ಕನಸುಗಳು ಮೈದೋರಿದಾಗ

Date: 23-11-2021

Location: ಬೆಂಗಳೂರು


'ಸರ್ರಿಯಲಿಸಂ ಪಂಥಕ್ಕೆ ಕನಸುಗಳೇ ಮೂಲ ವಸ್ತು. ‘ಡ್ರೀಮ್ ಸ್ಕೇಪ್’ ಎಂಬುದಾಗಿ ಈ ಶೈಲಿಯ ಕಲಾಕೃತಿಗಳನ್ನು ಕರೆದಿರುವುದು ತುಂಬ ಸರಿಯಾಗಿಯೇ ಇದೆ' ಎನ್ನುತ್ತಾರೆ ಲಕ್ಷ್ಮಣ ಬಾದಾಮಿ. ಅವರು ತಮ್ಮ ವರ್ಣಯಾತ್ರೆ ಅಂಕಣದಲ್ಲಿ ಸ್ಪೇನ್ ಮೂಲದ ಸರ್ರಿಯಲಿಸಂ ಕಲಾವಿದ ಸಾಲ್ವಡಾರ್ ಡಾಲಿ ಅವರ ಕಲಾಕೃತಿಗಳ ಕುರಿತು ವಿಶ್ಲೇಷಿಸಿದ್ದಾರೆ.

ಕಲಾಕೃತಿ: ‘ಎಚ್ಚರಗೊಳ್ಳುವ ಒಂದು ಸೆಕೆಂಡ್ ಮೊದಲು ಬಿದ್ದ ಕನಸು’
ಕಲಾವಿದ: ಸಾಲ್ವಡಾರ್ ಡಾಲಿ
ಕಾಲ: 1904- 1989
ದೇಶ: ಸ್ಪೇನ್
ಕಲಾಪಂಥ: ಸರ್ರಿಯಲಿಸಂ

ಸಾಲ್ವಡಾರ್ ಡಾಲಿ ಕಲಾಕೃತಿಗಳನ್ನು ನೋಡಿದಾಗ ಒಂದು ಅನೂಹ್ಯ ಜಗತ್ತು ನಮ್ಮ ಕಣ್ಮುಂದೆ ನಿಂತತಾಗುತ್ತದೆ. ಇಲ್ಲಿ ಅಷ್ಟೊಂದು ಸಂಕೀರ್ಣತೆಯೇನೂ ಇಲ್ಲ. ಒಂದು ನಿರ್ದಿಷ್ಟತೆ ಇದೆ. ಹಾಗೆಂದು ಎಲ್ಲ ನಿಚ್ಚಳವಾಗಿ ತೆರೆದಿಡಲಾಗಿದೆಯೆಂದೇನೂ ಅಲ್ಲ. ವಿಚಿತ್ರ ಸಂಕೇತಗಳನ್ನು ಸೃಜಿಸಿ ನಿಗೂಢ ದೃಶ್ಯಲೋಕವೊಂದಕ್ಕೆ ಕರೆದೊಯ್ಯುತ್ತಾರೆ. ಈ ಕೃತಿಗಳ ಕುರಿತು ಹಾಗೇ ಯೋಚಿಸುತ್ತಾ ಸಾಗಿದರೆ ನಾವೂ ಒಂದೊಮ್ಮೆ ಈ ತೆರನಾದ ದೃಶ್ಯಗಳಿಗೆ ಎದುರಾದ ನೆನಪು ಅಸ್ಪಷ್ಟವಾಗಿ ಮೂಡುತ್ತದೆ. ಎಲ್ಲೀ..? ಎಲ್ಲೀ..?

