ಜೀವಂತಿಕೆ ತುಂಬಿದ ಬರಹಗಳು


"ಶಶಿಧರ ಹಾಲಾಡಿ ಅವರು ಬಾಲ್ಯ ಕಳೆದದ್ದು ಅವರ ಹಳ್ಳಿಯ ಪರಿಸರದ ನಿಸರ್ಗದ ಮಡಿಲಲ್ಲಿ. ಹಾಗಾಗಿ ಆ ಪರಿಸರ ಅವರ ಮೇಲೆ ಗಾಢವಾದ ಪ್ರಭಾವ ಬೀರಿದೆ. ಪರಿಸರದ ಒಡನಾಡಿಯಾದ ಹೂವು, ಮಾವು, ಗಿಡ ಬಳ್ಳಿ, ಮುಂತಾಗಿ ಕಾಡಿನಲ್ಲಿರಬಹುದಾದ ಅನೇಕ ಕ್ರಿಯಗಳ ಆಳ ಅಗಲ, ಅರಿವು ಮೂಡಿದ ಪರಿಣಾಮವಾಗಿ, ಅವುಗಳೇ ಈ ಪ್ರಬಂಧ ಸಂಕಲನಕ್ಕೆ ವಸ್ತುವಾಗಿವೆ," ಎನ್ನುತ್ತಾರೆ ದ್ವಾರನಕುಂಟೆ ಪಾತಣ್ಣ. ಅವರು ಶಶಿಧರ ಹಾಲಾಡಿ ಅವರ ‘ಹಾಲಾಡಿಯಲ್ಲಿ ಹಾರುವ ಓತಿ’ ಕೃತಿ ಕುರಿತು ಬರೆದ ವಿಮರ್ಶೆ.

ಹಾಲಾಡಿಯಲ್ಲಿ ಹಾರುವ ಓತಿ
ಲೇ: ಶಶಿಧರ ಹಾಲಾಡಿ
ಪ್ರ: ಅಭಿನವ ಪ್ರಕಾಶನ ಬೆಂಗಳೂರು
ಬೆಲೆ ರು: 150/-


(ಶಶಿಧರ ಹಾಲಾಡಿಯವರ ಹೊಸ ಪ್ರಬಂಧ ಸಂಕಲನದ ಕುರಿತು ಬರಹ)
An essay is lyric in Prose `ಲಲಿತ ಪ್ರಬಂಧವು ಗದ್ಯ ಸ್ವರೂಪದ ಭಾವಗೀತೆ' ಎಂಬ ಮಾತೊಂದಿದೆ. ಈ ಮಾತು ಲಲಿತ ಪ್ರಬಂಧದ ಸಾಹಿತ್ಯಕ ಮಹತ್ವವನ್ನು ಸೂಚಿಸುತ್ತದೆ. ಲಲಿತ ಪ್ರಬಂಧಕ್ಕೆ ನಿರ್ದಿಷ್ಟವಾದ ವಸ್ತುವಿಲ್ಲ, ಊಹೆ, ಅನಿಸಿಕೆ, ಅನುಭವ, ವಿಡಂಬನೆ ಯಾವುದೂ ಆಗಬಹುದು ಎಂದು ಕೆಲವರು ಭಾವಿಸಿ, ಪ್ರಬಂಧ ಪ್ರಕಾರವನ್ನು ಸಣ್ಣದಾಗಿ ಉಪೇಕ್ಷಿಸುವುದುಂಟು. ಆದರೆ, ವಾಸ್ತವ ಸ್ಥಿತಿ ತುಸು ಭಿನ್ನ. ಲಲಿತ ಪ್ರಬಂಧಗಳ ವಸ್ತು ಪುರಾಣ, ಜಾನಪದ, ಪ್ರಚಲಿತ ರಾಜಕೀಯ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಹಾಗೂ ಸಾಂಸ್ಕೃತಿಕ ಸ್ಥಿತಿಗತಿಗಳಾಗಿರುತ್ತವೆ. ಆದರೆ ಅವುಗಳನ್ನು ನಿರೂಪಿಸುವ, ಹೇಳಿರುವ ಕ್ರಮ ಬೇರೆಯದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದರೆ, ಶಶಿಧರ ಹಾಲಾಡಿ ಅವರು ಬಾಲ್ಯ ಕಳೆದದ್ದು ಅವರ ಹಳ್ಳಿಯ ಪರಿಸರದ ನಿಸರ್ಗದ ಮಡಿಲಲ್ಲಿ. ಹಾಗಾಗಿ ಆ ಪರಿಸರ ಅವರ ಮೇಲೆ ಗಾಢವಾದ ಪ್ರಭಾವ ಬೀರಿದೆ. ಪರಿಸರದ ಒಡನಾಡಿಯಾದ ಹೂವು, ಮಾವು, ಗಿಡ ಬಳ್ಳಿ, ಮುಂತಾಗಿ ಕಾಡಿನಲ್ಲಿರಬಹುದಾದ ಅನೇಕ ಕ್ರಿಯಗಳ ಆಳ ಅಗಲ, ಅರಿವು ಮೂಡಿದ ಪರಿಣಾಮವಾಗಿ, ಅವುಗಳೇ ಈ ಪ್ರಬಂಧ ಸಂಕಲನಕ್ಕೆ ವಸ್ತುವಾಗಿವೆ. ಅವರು ಕಂಡುಂಡ ವಸ್ತುವಿನ ಬಗ್ಗೆ ಆಳವಾಗಿ ಅಧ್ಯಸಿಸಿ, ಕಣ್ಣಿಗೆ ಕಟ್ಟುವಮತೆ ಇಲ್ಲಿನ ಪ್ರಬಂಧಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಆ ಮೂಲಕ ಅವರು ಕನ್ನಡ ಸಾಹಿತ್ಯಕ್ಕೆ ಒಂದು ವಿನೂತನ ಸ್ವರೂಪದ ಪ್ರಬಂಧ ಸಂಕಲನ ಕೊಟ್ಟಿದ್ದಾರೆ.

