ಇಂದಿನ ಮಾನವನಿಗಾಗಿ ಹಾಗೂ ಮುಂದಿನ ಪೀಳಿಗೆಯ ಹಿತಕ್ಕಾಗಿ ಇರುವ ಕಾಡನ್ನಾದರೂ ಉಳಿಸಿ


‘ವನಸಂಪತ್ತು ಮಾನವನಿಗೆ ಪ್ರಕೃತಿದತ್ತ ವರ. ಮರಗಳೇ ಮಾನವನ ಮೊದಲ ಮನೆ. ಆದಿಮಾನವನು ವನ್ಯ ಮೃಗಗಳೊಂದಿಗೆ ಹಾಸುಹೊಕ್ಕಾಗಿ ಬದುಕು ಸಾಗಿಸಿದವ. ಬೇಟೆಯಿಂದ ಬದುಕು ಪ್ರಾರಂಭ’ ಎನ್ನುತ್ತಾರೆ ಅಜ್ಜಂಪುರ ಕೃಷ್ಣಸ್ವಾಮಿ. ಅವರು ಎಚ್. ಎ. ಪುರುಷೋತ್ತಮ ರಾವ್ ಅವರ ‘ಕಾಡು ಪ್ರತಿಭೆ ಮಾರಪ್ಪ’ ಬದುಕು ಸಾಧನೆ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.

ವನಸಂಪತ್ತು ಮಾನವನಿಗೆ ಪ್ರಕೃತಿದತ್ತ ವರ. ಮರಗಳೇ ಮಾನವನ ಮೊದಲ ಮನೆ. ಆದಿಮಾನವನು ವನ್ಯ ಮೃಗಗಳೊಂದಿಗೆ ಹಾಸುಹೊಕ್ಕಾಗಿ ಬದುಕು ಸಾಗಿಸಿದವ. ಬೇಟೆಯಿಂದ ಬದುಕು ಪ್ರಾರಂಭ. ಕೆಲವು ಕಾಳುಗಳು ತಿನ್ನಲು ಬರುತ್ತವೆ, ಅವನ್ನು ಬಿತ್ತಿದರೆ ಮರು ಕಾಳು ಪಡೆಯಬಹುದು ಎಂಬ ಅರಿವು ಮೂಡಿದಾಗ ಕೃಷಿಯ ಮೊದಲ ಹೆಜ್ಜೆ. ಬೇಟೆ ಜೀವನದಿಂದ ಕೃಷಿಗೆ ಒಂದು ದಾಪು. ಕಾಡು ಕಡಿದು, ನೆಲ ಉತ್ತು ಬೀಜ ಬಿತ್ತಿದಾಗ ಸಮೃದ್ಧ ಬೆಳೆ. ಬರುಬರುತ್ತಾ ಬೆಳೆಯು ಇಳಿಮುಖವಾದಾಗ ಮತ್ತೆ ಬೇರೆಡೆ ಕಾಡು ಕಡಿದು ಹೊಸ ಬೆಳೆ.

ವಲಸೆಗೆಂದು ಕಟ್ಟಿಕೊಂಡ ಕೇರಿ ಬೆಳೆದು ಗ್ರಾಮವಾಯಿತು. ಜನಸಂಖ್ಯೆ ಬೆಳೆದಂತೆ ಬೇಡಿಕೆಗಳೂ ಹೆಚ್ಚಿ ಗ್ರಾಮಗಳು ಊರುಗಳಾದವು. ಊರುಗಳು ಪಟ್ಟಣಗಳಾದವು. ಪಟ್ಟಣಗಳು ನಗರ, ಮಹಾನಗರಗಳಾದವು. ಆಹಾರ ಬೆಳೆಯಲು, ಮನೆ ಮಠಗಳನ್ನು ಕಟ್ಟಲು, ಕೈಗಾರಿಕೆಗಳಿಗೆ ಜಲಾಶಯಗಳ ನಿರ್ಮಾಣಕ್ಕೆ ಪುನರ್ವಸತಿಗೆ, ಸಾರಿಗೆ ವ್ಯವಸ್ಥೆಗಳಿಗೆ ಹೀಗೆ ಎಲ್ಲಕ್ಕೂ ಕಾಡುಕಡಿದೇ ಮುಂದಿನ ಹೆಜ್ಜೆ. ಪ್ರಗತಿಯ ನೆವದಲ್ಲಿ ಮಿತಿಮೀರಿದ ಅರಣ್ಯ ನಾಶ. ವನ್ಯ ಜೀವಿಗಳ ನೆಲೆ ತಪ್ಪಿ ಅವು ನಾಡ ಹಾದಿಗೆ. ಪ್ರಕೃತಿಯ ಕೋಟಿ ಕೋಟಿ ವರ್ಷಗಳ ಸಾಧನೆ, ಮಾನವನ ವಿಧ್ವಂಸಕ ಪ್ರವೃತ್ತಿಯಿಂದ ಕೆಲವೇ ದಶಕಗಳಲ್ಲಿ ಧ್ವಂಸ. ಮುಗಿಲೇರಿದ ಪರಿಸರ ಮಾಲಿನ್ಯ. ಉಸಿರಾಡಲು ಶುದ್ಧ ಗಾಳಿಗೇ ಕೊರತೆ. ಪ್ರಕೃತಿಯ ವಿಕೋಪದ ಅತಿವೃಷ್ಟಿ, ಅನಾವೃಷ್ಟಿ, ಕೇಳರಿಯದ ಭೂಕಂಪ, ಸುನಾಮಿಗಳ ಹಾವಳಿ.

