ಡಾ. ಅಂಬೇಡ್ಕರ್ ಹಾಗೂ ಪುಸ್ತಕ ಪ್ರೀತಿ 

Date: 17-12-2020

Location: ಬೆಂಗಳೂರು


ಓದು, ವ್ಯಕ್ತಿಯ ಚಿಂತನಾ ಲಹರಿಯನ್ನು ಆ ಮೂಲಕ ವ್ಯಕ್ತಿತ್ವವನ್ನು ರೂಪಿಸುತ್ತದೆ. ಈ ಅಂಶವನ್ನು ಉದಾಹರಣೆ ಸಮೇತ ವಿವರಿಸುತ್ತಲೇ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಬರೆಹ ಮತ್ತು ಪುಸ್ತಕಗಳ ಓದಿನ ಅಗತ್ಯ ಹಾಗೂ ಅನಿವಾರ್ಯತೆಯನ್ನು ಅರ್ಥಪೂರ್ಣವಾಗಿ ವಿವರಿಸಿರುವ ಪತ್ರಕರ್ತ ಹಾಗೂ ಚಿಂತಕ ಹೃಷಿಕೇಶ ಬಹದ್ದೂರ ದೇಸಾಯಿ ಅವರು ತಮ್ಮ ಋಷ್ಯಶೃಂಗ ಅಂಕಣದಲ್ಲಿ ಡಾ. ಅಂಬೇಡ್ಕರರ ಮಹತ್ವದ ಮೂರು ಕೃತಿಗಳೆಡೆ ಗಮನ ಸೆಳೆದಿದ್ದು ಹೀಗೆ;

ಕೋವಿಡ್ -19 ರೋಗಕ್ಕೆ ಕಾರಣವಾದ ಕಿರೀಟ ವೈರಾಣುವಿನಿಂದಾಗಿ 2020 ಅನ್ನುವ ವರ್ಷ ಎಲ್ಲರ ದ್ವೇಷಕ್ಕೆ ಕಾರಣವಾಗಿದೆ. ಇದು ಬೇಗ ಮುಗಿದು ಹೋದರೆ ಸಾಕು. ಇದು ಯಾಕಾದರೂ ಬಂತೋ, ಇದನ್ನ ಆದಷ್ಟು ಜಾಗ್ರತೆಯಿಂದ ಮರೆತು ಬಿಡಬೇಕು ಅಂತ ಎಲ್ಲರಿಗೂ ಅನ್ನಿಸಿದೆ. ಬದುಕು ರೋಸಿಟ್ಟು ಹೋಗಿದೆ.

ಆದರೆ, ಈ ವೈರಾಣು ಹಾಗೂ ಅದಕ್ಕೆ ಕಿರೀಟ ಇಟ್ಟಂತೆ ಬಂದ ಲಾಕ್‌ಡೌನ್ ಇವೆರಡರ ನಡುವೆ ಕೆಲವು ಒಳ್ಳೆ ಕೆಲಸಗಳು ಆಗಿವೆ. ಅನಿರೀಕ್ಷಿತ ಮೂಲಗಳಿಂದ ಹಿಂದೆಂದೂ ಇಲ್ಲದ ಕಲೆ ಹೊರ ಬಂದಿದೆ , ಟ್ರೆಂಡ್ ಸೃಷ್ಟಿ ಆಗಿವೆ, ವೈಚಾರಿಕ ಸಿದ್ಧಾಂತಗಳು ಹುಟ್ಟಿಕೊಂಡಿವೆ, ತಂತ್ರಜ್ಞಾನ ಸುಧಾರಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ‘ವಸಂತ ಕಾಲೆ ಪ್ರಾಪ್ತೆ ಕಾಕ ಕಾಕಃ ಪಿಕ ಪಿಕಃ ಅನ್ನುವಂತೆ ಸರಕಾರ, ಮಾಧ್ಯಮಗಳು ಹಾಗೂ ಆಸ್ಪತ್ರೆ ಇವುಗಳ ನೈಜ ರೂಪ ಹೊರ ಬಂದಿದೆ.

ಬಹು ಹಿಂದೆ ಹುಟ್ಟಿ ಕೊಂಡಿದ್ದ, ಆದರೆ ಲಾಕ್‌ಡೌನ್ನಲ್ಲಿ ಪ್ರವರ್ಧಮಾನಕ್ಕೆ ಬಂದ ತಂತ್ರಜ್ಞಾನಗಳು ಎರಡು - ಒಂದು ಜೂ಼ಮ್, ಇನ್ನೊಂದು ಓಟಿಟಿ .

ಜೂ಼ಮ್‌ ಅನ್ನುವುದು ಎಷ್ಟೊಂದು ಸಾಮಾನ್ಯ ಆಗಿ ಹೋಯಿತು ಎಂದರೆ ಅದರ ಮೂಲ ತಂತ್ರವನ್ನು ಬಳಸಿ ಇತರ ಕಂಪನಿಗಳು ತಮ್ಮದೇ ವಿಡಿಯೋ ಕಾನ್ಫರೆನ್ಸ್ ಉಪಕರಣ ಜಾರಿಗೆ ತಂದರು. ಕ್ಲಾಸು ಇಲ್ಲದೆ ಖಾಲಿ ಕುಳಿತ ಕಾಲೇಜು ಹುಡುಗರು ಜೂ಼ಮಿನ ಬಗ್ಗೆ ಜೋಕು ಬರೆದು ವಾಟ್ಸ್ಯಾಪಿನಲ್ಲಿ ಹಂಚಿದರು. ಕೆಲಸ ಇಲ್ಲದೆ ಖಾಲಿ ಕುಳಿತ ಐಟಿ ಇಂಜಿನಿಯರ್ ಗಳು ಅದರ ಬಗ್ಗೆ ಮೀಮು ಮಾಡಿದರು. ತಮ್ಮ ಮೀಮಿಗೆ ತಾವೇ ನಕ್ಕರು.

ಇನ್ನು, ಇಡೀ ಅಂಬರದ ಅಲೆಗಳು ನಮ್ಮ ಆಸ್ತಿ. ನಾವು ಅವನ್ನು ಹೇಗೆ ಬೇಕಾದ ಹಾಗೆ ಬಳಸಬಹುದು, ಅವುಗಳ ಮೇಲೆ ಯಜಮಾನಿಕೆ ಮಾಡಬಹುದು ಅಂತ ತಿಳಿದುಕೊಂಡ ಟಿವಿ ಚಾನೆಲ್ಗಳಿಗೆ ಸೆಡ್ಡು ಹೊಡೆದು ಚಿತ್ತು ಮಾಡಿದವರು ಓಟಿಟಿ ಸೇವೆಗಳು. ಓವರ್ ದಿ ಟಾಪ್ ಸ್ಟ್ರೀಮಿಂಗ್ ಅಥವಾ ವಿಡಿಯೋ ಆನ್ ಡಿಮಾಂಡ್ ಅನ್ನುವ ಈ ತಂತ್ರಜ್ಞಾನ ಹಾಗೂ ಅದರ ಉಪಕರಣವನ್ನು ನಾವು ನಮ್ಮ ಅನುಕೂಲಕ್ಕೆ ಉತ್ಪ್ರೇಕ್ಷಿತ ವಿಡಿಯೋ ಅಥವಾ ಬೇಡಿ ಪಡೆದ ಚಲನಚಿತ್ರ ಅಂತ ಅಂದು ಕೊಳ್ಳಬಹುದು.

