‘ಕಲ್ಯಾಣ ಕೆಡುವ ಹಾದಿ’ ನವರಸಗಳ ಪುಸ್ತಕ: ರವಿಕೃಷ್ಣಾ ರೆಡ್ಡಿ


'ಕರ್ನಾಟಕದ ಪ್ರತಿಯೊಬ್ಬ ರಾಜಕಾರಣಿಯೂ, ಸಾಮಾಜಿಕ ಕಾರ್ಯಕರ್ತರೂ, ಪೊಲೀಸರೂ ಸೇರಿದಂತೆ ಪ್ರತಿಯೊಬ್ಬ ಸರ್ಕಾರಿ ನೌಕರರೂ, ಎಲ್ಲಾ ಹಂತಗಳ ನ್ಯಾಯಾಧೀಶ/ನ್ಯಾಯಮೂರ್ತಿಗಳೂ, ಸಾಮಾಜಿಕ ಚಿಂತಕರೂ ಓದಲೇಬೇಕಾದ ಪುಸ್ತಕ, "ಕಲ್ಯಾಣ ಕೆಡುವ ಹಾದಿ" ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ, ರಾಜಕಾರಣಿ ರವಿಕೃಷ್ಣಾ ರೆಡ್ಡಿ. ಅವರು ಸಂಧ್ಯಾರಾಣಿ ಅವರು ಅನುವಾದಿಸಿರುವ ಕಲ್ಯಾಣ ಕೆಡುವ ಹಾದಿ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಕರ್ನಾಟಕದ ಪ್ರತಿಯೊಬ್ಬ ರಾಜಕಾರಣಿಯೂ, ಸಾಮಾಜಿಕ ಕಾರ್ಯಕರ್ತರೂ, ಪೊಲೀಸರೂ ಸೇರಿದಂತೆ ಪ್ರತಿಯೊಬ್ಬ ಸರ್ಕಾರಿ ನೌಕರರೂ, ಎಲ್ಲಾ ಹಂತಗಳ ನ್ಯಾಯಾಧೀಶ/ನ್ಯಾಯಮೂರ್ತಿಗಳೂ, ಸಾಮಾಜಿಕ ಚಿಂತಕರೂ ಓದಲೇಬೇಕಾದ ಪುಸ್ತಕ, "ಕಲ್ಯಾಣ ಕೆಡುವ ಹಾದಿ".

ದಕ್ಷ, ಪ್ರಾಮಾಣಿಕ, ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್'ರವರ ಆತ್ಮಕತೆಯಲ್ಲದ ಕರ್ನಾಟಕ ರಾಜ್ಯದ ಸ್ವಾತಂತ್ರ್ಯೋತ್ತರ ಆಡಳಿತ ಮತ್ತು ಸಾರ್ವಜನಿಕ ಜೀವನದ ಸಂಕ್ಷಿಪ್ತ ಆತ್ಮಕತೆ ಇದು. ಇಂಗ್ಲೀಷಿನಲ್ಲಿ ಅವರು ಬರೆದಿರುವ "Fall from Grace" ಎಂಬ ಇತಿಹಾಸದ ಪುಸ್ತಕವನ್ನು ಲೇಖಕಿ ಎನ್. ಸಂಧ್ಯಾರಾಣಿ "ಕಲ್ಯಾಣ ಕೆಡುವ ಹಾದಿ" ಎನ್ನುವ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ಅನುವಾದಕರೇ ಬಹಳ ಆಶಾವಾದದಿಂದ ಈ ಹೆಸರಿಟ್ಟರೋ ಅಥವ ಮತ್ಯಾವ ಆಶಾವಾದಿ ಇಟ್ಟರೋ, ಇದರ ಹೆಸರು "ಕಲ್ಯಾಣ ಕೆಡುವ ಹಾದಿ" ಅಲ್ಲ, "ಕಲ್ಯಾಣ ಕೆಟ್ಟ ಹಾದಿ" ಎಂದಿರಬೇಕಿತ್ತು. ಕೆಡಲು ಏನೇನೂ ಉಳಿದಿಲ್ಲದ ಸಂದರ್ಭದಲ್ಲಿ ಇನ್ನೂ ಕೆಡಲು ಇದೆ ಎಂದು ಭಾವಿಸುವುದು ಅವಾಸ್ತವಿಕ ಅಥವ ಕುರುಡು ಆಶಾವಾದ. (ಅಂದಹಾಗೆ, ಕೆಲವರು ನನ್ನನ್ನೂ ಕುರುಡು ಆಶಾವಾದಿ ಎಂದು ಭಾವಿಸಿದ್ದಾರೆ ಎನ್ನುವುದೂ ನನಗೆ ಗೊತ್ತಿದೆ.)

