ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು


ಬಂಡಾರ ಪ್ರಕಾಶನದ ಸಹಯೋಗದಲ್ಲಿ ‘ಬುಕ್ ಬ್ರಹ್ಮ’ ಪ್ರಕಟಿಸುತ್ತಿರುವ ‘ಒಳತಿಳಿ’ ವಾರದ ಓದು ವಿಶೇಷ ವಿಮರ್ಶಾ ಸರಣಿಯ ಹದಿನಾಲ್ಕನೇ ಭಾಗವಾಗಿ ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾರ್ಥಿ ಧನುಷ್ ಹೆಚ್. ಶೇಖರ್ ಅವರು ಕೆ.ವಿ.ಸುಬ್ಬಣ್ಣ ಅವರ ‘ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು’ ಕೃತಿಯ ಕುರಿತು ಬರೆದ ಅರ್ಥಪೂರ್ಣ ವಿಮರ್ಶೆ ನಿಮ್ಮ ಓದಿಗಾಗಿ.

ಕೆ.ವಿ ಸುಬ್ಬಣ್ಣ ಅವರು ಬರೆದಿರುವ ‘ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು’ ಎಂಬ ಈ ಹೊತ್ತಿಗೆಯು ಕನ್ನಡದ ಪ್ರಪ್ರಥಮ ಉಪಲಬ್ಧ ಗ್ರಂಥವೆಂದೇ ಖ್ಯಾತವಾಗಿರುವ ‘ಕವಿರಾಜಮಾರ್ಗ’ದ ಬಗ್ಗೆ ಬಂದಿರುವ ಅನೇಕ ವಿಮರ್ಶೆಗಳಲ್ಲಿ ಅತ್ಯಂತ ವಿಭಿನ್ನವೂ, ಹೊಸ ಕಾಣ್ಕೆಯುಳ್ಳದ್ದೂ ಆಗಿರುವುದರಲ್ಲಿ ಲವಲೇಶವೂ ಅನುಮಾನವಿಲ್ಲ. ಯಾವುದೇ ಕೃತಿಯನ್ನು ಪ್ರಸ್ತುತ ಯುಗಧರ್ಮಕ್ಕೆ ಅನುಗುಣವಾಗಿ ಹೊಸ ಹೊಸ ಪ್ರಶ್ನೆಗಳಿಗೆ ಅಥವಾ ಆಲೋಚನೆಗಳಿಗೆ ಈಡು ಮಾಡದೆ ಹೋದರೆ ಅವು ನಮ್ಮಿಂದ ಬಹು ದೂರ ಉಳಿದು ಅಪ್ರಸ್ತುತವಾಗಿಯೇ ಗೋಚರಿಸುತ್ತದೆ. ಸುಬ್ಬಣ್ಣ ಅವರು ‘ಇತಿಹಾಸ’ವನ್ನು ಕಾಣುವ ಬಗೆ ಕೂಡ ಇಂತಹದ್ದೇ ದೃಷ್ಟಿಯದ್ದು. ನಾವು ವರ್ತಮಾನದಲ್ಲಿ ನಿಂತುಕೊಂಡು ಬಹುಹಿಂದಿನ ಭೂತಕಾಲದ ಗತಕಥನವೊಂದನ್ನು ಕಟ್ಟುತ್ತೇವೆಯಾದ್ದರಿಂದ ಅದು ವರ್ತಮಾನಕ್ಕೆ ಹತ್ತಿರವಾಗುವಷ್ಟು