ಟಿವಿ, ಪತ್ರಿಕೆ, ರೇಡಿಯೋ, ಇತ್ಯಾದಿ ಮಾಧ್ಯಮಗಳಿಗೆ ಇರುವ ಅಥವಾ ಇರಬೇಕಾದ ನಿಯಂತ್ರಣ ಇದಕ್ಕೆ ಇರಲಾರದಕ್ಕೋ ಅಥವಾ ಇಂದು ಭವಿಷ್ಯದ ಮಾಧ್ಯಮ ಅಂತ ಕೆಲವು ಸೃಜನಶೀಲ ನಟ- ಕತೆಗಾರ- ನಿರ್ದೇಶಕರು ತಿಳಿದುಕೊಂಡಿದಕ್ಕೋ ಏನೋ ಅದು ಜನರ ನಿರೀಕ್ಷೆ ಮೀರಿ ಹೊಸತನ್ನು ನೀಡಿದೆ. ಕತೆ, ಚಲನಚಿತ್ರ ಹಾಗೂ ಸಂಗೀತ ಕ್ಷೇತ್ರ ನಿಬ್ಬೆರಗಾಗುವಂತೆ ಮಾಡಿದೆ.

ಅದರಲ್ಲಿ, ಇತ್ತೀಚಿಗೆ ಬಿಡುಗಡೆ ಆದ ಸಾಕ್ಷ್ಯಚಿತ್ರ `ಐ ಆಮ್ ನಾಟ್ ಯುವರ್ ನೀಗ್ರೋ'. ಅಮೆರಿಕದ ಕಪ್ಪು ಜನರ ಆತ್ಮಸಾಕ್ಷಿ ಅಂತ ಹೆಸರು ವಾಸಿಯಾಗಿದ್ದ ಲೇಖಕ, ಕಾದಂಬರಿಕಾರ ಜೇಮ್ಸ್ ಬಾಲ್ಡ್ವಿನ್ ಅವರ ಅಪ್ರಕಟಿತ ಹಾಗೂ ಅಪೂರ್ಣ ಲೇಖನಗಳನ್ನು ಆಧರಿಸಿ ಈ ಚಿತ್ರ ತಯಾರಾಗಿದೆ.

ದಕ್ಷಿಣ ಅಮೆರಿಕದ ನಿರ್ದೇಶಕ, ರಾಜಕೀಯ ಹೋರಾಟಗಾರ ರವೂಲ ಪೆಕ ನಿರ್ದೇಶಿಸಿದ ಈ ಸಾಕ್ಷ್ಯ ಚಿತ್ರ ಬರೀ ಅಮೆರಿಕ ಅಲ್ಲ, ವಿಶ್ವದ ಅನೇಕ ದೇಶಗಳಲ್ಲಿ ಹೆಸರು ಮಾಡಿದೆ. ಹೈತಿ ದೇಶದಲ್ಲಿ ನಿರ್ಮಾಣವಾದ ಶ್ರೇಷ್ಠ ಚಿತ್ರ ಎಂದು ಆಸ್ಕರ್ಗೆ ನಾಮ ನಿರ್ದೇಶನ ಹೊಂದಿದೆ. ಅದರಲ್ಲಿ , 1930ರಿಂದ 1980ರ ದಶಕಗಳಲ್ಲಿ ಜೀವಿಸಿ, ತನ್ನ ಬರವಣಿಗೆಯ ನೂತನ ಸತ್ವದಿಂದ ಬಿಳಿಯರು ತಮ್ಮನ್ನು ಚಿವುಟಿ ನೋಡಿಕೊಳ್ಳುವಂತೆ ಮಾಡಿದ ಬರಹಗಾರ ಜೇಮ್ಸ್ ಬಾಲ್ಡ್ವಿನ್.

ಅವನು, ತಾನು ಹಾರಲೆಮ ಪ್ರದೇಶದಲ್ಲಿ ಬಾಲ್ಯ ಕಳೆದು ಅನೇಕ ಕಷ್ಟ ಅನುಭವಿಸಿದ್ದು, ಬಿಳಿಯ ಹುಡುಗರು ತನ್ನ ಬುದ್ಧಿವಂತಿಕೆ ಅಥವಾ ಒಳ್ಳೆಯತನ ಎರಡನ್ನೂ ನೋಡದೆ, ಕೇವಲ ತನ್ನ ಚರ್ಮದ ಬಣ್ಣದಿಂದಾಗಿ ತನ್ನನ್ನು ದ್ವೇಷಿಸಿದ್ದು, ತಾನು ಯುರೋಪಿಯನ್ ಸಾಹಿತ್ಯದ ವಿದ್ಯಾರ್ಥಿಯಾಗಿ ಓದಲು - ಬರೆಯಲು ಹವಣಿಸಿದಾಗ ಯಾರೂ ಪ್ರೋತ್ಸಾಹಿಸದೆ ಹೋದದ್ದು, ಕೊನೆಗೆ ಫ್ರಾನ್ಸ್‌ನ ಸಂಸ್ಥೆಯೊಂದು ನೀಡಿದ ವಿದ್ಯಾರ್ಥಿ ವೇತನದಿಂದ ತನ್ನ ಜೀವನ ಬದಲಾದದ್ದು, ಇತ್ಯಾದಿ ಕತೆಗಳನ್ನು ಹೇಳುತ್ತಾ ಹೋಗುತ್ತಾನೆ. ಅದರಲ್ಲಿ ಅವನ ನೈಜ ವಿಡಿಯೋಗಳು, ಅವನ ಸ್ನೇಹಿತರು, ಸಹಪಾಠಿಗಳು, ಓದುಗರು, ಅವನ ಜೊತೆ ಕರಿಯರ ಸಾಹಿತ್ಯ - ಸಾಂಸ್ಕೃತಿಕ ಆಂದೋಲನದಲ್ಲಿ ಪಾಲು ಗೊಂಡವರು, ಕುಟುಂಬದವರು ಇತ್ಯಾದಿಗಳ ಸಂದರ್ಶನ ಇದೆ.

