ಕವಿಗಳು, ಲೇಖಕರು ಬಹುತೇಕವಾಗಿ ಕಲ್ಪನಾ ಶಕ್ತಿಯಿಂದ ಸಾಹಿತ್ಯವನ್ನು ಸೃಷ್ಟಿಸುತ್ತಾರೆ; ಎಂ. ಬಸವಣ್ಣ

Date: 25-04-2024

Location: ಬೆಂಗಳೂರು


ಬೆಂಗಳೂರು: ವಿಜಯನಗರದಲ್ಲಿರುವ 'ಅಮೂಲ್ಯ ಪುಸ್ತಕ' ದ ಅಂಗಡಿಯಲ್ಲಿ ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಅಮೂಲ್ಯ ಪುಸ್ತಕ ಪ್ರಕಾಶನ ಮತ್ತು ಪುಸ್ತಕದ ಅಂಗಡಿ ಆರಂಭವಾಗಿ ಎರಡು ವರ್ಷಗಳಾದವು. ಕಳೆದ ಎರಡು ವರ್ಷಗಳಲ್ಲಿ 25 ಪುಸ್ತಕಗಳನ್ನು ಅಮೂಲ್ಯ ಪುಸ್ತಕ ಪ್ರಕಟಿಸಿದೆ. ವಿಶ್ವ ಪುಸ್ತಕ ದಿನದ ಪ್ರಯುಕ್ತ ಕನ್ನಡದ ಹೆಸರಾಂತ ಮನಃಶಾಸ್ತ್ರ ಪ್ರಾಧ್ಯಾಪಕರಾದ ಡಾ. ಎಂ. ಬಸವಣ್ಣ ಅವರು 'ಸಾಹಿತ್ಯ ಮತ್ತು ಮನೋವಿಜ್ಞಾನ' ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.

ಎಂ. ಬಸವಣ್ಣ ಅವರೊಂದಿಗೆ ಹಲವು ವರ್ಷಗಳ ಆಪ್ತ ಒಡನಾಟವನ್ನು ಹೊಂದಿರುವ ಡಾ ಸುಭಾಷ್ ರಾಜಮಾನೆ ಅವರು ಬಸವಣ್ಣನವರ ವ್ಯಕ್ತಿತ್ವ ಹಾಗೂ ಕೃತಿಗಳ ಪರಿಚಯವನ್ನು ಮಾಡಿಕೊಟ್ಟರು. ಬಸವಣ್ಣನವರು ಈಗಾಗಲೇ ಕನ್ನಡದಲ್ಲಿ ಕಾರ್ಲ್ ಯೂಂಗ್, ಸಿಗ್ಮಂಡ್ ಫ್ರಾಯ್ಡ್, ಈಡಿಪಸ್ ಕಾಂಪ್ಲೆಕ್ಸ್, ಲೂಸಿಫರ್ ಎಫೆಕ್ಟ್, ಕನಸಿನ ಕಥೆ, ಅರ್ಧನಾರೀಶ್ವರ, ಸಂಕ್ಷಿಪ್ತ ಶೈಕ್ಷಣಿಕ ಮನೋವಿಜ್ಞಾನ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. 93ರ ಪ್ರಾಯಕ್ಕೆ ಕಾಲಿಟ್ಟಿರುವ ಬಸವಣ್ಣನವರು ಈಗಲೂ ಕ್ರಿಯಾಶೀಲರಾಗಿದ್ದಾರೆ. ಅವರ "ಆಧುನಿಕ ಮನೋವಿಜ್ಞಾನದ ಪ್ರವರ್ತಕರು" ಎಂಬ ಪುಸ್ತಕವು ಸದ್ಯದಲ್ಲಿಯೇ ಅಮೂಲ್ಯ ಪುಸ್ತಕದ 25ನೇ ಕೃತಿಯಾಗಿ ಪ್ರಕಟಗೊಳ್ಳಲಿದೆ. ಅವರ ಆತ್ಮಕತೆಯು ಪ್ರಕಟಣೆಯ ಹಂತದಲ್ಲಿದೆ.

