ್ಟು ಹೋದ ರೋಗಗ್ರಸ್ತನಾದ ಅನಾಥ ಮಗು ಭೀಮುನನ್ನು ಉಳಿಸಿಕೊಳ್ಳಲು ಅವನು ಎಲ್ಲವನ್ನೂ ಕಳೆದುಕೊಂಡು ತಾಂಡ್ಯ ತೊರೆದು ದೂರ ಹೋಗುತ್ತಾನೆ. ಈ ಕಥೆಯ ಆಶಯ ದುರಂತ ಮತ್ತು ಸಂತೋಷ ಎರಡನ್ನೂ ಒಟ್ಟೊಟ್ಟಿಗೇ ಒಳಗೊಂಡಿದೆ.

‘ಮಾಲಿಂಗನ ಮಡು’ ಹಲವು ಆಯಾಮಗಳನ್ನು ಹೊಂದಿರುವ ಸಂಕೀರ್ಣ ಕಥೆ. ದೇವರು, ನದಿ, ನಿಸರ್ಗ, ಜೀವನದ ನಿಗೂಢಗಳು-ಎಲ್ಲವನ್ನು ಹಕ್ಕಿ ಗೂಡು ಕಟ್ಟುವಂತೆ ರೂಪಿಸಲು ಸಾಧ್ಯವಾಗಿರುವುದು ವಾಸ್ತವವನ್ನು ಮೀರುವ ಸಹಜ ಕಲೆಗಾರಿಕೆಯಿಂದ. ಕಥೆಗಾರನಿಗೆ ಈ ಕಥೆಯನ್ನು ಹೆಚ್ಚಿನ ವಿವರಗಳಲ್ಲಿ ದಾಖಲೆ ಮಾಡುವುದಕ್ಕಿಂತ, ಅದನ್ನು ಕಲಾತ್ಮಕವಾಗಿ ಕಟ್ಟಿಕೊಡುವುದು ಮುಖ್ಯವಾಗಿದೆ. ಬದುಕು ಮತ್ತು ಮಾನವ ಸಂಬಂಧಗಳ ಬಗ್ಗೆ ನಿರ್ದಿಷ್ಟವಾದ ತಾತ್ವಿಕತೆಯನ್ನು ರೂಪಿಸಿಕೊಡುವ ಆಶಯ ಈ ಕಥೆಯ ಆಳದಲ್ಲಿ ಹುದುಗಿದೆ; ಆದರೆ ಅದು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿರುವುದಿಲ್ಲ. ಗಂಡು-ಹೆಣ್ಣಿನ ಸಂಬಂಧಗಳ ಹಿಂದಿರುವ ಭಾವತರ್ಕ ಮತ್ತು ದೇಹತರ್ಕವನ್ನು ಬಹಳ ಜಾಗರೂಕತೆಯಿಂದ ಅತಿ ವಿವರಗಳಿಗೆ ಹೋಗದೆ ಈ ಕಥೆ ಕಟ್ಟಿಕೊಡುತ್ತದೆ. ಶೋಷಣೆ, ಮೂಢನಂಬಿಕೆ, ಕಾಮ, ಪ್ರೇಮ, ಚಿತ್ತಚಂಚಲತೆ, ಸ್ವಾರ್ಥಪರತೆ, ಪರೋಪಕಾರ, ಮದುವೆ, ಸಾವು-ಹೀಗೆ ಮೇಲುನೋಟಕ್ಕೆ ತೋರುವಂತಿರುವ ಸಂಗತಿಗಳನ್ನು ಕಥೆಗಾರ ನೈಜವಾಗಿ ನಿರೂಪಿಸಿದ್ದಾರೆ. ಈ ಕಥೆಯಲ್ಲಿ ಕೃಷ್ಣ ನಾಯಕರ ಬರವಣಿಗೆಯಲ್ಲಿ ಸಾಮಾನ್ಯವಾಗಿರುವ ಅಚ್ಚುಕಟ್ಟುತನವಿದೆ; ದಾಂಪತ್ಯದ ವಿರಸ, ರಂಪದ ವಸ್ತುವನ್ನು ಒಳಗೊಂಡಿದೆ. ಕಥೆಯಲ್ಲಿ ಸಾಮಾನ್ಯವಲ್ಲದ ಇತರ ಅಂಶಗಳೂ ಎದ್ದು ಕಾಣುವಂತಿವೆ; ವಿಶಿಷ್ಟ ಎಂಬಂತಹ ತಂತ್ರವಿಧಾನವೇನೂ ಇಲ್ಲದೆ ನೇರವಾದ ನಿರೂಪಣೆ ಇದೆ.