ಸಾಕ್ಷ್ಯ ಚಿತ್ರದ ಹೆಸರು ಅವನ ಜನಪ್ರಿಯ ಟಿವಿ ಸಂದರ್ಶನದಿಂದ ತೆಗೆದು ಕೊಂಡಿದ್ದು . ‘ನಾನು ನೀಗ್ರೋ ಅಲ್ಲ. ಬಿಳಿಯರು ನನ್ನನ್ನು, ನಮಂಥವರನ್ನು ನೀಗ್ರೋಗಳನ್ನಾಗಿ ಮಾಡಿದರು. ನೀವು ನನ್ನನ್ನು ನೀಗ್ರೋವನ್ನಾಗಿ ಸೃಷ್ಟಿ ಮಾಡಿದಿರಿ, ಯಾಕೆಂದರೆ ನಿಮಗೆ ಶೋಷಣೆ ಮಾಡಲು ಯಾರಾದರೂ ಬೇಕು. ನಾನು ನಿಮ್ಮ ಕೆಳಗೆ ಇರಲಿಲ್ಲ ಅಂದರೆ ನಿಮಗೆ ನೀವು ಮೇಲಗಡೆ ಇರುವ ಭಾವನೆ ಬರುವುದಿಲ್ಲ. ಅದಕ್ಕೆ ನೀವು ನಮ್ಮನ್ನು ನಿಮ್ಮ ಕಾಲ ಕೆಳಗೆ ಇರುವಂತೆ ಕಲ್ಪನೆ ಮಾಡಿಕೊಂಡಿರಿ. .. ಆದರೆ ನಾನು ನಿಮ್ಮ ನೀಗ್ರೋ ಅಲ್ಲ. ನಾನು ಒಬ್ಬ ಮನುಷ್ಯ. ಈ ದೇಶದಲ್ಲಿ ಹುಟ್ಟಿ ಮನುಷ್ಯನಾಗಲು ಪ್ರಯತ್ನ ಪಡುತ್ತಿರುವ ಅಸಂಖ್ಯ ಕರಿಯರಂತೆ ನಾನೂ ಒಬ್ಬ ಮನುಷ್ಯ...’ ಅಂತ ಹೇಳಿದ ಜೇಮ್ಸ್‌ ವಿಡಿಯೋ ತುಂಬ ಜನಪ್ರಿಯ. ಇದು ಆರ್ಕೈವ್, ಯುಟ್ಯೂಬ್‌ ಇತ್ಯಾದಿಗಳಲ್ಲಿ ದೊರಕುತ್ತದೆ.

ಇಷ್ಟೇ ಮುಖ್ಯವಾದ ಇನ್ನೊಂದು ಮಾತನ್ನು ಜೇಮ್ಸ್ ಹೇಳುತ್ತಾನೆ. ಅದು ಓದಿನ ಬಗ್ಗೆ, ಪುಸ್ತಕಗಳ ಬಗ್ಗೆ, ಅಧ್ಯಯನದ ಬಗ್ಗೆ, ಚಿಕ್ಕ ಮಕ್ಕಳನ್ನು ಓದಿನ ಕಡೆಗೆ ಪ್ರೇರೇಪಿಸುವ ಬಗ್ಗೆ.

”ಐತಿಹಾಸಿಕ, ರಾಜಕೀಯ ಆರ್ಥಿಕ ಅಥವಾ ಸಾಮಾಜಿಕ ಕಾರಣಗಳಿಗಾಗಿ ನನಗೆ, ನನ್ನಂಥವರಿಗೆ ಅನೇಕ ತೊಂದರೆಗಳಾಗುತ್ತವೆ. ಆಗ ಎಲ್ಲಾರು ಆರಾಮಾಗಿದ್ದಾರೆ, ನಾನು ಮಾತ್ರ ಸಂಕಟ ಪಡುತ್ತಿದ್ದೇನೆ. ಜಗತ್ತಿನ ಎಲ್ಲ ತೊಂದರೆಗಳು ನನಗೇ ಬಂದಿವೆ. ಎಲ್ಲರಿಗಿಂತ ನಾನು ಹೆಚ್ಚು ಘಾಸಿಯಾಗಿದ್ದೇನೆ. ನನ್ನಷ್ಟು ನೋವು ಯಾರಿಗೂ ಇಲ್ಲ. ನನ್ನ ಸಂಕಟಗಳಿಗೆ ಕೊನೆಯೇ ಇಲ್ಲ. ನಾನು ಯಾವ ತಪ್ಪು ಮಾಡದೇ ಇದ್ದರೂ ನನಗೆ ಶಿಕ್ಷೆ ಆಗಿದೆ. ಅವಮಾನ, ಅಸಹ್ಯ, ತೊಂದರೆ ಸಂಕಟ ನನಗೆ ಬಿಟ್ಟರೆ ಬೇರೆ ಯಾರಿಗೂ ಇದ್ದಂತೆ ಇಲ್ಲ, ಅಂತ ನಾವು ಅಂದು ಕೊಳ್ಳುತ್ತೇವೆ. ಆದರೆ ಆ ನಂತರ ನಾವು ಓದಲು ಶುರು ಮಾಡುತ್ತೇವೆ. ಆಗ ನಮಗೆ ಅರ್ಥ ವಾಗುತ್ತದೆ. ಇದೇನೂ ಹೊಸದಲ್ಲ. ಇದು ಹಿಂದೆಯೂ ಇತ್ತು. ಇತಿಹಾಸದಲ್ಲಿ ನೋವು - ಸಂಕಟ ಸಾಮಾನ್ಯ. ಆಗ ಕೊಂಚ ಸಮಾಧಾನ ವಾಗುತ್ತದೆ. ನಾನು ಪುಸ್ತಕಗಳನ್ನು ಓದಲು ಆರಂಭಿಸಿದ ನಂತರ ನಾನು ಪ್ರಾಚೀನ ಕಾಲದಲ್ಲಿ ಜೀವಿಸಿದ್ದ, ಬರೀ ಜೀವಿಸದೆ ಜೀವನ ಸ್ಪೂರ್ತಿ ಹೊಂದಿದ, ಚುರುಕಾಗಿ ಜೀವಿಸಿ ಇತರರಿಗೆ ಮಾದರಿಯಾದ, ಇತರರ ನೋವಿಗೆ ಅಯ್ಯೋ ಎಂದ ಅನೇಕರು ಇದ್ದರು ಎಂದು ತಿಳಿದೆ. ಅವರೊಂದಿಗೆ ನಾನು ಬೆಸೆದುಕೊಂಡೆ’ ಎನ್ನುವುದು ಅವರ ಮಾತು.