ಶಶಿಧರ ಹಾಲಾಡಿ ಅವರ `ಹಾಲಾಡಿಯಲ್ಲಿ ಹಾರುವ ಓತಿ' ಶೀರ್ಷಿಕೆಯ ಪ್ರಬಂಧವೇ ವಿಶಿಷ್ಟವಾದದ್ದು. ತೇಜಸ್ವಿಯವರ `ಕರ್ವಾಲೋ' ಕೊನೆಯಲ್ಲಿ ಬರುವ ಹಾರುವ ಓತಿಯ ವಿವರಣೆಗಳೊಂದಿಗೆ, ತಾನು ಬಾಲ್ಯದಲ್ಲಿ ತನ್ನೂರಿನ ಅಡಿಕೆ ತೋಟದಲ್ಲಿ ಕಂಡ ಓತಿಯ ವಿವಿಧ ಹಂತಗಳನ್ನು ಮೂರು ದಶಕಗಳ ಕಾಲ ನೋಡುತ್ತಾ ಬಂದಿರುವ ಶಶಿಧರ ಅವರು, ಮೊದಲಿಗೆ ಡಬ್ಬಾ ಕ್ಯಾಮೆರಾದಿಂದ ಅದನ್ನು ಚಿತ್ರಿಸಿ, ನಂತರ ಬಡ್ತಿ ಹೊಂದಿ ಡಿಜಿಟಲ್ ಕ್ಯಾಮೆರಾದ ವರೆಗೆ ಹಾರುವ ಓತಿಯ ಚಲನವಲನ ಗಳನ್ನುಚಿತ್ರಿಸಿದ್ದಾರೆ; ಆ ಮೂಲಕ ಓತಿಯ ಬೆಳವಣಿಗೆ, ಅದರ ಜೀವನ ವೃತ್ತಾಂತವನ್ನು ಕಂಡವರು. ಅದರ ಬದಲಾವಣೆಯ ಸ್ಥೂಲ ಪರಿಚಯ ಮಾಡಿಸಿ, ಓದುಗರಿಗೆ `ಇದು ಹೀಗಿದೆಯಾ? ಇದರ ಬೆಳವಣಿಗೆ ಹೀಗೆಲ್ಲಾ ಆಗುವುದಾ?' ಎಂದು ಗಮನ ಸೆಳೆಯುವಂತೆ ಚಿತ್ರಿಸಿದ್ದಾರೆ. ಆದರೆ ನಮಗೆಲ್ಲಾ ಬೆರಗು ಹುಟ್ಟಿಸುವ ಅದೇ ಓತಿಯ ಬದುಕು, ಸ್ಥಳೀಯ ವ್ಯಕ್ತಿ ಮಾಬ್ಲಣ್ಣನಿಗೆ ಸಾಮಾನ್ಯ ಸಂಗತಿಯಾಗಿದ್ದು ಸಹ ನಿರೂಪಿತವಾಗಿದೆ.

