"ಕನ್ನಡ ಎಂಎ – ಸ್ಪೋರ್ಟ್ಸ್ ಚಾಂಪಿಯನ್!" - ರಾಜಾರಾಂ ತಲ್ಲೂರು


ಕರ್ನಾಟಕದ ರಾಜಕೀಯದ ಗುಣಮಟ್ಟ ಹಿಡಿದಿರುವ ಹಾದಿಯ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಹಲವು ತೋರುಗಂಬಗಳನ್ನು ಹೊಂದಿರುವ ಪುಸ್ತಕ ಇದು ಎನ್ನುತ್ತಾರೆ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು. ವೀರಣ್ಣ ಕಮ್ಮಾರ ಅವರು ಸಂಪಾದಿಸಿರುವ ಬಿದಿರು ನೀನ್ಯಾರಿಗಲ್ಲದವಳು ಮೋಟಮ್ಮ ಅವರ ಆತ್ಮಕಥನದ ಕುರಿತು ಬರೆದ ಲೇಖನ ನಿಮ್ಮ ಓದಿಗಾಗಿ...

ಆತ್ಮಕಥನಗಳ ಆಸಕ್ತ ಓದುಗ ನಾನು. ಹಾಗಾಗಿ ಮೋಟಮ್ಮ ಅವರ ಆತ್ಮಕಥನ “ಬಿದಿರು ನೀನ್ಯಾರಿಗಲ್ಲದವಳು” ಹೊರಬಂದ ತಕ್ಷಣ ತರಿಸಿಕೊಂಡು ಓದಿ ಮುಗಿಸಿದೆ. ಮೋಟಮ್ಮ ಅವರ ಹಸ್ತಾಕ್ಷರದೊಂದಿಗೆ ಈ ಪುಸ್ತಕ ತಲುಪಿರುವುದು ನನಗೆ ಬೋನಸ್. ಎರಡು ದಿನಗಳಿಂದ ಶೀತ-ಜ್ವರದಲ್ಲಿ ಮಲಗಿದವನಿಗೆ ಈ ಓದೇ ಮದ್ದು.

ಪುಸ್ತಕ ಓದಿದಾಗ ನನಗೆ ಸ್ಟ್ರೈಕಿಂಗ್ ಅನ್ನಿಸಿದ್ದು ಮೋಟಮ್ಮ ಅವರ ಬದುಕಿನ ಕಾಂಟ್ರಡಿಕ್ಷನ್ಸ್.

ಕಲಿತದ್ದು ಕನ್ನಡ ಎಂಎ – ಆದರೆ ಶಾಟ್‌ಪುಟ್ ಚಾಂಪಿಯನ್! ಹೊರಟದ್ದು ಸರ್ಕಾರಿ ನೌಕರಿಗೆ-ತಲುಪಿದ್ದು ವಿಧಾನಸೌಧ!!

ಕೇಳುಗತೆಗಳ ಆಧಾರದಲ್ಲಿ ನನ್ನ ಮಟ್ಟಿಗೆ ಮೋಟಮ್ಮ ಅವರು ಶಾಸಕಿಯಾಗಿದ್ದದ್ದು, ಚಿಕ್ಕಮಗಳೂರು ಭಾಗದ ಕಾಫಿ ಪ್ಲಾಂಟರ್‌ಗಳ ಲಾಬಿಯ “ಪ್ಲಾಂಟ್” ಆಗಿ. ಹೆಚ್ಚಿನ ಎಲ್ಲ ಮೀಸಲು ಕ್ಷೇತ್ರಗಳ ಕತೆ ಇದೇ ಆಗಿರುವುದರಿಂದ ಅಂತಹ ಅಭಿಪ್ರಾಯ ಬರುವುದು ಸಹಜ. ಅದಕ್ಕೆ ಸರಿಯಾಗಿ, ವರದಿಗಾರನಾಗಿದ್ದಾಗ ಒಮ್ಮೆ ಸ್ತ್ರೀಶಕ್ತಿಗೆ ಸಂಬಂಧಿಸಿದ ಸಭೆಯೊಂದರಲ್ಲಿ ಸಚಿವೆ ಮೋಟಮ್ಮ ಹಾಡೋದನ್ನು ಕೇಳಿ, ಏನಪ್ಪಾ ಇದು ಯಾಕೋ ಇಲ್ಲಿಗೆ ಮ್ಯಾಚಾಗ್ತಿಲ್ಲವಲ್ಲ ಅಂದ್ಕೊಂಡಿದ್ದೆ; ಮೊನ್ನೆ ಮೊನ್ನೆ ಡಿಕೆ ಶಿವಕುಮಾರ್, ಮೋಟಮ್ಮ ಅವರನ್ನು ಪಕ್ಷದ ಸಂಘಟನೆ ಬಗ್ಗೆ ಮೀಡಿಯಾದ ಎದುರಲ್ಲೇ ತರಾಟೆಗೆ ತೆಗೆದುಕೊಂಡು ವೈರಲ್ ಆಗಿದ್ದ ವೀಡಿಯೊವನ್ನು ಕಂಡಿದ್ದೆ… ಇದನ್ನೆಲ್ಲ ಕಂಡು, ಈ ಪುಸ್ತಕ ಓದಿದ ಬಳಿಕ (ಮೋಟಮ್ಮ ಅವರು ಈ ಪುಸ್ತಕದಲ್ಲಿ ಹೇಳಿರುವುದನ್ನೆಲ್ಲ ಅದರ ಮುಖಬೆಲೆಯಲ್ಲೇ ತೆಗೆದುಕೊಂಡ ಬಳಿಕ) ನನಗೆ ಅನ್ನಿಸಿದ್ದು ಇಷ್ಟು:

