ಕಾಡಿನೊಳಗಿನ ಪ್ರಾಣಿ ಬದುಕಿನಲ್ಲಿ ಕಂಡು ಕೇಳರಿಯದ ಅಚ್ಚರಿಗಳಿವೆ


'ಉಳಿವಿಗಾಗಿ ಓಡು, ಇಲ್ಲವೇ ಹೋರಾಡು' ಎನ್ನುವುದು ಸಸ್ಯಾಹಾರಿಗಳ ಪಾಡಾದರೆ 'ಹೋರಾಡಿ ಕೊಂದು ಹೊಟ್ಟೆ ತುಂಬಿಸಿಕೋ' ಎನ್ನುವುದು ಮಾಂಸಾಹಾರಿಗಳ ಪಾಡು. ಬದುಕೊಂದು ಚದುರಂಗದಾಟ. ಪ್ರಾಣಿಗಳದ್ದೂ ಅಷ್ಟೇ, ನಮ್ಮದೂ ಅಷ್ಟೇ. ನಮ್ಮದು ವಿಭಿನ್ನ ಅಷ್ಟೆ ಎನ್ನುತ್ತಾರೆ, ಗಿರಿಮನೆ ಶ್ಯಾಮರಾವ್. ಅವರು ತಮ್ಮ ‘ಕಾಡಿನ ನ್ಯಾಯ’ ಕತಾಸಂಕಲನಕ್ಕೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ.

ಇದರಲ್ಲಿ ಮನುಷ್ಯರ ಕತೆಗಳಿಲ್ಲ; ಬದಲಿಗೆ ಈ ಭೂಮಿಯಲ್ಲಿ ನಮ್ಮಂತೆ ಬದುಕುವ ಹಕ್ಕಿರುವ ಪ್ರಾಣಿ-ಪಕ್ಷಿಗಳು ತಮ್ಮ ಬದುಕಿನ ನೋವು- ನಲಿವುಗಳನ್ನು ತಾವೇ ಪ್ರಸ್ತುತ ಪಡಿಸುವಂತೆ ಚಿತ್ರಿಸಿದ ಬೆರಗು ಹುಟ್ಟಿಸುವ ನೈಜ, ರೋಚಕ ಕತೆಗಳಿವೆ. ಉಳಿದ ಪ್ರಾಣಿಗಳ ಬದುಕಿನಲ್ಲೂ ಹೀಗೆಲ್ಲಾ ಬೇರೆ ಬೇರೆ ತರಹದ ವಿಶೇಷ ಸಂಗತಿಗಳಿರಬಹುದು ಎನ್ನುವುದರ ಕಲ್ಪನೆ ಇದರಿಂದಲೇ ಸಿಗಬಹುದು.