ನೀವು ಯಾರು ಎಂದು ತಿಳಿದುಕೊಳ್ಳುವುದರ ಸಂಭ್ರಮ ಹಾಗೂ ದುರಂತ ಎನ್ನುವ ಅವರ ಲೇಖನದಲ್ಲಿ ಈ ಮಾತು ಬರುತ್ತದೆ. ಅಮೆರಿಕದ ಚಿಂತಕನ ಈ ಮಾತು ಅನೇಕ ರೀತಿಗಳಲ್ಲಿ ಭಾರತದ ಇತಿಹಾಸ - ವರ್ತಮಾನಗಳನ್ನು, ಇಲ್ಲಿನ ಅವಕಾಶ ವಂಚಿತ ಸಮುದಾಯಗಳನ್ನು, ಅವುಗಳ ನಾಯಕರಾದ ಫುಲೆ, ಡಾ. ಅಂಬೇಡ್ಕರ್ ಅಂತವರನ್ನು ನೆನಪಿಸುತ್ತದೆ.

ಅಮೆರಿಕದ ಕರಿಯರಿಗಿಂತ ದುಸ್ಥಿತಿಯಲ್ಲಿ ಬದುಕಿದ, ಬದುಕುತ್ತಿರುವ ದಲಿತ - ಹಿಂದುಳಿದ ಜಾತಿ ಜನಾಂಗಗಳು ಓದು- ಬರಹದಿಂದ ಲಾಭ ಪಡೆದು ಕೊಳ್ಳಬಹುದೇ? ಓದು ಎನ್ನುವುದು ಡಾ. ಅಂಬೇಡ್ಕರ್ ಅವರನ್ನು ಹೇಗೆ ರೂಪಿಸಿತು? ಅಂತ ವಿಚಾರ ಮಾಡಿದಾಗ ಅನೇಕ ರೀತಿಯ ವಿಷಯ ತಿಳಿಯುತ್ತದೆ. ಈಗ ಸಧ್ಯಕ್ಕೆ ಓದುವುದು ಎಷ್ಟು ಮುಖ್ಯ ಅನ್ನುವದಕ್ಕೆ ಡಾ. ಅಂಬೇಡ್ಕರ್ ಅವರ ಜೀವನದಿಂದ ದೊರೆಯುವ ಪಾಠಗಳು ಏನು ಅನ್ನುವುದನ್ನು ನೋಡೋಣ.

ಇದರಲ್ಲಿ ಎರಡು ಪಾಠಗಳಿವೆ - ಒಂದು ಅವರ ಹೇಳಿಕೆಗಳು, ಇನ್ನೊಂದು ಅವರು ಬದುಕಿದ ರೀತಿ, ಮಾಡಿ ತೋರಿದ ಸಾಧನೆ.

``ಯಾವಾಗಲೂ ಓದುತ್ತಾ ಇರಿ. ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳುತ್ತಾ ಇರಿ. ನೀವು ಎಷ್ಟು ಓದಬೇಕು ಎಂದರೆ ಇತರರು ನಿಮ್ಮ ಜೊತೆ ವಾದಿಸಲು ಅಳುಕಬೇಕು. ನಿಮ್ಮ ಜೊತೆ ನಿಲ್ಲಲು ಹಿಂಜರಿಯಬೇಕು’’ ಎನ್ನುವುದು ಅವರ ಜನಪ್ರಿಯ ಹೇಳಿಕೆ.

ಸರ್ವ ಧರ್ಮಗಳನ್ನು ಸಮನಾಗಿ ಓದಿದ್ದ ಅಂಬೇಡ್ಕರ್ ಅವರು ಕುರಾನ್ ಬಗ್ಗೆ ಒಂದು ಮಾತು ಹೇಳಿ ಓದಿನ ಮಹತ್ವವನ್ನು ಸ್ಥಾಪಿಸುತ್ತಾರೆ. ಕುರಾನ್ ನ ಮೊದಲ ಶಬ್ದವೇ `ಇಕ್ರಾ' . ಅದರ ಅರ್ಥ `ಓದಿರಿ ' ಅಂತ.

ಅವರ ರಾಜಗೃಹ ಎನ್ನುವ ಮುಂಬೈನ ಮನೆಯಲ್ಲಿ ಇದ್ದ ಖಾಸಗಿ ಲೈಬ್ರರಿಯಲ್ಲಿ ಸುಮಾರು 50,000 ಪುಸ್ತಕಗಳು ಇದ್ದವು. ಅದು ಅಂದಿನ ಕಾಲಕ್ಕೆ ಜಗತ್ತಿನ ಅತಿ ದೊಡ್ಡ ಖಾಸಗಿ ಲೈಬ್ರರಿ ಅಂತ ಸಂಶೋಧಕ ಹೇಮಂತ್ ಸಿಂಗ್ ತಿಳಿಸುತ್ತಾರೆ.

ನನ್ನ ಪ್ರಕಾರ ಓದುವುದು ಎಂದರೆ ಹಿಂದೆ ಇದ್ದ ಹಾಗೂ ಈಗ ಇರುವ ಜನರ ಜೊತೆ ಸಂಭಾಷಣೆ ನಡೆಸುವುದು. ಚಿಂತಕರು ನಮ್ಮ ಎದುರು ಇಲ್ಲ ಎಂದರೂ ಸಹಿತ ಅವರನ್ನ ಭೇಟಿ ಆದಂತೆ, ಅವರೊಡನೆ ಮಾತಾಡಿದಂತೆ ಅವರ ವಿಚಾರ ತಿಳಿದುಕೊಂಡಂತೆ, ನಮ್ಮ ಸಂದೇಹ ಪರಿಹರಿಸಿಕೊಂಡಂತೆ.

ಒಂದು ಲೆಕ್ಕದಲ್ಲಿ ಪುಸ್ತಕ ಓದುವುದು ಕಾಲಯಾನ ಅಥವಾ ಟೈಮ್ ಟ್ರಾವೆಲ್. ಅದು ಇನ್ನೊಬ್ಬರ ಮನಸ್ಸು- ಬುದ್ಧಿಯಲ್ಲಿ ಪ್ರವೇಶ ಮಾಡುವ ಅನುಭವ ತಂದು ಕೊಡುವುದರಿಂದ ಅದು ಪರಕಾಯ ಪ್ರವೇಶ ಕೂಡ ಹೌದು.

ಬಸವಣ್ಣ ಹಾಗೂ ಆತನ ಪುರಾತನರ ವಚನಗಳನ್ನು ನೀವು ಓದಿದರೆ ನೀವು ಸುಮಾರು 800-900 ವರ್ಷ ಹಿಂದೆ ಹೋದಂತೆ. ಅಂದಿನ ಜೀವನ ಶೈಲಿಯನ್ನು ತಿಳಿದುಕೊಂಡು ಅಂದಿನ ಜನರೊಡನೆ ಸಂಭಾಷಣೆ ಮಾಡಿದಂತೆ.