ಇಲ್ಲಿನ ಇನ್ನೊಂದು ಪ್ರಬಂಧ `ಮಿಣುಕು ಹುಳಗಳ ಮಾಯಾಲೋಕ' ಪ್ರಬಂಧದಲ್ಲಿ, ಸಂಜೆಯ ಹೊತ್ತಿನಲ್ಲಿ ಗದ್ದೆಗಳ ಮೇಲ್ಭಾಗದಲ್ಲಿ ಸುತ್ತುವ ಮಿಣುಕು ಹುಳಗಳು ಸೂಸುವ ಬೆಳಕಿನಿಂದ ಕತ್ತಲೆಯನ್ನು ಓಡಿಸಿ, ಬೆಳಕನ್ನು ನೀಡುವ ಪರಿಯನ್ನು ವಿವರಿಸುತ್ತಾ, ಮಿಣುಕು ಹುಳಗಳು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಪರಸ್ಪರ ಆಕರ್ಷಿಸುವ ಸಲುವಾಗಿ ಈ ರೀತಿ ಅವು ಬೆಳಕನ್ನು ಬೀರುತ್ತವೆ ಎನ್ನುವ ವಿಜ್ಞಾನಿಗಳ ಮಾತನ್ನು ಉಲ್ಲೇಖಿಸಿರುವುದು, ಅವುಗಳ ಮಹತ್ವದ ಕುರಿತಾದ ತಿಳುವಳಿಕೆ ಮಾಡುತ್ತದೆ. ಈಗಾಗಲೇ `ಅಬ್ಬೆ' ಕಾದಂಬರಿಯನ್ನು ಪ್ರಕಟಿಸಿ, ಪ್ರಸಿದ್ಧರಾಗಿರುವ ಶಶಿಧರ ಹಾಲಾಡಿಯವರು, ಆ ಕಾದಂಬರಿಯಲ್ಲಿ ಬಯಲು ಸೀಮೆಯ ಪರಿಸರವನ್ನು ಚಿತ್ರಿಸಿದ್ದರೆ, ಈ ಸಂಕಲನದಲ್ಲಿರುವ ಪ್ರಬಂಧಗಳಲ್ಲಿ ಮಲೆನಾಡು ಮತ್ತು ಕರಾವಳಿಯ ನಿತ್ಯಹರಿದ್ವರ್ಣ ಕಾಡುಗಳ ಪರಿಸರವನ್ನು ಚಿತ್ರಿಸಿದ್ದಾರೆ. ಅಬ್ಬೆ ಕಾದಂಬರಿಯಲ್ಲಿ, `ಅಬ್ಬೆ' ಎಂಬ ಅಪರೂಪದ ಜೇಡದ ಕುರಿತು ಬರೆದು, “ಅಬ್ಬೆ ಕಚ್ಚಿದರೆ ಹೆಬ್ಬಾಗಿಲಿಗೆ ಬರುವಷ್ಟು ಸಮಯವಿಲ್ಲವೆಂಬ” ಗಾದೆಯ ಹಿನ್ನೆಲೆಯಲ್ಲಿ ಕಥೆಯನ್ನು ಬೆಳೆಸುತ್ತಾ ಹೋಗುವ ಪರಿ ಗಮನ ಸೆಳೆದಿದೆ. ಪರಿಸರವು ಆ ಕಾದಂಬರಿಯಲ್ಲಿ ಪ್ರಧಾನವಾಗಿ ನಿರೂಪಿತವಾಗಿರುವುದು ಸಹ ವಿಶೇಷ.

