ಕಾಳಿದಾಸನನ್ನು ಅನುವಾದ ಮಾಡುವುದು ಸುಲಭವಲ್ಲ: ಮಹಾಬಲ ಸೀತಾಳದೇವಿ


'ಕಾಲೇಜುಗಳಲ್ಲಿ ಮೇಘದೂತವನ್ನು ಓದುವ ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಕೃತ ಕಾವ್ಯದಲ್ಲಿರುವ ಆಸಕ್ತಿಯಿಂದ ಮೇಘದೂತವನ್ನು ಓದುವ ಸಹೃದಯರಿಗೆ ಅನುಕೂಲವಾಗಲಿ ಎಂದು ಇಲ್ಲಿ ಮಲ್ಲಿನಾಥನ 'ಸಂಜೀವನಿ' ವ್ಯಾಖ್ಯಾನವನ್ನು ಕೂಡ ಅನುವಾದ ಮಾಡಿದ್ದೇನೆ' ಎನ್ನುತ್ತಾರೆ ಮಹಾಬಲ ಸೀತಾಳದೇವಿ. ಅವರು ‘ಕಾಳಿದಾಸ ಮಹಾಕವಿಯ ಮೇಘದೂತ’ ಕೃತಿಗೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ.

ಕಾಳಿದಾಸನನ್ನು ಓದುವುದು ಒಂದು ಖುಷಿಯಾದರೆ, ಅನುವಾದ ಮಾಡುವುದು ಇನ್ನೊಂದೇ ಖುಷಿ. ಹತ್ತು ವರ್ಷಗಳ ಹಿಂದೆ ಅಭಿಜ್ಞಾನ ಶಾಕುಂತಲವನ್ನು ಅನುವಾದ ಮಾಡುವಾಗ ಅದನ್ನು ಮೊದಲ ಬಾರಿ ಅನುಭವಿಸಿದ್ದೆ. ಈಗ ಮೇಘದೂತ. ಹಾಗಂತ ಕಾಳಿದಾಸನನ್ನು ಅನುವಾದ ಮಾಡುವುದು ಸುಲಭವಲ್ಲ. ಸಂಸ್ಕೃತದ ಕೆಲ ಕ್ಲಿಷ್ಟ ಕವಿಗಳಿಗೆ ಹೋಲಿಸಿದರೆ ಕಾಳಿದಾಸನ ಭಾಷೆ ಸರಳವೇ ಆಗಿದ್ದರೂ, ಆತನ ಉಪಮಾಲೋಲುಪತೆ ಮತ್ತು ಶ್ಲೇಷಪ್ರಿಯತೆಯು ಅನುವಾದಕರನ್ನು ಗೊಂದಲಕ್ಕೆ ಬೀಳಿಸುವುದುಂಟು. ಹಾಗೆ ಗೊಂದಲವಾದಾಗಲೆಲ್ಲ ನಮಗೆ ಏಕೈಕ ಆಶ್ರಯ ಮಲ್ಲಿನಾಥ. ಕಾಳಿದಾಸನ ಬಹುತೇಕ ಎಲ್ಲಾ ಕೃತಿಗಳಿಗೂ ಅದ್ಭುತವಾದ 'ಸಂಜೀವನಿ' ವ್ಯಾಖ್ಯಾನವನ್ನು ಬರೆದ ಮಹಾಮಹೋಪಾಧ್ಯಾಯ ಮಲ್ಲಿನಾಥ ಸೂರಿ, ಕಾಳಿದಾಸನ ಓದುಗರಿಗೆ ಮಹದುಪಕಾರವನ್ನು ಮಾಡಿದ್ದಾನೆ. ಕಾಳಿದಾಸನನ್ನು ವ್ಯಾಕರಣಬದ್ಧವಾಗಿ, ಸುಲಭವಾಗಿ ಓದುಗರಿಗೆ ಅರ್ಥ ಮಾಡಿಸಿದ ಕೀರ್ತಿ ಮಲ್ಲಿನಾಥನಿಗೆ ಸಲ್ಲುತ್ತದೆ. ಹಾಗೆಯೇ, ಕಾಳಿದಾಸ ಮಾಡಿರಬಹುದಾದ ವ್ಯಾಕರಣದ ತಪ್ಪು ಪ್ರಯೋಗಗಳನ್ನು ಅಥವಾ ಕಾಳಿದಾಸನ ಪದಪ್ರಯೋಗಗಳಲ್ಲಿ ಅಲ್ಲಲ್ಲಿ ಕಾಣಿಸುವ ಗೊಂದಲಗಳನ್ನು ಬಗೆಹರಿಸಿದ ಕೀರ್ತಿಯೂ ಅವನದೇ ಆಗಿದೆ. ಹೀಗಾಗಿ ಕಾಲೇಜುಗಳಲ್ಲಿ ಮೇಘದೂತವನ್ನು ಓದುವ ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಕೃತ ಕಾವ್ಯದಲ್ಲಿರುವ ಆಸಕ್ತಿಯಿಂದ ಮೇಘದೂತವನ್ನು ಓದುವ ಸಹೃದಯರಿಗೆ ಅನುಕೂಲವಾಗಲಿ ಎಂದು ಇಲ್ಲಿ ಮಲ್ಲಿನಾಥನ 'ಸಂಜೀವನಿ' ವ್ಯಾಖ್ಯಾನವನ್ನು ಕೂಡ ಅನುವಾದ ಮಾಡಿದ್ದೇನೆ. ಆದರೆ ಮಲ್ಲಿನಾಥ ಹೇಳಿದ ತೀರಾ ಆಳವಾದ ವ್ಯಾಕರಣದ ಸೂಕ್ಷ್ಮಗಳಿಗೆ ಕೈಹಾಕದೆ, ಮೇಘದೂತವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಬೇಕಾದ ಅವನ ವ್ಯಾಖ್ಯಾನವನ್ನು ಮಾತ್ರ ಸ್ಕೂಲಾರ್ಥದಲ್ಲಿ ಕನ್ನಡೀಕರಿಸಿದ್ದೇನೆ.

