"ಅನಕ್ಷರಸ್ತರು, ಅಮಾಯಕರು ಮತ್ತು ಬಡವರಾಗಿದ್ದಆದಿವಾಸಿಗಳು ಅರಣ್ಯಗಳಲ್ಲಿ ಬದುಕುತ್ತಾ, ಅರಣ್ಯದ ಕಿರುಉತ್ಪನ್ನಗಳನ್ನು ಅವಲಂಬಿಸಿಕೊಂಡು ಮತ್ತು ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಾ ಒಂದಿಷ್ಟು ದವಸ ಧಾನ್ಯಗಳನ್ನು ಬೆಳೆಯುತ್ತಿದ್ದರು ಹಾಗೂ ಹೊರ ಜಗತ್ತಿನಿಂದ ದೂರ ಉಳಿದು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು," ಎನ್ನುತ್ತಾರೆ ಎನ್.ಜಗದೀಶ್ ಕೊಪ್ಪ, ಮೈಸೂರು. ಅವರು ತಮ್ಮ ʻದಂಗೆಯ ದಿನಗಳುʼ ಕೃತಿ ಕುರಿತು ಬರೆದ ಲೇಖನ.
ಇತ್ತೀಚಿನ ದಿನಗಳಲ್ಲಿ ಈ ವಿಷಯವು ನನ್ನನ್ನು ಬಹುವಾಗಿ ಕಾಡುತ್ತಿತ್ತು. 2010 ರಿಂದ 2012 ರ ಅವಧಿಯಲ್ಲಿ ಭಾರತದ ನಕ್ಸಲ್ ಇತಿಹಾಸದ ಕಥನ ಬರೆಯಲು ಹೊರಟಾಗ, ಆಂಧ್ರಪ್ರದೇಶ, ಒಡಿಸ್ಸಾ, ಮಹಾರಾಷ್ಟ್ರ, ಛತ್ತೀಸ್ಗಢ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದ ರಾಜ್ಯಗಳ ಅರಣ್ಯಪ್ರದೇಶಗಳಲ್ಲಿ ಮಾಜಿ ನಕ್ಸಲರ ಜೊತೆಗೂಡಿ ಆದಿವಾಸಿಗಳ ಬದುಕನ್ನುಅವಲೋಕಿಸುತ್ತಾ, ಅಲೆಮಾರಿ ಫಕೀರನಂತೆ ಸುತ್ತಾಡಿದ್ದೆ. ಆಸಿವಾಸಿಗಳ ಘನತೆಯ ಮತ್ತು ನೆಮ್ಮದಿಯ ಬದುಕಿಗಾಗಿ ಬಂದೂಕ ಕೈಗೆತ್ತಿಕೊಂಡು ವ್ಯವಸ್ಥೆಯ ವಿರುದ್ಧ ಹೋರಾಡಿ ಮಣ್ಣಾದ ವಿದ್ಯಾವಂತ ನಾಯಕರ ಕರುಣಾಜನಕ ಬದುಕಿನ ಕಥೆ ಕೇಳಿ ಕಣ್ಣೀರಿನಲ್ಲಿ ಮೈಮನಸ್ಸುಗಳನ್ನು ಒದ್ದೆ ಮಾಡಿಕೊಂಡಿದ್ದೆ. ಆ ನೆನಪುಗಳು ಇಂದಿಗೂ ಮನಸ್ಸಿನಲ್ಲಿ ಹಸಿರಾಗಿವೆ.