ಐಎಎಸ್ ಅಧಿಕಾರಿಯಾಗಿ ಸುಮಾರು ಮೂರೂವರೆ ದಶಕಗಳ ಸೇವೆ ಸಲ್ಲಿಸಿ ರಾಜ್ಯದ ಅಪರ ಮುಖ್ಯಕಾರ್ಯದರ್ಶಿಗಳಾಗಿ 2001ರಲ್ಲಿ ನಿವೃತ್ತರಾದ ವಿ. ಬಾಲಸುಬ್ರಮಣಿಯನ್ ಬಹಳ ಹೆಸರುವಾಸಿ ಅಧಿಕಾರಿ. ರಾಜ್ಯ, ದೇಶ, ವಿದೇಶಗಳಲ್ಲಿ ಸೇವೆ ಸಲ್ಲಿಸಿದ, ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರುವಾಸಿಯಾಗಿದ್ದ ಮಾದರಿ ಅಧಿಕಾರಿ. ಅಪಾರ ಹಾಸ್ಯಪ್ರಜ್ಞೆಯ ಇವರು ತಮ್ಮ ಸೇವಾವಧಿಯಲ್ಲಿ ಮತ್ತು ನಂತರವೂ ರಾಜ್ಯಕ್ಕೆ ಸಲ್ಲಿಸಿರುವ ಸೇವೆ ಅಪಾರವಾದದ್ದು, ದಾಖಲಾರ್ಹವಾದದ್ದು, ಕೃತಜ್ಞತಾಪೂರ್ವಕವಾಗಿ ನೆನೆಯಬೇಕಾದದ್ದು.

ಭೂಕಬಳಿಕೆ ಹಗರಣವೂ ಸೇರಿದಂತೆ ಹಲವು ಕಾರಣಗಳಿಗೆ ಎಸ್.ಆರ್. ಹಿರೇಮಠ್ ಮತ್ತು ಕೆ.ವಿ.ಧನಂಜಯ್‌ರವರ ಜೊತೆ ಆರೇಳು ವರ್ಷಗಳ ಹಿಂದೆ ಬಾಲಸುಬ್ರಮಣಿಯನ್'ರವರನ್ನು ನಾನು ಒಂದೆರಡು ಬಾರಿ ಭೇಟಿ ಮಾಡಿದ್ದೆ. ಅದಕ್ಕಿಂತ ಹೆಚ್ಚಿನ ಪರಿಚಯ ಇರಲಿಲ್ಲ. ಆದರೆ ಅವರ ಕೆಲಸ, ವಿಶೇಷವಾಗಿ ಬಲಿಷ್ಟರಿಂದ ಸರ್ಕಾರಿ ಭೂಮಿ ಒತ್ತುವರಿ ಮತ್ತು ಅದರ ತೆರವು ವಿಚಾರವಾಗಿ ಇವರು ಮಾಡಿರುವ ಕೆಲಸ ಮತ್ತು ಅವರ ವರದಿ (Greed and Connivance/ ದುರಾಸೆ ಮತ್ತು ಶಾಮೀಲು) ಕುರಿತು ತಿಳಿದಿದ್ದೆ, ಓದಿದ್ದೆ. ಗಂಭೀರ ಮತ್ತು ಜವಾಬ್ದಾರಿಯುತ ಕೆಲಸ ಮಾಡಿದ್ದ ಇವರು ಬಹಳ ಜಾಲಿ ಮನುಷ್ಯ, ಅಪಾರ ಹಾಸ್ಯಪ್ರಜ್ಞೆಯವರು, ಜನಪರ ಕಾಳಜಿ ಇರುವವರು, ಆದರೆ ಪದೇಪದೇ ಅಪಾಯದ/ಪ್ರಳಯದ ಮುನ್ಸೂಚನೆ ಕೊಡುವ ಸಿನಿಕ್ ಎಂದು ಆಗ ಅನ್ನಿಸಿತ್ತು. ಅವರು ಅದೆಲ್ಲವೂ ಹೌದು ಮತ್ತು ಅದಕ್ಕಿಂತಲೂ ಹೆಚ್ಚು ಎನ್ನುವುದು ಈ ಪುಸ್ತಕದಿಂದ ತಿಳಿಯಿತು.