ಇಂದಿನ ಮಾನವನಿಗಾಗಿ ಹಾಗೂ ಮುಂದಿನ ಪೀಳಿಗೆಯ ಹಿತಕ್ಕಾಗಿ ಇರುವ ಕಾಡನ್ನಾದರೂ ಉಳಿಸಿ, ಬೆಳೆಸುವುದು ಇಂದು ಸರ್ಕಾರಗಳ ಆದ್ಯ ಕರ್ತವ್ಯ. ಪ್ರಜೆಗಳೆಲ್ಲರ ಹೊಣೆ. ಇದಕ್ಕಾಗಿಯೇ ಶತಮಾನಕ್ಕೂ ಮೀರಿದ ಕಾಲಮಾನದ ಒಂದು ಪ್ರತ್ಯೇಕ ಕಾರ್ಯರಂಗ-ಅರಣ್ಯ ಇಲಾಖೆ, ಜನರ ಹಿತಕ್ಕಾಗಿಯೇ ರೂಪಿಸಲ್ಪಟ್ಟ 'ಅರಣ್ಯ ನೀತಿ' ಅರಣ್ಯ ರಕ್ಷಣೆ, ಪಾಲನೆಗಳಿಗೆ ನೇಮಕಗೊಂಡವರು ವನಪಾಲಕ ಸಿಬ್ಬಂದಿ.

ಈ ಸಿಬ್ಬಂದಿಗಳಲ್ಲಿ ಕರ್ತವ್ಯ ನಿಷ್ಠರೆಷ್ಟು ಮಂದಿ. ಈ ದಿಸೆಯಲ್ಲಿ ಒಬ್ಬ ವ್ಯಕ್ತಿ ಏನೆಲ್ಲ ಸಾಧಿಸಬಲ್ಲ ಎಂಬುದನ್ನು ಶ್ರೀ ಎಚ್.ಎ. ಪುರುಷೋತ್ತಮರಾವ್‌ರವರು ತಮ್ಮ 'ಕಾಡು ಪ್ರತಿಭೆ ಮಾರಪ್ಪ' ಕೃತಿಯಲ್ಲಿ ಸರಳ ಕನ್ನಡದಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಮಾತ್ರವಲ್ಲದೆ ಅರಣ್ಯ ಪಾಲನೆ, ರಕ್ಷಣೆ, ನಿರ್ವಹಣೆ ಹಾಗೂ ಅವುಗಳ ಫಸಲುಗಳ, ಅದರಲ್ಲಿಯೂ ಹುಣಸೆ ಇಂತಹ ದಿನನಿತ್ಯದ ಅವಶ್ಯಕತೆಗಳ ಬಗ್ಗೆ, ಅಂಕಿಅಂಶಗಳ ನೆರವಿನಿಂದ ವಿಶ್ಲೇಷಿಸಿದ್ದಾರೆ. ವನ್ಯ ಪ್ರಾಣಿಗಳ ಬಗ್ಗೆ ಬಹಳ ಉತ್ತಮ ರೀತಿಯಲ್ಲಿ ನಿರೂಪಣೆ ಮಾಡಿರುವುದು ಇವುಗಳ ವಿಚಾರದಲ್ಲಿ ಅವರಿಗಿರುವ ವಿಶೇಷ ಆಸಕ್ತಿಯನ್ನು ತೋರಿಸುತ್ತದೆ. ಇದಕ್ಕೆ ಶ್ರೀ. ಎಚ್.ಎ. ಪುರುಷೋತ್ತಮ ರಾವ್‌ರವರು ನಿಜಕ್ಕೂ ಅಭಿನಂದನಾರ್ಹರು.