ಸಮಾಜದ ಅವನತಿಯ ಚಿತ್ರಣವನ್ನು ಚಿತ್ರಿಸುವ ಕಥೆ ‘ಮೂಢ ಮನಸ್ಸುಗಳು’. ಚಂದನಕೆರೆ ತಾಂಡ್ಯದ ಮಾದು ಕಾಕಾನ ಸಾವಿನ ಸುತ್ತ ಕಥೆಯು ಬೆಳೆಯುತ್ತಾ, ಗೂಢವಾಗಿ ಸಾಗುತ್ತದೆ. ಮಾದು ಕಾಕಾ ಚಂದನಕೆರೆ ತಾಂಡ್ಯದ ಹೊರಗೆ ಹಾಗೂ ರವಿವಾರದ ಕೆಟ್ಟ ದಿನದಂದು ತೀರಿಕೊಳ್ಳುತ್ತಾನೆ. ಅವನ ಸಾವು ತಾಂಡ್ಯದ ಜನರಿಗೆ ವಿಚಿತ್ರವಾಗುತ್ತದೆ. ಅವನ ಹೆಣವನ್ನು ಊರೊಳಗೆ ತರಬಾರದೆಂದು ತಾಂಡ್ಯದ ಜನರು ನಿರ್ಧರಿಸುತ್ತಾರೆ. ಆದರೆ ಮಾದು ಕಾಕಾ ಒಳ್ಳೆಯ ಮನುಷ್ಯನಾಗಿದ್ದರಿಂದ ಊರ ಜನರೆಲ್ಲ ಅವನ ಹೆಣವನ್ನು ಊರೊಳಗೆ ತಂದು ಮೆರವಣಿಗೆಯಲ್ಲಿ ಸಮಾಧಿ ಜಾಗಕ್ಕೆ ತರಲು ಯಾವುದಾದರೊಂದು ಉಪಾಯವಿದೆಯೇ ಎಂದು ಚಂದನಕೆರೆಯ ಮಿಟ್ಟು ಸಾಧುವಿನಲ್ಲಿ ಕೇಳುತ್ತಾರೆ. ಅವನು ಉಪಾಯ ಸೂಚಿಸುತ್ತಾನಾದರೂ ಅದು ಮತ್ತೊಂದು ಮೌಢ್ಯಕ್ಕೆ ದಾರಿ ಮಾಡಿಕೊಡುತ್ತದೆ. ಒಂದು ಕುರುಡು ನಂಬಿಕೆಯಿಂದ ತಾಂಡ್ಯದ ಜನ ಇನ್ನೊಂದಕ್ಕೆ ಹಬ್ಬಿಕೊಳ್ಳುತ್ತಾರೆ. ಮೌಢ್ಯ ತುಂಬಿರುವ ತಾಂಡ್ಯದೊಂದಿಗೆ ಕಥೆಯ ನಿರೂಪಕನ ಸಂವಾದ ಕಡಿದು ಬೀಳುತ್ತದೆ. ಇದರ ದುರಂತವೇ ಈ ಕಥೆಯ ಕೇಂದ್ರಬಿಂದು. ಕಥೆಯ ನಿರೂಪಕನ ಸೋಲು ಒಂದು ವಿಷಾದದ ದನಿಯಾಗಿದೆ. ಚಂದನಕೆರೆ ತಾಂಡ್ಯದ ಜನರ ಮೂಢನಂಬಿಕೆಯು ನಿರೂಪಕನ ವಿಚಾರವಾದದಿಂದ ಬದಲಾಗದಂತಹ ಶಾಶ್ವತ ವಸ್ತುಸ್ಥಿತಿ ಅದು. ಆ ಸ್ಥಿತಿಯು ಹಾಗೆಯೇ ಮುಂದುವರಿಯುವಂತಹದು ಎಂಬ ನಿಲುವನ್ನೂ ಸಹ ಈ ಕಥೆ ಪ್ರಕಟಿಸುತ್ತದೆ. ಈ ನಿರ್ದಿಷ್ಟ ಸಾಮಾಜಿಕ ಸನ್ನಿವೇಶದಲ್ಲಿ ವಿಚಾರವಾದದ ಅಸಹಾಯಕತೆಯನ್ನು ಈ ಕಥೆ ಧ್ವನಿಸುತ್ತದೆ.

‘ಹುತ್ತವ ಬಡಿದೊಡೆ’ ಕಥೆಯಲ್ಲಿ ಗಂಡು-ಹೆಣ್ಣಿನ ವಿವಾಹಭಾಹಿರ ಸಂಬಂಧದ ವಿಶ್ಲೇಷಣೆ ನಡೆಯುವುದು ಮೂಲವಾಗಿ ಮಾನವ ಸಂಬಂಧದ ಆಧಾರದ ಮೇಲೆ ಭಾವನೆಗಳ, ಸಹಜ ಪ್ರೀತಿ-ನಿಷ್ಠೆಗಳ ಚೌಕಟ್ಟಿನಲ್ಲಿ. ಇಲ್ಲಿ ಯಾವ ವಾದದ ಸುಳಿವಿಲ್ಲ. ಮುಖ್ಯವಾಗಿ ಕಾಣುವುದು ಬಂಧನಗಳನ್ನು ಕಿತ್ತೊಗೆದು ಹೃದಯವಂತಿಕೆಯ ಬೆಳಕಿನಲ್ಲಿ ನಡೆಯಬಯಸುವ ಹಂಬಲ, ಪ್ರೀತಿಯ ಹಂಬಲ. ಬದುಕಿನ ಸಂತೋಷ, ಮನುಷ್ಯ-ಮನುಷ್ಯರ ಸಹಜ ಸಂಬಂಧದ ಸಂತೋಷ ಇವುಗಳನ್ನು ಹೀರಿ ಬದುಕನ್ನು ಎದೆಗಪ್ಪಿಕೊಳ್ಳುವ ಹಂಬಲ ಈ ಕಥೆಯಲ್ಲಿ ಗಾಢವಾಗಿದೆ.

ಕೃಷ್ಣ ನಾಯಕರ ಕಥಾ ವಿಧಾನ ವಿಶಿಷ್ಟವಾದದ್ದು. ಸಾಮಾನ್ಯವಾಗಿ ಒಂದು ಪಾತ್ರದ ಬದುಕಿನಲ್ಲಿ ಒಂದು ‘ಕ್ರೈಸಿಸ್’ ಉದ್ಭವಿಸುತ್ತದೆ. ಸರಳವಾಗಿ ನಡೆದುಕೊಂಡು ಹೋಗುವ ಬದುಕು ಇದ್ದಕ್ಕಿದ್ದಂತೆ ಒಂದು ಸವಾಲನ್ನು ಎಸೆಯುತ್ತದೆ. ಇದು ಜೀವ ತತ್ತರಿಸುವಂತೆ ಮಾಡುವ ಸವಾಲು. ಈ ಸವಾಲನ್ನು ಪಾತ್ರ ಎದುರಿಸಿ, ತತ್ತರಿಸುತ್ತಲೇ ಪ್ರಶ್ನೆಗಳನ್ನು ಕೇಳಿಕೊಂಡು, ಸಾಮಾನ್ಯವಾಗಿ ಸವಾಲನ್ನು ಎದುರಿಸುವ ದಾರಿಯನ್ನು ಕಂಡುಕೊಳ್ಳುತ್ತದೆ, ಈ ಪ್ರಕ್ರಿಯೆಯಲ್ಲಿ ಕಥೆ ಬೆಳೆಯುತ್ತದೆ. (ಈ ವಿಶ್ಲೇಷಣೆ ಎಲ್ಲ ಕಥೆಗಳಿಗೂ ಅನ್ವಯಿಸುವುದಿಲ್ಲ.)