ಪಶ್ಚಿಮ ಬಂಗಾಳದ ಉತ್ತರದ ಭಾಗವಾದ ಡಾರ್ಜಿಲಿಂಗ್ ಸಮೀಪದ ಸಿಲಿಗುರಿ ಪಟ್ಟಣದಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿ ನಕ್ಸಲ್ ಸಂಘಟನೆಯನ್ನು ಹುಟ್ಟು ಹಾಕಿದ ಚಾರುಮುಜುಂದಾರ್, ಅಲ್ಲಿನ ಆದಿವಾಸಿಗಳ ದಯನೀಯವಾದ ಬದುಕನ್ನು ನೋಡಿ ಮಾವೋವಾದಿ ಕಮ್ಯೂನಿಸ್ಟ್ ಪಕ್ಷದ ಮೂಲಕ ಕಾರ್ಯಕರ್ತರನ್ನುಸಂಘಟಿಸಿದರು. 1960 ರ ದಶಕದಲ್ಲಿ ಅವರು ಆದಿವಾಸಿಗಳ ಹಳ್ಳಿಗಳಲ್ಲಿ ತಿರುಗುತ್ತಿದ್ದರು. ಒಮ್ಮೆ ನಕ್ಸಲ್ಬಾರಿ ಸಮೀಪದ ಹಳ್ಳಿಯ ಆದಿವಾಸಿಸಮುದಾಯದ ಬಡ ಕೃಷಿ ಕೂಲಿ ಕಾರ್ಮಿಕನ ಮನೆಯಲ್ಲಿ ಅವರು ಮಧ್ಯಾಹ್ನ ವೇಳೆಯಲ್ಲಿ ಊಟ ಮಾಡುತ್ತಿದ್ದರು. ಅಡುಗೆ ಮನೆಯ ಒಳಗೆ ಮೂರು ವರ್ಷದ ಬಾಲಕನೊಬ್ಬ ನನಗೂ ಅನ್ನ ಬೇಕು ಎಂದು ಅಳುತ್ತಿರುವುದು ಅವರಿಗೆ ಕೇಳಿಸಿತು. ಈ ಕುರಿತು ಚಾರು ಮುಂಜಂದಾರ್ ಕೃಷಿಕಾರ್ಮಿಕನನ್ನು ವಿಚಾರಿಸಿದಾಗ, ಆ ಮುಗ್ದ ಆದಿಸಿವಾಸಿ ಕಾರ್ಮಿಕನು ಅತ್ಯಂತ ಪ್ರಾಮಾಣಿಕವಾಗಿ ತನ್ನ ಮನೆಯ ಬಡತನವನ್ನು ಅವರೆದುರು ಬಿಚ್ಚಿಟ್ಟನು.
‘’ಸಾಹೇಬ್ರೇ, ನಾವು ಪ್ರತಿದಿನ ಗೆಡ್ಡೆ ಗಣೆಸುಗಳನ್ನು ಆಯ್ದು ತಂದು ಬೇಯಿಸಿಕೊಂಡು ತಿನ್ನುತ್ತೀವಿ. ವಾರಕ್ಕೆ ಒಮ್ಮೆ ಮಾತ್ರ ನಮಗೆ ಕೂಲಿ ಹಣಪಾವತಿಯಾದ ದಿನ ಅಕ್ಕಿ ತಂದು ಅನ್ನ ಊಟ ಮಾಡುತ್ತೇವೆ. ಈ ದಿನ ನೀವು ನನ್ನ ಮನೆಗೆ ಬರುತ್ತೀರಿ ಎಂಬ ಸುದ್ದಿ ತಿಳಿದು ಅಂಗಡಿಯಲ್ಲಿ ಅರ್ಧ ಕೆ.ಜಿ. ಅಕ್ಕಿಯನ್ನುಸಾಲವಾಗಿ ತಂದು ಅನ್ನ ಮಾಡಿದ್ದೀವಿ. ನಿಮ್ಮ ಊಟವಾದ ನಂತರ ಉಳಿದ ಅನ್ನವನ್ನು ಮಗುವಿಗೆ ಬಡಿಸುತ್ತೇವೆ. ನೀವು ನಮ್ಮ ಕುರಿತು ಕಾಳಜಿ ಮಾಡೋದು ಬೇಡ ಸಾಹೇಬ್ರೆ, ಊಟ ಮಾಡಿ’ ಎಂದು ಕಾರ್ಮಿಕನು ಹೇಳುತ್ತಿದ್ದಂತೆ ಬಾಯಿಗೆ ಅನ್ನಹಾಕಿಕೊಂಡಿದ್ದ ಚಾರು ಮುಂಜಂದಾರ್ ಅನ್ನವನ್ನು ಅಗಿಯಲಾರದೆ, ನುಂಗಲಾರದೆ ಕಣ್ಣೀರಾದರು. ಮನೆಯೊಳಗಿದ್ದ ಮಗುವನ್ನು ಹತ್ತಿರ ಕರೆದು ಕೂರಿಸಿಕೊಂಡು ಊಟ ಮಾಡಿಸಿದರು. ಈ ಘಟನೆಯು ಅವರಿಗೆ ನಕ್ಸಲ್ ಸಂಘಟನೆಗೆ ಪ್ರೇರಣೆಯಾಯಿತು. ನಂತರ ದಿನಗಳಲ್ಲಿ ಅವರೂ ಸೇರಿದಂತೆ ನೂರಾರು ಜನರು ಆದಿವಾಸಿಗಳ ಸುಸ್ಥಿರ ಬದುಕಿಗಾಗಿ ಹೋರಾಡುತ್ತಾ ಹುತಾತ್ಮರಾದರು.