ಎಂ. ಬಸವಣ್ಣನವರು ಸಾಹಿತ್ಯ ಮತ್ತು ಮನೋವಿಜ್ಞಾನ ಎಂಬ ವಿಷಯವನ್ನು ಕುರಿತು ಉಪನ್ಯಾಸವನ್ನು ನೀಡಿದರು. ಸಾಹಿತ್ಯ ಹಾಗೂ ಮನೋವಿಜ್ಞಾನಕ್ಕೆ ಇರುವ ಸಂಬಂಧಗಳನ್ನು ಭಿನ್ನತೆಗಳನ್ನು ಹಲವು ಉದಾಹರಣೆಗಳ ಮೂಲಕವಾಗಿ ವಿವರಿಸಿ, ‘ಮನೋ ವಿಜ್ಞಾನವು ಮನುಷ್ಯನ ವರ್ತನೆಗಳನ್ನು ಅಧ್ಯಯನ ಮಾಡುವ ಶಾಸ್ತ್ರವಾಗಿದೆ. ಸಾಹಿತ್ಯವು ಮನುಷ್ಯ ಹಾಗೂ ಸಮಾಜದ ಸಂಬಂಧಗಳನ್ನು ಕುರಿತು ರಚನೆಯಾಗುತ್ತದೆ. ಕವಿಗಳು ಲೇಖಕರು ಬಹುತೇಕವಾಗಿ ಕಲ್ಪನಾ ಶಕ್ತಿಯಿಂದ ಸಾಹಿತ್ಯವನ್ನು ಸೃಷ್ಟಿ ಮಾಡುತ್ತಾರೆ. ಅದೇ ಮನೋವಿಜ್ಞಾನಿಗಳು ಮನುಷ್ಯರ ನಡಾವಳಿ ವರ್ತನೆ ನಡೆದುಕೊಳ್ಳುವ ರೀತಿ ನೀತಿ ಇವುಗಳನ್ನು ಕುರಿತು ಕೂಲಂಕುಶವಾಗಿ ಹಾಗೂ ಆಳವಾಗಿ ಅಧ್ಯಯನವನ್ನು ನಡೆಸುತ್ತಾರೆ. ಬಸವಣ್ಣನವರು ತಮ್ಮ ಉಪನ್ಯಾಸದಲ್ಲಿ ಎರಡು ರೀತಿಯ ಕಾದಂಬರಿಗಳು ಇರುತ್ತವೆ ಎಂದರು. ಮೊದಲನೇದಾಗಿ ಸೈಕಾಲಾಜಿಕಲ್ ಕಾದಂಬರಿಗಳು ಹಾಗೂ ಎರಡನೆಯದಾಗಿ ದಾರ್ಶನಿಕ ಕಾದಂಬರಿಗಳು. ಸೈಕಾಲಜಿಕಲ್ ಕಾದಂಬರಿಗಳು ಕನ್ನಡದಲ್ಲಿ ಪ್ರಮಾಣದಲ್ಲಿ ಬಹಳ ಕಡಿಮೆ ಇವೆ. ಇದಕ್ಕೆ ಮೊದಮೊದಲ ಉದಾಹರಣೆಗಳೆಂದರೆ ತ್ರಿವೇಣಿ ಅವರು ಬರೆದ ಕಾದಂಬರಿಗಳೇ ಆಗಿವೆ. ತ್ರಿವೇಣಿಯವರು ಒಬ್ಬ ವ್ಯಕ್ತಿಯ ಕೇಸ್ ಸ್ಟಡಿ ಮಾಡುವುದರ ಮೂಲಕವಾಗಿ ಒಂದೊಂದು ಕಾದಂಬರಿಗಳನ್ನು ಬರೆಯುತ್ತಾ ಹೋದರು. ಅದೇ ಕನ್ನಡದಲ್ಲಿ ಶಿವರಾಮ ಕಾರಂತರು ಬರೆದ "ಅಳಿದ ಮೇಲೆ", "ಮೂಕಜ್ಜಿಯ ಕನಸುಗಳು" ಮತ್ತು "ಬೆಟ್ಟದ ಜೀವ" ಈ ಕಾದಂಬರಿಗಳು ದಾರ್ಶನಿಕ ಕಾದಂಬರಿಗಳಾಗಿವೆ. ಇಂತಹ ಧಾರ್ಮಿಕ ಕಾದಂಬರಿಗಳಲ್ಲಿ ಲೇಖಕನ ಸುಪ್ತ ಮನಸ್ಸು ಕ್ರಿಯಾಶೀಲವಾಗಿ ಅದೊಂದು ಸಾಮೂಹಿಕ ಸುಪ್ತ ಮನಸ್ಸು ನೆನಪುಗಳನ್ನು ದಾಖಲಿಸುತ್ತದೆ,’ ಎಂದರು.