ಮತ್ತೊಮ್ಮೆ ಹೇಳುತ್ತೇನೆ:- ಕರ್ನಾಟಕದ ಪ್ರತಿಯೊಬ್ಬ ರಾಜಕಾರಣಿಯೂ, ಸಾಮಾಜಿಕ ಕಾರ್ಯಕರ್ತರೂ, ಪೊಲೀಸರೂ ಸೇರಿದಂತೆ ಪ್ರತಿಯೊಬ್ಬ ಸರ್ಕಾರಿ ನೌಕರರೂ, ಎಲ್ಲಾ ಹಂತಗಳ ನ್ಯಾಯಾಧೀಶ/ನ್ಯಾಯಮೂರ್ತಿಗಳೂ, ಸಾಮಾಜಿಕ ಚಿಂತಕರೂ ಓದಲೇಬೇಕಾದ ಪುಸ್ತಕ, "ಕಲ್ಯಾಣ ಕೆಡುವ ಹಾದಿ".

ಕಳೆದ ಐದು ದಶಕಗಳಲ್ಲಿ ಕರ್ನಾಟಕದ ಸಾರ್ವಜನಿಕ ಜೀವನ (ಅಂದರೆ ರಾಜಕಾರಣ/ಶಾಸಕಾಂಗ), ಅಧಿಕಾರಶಾಹಿ (ಕಾರ್ಯಾಂಗ), ನ್ಯಾಯಾಂಗ ವ್ಯವಸ್ಥೆ ಯಾವೆಲ್ಲಾ ರೀತಿಯಲ್ಲಿ ಅಧೋಃಗತಿಯತ್ತ ಸಾಗಿ ಕರ್ನಾಟಕದ ಮೌಲ್ಯ ಮತ್ತು ವ್ಯವಸ್ಥೆ ಅಧಃಪತನವಾಯಿತು ಎನ್ನುವುದನ್ನು ಈ ಪುಸ್ತಕ ಒಬ್ಬ ಜನಪರ ಚಿಂತಕ ಮತ್ತು ಸರ್ಕಾರಿ ಅಧಿಕಾರಿಯ ನೆಲೆಯಿಂದ ಅನಾವರಣ ಮಾಡುತ್ತದೆ.

ಎಷ್ಟೆಲ್ಲಾ ವಿಚಾರಗಳು ಇವೆ ಇದರಲ್ಲಿ? ನಿಸ್ಪೃಹ ಮತ್ತು ದಕ್ಷ ಅಧಿಕಾರಿಗಳ ಕಾರ್ಯವೈಖರಿ ಮತ್ತು ಅವರ ಬಗ್ಗೆ ಮೆಚ್ಚುಗೆ. ಅದೇ ರೀತಿಯಲ್ಲಿ ವೀರೇಂದ್ರ ಪಾಟೀಲ್ ಮತ್ತು ದೇವರಾಜ್ ಅರಸರ ಕಾರ್ಯವೈಖರಿ ಮತ್ತು ಅವರ ಬಗ್ಗೆ ಅಭಿಮಾನ ಮತ್ತು ಗೌರವ. ಭ್ರಷ್ಟಾಚಾರ ಮತ್ತು ಅದಕ್ಷತೆಗೆ ಕುಖ್ಯಾತಿ ಪಡೆದು ನಾಡನ್ನು ಹಾಳು ಮಾಡಲು ಮೊದಲು ಮಾಡಿದ ಬಂಗಾರಪ್ಪ ಮತ್ತು ಜೆ.ಎಚ್.ಪಟೇಲ್ ಕುರಿತು ಅಪಾರ ತಿರಸ್ಕಾರ ಮತ್ತು ಅದಕ್ಕೆ ಅವರು ಕೊಡುವ ಸಮರ್ಥನೀಯ ಕಾರಣಗಳು. ರಾಜಕಾರಣಿಗಳ ತಲೆಹಿಡುಕರಾಗಿ ಕೆಲಸ ಮಾಡಿದ ಅಧಿಕಾರಿಗಳು ಮತ್ತು ಪಟೇಲರ ಅಂತಃಪುರದ ಸೇವಕ ನಟ ಅನಂತನಾಗ್ ಕುರಿತ ವಿವರಗಳು... ಜವಾಬ್ದಾರಿಯುತ ಆಡಳಿತ ನೀಡುತ್ತಿದ್ದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಕಾಲಾನಂತರದಲ್ಲಿ ಹೇಗೆ ತಾವೂ ಪತನವಾಗಿ ನಾಡನ್ನೂ ಸೋಲಿಸಿದರು ಎನ್ನುವುದು ಬಹಳ ಎಚ್ಚರಿಕೆ ಮತ್ತು ವಸ್ತುನಿಷ್ಠವಾಗಿ ಇಲ್ಲಿ ನಿರೂಪಿತವಾಗಿದೆ.

