ಕಲಬುರಗಿ ಅಂದ್ರ ಏನನ್ಕೊಂಡೀರಿ: ಕಲಬುರಗಿ ಪರಿಸರದ ಶಾಸನಗಳು

Date: 04-02-2020

Location: ಕಲಬುರಗಿ


ಕಲಬುರಗಿ ಪರಿಸರದಲ್ಲಿ ದೊರೆಯುವ ಶಾಸನಗಳ ಸ್ವರೂಪ ಹಾಗೂ ಅವುಗಳ ಭಾಷೆ, ಮಹತ್ವವನ್ನು ಡಾ. ಬಸವರಾಜ ಕೋಡಗುಂಟಿ ಅವರು ಈ ಬರಹದಲ್ಲಿ ವಿವರಿಸಿದ್ದಾರೆ

 

ಕಲಬುರಗಿ ಪರಿಸರದಲ್ಲಿ ಹಲವಾರು ರಾಜಮನೆತನಗಳು ಬಿನ್ನ ಕಾಲಗಳಲ್ಲಿ, ಬಿನ್ನ ಬಾಶೆಗಳಲ್ಲಿ ಹಾಕಿಸಿರುವ ಸಾವಿರಾರು ಶಾಸನಗಳು ದೊರೆಯುತ್ತವೆ. ಈ ಪರಿಸರದ ಬಹು ಹಳೆಯ ಶಾಸನಗಳು, ಬಾರತದ ಬಹುಹಳೆಯ ಶಾಸನಗಳಾದ ಪಾಲಿ ಬಾಶೆಯವು. ಬವುದ್ದ ಬರವಣಿಗೆಯನ್ನು ಪಾಲಿ ಎಂದೆ ಕರೆಯುವುದು. ಇವುಗಳನ್ನು ಕನಗನಹಳ್ಳಿ, ಸನ್ನತಿ, ಮಸ್ಕಿ, ಕೊಪ್ಪಳ, ಪಾಲ್ಕಿಗುಂಡು ಮೊದಲಾದ ಪ್ರದೇಶಗಳಲ್ಲಿ ಕಾಣಬಹುದು. ಆನಂತರ ಬರುವ ಶಾತವಾಹನರು ಈ ಬಾಗದಲ್ಲಿ ಬಳಕೆಯಲ್ಲಿದ್ದ ಪ್ರಾಕ್ರುತವನ್ನು ಬಳಸುವುದಕ್ಕೆ ಮೊದಲಾಗುತ್ತಾರೆ. ಶಾತವಾಹನರ ಕಾಲದ ಕನಗನಹಳ್ಳಿ ಮತ್ತು ಸುತ್ತಮುತ್ತಲಿನ ಹಲವಾರು ಪ್ರದೇಶಗಳಲ್ಲಿ ಪ್ರಾಕ್ರುತ ಶಾಸನಗಳು ದೊರೆಯುತ್ತವೆ. ಆನಂತರ ರಾಶ್ಟ್ರಕೂಟ, ಕಲ್ಯಾಣಿ ಚಾಲುಕ್ಯರವರೆಗೆ ಪ್ರಾಕ್ರುತ ಶಾಸನಗಳು ದೊರೆಯುತ್ತವೆ. ಕನ್ನಡವು ರಾಶ್ಟ್ರಕೂಟರ, ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ದೊಡ್ಡ ಸಂಕೆಯ ಶಾಸನಗಳಲ್ಲಿ ಬಳಕೆಯಾಗುತ್ತದೆ. ಆನಂತರವೂ ಇದು ಮುಂದುವರೆಯುತ್ತದೆ. ಸೇವುಣ, ಕಾಕತೀಯ, ವಿಜಯನಗರ ಮೊದಲಾದವರ ಶಾಸನಗಳೂ ಇವೆ. ಬಹುದೊಡ್ಡ ಸಂಕೆಯಲ್ಲಿ ಕಲಚೂರಿಗಳು, ಅಹಿಹಯರು, ಸಿಂದರು ಮತ್ತು ಕರಡಿಕಲ್ಲ ಕದಂಬ, ನೊಳಂಬ ಮೊದಲಾದವರೂ ಕನ್ನಡ ಶಾಸನಗಳನ್ನು ಹಾಕಿಸಿದ್ದಾರೆ. ಆದಿಲ್ ಶಾಹಿಗಳ ಅಲ್ಲೊಂದು ಇಲ್ಲೊಂದು ಕನ್ನಡ ಶಾಸನಗಳು ಸಿಗುತ್ತವೆ. ಕಲ್ಯಾಣಿ ಚಾಲುಕ್ಯರ ಜೊತೆ ನಿರಂತರ ಯುದ್ದದಲ್ಲಿ ತೊಡಗಿದ್ದ ಚೋಳರು ಒಮ್ಮೆ ಮಸ್ಕಿ ಕಲ್ಯಾಣಿ ಚಾಲುಕ್ಯರ ರಾಜದಾನಿಯಾಗಿದ್ದ ಸಂದರ್‍ಬದಲ್ಲಿ ಮಸ್ಕಿಯವರೆಗೆ ಯುದ್ದಕ್ಕೆ ಬಂದು ಚಾಲುಕ್ಯರನ್ನು ಸೋಲಿಸಿ ಅಲ್ಲೊಂದು ತಮಿಳು ಶಾಸನವನ್ನು