ಹಾಂ.. ಕನಸಿನಲ್ಲಿ! ಯಾವೊತ್ತೋ ಬಿದ್ದಿದ್ದ ಕೆಟ್ಟ ಕನಸು. ಆ ಕನಸಿನಲ್ಲಿ ಉದ್ದನೆಯ ಚೂಪಾದ ಉಗುರುಳ್ಳ, ಕೋರೆ ಹಲ್ಲಿನ ವಿಕಾರ ಮನುಷ್ಯ ಎದೆಯ ಮೇಲೆ ಕುಳಿತಿದ್ದ. ಮೈ ಕೈ ತಲೆ ಎಲ್ಲವೂ ಮಿಸುಕಾಡಿಸಲಾಗದಷ್ಟು ಭಾರವಾಗಿದ್ದವು. ಅಯ್ಯೋ..!! ಇನ್ನೇನು ಎನ್ನುವಷ್ಟರಲ್ಲಿ ಕನಸೊಡೆಯಿತು. ಎಲ್ಲಾ ಕಗ್ಗಂಟಾಗಿ ಉಳಿಯಿತು. ಇಂಥ ಎಷ್ಟೆಷ್ಟೋ ಕೆಟ್ಟ-ಭಯಂಕರ, ಅರ್ಥವಾಗದ, ನೆನಪಿನಲ್ಲುಳಿಯದ ಕನಸುಗಳನ್ನು ನಾವೆಲ್ಲ ಕಂಡಿದ್ದೇವೆ. ಅಂಥ ಕನಸುಗಳ ತನ್ನ ಲೋಕವನ್ನು ಡಾಲಿ ಇಲ್ಲಿ ಚಿರಸ್ಥಾಯಿಗೊಳಿಸಲು ಮುಂದಾಗಿದ್ದೇನೆ.

ಇಲ್ಲೊಂದು ಚಪ್ಪಟೆಯಾದ ಕಲ್ಲುಬಂಡೆ ಇದೆ. ಇದು ನೀರಿನಲ್ಲಿ ತೇಲುತ್ತಿದೆಯೋ ಸ್ಥಿರವಾಗಿದೆಯೋ ತಿಳಿಯದು. ಅದರ ಮೇಲೆ ನಗ್ನ ಹೆಂಗಸೊಬ್ಬಳು ಮಲಗಿದ್ದಾಳೆ. ಹೆಂಗಸಿನ ಕಾಲ ಬಳಿ ಮೇಲೆ ದೊಡ್ಡದೊಂದು ಸಿಪ್ಪೆ ಸುಲಿದ ದಾಳಿಂಬೆ ಹಣ್ಣಿದೆ. ಆ ಹಣ್ಣಿನೊಳಗಿಂದ ಒಂದು ರಾಕ್‍ಫಿಶ್, ಆ ಫಿಶ್‍ನೊಳಗಿಂದ ಹುಲಿಯೊಂದು ಉದ್ಭವಿಸಿದೆ. ಈ ಹುಲಿಯು ಇನ್ನೊಂದು ಹುಲಿಯ ಮೇಲೆ ಎರಗುವಂತಿದೆ. ಆ ಹುಲಿಯು ಹೆಂಗಸಿನ ಮೇಲೆ ಎರಗುವಂತಿದೆ. ಜೊತೆಗೆ ಒಂದು ರೈಫಲ್ ಕೂಡಾ ಹೆಂಗಸಿಗೆ ಗುರಿಯಿಟ್ಟು ತಿವಿಯುತ್ತಲಿದೆ. ಇವು ಒಂದರ ಮೇಲೆ ಒಂದು ದಾಳಿ ಮಾಡುತ್ತಿವೆಯಾ.. ಇಲ್ಲವೆ ಎಲ್ಲ ಸೇರಿ ಹೆಂಗಸಿನ ಮೇಲೆಯೇ ಆಕ್ರಮಣ ಮಾಡುತ್ತಿವೆಯಾ.. ಸ್ಪಷ್ಟವಿಲ್ಲ.