ನನಗೆ 20 ವರ್ಷಗಳ ಹಿಂದೆ ಮೈಸೂರಿನ ಶ್ರೀಮನ್ಮಹಾರಾಜ ಸಂಸ್ಕೃತ ಮಹಾ ವಿದ್ಯಾಲಯದ ಮಧ್ಯಮಾಂಗಣದ ಮಂದ ಬೆಳಕಿನ ಸುಂದರ ಕೆತ್ತನೆಗಳ ಕೊಠಡಿಯಲ್ಲಿ ಶ್ರೀ ಶೃಂಗೇಶ್ವರ ಜೋಯಿಸರಿಂದ ಪೂರ್ವಮೇಘವನ್ನು ಪಾಠ ಮಾಡಿಸಿಕೊಂಡಿದ್ದು ನೆನಪಾಗುತ್ತದೆ. ನಾನಾಗ ಸಂಸ್ಕೃತದ ಸಾಹಿತ್ಯ ತರಗತಿಗಳ ವಿದ್ಯಾರ್ಥಿ, ವಯೋವೃದ್ಧ ಶ್ರೀ ಶೃಂಗೇಶ್ವರ ಜೋಯಿಸರು ಪುಸ್ತಕವನ್ನು ಮಡಚಿ ಮೇಜಿನ ಮೇಲಿಟ್ಟು, ಕುರ್ಚಿಗೆ ಒರಗಿಕೊಂಡು, ಕಣ್ಣುಚ್ಚಿಕೊಂಡು, ತನ್ಮಯತೆಯಿಂದ ಮೇಘದೂತದ ಶ್ಲೋಕಗಳನ್ನು ಹಾಡಿ, ಕಾಳಿದಾಸನೇ ತಮ್ಮನ್ನು ಆವರಿಸಿಕೊಂಡಂತೆ ಅರ್ಥ ವ್ಯಾಖ್ಯಾನ ಮಾಡುತ್ತಿದ್ದರು. ಅವರಂತಹ ವಿದ್ವಾಂಸರಿಂದ ಮೇಘದೂತವನ್ನು ಪಾಠ ಮಾಡಿಸಿಕೊಂಡ ಭಾಗ್ಯಕ್ಕಾಗಿ ನಾನು ಋಣಿ. ಮೇಘದೂತವನ್ನು ಅನುವಾದಿಸುವಾಗ ಅವರು ಮಾಡಿದ ಪಾಠ ನನಗೆ ತುಂಬಾ ನೆರವಿಗೆ ಬಂದಿದೆ. ಅವರು ಬಳಸಿದ ಪದಪದಗಳೂ ನನ್ನ ಕಿವಿಯಲ್ಲಿವೆ.

ಶ್ರೀ ಶೃಂಗೇಶ್ವರ ಜೋಯಿಸರು ಮಾಡಿದ ಪಾಠದಷ್ಟೇ ಸರಳವಾಗಿ ಮೇಘದೂತವನ್ನು ಅನುವಾದಿಸಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಅವರು ಕಾಳಿದಾಸನ ಮೇಲೂ, ಅವನ ಕೃತಿಗಳ ಮೇಲೂ ನಮಗೆ ಪ್ರೀತಿ ಹುಟ್ಟುವಂತೆ ಪಾಠ ಮಾಡುತ್ತಿದ್ದರು. ಈ ಅನುವಾದ ಕೂಡ ಓದುಗರಿಗೆ ಸಂಸ್ಕೃತದ ಕಾವ್ಯಗಳ ಮೇಲೂ, ಕಾಳಿದಾಸನ ಮೇಲೂ ಆಸಕ್ತಿ ಹುಟ್ಟು ಹುಟ್ಟುವಂತೆ ತೆ ಮಾಡಬೇಕು ಎಂಬ ಆಸೆ ನನ್ನದು. ಹೀಗಾಗಿ ಸಂಸ್ಕೃತದ ಪ್ರವೇಶವಿಲ್ಲದ ಸಾಮಾನ್ಯ ಗರನ್ನು ಗುರಿಯಾಗಿಟ್ಟುಕೊಂಡೇ ನಾನಿದನ್ನು ಅನುವಾದ ಮಾಡಿದ್ದೇನೆ. ಓದುಗರ ಈವರೆಗೆ ಲಭ್ಯವಿದ್ದ ಹಳೆಗನ್ನಡದ ಅನುವಾದ ಅಥವಾ ಪದ್ಯಾನುವಾದಗಳಲ್ಲಿ ಮೇಘದೂತ ವನ್ನು ನಮ್ಮೊಳಗೆ ಇಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವವರು ಈ ಸರಳಾನುವಾದದಲ್ಲಿ ಖಂಡಿತ ಮೇಘದೂತವನ್ನು ಅರ್ಥಾನುಸಂಧಾನದ ಜೊತೆಗೆ ಆಸ್ವಾದಿಸಬಹುದು ಎಂದು ಭಾವಿಸಿದ್ದೇನೆ. ಕಾಳಿದಾಸನ 'ಮೇಘದೂತ' ಎಷ್ಟರಮಟ್ಟಿಗೆ ಇಂದು ತನ್ನ ಮೂಲ ರೂಪದಲ್ಲಿ ಉಳಿದುಕೊಂಡಿದೆ ಎಂಬುದನ್ನು ಹೇಳುವುದು ಕಷ್ಟ ಬೇರೆ ಬೇರೆ ವ್ಯಾಖ್ಯಾನಕಾರರು ಅಥವಾ ಲಿಪಿಕಾರರು ಅದನ್ನು ಪರಿಷ್ಕರಿಸಿದ ಅಥವಾ ತಮ್ಮದೇ ಶ್ಲೋಕಗಳನ್ನು ಮಧ್ಯೆ ಸೇರಿಸಿದ ಅನುಮಾನ ಸಂಶೋಧಕರದು. ಸಂಸ್ಕೃತ ಸಾಹಿತ್ಯದ ವಿಷಯದಲ್ಲಿ ಅತಿಹೆಚ್ಚು ವಿಶ್ವಾಸಾರ್ಹ ಎನ್ನಿಸಿದ ವಾರಾಣಸಿಯ ಚೌಖಂಬಾ ಸುರಭಾರತೀ ಪ್ರಕಾಶನ ಪ್ರಕಟಿಸಿರುವ ಸಂಸ್ಕೃತದ ಮೇಘದೂತವನ್ನು ನಾನಿಲ್ಲಿ ಅನುವಾದಕ್ಕೆ ಆಕರವಾಗಿ ಬಳಸಿಕೊಂಡಿದ್ದೇನೆ.