ನೀಲು ನಾಯಕ್ ತಾಂಡ್ಯದ ಜನ ಜೀವನ ಕ್ರಮವನ್ನು ದಾಖಲು ಮಾಡುವ ಕಥೆ ‘ಗೋರ ಜನರ ಈ ಹಾಡು’. ನೀಲು ನಾಯಕ್ ತಾಂಡ್ಯದ ಜನರೆಲ್ಲಾ ಒಂದು ಬಗೆಯ ವಿಚಿತ್ರ ಜನ. ತಾಂಡ್ಯದ ಜನರಿಗೆ ಶಾಲೆ, ರಸ್ತೆ, ಆಸ್ಪತ್ರೆ, ಕುಡಿಯಲು ಶುದವಾದ್ಧ ನೀರು, ವಿದ್ಯುತ್ ದೀಪಗಳು ಬೇಕಿಲ್ಲ. ತಾಂಡ್ಯದ ಜನರು ಪ್ರಕೃತಿಯ ಒಡಲಲ್ಲಿ ವಾಸಿಸುತ್ತ, ಆಧುನಿಕತೆಯ ಸೋಂಕು ಇಲ್ಲದೆ ನಿಸರ್ಗದೊಂದಿಗೆ ಮಿಳಿತವಾಗಿ ಕೃತ್ರಿಮರಹಿತ ಬದುಕನ್ನು ನಡೆಸುತ್ತ, ನಿತ್ಯದ ಕೆಲಸವನ್ನು ಮಾಡುತ್ತಿದ್ದಾರೆ. ಕಥೆಯಲ್ಲಿ ಬರುವ ಅನಿವಾರ್ಯ ಅಂಗಗಳಾದ ಅಧಿಕಾರಿಗಳ ಕರ್ತವ್ಯ ಭ್ರಷ್ಟತೆ, ಪುಢಾರಿ ರಾಜಕಾರಣಿಗಳ ಸ್ವಾರ್ಥ, ತಾಂಡ್ಯದ ಜನರ ಅಸಹನೀಯವಾದ ಬದುಕಿನ ಚಿತ್ರಗಳೆಲ್ಲಾ ಆ ಸಮಾಜದ ವಾಸ್ತವ ಚಿತ್ರಗಳೇ ಆಗಿವೆ.

‘ಗುಡಿ ಮತ್ತು ಪೂಜೆ’ ಕಥೆಯಲ್ಲಿ ನಾಲ್ಕು ತಿಂಗಳ ಮಗು ಫೂಲಾಣಿ ವೈದ್ಯಕೀಯ ಚಿಕಿತ್ಸೆ ದೊರಕದೆ ಮರಣ ಹೊಂದುತ್ತದೆ. ಅವಳು ಪಂಡರಿಯ ಕನಸಿನಲ್ಲಿ ಬಂದು ಗದ್ದುಗೆ ಕಟ್ಟಿಸಿಕೊಳ್ಳುತ್ತಾಳೆ; ಗುಡಿ ನಿರ್ಮಿಸಿಕೊಳ್ಳುತ್ತಾಳೆ, ಜಾತ್ರೆ ಮಾಡಿಸಿಕೊಳ್ಳುತ್ತಾಳೆ. ಅವಳು ತಾಂಡ್ಯದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತಾಳೆ. ಈ ಕಥೆಗೆ ಕುತೂಹಲವೇ ತಳಹದಿ. ನಾಟಕೀಯ ಬೆಳವಣಿಗೆ ಈ ಕಥೆಯ ಶೈಲಿಯಾಗಿದೆ. ಕಥೆಯಲ್ಲಿ ಒಂದು ಸಾಂಪ್ರದಾಯಿಕ ಬದುಕಿನ ಬಿಕ್ಕಟ್ಟುಗಳು, ಅದರಲ್ಲೇ ಅಂತರ್ಗತವಾಗಿರುವ ಅನೇಕ ಬಗೆಯ ಕ್ರೌರ್ಯ, ಅಮಾನವೀಯತೆಗಳ ಹೃದಯಸ್ಪರ್ಶಿ ಚಿತ್ರಣವಿದೆ. ಆದರೆ ಕಥೆಯಲ್ಲಿ ದಟ್ಟವಾದ ವಿವರಗಳ ಕೊರತೆ ಎದ್ದು ಕಾಣುತ್ತದೆ.