ಈ ಪ್ರಬಂಧ ಸಂಕಲನದಲ್ಲಿರುವ ಹೆಬ್ಬಲಸಿನ ಹಣ್ಣಿನ ಕುರಿತಾದ ಬರಹದಲ್ಲಿ, ಆ ಕುರಿತು ಹೊಸ ಭಾಷ್ಯವನ್ನೇ ಬರೆದು, ಆ ಮರದ ತುತ್ತತುದಿಗೆ ಏರಿ ಹಣ್ಣು ಕುಯ್ಯುವ ಪ್ರಕ್ರಿಯೆಯನ್ನು ವಿವರಿಸಿದ್ದಾರೆ. ಇತ್ತ, ಮನೆ ಹಿಂದಿನ ಕಾಡಿನಲ್ಲಿ ಸುತ್ತಾಡುವ ಲೇಖಕರು, ಊಟ ತಿಂಡಿಯ ಕಡೆಗೆ ಗಮನ ಹರಿಸದೇ, ಇಂಗ್ಲಿಷ್ ಪಾಠವನ್ನು ಓದುತ್ತಿದ್ದೇನೆ ಎಂದು ಮನೆಯವರಿಗೆ ಹೇಳಿ, ಮರದ ತುದಿಯಲ್ಲಿ ಕುಳಿತು ಹಗಲನ್ನು ಕಳೆಯುವ ಪರಿ ಸ್ವಾರಸ್ಯಕರವಾಗಿದೆ. ಪುಸ್ತಕವನ್ನು ಕೈಲಿ ಹಿಡಿದು, ಮರದ ಮೇಲೆ ಕುಳಿತು, ಸುತ್ತಲೂ ಹಾರಾಡುವ ಹಕ್ಕಿಗಳ ವಿವರ, ಅಲ್ಲಿನ ಮರಗಳ ವಿವರ ನೀಡುತ್ತಾ, ಪ್ರಕೃತಿಯ ದಿವ್ಯ ಸಾನಿಧ್ಯವೇ ಆವಿಭðವಿಸಿ, ಅವುಗಳ ಒಡನಾಡಿಗಳಾಗಿಸಿಕೊಂಡ ಲೇಖಕರ ಬಾಲ್ಯದ ಸವಿನೆನಪನ್ನು ಬಿಚ್ಚಿಡುವ ಕಥನ ಸೊಗಸಾಗಿದೆ.