'ಗುಡ್ಡ, ಬೆಟ್ಟ ನದಿ, ಕಣಿವೆ, ಕೋಟಿ ಕೋಟಿ ಸಸ್ಯಗಳಿಂದ ಹಸಿರಾದ. ಹರಿಯುವ ಝರಿಯಿಂದ ಆವೃತವಾದ, ಮಂಜು, ಬಿಸಿಲು, ಮಳೆಗಳಿಂದ ತುಂಬಿರುವ ಪ್ರಕೃತಿ ಎಷ್ಟೊಂದು ಮನೋಹರ, ಎಷ್ಟು ಸುಂದರ' ಎನ್ನುತ್ತೇವೆ. ಖಂಡಿತಾ ಪ್ರಕೃತಿ ಸುಂದರವೇ. ಅದರಲ್ಲೆರಡು ಮಾತಿಲ್ಲ. ಆದರೆ ಆ ಪ್ರಕೃತಿಯೊಳಗಿನ ಜೀವರಾಶಿಗಳ ಬದುಕೂ ಅಷ್ಟೇ ಸುಂದರವಾ? ಖಂಡಿತಾ ಅಲ್ಲ. ನಿಜಕ್ಕೂ ಅವುಗಳದ್ದು ಜೀವನ್ಮರಣದ ಹೋರಾಟದ ಬದುಕು. 'ಮಾಂಸಾಹಾರಿ ಪ್ರಾಣಿಗಳು ಯಾವ ತಪ್ಪು ಮಾಡದ ಪಾಪದ ಸಸ್ಯಾಹಾರಿ ಪ್ರಾಣಿಗಳನ್ನು ಅವು ಜೀವಂತವಿರುವಾಗಲೇ ಹರಿದು ತಿನ್ನುವುದನ್ನೂ, ಅವುಗಳ ಆಕ್ರಂದನವನ್ನೂ ಕೇಳುವಾಗ ಭಗವಂತನದು ಇದೆಂಥಾ ನ್ಯಾಯ?' ಎನಿಸಬಹುದು. ಆದರೆ ಅದು ಸುಲಭದಲ್ಲಿ ಎಲ್ಲರಿಗೂ ಅರ್ಥವಾಗದ ಬೇರೆಯದೇ ಪ್ರಪಂಚ. ಕಾಡಿನೊಳಗಿನ ಪ್ರಾಣಿ ಬದುಕಿನಲ್ಲಿ ಕಂಡು ಕೇಳರಿಯದ ಅಚ್ಚರಿಗಳಿವೆ. ಅಲ್ಲಿ ಅವುಗಳದ್ದೇ ಆದ ಲೋಕ ಇದೆ. ಪ್ರತಿಯೊಂದು ಪ್ರಾಣಿಯ ಬದುಕಿನಲ್ಲೂ ಅದರದ್ದೇ ಆದ ಪ್ರತ್ಯೇಕತೆ ಇದೆ. ಅದು ಅರ್ಥವಾಗಬೇಕಾದರೆ ಅವುಗಳ ಬಗ್ಗೆ ಒಂದಿಷ್ಟಾದರೂ ನೋಡಿ, ಕೇಳಿ, ಓದಿ ತಿಳಿದಿರಬೇಕು.

ಸತ್ಯವೆಂದರೆ ಎಲ್ಲಾ ಪ್ರಾಣಿಗಳದ್ದೂ ಪ್ರತಿನಿತ್ಯವೂ ಸಾವು ಬದುಕಿನ ನಡುವಿನ ಹೋರಾಟ. ಅವಕ್ಕೆ ಎಲ್ಲಿಂದ, ಯಾವಾಗ ಸಾವು ಬಂದೆರಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಂಖ್ಯೆಯಲ್ಲಿ ಜಾಸ್ತಿ ಇರುವ, ಯಾರಿಗೂ ತೊಂದರೆ ಕೊಡದ ಕಾಡೆಮ್ಮೆ, ಜಿಂಕೆ, ಕತ್ತೆ, ಕುದುರೆ, ಮೊಲ ಇತ್ಯಾದಿ ಸಸ್ಯಾಹಾರಿ ಪ್ರಾಣಿಗಳಿಗೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ತಮ್ಮನ್ನು ತಿನ್ನಲು ಬರುವ ಪ್ರಾಣಿಗಳಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳುವುದೇ ಬದುಕಿನ ಮೊದಲ ಗುರಿ, ಆನೆಗೆ ಅಂತಹಾ ಜೀವಭಯ ಕಮ್ಮಿಯಾದರೂ ತಮ್ಮ ಮರಿಗಳನ್ನು ಅವುಗಳಿಂದ ರಕ್ಷಣೆ ಮಾಡುವ ಚಿಂತೆ ಅವಕ್ಕೂ ಇದೆ. ಸಸ್ಯಾಹಾರಿಗಳನ್ನು ತಿನ್ನುವ ಹುಲಿ, ಸಿಂಹ, ಚಿರತೆ, ಮೊಸಳೆ, ತೋಳ, ನಾಯಿ, ಬೆಕ್ಕು, ಹಾವು ಇತ್ಯಾದಿ ಮಾಂಸಾಹಾರಿ ಪ್ರಾಣಿಗಳಿಗೆ ಹೊಟ್ಟೆ ತುಂಬಿಸಿಕೊಳ್ಳುವುದೇ ಬದುಕಿನ ಮೊದಲ ಗುರಿ. ಅವುಗಳಿಗೆ ತಾವು ಬದುಕುವುದಕ್ಕೋಸ್ಕರವೇ ಇತರ ಪ್ರಾಣಿಗಳನ್ನು ತಿನ್ನಬೇಕಾದ ಅನಿವಾರ್ಯತೆ ಇದೆ. ತಮ್ಮಂತೆಯೇ ಇರುವ ಮಾಂಸಾಹಾರಿ ಪ್ರಾಣಿಗಳನ್ನೂ ಅವು ಬಿಡುವುದಿಲ್ಲ. ಅವು ಸಸ್ಯಹಾರಿ ಪ್ರಾಣಿಗಳಂತೆ ಹುಲ್ಲು ತಿನ್ನಲು ಸಾಧ್ಯವಿಲ್ಲ. ಮಾಂಸಾಹಾರಿ ಪ್ರಾಣಿಗಳು ಬೇಟೆಯಾಡುವುದು ತಾವು ಬದುಕುಳಿಯಲು! ಖಯಾಲಿಗಾಗಿ ಅಲ್ಲ! ಒಂದು ವರ್ಗಕ್ಕೆ ಕೊಂದೇ ತಿನ್ನುವ ಅನಿವಾರ್ಯತೆಯಾದರೆ ಇನ್ನೊಂದು ವರ್ಗಕ್ಕೆ ಅವುಗಳಿಂದ ತಪ್ಪಿಸಿಕೊಂಡು ಬದುಕುವ ಅನಿವಾರ್ಯತೆ, ಮಾಂಸಾಹಾರಿ ಪ್ರಾಣಿಗಳು ತಮ್ಮ ಜೀವ ಪಣಕ್ಕಿಟ್ಟು ಸಸ್ಯಾಹಾರಿ ಪ್ರಾಣಿಗಳನ್ನು ತಿನ್ನಲು ಹೋರಾಡಿದರೆ ಸಸ್ಯಾಹಾರಿ ಪ್ರಾಣಿಗಳು ತಮ್ಮ ಜೀವ ಉಳಿಸಿಕೊಳ್ಳಲು ಊಹಿಸಲಸಾಧ್ಯವಾದ ರೀತಿಯಲ್ಲಿ ಹೋರಾಡುತ್ತವೆ.

