"ವೈಯಕ್ತಿಕವಾಗಿ ನನಗೆ ಸೃಜನಶೀಲ ಕೃತಿಗಳ ಬಗ್ಗೆ ಬರುವ ಅಧ್ಯಯನಪೂರ್ಣ ಗ್ರಂಥಗಳ ಬಗ್ಗೆ ಅಪಾರ ಗೌರವವಿದೆ. ಆದರೆ ನಾನು ಅವುಗಳನ್ನು ಕೊಳ್ಳುವುದಿಲ್ಲ. ಪುಕ್ಕಟೆ ಸಿಕ್ಕರೆ ಸಂಗ್ರಹಿಸಿ, ನನ್ನ ಪುಸ್ತಕದ ಕಪಾಟಿನ ಕೊನೆಯ ಸಾಲಿನಲ್ಲಿ ಭದ್ರವಾಗಿ ಇರಿಸುತ್ತೇನೆ. ಅವುಗಳ ನಂತರ ಇನ್ನೂ ಎರಡು ಸಾಲು ಪುಸ್ತಕಗಳೇನಿರುತ್ತವೆ, ಅವುಗಳನ್ನು ಆಗಾಗ ಓದಲು ಹೊರತೆಗೆಯ ಬೇಕಾಗುತ್ತದೆ," ಎನ್ನುತ್ತಾರೆ ನರೇಂದ್ರ ಪೈ. ಅವರು ಬಾಲಸುಬ್ರಹ್ಮಣ್ಯ ಕಂಜರ್ಪಣೆಯವರ ʻಲೋಕ ಕಥನʼ ಕೃತಿ ಕುರಿತು ಬರೆದ ಅನಿಸಿಕೆ.
ಬಹಳ ಕಾಲದ ನಂತರ ಬಾಲಸುಬ್ರಹ್ಮಣ್ಯ ಕಂಜರ್ಪಣೆಯವರ, ಸಾಹಿತಿ ಮತ್ತು ಸಾಹಿತ್ಯ ಕೃತಿಗಳ ಸುತ್ತ ಸುಳಿದಾಡುವ ಮಹತ್ವದ ಕೆಲವು ಲೇಖನಗಳ ಸಂಕಲನ, "ಲೋಕ ಕಥನ" ಹೊರಬಿದ್ದಿದೆ. ನವಕರ್ನಾಟಕ ಪುಸ್ತಕ ಇದನ್ನು ಮುದ್ದಾಗಿ ಮುದ್ರಿಸಿ ಪ್ರಕಟಿಸಿದೆ.
ವಿಮರ್ಶೆ ಮತ್ತು ವಿಮರ್ಶಕರ ಬಗ್ಗೆ ಮಾತನಾಡುವುದು ಕಷ್ಟ. ಯಾವುದು ವಿಮರ್ಶೆ ಮತ್ತು ಯಾರು ವಿಮರ್ಶಕರು ಎನ್ನುವ ಕುರಿತೇ ಅನೇಕರಲ್ಲಿ ಗೊಂದಲಗಳಿರುವಂತಿದೆ. ಹಾಗೆಯೇ ಮುನ್ನುಡಿ, ಹಿನ್ನುಡಿ, ಪುಸ್ತಕ ಪರಿಚಯ, ಪುಸ್ತಕದ ಕುರಿತ ಅನಿಸಿಕೆ, ವಿಮರ್ಶೆ, ಮೆಚ್ಚುನುಡಿ, ಚುಚ್ಚುನುಡಿ, ಲೋಕಾಭಿರಾಮದ ಮಾತುಗಳು ಮತ್ತು ಸೋಶಿಯಲ್ ಮೀಡಿಯಾದ "ಫಾರ್ ಪಬ್ಲಿಕ್ ಕನ್ಸ್‌ಮಶನ್" ಬರಹಗಳು ಎಂಬ ವಿಭಿನ್ನ ಪ್ರಕಾರಗಳೆಲ್ಲ ವಿಮರ್ಶೆ ಎಂಬ ಸ್ಟೋರ್ ರೂಮಿನಲ್ಲಿ ದಾಸ್ತಾನಾಗುತ್ತಿರುವ ಈ ಕಾಲಘಟ್ಟದಲ್ಲಿ ನಾವು ವಿಮರ್ಶೆ ಎಂಬ ಲೇಬಲ್ಲಿನಡಿ ಯಾವುದರ ಕುರಿತು ಮಾತನಾಡುತ್ತಿದ್ದೇವೆ ಮತ್ತು ನಮ್ಮದೇ ಮಾತು ಯಾವ ನೆಲೆಯದ್ದು ಎಂದು ಹೇಳುವುದು ಕೂಡ ಕಷ್ಟವಾಗಿದೆ. ಆದರೆ ಒಂದು ಪೂರ್ವಗ್ರಹವಂತೂ ಸಾರ್ವತ್ರಿಕವಾಗಿಯೇ ಸ್ಪಷ್ಟವಾಗಿದೆ; ಯೂನಿವರ್ಸಿಟಿ ಪ್ರೊಫೆಸರುಗಳು ಬರೆಯುವುದು ವಿಮರ್ಶೆ, ಅದಲ್ಲದವರು ಬರೆಯುವುದು ಸಾಕಷ್ಟು ಸಿದ್ಧತೆಯಿಲ್ಲದೇ ಆಡುವ ಲೋಕಾಭಿರಾಮದ ಮಾತುಗಳು. ಬಾಲಸುಬ್ರಹ್ಮಣ್ಯ ಕಂಜರ್ಪಣೆಯವರು ಕೂಡ ಈ ಅಡ್ಡಪಂಕ್ತಿ ಅನುಭವದ ಬಗ್ಗೆ ಮುನ್ನುಡಿಯಲ್ಲಿಯೇ ಹೇಳಿಕೊಂಡಿದ್ದಾರೆ.
ವೈಯಕ್ತಿಕವಾಗಿ ನನಗೆ ಸೃಜನಶೀಲ ಕೃತಿಗಳ ಬಗ್ಗೆ ಬರುವ ಅಧ್ಯಯನಪೂರ್ಣ ಗ್ರಂಥಗಳ ಬಗ್ಗೆ ಅಪಾರ ಗೌರವವಿದೆ. ಆದರೆ ನಾನು ಅವುಗಳನ್ನು ಕೊಳ್ಳುವುದಿಲ್ಲ. ಪುಕ್ಕಟೆ ಸಿಕ್ಕರೆ ಸಂಗ್ರಹಿಸಿ, ನನ್ನ ಪುಸ್ತಕದ ಕಪಾಟಿನ ಕೊನೆಯ ಸಾಲಿನಲ್ಲಿ ಭದ್ರವಾಗಿ ಇರಿಸುತ್ತೇನೆ. ಅವುಗಳ ನಂತರ ಇನ್ನೂ ಎರಡು ಸಾಲು ಪುಸ್ತಕಗಳೇನಿರುತ್ತವೆ, ಅವುಗಳನ್ನು ಆಗಾಗ ಓದಲು ಹೊರತೆಗೆಯ ಬೇಕಾಗುತ್ತದೆ. ಇವುಗಳನ್ನು ಓದುವ ಸಂಭವವೇನಿಲ್ಲದ್ದರಿಂದ ಇವು ಅಲ್ಲಿ ಶಾಶ್ವತವಾಗಿ ನೆಲೆಸುತ್ತವೆ. ಇನ್ನು ಇಂಥ ಅಡ್ಡಪಂಕ್ತಿಯವರು ಬರೆಯುವ ಪುಸ್ತಕಗಳನ್ನು ನಾನು ಕೊಂಡ ತಕ್ಷಣವೇ ಓದಲು ಸುರು ಮಾಡುತ್ತೇನೆ. ಕನಿಷ್ಠ ಈ ಕೃತಿಗಳು ಓದುವ ಸುಖದ ಬಗ್ಗೆ ಮಾತನಾಡುತ್ತವೆ, ಅವು