‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

Date: 22-04-2024

Location: ಬೆಂಗಳೂರು


ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬೇಕು ಎಂದು ಹಿರಿಯ ರಾಜಕೀಯ ವಿಶ್ಲೇಷಕರಾದ ಶಿವಸುಂದರ್ ಅಭಿಪ್ರಾಯ ಪಟ್ಟರು.

ಚಿಕ್ಕು ಕ್ರಿಯೇಷನ್ ವತಿಯಿಂದ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ ಅಕ್ಕಮಹಾದೇವಿ ಸಭಾಂಗಣದಲ್ಲಿ ದಿನಾಂಕ 2024 ಏಪ್ರಿಲ್ 21ರ, ಭಾನುವಾರ ಹಮ್ಮಿಕೊಳ್ಳಲಾಗಿದ್ದ ಚಂದ್ರಪ್ರಭ ಕಠಾರಿಯವರ ‘ಕಠಾರಿ ಅಂಚಿನ ನಡಿಗೆ’- ಸಮಕಾಲೀನ ವಿಡಂಬನೆಗಳ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬೇಕು. ಮಾನವತೆಯು ಮಸಣ ಸೇರುವ ಹೊತ್ತಿನಲ್ಲಿ ಮಾತನಾಡುವುದೇ ಕಷ್ಟವಾಗಿದೆ. ಇಂದಿಗೆ ಬಹುದೊಡ್ಡ ವಿಡಂಬನಾತ್ಮಕ ಬರಹವೆಂದರೆ ಬಿಜೆಪಿಯ ಪ್ರಣಾಳಿಕೆ. ಸಬ್‌ ಕಾ ಸಾಥ್ ಸಬ್ ಕಾ ವಿಕಾಸ್‌ ಎನ್ನುತ್ತಾರೆ; ಆದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ತಂದಿರುವುದಾಗಿ ಹೇಳುತ್ತಾರೆ ಎಂದು ಟೀಕಿಸಿದರು. ಜೊತೆಗೆ ಬಿಜೆಪಿಯ ಪ್ರಣಾಳಿಕೆಯೇ ಬಹುದೊಡ್ಡ ವಿಡಂಬನೆ. ಅವರು ಹೇಳುತ್ತಿರುವುದಕ್ಕೂ ಮತ್ತು ನಡೆದುಕೊಂಡಿರುವುದಕ್ಕೂ ಹೋಲಿಕೆ ಇಲ್ಲ ಎಂದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಯುವ ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ, ‘ನಮ್ಮ ಗಾಯಗಳನ್ನು ನೆನಪಿಸುವ ಕೆಲಸವನ್ನು ತುಸು ಗಡುಸಾಗಿ, ಮುಖಕ್ಕೆ ಹೊಡೆದಂತೆ ಕಠಾರಿಯವರು ಬರೆದಿದ್ದಾರೆ. ವಿಚ್ಛಿದ್ರಕಾರಿ ಶಕ್ತಿಗಳು ನಮ್ಮ ಸುತ್ತ ಕುಣಿದಾಡುವಾಗ ನಾವು ಕೂಡ ಒರಟಾಗುವುದು ಸಾಮಾನ್ಯ. ಹೀಗಾಗಿ ಇಲ್ಲಿನ ಭಾಷೆಯೂ ಕಟುವಾಗಿದೆ’ ಎಂದು ಹೇಳಿದರು.

