ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಬೇಕಾಗಿರುವುದು ಸ್ವಾತಂತ್ರ್ಯ ಮತ್ತು ಪ್ರೀತಿ


"ಕಾಳನ್ನು ತುಂಬಾ ಪ್ರೀತಿ ಮತ್ತು ಕಾಳಜಿಯಿಂದ ಕಂಡ ಲೇಖಕಿ ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ತಾನು ಕಾಲೇಜಿನಿಂದ ಬಂದ ನಂತರ ವಾಕಿಂಗ್ ಕರೆದುಕೊಂಡು ಹೋಗುವುದಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಾರೆ," ಎನ್ನುತ್ತಾರೆ ದತ್ತಾತ್ರೇಯ ಹೆಗಡೆ. ಅವರು ಎಮ್. ಆರ್. ಕಮಲಾ ಅವರ ʻಕಾಳ ನಾಮ ಚರಿತೆʼ ಕೃತಿ ಕುರಿತು ಬರೆದ ಅನಿಸಿಕೆ.

ಸಾಕುಪ್ರಾಣಿಗಳೊಂದಿಗೆ ಮನೆಯವರು ಆತ್ಮೀಯವಾಗಿ, ಮನೆಯ ಸದಸ್ಯನಂತೆ ಒಡನಾಟ ಇಟ್ಟುಕೊಂಡಿರುವುದು ಪ್ರಸ್ತುತ ಕೃತಿ ‘ಕಾಳನಾಮ ಚರಿತೆಯ ವಿಷಯ. ಇದನ್ನು ಹಗುರ ಹರಟೆಯ ರೂಪದಲ್ಲಿ ಲೇಖಕಿ ಎಮ್. ಆರ್. ಕಮಲಾ ಚಿತ್ರಿಸಿದ್ದಾರೆ. ಲ್ಯಾಬ್ರಡಾರ್ ಜಾತಿಯ ಕಪ್ಪು, ದೈತ್ಯ ನಾಯಿ ‘ಕಾಳ’ನನ್ನು ಲೇಖಕಿ ಮನೆಯಲ್ಲಿ ಸಾಕಿದ್ದರು. ಸಾಕುಪ್ರಾಣಿಗಳನ್ನು ಮನುಷ್ಯರ ತರವೇ ಕಂಡರೆ ಅದು ನಮ್ಮ ಬದುಕಿನ ಭಾಗವಾಗಿ ಜೀವಿಸುತ್ತದೆ ಎನ್ನುವುದನ್ನು ಹೇಳುತ್ತಾರೆ.

ಮನುಷ್ಯ ಸಮಸ್ಯೆಯಲ್ಲಿ ಸಿಲುಕಿದಾಗ ಅಥವಾ ಮನಸ್ಸು ಬೇಸರಗೊಂಡಾಗ ಸಾಕು ಪ್ರಾಣಿ, ಒಂದು ಪುಸ್ತಕ, ಸಾಂತ್ವನದ ನುಡಿ ಮತ್ತೆ ಜೀವವನ್ನು ಅರಳಿಸುತ್ತದೆ. ಇದಕ್ಕೆ ಕಾಳ ಎಂಬ ನಾಯಿಯೇ ಉದಾಹರಣೆ. ವಿನೋದ ಪ್ರಜ್ಞೆಯ ಮೂಲಕ, ನೇರವಾಗಿ ಸಲ್ಲಾಪ ಇದರಲ್ಲಿದೆ. ಕಾಳನ ವಿಷಯದೊಟ್ಟಿಗೆ ತಮ್ಮ ಕುಟುಂಬದ, ಕಾಲೇಜಿನ, ಕೆಲಸದ ಒತ್ತಡದ ಬಗ್ಗೆಯೂ ಇದೆ. ಇದೆಲ್ಲವನ್ನು ಕಾಳನಿಗೆ ಅನ್ವಯಿಸಿಯೇ ಬರೆದಿದ್ದಾರೆ. ಕೃತಿಯಲ್ಲಿ ಸಾಂದರ್ಭಿಕವಾಗಿ ಹಲವು ಸಾಹಿತಿಗಳ ಕವನಗಳು, ಹಳೆಯ ಜನಪ್ರಿಯ ಸಿನಿಮಾ ಹಾಡು, ಲೇಖಕರ ಮಾತುಗಳನ್ನು ಉದಾಹರಿಸಿದ್ದಾರೆ.