ಆಶ್ಚರ್ಯವೆಂದರೆ ಹೆಂಗಸಿನ ಬಳಿ ಎರಡು ಹನಿ ಕಣ್ಣೀರೋ.. ಬೆವರೋ.. ಅಥವಾ ನೀರೋ ತಿಳಿಯದು ಅವು ಗಾಳಿಯಲ್ಲಿ ತೇಲುತ್ತಿವೆ. ಇದರಂತೆ ಅಲ್ಲಿಯೇ ಒಂದು ಚಿಕ್ಕ ದಾಳಿಂಬೆ ಹಣ್ಣು ಸಹ ಗಾಳಿಯಲ್ಲಿದೆ. ನೀರಹನಿ, ದಾಳಿಂಬೆಯ ನೆರಳು ಇವುಗಳಿಗಿಂತ ತುಸು ದೂರದಲ್ಲಿರುವುದರಿಂದ ಇವು ಗಾಳಿಯಲ್ಲಿ ತೇಲುತ್ತಿವೆಯೆಂದು ಸ್ಪಷ್ಟವಾಗಿ ಅಂದುಕೊಳ್ಳಬಹುದು. ಈ ದಾಳಿಂಬೆಯ ಹತ್ತಿರಕ್ಕೆ ಜೇನುನೋಣವೊಂದು ಸುಳಿದಿದೆ. ಇದರ ಜೀಕಾರದ ಧ್ವನಿಗೆ ಹೆಂಗಸು ಇನ್ನೇನು ಎಚ್ಚರಗೊಳ್ಳುವವಳಿದ್ದಾಳೆ (ಹಾಗೆಂದು ಕಲಾವಿದ ಈ ಚಿತ್ರಕ್ಕೆ ಶೀರ್ಷಿಕೆ ಕೊಟ್ಟಿದ್ದಾನಲ್ಲ!). ಇದರ ಹಿನ್ನೆಲೆಯಲ್ಲಿ ಆನೆಯೊಂದನ್ನು ಮೇಲಕ್ಕೆ ಆಗಸಕ್ಕೆ ಎಳೆದೊಯ್ಯುವ ಪ್ರಯತ್ನವೊಂದು ನಡೆದಿದೆ. ಆನೆ ಮಾತ್ರ ನೆಲದ ನಂಟು ಕಳಚಿಕೊಳ್ಳಲಾರೆ ಎಂಬಂತೆ ತನ್ನ ಕಾಲುಗಳನ್ನು ಹಿಗ್ಗಿಸುತ್ತ.. ನೆಲಕ್ಕೆ ಊರುವ ಪ್ರಯತ್ನದಲ್ಲಿದೆ. ಮೇಲಿನ ಬಲವಾದ ರಭಸಕ್ಕೆ ಆನೆಯ ಸಾಮರ್ಥ್ಯ ಕ್ಷೀಣವಾಗುತ್ತ ಅದರ ಕಾಲುಗಳು ಕಡ್ಡಿ ತರಹ ತೆಳ್ಳಗೆ ಕೊಕ್ಕರೆ ಕಾಲುಗಳಂತಾಗಿವೆ. ಆನೆಯ ದಯನೀಯ ಸ್ಥಿತಿಯಂತೆ ಉದಾರವಾಗಿ ಮಲಗಿರುವ ಹೆಂಗಸಿನದು ಆಗಿರಬಹುದಾ..?