ಅದೇ ರೀತಿಯಲ್ಲಿ ತಾವೊಬ್ಬ ಅಧಿಕಾರಿಯಾಗಿ ವ್ಯವಸ್ಥೆಯಲ್ಲಿ ತಂದ ಬದಲಾವಣೆಗಳು ಮತ್ತು ರೂಪಿಸಿದ ಮತ್ತು ಕೈಗೊಂಡ ಯೋಜನೆಗಳ ಕುರಿತು ವಿ. ಬಾಲಸುಬ್ರಮಣಿಯನ್ ವಿಷದವಾಗಿ ಬರೆಯುತ್ತಾರೆ. ಇದನ್ನು ನಾವು ಪ್ರಾತಿನಿಧಿಕವಾಗಿ ತೆಗೆದುಕೊಂಡು ಗಮನಿಸಿದರೆ ಇವರಂತಹ ಅದೆಷ್ಟೋ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳ ಕೆಲಸ ಮತ್ತು ಕರ್ತವ್ಯಪ್ರಜ್ಞೆಯಿಂದಾಗಿಯೇ ಕರ್ನಾಟಕ ಈ ಮಟ್ಟಕ್ಕೆ ಅಭಿವೃದ್ಧಿ ಕಾಣಲು ಸಾಧ್ಯವಾಯಿತು ಮತ್ತು ಮತ್ತೊಂದು ಬಿಹಾರ/ಉತ್ತರಪ್ರದೇಶ ಆಗುವುದರಿಂದ ಬಚಾವಾಯಿತು ಎನ್ನುವುದರ ಅರಿವಾಗುತ್ತದೆ.

ಆದರೆ ಈಗಿನ ಅಧಿಕಾರಿಗಳು? ಇಂದಿನ ಪಾಪ ಮತ್ತು ಸಮಸ್ಯೆಯ ಬಹುಮುಖ್ಯ ಭಾಗ ಈಗಿನವರು. ಅವರಿಗೆ ಮುಕ್ತಿಯಿಲ್ಲ. ಶಿಕ್ಷೆ ಆಗಿಯೇ ಆಗುತ್ತದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಬಾಲಸುಬ್ರಮಣಿಯನ್‌ರವರು ಅಪಾರ opinionated ಮನುಷ್ಯ. ಅದಕ್ಕೆ ಇಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಆದರೆ ಅವರ ನಿಷ್ಟುರ ಅಭಿಪ್ರಾಯಗಳನ್ನು ಸಾತ್ವಿಕ ಆಕ್ರೋಶದ ದೃಷ್ಟಿಯಿಂದ ನೋಡಿದರೆ ಅವರ ಆ ಸಿಟ್ಟಿನ/ತಿರಸ್ಕಾರದ/ವ್ಯಂಗ್ಯದ ಅಭಿಪ್ರಾಯಗಳಿಗೆ ಕಾರಣಗಳೂ ಸಿಗುತ್ತವೆ ಮತ್ತು ಅವರು ಯಾರ ಕುರಿತು ತಿರಸ್ಕಾರದಿಂದ ಬರೆದಿದ್ದಾರೋ ಅವರೆಡೆಗಿನ ನಮ್ಮ ತಿರಸ್ಕಾರವೂ ಹೆಚ್ಚುತ್ತದೆ.