ಕೃತಿಯ ಲೇಖಕರಾದ ಚಂದ್ರಪ್ರಭ ಅವರು ಮಾತನಾಡಿ, ‘ವಾಟ್ಸಾಪ್ ಗ್ರೂಪೊಂದರಲ್ಲಿ ಪತ್ರಕರ್ತ ಮಿತ್ರರೊಬ್ಬರು ಕಾಶ್ಮೀರ್ ಫೈಲ್ಸ್‌ ಸಿನಿಮಾ ಕುರಿತು ಲೇಖನವೊಂದನ್ನು ಹಾಕಿದ್ದರು. ನೀವು ಪ್ರಕಟಿಸಿರುವ ಲೇಖನ ಹುಸಿ ವಿಚಾರಗಳಿಂದ ಕೂಡಿದೆ ಎಂದಾಗ ನೀವೊಂದು ಪ್ರತಿಕ್ರಿಯೆ ಬರೆಯಿರಿ ಎಂದರು. ಕಾಶ್ಮೀರ್‌ ಫೈಲ್ಸ್‌ ಸಿನಿಮಾದಲ್ಲಿನ ಸುಳ್ಳುಗಳನ್ನು ಬಯಲು ಮಾಡಿ ಬರೆದಾಗ ಲೇಖನ ಪ್ರಕಟಿಸಲಿಲ್ಲ. ಇದನ್ನು ಗಮನಿಸಿದ ಮಿತ್ರ ಹನುಮಂತ ಹಾಲಗೇರಿಯವರು ಲೇಖನವನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದರು. ನಿರಂತರ ಬರೆಯಲು ಕೋರಿದರು. ಹಾಗೆ ಶುರುವಾಗಿ ಮೂಡಿಬಂದ ವಿಡಂಬನೆಗಳು ಇಂದು ಪುಸ್ತಕವಾಗಿ ನಿಮ್ಮ ಮುಂದಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಬರಹಗಾರರಾದ ನಾಗರಾಜ್ ಶೆಟ್ಟಿಯವರು ಮಾತನಾಡಿ, “ಕಠಾರಿಯವರ ಬರಹದಲ್ಲಿ ಮೊಣಚಿದೆ, ಆಕ್ರೋಶವಿದೆ, ಆದರೆ ದ್ವೇಷವಿಲ್ಲ. ಮನೆಯ ಯಜಮಾನ, ತನ್ನ ಮನೆಯನ್ನು ಸರಿಪಡಿಸಲು ತಾಳುವ ಸಿಟ್ಟಿನಂತೆ ಇಲ್ಲಿನ ಬರಹಗಳಿವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾಲಕ್ಷ್ಮಿ ಅವರು ಸ್ವಾಗತಿಸಿದರು, ಡಾ.ಪ್ರತಿಮಾ ವಿಜಯ್ ನಿರೂಪಣೆ ಮಾಡಿದರು, ಯುವರಾಜ್ ವಂದನಾರ್ಪಣೆ ಮಾಡಿದರು.

ಹಿರಿಯ ಪತ್ರಕರ್ತರಾದ ಡಾ.ವಿಜಯಮ್ಮ, ಬರಹಗಾರರಾದ ಜಿ.ಎನ್.ಮೋಹನ್, ನಾಗೇಗೌಡ ಕೀಲಾರ, ಹೋರಾಟಗಾರ ಎಚ್.ಸಿ.ಉಮೇಶ್‌, ಚಿಕ್ಕು ಕ್ರಿಯೇಷನ್ಸ್‌‌ ಪ್ರಕಾಶಕರಾದ ಸುಷ್ಮಾ ಕಠಾರಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

MORE NEWS

ಮೈಸೂರಿನಲ್ಲಿ ಚಿಣ್ಣರಿಗಾಗಿ ಜನಪದ ಸಾಹಿತ್ಯ ಕಮ್ಮಟ

03-05-2024 ಬೆಂಗಳೂರು

ಮೈಸೂರು: ಚಿಣ್ಣರಿಗಾಗಿ ಜನಪದ ಸಾಹಿತ್ಯವನ್ನು ಪರಿಚಯಾತ್ಮಕವಾಗಿ ತಿಳಿಸಿಕೊಡುವ ನಿಟ್ಟಿನಲ್ಲಿ ಅದಮ್ಯ ರಂಗಶಾಲೆ ಹಾಗೂ ಸ್ಪಂ...

ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣ ಕೃತಿ ‘ಯಕ್ಷಹಂಸ’ ಲೋಕಾರ್ಪಣೆ

01-05-2024 ಬೆಂಗಳೂರು

ಹೊಸ್ತೋಟ ಮಂಜುನಾಥ ಭಾಗವತರ ಬಗ್ಗೆ ಬರೆದಿರುವ ‘ಯಕ್ಷಹಂಸ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 2024 ಏಪ್ರ...

ಹರಿದಾಸ ಸಾಹಿತ್ಯದ ಮೇರು ಶೃಂಗ ಶ್ರೀವಿಜಯದಾಸರು: ಅರಳುಮಲ್ಲಿಗೆ ಪಾರ್ಥಸಾರಥಿ

30-04-2024 ಬೆಂಗಳೂರು

ಬೆಂಗಳೂರಿನ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯ ಶ್ರೀಪಾದರಾಜ ಸಭಾಭವನದಲ್ಲಿ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್,...