ದಾಳಿಂಬೆಯು ಕ್ರಿಶ್ಚಿಯನ್ ಸಂಕೇತಗಳ ಪ್ರಕಾರ ಫಲವತ್ತತೆಯನ್ನು ಮತ್ತು ಪುನರುತ್ಥಾನವನ್ನೂ; ಜೇನುನೋಣವು ಸಾಂಪ್ರದಾಯಿಕವಾಗಿ ವರ್ಜಿನ್‍ನ್ನು ಸೂಚಿಸುತ್ತದೆ. ಈ ಸಂಕೇತಗಳನ್ನಿಟ್ಟುಕೊಂಡು ನೋಡಿದರೆ ಪೇಂಟಿಂಗ್ ಒಂದು ಬಗೆಯಲ್ಲಿ ಕಾಣುತ್ತದೆ. ಈ ಕನಸು, ಸಂಕೇತಗಳು ಇವೆಲ್ಲವನ್ನು ಬದಿಗಿಟ್ಟು ವರ್ತಮಾನದಲ್ಲಿ ನಿಂತು ಕಲಾಕೃತಿಯನ್ನು ನೋಡಿದರೆ ಹೆಣ್ಣಿನ ಮೇಲೆ ನಡೆಯುತ್ತಿರುವ ದುರಾಕ್ರಮಣಗಳನ್ನು ಸ್ಪಷ್ಟ ರೂಪಕಗಳೊಂದಿಗೆ ತೆರೆದಿಡುತ್ತದೆ. ಇದೊಂದು ಶುದ್ಧ ಸ್ತ್ರೀವಾದಿ ಕಲಾಕೃತಿಯಾಗಿ ಗಮನಸೆಳೆಯುತ್ತದೆ.

ಡಾಲಿ ಸರ್ರಿಯಲಿಸಂನ ಅತ್ಯಂತ ಪ್ರಮುಖ ಕಲಾವಿದನಾಗಿದ್ದರೂ ಅವನು ಆರಂಭದಲ್ಲಿ ಎಲ್ಲ ಶೈಲಿಗಳಲ್ಲೂ ಕೆಲಸ ಮಾಡಿದ್ದಾನೆ. ಸಾಂಪ್ರದಾಯಿಕವಾಗಿStill Life, Landscape, Portrait ಗಳನ್ನೂ ಮತ್ತು Cubism, Fauvism ಶೈಲಿಯ ಕೆಲವು ಕೃತಿಗಳನ್ನು ಮಾಡಿ ನಂತರದಲ್ಲಿ ಸಂಪೂರ್ಣವಾಗಿ ತನ್ನನ್ನು ಸರ್ರಿಯಲಿಸಂಗೆ ಸಮರ್ಪಿಸಿಕೊಂಡನೆಂದನಿಸುತ್ತದೆ. ಬಹಳಷ್ಟು ಕಡೆ ನೋಡುಗನಿಗೆ ಪರಿಚಿತ ಆಕೃತಿಗಳೇ ಕಲಾಕೃತಿಯಲ್ಲಿದ್ದರೂ ಅವುಗಳ ಎದಿರು ವಿರುದ್ಧವೆನಿಸುವ ವಸ್ತುಗಳನ್ನಿಟ್ಟು ಅಸಂಗತಗೊಳಿಸಿಬಿಡುತ್ತಾನೆ. ಇನ್ನೊಂದೆಡೆ ವಿಲಕ್ಷಣ ಆಕಾರಗಳನ್ನು ಸೃಜಿಸಿ ಯೋಚನೆಗೆ ಅವಕಾಶವೇ ಇಲ್ಲದಂತೆ ಕಗ್ಗಂಟಾಗಿಸಿಬಿಡುತ್ತಾನೆ.