"ಕಲ್ಯಾಣ ಕೆಡುವ ಹಾದಿ" ನವರಸಗಳ ಪುಸ್ತಕ. ಅಪಾರ ಓದಿನ ಹಿನ್ನೆಲೆಯ ಬಾಲಸುಬ್ರಮಣಿಯನ್‌ರವರು ತಮ್ಮ ವಿದ್ವತ್ತು ಮತ್ತು ಉದ್ದೇಶವನ್ನು ಮಿಳಿತಗೊಳಿಸಿ ಇದನ್ನು ರಚಿಸಿದ್ದಾರೆ. ರೋಚಕ ಅಧ್ಯಾಯಗಳು ಇರುವ ಹಾಗೆ ಗಂಭೀರ ಮತ್ತು ತಾತ್ವಿಕ ಚಿಂತನೆಗಳ ಅಧ್ಯಾಯಗಳೂ ಇಲ್ಲಿವೆ. ಕೆಲವು ಜನಾಂಗೀಯದ್ವೇಷದ ಅಂಚಿಗೂ ಒಯ್ಯುತ್ತವೆ. ಆದರೆ ವಿ.ಬಾಲಸುಬ್ರಮಣಿಯನ್‌ ಅಪಾರ ನೈತಿಕತೆ ಮತ್ತು ಪ್ರಾಮಾಣಿಕತೆಯಿಂದ ಜೀವನ ಕಟ್ಟಿಕೊಂಡ ಬಂಡಾಯಗಾರ. ಒಳ್ಳೆಯದನ್ನು ಸಾಧಿಸಲು ಸಮಯ ಮತ್ತು ಸಂದರ್ಭ ನೋಡುವ ವಾಸ್ತವವಾದಿ. ಯಾರಿಗೂ ತನ್ನ ಆತ್ಮಗೌರವ ಅಡ ಇಡದ ಆಳು. ಪೆರಿಯಾರ್ ಅಭಿಮಾನಿ. ಕಮ್ಯುನಿಸ್ಟ್ ಅಲ್ಲದ ಮಾರ್ಕ್ಸ್‌ವಾದಿ. ಸತ್ಯನಿಷ್ಠೆಯ ನಿರೀಶ್ವರವಾದಿ.

ಇಂತಹ ಅಧಿಕಾರಿಗಳೂ ಕರ್ನಾಟಕದಲ್ಲಿ ಇದ್ದರು ಎನ್ನುವುದು ಕರ್ನಾಟಕಕ್ಕೂ ಹೆಮ್ಮೆ.

ಇನ್ನೂ ಬರೆಯಲು ಇದೆ. ಆದರೆ ಚುನಾವಣಾ ಪ್ರಚಾರದಲ್ಲಿ ಇರುವ ನಾನು ಕಳೆದ ನಾಲ್ಕೈದು ದಿನಗಳ ಪ್ರಯಾಣದ ಮತ್ತು ಬಿಡುವಿನ ಸಮಯದಲ್ಲಿ ಇದನ್ನು ಓದಿ ತಕ್ಷಣಕ್ಕೆ ಒಂದಷ್ಟು ದಾಖಲಿಸೋಣ ಎಂದು ಇಷ್ಟು ಬರೆದಿದ್ದೇನೆ. ಮಗದೂಮ್ಮೆ ಹೇಳುತ್ತೇನೆ:- ಕರ್ನಾಟಕದ ಪ್ರತಿಯೊಬ್ಬ ರಾಜಕಾರಣಿಯೂ, ಸಾಮಾಜಿಕ ಕಾರ್ಯಕರ್ತರೂ, ಪೊಲೀಸರೂ ಸೇರಿದಂತೆ ಪ್ರತಿಯೊಬ್ಬ ಸರ್ಕಾರಿ ನೌಕರರೂ, ಎಲ್ಲಾ ಹಂತಗಳ ನ್ಯಾಯಾಧೀಶ/ನ್ಯಾಯಮೂರ್ತಿಗಳೂ, ಸಾಮಾಜಿಕ ಚಿಂತಕರೂ ಓದಲೇಬೇಕಾದ ಪುಸ್ತಕ, "ಕಲ್ಯಾಣ ಕೆಡುವ ಹಾದಿ".