ಈ ಕೃತಿಯ ಕೇಂದ್ರಬಿಂದು ದಿವಂಗತ ಶ್ರೀ ಬಿ. ಮಾರಪ್ಪನವರು. ಶ್ರೀಯುತರು 'ಕರ್ಮಣ್ಯವಾಧಿಕಾರಸ್ತೇ ಮಾ ಫಲೇಷು ಕದಾಚನ' ಎಂಬ ಗೀತೋಕ್ತಿಯನ್ನು ಅಕ್ಷರಶಃ ಪಾಲಿಸಿಕೊಂಡು ಬಂದ ಒಬ್ಬ ಸಾಧಕ. ನಾನು ಅವರನ್ನು ಬಹಳ ಸನಿಹದಲ್ಲಿ ಕಂಡವನು. ನಮ್ಮದು ನಾಲ್ಕು ದಶಕಗಳಿಗೂ ಮೀರಿದ ನಂಟು. ಅವರು ಕಷ್ಟ ಸಹಿಷ್ಣುಗಳಾಗಿದ್ದರು. ವ್ಯಕ್ತಿ ಗಡಸು. ಮಾತು ಒಮ್ಮೊಮ್ಮೆ ಒರಟು. ಆದರೆ ಅವರ ಹೃದಯ ವೈಶಾಲ್ಯತೆ ಒಂದು ದೊಡ್ಡ ಗುಣ. ಅರಣ್ಯಗಳ ಬಗ್ಗೆ ಅವರಿಗಿದ್ದ ಕಾಳಜಿ ಅಪಾರ. ಒಳಿತೋ, ಕೆಡುಕೋ, ಒಂದು ಸಿಗರೇಟು ಪ್ಯಾಕ್ ಮತ್ತು ಫ್ಲಾಸ್ಕಿನಲ್ಲಿ ಕಾಫಿ/ಟಿ ಇವುಗಳೊಡಗೂಡಿ ಬೆಳಗೆದ್ದು ಹೊರಟರೆ ಅರಣ್ಯ ಕ್ಷೇತ್ರಗಳೇ ಅವರ ಪ್ರಪಂಚ. ಹೊತ್ತುನೆತ್ತಿಗೇರಿದುದರ ಪರಿವೆಯೇ ಇರುತ್ತಿರಲಿಲ್ಲ. ವನೀಕರಣದಲ್ಲಿ ಅವರಷ್ಟು ಮುತುವರ್ಜಿ ವಹಿಸಿದ ಅರಣ್ಯಾಧಿಕಾರಿ ಬಹು ವಿರಳ. ಮನದಲ್ಲಿ ಯಾವಾಗಲೂ ಗಿಡ, ಮರಗಳ ಯೋಚನೆಯೇ ತುಂಬಿರುತ್ತಿತ್ತು. ಸರ್ಕಾರಿ ವಾಹನಗಳ ಸೌಲಭ್ಯವಿಲ್ಲದ ಆ ಕಾಲದಲ್ಲಿ ಮಾರಪ್ಪನವರು ತಮ್ಮ ಆಸ್ಟಿನ್ ಕಾರನ್ನು (ಎ-40) ಸ್ವಂತ ಬಳಕೆಗಿಂತಾ ಸಸಿಗಳನ್ನು ಸಾಗಿಸುವುದಕ್ಕೆ ಹೆಚ್ಚು ಬಳಸುತ್ತಿದ್ದರು.