ಡಾಲಿಯ ಬಹಳಷ್ಟು ಕೃತಿಗಳಲ್ಲಿ ದಿಗಂತ, ಆಕಾಶಕ್ಕೆ ಸಾಕಷ್ಟು ಅವಕಾಶವನ್ನು ನೀಡಿದ್ದಾನೆ. ಗಡಿಯಾರ, ಇರುವೆ, ಮೊಟ್ಟೆಗಳು ಮತ್ತೆ ಮತ್ತೆ ಕಾಣಿಸುವ ರೂಪಗಳು. The Bleeding Roses, Woman with a head of Roses, Honey is Sweeter than Blood, Women with Drawers, Mae West Lips Sofa ಇಂಥ ಕೆಲವು ಕೃತಿಗಳಲ್ಲಿ ಸ್ತ್ರೀಪರ ಚಿಂತನೆ ಎದ್ದು ಕಾಣುತ್ತದೆ. ಅವನ ಪತ್ನಿ ಗಾಲಾ ಸಹ ಬಹಳಷ್ಟು ಕಲಾಕೃತಿಗಳಲ್ಲಿ ಮಾಡೆಲ್ ಆಗಿ ಕಾಣಿಸಿಕೊಂಡಿದ್ದಾಳೆ. ಸ್ವತಃ ತನ್ನ ಭಾವಚಿತ್ರವನ್ನು ಡಾಲಿ ವ್ಯಂಗ್ಯಕ್ಕೀಡುಮಾಡಿದ್ದಾನೆ. ಇಷ್ಟಲ್ಲದೆ ಪಿಕಾಸೋನ `ದಿ ಲೇಡೀಸ್ ಆಫ್ ಅವಿಗ್ನಾನ’ ಮತ್ತು ಹೆನ್ರಿ ಮತೀಸ್‍ನ ‘ಡಾನ್ಸ್’ ಕೃತಿಗಳನ್ನು ವಿಡಂಬಣೆ ಮಾಡುವ ಕೃತಿಗಳನ್ನು ರಚಿಸಿದ್ದಾನೆ.

ಸಾವಿರಾರು ಕೃತಿಗಳನ್ನು ಡಾಲಿ ರಚಿಸಿದ್ದಾನೆ. ಅವುಗಳಲ್ಲಿ ಇನ್ನೂ ಮೊದಲಾದ ಕೃತಿಗಳು ತುಂಬಾ ಪ್ರಸಿದ್ಧಿಯನ್ನು ಪಡೆದಿವೆ. ಹಲವು ಕ್ರಿಯಾಶೀಲ ಕ್ಷೇತ್ರಗಳತ್ತ ಡಾಲಿಯ ಪ್ರತಿಭೆ ಹರಿದಾಡುತ್ತಲೇ ಇರುತ್ತಿತ್ತು. ಹೀಗಾಗಿ ವರ್ಣಚಿತ್ರವಷ್ಟೇ ಅಲ್ಲದೇ ಸಿನಿಮಾಕ್ಷೇತ್ರದಲ್ಲಿಯೂ ಅವನು ಕೆಲಸ ಮಾಡಿದ್ದಾನೆ. 1926ರಲ್ಲಿ ಚಲನಚಿತ್ರ ನಿರ್ದೇಶಕ ಲೂಯಿಸ್ ಬುನುವೆಲ್ ಅವರ ಜೊತೆಗೂಡಿ `Un Chien Andalou’ ಎಂಬ ಸಿನಿಮಾಕ್ಕೆ ಕೆಲಸ ಮಾಡಿದ್ದಲ್ಲದೆ ಇನ್ನೂ ಎರಡು ಹಾಲಿವುಡ್ ಸಿನಿಮಾಗಳಿಗೂ ಕೆಲಸ ಮಾಡಿದ್ದಾನೆ.

1926ರಲ್ಲಿ ಮೊದಲ ಬಾರಿಗೆ ಪ್ಯಾರಿಸ್ಸಿಗೆ ಡಾಲಿ ತೆರಳಿದಾಗ ಅಲ್ಲಿ ಇನ್ನೊಬ್ಬ ಜಗದ್ವಿಖ್ಯಾತ ಕಲಾವಿದ ಪ್ಲಾಬೋ ಪಿಕಾಸೊನನ್ನು ಭೇಟಿಯಾದನು. ಡಾಲಿಯ ಬಗ್ಗೆ ಜಾನ್ ಮೀರೊನಿಂದ ಸದಭಿಪ್ರಾಯದ ಮಾತುಗಳನ್ನು ಕೇಳಿದ್ದ ಪಿಕಾಸೊ, ಯ್ವೆಸ್ ಟ್ಯಾಂಗ್ವೆ ಮತ್ತೀತರ ತನ್ನ ಸರ್ರಿಯಲಿಸ್ಟ್ ಸ್ನೇಹಿತರಿಗೆ ಡಾಲಿಯನ್ನು ಪರಿಚಯಿಸಿದನು. ಮುಂದೆ ಪಿಕಾಸೊ, ಜಾನ್ ಮೀರೊ ಅವರಿಂದ ಪ್ರಭಾವಿತನಾಗಿ ಕೆಲವು ಕೃತಿಗಳನ್ನು ಡಾಲಿ ರಚಿಸಿದನು.

ಸರ್ರಿಯಲಿಸಂ: ಈ ಪಂಥಕ್ಕೆ ಕನಸುಗಳೇ ಮೂಲ ವಸ್ತು. ‘ಡ್ರೀಮ್ ಸ್ಕೇಪ್’ ಎಂಬುದಾಗಿ ಈ ಶೈಲಿಯ ಕಲಾಕೃತಿಗಳನ್ನು ಕರೆದಿರುವುದು ತುಂಬ ಸರಿಯಾಗಿಯೇ ಇದೆ. ನಮ್ಮ ಡಿವಿಜಿಯವರು ಈ ಕುರಿತು ಹೀಗೆ ಹೇಳುತ್ತಾರೆ- ‘ನಾವು ಇಂದ್ರಿಯಗಳಿಂದ ಯಾವ ವಾಸ್ತವ ಪ್ರಪಂಚದ ಅನುಭವವನ್ನು ಪಡೆಯುತ್ತೇವೆಯೋ ಅದನ್ನು ಭೇದಿಸಿಕೊಂಡು ಮನಸ್ಸಿನ ಅಂತರಾಳದಲ್ಲಿರುವ ಸುಪ್ತ, ಅರ್ಧಸುಪ್ತ ಜೀವನವನ್ನು ಮಾಡಿಕೊಳ್ಳಲು ಯತ್ನಿಸುತ್ತದೆ ಈ ಸರ್ರಿಯಲಿಸಂ.’ 1920ರಲ್ಲಿ ಫ್ರೆಂಚ್ ಲೇಖಕ ಆಂಡ್ರೆ ಬ್ರೆಟನ್ ಸಾಹಿತ್ಯದಲ್ಲಿ ‘ಸರ್ರಿಯಲಿಸಂ’ ಶೈಲಿಯನ್ನು ಆರಂಭಿಸಿದ. ಅಲ್ಲಿಂದ ಇದು ವರ್ಣಚಿತ್ರ ಕ್ಷೇತ್ರಕ್ಕೂ ಕಾಲಿರಿಸಿತು. ಪ್ರಸಿದ್ಧ ಮನೋವಿಜ್ಞಾನಿ ಸಿಗ್ಮಂಡ್ ಫ್ರೈಡನ ಮನೋವಿಶ್ಲೇಷಣಾತ್ಮಕ ಶೋಧನೆಗಳು ಸಾಲ್ವಡಾರ್ ಡಾಲಿಯ ಮೇಲೆ ಬಹಳಷ್ಟು ಪ್ರಭಾವ ಬೀರಿದವು. ‘ವ್ಯಕ್ತಿಯೊಬ್ಬ ತಾನು ಈಡೇರಿಸಿಕೊಳ್ಳಲಾಗದ ಆಸೆ ಆಕಾಂಕ್ಷೆಗಳನ್ನು ಹತ್ತಿಕ್ಕುತ್ತಾನೆ. ಅವು ಮೇಲೇಳಲು ಪ್ರಯತ್ನ ಮಾಡಿದಂತೆಲ್ಲ ಅವನು ಒಳಕ್ಕೆ ದೂಡುತ್ತಾನೆ. ಹೀಗೆ ದಬಾಯಿಸಲ್ಪಟ್ಟ ಆಸೆ ಆಕಾಂಕ್ಷೆಗಳೆಲ್ಲ ಅಚೇತನ ಮನಸ್ಸನ್ನು ಸೇರುತ್ತವೆ ಹಾಗೂ ಅಧಿಕ ಶಕ್ತಿಯಿಂದ ವಿಕೃತ ರೂಪ ಪಡೆದು ಜೀವನವನ್ನು ಆಳತೊಡಗುತ್ತವೆ. ಸ್ವಪ್ನಗಳು ಹೀಗೆ ಒತ್ತಿಡಲ್ಪಟ್ಟ ಭಾವನೆಗಳಿಂದ ಹುಟ್ಟಿಕೊಳ್ಳುತ್ತವೆ’.1 ಡಾಲಿಯ ಕೃತಿಗಳು ಥೇಟ್ ಪ್ರೈಡನ ಈ ವಿಶ್ಲೇಷಣೆಯಂತೆಯೇ ಇವೆ.`ನಿಜ ಜೀವನದಲ್ಲಿ ಕಾಣದೆ ಇರುವುದನ್ನು, ಅಂದರೆ ಸ್ವಪ್ನಗಳಲ್ಲಿ, ಉನ್ಮಾದಾವಸ್ಥೆಯ ಅನಭವಗಳನ್ನು ಚಿತ್ರದಲ್ಲಿ ಚಿತ್ರಿಸಿದ. ಅವನ ಅಲೌಕಿಕ ಆಕಾರಗಳು, ಮೈಥುನ ಮುಂತಾದ ಚಿತ್ರಗಳು ಹೊಸ ಸಂವೇದನೆಯನ್ನು ಉಂಟುಮಾಡಿ ಚಿತ್ರಕಲಾ ದಿಗ್ಭ್ರಮೆಗೊಳಿಸಿದವು.’2 ಇದು ಕೇವಲ ಕನಸುಗಳ ಚಿತ್ರಣವಾಗಿರದೇ ಆ ಮೂಲಕ ವಾಸ್ತವದಲ್ಲಿ ಮನುಷ್ಯ ಮನಸ್ಸಿನ ತೊಡಕುಗಳ ಬಿಂಬವು ಆಗಿದೆ. ಈ ಚಳುವಳಿಯ ಕಲಾವಿದರು `ಕಲೆಯು ಸುಪ್ತ ಮನಸ್ಸಿನಿಂದ ಹೊರ ಹೊಮ್ಮಬೇಕಲ್ಲದೇ ವ್ಯಕ್ತಿಯ ಶೈಕ್ಷಣಿಕ ಪಾಂಡಿತ್ಯದಿಂದಲ್ಲ’3 ಎಂದು ತಿಳಿದಿದ್ದರು. Joan Miro, Rene Magritte, Yves Tanguy, Alberto Giacometti, Andre Masson, Man Ray, Max Ernst ಈ ಪಂಥದ ಕಲಾವಿದರಾಗಿದ್ದರು.
_____
1.ಡಾ. ಕಾಶಿನಾಥ ಅಂಬಲಗೆ (ಅನು) `ಸೌಂದರ್ಯ ಶಾಸ್ತ್ರ’- ಲಲಿತಕಲಾ ಅಕಾಡೆಮಿ, ಬೆಂಗಳೂರು
2.ಎನ್. ಮರಿಶಾಮಾಚಾರ್ಯ `ಕಲಾ ದಿಗ್ಗಜರು’- ಸಿ.ಎಂ.ಎನ್. ಪ್ರಕಾಶನ, ಬೆಂಗಳೂರು
3.ವಿ. ಟಿ. ಕಾಳೆ `ಚಿತ್ರಕಲಾ ದರ್ಪಣ’- ಲಲಿತಕಲಾ ಅಕಾಡೆಮಿ, ಬೆಂಗಳೂರು

ಸಾಲ್ವಡಾರ್ ಡಾಲಿ ಕೆಲವು ಕಲಾಕೃತಿಗಳು:

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...