1. ಗುಂಡೂರಾವ್ ಅವರ ಅಧಿಕಾರಾವಧಿಯ ಬಳಿಕ ಹೇಗೆ ಹಂತಹಂತವಾಗಿ ಕಾಂಗ್ರೆಸ್ ತನ್ನ ತಳಹಂತದ ಬೇರುಗಳನ್ನು ಕಳೆದುಕೊಳ್ಳುತ್ತಾ ಹೋಯಿತು ಎಂಬುದನ್ನು ನಿರ್ದಿಷ್ಟವಾಗಿ ಅಲ್ಲವಾದರೂ ಬಹಳ ಸೋದಾಹರಣವಾಗಿ ಪುಸ್ತಕ ವಿವರಿಸುತ್ತದೆ. ಆ ಕಾರಣಕ್ಕಾಗಿಯಾದರೂ, ಬೇರಾರೂ ಅಲ್ಲದಿದ್ದರೂ, “ಕಾಂಗ್ರೆಸ್ಸಿಗರು” ಈ ಪುಸ್ತಕವನ್ನು ಒಮ್ಮೆ ಕಡ್ಡಾಯವಾಗಿ ಓದಬೇಕು. ಹೆಚ್ಚಿನಂಶ 70-80ರ ದಶಕದ ಯಾವುದೇ ಕಾಂಗ್ರೆಸ್ ಶಾಸಕರು/ಸಂಸದರ ಬಳಿ ಇಂತಹ ಕತೆಗಳು ಹಲವಿರುತ್ತವೆ. ಆ ಮಾದರಿಯ ರಾಜಕೀಯ ಮಾಡಿದವರು ಹಂತಹಂತವಾಗಿ ಮೂಲೆ ಹಿಡಿದಿದ್ದಾರೆ ಮತ್ತು ಯಾರು ಹೊಸ ಬದಲಾವಣೆಗಳಿಗೆ ಒಗ್ಗಿಕೊಂಡರೋ ಅವರೆಲ್ಲ ಅಧಿಕಾರದ ರುಚಿ ನೋಡಿದ್ದಾರೆ.

2. ಎಲ್ಲೋ ಸಬ್ ರೆಜಿಸ್ಟ್ರಾರ್ ಆಗುವುದಕ್ಕೆ ತರಬೇತಿ ಪಡೆಯುತ್ತಿದ್ದ ಮೋಟಮ್ಮನವರನ್ನು ಗುರುತಿಸಿ, ಒತ್ತಾಯಪೂರ್ವಕವಾಗಿ ಶಾಸಕಿಯಾಗಿಸಿದಲ್ಲಿನಿಂದ ಇಂತಿಷ್ಟು ಕೋಟಿ ತಂದವರಿಗೆ ಮಾತ್ರ MLA-MLCಸೀಟು ಎಂಬಲ್ಲಿಯ ತನಕ ರಾಜಕೀಯ ಸಂಘಟನೆಯ ಕತೆ ತಲುಪಿದೆ. ಸಂಘಟನೆಯ-ನಾಯಕತ್ವದ ಗುಣಗಳಿರುವವರನ್ನು ಆಯ್ದು ಅವರಿಗೆ ಜವಾಬ್ದಾರಿಗಳನ್ನು ಕೊಡುವ ಬದಲು “ಮಾರುವ-ಖರೀದಿಸುವ” ರಾಜಕಾರಣ ಮುನ್ನೆಲೆಗೆ ಬಂದಿದೆ.