ಯಾವ ಪ್ರಾಣಿಗೂ ಬದುಕು ಸುಲಭವಲ್ಲ. ಕೀಟಗಳಂತಹ ಸಣ್ಣ ಪ್ರಾಣಿಗಳು ಮತ್ತೊಂದು ಕೀಟವನ್ನು ಹಿಡಿದು ಜೀವಂತ ತಿನ್ನುವ ಭೀಭತ್ಸ ದೃಶ್ಯಗಳು ಕಾಡಿನಲ್ಲಿ ನಿರಂತರ ನಡೆಯುವ ಸಹಜ ಕ್ರಿಯೆ. ಪ್ರಾಣಿಗಳಲ್ಲಿ ಸುಪ್ರೀಂ ಎನ್ನುವ ಹುಲಿ, ಸಿಂಹ, ಆನೆ. ಹದ್ದಿನಂತಹಾ ಪ್ರಾಣಿಗಳ ಸಂಖ್ಯೆಯೂ ಹೆಚ್ಚದಂತೆ ಕಡಿವಾಣವಿದೆ. ಇದರ ಜೊತೆಗೇ ಪ್ರತಿಯೊಂದು ಪ್ರಾಣಿಗೂ ತನ್ನನ್ನು ತಾನು ರಕ್ಷಿಸಿಕೊಂಡು ಬದುಕುಳಿಯಲು ಒಂದು ಅವಕಾಶವೂ ಇರುತ್ತದೆ. ಆನೆಗೆ ಶಕ್ತಿ, ಜಿಂಕೆಗೆ ವೇಗ, ಮುಳ್ಳುಹಂದಿಗೆ ಮೈಮೇಲೆ ಮುಳ್ಳು, ಆಮೆಗೆ ಕವಚ, ಹಾವಿಗೆ ವಿಷ ಹೀಗೇ. ಎಲ್ಲವೂ ವೈವಿಧ್ಯಮಯವಾಗಿಯೇ, ತಾನಾಗಿಯೇ ನಡೆಯುತ್ತದೆ ಎಂಬಂತೆ ಕಂಡರೂ ಎಲ್ಲವನ್ನೂ ಬ್ಯಾಲೆನ್ಸ್ ಮಾಡುವ ಒಂದು ವ್ಯವಸ್ಥೆ ಇದೆ. ಸಸ್ಯಾಹಾರಿಗಳಿರಲಿ, ಮಾಂಸಾಹಾರಿಗಳಿರಲಿ, ಕಾಡು ಪ್ರಾಣಿಗಳು ಮನುಷ್ಯರಂತೆ ವಯಸ್ಸಾಗಿ ಮುದಿತನ ಬಂದು ಸಹಜವಾಗಿ ಸಾಯುವುದು ಅಪರೂಪದಲ್ಲಿ ಅಪರೂಪ. ಮೈಯಲ್ಲಿ ಕಸುವಿದ್ದಷ್ಟು ದಿನ ಅವುಗಳ ಬದುಕು. ಕಸುವು ಮಾಸುತ್ತಿದ್ದಂತೆ ಅವು ಇನ್ನೊಂದು ಪ್ರಾಣಿಗೆ ಆಹಾರವಾಗಬೇಕಾಗುತ್ತದೆ. ಇವೆಲ್ಲವೂ ಕಾಡಿನ ನ್ಯಾಯವೇ. ಪ್ರತಿದಿನ, ಪ್ರತಿಕ್ಷಣವೂ ಅವುಗಳದ್ದು ಹೋರಾಟದ ಬದುಕು.