ಅವರ ಕೃತಿಯಲ್ಲಿರುವ ಪೂರ್ವ ಮೇಘ ಮತ್ತು ಉತ್ತರಮೇಘದ ಶ್ಲೋಕಗಳು ಇಲ್ಲಿ ನಿಮಗೆ ಕಾಣಸಿಗುತ್ತವೆ. ಮೂಲವನ್ನು ಅರ್ಥೈಸಿಕೊಳ್ಳುವುದು ಕಷ್ಟವಾದ ಸಂದರ್ಭದಲ್ಲಿ ಕಾನ್ಸರದ ಸಂಸ್ಕೃತ ವಿದ್ವಾಂಸ ಡಾ.ದಯಾಶಂಕರ ಶಾಸ್ತ್ರಿಗಳ ಹಿಂದಿ ಅನುವಾದವನ್ನು ಪರಾಮರ್ಶಿಸಿದ್ದೇನೆ. ಹಾಗೆಯೇ, ಮಲ್ಲಿನಾಥನ ವ್ಯಾಖ್ಯಾನದ ವಿಷಯದಲ್ಲಿ ಶಿಷ್ಟತೆ ಅಥವಾ ಗೊಂದಲ ಎದುರಾದಾಗ ಶ್ರೀ ಎಂ.ಆರ್.ಕಾಳೆಯವರ ಇಂಗ್ಲಿಷ್ ಅನುವಾದದ ಸಹಾಯ ಪಡೆದಿದ್ದೇನೆ. ಅವರಿಬ್ಬರಿಗೂ ನಮಸ್ಕಾರಗಳು. ನಾನು ಅನುವಾದಿಸಿದ ಕಾಳಿದಾಸನ ಸಾರ್ವಕಾಲಿಕ ಶ್ರೇಷ್ಠ ನಾಟಕವಾದ ಅಭಿಜ್ಞಾನ ಶಾಕುಂತಲವನ್ನೂ, ಭಾಸ ಮಹಾಕವಿಯ ಐದು ನಾಟಕಗಳನ್ನೂ ಮತ್ತು ಒಟ್ಟಾರೆ ಆರು ಕೃತಿಗಳನ್ನು ಪ್ರಕಟಿಸಿದ ಅಂಕಿತ ಪುಸ್ತಕವೇ ಮೇಘದೂತದ ಅನುವಾದವನ್ನೂ ಪ್ರಕಟಿಸುತ್ತಿದೆ. ಇದು ನನಗೆ ನನಗೆ ಬಹಳ ಸಂತೋಷದ ಸಂಗತಿ. ಏಕೆಂದರೆ ನನ್ನ ಮೊದಲ ಪುಸ್ತಕ 'ನಿತ್ಯ ನಿತ್ಯ ಜೀವನಕ್ಕೆ ಹತ್ತಿರದ ಸುಭಾಷಿತಗಳು' ಪ್ರಕಟಿಸುವ ಮೂ ಪ್ರಕಟಣೆಯ ಪ್ರಪಂಚವನ್ನು ನನಗೆ ಪರಿಚಯಿಸಿದವರೇ ಅಂಕಿತ ಪುಸ್ತಕ ಶ್ರೀ ಪ್ರಕಾಶ್ ಕಂಬತ್ತಳ್ಳಿ ಮತ್ತು ಶ್ರೀಮತಿ ಪ್ರಭಾ ದಂಪತಿಗಳು, ಅವರ ಪ್ರೀತಿಗೆ ಅಬಾರಿ. ಅವರು ಒತ್ತಾಯಿಸಿದ್ಧಾರೆ. ಅನುವಾದಕ್ಕೆ ಅನಾಮತ್ತು ನಾಲ್ಕು ವರ್ಷ ತೆಗೆದುಕೊಂಡರೂ ತಾಳ್ಮೆಯಿಂದ ಸಹಿಸಿಕೊಂಡು ಅವರದನ್ನು ಪ್ರಕಟಿಸಿದ್ದಾರೆ!

ಶ್ರೀ ಎಸ್.ವಿ. ರಂಗನಾಥ ಶರ್ಮರೂ ಸೇರಿದಂತೆ ಸಂಸ್ಕೃತದ ಅನೇಕ ಶ್ರೇಷ್ಠ ವಿದ್ವಾಂಸರು ಈಗಾಗಲೇ ಮೇಘದೂತವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ವಿದ್ವತ್ತು ಮತ್ತು ಅನುವಾದದ ಮುಂದೆ ನಾನೇನೂ ಅಲ್ಲ ಎಂಬುದು ನನಗೆ ತಿಳಿದಿದೆ. ಮೇಲಾಗಿ ಮೇಘದೂತದ ಅರ್ಥವ್ಯಾಪ್ತಿ ಮತ್ತು ಕಲ್ಪನಾವಿಲಾಸ ನನ್ನ ಅನುವಾದ ಮತ್ತು ಅರ್ಥ ವ್ಯಾಖ್ಯಾನಕ್ಕಷ್ಟೇ ಸೀಮಿತವಲ್ಲ. ಆಸಕ್ತರಿಗೆ ಇದೊಂದು ಪ್ರವೇಶಿಕೆಯಷ್ಟೆ. ಒಂದು ಶ್ರೇಷ್ಠ ಕೃತಿ ಹೆಚ್ಚೆಚ್ಚು ಜನರನ್ನು ತಲುಪುವ ಈ ಅನುವಾದದ ಮೂಲಕ ಕಾರ್ಯ ಯಾಗಿದ್ದೇನೆ ಎಂಬ ತೃಪ್ತಿಯಷ್ಟೇ ನನ್ನದು.