ಪಶ್ಚಿಮ ಬಂಗಾಳದ ಸಿಲಿಗುರಿ, ನಕ್ಸಲ್ಬಾರಿ, ನ್ಯೂ ಜಲಪೈಗುರಿ ಮತ್ತು ಅಸ್ಸಾಂ ಹಾಗೂ ಮೇಘಾಲಯ ರಾಜ್ಯಗಳ ಆದಿವಾಸಿ ಬುಡಕಟ್ಟು ಜನಾಂಗಗಳ ಪರಿಸ್ಥಿತಿ ಮತ್ತುಅವರ ಇತಿಹಾಸ ಕುರಿತಂತೆ ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇಪ್ಪತ್ತುದಿನಗಳ ಕ್ಷೇತ್ರ ಕಾರ್ಯ ಕೈಗೊಂಡಿದ್ದೆ. ಆ ಸಂದರ್ಭದಲ್ಲಿ ನನ್ನೆದೆರು ತೆರೆದುಕೊಂಡ ಆದಿವಾಸಿಗಳ ಹೋರಾಟದ ಕಥನವೇ ಈ ಕೃತಿಯ ಮೂಲ ಆಕರವಾಗಿದೆ. ಅನಕ್ಷರಸ್ತರು, ಅಮಾಯಕರು ಮತ್ತು ಬಡವರಾಗಿದ್ದಆದಿವಾಸಿಗಳು ಅರಣ್ಯಗಳಲ್ಲಿ ಬದುಕುತ್ತಾ, ಅರಣ್ಯದ ಕಿರುಉತ್ಪನ್ನಗಳನ್ನು ಅವಲಂಬಿಸಿಕೊಂಡು ಮತ್ತು ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಾ ಒಂದಿಷ್ಟು ದವಸ ಧಾನ್ಯಗಳನ್ನು ಬೆಳೆಯುತ್ತಿದ್ದರು ಹಾಗೂ ಹೊರ ಜಗತ್ತಿನಿಂದ ದೂರ ಉಳಿದು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು.
ಹದಿನೇಳನೆಯ ಶತಮಾನದಲ್ಲಿ ಭಾರತಕ್ಕೆ ಕಾಲಿಟ್ಟ ಬ್ರಿಟಿಷರು ತಮ್ಮ ಸ್ವಾರ್ಥಕ್ಕಾಗಿ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಖಜಾನೆಯನ್ನು ತುಂಬುವ ನಿಟ್ಟಿನಲ್ಲಿ ಜಾರಿಗೆ ತಂದ ಆರಣ್ಯ ಕಾಯ್ದೆಗಳು ಭಾರತದ ಬುಡಕಟ್ಟು ಜನಾಂಗದ ಅಸ್ತಿತ್ವದ ಬೇರುಗಳನ್ನು ಅಲುಗಾಡಿಸಿದವು. ಭಾರತದ ನೆಲದಲ್ಲಿ ಸಂಸ್ಥಾನಗಳ ದೊರೆಗಳ ಮತ್ತು ಬ್ರಿಟಿಷರ ವಿರುದ್ಧ ಬಿಲ್ಲು ಬಾಣಗಳನ್ನು ಹಿಡಿದು ಹೋರಾಡಿದ ಆದಿವಾಸಿಗಳ ಬದುಕಿನ ಇತಿಹಾಸವು ಈವರೆಗೆ ಚರಿತ್ರೆಯ ಪುಟಗಳಲ್ಲಿ ಮುನ್ನೆಲೆಗೆ ಬರಲಿಲ್ಲ. ತಿಲ್ಕಾ ಮಾಂಝಿ, ರಾಮ್ಜಿ ಗೊಂಡ, ಕೋಮರಂ ಭೀಮ್, ಬಿರ್ಸಾಮುಂಡಾ, ಬುದು ಭಗತ್ ಮತ್ತು ಅಲ್ಲೂರಿ ಸೀತಾರಾಮರಾಜು ಹೀಗೆ ಇಂತಹ ನೂರಾರು ಮಹನೀಯರ ಹೋರಾಟಗಳು ಭಾರತದ ರೈತ ಸಂಘದ ಹೋರಾಟ, ಕಾರ್ಮಿಕ ಚಳುವಳಿಯಂತಹ ಆಧುನಿಕ ಸಾಮಾಜಿಕ ಹೋರಾಟಗಳಿಗೆ ಪ್ರೇರಣೆಯಾಗಿದೆ.