'ಉಳಿವಿಗಾಗಿ ಓಡು, ಇಲ್ಲವೇ ಹೋರಾಡು' ಎನ್ನುವುದು ಸಸ್ಯಾಹಾರಿಗಳ ಪಾಡಾದರೆ 'ಹೋರಾಡಿ ಕೊಂದು ಹೊಟ್ಟೆ ತುಂಬಿಸಿಕೋ' ಎನ್ನುವುದು ಮಾಂಸಾಹಾರಿಗಳ ಪಾಡು.ಬದುಕೊಂದು ಚದುರಂಗದಾಟ. ಪ್ರಾಣಿಗಳದ್ದೂ ಅಷ್ಟೇ, ನಮ್ಮದೂ ಅಷ್ಟೇ. ನಮ್ಮದು ವಿಭಿನ್ನ ಅಷ್ಟೆ. ಆದರೂ ತನ್ನಂತಾನೇ ಎನ್ನುವಂತೆ ಎಲ್ಲವೂ ಒಂದು ಸಮತೋಲನದಲ್ಲಿ ನಡೆಯುತ್ತದೆ. ಅದೇ ಪ್ರಕೃತಿ ನಿಯಮ! ನಮ್ಮ ಹೊರತಾಗಿ ಯಾವ ಪ್ರಾಣಿಯೂ ಆ ಪ್ರಕೃತಿ ನಿಯಮವನ್ನು ಮೀರುವುದಿಲ್ಲ! ಮೀರಲು ಅವಕ್ಕೆ ತಿಳಿಯುವುದೂ ಇಲ್ಲ! ಯಾವ ಪ್ರಾಣಿಯೂ ನಮ್ಮಂತೆ ಪ್ರಕೃತಿಯನ್ನು ಹಾಳುಗೆಡವಲು ನೋಡುವುದಿಲ್ಲ! ಅದು ಅವುಗಳಿಂದ ಸಾಧ್ಯವೂ ಇಲ್ಲ!

