ಕಲಬುರಗಿ ಅಂದ್ರ ಏನನ್ಕೊಂಡೀರಿ-ಕಲಬುರಗಿ ಪರಿಸರದ ಬಾಶೆಗಳು

Date: 05-02-2020

Location: ಕಲಬುರಗಿ


ಕಲಬುರಗಿ ಪರಿಸರದ ಭಾಷೆಗಳ ಸ್ವರೂಪವನ್ನು ಭಾಷಾವಿಜ್ಞಾನಿ ಡಾ. ಬಸವರಾಜ ಕೋಡಗುಂಟಿ ಅವರು ಇಲ್ಲಿ ವಿವರಿಸಿದ್ದಾರೆ


ಕನ್ನಡದಾಗ /ಚ್/, /ಜ್/ ಎಂಬ ದ್ವನಿಗಳು ಇರುವುದು ಸಹಜ ಎಲ್ಲರಿಗೂ ಗೊತ್ತು. ಉತ್ತರ ಕರ್‍ನಾಟಕದ ಕನ್ನಡಗಳಲ್ಲಿ ಇವುಗಳಿಗೆ ಹತ್ತಿರದ ಇನ್ನು ಕೆಲ ದ್ವನಿಗಳೂ ಇವೆ. /ಚ್/, /ಜ್/ ಇವು ತಾಲುವಿನಲ್ಲಿ ಹುಟ್ಟುವ ದ್ವನಿಗಳು. ಅದರಿಂದ ಇವುಗಳನ್ನು ತಾಲವ್ಯ ದ್ವನಿಗಳೆಂದು ಕರೆಯಲಾಗುತ್ತದೆ. ನಾಲಗೆಯ ನಡುಬಾಗ ಮೇಲಕ್ಕೆದ್ದು ಮೇಲಿನ ತಾಲುವಿಗೆ ಒಮ್ಮೆ ಹೊಡೆದು ಒಂದು ಕ್ಶಣ ಉಸಿರಾಟದ ಹೊರಬರುವ ಗಾಳಿಯನ್ನು ತಡೆದು ಬಿಡುವ ಮೂಲಕ ಈ ದ್ವನಿಗಳನ್ನು ಉಚ್ಚರಿಸಲಾಗುತ್ತದೆ. ಉತ್ತರಕರ್‍ನಾಟಕ, ಗೋವಾ, ಮಹಾರಾಶ್ಟ್ರ, ತೆಲಂಗಾಣಗಳಲ್ಲಿ ಬಳಕೆಯಲ್ಲಿರುವ ಬಡಗನ್ನಡ ಎಂದು ಕರೆಯುವ ಕನ್ನಡಗಳಲ್ಲಿ ಈ ಒಂದು ಜೋಡಿಯ ಜೊತೆಗೆ ಇದಕ್ಕೆ ಸಮೀಪದ ಇನ್ನೊಂದು ಜೋಡಿ ದ್ವನಿಗಳೂ ಬಳಕೆಯಲ್ಲಿವೆ. ಇವುಗಳನ್ನು ಕಾಚು., ಗಾಜು. ಮೊದಲಾದ ಶಬ್ದಗಳಲ್ಲಿ ಕಾಣಬಹುದು. ನಾಲಗೆಯ ನಡುಬಾಗದ ಬದಲಿಗೆ ತುಸು ಮುಂದಿನ ಬಾಗ ಮೇಲಕ್ಕೆದ್ದು ಹಲ್ಲಿನ ಅಂಗುಳಿನ ತುದಿಯ ಹತ್ತಿರಕ್ಕೆ, ಮೇಲು ಹಲ್ಲಿನ ಹಿಂಬದಿಯ ಹತ್ತಿರಕ್ಕೆ ವರ್‍ತ್ಸಕ್ಕೆ ತಾಕಿ ಹೊರಬರುವ ಗಾಳಿಯನ್ನು ತಡೆದು ಈ ದ್ವನಿಗಳನ್ನು ಉಚ್ಚರಿಸಲಾಗುತ್ತದೆ. ಈ ದ್ವನಿಗಳನ್ನು ವರ್‍ತ್ಸತಾಲವ್ಯ ಎಂದು ಕರೆಯಲಾಗುವುದು. ಈ ದ್ವನಿಗಳು ಬಡಗನ್ನಡಗಳಲ್ಲಿ ಮಾತ್ರ ಕಂಡುಬರುತ್ತವೆ. ದಕ್ಶಿಣದ ಕಡೆಗೆ ಇಲ್ಲ. ಈ ದ್ವನಿಗಳನ್ನು ಮೊದಲ ಬಾರಿಗೆ ಗುರುತಿಸಿದವರು ತೀ.ನಂ. ಶ್ರೀಕಂಟಯ್ಯನವರು.