ಶ್ರೀ ಮಾರಪ್ಪನವರು ಕೋಲಾರ ಜಿಲ್ಲಾ ಅರಣ್ಯಾಧಿಕಾರಿಗಳಾಗಿದ್ದಾಗ 'ವನೀಕರಣ'ದಲ್ಲಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಬೀಳು ಜಾಗ ಕಂಡಲ್ಲೆಲ್ಲಾ ಅವರ ಗಮನ ಅವುಗಳ ವನೀಕರಣದ ಬಗ್ಗೆ ಆಗಿನ ಕಾಲದ 'ಬಡ್ಜೆಟ್’ ನಲ್ಲಿ ವನೀಕರಣಕ್ಕೆ ಹೆಚ್ಚು ಹಣದ ಮಂಜೂರಾತಿಯಿಲ್ಲದೆ, ಒದಗಿಸಿರುವ ಹಣದಲ್ಲಿಯೇ ಆದಷ್ಟೂ ವಿಸ್ತೀರ್ಣದ ಜಾಗವನ್ನು ಅಳವಡಿಸಿಕೊಳ್ಳುವುದು ಮಾರಪ್ಪನವರ ಛಲ. ಇದಕ್ಕೆ ತೋಟಗಾರಿಕೆ ಇಲಾಖೆಯ ಆಗಿನ ಡೈರೆಕ್ಟ‌ರ್- ಇನ್ನೊಬ್ಬ ಕರ್ತವ್ಯನಿಷ್ಠ ಅಧಿಕಾರಿ -ಡಾ. ಮರಿಗೌಡರ ಕಣ್ಣು ತಪ್ಪಿಸಿ. ಮಾರಪ್ಪನವರು ತಮ್ಮ ಕಾರ್ಯ ಸಾಧಿಸಿಕೊಳ್ಳಬೇಕಾಗಿತ್ತು. ತಡವಾದರೆ ಅಲ್ಲಿ ಮರಿಗೌಡರ ಕೈಚಳಕದಿಂದ ಮಾವಿನ ಮರಗಳು ಎದ್ದುಬಿಡುತ್ತಿದ್ದವು.

ಮಾರಪ್ಪನವರು ಜಾಗ ಹಿಡಿದು ಮೊದಲು ದೂರ ದೂರದ ಅಂತರದಲ್ಲಿ ಸಾಲ್ಟರಂಡಿಗಳನ್ನು ತೋಡಿಸಿ ಅದೇ ಮಳೆಗಾಲದಲ್ಲಿ ನೀಲಗಿರಿ ಸಸಿಗಳನ್ನು ನೆಡಿಸಿ ಜೊತೆಗೇ ಮಿಶ್ರ ಜಾತಿಯ ಅರಣ್ಯ ಧೃವಫಸಲುಗಳ ಮರಜಾತಿಗಳ ಬೀಜ ಬಿತ್ತಿಸುತ್ತಿದ್ದರು. ಹಾಗೂ ಸಾಲ್ಚರಂಡಿಗಳನ್ನು ತೋಡಿಸಿ ಮಧ್ಯೆ ಹೆಚ್ಚಾಗಿ ಒಳ್ಳೆಯ ತಳಿಯ ಹುಣಸೇ ಸಸಿಗಳನ್ನು ನೆಡಿಸುತ್ತಿದ್ದರು. ಸಕಾಲದಲ್ಲಿ ಬೀಜ ಬಿತ್ತಿಸುವುದು, ಸಸಿ ನೆಡಿಸುವುದು ಇವನ್ನು ತಮ್ಮ ಸ್ವಂತ ಉಸ್ತುವಾರಿಯಲ್ಲಿ ಮಾಡಿಸುತ್ತಿದ್ದುದರಿಂದ ಇವರ ಕಾಲದ ನೆಡುತೋಪುಗಳು ಗುಣಮಟ್ಟದ್ದಾಗಿರುತ್ತಿದ್ದವು. ಇಷ್ಟಾದರೂ ಇವರ ಕಾರ್ಯ ವೈಖರಿಯನ್ನು ಟೀಕಿಸುವ ಮಂದಿ, ದೃಷ್ಟಿಯವರೂ ಇದ್ದರು. ಅವರಿಗೆ ಮಾರಪ್ಪನವರ ದೂರದೃಷ್ಟಿಯ ಅರಿವಿದ್ದರೆ ತಾನೆ.

ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಯಾಗಿ ತಮ್ಮ ಇತರೆ ಹೊಣೆಗಾರಿಕೆಗಳಿದ್ದರೂ, ಶ್ರೀ ಮಾರಪ್ಪನವರು ನೆಡುತೋಪುಗಳ ನಿರ್ಮಾಣಕ್ಕೆ ಆದ್ಯತೆ ಕೊಡುತ್ತಿದ್ದು, ಇಂದು ಅವರ ಕೊಡುಗೆಯಿಂದ ಕೋಲಾರ ಜಿಲ್ಲೆಯಲ್ಲಿ ಅನೇಕ ಉತ್ತಮ 'ಪ್ಲಾಂಟೇಷನ್'ಗಳು ಬೆಳೆದು ನಿಂತಿವೆ. ಕೋಲಾರದ ಬಳಿಯ 'ಅಂತರಗಂಗೆ'ಯ ಕಲ್ಲುಬಂಡೆಗಳ ಸಂದುಗಳಲ್ಲಿನ ವನೀಕರಣ ಮಾರಪ್ಪನವರ ಹೆಸರನ್ನು ಚಿರಸ್ಥಾಯಿಯಾಗಿ ಮಾಡಿದೆ. ಕೋಲಾರ ಮಾತ್ರವಲ್ಲ, ಇವರು ಸೇವೆ ಸಲ್ಲಿಸಿದ ಎಲ್ಲಾ ಸ್ಥಳಗಳಲ್ಲಿಯೂ ಈ ರೀತಿಯ ಉತ್ತಮ ಕೆಲಸ ಕಂಡುಬರುತ್ತಿತ್ತು.

ಯುವ ಪೀಳಿಗೆಯ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಶ್ರೀ ಮಾರಪ್ಪನವರ ಛಲ, ಆಸಕ್ತಿ ದೈಹಿಕ ಸಹಿಷ್ಣುತೆ, ಕಾರ್ಯನಿಷ್ಠೆ ಇವುಗಳು ಅನುಕರಣೀಯ. ಈ ದಿಸೆಯಲ್ಲಿ ಶ್ರೀ ಎಚ್.ಎ. ಪುರುಷೋತ್ತಮರಾವ್‌ರವರು ಶ್ರೀ ಮಾರಪ್ಪನವರ ಸಾಧನೆಗಳನ್ನು ಯಥಾವತ್ತಾಗಿ ಬೆಳಕಿಗೆ ತಂದು, ಅರಣ್ಯ ವೃತ್ತಿಗೇ ಒಂದು ಮಹದುಪಕಾರವನ್ನು ಮಾಡಿದ್ದಾರೆ. ನಮ್ಮ ಯುವ ಪೀಳಿಗೆಯ ವನಪಾಲಕರು ಸಂಗ್ರಹ ಯೋಗ್ಯವಾದ ಈ ಕೃತಿಯನ್ನು ಕೊಂಡು ಓದಿ, ತಾವುಗಳೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವನಸಂಪತ್ತಿನ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂಬ ಆಶಾಭಾವನೆ ಹೊಂದಿದ್ದೇನೆ.

-ಅಜ್ಜಂಪುರ ಕೃಷ್ಣಸ್ವಾಮಿ, ಭಾ.ಅ.ಸೇ. (ನಿ.)

MORE FEATURES

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...

‘ಪಾತಕ ಲೋಕ’ ತರುಣರಿಗೆ ಅತ್ಯಂತ ಆಕರ್ಷಣೀಯ ವಸ್ತು

16-05-2024 ಬೆಂಗಳೂರು

"ನಾ ಕಂಡ ಈ ಭೂಗತ ಜಗತ್ತಿನಲ್ಲಿ ಬೆಂಗಳೂರು ನಗರ ಹಾಗೂ ಮುಂಬೈ ನಗರದ ರೌಡಿಗಳ ಸಂಪರ್ಕ ಹಾಗೂ ಮಂಗಳೂರು ನಗರದ ರೌಡಿಗಳ ...

ಪ್ರೀತಿ ಅರಳಿದರೆ ಬದುಕು ತೆರೆದಂತೆ

15-05-2024 ಬೆಂಗಳೂರು

"ಬದುಕು ಭಾವತೆರೆಯ ಮೇಲಿನ ತಾವರೆ, ಪ್ರತಿಯೊಂದು ಭಾವದಲೆಗೂ ಬದುಕು ಕಂಪಿಸುತ್ತದೆ. ಬದುಕಿನಲಿ ಕಾಡಿದ ಪ್ರೇಮ, ವಿರಹ,...