3. ಮೋಟಮ್ಮನವರು ದಾಖಲಿಸಿರುವ ಇನ್ನೊಂದು ಗಮನಾರ್ಹ ಸಂಗತಿ ಎಂದರೆ, ಮಾರುವ-ಖರೀದಿಸುವ ರಾಜಕಾರಣ ಮುನ್ನೆಲೆಗೆ ಬಂದ ಮೇಲೆ, ಜನಪ್ರತಿನಿಧಿಗಳು ಮಾಡುವ ಜನಹಿತದ, ಸೇವೆಯ ಕೆಲಸಗಳು ಸಂಪೂರ್ಣ ಅಪ್ರಸ್ತುತಗೊಳ್ಳುವುದು. ತಾನು ಶಾಸಕಿಯಾಗಿ, ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆಯಾಗಿ ತಮ್ಮ ಕ್ಷೇತ್ರಕ್ಕೆ ಸಾಕಷ್ಟು ಕೆಲಸ ಮಾಡಿದ ಹೊರತಾಗಿಯೂ ತಾವು ಆಯ್ಕೆ ಆಗಲಿಲ್ಲ ಎಂಬುದನ್ನು ಅವರು ಬೇಸರದಿಂದ ದಾಖಲಿಸಿದ್ದಾರೆ.

4. ಕೊನೆಕೊನೆಗೆ, ಚುನಾವಣೆಗೆ ತಾವೂ ದುಡ್ಡು ಖರ್ಚು ಮಾಡಬೇಕಾಗಿ ಬಂದದ್ದನ್ನೂ ದಾಖಲಿಸುವ ಮೋಟಮ್ಮ, ಅದು ತನ್ನ ಅಳತೆಗೆ ಮೀರಿದ್ದು ಎಂಬ ಕಾರಣಕ್ಕಾಗಿಯೇ ನೇರ ಚುನಾವಣಾ ರಾಜಕೀಯದಿಂದ ದೂರ ಸರಿದಿರುವುದನ್ನೂ ದಾಖಲಿಸಿದ್ದಾರೆ. ನಾಡಿನಾದ್ಯಂತ ಇಂತಹ ಮರ್ಯಾದಸ್ಥ, ಜನ ಸಂಪರ್ಕ ಇರುವ ರಾಜಕಾರಣಿಗಳು ರಾಜಕಾರಣದಿಂದ ದೂರ ಸರಿಯುತ್ತಿರುವುದು ಎಚ್ಚರಿಕೆಯ ಗಂಟೆ ಎಂದು ಕಾಂಗ್ರೆಸ್ಸಿಗರು ಭಾವಿಸುವ ತನಕ, ಸದ್ಯದ ರಾಜಕಾರಣದಲ್ಲಿ ಆಳುವ ಮತ್ತು ವಿರೋಧ ಪಕ್ಷಗಳ ನಡುವಿನ ಗ್ಯಾಪ್ ದೊಡ್ಡದಾಗಿಯೇ ಉಳಿಯಲಿದೆ.

5. 2013ರಲ್ಲಿ ಸಿದ್ಧರಾಮಯ್ಯ ಸರ್ಕಾರದಲ್ಲಿ “ವಿಧಾನ ಪರಿಷತ್ತಿನ ಸದಸ್ಯರು” ಎಂಬ ಕಾರಣಕ್ಕೆ ಸಚಿವ ಸ್ಥಾನ ಸಿಗದ ಬಗ್ಗೆ ಮೋಟಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು ನಮ್ಮ ಮಾಧ್ಯಮಗಳಲ್ಲಿ ಸಂಭ್ರಮದ ಸುದ್ದಿಯಾಗಿತ್ತು! (ಇದು ನಮ್ಮ ಮಾಧ್ಯಮಗಳ ಗುಣಮಟ್ಟದ ಬಗ್ಗೆಯೂ ಹೇಳುತ್ತದೆ!!) ವಾಸ್ತವ ಎಂದರೆ, ಆಗ ಏಳು ಬಾರಿಯ ಶಾಸಕ, ಕುಂದಾಪುರದ ಪ್ರತಾಪಚಂದ್ರ ಶೆಟ್ಟಿ ಸೇರಿದಂತೆ ಮೋಟಮ್ಮ ಅವರಿಗಿಂತ ಹಿರಿಯರಾದ ಕೆಲವರಿಗೆ, “ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ಇಲ್ಲ” ಎಂಬ ನಿಯಮದಡಿ ಸಚಿವಸ್ಥಾನ ತಪ್ಪಿ ಹೋಗಿತ್ತು. ಬಳಿಕ ಆ ನಿಯಮ ಎಲ್ಲರಿಗೂ ಅನ್ವಯ ಆಗಲಿಲ್ಲ ಎಂಬುದೂ ಸತ್ಯ.