ಈ ಕೃತಿಯಲ್ಲಿ ಜವಳಿ ಕಾರ್ಮಿಕರು ಮತ್ತು ರೈಲ್ವೆ ಕಾರ್ಮಿಕರು ಹಾಗೂ ಗಣಿ ಕಾರ್ಮಿಕರ ಹೋರಾಟದ ಜೊತೆಗೆ ಇಡೀ ದೇಶದಲ್ಲಿ ನಡೆದಿರುವ ರೈತರ ಹೋರಾಟವನ್ನುಸಹ ದಾಖಲಿಸಿದ್ದೀನಿ. ರೈತ ಹೋರಾಟ ಎಂದರೆ, 1980 ರಿಂದ ಆರಂಭವಾದ ಹೋರಾಟ ಮಾತ್ರವಲ್ಲ, ಹನ್ನೆರೆಡನೇ ಶತಮಾನದಲ್ಲಿ ದೊರೆ ಬಿಜ್ಜಳನಿಗೆ ಭೂ ಕಂದಾಯದ ರೂಪದಲ್ಲಿ ಫಸಲು ನೀಡಲು ನಿರಾಕರಿಸಿ, ಹಸಿದವರಿಗೆ ಅನ್ನದಾನ ಮಾಡುವ ಒಕ್ಕಲಿಗರ ಮುದ್ದಣ್ಣ ಹಾಗೂ ಆತನ ವಚನದೊಂದಿಗೆ ಭಾರತದ ರೈತ ಹೋರಾಟದ ಇತಿಹಾಸವನ್ನು ಈ ಕೃತಿಯಲ್ಲಿ ದಾಖಲಿಸಿದ್ದೀನಿ. ಬಲಪಂಥೀಯರ ಕಾಮಾಲೆ ಕಣ್ಣಿನ ದೃಷ್ಟಿಕೋನದಿಂದಾಗಿ ಇಂತಹ ಹಲವಾರು ಚರಿತ್ರೆಗಳು ನೇಪಥ್ಯಕ್ಕೆ ಸರಿದಿವೆ. ಇಂತಹ ಅಪರೂಪದ ದಾಖಲೆಗಳನ್ನು ಈ ತಲೆಮಾರಿನ ಮುಂದೆ ತೆರೆದಿಡುವುದು ನನ್ನ ತಲೆಮಾರಿನ ಲೇಖಕರ ನೈತಿಕ ಕರ್ತವ್ಯ ಎಂದು ಭಾವಿಸಿದ್ದೀನಿ.
ಏಕೆಂದರೆ, ಏಕಕಾಲಕ್ಕೆ ಎರಡು ಜಗತ್ತನ್ನು ನೋಡಿದವರು ನಾವು. ರಾಗಿ ಕಲ್ಲು, ಕಾರ ಅರೆಯುವ ಕಲ್ಲನ್ನು ನೋಡಿದ ನಾವು ಮಿಕ್ಸರ್ ಗ್ರೈಂಡರ್ ಅನ್ನು ಕೂಡಾ ನೋಡಿದ್ದೀವಿ. ಸೌದೆಯ ಒಲೆಯಲ್ಲಿ ನಮ್ಮ ಅವ್ವಂದಿರು ಮಣ್ಣಿನ ಮಡಕೆಯಲ್ಲಿ ಅನ್ನ, ಸಾರನ್ನು ಮಾಡುತ್ತಿದ್ದುದನ್ನು ನೋಡಿದ ನನ್ನ ತಲೆಮಾರು ಈಗ ಗ್ಯಾಸ್ ಸ್ಟೌವ್ ಹಾಗೂ ಕುಕ್ಕರ್ ಮತ್ತು ಬಟ್ಟೆ ಹೊಗೆಯುವ ಕಲ್ಲಿನ ಬದಲಾಗಿ ವಾಷಿಂಗ್ ಮೆಷಿನ್ ನೋಡುತ್ತಿದ್ದೀವಿ. ನಮ್ಮ ಅನುಭವಗಳು ಈಗ ಅಭಿವ್ಯಕ್ಯಿಯ ರೂಪವಾಗಿ ಅಕ್ಷರಗಳಾಗಿ ದಾಖಲಾಗಬೇಕಿದೆ ಅಷ್ಟೇ.