ಈ ದ್ವನಿಗಳ ವಿಶೇಶತೆ ಎಂದರೆ ಹಯ್ದರಾಬಾದ ಸಂಸ್ತಾನದ ಪ್ರದೇಶದ ಇತರ ಬಾಶೆಗಳಲ್ಲಿಯೂ ಕಂಡುಬರುವುದು. ಮರಾಟವಾಡದ ಮರಾಟಿ, ತೆಲಂಗಾಣದ ತೆಲುಗಿನಲ್ಲಿ ಮತ್ತು ತೆಲಂಗಾಣಕ್ಕೆ ಹತ್ತಿರದ ಒಂದೆರಡು ಓಡಿಯಾ ಒಳನುಡಿಗಳಲ್ಲಿ ಇವು ಕಂಡುಬರುತ್ತವೆ. ಇಲ್ಲಿ ಗಮನಿಸಬೇಕಾದ ವಿಶಿಶ್ಟ ಅಂಶವೆಂದರೆ ಈ ದ್ವನಿಗಳು ಇಲ್ಲಿ ಹೇಳಿದ ಬಾಶೆಗಳ ಒಳನುಡಿಗಳಲ್ಲಿ ಬಿಟ್ಟರೆ ಇತರ ಒಳನುಡಿಗಳಲ್ಲಾಗಲಿ ಇಲ್ಲವೆ ಇತರ ಬಾರತೀಯ ಬಾಶೆಗಳಲ್ಲಾಗಲಿ ಕಂಡುಬರುವುದಿಲ್ಲ. ದೂರದ ಕಾಶ್ಮೀರಿಯಲ್ಲಿ ಇರುವಂತೆ ವರದಿ ಇದೆ. ಮೂಲದ್ರಾವಿಡದಲ್ಲಿಯಾಗಲಿ, ಮೂಲಿಂಡೊ-ಆರ್‍ಯದಲ್ಲಾಗಲಿ ಈ ದ್ವನಿಗಳು ಇರಲಿಲ್ಲ. ಅಂದರೆ ಇವು ಆನಂತರ ಬೆಳೆದಿವೆ. ಕನ್ನಡ-ತೆಲುಗು ದ್ರಾವಿಡ ಮನೆತನಕ್ಕೆ ಸೇರುವ ಬಾಶೆಗಳು, ಮರಾಟಿ ಆರ್‍ಯ ಮನೆತನದ ಬಾಶೆ. ಪರಸ್ಪರ ಬಿನ್ನ ಮನೆತನಕ್ಕೆ ಸೇರುವ ಬಾಶೆಗಳಲ್ಲಿ ಇಂತಾ ಸಮಾನ ಅಂಶಗಳು ಬೆಳೆಯುವುದು ಜಗತ್ತಿನಲ್ಲಿ ಅಪರೂಪದ ಬೆಳವಣಿಗೆ. ಈ ಬಾಶೆಗಳು ಬಹುಕಾಲದಿಂದ ಕೂಡುಬಾಳುವೆಯನ್ನು ನಡೆಸುತ್ತಿರುವುದು, ಅವುಗಳ ನಡುವಿನ ಕೊಡುತಗೊ ಸಂಬಂದವೂ ಬಹು ಆಳದಲ್ಲಿ ಇರುವುದು ಇದರಿಂದ ತಿಳಿಯುತ್ತದೆ.
ಎಂ.ಬಿ. ಎಮಿನೊ ಬಾರತದ ಬಾಶಾವಿಗ್ನಾನದಾಗ, ವಿಶೇಶವಾಗಿ ದ್ರಾವಿಡ ಬಾಶಾವಿಗ್ನಾನದಾಗ ಕೆಲಸ ಮಾಡಿದ ಬಹುದೊಡ್ಡ ಬಾಶಾವಿಗ್ನಾನಿ. ಇವರು ಬಾರತವನ್ನು ಒಂದು ಬಾಶಿಕ ಕ್ಶೇತ್ರ ಎಂದು ಕರೆಯುತ್ತಾನೆ. ಬಿನ್ನ ಮನೆತನಗಳಿಗೆ ಸೇರುವ ಹಲವಾರು ಬಾಶೆಗಳು ಪರಸ್ಪರ ಕೊಡುತಗೊ ಸಂಬಂದದೊಂದಿಗೆ ಹಲವು ಕಾಲ ಕೂಡುಬಾಳುವೆ ನಡೆಸಿ ಆಮೂಲಕ ಸಮಾನ ಲಕ್ಶಣಗಳನ್ನು