ಅಕ್ಕ ಮಹಾದೇವಿ ನೆಲದ ಮರೆಯ ನಿಧಾನದಂತೆ ಅಂತ ಹೇಳಿದ್ದನ್ನು ಓದಿದಾಗ, ನಿಮಗೆ ನಿಧಾನ ಮತ್ತು ನಿಧನದ ವ್ಯತ್ಯಾಸದ ಬಗ್ಗೆ ಸಂದೇಹ ಬಂದೆ ಬರುತ್ತದೆ. ನಿಮ್ಮ ಕುತೂಹಲ ನಿಮ್ಮನ್ನು ಹೆಚ್ಚು ಓಡಿಸುತ್ತದೆ ಮತ್ತು ಓದಿಸುತ್ತದೆ. ನಿಮ್ಮ ಅರಿವು ಹಿಗ್ಗುತ್ತದೆ. ಬರೆಯುವುದು ತಮ್ಮ ವಿಚಾರ ಸರಣಿಯ ಅತ್ಯಂತ ಸ್ಪಷ್ಟ ದಾಖಲಾತಿ. ಇದು ರಜಾ ಚೀಟಿ, ಪ್ರೇಮ ಪತ್ರ ಬರೆಯುವ ಸಾಮಾನ್ಯರಿಗೆ ಅನ್ವಯಿಸಿದಂತೆ, ಅಸಾಮಾನ್ಯ ಚಿಂತಕರಿಗೂ ಅನ್ವಯಿಸುತ್ತದೆ.

ಡಾ. ಅಂಬೇಡ್ಕರ್ ಅವರ ಚಿಂತನೆಗಳು ನಮಗೆ ಗೊತ್ತಾಗುವುದು ಮೂರು ವಿಧದಿಂದ - ಅವರ ಬರಹಗಳು, ಭಾಷಣಗಳು, ಹಾಗೂ ಅವರ ಜೊತೆ ಇದ್ದವರು, ಅವರ ಸಹಪಾಠಿ ಅಥವಾ ಸಹೋದ್ಯೋಗಿ, ಕುಟುಂಬ ಸದಸ್ಯರು, ಇತ್ಯಾದಿಯವರ ಸಂಪರ್ಕದಿಂದ. ಇದರಲ್ಲಿ, ಅತಿ ವಸ್ತುನಿಷ್ಠವಾದದ್ದು ಅವರ ಬರಹ ಮತ್ತು ಭಾಷಣಗಳ ದಾಖಲೆ. ಅವರು, ತಮ್ಮ 25ನೇ ವಯಸ್ಸಿನಲ್ಲಿ ಮೊದಲ ಪುಸ್ತಕ ಬರೆದರು `castes in india - mechanism, genesis and development’. ನಂತರದ 40 ವರ್ಷಗಳಲ್ಲಿ ಅವರು ಸುಮಾರು 35 ಪುಸ್ತಕಗಳನ್ನು, 200 ಪತ್ರಿಕೆ ಸಂಚಿಕೆಗಳನ್ನು, ಸುಮಾರು 300 ಭಾಷಣಗಳನ್ನು ಮಾಡಿದರು.

ಡಾ. ಸಿಂಗ್ ಅವರು “ಡಾ. ಅಂಬೇಡ್ಕರ್ ಅವರು ಸುಮಾರು 65 ವಿಷಯಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು. ಒಂಬತ್ತು ಭಾಷೆ ಬಲ್ಲವರಾಗಿದ್ದರು. ಅವರು ಹತ್ತಕ್ಕೂ ಹೆಚ್ಚು ವಿಷಯಗಳ ಬಗ್ಗೆ ವಿದ್ವತ್ಪೂರ್ಣ ಪುಸ್ತಕ ಬರೆದಿದ್ದಾರೆ“ ಅಂತ ಹೇಳಿದ್ದಾರೆ. ಅವರ ಕೆಲವು ಪ್ರಸಿದ್ಧ ಪುಸ್ತಕಗಳನ್ನು ನೋಡೋಣ.

ಮೊದಲನೆಯದಾಗಿ ನಮ್ಮ ಸಂವಿಧಾನ. ಭಾರತದ ಸಂವಿಧಾನ ರಚನೆಯಲ್ಲಿ ಅವರ ದೊಡ್ಡ ಪಾತ್ರ ಇತ್ತು. “ಅದನ್ನು ಡಾ. ಅಂಬೇಡ್ಕರ್ ಪೂರ್ತಿಯಾಗಿ ಬರೆದಿರಲಿಕ್ಕಿಲ್ಲ. ಆದರೆ ಅದರ ಆತ್ಮವನ್ನು ರೂಪಿಸಿದವರು ಅವರು'’ ಅಂತ ಡಿ.ಡಿ. ಬಸು ಅವರು ಹೇಳಿದ್ದಾರೆ.

ಅದನ್ನು ಹೊರತು ಪಡಿಸಿ, ಅವರ ಏಕ ವ್ಯಕ್ತಿ ಬರಹಗಳನ್ನು ನೋಡೋಣ. ಅವರ ಕಾಲದಿಂದ ಇಂದಿನವರೆಗೂ ಪ್ರಕಟಣೆಯಾಗುತ್ತಲೇ ಇರುವ, ಎಂದಿಗೂ ಬೇಡಿಕೆಯಲ್ಲಿ ಇರುವ ಪುಸ್ತಕಗಳು ಮೂರು.

1 . Annihilation of Caste
2. Buddha and his Dhamma
3. Problem of the Rupee

ಜಾತ್‌ ಪಾತ್‌ ತೊಡಕ್‌ ಮಂಡಲ ಅನ್ನುವ ಸಂಘಟನೆಯವರು ಪಂಜಾಬಿನಲ್ಲಿ ಆಯೋಜಿಸಿದ್ದ ಜಾತಿ ವಿನಾಶ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಂಬೇಡ್ಕರ್ ಅವರು ಹೋಗಬೇಕಿತ್ತು. ಕಾರ್ಯಕ್ರಮಕ್ಕೆ ಮುನ್ನ ಇವರು ಭಾಷಣ ಬರೆದು ಕಳಿಸಿದರು. ಆದರೆ ರಾಜಕೀಯ ಕಾರಣಗಳಿಂದ ಕಾರ್ಯಕ್ರಮ ರದ್ದಾಯಿತು. ತಾವು ಮೊದಲೇ ಬರೆದು ಇಟ್ಟಿದ್ದ ಭಾಷಣವನ್ನು ಅವರು `ಜಾತಿ ವಿನಾಶ' ಎನ್ನುವ ಹೆಸರಿನಲ್ಲಿ ಮುದ್ರಿಸಿದರು.