‘ಚೆಲ್ವಿ’ ಕಥೆಯಲ್ಲಿ ಗಂಡು-ಹೆಣ್ಣಿನ ಸಂಬಂಧಗಳ ಸೂಕ್ಷ್ಮತೆ ಚಿತ್ರಿತವಾಗಿದೆ. ಚೆಲ್ವಿ ಮಿಠಾಯಿ ಮುದ್ದಪ್ಪನ ಹೆಂಡತಿಯಾಗಿ ಬಂದ ಮೇಲೆ ಗಂಡನ ಶೀತಲ ನಡತೆಯಿಂದಾಗಿ ಸುಖ ದಾಂಪತ್ಯದಿಂದ ವಂಚಿತವಾದ ಮನೋಭಾವವನ್ನು ಬೆಳೆಸಿಕೊಳ್ಳುತ್ತಾಳೆ. ಇದೇ ಕಾರಣದಿಂದ ಅವಳಿಗೆ ಕಲ್ಲಳ್ಳಿಯ ಮಾನೆಗೌಡನ ಬಗ್ಗೆ ಆಕರ್ಷಣೆ ಉಂಟಾಗುತ್ತದೆ. ಚೆಲ್ವಿ ಮಾನೆಗೌಡನ ಆಸ್ತಿ ಅಂತಸ್ತಿಗೆ ಮರುಳಾಗಿ ಗಂಡನನ್ನು ಬಿಟ್ಟು ಗೌಡನನ್ನು ಕೂಡಿಕೊಳ್ಳುತ್ತಾಳೆ. ಮಾನೆಗೌಡ ತುಂಬ ವಿಲಾಸಿ. ಜೀವನದಲ್ಲಿ ಉಂಡು ತಿಂದು ಮಜವಾಗಿ ಇರಬೇಕೆಂಬ ಖಯಾಲಿ ಮನುಷ್ಯ. ಅನೇಕ ವರ್ಷಗಳ ನಂತರ ಗೌಡ ಚೆಲ್ವಿಯಲ್ಲಿ ನಿರಾಸಕ್ತನಾಗುತ್ತಾನೆ. ಈ ಸಂದರ್ಭದಲ್ಲಿ ಚೆಲ್ವಿ ಬದುಕು ಹಾದಿತಪ್ಪುತ್ತದೆ. ಮೊದಲ ಗಂಡ ಮಿಠಾಯಿ ಮುದ್ದಪ್ಪ ಅವಳನ್ನು ಮತ್ತೆ ಸ್ವೀಕರಿಸಲು ತಯಾರಿದ್ದರೂ, ಅವಳು ಅದನ್ನು ತಿರಸ್ಕರಿಸಿ ಕಲ್ಲಳ್ಳಿಯಲ್ಲಿ ಕೂಲಿ-ನಾಲಿ ಕೆಲಸ ಮಾಡುತ್ತ ತನ್ನ ಸ್ವಂತ ಬದುಕನ್ನು ರೂಪಿಸಿಕೊಳ್ಳಲು ನಿರ್ಧರಿಸುತ್ತಾಳೆ. ಅವಳು ಪಶ್ಚಾತ್ತಾಪದ ಕುಲುಮೆಯಲ್ಲಿ ಬೆಂದು ಪರಿಶುದ್ಧಳಾಗುವ ನಿಟ್ಟಿನಲ್ಲಿ ಬದುಕನ್ನು ರೂಪಿಸಿಕೊಳ್ಳುತ್ತಾಳೆ. ಈ ಕಥೆಯಲ್ಲಿ ಬರುವ ಸೂಕ್ಷ್ಮ ಕೌಟುಂಬಿಕ ವಿವರಗಳು ಅಪೂರ್ವವಾಗಿವೆ. ಚೆಲ್ವಿ ತನಗಿಷ್ಟ ಬಂದಂತೆ ಜೀವನ ನಿರ್ವಹಿಸುವುದು ಈ ಕಥೆಯ ಹೆಚ್ಚುಗಾರಿಕೆಯಾಗಿದೆ.