ಕೊನೆಯಲ್ಲಿ ಮತ್ತೊಂದು ವೈಯಕ್ತಿಕ ವಿಚಾರ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ವಿ.ಬಾಲಸುಬ್ರಮಣಿಯನ್‌ ಅವಿಭಜಿತ ಬೆಂಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಆಗಿದ್ದರು. ಅದೇ ಸಮಯದಲ್ಲಿ ನನ್ನ ತಂದೆ ಕೃಷ್ಣಾರೆಡ್ಡಿ ಇದೇ ಜಿಲ್ಲೆಯಲ್ಲಿ ಅವರದೇ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರಾಗಿ (Village Accountant) ಕೆಲಸ ಮಾಡುತ್ತಿದ್ದರು. ಈ ಪುಸ್ತಕ ಓದುವಾಗ ಅಪ್ಪನಿಗೆ ಕರೆ ಮಾಡಿ ಇವರ ಬಗ್ಗೆ ಗೊತ್ತಿತ್ತಾ ಮತ್ತು ಹೇಗೆ ಎಂದೆ. "ಎಮರ್ಜೆನ್ಸಿ ಸಮಯದಲ್ಲಿ ಅವರು ಇಲ್ಲಿ ಇದ್ದದ್ದು. ಸ್ಟ್ರಿಕ್ಟ್ ಇದ್ದರು. ಸರ್ಕಾರದ ಸಾಲ ಅಥವ ಬಾಕಿ ತೀರಿಸದವರ ಆಸ್ತಿಯನ್ನು ಮುಲಾಜಿಲ್ಲದೆ ಜಪ್ತು ಮಾಡುತ್ತಿದ್ದರು. ನಿವೃತ್ತಿಯ ನಂತರ ಭೂಕಬಳಿಕೆ ತೆರವು ವಿಚಾರದಲ್ಲಿಯೂ ಕೆಲಸ ಮಾಡಿದ್ದರು" ಎಂದು ಜ್ಞಾಪಿಸಿಕೊಂಡರು. ಈ ಬಾಕಿ ಕಂದಾಯ ವಸೂಲಿ ವಿಚಾರವಾಗಿ ನನ್ನಪ್ಪನ ಬಗ್ಗೆಯೂ ದಂತಕತೆ ಇದೆ ಎಂದು ಹಿಂದೊಮ್ಮೆ ಬರೆದಿದ್ದೆ. ಕಂದಾಯ ಕಟ್ಟದೇ ಇದ್ದದ್ದಕ್ಕೆ ಸೆಕ್ರೆಟರಿ ಕೃಷ್ಣಾರೆಡ್ಡಿ ಖೋಡೇಸ್ ಕಾರ್ಖಾನೆಯ ಗೇಟಿಗೆ ಬೀಗ ಹಾಕಿ ಬಾಕಿ ವಸೂಲಿ ಮಾಡಿದ್ದರು ಎನ್ನುವ ದಂತಕತೆಯನ್ನು ನಾನು ಚಿಕ್ಕವನಿದ್ದಾಗ ನಮ್ಮಪ್ಪನನ್ನು ಬಿಟ್ಟು ಮಿಕ್ಕವರೆಲ್ಲರೂ ನಮಗೆ ಹೇಳುತ್ತಿದ್ದರು. ಆದರೆ ಅಪ್ಪ ಅದನ್ನು ಈಗಲೂ ನಿರಾಕರಿಸುತ್ತಾರೆ. ಬಹುಶಃ ಅದು ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳ ಸುವರ್ಣಯುಗ. ಈಗಿಲ್ಲದ, ಪತನವಾದ ಯುಗ. Fall from Grace.