ಕೊನೆಯ ಮಾತು- ಸಾಮಾಜಿಕ ಹೊರಾಟಗಳಲ್ಲಿ ತೊಡಗಿಸಿಕೊಂಡವರು ಮತ್ತು ಆಸಕ್ತಿ ಇದ್ದವರ ಮನೆಯಲ್ಲಿ ಇರಲೇಬೇಕಾದ ಕೃತಿ ಇದು ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ. ಈ ಕೃತಿ ರಚಿಸುವ ಸಂದರ್ಭದಲ್ಲಿ ನನ್ನ ಮಿತ್ರರಾದ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರು ‘’ ಜಗಣ್ಣಾ, ಈ ಕೃತಿಯನ್ನು ಮೈಸೂರಿನಲ್ಲಿ ಬಿಡುಗಡೆ ಮಾಡೋಣ ಎಂದಿದ್ದರು. ಇದೇ ಮಾತನ್ನು ಮೊನ್ನೆ ರಾಯಚೂರಿನಲ್ಲಿಪ್ರೊ. ಬರಗೂರು ಸರ್ ‘ಜಗದೀಶ್ ಈ ಕೃತಿ ಕುರಿತು ಪ್ರತ್ಯೇಕವಾಗಿ ಚರ್ಚೆಯಾಗಬೇಕು. ನೀನು ಇನ್ನೊಮ್ಮೆ ಮೈಸೂರಿನಲ್ಲಿ ಬಿಡುಗಡೆ ಮಾಡು ಎಂದರು. ಹಾಗಾಗಿ ಜನವರಿ ಮೂರನೇ ವಾರದಲ್ಲಿ ಮತ್ತೊಮ್ಮೆ ಬಿಡುಗಡೆ ಕಾರ್ಯಕ್ರಮ ಆಯೋಜಿಸುತ್ತಿದ್ದೀನಿ. ಜನವರಿ ಮೊದಲವಾರ ಹತ್ತು ದಿನಗಳ ಕಾಲ ತಮಿಳುನಾಡು, ಕೇರಳಕ್ಕಾಗಿ ಸಂಗೀತದ ಅಧ್ಯಯನಕ್ಕಾಗಿ ಹೋಗುತ್ತಿರುವುದರಿಂದ ಜನವರಿ ಮೂರನೇ ವಾರ ಕಾರ್ಯಕ್ರಮ ಆಯೋಜಿಸುತ್ತಿದ್ದೀನಿ.
ಯಕ್ಷಗಾನ ಹಾಗೂ ನಾಟ್ಯಶಾಸ್ತ್ರ ವನ್ನು ತುಲನಾತ್ಮಕವಾಗಿ ನೋಡಲು ಇದೊಂದು ಪ್ರಾಥಮಿಕ ಪಠ್ಯ ಎಂಬ ಬಿನ್ನಹವೊಂದನ್ನು ಹಾಸ್ಯಗಾರ...
"ವೈಯಕ್ತಿಕವಾಗಿ ನನಗೆ ಸೃಜನಶೀಲ ಕೃತಿಗಳ ಬಗ್ಗೆ ಬರುವ ಅಧ್ಯಯನಪೂರ್ಣ ಗ್ರಂಥಗಳ ಬಗ್ಗೆ ಅಪಾರ ಗೌರವವಿದೆ. ಆದರೆ ನಾನು...
"ಕಾಳನ್ನು ತುಂಬಾ ಪ್ರೀತಿ ಮತ್ತು ಕಾಳಜಿಯಿಂದ ಕಂಡ ಲೇಖಕಿ ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ತಾನು ಕಾಲೇಜಿನಿಂದ ಬಂದ...
©2025 Book Brahma Private Limited.