‘ಲಚುಮಿ ಅತ್ತೆ’ ಕಥೆ ಲಚುಮಿ ಅತ್ತೆಯ ಸ್ವಾಭಿಮಾನದ ಬದುಕನ್ನು ಚಿತ್ರಿಸುತ್ತದೆ. ಕಥೆಯ ಕೇಂದ್ರಪಾತ್ರವಾದ ಲಚುಮಿ ಅತ್ತೆ ಪೀಕುನ ಹೆಂಡತಿ. ಲಚುಮಿ ಅತ್ತೆಯ ಗಂಡ ಪೀಕು ದನದ ವ್ಯಾಪಾರಿಯಾಗಿರುತ್ತಾನೆ. ಅವನು ತನ್ನ ಜೋಡಿದಾರ ಬದ್ದುಸಿಂಗಗೆ ಕಟ್ಟಿಕೊಂಡು ದನದ ವ್ಯಾಪಾರ ಮಾಡುತ್ತ ಊರೂರು, ಸಂತೆಯಿಂದ ಸಂತೆಗೆ ಸುತ್ತುತ್ತಾನೆ. ಆದರೆ ಲಚುಮಿ ಅತ್ತೆ ಎಚ್ಚೆತ್ತ ಮಹಿಳೆ. ಅವಳು ತನ್ನ ಇಡೀ ಕುಟುಂಬದ ಜವಾಬ್ದಾರಿಯನ್ನು ಯಾವುದೇ ಆತಂಕವಿಲ್ಲದೆ ನಿರ್ವಹಿಸುತ್ತಾಳೆ; ಅವಳು ಬದುಕನ್ನು ಗಾಢವಾಗಿ ಪ್ರೀತಿಸುತ್ತಾಳೆ, ಬದುಕು ಒಡ್ಡಿದ ಪಂಥವನ್ನು ಸ್ವೀಕರಿಸಿ ಗೆದ್ದು ನಿಲ್ಲುತ್ತಾಳೆ. ಬದುಕನ್ನು ಅಸಹಾಯಕ ಪರಿಸ್ಥಿತಿಯಲ್ಲೂ ಹೇಗೆ ನಿಭಾಯಿಸಬಹುದು ಎನ್ನುವುದಕ್ಕೆ ಅವಳು ಮಾದರಿಯಾಗುತ್ತಾಳೆ. ಆದ್ದರಿಂದ ಕಥಾ ನಿರೂಪಕನ ಸ್ಮೃತಿಯಲ್ಲಿ ಲಚುಮಿ ಅತ್ತೆ ಶಾಶ್ವತವಾಗಿ ಉಳಿಯುತ್ತಾಳೆ. ನಾಯಕರು ಈ ಕಥೆಯನ್ನು ನಿರೂಪಿಸುವ ಕ್ರಮ ಅವರ ಕಥನ ಕಲೆಯ ಸ್ವರೂಪವನ್ನು ಅತ್ಯಂತ ಸಮರ್ಥವಾಗಿ ಪ್ರತಿನಿಧಿಸುತ್ತದೆ.