ಹಂಚಿಕೊಳ್ಳುವಂತಾ ಪರಿಸರವನ್ನು ಬಾಶಿಕ ಕ್ಶೇತ್ರ ಎಂದು ಕರೆಯಲಾಗುತ್ತದೆ. ಹೀಗೆ ಹಲವು ಬಾಶಿಕ ಕ್ಶೇತ್ರಗಳನ್ನು ಜಗತ್ತಿನ ಹಲವೆಡೆ ಗುರುತಿಸಿದೆ. ಹೀಗೆ ಎಮಿನೊ ಅವರು ಬಾರತವನ್ನು ಬಾಶಿಕ ಕ್ಶೇತ್ರ ಎಂದು ಗುರುತಿಸುವಾಗ ತೀ.ನಂ. ಶ್ರೀಕಂಟಯ್ಯ ಗುರುತಿಸಿದ ಈ ವರ್‍ತ್ಸತಾಲವ್ಯ ದ್ವನಿಗಳನ್ನು ಒಂದು ಮಹತ್ವದ ಆದಾರವಾಗಿ ಬಳಸಿಕೊಳ್ಳುತ್ತಾರೆ. ಆ ಮೂಲಕ ಈ ದ್ವನಿಗಳು, ಈ ಬಾಗದ ಕನ್ನಡ ಬಾರತ ಎಂದರೇನು ಎಂಬುದನ್ನು ವ್ಯಾಕ್ಯಾನಿಸುವುದಕ್ಕೆ ಬಳಕೆಯಾಗುತ್ತದೆ.
ಈ ಪರಿಸರದ ಬಾಶೆಗಳ ಈ ಗುಣವನ್ನು ಹಲವು ನೆಲೆಗಳಲ್ಲಿ ಗುರುತಿಸಬಹುದು. ಇಂತದೆ ಒಂದು ಮಹತ್ವದ ವಿಶಿಶ್ಟ ಲಕ್ಶಣವನ್ನು ಮಾತಾಡಾಮ. ಈ ಪರಿಸರದ ಕನ್ನಡ ಬಾಶೆಯ ತಾನವನ್ನು ನೆನಪಿಸಿಕೊಳ್ಳಿ. ಹಾಗೆಯೆ ತೆಲಂಗಾಣದ ತೆಲುಗಿನ ತಾನವನ್ನು, ಮರಾಟವಾಡದ ಮರಾಟಿಯ ತಾನವನ್ನು ಗಮನಿಸಿ. ಕಲಬುರಗಿಯ ಕನ್ನಡ, ಸಂಗಾರಡ್ಡಿಯ ತೆಲುಗು, ಸೊಲ್ಲಾಪುರದ ಮರಾಟಿ, ಮೂರೂ ಬಾಶೆಗಳು ಒಂದೆ ತಾನದಲ್ಲಿ ನಡೆಯುತ್ತವೆ. ಉಚ್ಚರಣೆ, ಶಯ್ಲಿ, ಒತ್ತು, ಲಯ, ತಾನ ಎಲ್ಲವೂ ಒಂದೆ ರೀತಿಯಲ್ಲಿ ಇರುತ್ತವೆ. ಎಶ್ಟೊ ಬಾರಿ ಈ ಬಾಗದ ಉರ್‍ದು ಕೂಡ ಹೀಗೆಯೆ ನಡೆಯುತ್ತದೆ. ಇದನ್ನು ತಾನಲಕ್ಶಣ ಎಂದು ಕರೆಯಲಾಗುತ್ತದೆ. ಬಾಶೆಗಳ ಆಚೆಗೆ ಈ ಲಕ್ಶಣಗಳು ಹಂಚಿಕೊಂಡಿರುತ್ತವೆ. ಈ ಪರಿಸರದ ಮಂದಿ ಅಂತಾ ಆಳದ ಸಂಬಂದಗಳಲ್ಲಿ ಬದುಕಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಅದರಿಂದಾಗಿ ಅವರ ಬಾಶೆಗಳು ಹೀಗೆ ಸಮಾನ ಲಕ್ಶಣಗಳನ್ನು ಹಂಚಿಕೊಳ್ಳುತ್ತವೆ.

 

 

 

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...