ನಾವು ಬುದ್ಧಿಯ ಲಾಭ ಪಡೆದು ಅವುಗಳಿಗಿಂತ ಉತ್ತಮವಾದ ಬದುಕನ್ನು ಸಾಗಿಸುತ್ತಿದ್ದರೂ ಪರಿಪಕ್ವತೆ ನಮಗೂ ಸಿದ್ಧಿಸಿಲ್ಲ. ಯಾವುದನ್ನು ಉಳಿಸಿಕೊಳ್ಳಬೇಕು. ಹೇಗೆ ಸಮತೋಲನ ಕಾಪಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ತಿಳುವಳಿಕೆ ಮೂಡಿಲ್ಲ. ಈ ಜಗತ್ತಿನಲ್ಲಿ ನಮ್ಮ ಹೊರತಾಗಿ ನಮಗಿಂತ ಜಾಸ್ತಿ ಬೇರೆ ಜೀವಿಗಳೂ ಇವೆ. ಅವಕ್ಕೂ ಬದುಕುವ ಹಕ್ಕಿದೆ, ಅದರಲ್ಲಿ ಏರುಪೇರಾದರೆ ಅದರಿಂದ ನಮಗೂ ತೊಂದರೆಯಾಗುತ್ತದೆ ಎಂಬ ಬಗ್ಗೆ ಬುದ್ದಿ ಇದೆ ಎಂದುಕೊಂಡ ನಮಗೆ ತುಂಬ ಅಜ್ಞಾನ ಇದೆ.

ನೆಲದ ಮೇಲಿನ ಪ್ರಾಣಿಗಳಲ್ಲಿ ಹುಲಿ ಅಗ್ರ ಪರಭಕ್ಷಕ. ಆನೆ ಅತ್ಯಂತ ಬಲಶಾಲಿ ಪ್ರಾಣಿ. ಆಕಾಶದಲ್ಲಿ ಹದ್ದು ಅಗ್ರ ಪರಭಕ್ಷಕ. ಇರುವೆ, ಜಗತ್ತಿನ ಎಲ್ಲೆಡೆಯೂ ವ್ಯಾಪಿಸಿದ ಜೀವಿ ಮನುಷ್ಯರಿಗೆ ಬುದ್ಧಿವಂತಿಕೆ ಜಾಸ್ತಿ. ಹೀಗೆ ಒಂದೊಂದು ಜೀವಿಗಳಿಗೂ ಒಂದೊಂದು ವೈಶಿಷ್ಟ್ಯವಿದೆ. ಆದರೆ ಅದೇ ಬುದ್ದಿಯ ಬಲದಿಂದ ಎಲ್ಲವನ್ನೂ ನಾಶ ಮಾಡುವ ಯೋಚನೆ ನಮಗೇಕೆ ಬರುತ್ತದೋ?

'ಕಾಡು, ಪ್ರಾಣಿಗಳು, ಪ್ರಕೃತಿ ಎಲ್ಲವನ್ನೂ ನಾಶ ಮಾಡಿ ನಾವು ಮಾತ್ರ ಈ ಭೂಮಿಯ ಮೇಲೆ ಬದುಕಿರುತ್ತೇವೆ ಎಂದರೆ ಅದು ಅಜ್ಞಾನದ ಪರಮಾವಧಿ. ಹೀಗೇ ಮುಂದುವರೆದರೆ ಖಂಡಿತವಾಗಿಯೂ ನಮಗೆ ಎಚ್ಚರವಾಗುವಾಗ ಸಮಯ ಮೀರಿರುತ್ತದೆ'

