ಚಿನ್ನಮಣೀಸ್ ವರ್ಲ್ಡ್ ; ಹಲವು ಅಚ್ಚರಿಗಳ ಜಗತ್ತು

Date: 29-12-2025

Location: ಬೆಂಗಳೂರು


ಬದುಕಿನ ಕಠೋರ ಸತ್ಯಗಳನ್ನು ಹೇಳುತ್ತಲೇ ಆ ಬದುಕಿನ ಬಗ್ಗೆ ಕಹಿ ಮೂಡಿಸದ ಆಪ್ಯಾಯಮಾನಕರ ಓದಿನ ಕೃತಿಯಿದು. ಹಾಗೆಂದು ಇದು ಗೋಚರ ವಿದ್ಯಮಾನಗಳ ಹೊರ ಪದರವನ್ನು ಮಾತ್ರ ತಟ್ಟುವ `ಜನಾಕರ್ಷಕ’ ಶೈಲಿಯ ಕಾದಂಬರಿಯಲ್ಲ, ಅದನ್ನು ಮೀರಿದ ಘನತೆಯುಳ್ಳದ್ದು". ಎನ್ನುತ್ತಾರೆ ಪ್ರಕಾಶಕ ಬಿ.ಎಸ್. ವಿದ್ಯಾರಣ್ಯ.

ಲೇಖಕ ಮುಕುಂದರಾವ್ ಅವರು ಇಂಗ್ಲಿಷ್‌ನಲ್ಲಿ ರಚಿಸಿದ, ವೀಣಾ ಮುರಳೀಧರ್ ಅವರು ಕನ್ನಡಕ್ಕೆ ಅನುವಾದಿಸಿದ 'ಚಿನ್ನಮಣೀಸ್ ವರ್ಲ್ಡ್ / ಚಿನ್ನಮಣಿಯ ಜಗತ್ತು' ಕೃತಿಗೆ ಪ್ರಕಾಶಕರ ನೆಲೆಯಲ್ಲಿ ಅವರು ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ;

ಕೆಲವು ತಿಂಗಳ‌ ಹಿಂದೆ ಶ್ರೀ ಮುಕುಂದರಾವ್ ಅವರ `ಚಿನ್ನಮಣೀಸ್ ವರ್ಲ್ಡ್’ ಇಂಗ್ಲೀಷ್ ಕಾದಂಬರಿಯನ್ನು ಓದಿದ ನನಗೆ ಸಂತಸವಾಗಿತ್ತು. ಸರಳವಾಗಿ, ಸರಾಗವಾಗಿ ಕಥೆ ಹೇಳುತ್ತಲೇ ಕೊಳೆಗೇರಿ ಬದುಕನ್ನು ಎಷ್ಟು ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾರಲ್ಲ ಅನ್ನಿಸಿತು. ಕೊಳೆಗೇರಿಯಲ್ಲಿನ ಹೊಲಸು, ರೌಡಿತನ, ದುರ್ವ್ಯಸನ, ಕಷ್ಟ, ಕಾರ್ಪಣ್ಯಗಳನ್ನು ಮಾತ್ರವಲ್ಲದೆ, ಅಲ್ಲಿಯೂ ಇರುವ ನಳನಳಿಸುವ ಬದುಕಿನ ಸುಂದರ ಕ್ಷಣಗಳನ್ನು, ಜೀವನೋತ್ಸಾಹ ಪುಟಿಯುವ ಬದುಕಿನ ತುಣುಕುಗಳನ್ನು ಎಷ್ಟು ಚೆನ್ನಾಗಿ ನಿರೂಪಿಸಿದ್ದಾರೆ! ಬದುಕಿನಲ್ಲಿ ಎಲ್ಲಾ ಮುಗಿಯಿತು, ಕಾರ್ಗತ್ತಲೆ ಕವಿಯಿತು ಎನ್ನುವಾಗಲೇ, ಕಪ್ಪು ಆಕಾಶದಲ್ಲಿ ಜ್ವಲಿಸುವ ಅನಂತ ಚುಕ್ಕಿಗಳ ಹೊಳಪಿನಡಿಯಲ್ಲಿ ಆಶಾವಾದದ ಬೀಜಗಳನ್ನು ಸಾವಧಾನವಾಗಿ ವಾಸ್ತವತೆಯ ಮಣ್ಣಿನಲ್ಲಿ ನೆಡುವ ಅವರ ಬರಹದ ಕೌಶಲ್ಯ ಅಭಿನಂದನೀಯ.

ಬದುಕಿನ ಕಠೋರ ಸತ್ಯಗಳನ್ನು ಹೇಳುತ್ತಲೇ ಆ ಬದುಕಿನ ಬಗ್ಗೆ ಕಹಿ ಮೂಡಿಸದ ಆಪ್ಯಾಯಮಾನಕರ ಓದಿನ ಕೃತಿಯಿದು. ಹಾಗೆಂದು ಇದು ಗೋಚರ ವಿದ್ಯಮಾನಗಳ ಹೊರ ಪದರವನ್ನು ಮಾತ್ರ ತಟ್ಟುವ `ಜನಾಕರ್ಷಕ’ ಶೈಲಿಯ ಕಾದಂಬರಿಯಲ್ಲ, ಅದನ್ನು ಮೀರಿದ ಘನತೆಯುಳ್ಳದ್ದು. ಬದುಕಿನ ಸಂಕೀರ್ಣ ಸತ್ಯಗಳನ್ನು ವಾಚ್ಯವಲ್ಲದ ರೀತಿಯಲ್ಲಿ, ಸರಳ ರೂಪಕಗಳ ಮೂಲಕ ಹೇಳುವ ಶೈಲಿ ಈ ಕೃತಿಯದು. ಚಿನ್ನಮಣಿಯ ಜಗತ್ತಿನಲ್ಲಿ ಬಡವರ ನಗುವಿನ ಶಕ್ತಿಯ ಜೊತೆಗೆ ಕೃಷ್ಣನ ಬಾಯಿಯಲ್ಲಿ ಯಶೋದೆಗೆ ಕಂಡ ವಿಸ್ಮಯದ ಪರಿಯನ್ನು ನಮ್ಮಲ್ಲೂ ಮೂಡಿಸುತ್ತಾರೆ.