ಹಾಕಿಸುತ್ತಾರೆ. ಆನಂತರದ ಶಾಸನ ಬಾಶೆ ಮರಾಟಿ. ವಾಕಟಾಕರ ಮರಾಟಿ ಶಾಸನವೊಂದು ಬೀದರ ಪ್ರದೇಶದಲ್ಲಿ ಸಿಗುತ್ತದೆ. ವಿಜಯನಗರ ಕಾಲದಾಗ ರಾಯಚೂರು ಪರಿಸರದಾಗ ಇನ್ನು ಕೆಲವು ತೆಲುಗು ಶಾಸನಗಳು ದೊರೆಯುತ್ತವೆ. ಹದಿನಾಲ್ಕನೆ ಶತಮಾನದಿಂದ ಬಹಮನಿಗಳ ದಾರ್‍ಮಿಕ ಬಾಶೆಯಾದ ಅರಾಬಿಕ್ ಮತ್ತು ಆಡಳಿತ ಬಾಶೆಯಾದ ಪರ್‍ಶಿಯನ್ ಇವುಗಳಲ್ಲಿ ಹಲವಾರು ಶಾಸನಗಳು ದೊರೆಯುತ್ತವೆ. ಅರಾಬಿಕ್ ಬಾಶೆಯು ಪರ್‍ಶಿಯನ್ನಿನ ಜೊತೆಗೆ ದ್ವಿಬಾಶಿಕವಾಗಿ ಬರುತ್ತದೆ. ಸಾಮಾನ್ಯವಾಗಿ ಪರ್‍ಶಿಯನ್ ಬಾಶೆಯ ಶಾಸನಗಳಲ್ಲಿ ದಾರ್‍ಮಿಕ ಬಾಗವನ್ನು ಅರಾಬಿಕ್ ತುಂಬುತ್ತಿತ್ತು. ಅರಾಬಿಕ್ ಶಾಸನಗಳು ಎಂದು ಸಿಗುವುದು ತುಂಬಾ ಕಡಿಮೆ. ಆದಿಲ್ ಶಾಹಿಗಳ ಕಾಲದಲ್ಲಿ ಮೊದಲಾಗಿ ಉರ್‍ದು ಶಾಸನಗಳು ದೊರೆಯುತ್ತವೆ. ಅವುರಂಗಜೇಬ ಈ ಬಾಗವನ್ನು ಗೆದ್ದಾಗ ಮುದಗಲ್ ಕೇಂದ್ರಿತವಾಗಿ ಒಬ್ಬ ಆಡಳಿತಾದಿಕಾರಿಯನ್ನು ನೇಮಿಸುತ್ತಾನೆ. ಅವನು ಗುಜರಾತಿ ಹಿನ್ನೆಲೆಯವನು. ಮುದಗಲ್ಲಿನಲ್ಲಿ ಅವನು ಎರಡು ಗುಜರಾತಿ ಶಾಸನಗಳನ್ನು ಹಾಕಿಸುತ್ತಾನೆ.
ಹೀಗೆ ಕಲಬುರಗಿ ಪರಿಸರದಲ್ಲಿ ಪಾಲಿ, ಪ್ರಾಕ್ರುತ, ಸಂಸ್ಕ್ರುತ, ಕನ್ನಡ, ತಮಿಳು, ಮರಾಟಿ, ಅರಾಬಿಕ್, ಪರ್‍ಶಿಯನ್, ತೆಲುಗು, ಉರ್‍ದು, ಗುಜರಾತಿ ಹೀಗೆ ಸುಮಾರು ಹನ್ನೊಂದು ಬಾಶೆಗಳಲ್ಲಿ ಶಾಸನಗಳು ದೊರೆಯುತ್ತವೆ. ಇದು ಈ ಬಾಗದ ಬಹುಬಾಶಿಕತೆಯನ್ನು ಎತ್ತಿಹಿಡಿಯುತ್ತದೆ.
ಇದಲ್ಲದೆ ಕುತೂಹಲಕರವಾಗಿ ದ್ವಿಬಾಶಿಕ ಮತ್ತು ತ್ರಿಬಾಶಿಕ ಶಾಸನಗಳೂ ಇಲ್ಲಿ ಕೆಲವು ಸಿಗುತ್ತವೆ. ಸಂಸ್ಕ್ರುತ-ಪ್ರಾಕ್ರುತ, ಪ್ರಾಕ್ರುತ-ಕನ್ನಡ, ಕನ್ನಡ-ಸಂಸ್ಕ್ರುತ, ಕನ್ನಡ-ತೆಲುಗು, ಅರಾಬಿಕ್-ಪರ್‍ಶಿಯನ್, ಅರಾಬಿಕ್-ಉರ್‍ದು, ಪರ್‍ಶಿಯನ್-ಕನ್ನಡ, ಪರ್‍ಶಿಯನ್-ಮರಾಟಿ ಮೊದಲಾದ ದ್ವಿಬಾಶಿಕ ಶಾಸನಗಳು ದೊರೆಯುತ್ತವೆ. ಬೀದರ ಪರಿಸರದಲ್ಲಿ ದೊರೆತ ತಾಮ್ರಶಾಸನವೊಂದರಲ್ಲಿ ಪರ್‍ಶಿಯನ್-ಕನ್ನಡ-ಸಂಸ್ಕ್ರುತ ಬಾಶೆಗಳ ಬಳಕೆ ಆಗಿದೆ.

ಡಾ. ಬಸವರಾಜ ಕೋಡಗುಂಟಿ

 

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...