6. ಪುಸ್ತಕದಲ್ಲಿ ಮೋಟಮ್ಮ ಅವರು ತಮಗೆ ಸಚಿವಸ್ಥಾನ ನೀಡಿದ ಎಸ್ ಎಂ ಕೃಷ್ಣ ಅವರ ಬಗ್ಗೆ ಹಲವೆಡೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ತಮ್ಮನ್ನು ಅಧಿಕಾರಕ್ಕೆ ತಂದ ಬಳಿಕ ವೃತ್ತಿ ಪೈಪೋಟಿಯ ಕಾರಣಕ್ಕಾಗಿ ದೂರಾದ ತಾರಾದೇವಿ ಸಿದ್ಧಾರ್ಥ, ಪಕ್ಷದಿಂದ ದೂರಹೋದ ಡಿ.ಬಿ. ಚಂದ್ರೇಗೌಡ ಅವರ ಬಗ್ಗೆ ಕೂಡ ವಸ್ತುನಿಷ್ಠ ಅಭಿಪ್ರಾಯಗಳನ್ನು ದಾಖಲಿಸಿರುವುದು ಪುಸ್ತಕದಲ್ಲಿ ನನಗೆ ಇಷ್ಟವಾದ ಅಂಶ. ತನಗೆ ಹೆಚ್ಚು ತಿಳಿದಿಲ್ಲದ ಸಂಗತಿಗಳ ಬಗ್ಗೆ ಬೀಸು ಅಭಿಪ್ರಾಯಗಳನ್ನು ದಾಖಲಿಸದಿರುವುದು ಕೂಡ ಪುಸ್ತಕಕ್ಕೆ ಒಂದು ಮಟ್ಟಿಗಿನ ಕ್ರೆಡಿಬಿಲಿಟಿ ತಂದುಕೊಟ್ಟಿದೆ.

7. ಪುಸ್ತಕದ ಉದ್ದಕ್ಕೂ ತಮ್ಮ ಬದುಕನ್ನು ಒಂದು ಭಾವುಕತೆಯ ಎಳೆಯೊಂದಿಗೇ ದಾಖಲಿಸುವ ಮೋಟಮ್ಮ ಅವರು, ತಮ್ಮ ಬಾಲ್ಯದ ಚಿತ್ರಗಳನ್ನು ಕೊಟ್ಟಷ್ಟು ನಿಖರವಾಗಿ ರಾಜಕೀಯ ಬದುಕಿನ (ಅಥವಾ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಮೇಲಿನ ಖಾಸಗಿ ಬದುಕಿನ) ಚಿತ್ರಗಳನ್ನು ಕೊಡುವುದಿಲ್ಲ ಎಂಬುದು ನನ್ನ ಅನ್ನಿಸಿಕೆ. ಅದಕ್ಕೆ ಅವರು ಇನ್ನೂ ಸಮಕಾಲೀನ ರಾಜಕೀಯದ ಭಾಗವೇ ಆಗಿರುವುದು ಕಾರಣ ಇರಬಹುದು.

ಒಟ್ಟಿನಲ್ಲಿ, ಕರ್ನಾಟಕದ ರಾಜಕೀಯದ ಗುಣಮಟ್ಟ ಹಿಡಿದಿರುವ ಹಾದಿಯ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಹಲವು ತೋರುಗಂಬಗಳನ್ನು ಹೊಂದಿರುವ ಪುಸ್ತಕ ಇದು. ಹಿರಿಯ ಪತ್ರಕರ್ತೆ ಆರ್ ಪೂರ್ಣಿಮಾ ಅವರ ವಿಕಾಸ ಪ್ರಕಾಶನ ಪುಸ್ತಕವನ್ನು ಪ್ರಕಟಿಸಿದೆ. ಆಸಕ್ತರು ದಯವಿಟ್ಟು ಓದಿ.

ರಾಜಾರಾಂ ತಲ್ಲೂರು ಅವರ ಲೇಖಕ ಪರಿಚಯ..

MORE FEATURES

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...

ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ!

26-04-2024 ಬೆಂಗಳೂರು

‘ಮನಸ್ಸಿನ ಒಳಹೊರಗನ್ನು ಅರ್ಥಮಾಡಿಕೊಳ್ಳುವುದು ಬಲು ಕಷ್ಟ! ಹಾಗಾಗಿ ಮಾನಸಿಕ ಸಮಸ್ಯೆಗಳ ಬಗ್ಗೆ ನನಗೆ ತಿಳಿದಷ್ಟು ವ...

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...