ಕೃಷ್ಣ ನಾಯಕರ ಈ ಸಂಕಲನದ ಕಥೆಗಳಲ್ಲಿ ‘ಕಾಮ’ವು ಹೆಚ್ಚಿನ ಜಾಗವನ್ನು ಪಡೆದಿದೆ. ‘ಕಾಮ ಆದರ್ಶಗೊಂಡರೆ ಪ್ರೇಮ. ಅದು ವ್ಯಸನವಾದರೆ ಹಾದರ’. ಆದ್ದರಿಂದ ‘ಕಾಮ’ ಕೃಷ್ಣ ನಾಯಕರ ಕಥೆಗಳಲ್ಲಿ ಮನುಷ್ಯರ ಮೂಲಪ್ರವೃತ್ತಿಯ ವಾಸನಾಮಯ ನೆಲೆಯಲ್ಲಿ ಮಾತ್ರ ಚಿತ್ರಿತವಾಗದೆ ಚರಿತ್ರೆ ಹಾಗೂ ಸೃಷ್ಟಿಯ ರಹಸ್ಯವನ್ನು ಒಳಗೊಳ್ಳುತ್ತದೆ. ಈ ದೃಷ್ಟಿಯಿಂದ ‘ಹುತ್ತವ ಬಡಿದೊಡೆ’, ‘ಚೆಲ್ವಿ’, ‘ಮಾಲಿಂಗನ ಮಡು’ವಿನಂತಹ ಕಥೆಗಳು ಬಹಳ ಮುಖ್ಯವಾದಂಥವು. ಇಲ್ಲಿನ ಹಲವು ಕಥೆಗಳು ಬಹುತೇಕ ‘ಸ್ತ್ರೀ’ ಭೂಮಿಕೆಯವು. ಧ್ವನಿಪೂರ್ಣ ಶೀರ್ಷಿಕೆಗಳಲ್ಲಿ ತೆರೆದುಕೊಳ್ಳುವ ಈ ಕಥೆಗಳ ಪ್ರಬಂಧ ದನಿ ಪ್ರೀತಿ-ವಿರಸ ಸಂಬಂಧಗಳು. ಗಂಡು-ಹೆಣ್ಣಿನ ವ್ಯಕ್ತಿಗತ ನೆಲೆಯಲ್ಲಿ ಮತ್ತು ಸಮಷ್ಟಿ ನೆಲೆಯಲ್ಲಿ ಒರಗೆ ಬೀಳುವ ಈ ಸಂಬಂಧಗಳು ಮುಖ್ಯವಾಗುವುದು, ಗಟ್ಟಿಯಾಗಿ ಸಕಾರಾತ್ಮಕ ಬೆಳವಣಿಗೆ ಕಾಣುವುದು ಮಾನವೀಯ ಮೌಲ್ಯಗಳ ಆಯಾಮದಲ್ಲೇ. ಈ ಸಂಕಲನದ ಕೆಲವು ಕಥೆಗಳಲ್ಲಿ ಎದ್ದು ಕಾಣುವ ಅನನ್ಯತೆಯೆಂದರೆ, ಬದುಕಿನ ಕಷ್ಟಗಳೆಲ್ಲವನ್ನೂ ಎದುರಿಸಿ, ಈ ಹೋರಾಟದಲ್ಲಿ ಹೈರಾಣಾದರೂ ಗಟ್ಟಿಯಾಗಿ ನಿಲ್ಲುವ, ಪ್ರಬುದ್ಧತೆಯತ್ತ ಮುಖಮಾಡುವ ಬೆಳವಣಿಗೆ. ಈ ಮಾತಿಗೆ ನಿದರ್ಶನವಾಗಿ ‘ಹುತ್ತವ ಬಡಿದೊಡೆ’, ‘ಮಾಲಿಂಗನ ಮಡು’, ‘ಚೆಲ್ವಿ’ ಮೊದಲಾದ ಕಥೆಗಳನ್ನು ಕಾಣಬಹುದು.