“ನಾನು ಮನುಷ್ಯನಾಗಿದ್ದೇ ಜಾತಿ ವಿನಾಶ ಪುಸ್ತಕದಿಂದ. ಅದನ್ನು ನಾನು ಒಂದು ದಿನ ರಾತ್ರಿ 30 ಸಲ ಓದಿದೆ’’ ಅಂತ ಕಾನ್ಶಿರಾಮ್ ಹೇಳಿದ್ದರು. `ಆ ಪುಸ್ತಕ ಓದದೆ ಇದ್ದರೆ ನಾನು ಕೇಂದ್ರ ಸರ್ಕಾರದ ಕಂಪನಿಯಲ್ಲಿ ಒಬ್ಬ ಕಾರಕೂನನಾಗಿ ಉಳಿಯುತ್ತಿದ್ದೆ, ಅಂತ ಹೇಳಿದ್ದಾರೆ.

“ಈ ಚಿಕ್ಕ ಪುಸ್ತಕದಲ್ಲಿ ಮಹಾನ್ ಶಕ್ತಿ ಇದೆ. ಚಿಕ್ಕ ಪುಸ್ತಕವೊಂದು ಮಹಾನ್ ಗ್ರಂಥ ಆಗಲಿಕ್ಕೆ ಸಾಧ್ಯ ಇದೆ ಎನ್ನುವುದಕ್ಕೆ ಇದು ಉದಾಹರಣೆ. ಇದು ನಮ್ಮ ಅಸ್ತಿತ್ವದ ಬೇರುಗಳನ್ನು ಅಲ್ಲಾಡಿಸಬಲ್ಲದು'’ ಎಂದು ಸಾಹಿತಿ ವೀರೇಂದ್ರ ಸಿಂಪಿ ಹೇಳುತ್ತಿದ್ದರು.

ಇದರಲ್ಲಿ ಅಂಬೇಡ್ಕರ್ ಅವರು ಜಾತಿಯ ಸಮಸ್ಯೆ ಹಾಗೂ ಅದರ ಪರಿಹಾರ ಎರಡನ್ನೂ ಸೂಚಿಸುತ್ತಾರೆ. ಜಾತಿ ಎನ್ನುವುದು ನಮ್ಮ ದೇಶದಲ್ಲಿ ಎಲ್ಲ ವಿಷಯಗಳನ್ನು ನಿರ್ಧರಿಸುವ, ರಾಜಕೀಯ ಮಾಡುವವರ ಕೈಯ ಅಲುಗು ಆಗಿರುವ, ಅಣ್ಣ ತಮ್ಮ ಅಕ್ಕ ತಂಗಿಯರ ಮಧ್ಯೆ ಜಗಳ ಹಚ್ಚುವ, ದೇಶವನ್ನು ಶತಮಾನಗಳಷ್ಟು ಹಿಂದಕ್ಕೆ ಒಯ್ದು ವಿನಾಶಕ್ಕೆ ತಳ್ಳುವ ದುಷ್ಟ ಶಕ್ತಿ ಅಂತ ಅವರು ವಾದ ಮಂಡಿಸಿದರು.

ಹಿಂದುಳಿದ, ದಲಿತ, ಆದಿವಾಸಿ, ಜಾತಿ - ಜನಾಂಗಗಳಿಗೆ ಯಾವ ಯಾವ ಕ್ಷೇತ್ರದಲ್ಲಿ ಅವಕಾಶ ವಂಚನೆ ಆಗಿದೆಯೋ ಆ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸುವುದು ಸರ್ಕಾರದ ಕರ್ತವ್ಯ ಅನ್ನುತ್ತಾರೆ. ನಮ್ಮ ಸಮಾಜದ ಅಂಧ ವಿಶ್ವಾಸ, ಸಾಮಾಜಿಕ ಪಿಡುಗುಗಳು, ಶೋಷಣೆ, ತಾರತಮ್ಯ ಮುಂತಾದವುಗಳಿಗೆ ವೈದಿಕ ಪರಂಪರೆಯಲ್ಲಿ ಬೆಂಬಲ ಇದೆ. ಇವುಗಳನ್ನು ಕೊನೆಗಣಿಸಲು ನಾವು ಸಾಂಸ್ಕೃತಿಕ ಕ್ರಾಂತಿ ತರಬೇಕು, ಇದರಲ್ಲಿ ಎಲ್ಲ ಜಾತಿ - ಜನಾಂಗಗಳ ಕೊಡುಗೆ ಅವಶ್ಯ ಅಂತ ಅವರು ಸಲಹೆ ನೀಡುತ್ತಾರೆ.

ಅವರ ಇನ್ನೊಂದು ಪ್ರಮುಖ ಪುಸ್ತಕ ‘ರೂಪಾಯಿಯ ಸಮಸ್ಯೆ’. 1920ರಲ್ಲಿ ಇದು ಅವರ ಸಂಶೋಧನಾ ಗ್ರಂಥವಾಗಿ ಮುದ್ರಿತವಾಯಿತು. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ಹಾಗೂ ಲಂಡನ್ನಿನ ಲಂಡನ್ ಸ್ಕೂಲ್ ಆಫ್ ಏಕನಾಮಿಕ್ಸ್ ಗಳಲ್ಲಿ ಅವರು ಸಂಶೋಧನೆ ನಡೆಸಿ ಪ್ರೌಢ ಪ್ರಬಂಧ ಪಡೆದದ್ದು, ಅರ್ಥ ಶಾಸ್ತ್ರದಲ್ಲಿ. ಅದು ಭಾರತ ಮತ್ತು ಇತರ ದೇಶಗಳ ನಗದು ನೀತಿಯನ್ನು ವಿಶ್ಲೇಷಿಸುವ `ದಿ ಪ್ರಾಬ್ಲಮ್ ಆಫ್ ದಿ ರುಪಿ: ಇಟ್ಸ್ ಒರಜೀನ್ಸ್ ಅಂಡ್ ಸೊಲ್ಯೂಷನ್'.