ಲೇಖಕಿ ಸಂಧ್ಯಾರಾಣಿ ಅಪಾರ ಪ್ರೀತಿ ಮತ್ತು ಜವಾಬ್ದಾರಿಯಿಂದ ಇದನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ್ದಾರೆ. ಬಾಲಸುಬ್ರಮಣಿಯನ್ನರ ಪದಪುಂಜಗಳಲ್ಲಿ ಮತ್ತು ವಾಕ್ಯಗಳಲ್ಲಿ ಎಲ್ಲೆಂದರಲ್ಲಿ ಯಾವಾಗೆಂದರೆ ಆಗ ಸೋರುವ ಜಾರುವ ವ್ಯಂಗ್ಯವನ್ನು ಅಷ್ಟೇ ಪರಿಣಾಮಕಾರಿಯಾಗಿ ಕನ್ನಡಕ್ಕೆ ತರುವುದು ಸವಾಲಿನ ಕೆಲಸ. ಒಳ್ಳೆಯ ಪದಸಂಪತ್ತು ಮತ್ತು ಹಾಸ್ಯಪ್ರಜ್ಞೆ ಇದ್ದವರಿಂದ ಮಾತ್ರ ಅದು ಸಾಧ್ಯ. ಇದನ್ನು ಕನ್ನಡಕ್ಕೆ ತಂದದ್ದಕ್ಕೆ ಸಂಧ್ಯಾರಾಣಿಯವರನ್ನು ಮತ್ತು ಈ ಮೌಲಿಕ ಕೃತಿಯನ್ನು ಪ್ರಕಟಿಸಿದ "ಲಡಾಯಿ ಪ್ರಕಾಶನ"ದವರನ್ನು ನಾನು ಪ್ರೀತಿ ಮತ್ತು ಕೃತಜ್ಞತೆಯಿಂದ ಅಭಿನಂದಿಸುತ್ತೇನೆ, ಧನ್ಯವಾದ ತಿಳಿಸುತ್ತೇನೆ.

ತಪ್ಪಿಸಲಾಗದ ಟೀಕೆ: ಇಷ್ಟೊಂದು ಮೌಲ್ಯಯುತ ಕೃತಿಯಲ್ಲಿ ಇರುವ ಕಾಗುಣಿತ ದೋಷಗಳು ಒಂದೆರಡಲ್ಲ, ನೂರಾರು. ಇದರ ಹೊಣೆಯನ್ನು ಲೇಖಕರು ಮತ್ತು ಪ್ರಕಾಶಕರೇ ಹೊರಬೇಕು. ಕರ್ನಾಟಕದ ಚರಿತ್ರೆಯ ಅಧ್ಯಾಯವೊಂದರ ದಾಖಲು ಈ ಪುಸ್ತಕ. ಇದರಲ್ಲಿ ತಪ್ಪುಗಳು ನುಸುಳುವುದು ಅಕ್ಷಮ್ಯ. ಕಾಗುಣಿತದ ದೋಷಗಳ ಜೊತೆಗೆ ಕೆಲವು ಮಾಹಿತಿಗಳೂ ತಪ್ಪಿನಿಂದ ಕೂಡಿವೆ. ಬಹುಶಃ ಅವು ಮೂಲದಲ್ಲಿಯೂ ಇರಬಹುದು. ಕೆಲವೊಮ್ಮೆ ಇಸವಿಗಳು ತಪ್ಪಾಗಿವೆ. (1980 ಇರಬೇಕಾದದ್ದು ಎರಡು ಕಡೆ 1880 ಎಂದಿದೆ. ಇಂತಹವು ಹಲವು.) ನಿಜಲಿಂಗಪ್ಪ ದಾವಣಗೆರೆಯವರಾದರೆ, ಸದಾನಂದಗೌಡ ಚಿಕ್ಕಮಗಳೂರಿನವರಾಗಿದ್ದಾರೆ. ಜೆ. ಎಚ್.ಪಟೇಲ್ ಹಲವು ಕಡೆ ಪಾಟೀಲ್ ಆಗಿದ್ದಾರೆ. ಇತ್ಯಾದಿ... ಇದನ್ನು ಮುದ್ರಿಸುವುದಕ್ಕೆ ಮೊದಲು ಒಂದಿಬ್ಬರು ಹಿರಿಯ ಪತ್ರಕರ್ತ ಅಥವ ಬರಹಗಾರರಿಂದ ಓದಿಸಿ, ಇಂತಹ factual errors ಇಲ್ಲದಂತೆ ನೋಡಿಕೊಳ್ಳಬೇಕಿತ್ತು. ಗಂಭೀರ ಮತ್ತು ವೈಚಾರಿಕ ಸಾಹಿತ್ಯವನ್ನು ಪ್ರಕಟಿಸುವ ಕನ್ನಡದ ಪ್ರಕಾಶಕರ ವೃತ್ತಿಪರತೆ ಬಗ್ಗೆ ಈ ವಿಚಾರದಲ್ಲಿ ನನಗೆ ಅತೀವ ನಿರಾಸೆ ಆಗುತ್ತಿದೆ. ಈ ಪುಸ್ತಕ ಬಹುಬೇಗನೆ ಎರಡನೆಯ ಮುದ್ರಣ ಕಾಣಲಿ ಮತ್ತು ಆ ಸಂದರ್ಭದಲ್ಲಿ ಈ ಮೇಲಿನ ಎಲ್ಲಾ ತಪ್ಪುಗಳು ಸರಿಯಾಗಲಿ ಎಂದು ಆಶಿಸುತ್ತೇನೆ.