ಶಶಿಧರ ಹಾಲಾಡಿಯವರು ಪರಿಸರಪ್ರೇಮಿ; ಆ ಪ್ರಮೇಯವನ್ನು ಈ ಕೃತಿಯುದ್ದಕ್ಕೂ ಒಂದು ಭಾವಗೀತೆಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ತಮ್ಮ ಹಳ್ಳಿಯ ಜತೆ ಹೊಂದಿದ ದಶಕಗಳ ನಂಟಿನ ಫಲವಾಗಿ ಪರಿಸರ ಅವರನ್ನಾವರಿಸಿತೊ, ಅಥವಾ ಪರಿಸರವನ್ನೇ ಅವರು ಮೈಗೂಡಿಸಿಕೊಂಡರೋ ಗೊತ್ತಿಲ್ಲ; ಲಾಗಾಯ್ತಿನಿಂದ ಪರಿಸರದ ಕುರಿತಾದ ಜೀವಂತಿಕೆಯ ಬರಹಗಳು ಈ ಕೃತಿಯುದ್ದಕ್ಕೂ ಆವರಿಸಿಕೊಂಡಿವೆ. ಚಿಟ್ಟೆಗಳ ವಲಸೆ, ಜಕಣಿ ಹಕ್ಕಿ, ಕಾಡಿನ ನಡುವಿನ ತೊರೆ, ಗೂಬೆಯ ಕೂಗು, ಕಾಡಿನ ಕಾಯಿಗಳಿಂದ ತಯಾರಿಸುವ ಎಣ್ಣೆ ಮೊದಲಾದ ಅನುಭವಗಳನ್ನು ಹೊಂದಿರುವ ಇಲ್ಲಿನ ಪ್ರಬಂಧಗಳು ಒಂದು ಅಪರೂಪದ ಪರಿಸರವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಮೊದಲೇ ನಾನು ಹೇಳಿದಂತೆ ಪೂರ್ಣಚಂದ್ರ ತೇಜಸ್ವಿಯವರ `ಕರ್ವಾಲೋ' ಕಾದಂಬರಿಯು, ಈ ಕೃತಿಯ ಓದಿನ ಓಘದಲ್ಲಿ ಪುನಃ ಪುನಃ ನೆನಪಾಗುತ್ತದೆ. ಅಂದರೆ, ತೇಜಸ್ವಿಯವರ ಬರಹಗಳನ್ನು ನೆನಪಿಸುವ ಶಶಿಧರ್ ಎಂಬ ವ್ಯಕ್ತಿ ರೂಪುಗೊಳ್ಳುತ್ತಿದ್ದಾರೆಂಬ ಹೆಗ್ಗಳಿಕೆ ಕೂಡ ನಿಜ. ಅಷ್ಟರ ಮಟ್ಟಿಗೆ ಪರಿಸರದ ಕುರಿತ ಬರಹ ಜನರ ಮನದಾಳದಲ್ಲಿ ಮನಮುಟ್ಟುವ ರೀತಿಯಲ್ಲಿ ಇಲ್ಲಿನ ಬರಹಗಳು ಮೂಡಿಬಂದಿವೆ. ಈ ಕೃತಿಯಲ್ಲಿ ಇಪ್ಪತ್ತಾರು ಪ್ರಬಂಧಗಳಿದ್ದು, ಒಟ್ಟಾರೆ ಸತ್ವಪೂರ್ಣವಾದ ಈ ಬರಹಗಳು ಎಲ್ಲಾ ಓದುಗರ ಮನ ಮುಟ್ಟುವುದಲ್ಲದೆ ಹೃದಯಕ್ಕೂ ಹತ್ತಿರವಾಗುತ್ತವೆ ಎಂಬ ಮಾತು ಸತ್ಯ.

MORE FEATURES

'ಡೇರ್ ಡೇವಿಲ್ ಮುಸ್ತಫಾ' ಚಿತ್ರಕಥೆ ಪುಸ್ತಕ ಬಿಡುಗಡೆ 

19-05-2024 ಬೆಂಗಳೂರು

ಬೆಂಗಳೂರು: ಡೇರ್ ಡೆವಿಲ್ ಮುಸ್ತಫಾ ಚಿತ್ರಕಥೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು 2024 ಮೇ 19ರಂದು ಬೆಂಗಳೂರಿನ ಸುಚಿತ್ರ...

ವಾರದ ಲೇಖಕ ವಿಶೇಷದಲ್ಲಿ ಖ್ಯಾತ ಕಾದಂಬರಿಕಾರ ಭಾರತೀಸುತ

19-05-2024 ಬೆಂಗಳೂರು

ಬುಕ್ ಬ್ರಹ್ಮ ವಾರದ ಲೇಖಕ ವಿಶೇಷದಲ್ಲಿ ಓದಿನೊಂದಿಗೆ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿಕೊಂಡು ಸೆರೆ ವಾಸ ಅನುಭವಿಸಿದ ಕನ್ನ...

ಅಕಾಲದಲ್ಲೊಂದು ಸಕಾಲಿಕ ಪುಸ್ತಕ ‘ಗಾಂಧೀಜಿಯ ಹಂತಕ: ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ'

19-05-2024 ಬೆಂಗಳೂರು

ಗಾಂಧಿ ಹತ್ಯೆ – ಆ ಕಾಲದ ರಾಜಕೀಯದಲ್ಲಿ ಸಾವರ್ಕರ್ ಪಾತ್ರ – ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಪಾತ್ರ &nd...