ಭೂತಕಾಲಕ್ಕೆ ಅನ್ವಯಿಸುವುದಿಲ್ಲ. ಹಾಗಾದರೆ ಕವಿರಾಜಮಾರ್ಗವನ್ನು ಕುರಿತಂತೆ ನಡೆದಿರುವ ಹಲವು ಸಂಶೋಧನೆಗಳ ನಡುವಲ್ಲಿ ಸುಬ್ಬಣ್ಣನವರ ಈ ವಿಮರ್ಶೆ ವಿಶೇಷವಾಗುವುದಾದರೂ ಹೇಗೆ? ಮತ್ತು ಈ ಹೊತ್ತು ಅದು ಪ್ರಸ್ತುತವಾಗುವ ಪರಿಯಾದರೂ ಯಾವುದು ಎಂಬುದನ್ನು ಮುಂದೆ ಚರ್ಚಿಸೋಣ. ಕವಿರಾಜಮಾರ್ಗವನ್ನು ಶ್ರೀವಿಜಯನೇ ಬರೆದಿದ್ದಾನಾದರೂ ಅದು ರಾಜ ನೃಪತುಂಗನ ಅನುಮೋದನೆಯ ಮೇರೆಗೆ ಅಧಿಕೃತವಾಗಿರುವ ಸುಳಿವು ಹೆಜ್ಜೆಹೆಜ್ಜೆಗೂ ಈ ಕೃತಿಯಲ್ಲಿ ಪ್ರಕಟವಾಗುತ್ತದೆ. ಈ ಕೃತಿಯ ಶೀರ್ಷಿಕೆಯಲ್ಲಿಯೇ ಜ್ಞಾನ(ಕವಿ) ಮತ್ತು ಪ್ರಭುತ್ವ(ರಾಜ) ಇವರಿಬ್ಬರ ಸಹಚರ್ಯದಿಂದ ನಿರ್ಮಿಸಿದ ಹೊಸ ‘ಮಾರ್ಗ’ವೇ ಕವಿರಾಜಮಾರ್ಗ ಎಂಬುದು ಸ್ಪಷ್ಟವಾಗುತ್ತದೆ. ಅಂದರೆ ಭಾಷೆ ಮತ್ತು ಪ್ರಭುತ್ವ ಒಂದು ಇನ್ನೊಂದನ್ನು ಒಳಗೊಳ್ಳುತ್ತಾ, ಆ ಮೂಲಕ ಎರಡೂ ಪರಸ್ಪರ ಪೂರಕವಾಗಿ, ಜೊತೆಜೊತೆಯಾಗಿ ಸಾಗಿದ ಕಥೆ ಇದು ಎಂದು ಸುಬ್ಬಣ್ಣನವರು ಗುರುತಿಸುತ್ತಾರೆ.

ಕವಿರಾಜಮಾರ್ಗವನ್ನು ನಾವು ಈವರೆಗೆ ಅದೊಂದು ಪ್ರಥಮ ಲಬ್ಧ ಅಲಂಕಾರಿಕ ಗ್ರಂಥವೆಂದು, ಅದರೊಳಗೆ ಸಂಸ್ಕೃತದ ದಂಡಿ-ಭಾಮಹರ ಗಾಢ ಪ್ರಭಾವವಿದೆಯೆಂದಷ್ಟೇ ಹೇಳಿ ಅದರ ಅನಂತ ಸಾಧ್ಯತೆಗಳನ್ನು ಮಸಕುಗೊಳಿಸಿದ್ದೇವೆ. ಆದರೆ ಕವಿರಾಜಮಾರ್ಗ ಮೊದಲ ಬಾರಿಗೆ ಕನ್ನಡತ್ವವೆಂಬ ತತ್ವದ ಮೂಲಕ ದಖ್ಖಣದ ಪ್ರಸ್ಥಭೂಮಿಯಲ್ಲಿ ಕನ್ನಡದ ಕಾರ್ಯಕ್ಷೇತ್ರವನ್ನು ಗುರುತಿಸುವ ಪ್ರಯತ್ನ ಮಾಡಿತು. ಮಾತ್ರವಲ್ಲ, ಒಂದು ಭಾಷೆ, ಆ ಭಾಷೆಯನ್ನು ಅನುದಿನವೂ ಬಳಸುವ ಸಮಸ್ತಮನಸ್ಸಿನ ಜನಸಮೂಹ ಮತ್ತು ಆ ಜನಸಮೂಹ ವಾಸಿಸುವ ನಾಡು ಈ ಮೂರರ ತ್ರಿಕೂಟವನ್ನು ‘ಕನ್ನಡದೊಳ್ ಭಾವಿಸಿದ್ದು’ ಎನ್ನುತ್ತದೆ. ‘ಕನ್ನಡ’ ಎಂಬ ಭಾವಜಗತ್ತನ್ನು ಕಟ್ಟದೇ, ‘ಕನ್ನಡತನ’ವೆಂಬ ಭವ ಜಗತ್ತು ನಿರ್ಮಿಸಲು ಸಾಧ್ಯವಿಲ್ಲ. ಅಮೂರ್ತ ಭಾವಗಳಿಗೆ ಮೂರ್ತತೆಯ ಸ್ವರೂಪ ದಕ್ಕುವುದು ಅದು ನಾಮರೂಪಗಳಲ್ಲಿ ಪ್ರಕಟಗೊಂಡಾಗ ಮಾತ್ರ ಅರ್ಥಾತ್ ಭಾಷೆಯ ಮೂಲಕ ಸೃಷ್ಟಿಸಿದಾಗ ಮಾತ್ರ. ಮೇಲೆ ಹೇಳಿದ ಮೂರೂ ಅಂಶಗಳು ಕನ್ನಡದಲ್ಲಿ ಕಲ್ಪಿತವಾದದ್ದರಿಂದಲೇ ಈ ಕೃತಿಯಲ್ಲಿ ಕೇವಲ ಶಬ್ಧಾರ್ಥ, ಅಲಂಕಾರ ಇತ್ಯಾದಿಗಳ ಬಗೆಗಿನ ಚರ್ಚೆಯಷ್ಟೇ ಇರದೆ ಕನ್ನಡ ನಾಡಿನ ವರ್ಣನೆ, ತಿರುಳ್ಗನ್ನಡದ ವರ್ಣನೆ ಹಾಗೂ ಜನಪದರ ವರ್ಣನೆಯನ್ನು ಗ್ರಂಥದ ಪೀಠಿಕಾ ಭಾಗದಲ್ಲಿಯೇ ಕವಿ ದಾಖಲಿಸುತ್ತಾನೆ. ಈ ಭಾಷಾರಾಜಕಾರಣದ ಹಿನ್ನೆಲೆಯಲ್ಲಿಯೇ ಸುಬ್ಬಣ್ಣ ಇಡೀ ಗ್ರಂಥವನ್ನು ಗಮನಿಸುತ್ತಾ, ಕವಿರಾಜಮಾರ್ಗದ ಎರಡು ವಿಶಿಷ್ಟ ಅಂಶಗಳನ್ನು ಗುರುತಿಸುತ್ತಾರೆ. 1. ಭಾವ ಜಗತ್ತಿನ ಅಧಿಕಾರಿ ಕವಿ ಮತ್ತು ಭವ ಜಗತ್ತಿನ ಅಧಿಕಾರಿ ರಾಜ ಇಬ್ಬರೂ ಸೇರಿ ನಿರ್ಮಿಸಿದ ಹೊಸಮಾರ್ಗ ಈ ಕನ್ನಡ ಜಗತ್ತಾದರೂ ತನ್ನದು ಕನ್ನಡದ್ದೇ ರಾಜ್ಯವೆಂದೋ, ಅಥವಾ ಕನ್ನಡವೇ ನಾಡಿನ ಅಧಿಕೃತ ಭಾಷೆಯೆಂದೋ, ಅವರು ಘೋಷಿಸಿಕೊಂಡಿಲ್ಲ. 2. ಪರಾಕ್ರಮದ ರಾಜಕಾರಣವನ್ನು ಕೊನೆಗಾಣಿಸಿ ಜನರೇ ಕೇಂದ್ರವಾಗಿರುವ ಭಾಷಾ ರಾಜಕಾರಣವನ್ನು ಮೊದಲಬಾರಿಗೆ ಅನ್ವೇಷಿಸಿ, ಆ ಮೂಲಕ ಹೊಸ ರಾಜಕೀಯ ಸೂತ್ರವೊಂದನ್ನು ರೂಪಿಸಿಕೊಂಡಿದ್ದು.