ಆದರೆ ಬಹುತೇಕ ಓದುಗರಿಗೆ ಇವು ಅಷ್ಟೇನೂ ಮುಖ್ಯವಲ್ಲ. ದಯವಿಟ್ಟು ಎಲ್ಲರೂ ಈ ಪುಸ್ತಕ ಓದಿ. ಅದರಿಂದ ನ್ಯಾಯ ಮತ್ತು ಮೌಲ್ಯಗಳ ಪರಿಕಲ್ಪನೆ ಹಿಗ್ಗಿಸಿಕೊಳ್ಳಿ. ಒಳ್ಳೆಯದನ್ನು, ಒಳ್ಳೆಯವರನ್ನು ಬೆಂಬಲಿಸಿ. ಭ್ರಷ್ಟತೆ ಮತ್ತು ದುಷ್ಟತೆಯನ್ನು ತಿರಸ್ಕರಿಸಿ. ಅಂತಹ ಕಠಿಣ ನಿಲುವು ಯಾಕೆ ತಳೆಯಬೇಕು ಎನ್ನುವ ತಾತ್ವಿಕ ಆಧಾರ ನಿಮಗೆ ಈ ಪುಸ್ತಕದಲ್ಲಿ ಧಾರಾಳವಾಗಿ ಸಿಗುತ್ತದೆ.

ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

* ರವಿ ಕೃಷ್ಣಾರೆಡ್ಡಿ
21-04-2024.

 

MORE FEATURES

ಮಂಗಳ ಅವರ ಕವಿತೆಗಳು ತಿಳಿನೀರ ಕೊಳದಂತಿವೆ: ಚಿಂತಾಮಣಿ ಕೊಡ್ಲೆಕೆರೆ

03-05-2024 ಬೆಂಗಳೂರು

“ಭಾವಗಳ ಬಂಧದಲಿ” ಕವಿತೆ ನಿಜಕ್ಕೂ ತುಂಬ ಬಿಗಿಯಾಗಿದೆ. ತನ್ನ ಭಾವಮಯತೆಯನ್ನು ಶಕ್ತಿಯಾಗಿಸಿಕೊಂಡ ಹೆಣ್ಣಿನ ...

ದ್ವಾಪರ ಯುಗಕ್ಕೆ ಮುಗಿಯಲಿಲ್ಲ ಮಹಾಭಾರತ, ಇಂದಿಗೂ ಪ್ರಸ್ತುತ ಶಕುನಿಯ ಸಂಚು

03-05-2024 ಬೆಂಗಳೂರು

'400 ಪುಟಗಳ ದೊಡ್ಡ ಕಾದಂಬರಿಯನ್ನು ಓದಿಸುವ ಶೈಲಿಯಲ್ಲಿ ಬರೆಯುವಲ್ಲಿ ಜೋಗಿ ಸಂಪೂರ್ಣ ಯಶಸ್ವಿ ಅಗಿದ್ದಾರೆ. ಮಹಾಭಾರತ...

ತೇಜಸ್ವಿಯವರು ತಮ್ಮ ತಂದೆಯ ನೆನಪುಗಳಲ್ಲಿ ನೇಯ್ದ ಅದ್ಭುತ ಕೃತಿ 'ಅಣ್ಣನ ನೆನಪು'

03-05-2024 ಬೆಂಗಳೂರು

"ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ತೇಜಸ್ವಿಯವರು ಬರೆಯದ ವಿಷಯವಿಲ್ಲ ಎನ್ನಬಹುದು. ಕಥೆ, ಸಾಹಿತ್ಯ ವಿಜ್ಞಾನ ...