ನಮ್ಮ ಬದುಕಿಗೆ ಹೇಗೆ ರಿಲೆವಂಟ್ ಎಂಬ ಬಗ್ಗೆ ಹೇಳುತ್ತವೆ, ಪುಸ್ತಕದ ಜೊತೆ ಬೆಸೆದುಕೊಂಡ ಎಷ್ಟೋ ಪೂರಕ ಸಂಗತಿಗಳ ಬಗ್ಗೆ ಹರಟೆ ಹೊಡೆಯುತ್ತವೆ, ಇದನ್ನು ಓದುತ್ತ ನೆನಪಾದ ಇನ್ಯಾವುದೋ ಒಂದಷ್ಟು ಪುಸ್ತಕಗಳ ಬಗ್ಗೆ ಹೇಳುತ್ತವೆ, ಪುಸ್ತಕಗಳಿಂದ ಇಂಥ ಉತ್ತಮ ಅಭಿರುಚಿ ಮತ್ತು ಪ್ರಬುದ್ಧತೆಯುಳ್ಳ ಒಬ್ಬ ಓದುಗ ಏನನ್ನು ನಿರೀಕ್ಷಿಸುತ್ತಾನೆ ಎನ್ನುವುದರತ್ತ ಬೆಳಕು ಚೆಲ್ಲುತ್ತವೆ, ಈ ಪುಸ್ತಕದ ಲೇಖಕ ಸ್ವತಃ ಸೃಜನಶೀಲ ಲೇಖಕನೂ ಆಗಿದ್ದರೆ, ಬರವಣಿಗೆಯ ಸೂಕ್ಷ್ಮಗಳ ಕುರಿತೂ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿರುತ್ತವೆ. ಇವು ಯಾವುದೂ ನಿಮಗೆ ಅಧ್ಯಯನಪೂರ್ಣ ಸಂಶೋಧಕ ಪ್ರೊಫೆಸರುಗಳ ಶಿಷ್ಟ ವಿಮರ್ಶಾಸಂಕಲನಗಳಲ್ಲಿ ಸಿಗುವ ಸಂಭವವಿಲ್ಲ. ಅವು ಏನನ್ನು ಆಡಿದರೆ ವಿವಾದವಾದೀತೋ ಎಂದು ಹೆದರಿಯೇ ತಾವು ಬರೆದ ಪ್ರತಿ ಸಾಲು, ಪ್ರತಿ ಪದಕ್ಕೆ ಪುರಾವೆಗಳನ್ನೋ, ಅಡಿಟಿಪ್ಪಣಿಗಳನ್ನೋ ದಾಖಲಿಸುತ್ತಲೇ ಸುಸ್ತಾಗುತ್ತವೆ. ಪುರಾವೆಗಳಿಲ್ಲದ ಏನನ್ನೂ ಇವು ಗಮನಿಸುವ ಸರಳತೆ, ಸಹಜತೆ ಎರಡನ್ನೂ ಹೊಂದಿರದೇ ಇರುವುದರಿಂದ ಇವುಗಳಲ್ಲಿ ಪುರಾವೆಗಳಷ್ಟೇ ಇರುತ್ತವೆ, ಬದುಕು ಹೊರಗುಳಿಯುತ್ತದೆ. ಪುರಾವೆಗಳಿಗಾಗಿ ಈ ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಒಳ್ಳೆಯದೇ, ಕೆಲವೊಮ್ಮೆ ಅಗತ್ಯಕ್ಕೆ ಬೀಳುತ್ತವೆ ಎನ್ನುವುದು ನಿಜ.