ಕಾಳನ ಚರಿತ್ರೆಯಲ್ಲಿ ಅದರೊಂದಿಗಿನ ನೋವು- ನಲಿವಿನ ಗಳಿಗೆಗಳನ್ನು ಹಂಚಿಕೊಂಡಿದ್ದಾರೆ, ಬೀದಿಯಲ್ಲಿರುವ ಇತರ ಮನೆಯವರ ನಾಯಿಗಳೊಂದಿಗೆ ಅದರ ಮಿತ್ರತ್ವ, ವಾಕಿಂಗ್‌ಗೆ ಹೋದಾಗ ಪಾದಚಾರಿಗಳನ್ನು ಕಂಡು ಅದರ ವರ್ತನೆ, ಫುಟ್ಬಾಲ್ ಆಡುವ ಮಕ್ಕಳೊಂದಿಗಿನ ಅದರ ಆಟ, ದೇವಸ್ಥಾನದ ಎದುರು, ಹೊಟೆಲಿನಲ್ಲಿ ಅದು ಮಾಡಿದ ಕಿತಾಪತಿ, ಇದರಿಂದಾಗಿ ತಾನು ಬೈಸಿಕೊಂಡಿದ್ದು... ಹೀಗೆ ಹತ್ತು ಹಲವು ವಿಷಯಗಳನ್ನು ಕಟ್ಟಿಕೊಟ್ಟಿದ್ದಾರೆ.

ಕಾಳನ್ನು ತುಂಬಾ ಪ್ರೀತಿ ಮತ್ತು ಕಾಳಜಿಯಿಂದ ಕಂಡ ಲೇಖಕಿ ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ತಾನು ಕಾಲೇಜಿನಿಂದ ಬಂದ ನಂತರ ವಾಕಿಂಗ್ ಕರೆದುಕೊಂಡು ಹೋಗುವುದಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಇದರಿಂದ ಕಾಳನಿಗೆ ಸಿಕ್ಕ ಗೆಳೆಯರು, ಮನುಷ್ಯರ ಪ್ರೀತಿ, ವಾಕಿಂಗ್‌ನಲ್ಲಾದ ಸಿಹಿ-ಕಹಿ ಅನುಭವ, ಕುತ್ತಿಗೆಯ ದಾರವನ್ನು ಕಿತ್ತುಕೊಂಡು ಓಡುವುದು, ಕಾಳನನ್ನು ಕಂಡು ಹೆದರಿದವರು, ಟ್ಯೂಷನ್ ಮಕ್ಕಳನ್ನು ಕಂಡು ಕಾಂಪೌಂಡ್ ಹಾರಿಹೋಗಿದ್ದು, ಅಂಗಡಿ ಮಾಲಕನೊಬ್ಬ ನಾಯಿಯಿಂದಾಗಿ ತನ್ನ ಅಂಗಡಿಗೆ ಬರುವ ಗಿರಾಕಿಗಳು ಕಡಿಮೆಯಾದರು ಎನ್ನುವುದು, ಇನ್ನೊಬ್ಬರು ಇದು ಲ್ಯಾಬ್ರಡಾರ್ ಅಲ್ಲ, ಏಕೆಂದರೆ ಅದು ಇಷ್ಟು ಮುದ್ದಾಗಿರುವುದಿಲ್ಲ ಎನ್ನುವುದು,, ಹೀಗೆ ಬೀದಿಯಲ್ಲಿನ ಅನುಭವವನ್ನು ಇಲ್ಲಿ ಬಹಳ ಆಪ್ತವಾಗುವಂತೆ ಚಿತ್ರಿಸಿದ್ದಾರೆ.