ಭಾರತದಂತಹ ದೇಶದಲ್ಲಿ ಕಾಗದದ ನೋಟು ಚಲಾವಣೆಯಲ್ಲಿ ಇರಬೇಕೋ ಅಥವಾ ಚಿನ್ನದ ನಾಣ್ಯ ಇರಬೇಕೋ ಅನ್ನುವ ಸಮಸ್ಯೆಯನ್ನು ಈ ಪುಸ್ತಕ ಚರ್ಚಿಸುತ್ತದೆ. ಅರ್ಥಶಾಸ್ತ್ರದ ಪಿತಾಮಹ ಅನ್ನಿಸಿಕೊಳ್ಳುವ ಜನ ಮೆನಯಾರ್ಡ್ ಕೆಯನ್ಸ್ ಅವರು, ಭಾರತಕ್ಕೆ ಕಾಗದದ ನೋಟೇ ಸರಿ ಅಂತ ಪ್ರತಿಪಾದಿಸಿದ್ದರು. ಅದನ್ನು ತೀವ್ರವಾಗಿ ಖಂಡಿಸಿದ ಡಾ. ಅಂಬೇಡ್ಕರ್ ಅವರು ಕಾಗದದ ನೋಟಿನ ಬೆಲೆಯನ್ನು ಸರ್ಕಾರ ಕಟ್ಟುತ್ತದೆ. ಆದರೆ ಚಿನ್ನದ ನಾಣ್ಯದ ಬೆಲೆಯನ್ನು ಜನ ಕಟ್ಟುತ್ತಾರೆ. ಆಡಳಿತ ಮಾಡುವವರು ಕಾಗದದ ನೋಟಿನ ಬೆಲೆಯನ್ನು ತಮ್ಮ ಮನಸ್ಸಿಗೆ ಬಂದಂತೆ, ಅವೈಜ್ಞಾನಿಕವಾಗಿ ಹೆಚ್ಚು- ಕಮ್ಮಿ ಮಾಡಬಹುದು. ರಾತ್ರೋ ರಾತ್ರಿ ಅದರ ಮೌಲ್ಯ ಹೆಚ್ಚು ಮಾಡಬಹುದು, ಅದನ್ನು ಅಪಮಾನ್ಯ ಮಾಡಬಹುದು. ಅದು ನಿಸರ್ಗದ ನಿಯಮಗಳಿಗೆ ವಿರುದ್ಧವಾಗಿ ಇರಬಹುದು, ಆದ್ದರಿಂದ ಅದು ಕೂಡದು ಅಂತ ವಾದ ಮಂಡಿಸಿದರು . ಅದಕ್ಕೆ ಸಾಕಷ್ಟು ಮನ್ನಣೆ ದೊರೆಯಿತು.

ಅವರ ಅತ್ಯಂತ ಪ್ರೌಢ ಗ್ರಂಥ, ನನ್ನ ಮೆಚ್ಚಿನ ಪುಸ್ತಕ `ಬುದ್ಧ ಮತ್ತು ಆತನ ಧರ್ಮ’. ಇದು ಬುದ್ಧನ ಜೀವನವನ್ನು ವಿಶಿಷ್ಟ ರೀತಿಯಿಂದ ನೋಡುತ್ತದೆ ಹಾಗೂ ಅವನ ಚಿಂತನೆಯನ್ನು ಸರಳವಾಗಿ ತಿಳಿಸಿಕೊಡುತ್ತದೆ. ನಾನು ಇದನ್ನು ಸುಮಾರು 20 ಪ್ರತಿ ಖರೀದಿಸಿರಬಹುದು. ನನ್ನ ಸ್ನೇಹಿತರು ಮದುವೆಯಾದಾಗ, ಓದಲು ಬೇರೆ ಕಡೆ ಹೋದಾಗ, ಅನೇಕ ದಿನಗಳ ನಂತರ ಭೇಟಿಯಾದಾಗ ನಾನು ಅದನ್ನು ನೆನಪಿನ ಕಾಣಿಕೆ ರೂಪದಲ್ಲಿ ಕೊಟ್ಟಿದ್ದೇನೆ.

ಬುದ್ಧ ಸಾವು, ನೋವು, ರೋಗ ನೋಡಿ ಬದಲಾದ ಅಂತ ಹೇಳುವ ಪುರಾಣ ಕತೆಯನ್ನು ಅಂಬೇಡ್ಕರ್ ತಿರಸ್ಕಾರ ಮಾಡುತ್ತಾರೆ. ಮಹಾರಾಜನ ಮಗನಾಗಿದ್ದ ತಾನು ಇನ್ನೊಂದು ದೇಶದ ಜೊತೆಗೆ ನದಿ ನೀರಿನ ಜಗಳ ತೀರಿಸಲು ಹೋದಾಗ ಯುದ್ಧ ನಡೆಯುವ ಸಾಧ್ಯತೆ ಕಾಣುತ್ತದೆ. ಅವನು ಅದನ್ನು ತಪ್ಪಿಸಲು ಪೀಠ ತ್ಯಾಗ ಮಾಡಿ ಶಾಂತಿ ಸ್ಥಾಪಿಸುತ್ತಾನೆ. ಇದು ಅವರ ವಾದ. ಅದಕ್ಕೆ ಅವರು ಅನೇಕ ಸಾಕ್ಷಿ ನೀಡುತ್ತಾರೆ.

ದೇವರನ್ನು ಕೇಂದ್ರ ಸ್ಥಾನದಲ್ಲಿ ಇರಿಸದೆ ಹೊಸ ಧರ್ಮವನ್ನು ಕಟ್ಟಿದ ಬುದ್ಧ ಎಂದು ಅವರು ಪ್ರತಿಪಾದಿಸುತ್ತಾರೆ. ಮಾನವ ತನ್ನ ಸ್ವ ಪ್ರಯತ್ನದಿಂದ ಮಹಾ ಮಾನವನಾಗಬಹುದು, ತನ್ನ ಅಂತರಂಗದೊಂದಿಗೆ ಶಾಂತಿ ಸ್ಥಾಪಿಸಿದಾಗ ಬಹಿರಂಗದೊಂದಿಗೆ ಶಾಂತಿ ಸ್ಥಾಪಿಸಬಹುದು ಎಂದು ಅವರು ಬುದ್ಧನ ಕರುಣೆ- ಸಹೋದರ ಭಾವ - ಸಮಾನತೆಯ ಸಿದ್ಧಾಂತ ಪರಿಚಯಿಸುತ್ತಾರೆ.

ನಾನು ಸಂವಿಧಾನದಲ್ಲಿ ಪ್ರಸ್ತಾಪಿಸಿದ ಕರುಣೆ- ಸಹೋದರ ಭಾವ - ಸಮಾನತೆಗಳು ಯೂರೋಪಿನಿಂದ ಎರವಲು ತಂದ ವಿಷಯಗಳಲ್ಲ. ಅವು ನಮ್ಮ ಭಾರತೀಯರ ಆತ್ಮ ಗುರುವಾದ ಬುದ್ಧನ ತತ್ವಗಳು ಅಂತ ಅವರು ಹೇಳುತ್ತಾರೆ.

ಆದರೆ ಅವರಿಗೆ ಸಿಗಬೇಕಾದ ಮನ್ನಣೆ ಸಿಕ್ಕಿದೆಯೇ? ವಿಲಿಯಮ್ ಶೇಕ್ಸ್‌ ಸ್ಪಿಯರ್ ಅನ್ನುವ ನಾಟಕಕಾರ ಹಾಗೂ ಕವಿ ಸುಮಾರು ಐದು ನೂರು ವರ್ಷಗಳ ಹಿಂದೆ ಬ್ರಿಟನ್ ನಲ್ಲಿ ಇದ್ದ. ಈಗ ಯುರೋಪಿನ ಅನೇಕ ದೇಶಗಳಲ್ಲಿ ಅವನ ಪುಸ್ತಕಗಳಿಗೆ ಅಂತಲೇ ವಿಶೇಷವಾಗಿ ಶೇಕ್ಸ್‌ ಸ್ಪಿಯರ್‌ ಲೈಬ್ರರಿಗಳು ಇವೆ.