‘ರಾಮಾಯಣ ಮತ್ತು ಮಹಾಭಾರತಗಳು ಕೂಡ ನಿರ್ಮಾಣವಾಗಿದ್ದು ವಾಲ್ಮೀಕಿ ಮತ್ತು ವ್ಯಾಸರ ಸೂಕ್ತ ಮನಸ್ಸಿನಲ್ಲಿ ಅಡಗಿದ್ದ ಅಗಾಧವಾಗಿರತಕ್ಕಂತಹ ಲೋಕದ ಮೂಲಕವಾಗಿಯೇ ಅವು ಸೃಷ್ಟಿಯಾದವು. ರಾಮಕೃಷ್ಣ ಸೀತೆ ಭೀಮ ಅರ್ಜುನ ಇವರೆಲ್ಲರೂ ಕವಿಗಳ ಸೃಷ್ಟಿ. ಕವಿ ಮನಸ್ಸಿನಿಂದ ಅವರ ನಿರ್ಮಾಣವಾಗಿದ್ದಾರೆ. ಆದರೂ ನಾವು ಅವರನ್ನು ನಂಬುತ್ತೇವೆ ಅವರ ಬಗ್ಗೆ ಚರ್ಚೆ ಮಾಡುತ್ತೇವೆ ಅವರನ್ನು ವಿಶ್ಲೇಷಣೆ ಮಾಡುತ್ತೇವೆ. ಅದರ ಮೂಲಕವಾಗಿ ಮನುಷ್ಯರ ದ್ವಂದ್ವ ಪರಿಸ್ಥಿತಿ ಸಂದರ್ಭ ವರ್ತನೆಗಳನ್ನು ವಿಮರ್ಶೆಗೆ ಒಳಪಡಿಸುತ್ತೇವೆ. ಆದ್ದರಿಂದ ಸಾಹಿತ್ಯ ಮತ್ತು ಮನೋವಿಜ್ಞಾನ ನಡುವೆ ಸಂಬಂಧ ಇದ್ದೆ ಇದೆ,’ ಎಂದು ತಿಳಿಸಿದರು.

ಬಸವಣ್ಣನವರು ಉಪನ್ಯಾಸವನ್ನು ನೀಡಿದ ಮೇಲೆ ಸಭಿಕರಲ್ಲಿ ಕೆಲವರು ಪ್ರಶ್ನೆಗಳನ್ನು ಕೇಳಿದರು. ಅವುಗಳಿಗೆ ಬಸವಣ್ಣನವರು ಸಮರ್ಪಕವಾದ ಉತ್ತರಗಳನ್ನು ನೀಡಿದರು. ಯಾವ ಉತ್ತರವೂ ಅಂತಿಮವಲ್ಲ. ಇದೆಲ್ಲವೂ ನಮ್ಮ ದೃಷ್ಟಿಕೋನ ಅಷ್ಟೇ ಎಂದರು. ಸುಭಾಷ್ ರಾಜಮಾನೆ ಅವರು ಕಾರ್ಯಕ್ರಮವನ್ನ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಹಿರಿಯ ಕಾನೂನು ತಜ್ಞರಾದ ವೈ.ಜಿ. ಮುರಳೀಧರನ್, ಹಿರಿಯ ಕವಯಿತ್ರಿ ಪಿ. ಚಂದ್ರಿಕಾ, ಚಾಂದ್ ಪಾಶಾ, ಪ್ರವೀಣ್ ಕುಮಾರ್ ಜಿ., ಶ್ರೀಶೈಲ ಮಗದುಮ್ಮ, ಪ್ರಸನ್ನ ಕುಮಾರ್ ಇನ್ನಿತರ ಕವಿಗಳು ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

MORE NEWS

ಮೈಸೂರಿನಲ್ಲಿ ಚಿಣ್ಣರಿಗಾಗಿ ಜನಪದ ಸಾಹಿತ್ಯ ಕಮ್ಮಟ

03-05-2024 ಬೆಂಗಳೂರು

ಮೈಸೂರು: ಚಿಣ್ಣರಿಗಾಗಿ ಜನಪದ ಸಾಹಿತ್ಯವನ್ನು ಪರಿಚಯಾತ್ಮಕವಾಗಿ ತಿಳಿಸಿಕೊಡುವ ನಿಟ್ಟಿನಲ್ಲಿ ಅದಮ್ಯ ರಂಗಶಾಲೆ ಹಾಗೂ ಸ್ಪಂ...

ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣ ಕೃತಿ ‘ಯಕ್ಷಹಂಸ’ ಲೋಕಾರ್ಪಣೆ

01-05-2024 ಬೆಂಗಳೂರು

ಹೊಸ್ತೋಟ ಮಂಜುನಾಥ ಭಾಗವತರ ಬಗ್ಗೆ ಬರೆದಿರುವ ‘ಯಕ್ಷಹಂಸ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 2024 ಏಪ್ರ...

ಹರಿದಾಸ ಸಾಹಿತ್ಯದ ಮೇರು ಶೃಂಗ ಶ್ರೀವಿಜಯದಾಸರು: ಅರಳುಮಲ್ಲಿಗೆ ಪಾರ್ಥಸಾರಥಿ

30-04-2024 ಬೆಂಗಳೂರು

ಬೆಂಗಳೂರಿನ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯ ಶ್ರೀಪಾದರಾಜ ಸಭಾಭವನದಲ್ಲಿ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್,...