ಮನೆಯೊಳಕ್ಕೆ ಕಾಳನ ಆಟ, ಚಿನ್ನಾಟ, ತುಂಟಾಟ, ಕಿತಾಪತಿಯವ ವಿವರಣೆಯೂ ಇದರಲ್ಲಿದೆ. ತನ್ನ ಬಲಗಾಲ ಮೇಲೆ ಸದಾ ಮಲಗುವುದು, ಹಣ್ಣುಗಳನ್ನು ಕಂಡರೆ ಜೊಲ್ಲು ಸುರಿಸುವುದು, ಊಟ -ತಿಂಡಿ ಏನೇ ಮಾಡುತ್ತಿದ್ದರೂ ಅದಕ್ಕೂ ಅದರಲ್ಲಿ ಪಾಲು ಕೊಡಲೇಬೇಕು. ಸ್ನಾನ ಎಂದರೆ ಹೆದರಿ ಮಂಚದಡಿ ಹೋಗಿ ಮಲಗುವುದು, ಸೋಫಾದ ಮೇಲಿನ ಅದರ ಆಟದಿಂದಾಗಿ ಸೋಫಾ ಹರಿದು ಹೋಗಿರುವುದು, ಕಾರಿನ ಪ್ರಯಾಣ ಇಷ್ಪಡುವುದು, ಬೇರೆ ನಾಯಿಗಳನ್ನು ಕರೆದರೆ ವಿಕಾರವಾಗಿ ಕೂಗುವುದು, ಮನೆಗೆ ಬಂದವರೆಲ್ಲ ಕಪ್ಪು ನಾಯಿ ಎಂದು ಆತ್ಮವಿಶ್ವಾಸ ಕುಗ್ಗುವಂತೆ ಮಾತನಾಡಿದರೂ ಕಾಳನೊಳಗೆ ಹಂಸಕ್ಷೀರ ನಿರ್ಮಲ ಮನಸ್ಸಿದೆ. ಅವನು ಮನೆಯ ಮಗನೇ ಆಗಿಹೋಗಿದ್ದಾನೆ ಎಂದು ಬಣ್ಣಿಸುತ್ತಾರೆ.

ಜಾತ್ಯತೀತವಾಗಿ ಬೀದಿ ನಾಯಿಗಳ ಮೇಲೂ ಪ್ರೀತಿ ಬಂದಿರುವುದು, ನಾಯಿಯಿಂದಾಗಿ ತನ್ನನ್ನು ಕರಿನಾಯಿ ಮನೆ ಆಂಟಿ ಎಂದು ಜನ ಕರೆಯುವುದರ ಬಗ್ಗೆ ಹಾಸ್ಯಮಯವಾಗಿ ಹೇಳಿದ್ದಾರೆ. ಕಾಳ ಮಗುವಿನಂತೆ ಮುಗ್ಧ. ಕಳ್ಳರು ಬಂದರೆ ಅವರನ್ನು ಮುದ್ದಿಸುವುದು ಗ್ಯಾರಂಟಿ. ಕಮಿಟ್ಮೆಂಟ್ ಇಲ್ಲದ ಜೀವನಕ್ಕೆ ಒಗ್ಗಿಹೋಗಿದ್ದಾನೆ. ಅವನ ಕಣ್ಣು ಹೃದಯವನ್ನು ಕರಗಿಸಿ ಬಿಡುತ್ತದೆ. ಹಾಗಾಗಿ ಚಾವಟಿ ತೆಗೆದುಕೊಂಡಿಲ್ಲ. ಕೆಲಸ, ಜನ, ಪ್ರಾಣಿ ಅಂತ ಹಚ್ಚಿಕೊಂಡು ಕೆಲಸ ಮಾಡುತ್ತಿದ್ದರೆ ಜೀವಂತ ಇರ್ತೀಯ. ದೂರಾದರೆ ಹುಚ್ಚು ಹಿಡಿಸಿಕೊಳ್ತಿಯಾ ಎಂದು ಪತಿ ಬೈದಿದ್ದನ್ನು ನೆನಪಿಸಿಕೊಳ್ಳುತ್ತಾರೆ.

ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಬೇಕಾಗಿರುವುದು ಸ್ವಾತಂತ್ರ್ಯ ಮತ್ತು ಪ್ರೀತಿ. ಶ್ರೀಮಂತರು ಮಾತ್ರ ನಾಯಿ ಸಾಕುತ್ತಾರೆ ಎಂದು ತಿಳಿದುಕೊಂಡಿರುವವರು ಬೆಪ್ಪುತಕ್ಕಡಿಗಳು ಎಂದು ಲೇಖಕಿ ಹೇಳುತ್ತಾ, ಬೇರೊಬ್ಬರ ತಂಟೆಗೆ ಹೋಗದ ಕಾಳ ಆದರ್ಶ. ಬೇಡದ ವಿಷಯಗಳಿಗೆ ತಲೆ ಹಾಕುವುದಿಲ್ಲ. ಪಾಠ ಮಾಡುವ ತನಗೇ ದಿನನಿತ್ಯ ಪಾಠ ಮಾಡುತ್ತ್ತಾನೆ ಎಂದು ವಿವರಿಸುತ್ತಾರೆ.

ಒಟ್ಟಿನಲ್ಲಿ ಕಾಳ ನಾಮ ಚರಿತೆಯಲ್ಲಿ ಮನುಷ್ಯರ ಬದುಕಿನ ಭಾಗವಾಗಿ ಜೀವಿಸುವ ಪ್ರಾಣಿ ಕಾಳನಿಗೆ ಘನತೆ ತಂದುಕೊಡುವ ಪಾತ್ರ ನೀಡಿದ್ದಾರೆ. ಉತ್ತಮ ಸಂಗಾತಿಯಾಗಿ, ಮಗನಂತಾಗಿ, ಮಿತ್ರನಂತಾಗಿರುವುದನ್ನು ಚಿತ್ರಿಸಿದ್ದಾರೆ.

....................

 

MORE FEATURES

ನಿಮ್ಮ ಬರಹ ನನಗೆ ಹೊಸತೇನಲ್ಲ..

24-12-2025 ಬೆಂಗಳೂರು

"ಒಟ್ಟಾರೆಯಾಗಿ ಈ ಕೃತಿ ಓದುಗನಲ್ಲೊಂದು ಓದುವಿಕೆ ಸಂತೃಪ್ತಿ ಕೊಡುವುದರ ಜೊತೆಗೆ ನಿಮ್ಮೊಳಗಿನ ಬರಹಗಾರ್ತಿಯ ತಾಕತ್ತನ...

ದಂಗೆಯ ಬೀಜಗಳನ್ನು ಅರಸುತ್ತಾ..

24-12-2025 ಬೆಂಗಳೂರು

"ಅನಕ್ಷರಸ್ತರು, ಅಮಾಯಕರು ಮತ್ತು ಬಡವರಾಗಿದ್ದಆದಿವಾಸಿಗಳು ಅರಣ್ಯಗಳಲ್ಲಿ ಬದುಕುತ್ತಾ, ಅರಣ್ಯದ ಕಿರುಉತ್ಪನ್ನಗಳನ್ನ...

ಯಕ್ಷಗಾನ ಹಾಗೂ ನಾಟ್ಯಶಾಸ್ತ್ರವನ್ನು ತುಲನಾತ್ಮಕವಾಗಿ ನೋಡಲು ಇದೊಂದು ಪ್ರಾಥಮಿಕ ಪಠ್ಯ!

23-12-2025 ಬೆಂಗಳೂರು

ಯಕ್ಷಗಾನ ಹಾಗೂ ನಾಟ್ಯಶಾಸ್ತ್ರ ವನ್ನು ತುಲನಾತ್ಮಕವಾಗಿ ನೋಡಲು ಇದೊಂದು ಪ್ರಾಥಮಿಕ ಪಠ್ಯ ಎಂಬ ಬಿನ್ನಹವೊಂದನ್ನು ಹಾಸ್ಯಗಾರ...