ಈ ಮಹತ್ವದ ಕೃತಿಯನ್ನು ನಾನೇ ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸಬೇಕೆಂದಿದ್ದೆ. ಸಮಯದ ಆಭಾವದ ಕಾರಣ, ಸ್ನೇಹಿತೆ ವೀಣಾಗೆ ಈ ಕೃತಿಯನ್ನು ಕಳುಹಿಸಿದಾಗ, ಆಕೆ ಅದರಲ್ಲಿನ ಪ್ರತಿ ವಾಕ್ಯವನ್ನೂ ಆಸ್ವಾದಿಸಿ, ಮುಕುಂದರಾಯರ ಬದುಕಿನ ಗ್ರಹಿಕೆಯ ಸೂಕ್ಷ್ಮತೆ ಮತ್ತು ಚಿಕ್ಕಪುಟ್ಟ ವಿವರಗಳನ್ನು ಆಪ್ತವಾಗಿ ನಿರೂಪಿಸಿರುವ ಅವರ ಶೈಲಿಯನ್ನು ಮೆಚ್ಚಿ, ಸೊಗಸಾಗಿ ಅನುವಾದ ಮಾಡಿ ಕಳುಹಿಸಿದ್ದಾಳೆ.

ಅಗ್ರಹಾರ ಕೃಷ್ಣಮೂರ್ತಿ ಅವರು ಮನೋಜ್ಞ ಮುನ್ನುಡಿ ಬರೆದಿದ್ದಾರೆ. 
ನಮ್ಮ ಸಂಸ್ಥೆಯಿಂದ ಪ್ರಕಟವಾಗುತ್ತಿರುವ ಈ ಕೃತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಓದಲೇಬೇಕಾದ ಈ ಪುಸ್ತಕವನ್ನು ಕೊಂಡು ಓದಿ. 

ಪುಸ್ತಕ ಬೇಕಾದವರು 9448235553 ಸಂಖ್ಯೆಗೆ ಜೀಪೇ/ಗೂಗಲ್‌ ಪೇ ಮೂಲಕ ರೂ.300 ಕಳುಹಿಸಿ, ʻಚಿನ್ನಮಣಿʼ ಎಂದು ಟೈಪ್‌ ಮಾಡಿ, ನಿಮ್ಮ ಹೆಸರು ಮತ್ತು ಪೂರ್ತಿ ವಿಳಾಸವನ್ನು ಪಿನ್‌ ಕೋಡ್‌ ಸಮೇತ ತಿಳಿಸಿ. ಪುಸ್ತಕವನ್ನು ಶೀಘ್ರದಲ್ಲಿ ರಿಜಿಸ್ಟರ್ಡ್‌ ಅಂಚೆ ಮೂಲಕ ರವಾನಿಸಲಾಗುತ್ತದೆ.
vidyaranyabs@gmail.com

 

MORE NEWS

ವಿಶ್ವಮಾನವ ಕುವೆಂಪು ಹುಟ್ಟುಹಬ್ಬದ ಸವಿನೆನಪಿನಲ್ಲಿ ಶತಮಾನದ ಕಾವ್ಯ ಕಾರ್ಯಕ್ರಮ

29-12-2025 ಬೆಂಗಳೂರು

ಬೆಂಗಳೂರು: ಬೀಟಲ್‌ ಬುಕ್‌ ಶಾಪ್‌ ಇವರ ನೇತೃತ್ವದಲ್ಲಿ ವಿಶ್ವಮಾನವ ಕುವೆಂಪು ಹುಟ್ಟುಹಬ್ಬದ ಸವಿನೆನಪಿನ...

ನಿರ್ದೇಶಕ,  ಸಾಹಿತಿ ಟಿ. ಎನ್. ಸೀತಾರಾಂ ಅವರಿಗೆ 'ಪಂಚಮಿ ಪುರಸ್ಕಾರ 2026'

29-12-2025 ಬೆಂಗಳೂರು

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿಯಿಂದ ಕೊಡಮಾಡುವ ಪಂಚಮಿ ಟ್ರಸ್ಟ್ ಉಡುಪಿ ಪ್ರಾಯೋಜಿತ 'ಪಂಚಮಿ ಪು...

ತುಮಕೂರು: ಡಿ. 29, 30 ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ; ಸಕಲ ಸಿದ್ಧತೆ

29-12-2025 ತುಮಕೂರು

ತುಮಕೂರು : ನಗರದ ಗಾಜಿನ ಮನೆಯಲ್ಲಿ ಡಿಸೆಂಬರ್ 29 ಮತ್ತು 30ರಂದು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ...