‘ಏಕತಾನತೆಯಿಂದ ಬಿಡುಗಡೆ ಪಡೆದ ಕವಿತೆಗಳು’


ಬೆನ್ನುಡಿ

ವಿಕ್ರಮ ವಿಸಾಜಿ ವಿದ್ವತ್ತು ಮತ್ತು ಕರ್ತಾರಶಕ್ತಿಯ ಅಪರೂಪದ ಸಂಗಮ. ಈ ಎರಡೂ ಪ್ರವೃತ್ತಿಗಳು ಒಂದಾಗಿ ಪ್ರಸ್ತುತ ಕವಿತಾಗುಚ್ಛದಲ್ಲಿ ಹೊಸತೊಂದು ಹದಕ್ಕೆ ಬಂದಿವೆ. ಬೆಕೆಟ್, ಯೇಟ್ಸ್, ಬೋದಿಲೇರ್‍ರ ಕುರಿತ ವಿಶಿಷ್ಟ ಕವಿತೆಗಳು ಈ ಕವಿಯ ಅಧ್ಯಯನಶೀಲತೆಯನ್ನು ಬಿಂಬಿಸಿದರೆ, ಇರುವಣ ಗೆಯಿಂದ ಬಂದ ಸಂಡೂರು ಕಾಡು, ಬಂದೇ ನವಾಜರನ್ನು ಕುರಿತ ಕವಿತೆಗಳು ಈತನ ವಿದ್ವತ್ತಿನ ಸೃಜನಮುಖಕ್ಕೆ ಹಿಡಿದ ಕನ್ನಡಿಗಳು. ಹೀಗೆ ಸಹಜ ಮತ್ತು ವ್ಯುತ್ಪತ್ತಿ ಪ್ರತಿಭೆಗಳ ಸಮತೋಲನ ಇವತ್ತು ಅಪರೂಪ. ವಸ್ತುವಿನ ಏಕತಾನತೆಯಿಂದ ಬಿಡುಗಡೆ ಪಡೆದ ಈ ಕವಿತೆಗಳು ತೆರೆದ ಮನದಿಂದ ಜಗತ್ತಿನ ಬಹುಕುಳತೆಯನ್ನು ಒಳಗೊಂಡಿವೆ. ಜೊತೆಗೆ ಗದ್ಯ ಮತ್ತು ಪದ್ಯ ಲಯಗಳ ನಮಬೆರಕೆಯೂ ಇಲ್ಲಿ ಗಮನಾರ್ಹ. ಪ್ರಸ್ತುತ ಸಂಕಲನದ ಮೂಲಕ ವಿಕ್ರಮ ವಿಸಾಜಿ ಕನ್ನಡ ಕಾವ್ಯದಲ್ಲಿ ಇನ್ನೊಮ್ಮೆ ತನ್ನ ವಿಶಿಷ್ಟ ಛಾಪನ್ನು ಮೂಡಿಸಿದ್ದಾನೆ.
 
 -ಎಚ್.ಎಸ್.ಶಿವಪ್ರಕಾಶ
 

ನಿಮ್ಮೊಂದಿಗೆ.......

ಕವಿತೆ ಬರೆಯುತ್ತೇನೊ ಇಲ್ಲವೊ ಎಂಬ ದುಗುಡವಿತ್ತು. ಯಾಕೆಂದರೆ ಹೊಸ ಸಂಕಲನ ತರದೆ ಹತ್ತು ವರುಷಗಳೆ ಕಳೆದವು. ಗೆಳೆಯರ, ಬೇರೆ ಭಾಷೆಗಳ ಕವಿತೆಗಳನ್ನು ಓದುವುದರಲ್ಲೆ ಹೆಚ್ಚು ಸುಖ ಅನುಭವಿಸಿದ್ದೆ. ಕಳೆದ ಹತ್ತು ವರುಷಗಳಲ್ಲಿ ನಾನು ಬರೆದದ್ದು ಎಂಟೊ, ಹತ್ತೊ ಕವಿತೆಗಳು. ಇತ್ತೀಚಿಗೆ ದಿಢೀರನೆ ಅನೇಕ ಕವಿತೆಗಳನ್ನು ಬರೆದೆ. ಕವಿತೆಗಳ ಸೆಳವಿಗೆ ಸಿಕ್ಕು ಮೈಮರೆತಿದ್ದಂತು ನಿಜ. ಅನೇಕರ ಕವಿತೆಗಳ ಗದ್ಯ ಜೊತೆಗೆ ನನ್ನದೇ ಕವಿತೆಗಳ ಗದ್ಯ ಕಿರಿಕಿರಿ ಅನ್ನಿಸಿತ್ತು. ಇದರಿಂದ ಬಿಡುಗಡೆಗೊಳ್ಳಲು ದಾರಿ ಹುಡುಕತೊಡಗಿದ್ದೆ. ಹಾಡುಗಳನ್ನು ಬರೆಯುವ ಮನಸ್ಸಾಯಿತು. ಕೆಲ ಹಾಡುಗಳನ್ನು ಬರೆಯಲು ಯತ್ನಿಸಿದೆ. ಕವಿತೆಯ ಅರ್ಥ ಕವಿತೆಯ ನಾದ, ಲಯ, ಗೇಯತೆಯೊಂದಿಗೆ ಬರದಿದ್ದರೆ ಒಂಥರದ ಶೂನ್ಯ ಕವಿತೆಯಲ್ಲಿ ಕವಿದುಬಿಡುತ್ತದೆ. ಹಾಗಂತ ಸುಮ್ಮನೆ ಹಾಡಾಗಿಸಲು ಹೊರಟರೂ ತನ್ನ ‘ಮ್ಯಾಜಿಕ್’ ಕಳೆದುಕೊಂಡು ಬಿಡುತ್ತದೆ. ಇಂಥಲ್ಲಿ ನನ್ನ ನೆರವಿಗೆ ಬಂದವರು ದ.ರಾ.ಬೇಂದ್ರೆ, ಚಂದ್ರಶೇಖರ ಕಂಬಾರ ಮತ್ತು ಎಚ್.ಎಸ್.ಶಿವಪ್ರಕಾಶ. ಇವರ ಕಾವ್ಯದ ಭಾವಭಂಗಿಗಳನ್ನು ಹತ್ತಿರದಿಂದ ಓದಲು ಯತ್ನಿಸಿದ್ದು ನನ್ನ ನೆರವಿಗೆ ಬಂತೇನೊ. ಇದರ ಜೊತೆಗೆ ಜಗತ್ತಿನ ಅತ್ಯುತ್ತಮ ಕಾವ್ಯದ ಒಡನಾಟವನ್ನು ನನಗೆ ಒದಗಿಸುವ ಹಿರಿಯರಾದ ಎಚ್.ಎಸ್.ರಾಘವೇಂದ್ರರಾವ್, ವಿಜಯಾ ಗುತ್ತಲ್, ಓ.ಎಲ್.ನಾಗಭೂಷಣಸ್ವಾಮಿ, ನಟರಾಜ್ ಹುಳಿಯಾರ್ ಅವರಿಗೆ ನಾನು ಯಾವಾಗಲೂ ಕೃತಜ್ಞ. ಹಾಗೆಯೇ ಕೆ.ವೈ.ನಾರಾಯಣಸ್ವಾಮಿ ಅವರು ಜನಪದ ಕಾವ್ಯದ ಲಯ ವಿಧಾನಗಳ ಕುರಿತ ಕೊಟ್ಟ ತಿಳುವಳಿಕೆ ನನ್ನ ಮನಸ್ಸಿನಲ್ಲಿ ಕೂತುಬಿಟ್ಟಿದೆ. ಕವಿಯ ಜೋಳಿಗೆಯಲ್ಲಿ ಎಷ್ಟೆಲ್ಲ ಜನರ ನೆರವಿನ ಹಸ್ತ ಕೈ ಚಾಚಿರುತ್ತದೆ. ಇದರ ಹಂಗು ಹರಿಯುವುದು ಕಷ್ಟ. 

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಾತಾವರಣ, ಗ್ರಂಥಾಲಯ ನನಗೆ ಹಲವು ಭಾಷೆಗಳ ಕಾವ್ಯದ ಸ್ಪಂದನೆ ಒದಗಿಸಿದೆ. ಹಾಗೆಯೇ ಸರಿ ರಾತ್ರಿಯಲ್ಲಿ ಕಾವ್ಯದ ಚರ್ಚೆಗೆ ಒದಗಿಬರುವ ಮಿತ್ರರಾದ ಬಸವರಾಜ ಡೋಣೂರು, ಗಣೇಶ್ ಪವಾರ್, ಅಪ್ಪಗೇರೆ ಸೋಮಶೇಖರ, ಟಿ.ಡಿ.ರಾಜಣ್ಣ, ಎಂ.ಮಹೇಂದ್ರ. ಜೊತೆಗೆ ತಮ್ಮ ತಾರುಣ್ಯದ ಕಾವ್ಯ ಪರಿಮಳವನ್ನು ಕವಿತೆಗಳಲ್ಲಿ ಬರೆದು ಕ್ಯಾಂಪಸ್ಸಿನಲ್ಲಿ ಅಡ್ಡಾಡುವ ಅನೇಕ ಸಂಶೋಧನಾ ವಿದ್ಯಾರ್ಥಿಗಳ ಜೊತೆಗಿನ ಚರ್ಚೆಯೂ ಅಪರೂಪದ್ದು. ಅವರೆಲ್ಲರನ್ನು ನನೆಪಿಸಿಕೊಳ್ಳುವುದು ಖುಶಿಯ ಸಂಗತಿ. ಇನ್ನು ನನ್ನ ಕವಿತೆಗಳೊಟ್ಟಿಗೆ ಪಯಣ ಸಿದವರು ಸಂಗಾತಿ ಸರ್ವಮಂಗಳ, ಮಕ್ಕಳಾದ ನೌಮಿತಾ ಹಾಗು ಅನುರಾಗ, ಕವಿತೆಗಳ ಲೋಕಕ್ಕೆ ಕರೆದುಕೊಂಡು ಬಂದ ಅಪ್ಪ. ಎಲ್ಲರೂ ಇಲ್ಲಿನ ಕವಿತೆಗಳ ಜೊತೆಗಿದ್ದಾರೆ. 

 ಬೆನ್ನುಡಿ ಬರೆದವರು ನೆಚ್ಚಿನ ಹಿರಿಯ ಕವಿ ಎಚ್.ಎಸ್.ಶಿವಪ್ರಕಾಶರು. ಅವರ ಕಾವ್ಯ ಸೂಚನೆಗಳು ನನ್ನನ್ನು ಪೊರೆದಿವೆ. ವಂದನೆಗಳು ಅವರ ಕಾವ್ಯ ಪ್ರೀತಿಗೆ ಅದರ ರೀತಿಗೆ.  ಪಲ್ಲವ ವೆಂಕಟೇಶ್ ಅವರ ಸ್ನೇಹ ದೊಡ್ಡದು. ನನ್ನ ಹಲವು ಕೃತಿಗಳನ್ನು ಓದುಗರಿಗೆ ಒದಗಿಸಿ ಬರೆಯುವ ಉತ್ಸಾಹ ಹೆಚ್ಚಿಸಿದವರು. ಈಗ ಈ ಕಾವ್ಯ ಸಂಗ್ರಹವನ್ನು ಪ್ರಕಟಿಸುತ್ತಿದ್ದಾರೆ. ಅವರ ಎಣೆಯಿಲ್ಲದ ಪ್ರೀತಿಗೆ ಆಭಾರಿ. ಮುಖಪುಟದ ಕಲಾವಿದೆ ಸೌಮ್ಯ ಕಲ್ಯಾಣಕರ್ ಅವರ ವಿಶ್ವಾಸಕ್ಕೆ ಉಪಕೃತನಾಗಿರುವೆ. ಕಾವ್ಯ ಪ್ರೇಮಿಗಳಿಗೆ ಇಲ್ಲಿಯ ಕವಿತೆಗಳು ಮುಡಿಪು.

- ವಿಕ್ರಮ ವಿಸಾಜಿ
 

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...