ಈಗಂತೂ ಅಮ್ಯೆಚೂರ್ ವಿಮರ್ಶೆ (ಆಸಕ್ತರು ಸೈಕತ್ ಮಜುಮ್ದಾರ್ ಅವರ ದ ಅಮ್ಯೆಚೂರ್ ಮತ್ತು ದ ಕ್ರಿಟಿಕ್ ಅಸ್ ಅಮ್ಯೆಚೂರ್ ಕೃತಿಗಳನ್ನು ಗಮನಿಸಬಹುದು) ಎಂಬ ಅಧಿಕೃತ ಹೆಸರಿನಡಿಯೇ ಗುರುತಿಸಲ್ಪಡುವ ಈ ಅಡ್ಡಪಂಕ್ತಿಯವರ ಬರವಣಿಗೆಯ ಬಗ್ಗೆ ಇಂಥವರ ಅವಗಾಹನೆಗೆಂದೇ ತಮ್ಮ ಪುಸ್ತಕಗಳನ್ನು ಕಳಿಸಿಕೊಡುವ ಲೇಖಕರನ್ನು ಬಿಟ್ಟರೆ ಇತರರಿಗೆ ಅಂಥ ಗೌರವವೇನಿಲ್ಲ. ಇಂಥವರ ಕೈಯಲ್ಲಿ ಮೆಚ್ಚುಗೆ ಬರೆಸಿಕೊಳ್ಳುವುದು ಸುಲಭ ಮತ್ತು ಅದು ಮಾರ್ಕೆಟಿಂಗಿಗೆ, ಪ್ರಶಸ್ತಿ ಮತ್ತೊಂದು ಹೊಡೆದುಕೊಳ್ಳಲು ಅನುಕೂಲಕರ ಎನ್ನುವುದು ಇವರ ಸಾಮಾನ್ಯ ಲೆಕ್ಕಾಚಾರ. ಅದನ್ನು ಪರೀಕ್ಷೆಗೊಡ್ಡುವುದು ಸುಲಭ. ಇಂಥ ಹವ್ಯಾಸಿ ವಿಮರ್ಶಕರಿಗೆ ಪುಕ್ಕಟೆ ಪುಸ್ತಕ ಕಳಿಸುವ ಸಾಹಿತಿಗಳ ಬಳಿ ಇದೇ ಹವ್ಯಾಸಿ ವಿಮರ್ಶಕರ ಯಾವುದಾದರೊಂದು ಕೃತಿಯ ಹೆಸರು ಕೇಳಿ ನೋಡಿ, ಅದು ಆ ಮಹಾಶಯನಿಗೆ ಗೊತ್ತಿರುವುದಿಲ್ಲ, ಗೊತ್ತಿದ್ದರೂ ಅದನ್ನಾತ ಇನ್ನೂ ಓದಿರುವುದಿಲ್ಲ (ಮುಂದೆಯೂ ಓದುವ ಸಂಭವವೇನಿಲ್ಲ). ಹಾಗಾಗಿ ಈ ಅಡ್ಡಪಂಕ್ತಿ ವಿಮರ್ಶಕರ ಕೆಲವು ಪ್ರತಿಸ್ಪಂದನಾತ್ಮಕ ಬರಹಗಳು ಮುಲಾಜಿಗೆ ಬಸಿರಾದಂತೆ ಪೆಚ್ಚುಪೆಚ್ಚಾಗಿರುವುದು ಸಹಜವೇ. ಇನ್ನು ಲೇಖಕರೂ ಇಂಥ ವಿಮರ್ಶಕರೂ ಇಬ್ಬರೂ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದರಂತೂ ಕತೆ ಮುಗಿದಂತೆಯೇ. ವಾರಕ್ಕೊಮ್ಮೆ ನಿರಂತರ ಸಾಗುವ ಪುಸ್ತಕ ಬಿಡುಗಡೆ ಸಮಾರಂಭದ ಉಪ್ಪಿಟ್ಟು ಕಾಫಿಯ ನಡುವೆ ಧುತ್ತನೆ ಪ್ರಕಟಗೊಳ್ಳುವ ಮುಖಗಳನ್ನು ಎದುರಿಸುವ ಅಪಾಯವನ್ನು ಮುಂಗಂಡೇ ಪೆನ್ನು ಕೈಗೆತ್ತಿಕೊಳ್ಳುವ ಅನಿವಾರ್ಯ ಕರ್ಮ ಇವರದ್ದು. ಇಂಥ ಇನ್ನಷ್ಟು ಇತಿಮಿತಿಗಳಿಂದಾಗಿ ಅಮ್ಯೆಚೂರ್ ವಿಮರ್ಶೆ ಸದಾ ಅಡ್ಡಪಂಕ್ತಿಯ ಗೌರವಕ್ಕಷ್ಟೇ ತೃಪ್ತಿಪಟ್ಟುಕೊಂಡು ಇರಬೇಕಾಗಿರುವುದು ಸಹಜವೇ. ಇದನ್ನೆಲ್ಲ ಇಲ್ಲಿ ಹೇಳಲು ಮುಖ್ಯ ಕಾರಣವೆಂದರೆ, ಬಾಲಸುಬ್ರಹ್ಮಣ್ಯ ಕಂಜರ್ಪಣೆಯವರು ಇಂಥ ಇತಿಮಿತಿಗಳಿಂದ ಮುಕ್ತವಾಗಿ ನಿಂತವರು, ಸ್ವತಂತ್ರವಾಗಿ ಬರೆಯುತ್ತ ಬಂದವರು ಎನ್ನುವುದನ್ನು ಸ್ಪಷ್ಟಪಡಿಸುವುದಕ್ಕಾಗಿ. ವೃತ್ತಿಯಿಂದ ಅವರು ಅಡ್ವೊಕೇಟ್. ಸ್ವಭಾವತಃ ಸ್ವತಂತ್ರ ಮನೋವೃತ್ತಿಯವರು ಮತ್ತು ಸ್ಪಷ್ಟವಾದ, ಅಷ್ಟೇ ದೃಢವಾದ ನಿಲುವುಗಳಿರುವವರು. ಅವರ ಈ ಗುಣಗಳನ್ನು ಮೆಚ್ಚಿಯೇ ಹಲವಾರು ವರ್ಷಗಳ ಹಿಂದೆ ಪ್ರಹ್ಲಾದರಾಯರು ತಮ್ಮ ಸಂಚಯ ಪ್ರಕಾಶನದಿಂದಲೇ ‘ಬಿಸಿಲ ಹಂದರ’ ಎಂಬ ವಿಮರ್ಶಾ ಲೇಖನಗಳ ಸಂಕಲನವನ್ನು ಪ್ರಕಟಿಸಲು ಮುಂದಾಗಿದ್ದರು.
ಇಲ್ಲಿನ 40-45 ಲೇಖನಗಳಲ್ಲಿ ಮಾಸ್ತಿ, ಬ್ರೆಕ್ಟ್, ಕನಕದಾಸ, ಶೇಕ್ಸ್‌ಪಿಯರ್, ಇಬ್ಸೆನ್ ಮುಂತಾದವರ ಕುರಿತ ಲೇಖನಗಳು ಹೆಚ್ಚು ಶಿಷ್ಟ ಅಧ್ಯಯನದ ಫಲವಾಗಿ ಬಂದಂಥವುಗಳೇ. ಅಮ್ಯೆಚೂರ್ ವಿಮರ್ಶೆ ಎಂದು ಜರೆಯುವವರು, ಅಡ್ಡಪಂಕ್ತಿಯ ಉಪಚಾರ ನೀಡುವವರು ಮತ್ತು ಪ್ರೊಫೆಸರುಗಳನ್ನು ಆಸ್ಥಾನ ಪಂಡಿತರನ್ನಾಗಿ ನೇಮಿಸಿಕೊಳ್ಳುವವರು ಇಂಥ ಲೇಖನಗಳತ್ತ ದೃಷ್ಟಿ ಹರಿಸುವುದು ಆರೋಗ್ಯಕರ. ಇಲ್ಲಿನ ಕಾರಂತ, ಅಡಿಗ, ಕಾರ್ನಾಡ, ಚಂಪಾ, ನವರತ್ನ ರಾಮರಾವ್, ನಿಸಾರ್ ಕುರಿತ ಲೇಖನಗಳು ಹೆಚ್ಚು ಲವಲವಿಕೆಯಿಂದ ಕೂಡಿವೆ, ಕೃತಿಯಿಂದಾಚೆ ಬೆಳೆದಿವೆ, ಒಡನಾಟ, ಬದುಕುಗಳತ್ತ ನೋಟ ಹರಿಸುತ್ತವೆ. ಹಾಗೆಯೇ ವರ್ತಮಾನದ ಲೇಖಕರ, ಕೃತಿಗಳ ಕುರಿತು ಬರೆಯುವಾಗಲೆಲ್ಲ ಕಂಜರ್ಪಣೆಯವರ ಬರವಣಿಗೆ ನಾನು ಮೇಲೆ ಹೇಳಿದ ಸಕಲೆಂಟು ಜೈವಿಕ ಲಕ್ಷಣಗಳಿಂದ ನಳನಳಿಸುತ್ತವೆ. ಸೀತೆಯ ಗತಿ, ಸಾವಿತ್ರಿ: ಪುಟ್ಟ ಕನ್ನಡಿಯಲ್ಲಿ ಪ್ರೀತಿಯ ಜಗತ್ತು, ಅಯೋಧ್ಯೆಯಲ್ಲಿ ಸೂರ್ಯೋದಯದಂಥ ಲೇಖನಗಳತ್ತ ಹೊರಳಿದರೆ ಸಾಹಿತ್ಯ ಕೃತಿಯ ಸಹವಾಸದಲ್ಲಿದ್ದೂ ಹೊಸದೇ ಆದ ಒಂದು ಜಗತ್ತು ನಮ್ಮೆದುರು ತೆರೆದುಕೊಳ್ಳುತ್ತದೆ. ಹಾಗೆಯೇ ಸೃಜನಶೀಲ ಸೃಷ್ಟಿಕ್ರಿಯೆಯಲ್ಲಿ ತೊಡಗಿದವರಿಗೆ ಪ್ರಿಯವಾಗುವ ಸಾಕಷ್ಟು ಲೇಖನಗಳೂ ಇಲ್ಲಿವೆ. ಕತೆಯ ಸಣ್ಣಕತೆ, ವಿಮರ್ಶೆಯ ವಿಮರ್ಶೆ, ಪ್ರಬಂಧಗಳೆಂಬ ಆಪ್ತ ಓದು, ಯಕ್ಷಗಾನ ಸಾಹಿತ್ಯ ಸಂಧಾನ, ಆತ್ಮವೂ ಚರಿತ್ರೆಯೂ, ಅಪೂರ್ಣ ಓದಿನ ಅವ್ಯಕ್ತ ಭಾವ, ಕೃತಿಚೌರ್ಯದ ಕಥೆ, ಮನ್ನಣೆಯ ದಾಹ, ಸಾಹಿತ್ಯದ ಓದು-ಬರೆಹವೆಂಬ ವೈರಾಗ್ಯ, ಅನುವಾದಕ್ಕೆ ಸಿಕ್ಕದ ಕುಮಾರವ್ಯಾಸದಂಥ ಲೇಖನಗಳು ಬರವಣಿಗೆ, ಬರಹಗಾರ ಮತ್ತು ಮೌಲ್ಯಗಳ ಸುತ್ತ ಸುಳಿದಾಡುತ್ತವೆ, ಬದುಕು-ಭಾಷೆ ಮತ್ತು ಬರವಣಿಗೆಯ ಒಂದು ಅನುಸಂಧಾನವೇನಿದೆ, ಆ ಕುರಿತ ಅನೇಕ ಒಳನೋಟಗಳನ್ನು ಒದಗಿಸುತ್ತವೆ.
ಒಂದು ಸ್ವತಂತ್ರ, ಸ್ವಸ್ಥ ಮತ್ತು ಧನಾತ್ಮಕ ಮನೋಧರ್ಮದಿಂದ ಸಾಹಿತ್ಯ ಲೋಕದಲ್ಲಿ ಒಂದಷ್ಟು ಹೊತ್ತು ವಿಹರಿಸಲು ಬಯಸುವವರು ಉತ್ಸಾಹದಿಂದ ಕೈಗೆತ್ತಿಕೊಳ್ಳಬಹುದಾದ ಪುಸ್ತಕವಿದು.
"ಅನಕ್ಷರಸ್ತರು, ಅಮಾಯಕರು ಮತ್ತು ಬಡವರಾಗಿದ್ದಆದಿವಾಸಿಗಳು ಅರಣ್ಯಗಳಲ್ಲಿ ಬದುಕುತ್ತಾ, ಅರಣ್ಯದ ಕಿರುಉತ್ಪನ್ನಗಳನ್ನ...
ಯಕ್ಷಗಾನ ಹಾಗೂ ನಾಟ್ಯಶಾಸ್ತ್ರ ವನ್ನು ತುಲನಾತ್ಮಕವಾಗಿ ನೋಡಲು ಇದೊಂದು ಪ್ರಾಥಮಿಕ ಪಠ್ಯ ಎಂಬ ಬಿನ್ನಹವೊಂದನ್ನು ಹಾಸ್ಯಗಾರ...
"ಕಾಳನ್ನು ತುಂಬಾ ಪ್ರೀತಿ ಮತ್ತು ಕಾಳಜಿಯಿಂದ ಕಂಡ ಲೇಖಕಿ ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ತಾನು ಕಾಲೇಜಿನಿಂದ ಬಂದ...
©2025 Book Brahma Private Limited.