ನನ್ನ ಯಾವತ್ತೂ ಬರವಣಿಗೆಗೆ ಪ್ರೋತ್ಸಾಹಕರಾಗಿ ನಿಂತಿರುವ ಕಿರುತೆರೆ ಮತ್ತು ಹಿರಿತೆರೆಯ ನಿರ್ದೇಶಕ ಶ್ರೀ ಟಿ.ಎನ್. ಸೀತಾರಾಂ, ಕನ್ನಡಪ್ರಭದ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆ, ಕನ್ನಡಪ್ರಭದ ಪುರವಣಿ ಸಂಪಾದಕರಾದ ಶ್ರೀ ಜೋಗಿ, ನನಗೆ ಸಂಸ್ಕೃತವನ್ನು ಬೋಧಿಸಿದ ವಿದ್ವಾಂಸರಾದ ಶ್ರೀ ಗಂಗಾಧರ ಭಟ್ ಅಗ್ಗೆರೆ, ಶ್ರೀ ಎಂ.ಎಸ್. ಭಟ್ ಯಲುಗಾರು, ಶ್ರೀ ಬಿ.ಎಸ್. ಪರ್ವತರಾಜು ಮೈಸೂರು, ಶ್ರೀ ಮಂಜುನಾಥ ಭಟ್ ಗೊದ್ದಬೀಳು, ಶ್ರೀ ಶಂಕರನಾರಾಯಣ ಜೋಯಿಸ್ ಹಾಗೂ ನನಗೆ ಸಂಸ್ಕೃತದ ವಿಷಯದಲ್ಲಿ ಬರುವ ಯಾವುದೇ ಅನುಮಾನಕ್ಕೆ ಕೊಂಚವೂ ಬೇಸರಿಸದೆ ಪರಿಹಾರ ಒದಗಿಸುವ ಆತ್ಮೀಯ ಗೆಳೆಯ ಡಾ.ವಿನಾಯಕ ಭಟ್ ಗಾಳಿಮನೆ ಅವರನ್ನು ಅನುದಿನವೂ ನೆನೆಯುತ್ತೇನೆ. ನಾನು ಸದಾ ಹತ್ತಾರು ಕೆಲಸಗಳನ್ನು ಗುಡ್ಡೆ ಹಾಕಿಕೊಂಡು ಎಷ್ಟು ಹೊತ್ತು ಕಂಪ್ಯೂಟರ್ ಮುಂದೆ ಕುಳಿತಿದ್ದರೂ ಸಹಿಸಿಕೊಳ್ಳುವ ಪತ್ನಿ ರೇಖಾ ಭಟ್, ತಂದೆ ಶ್ರೀ ವಿಶ್ವೇಶ್ವರ ಭಟ್, ಮಕ್ಕಳಾದ ಸುಷೀಮಾ ಮತ್ತು ಸುಷಿರ್ ಭಟ್ ಅವರಿಗೆ ನನ್ನ ಪ್ರೀತಿ. ನಿಮಗೆಲ್ಲರಿಗೂ ವಂದೇ.

-ಮಹಾಬಲ ಸೀತಾಳಭಾವಿ

MORE FEATURES

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...

‘ಪಾತಕ ಲೋಕ’ ತರುಣರಿಗೆ ಅತ್ಯಂತ ಆಕರ್ಷಣೀಯ ವಸ್ತು

16-05-2024 ಬೆಂಗಳೂರು

"ನಾ ಕಂಡ ಈ ಭೂಗತ ಜಗತ್ತಿನಲ್ಲಿ ಬೆಂಗಳೂರು ನಗರ ಹಾಗೂ ಮುಂಬೈ ನಗರದ ರೌಡಿಗಳ ಸಂಪರ್ಕ ಹಾಗೂ ಮಂಗಳೂರು ನಗರದ ರೌಡಿಗಳ ...

ಪ್ರೀತಿ ಅರಳಿದರೆ ಬದುಕು ತೆರೆದಂತೆ

15-05-2024 ಬೆಂಗಳೂರು

"ಬದುಕು ಭಾವತೆರೆಯ ಮೇಲಿನ ತಾವರೆ, ಪ್ರತಿಯೊಂದು ಭಾವದಲೆಗೂ ಬದುಕು ಕಂಪಿಸುತ್ತದೆ. ಬದುಕಿನಲಿ ಕಾಡಿದ ಪ್ರೇಮ, ವಿರಹ,...