ಅವನ ಬಗ್ಗೆಯೇ ಸಂಶೋಧನೆ ಮಾಡುವ ವಿಶ್ವವಿದ್ಯಾಲಯಗಳು, ಸಂಶೋಧಕರು ಶೇಕ್ಸ್‌ಸ್ಪಿಯರ್ ಅಂತ ಇದ್ದಾರೆ. ಅವನ ನಾಟಕಗಳನ್ನು ಅಷ್ಟೇ ಆಡುವ ನಾಟಕ ರಂಗಗಳು ಇವೆ. ಅವನ ಅಭಿಮಾನಿ ಬಳಗಗಳು, ವಾರಕ್ಕೊಮ್ಮೆ, ತಿಂಗಳಿಗೆ ಒಮ್ಮೆ ಒಂದು ಕಡೆ ಸೇರಿ ಅವರ ಬರಹ ಓದುವ ಪುಸ್ತಕ ಕೂಟಗಳು ಇವೆ.

ಆದರೆ ಇಂಥ ಕೆಲಸಗಳು ಭಾರತದಲ್ಲಿ ನಡೆಯುತ್ತಾ ಇವೆಯೆ? ಇದನ್ನು ನಾವು ಯೋಚಿಸಬೇಕು. ಸರ್ಕಾರವಾಗಲಿ, ಸಂಘ ಸಂಸ್ಥೆಗಳು ಏನು ಮಾಡಿದ್ದಾರೆ ಎನ್ನುವ ಚರ್ಚೆ ಈಗ ಬೇಡ. ಅವರ ಅಭಿಮಾನಿಗಳಾದ ನಾವು ಏನು ಮಾಡಿದ್ದೇವೆ?

ಅವರ ಹೆಸರಿನ ಬುಕ್ ಕ್ಲಬ್ ಅಥವಾ ರೀಡಿಂಗ್ ಕ್ಲಬ್, ಸ್ಟಡೀ ಸರ್ಕಲ್ ಮಾಡಿಕೊಂಡಿದ್ದೇವೆಯೇ ? ಅವರ ಪುಸ್ತಕಗಳ ಭಾಷಾಂತರ ಇತರ ಭಾರತೀಯ ಹಾಗೂ ವಿದೇಶ ಭಾಷೆಗಳಿಗೆ ಮಾಡಿದ್ದೇವೆಯೇ ?

ಇಲ್ಲಿ ಸೇರಿರುವ ಎಲ್ಲರೂ ಒಂದು ಆತ್ಮಾವಲೋಕನ ಮಾಡಿಕೊಳ್ಳೋಣ. ಅವರ ಪುಸ್ತಕಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಡಾಕ್ಟರ್ ಅಂಬೇಡ್ಕರ್ ರೈಟಿಂಗ್ ಡಾಟ್.ಜೀವೋವಿ ಡಾಟ್ ಇನ್(http://drambedkarwritings.gov.in) ಮತ್ತು ವಿದೇಶಾಂಗ ವ್ಯವಹಾರ ಸಚಿವಾಲಯ ವೆಬ್ಸೈಟ್‌ಗಳಲ್ಲಿ, ಖಾಸಗಿ ಜಾಲತಾಣಗಳಾದ ಅಂಬೇಡ್ಕರ್ ಡಾಟ್. ಒ ಆರ್ ಜಿ (http://ambedkar.org) ವೇಲ್ಲಿ ವಾದ ಡಾಟ್ ಒ ಆರ್ ಜಿ. ಉಚಿತವಾಗಿ ಸಿಗುತ್ತವೆ.

ಕೇಂದ್ರ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸರಕಾರ ಮುದ್ರಿಸಿದ ಪುಸ್ತಕಗಳ ಅಂತರ್ಜಾಲ ಪ್ರತಿಗಳನ್ನು ನೀವು ಡೌನ್‌ಲೋಡ್‌ ಮಾಡಿದರೆ ಅದು ಒಂದು ಕೇವಲ 400 ಎಂಬಿ ಆಗುತ್ತದೆ. ಅದು ಸುಮಾರು ಎರಡು ತಾಸಿನ ಸಿನಿಮಾ ಅಥವಾ ಟಿವಿ ಸಿರಿಯಲ್ಲೂ ಅಥವಾ ನೆಟ್‌ಫ್ಲಿಕ್ಸ್‌ನ ನಾಲ್ಕು ಎಪಿಸೋಡು ನೋಡಿದಷ್ಟೂ ಡಾಟಾ ಖರ್ಚು ಆಗುತ್ತದೆ.

ಒಂದು ವಿಶ್ವವಿದ್ಯಾಲಯ ಮಾಡಿದಕ್ಕಿಂತಲೂ ಹೆಚ್ಚು ಕೆಲಸ ಮಾಡಿದ ಒಬ್ಬ ಮಹಾ ಜ್ಞಾನಿಯ ಸಂಪೂರ್ಣ ಜೀವನದ ಕೆಲಸವನ್ನು ನಾವು 400 ಎಂಬಿ ಪೆನ್‌ಡ್ರೈವ್ ನಲ್ಲಿ ಇಟ್ಟುಕೊಳ್ಳುತ್ತೇವೆ ಎನ್ನುವುದು ಸೋಜಿಗದ ವಿಷಯ. ಆದರೂ ಕೂಡ ಅನೇಕರು ಅದನ್ನು ಮಾಡಲು ಹೋಗುವುದಿಲ್ಲ ಅನ್ನುವುದು ಮತ್ತೂ ಸೋಜಿಗ ಹಾಗೂ ವ್ಯಂಗ್ಯದ ವಿಷಯ.

ಈ ಐತಿಹಾಸಿಕ ವ್ಯಂಗ್ಯ ನಮ್ಮನ್ನು ಕಾಡಲಿ. ನಮ್ಮ ಪಾಲಿನ ಓದನ್ನು ಸಹಿತ ಮಾಡಿ ಮುಗಿಸಿದ ಮಹಾನುಭಾವನ ಬರವಣಿಗೆ ಯನ್ನು ಓದಲು ನಾವು ಮುಂದಾಗಲಿ. ಇದು ನಮಗೆ ಪ್ರೇರೇಪಣೆ ನೀಡಲಿ ಅಂತ ಹಾರೈಸುತ್ತೇನೆ.

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...