‘ಬದುಕು ಹುಡುಕುತ್ತ’, ‘ಮಾಲಿಂಗನ ಮಡು’, ‘ಮೂಢ ಮನಸ್ಸುಗಳು’, ‘ಹುತ್ತವ ಬಡಿದೊಡೆ’ ಮುಂತಾದವು ಈ ಸಂಕಲನದ ಶ್ರೇಷ್ಠ ಕಥೆಗಳು. ಈ ಕಥೆಗಳಲ್ಲಿ ಕಥೆಗಾರರ ದೊಡ್ಡ ಪ್ರಯತ್ನವಿದೆ. ಸಂಕಲನಕ್ಕೆ ಹೆಸರು ಕೊಟ್ಟಿರುವ ‘ಲಚುಮಿ ಅತ್ತೆ’ ಕಥೆ ಕನ್ನಡದ ಅತ್ಯುತ್ತಮ ಕಥೆಗಳ ಗುಂಪಿಗೆ ಸೇರುತ್ತದೆ. ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಹೃದಯ ಸಂವಾದದಂತೆ ಓದುಗರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಇಲ್ಲಿನ ಕಥೆಗಳಲ್ಲಿ ಮನುಷ್ಯನ ನೈತಿಕ ಹೊಣೆಗಾರಿಕೆ, ನೈತಿಕ ಹೊಯ್ದಾಟಗಳೇ ಸ್ಥಾಯಿಭಾವ. ಕೃಷ್ಣ ನಾಯಕರ ಕಥೆಗಳನ್ನು ಬಿಡಿಬಿಡಿಯಾಗಿ ಓದದೆ ಅವುಗಳ ಪರಸ್ಪರ ಸಾವಯವ ಸಂಬಂಧದಲ್ಲಿ ಓದಿದರೆ ಅವರ ಇಡೀ ಬರವಣಿಗೆಯ ಹಿಂದಿನ ನೋಟ ಸ್ಪಷ್ಟವಾಗುತ್ತದೆ. ನಾಯಕರ ಹಲವಾರು ಕಥೆಗಳನ್ನು ಓದಿದಾಗ ಏಕತಾನತೆಯ ಅನುಭವವಾಗುತ್ತದೆ. ಅವರು ಕುತೂಹಲಕರವಾಗಿ ಕಥೆ ಹೇಳಬಲ್ಲರು. ತಾಂಡ್ಯದ ಜನರ ಸೂಕ್ಷ್ಮಗಳನ್ನು, ಗಂಭೀರ ಸಮಸ್ಯೆಗಳನ್ನೂ ಅತ್ಯಂತ ಸುಂದರವಾಗಿ ನಿರೂಪಿಸುವುದು ಕೃಷ್ಣ ನಾಯಕರ ಕಥನಕ್ರಮದ ವೈಶಿಷ್ಟ್ಯ. ನಾಯಕರ ಕಥೆಗಳಲ್ಲಿ ಎಲ್ಲಿಯೂ ಅನಾವಶ್ಯಕವಾದ ಕ್ಲಿಷ್ಟತೆ ತಲೆಹಾಕುವುದಿಲ್ಲ. ಲೇಖಕರು ಯಾವುದೇ ಆಕ್ರೋಶಕ್ಕೆ ಒಳಗಾಗದೆ ಆ ವರ್ಗದ ಚಿತ್ರಣವನ್ನು ಯಥಾವತ್ತಾಗಿ ಕೊಟ್ಟಿದ್ದಾರೆ. ಭಾಷೆ, ತಂತ್ರ, ನಿರೂಪಣಾ ವಿಧಾನ, ಪಾತ್ರ ಚಿತ್ರಣಗಳಿಂದ ಕೃಷ್ಣ ನಾಯಕರ ಕಥಾಸಂಕಲನ ‘ಲಚುಮಿ ಅತ್ತೆ’ ಓದುಗರ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.

ಸಿ.ಎಸ್. ಭೀಮರಾಯ ಅವರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ..

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...