ಇಲ್ಲಿ ವನ್ಯಜೀವಿಗಳ ಬದುಕಿನ ಘಟನೆಗಳನ್ನು ಅವರ ಆತ್ಮಕತೆಯ ಮೂಲಕ ಹೇಳಲು ಹೊರಟಿದ್ದೇನೆ. ಅವುಗಳ ಬಗ್ಗೆ ಏನೂ ತಿಳಿಯದವರಿಗೆ ಪ್ರಾಣಿಗಳ ಬದುಕು ಹೇಗಿರುತ್ತದೆ ಎನ್ನುವುದರ ಒಂದಿಷ್ಟು ನೈಜಚಿತ್ರಣ ಇದರಲ್ಲಿ ದೊರಕಬಹುದು. ಆಯಾ ಘಟನೆಗಳೇ ಕಾಡಿನ ನ್ಯಾಯ ಏನು ಎನ್ನುವುದನ್ನೂ ತಿಳಿಸಿ ಕೊಡುತ್ತದೆ. ಪಶ್ಚಿಮಘಟ್ಟವನ್ನು ಸೂರೆ ಮಾಡುವ ಮೊದಲು ಅವನ್ನು ನಾಶ ಮಾಡಿದರೆ ಆಗುವ ಪರಿಣಾಮ ಏನು ಎನ್ನುವುದರ ಬಗ್ಗೆ ನಾಶಕ್ಕೆ ಹೊರಡುವ ಮೊದಲು ಕೇಳಿಸಿಕೊಳ್ಳುವುದು ಉತ್ತಮ. 'ನಾವೇ ಸುಪ್ರೀಂ ಎಂದು ಬೀಗುವ ಮೊದಲು ಆಯಾ ಪ್ರಾಣಿಗಳಿಗೆ ಅವುಗಳದೇ ಆವ ಬದುಕಿದೆ, ಅವುಗಳ ಕಷ್ಟ-ನಷ್ಟ, ನೋವು-ಸಂಕಟಗಳೇನು? ಅವು ಹೇಗೆ ಪ್ರಕೃತಿ ನಿಯಮವನ್ನು ಮೀರದೆ ನಡೆದುಕೊಳ್ಳುತ್ತವೆ? ಎಲ್ಲಿ ನಾವು ಪ್ರಕೃತಿ ನಿಯಮ ಮೀರಿ ನಡೆಯುತ್ತೇವೆ' ಎನ್ನುವುದು ಅವುಗಳ ಸ್ಥಾನದಲ್ಲಿ ನಿಂತು ಯೋಚಿಸಿದರೆ ಮಾತ್ರ ಅರ್ಥವಾಗುತ್ತದೆ. ಪ್ರತಿಯೊಂದು ಪ್ರಾಣಿಯೂ ತನಗೇ ತಿಳಿಯದಂತೆ ಯಾರೋ ನಿರ್ದೇಶನ ಮಾಡಿದಂತೆ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಅದನ್ನೆಲ್ಲಾ ಏರುಪೇರು ಮಾಡುವ ಮನುಷ್ಯರ ಹೊರತಾಗಿ ಎಲ್ಲವೂ ಸಹಜವಾಗಿದ್ದರೆ ಈ ಪ್ರಾಣಿಗಳಿಗೆಲ್ಲಾ ಆಹಾರದ ಚಿಂತೆ ಕಾಡುತ್ತಿರಲಿಲ್ಲ.

ನಮಗಾಗಿ ನಾವು ರೂಪಿಸಿಕೊಂಡ ಕಾನೂನಿನಂತಲ್ಲದೆ ಕಾಡಿನಲ್ಲಿ ಅಲ್ಲಿಯದೇ ಆದ ಕಾನೂನಿದೆ. ಅಲ್ಲಿಯದೇ ಆದ ನ್ಯಾಯ ಇದೆ. ಆದರೆ ಅದನ್ನು ಅವೇ ರೂಪಿಸಿದ್ದಲ್ಲ. ಭಗವಂತ ರೂಪಿಸಿದ ನ್ಯಾಯ ಅದು. ಎಲ್ಲವೂ ಸಮತೋಲನದಲ್ಲಿ ನಡೆಯಬೇಕು ಎನ್ನುವುದು ಅವನ ನಿಯಮ. ಆಯಾ ಪ್ರಾಣಿಗಳ ಬದುಕು ನಡೆಯುವ ರೀತಿಯನ್ನು ಗಮನಿಸಿದರೆ ಅದು ಅರ್ಥವಾಗುತ್ತದೆ. ಎಲ್ಲವೂ ವಂಶಾಭಿವೃದ್ಧಿಗೆ ಪೂರಕವಾಗಿ ನಡೆಯುತ್ತದೆ. ದುರ್ಬಲವಾದದ್ದು ತಾನಾಗಿಯೇ ನಶಿಸುತ್ತಾ ಹೋಗುವ ವ್ಯವಸ್ಥೆಯೇ ಇದೆ.

ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಹಂಬಲ ಇರುವವರಿಗೆ ಇದರಲ್ಲಿ ಒಂದಿಷ್ಟು ಅವುಗಳ ನೈಜ ಬದುಕಿನ ಚಿತ್ರಣ ಸಿಗಬಹುದು. ಅವುಗಳ ನೋವು ನಲಿವಿನ ಅರಿವಾಗಬಹುದು. ಜಾಲತಾಣಗಳಲ್ಲಿ ನಿಮಗೆ ಎಲ್ಲಾ ಪ್ರಾಣಿ ಬದುಕಿನ ಬಗ್ಗೆ ತಿಳಿಯಬಹುದು. ಆದರೆ ಅವೆಲ್ಲವನ್ನೂ ಕ್ರೋಢೀಕರಿಸಿ ಮತ್ತೊಂದು ದೃಷ್ಟಿಕೋನದಿಂದ ನೋಡುವ ಅನುಕೂಲ ಅದರಲ್ಲಿ ಸಿಗುವುದಿಲ್ಲ. ಆ ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಇದು ನಿಮ್ಮನ್ನು ಬೇರೆಯೇ ಲೋಕಕ್ಕೆ ಕರೆದುಕೊಂಡು ಹೋಗಬಹುದು ಎಂದು ಭಾವಿಸುತ್ತೇನೆ.

ಹೈಸ್ಕೂಲ್ ಮಟ್ಟದಲ್ಲೇ ಪ್ರಕೃತಿ ಮತ್ತು ಪ್ರಾಣಿ ಬದುಕಿನ ಬಗ್ಗೆ ಇಂಥಾ ಸಂಗತಿಗಳು ನಮ್ಮ ಮಕ್ಕಳಿಗೆ ದೊರೆಯಬೇಕಾಗಿತ್ತು. ಇದು ಮಲೆನಾಡಿನ ರೋಚಕಕತೆಗಳ ಸರಣಿಯ ಹದಿನೆಂಟನೆಯ ಭಾಗ, ಸರಣಿಯ ಒಂದೊಂದು ಭಾಗವನ್ನೂ ಓದಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಎಲ್ಲರಿಗೂ ಅಂತಹಾ ಮತ್ತೊಂದು ಕೃತಿ ಬರೆಯುವುದರ ಮೂಲಕವೇ ನನ್ನ ಕೃತಜ್ಞತೆ ಅರ್ಪಿಸುತ್ತಿದ್ದೇನೆ.

- ನಿಮ್ಮವ ಗಿರಿಮನೆ ಶ್ಯಾಮರಾವ್

MORE FEATURES

ಈ ನನ್ನ ಪುಸ್ತಕಕ್ಕೆ ಕೂಡ ಸಾವಿಲ್ಲದ ಅಮರತ್ವ ಪ್ರಾಪ್ತವಾಗುತ್ತದೆ: ನರೇಂದ್ರ ಪೈ

09-05-2024 ಬೆಂಗಳೂರು

'ಈ ಪುಸ್ತಕಗಳ ಓದು ಸಾವಿರದ ಒಂದು ಪುಸ್ತಕಗಳ ಓದಿಗೆ ಸಮ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಲ್ಲೆ. ಹಾಗಾಗಿಯೇ ಇಂಥ ಅ...

ಜೀವಂತಿಕೆ ತುಂಬಿದ ಬರಹಗಳು

08-05-2024 ಬೆಂಗಳೂರು

"ಶಶಿಧರ ಹಾಲಾಡಿ ಅವರು ಬಾಲ್ಯ ಕಳೆದದ್ದು ಅವರ ಹಳ್ಳಿಯ ಪರಿಸರದ ನಿಸರ್ಗದ ಮಡಿಲಲ್ಲಿ. ಹಾಗಾಗಿ ಆ ಪರಿಸರ ಅವರ ಮೇಲೆ ಗ...

ಜನಸಾಮಾನ್ಯರಿಗಷ್ಟೇ ಅಲ್ಲ; ಪತ್ರಕರ್ತರಿಗೂ ಪಠ್ಯದಂತೆ ಇಲ್ಲಿನ ಬರಹಗಳು ರೂಪುಗೊಂಡಿವೆ..

08-05-2024 ಬೆಂಗಳೂರು

"ಕಾಡಿಗೆ ನಾವು ಮನುಷ್ಯರಾಗಿ ಹೋಗಬಾರದು. ನಾವು ಕೂಡ ಒಂದು ಪ್ರಾಣಿಯಾಗಿರಬೇಕು. ಯಾವ ಪ್ರಾಣಿ, ಪಕ್ಷಿಯನ್ನು ವೀಕ್ಷಿಸ...