9ನೇ ಶತಮಾನದ ಹೊತ್ತಿಗಾಗಲೇ ರಾಷ್ಟ್ರಕೂಟರ ಚಕ್ರವರ್ತಿಯಾದ ನೃಪತುಂಗನಿಗೆ ಪರಾಕ್ರಮದ ರಾಜ್ಯಾಡಳಿತದ ಹೊರತಾಗಿ ಭಾಷಾಧಾರಿತವಾದ ಹೊಸ ರಾಜಕೀಯ ತಂತ್ರವೊಂದನ್ನು ಅಳವಡಿಸಿಕೊಳ್ಳಬೇಕಾದ ಪ್ರಮೇಯವೇನಿತ್ತೆಂಬುದು ಸೋಜಿಗದ ವಿಷಯವೇ. ಅಷ್ಟಕ್ಕೂ ಈ ಕಾವೇರಿಯಿಂದ ಗೋದಾವರಿಯವರೆಗಿದ್ದ ನಾಡಾದರೂ ನೃಪತುಂಗನು ಗಳಿಸಿಕೊಂಡ ನಾಡಾಗಿರದೇ ಉಳಿಸಿಕೊಂಡ ನೆಲವಾಗಿತ್ತು. ಇದನ್ನು ಕಾಪಾಡಬೇಕಾದರೆ ಈ ನಾಡಿನ ಸಮಸ್ತ ಜನಪದರನ್ನೂ ಒಳಗೊಳ್ಳುವ ಏಕ ಮೇವ ಸೂತ್ರವೊಂದರ ತುರ್ತು ಉದ್ಭವಗೊಂಡಿತ್ತು. ಆ ಸೂತ್ರವು ಪರಾಕ್ರಮದಿಂದ ಗಳಿಸಿಕೊಳ್ಳುವ ರಾಜ್ಯಕ್ಕಿಂತ ಇಲ್ಲಿನ ಜನಪದವೇ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಭಾವನಾತ್ಮಕ ಸಮಷ್ಟಿ ಪ್ರಜ್ಞೆಯ ರಾಜಕೀಯ ತಂತ್ರವಾಗಿ ಭಾಷಾ ರಾಜಕಾರಣವನ್ನು ದುಡಿಸಿಕೊಂಡಿದೆ. ಆದ್ದರಿಂದಲೇ ಕನ್ನಡವೆಂಬುದು ಏಕಕಾಲಕ್ಕೆ ನೆಲ-ಭಾಷೆ-ಜನಪದ ಎಂಬ ಮೂರೂ ಅಂಶಗಳನ್ನು ಬೆಸೆಯುವ ಕೊಂಡಿಯಂತೆ ಪರಿಣಮಿಸಿತು. ಕನ್ನಡದ ನಾಡು ಎಂಬ ಅಮೂರ್ತ ನಕ್ಷೆಯೊಂದು ರೂಪುಗೊಳ್ಳಲು ಅಸ್ತಿವಾರವಾಯಿತು. ಈಗಿರುವಷ್ಟೇ ಅಥವಾ ಇನ್ನೂ ಜಟಿಲವೂ ಸಂಕೀರ್ಣವೂ ಆದ ಹಲವು ಅಸ್ಮಿತೆಗಳ, ಭಾಷೆಗಳ ದ್ವಂದ್ವ ಪರಿಸ್ಥಿತಿ ಬಹುಶಃ ಆ ಕಾಲಘಟ್ಟದಲ್ಲೂ ಇದ್ದಿರಲೇಬೇಕು. ಹಲವು ಭಾಷೆಗಳ ನಡುವೆ ತನ್ನದೂ ಒಂದು ಎಂಬ ಅರಿವಿನೊಂದಿಗೆ, ತಾನು ಪ್ರತಿಪಾದಿಸುತ್ತಿರುವ ಕನ್ನಡದಲ್ಲಿಯೂ ಹಲವು ಕನ್ನಡಂಗಳಿವೆ ಎನ್ನುವ ಎಚ್ಚರವೂ ಮಿಳಿತಗೊಂಡಿರುವ ಕವಿರಾಜಮಾರ್ಗಕ್ಕೆ ತನ್ನ ಸುತ್ತಲಿನ ವಾಸ್ತವ ಜಗತ್ತನ್ನು ಒಳಗೊಳ್ಳುವ ದಾರಿ ತಿಳಿದಿತ್ತು. ಅದು ತನ್ನ ಎದುರಾಳಿಯನ್ನು ‘ಪ್ರತಿ’ ಎಂದು ತಿರಸ್ಕರಿಸದೆ ‘ಸಹ’ ಎಂದು ಸ್ವೀಕರಿಸಿತ್ತು. ವಿಶ್ವಾತ್ಮಕವಾಗಿದ್ದ ಸಂಸ್ಕೃತದ ಜೊತೆಗೆ ತಾದಾತ್ಮ್ಯವನ್ನು ಸಾಧಿಸಿದ್ದರೂ ತನ್ನ ಭಿನ್ನತೆಯನ್ನು ಉಳಿಸಿಕೊಂಡೇ ಅದರೊಂದಿಗೆ ವ್ಯವಹರಿಸಿತ್ತು. ಇದಕ್ಕೆ ‘ಯತಿವಿಲಂಘನ’ ಮತ್ತು ‘ಪ್ರಾಸ’ಗಳನ್ನು ವಿಶೇಷವಾಗಿ ಉಳಿಸಿಕೊಂಡದ್ದೇ ನಿದರ್ಶನ. ಇವುಗಳು ಹೇಗೆ ಮುಂದೆ ಕನ್ನಡ ಸಾಹಿತ್ಯದ ಉದ್ದಕ್ಕೂ ಹರಿದುಬಂದಿದೆ ಎಂಬುದನ್ನು ಸುಬ್ಬಣ್ಣನವರು ಸವಿಸ್ತಾರವಾಗಿ ಚರ್ಚಿಸಿದ್ದಾರೆ. ಬಹುತ್ವವನ್ನು ಒಳಗೊಳ್ಳುವ ಗುಣವೇ ಕವಿರಾಜಮಾರ್ಗದ ಬಹುಮುಖ್ಯ ಲಕ್ಷಣ. ಉತ್ತರ ಮತ್ತು ದಕ್ಷಿಣ ಭಾರತಕ್ಕೆ ಮಧ್ಯಸೇತುವಿನಂತಿರುವ ಕನ್ನಡದ ನೆಲದಲ್ಲಿ ಅನೇಕ ಭಾಷೆಗಳ, ಪ್ರಭುತ್ವಗಳ ಮೇಲಾಟದಿಂದಾಗಿ ಈ ಬಹುತ್ವವನ್ನು ಒಪ್ಪಲೇಬೇಕಾದ ಅನಿವಾರ್ಯತೆ ಇತ್ತು. ಆದರೆ ಈಹೊತ್ತಿನ ಚಳುವಳಿಗಳ ಹಾಗೆ ಕರ್ಮಠತೆಯಾಗಲೀ, ಪರಾಕ್ರಮದಿಂದ ನೆಲ-ಜಲಗಳನ್ನು ಉಳಿಸಬೇಕೆಂಬ ರೂಕ್ಷತೆಯಾಗಲೀ ಕವಿರಾಜಮಾರ್ಗದ ರಾಜಕೀಯ ಮಿತಿಯಾಗಿರಲಿಲ್ಲ. ಅದರದ್ದೆ ಒಂದು ವಾಕ್ಯವನ್ನು ಎತ್ತಿ ಹೇಳುವುದಾದರೆ “ಕಸವರಮೆಂಬುದು ನೆರೆ ಸೈರಿಸುವೊಡೆ ಪರಧರ್ಮಮಂ ಪರ ವಿಚಾರಮುಮಂ....” ಎಂಬ ಸಹನೆಯು ಪ್ರತಿಯೊಬ್ಬರಲ್ಲೂ ಹುಟ್ಟಿದಾಗ ಮಾತ್ರ ‘ಸ್ವ’ ಮತ್ತು ‘ಅನ್ಯ’ವೆಂಬ ಬೇಧವಳಿದು ಸಾಮರಸ್ಯ ಸ್ಥಾಪನೆಯಾಗಲು ಸಾಧ್ಯವಾಗುತ್ತದೆ. ಇದೇ ಈ ದೀರ್ಘ ಪ್ರಬಂಧದ ಒಟ್ಟು ಜೀವಾಳವೆನ್ನುವುದಕ್ಕೆ ಅಡ್ಡಿಯಿಲ್ಲ.

ನಮ್ಮ ಕಾಲದ ತಲ್ಲಣಗಳಾದ ಭಾಷಾ ಚಳುವಳಿಗಳು, ಗಡಿವಿವಾದಗಳು, ವಲಸೆಯ ಸಮಸ್ಯೆಗಳು, ಬಹುತ್ವವನ್ನು ಹತ್ತಿಕ್ಕಲು ಹೇರುವ ಏಕತೆಯ ಸೂತ್ರಗಳು ಇವೆಲ್ಲದಕ್ಕೂ ಕವಿರಾಜಮಾರ್ಗವೇ ಉತ್ತರವಾಗಿ ನಿಲ್ಲುತ್ತದೆ. ಇಂದಿನ ಭಾಷಾವಾರು ರಾಜ್ಯದ ಪರಿಕಲ್ಪನೆಗೆ ಮೂಲ ಅಸ್ತಿವಾರ ಹಾಕಿಕೊಟ್ಟಿದ್ದು ಕವಿರಾಜಮಾರ್ಗವೇ. ಈ ಭಾಷಾವಾರು ವಿಂಗಡಣೆಯನ್ನಲ್ಲದೇ ಇನ್ಯಾವ ರೀತಿಯ ವಿಭಜನೆಯನ್ನೂ ನಾವು ಭಾರತದ ಸಂದರ್ಭದಲ್ಲಿ ಕಲ್ಪಿಸಿಕೊಳ್ಳಲಾರೆವು. ಆದರೆ ಹಲವು ಭಾಷೆಗಳ ನಡುವಲ್ಲಿ ಒಂದು ಭಾಷೆಯನ್ನು ಪ್ರಧಾನವೆಂದು ಭಾವಿಸಿವುದು ಎಷ್ಟು ಸೂಕ್ಷ್ಮವಾದ ತೊಡಕಿನ ವಿಚಾರವೆಂದು ಗಮನಿಸಬೇಕು. ಬಹುಸಂಖ್ಯಾತರ ಭಾಷೆಯನ್ನು ಬಲವಂತವಾಗಿ ಮಿಕ್ಕ ಭಾಷಾ ಸಮುದಾಯಗಳ ಮೇಲೆ ಹೇರುವಾಗ ಅನಿವಾರ್ಯವಾಗಿ ಶ್ರೇಷ್ಠತೆಯ ವ್ಯಸನವನ್ನು ಮೈದಾಳಿ ಪರಾಕ್ರಮದಿಂದಾದರೂ ಅನುಷ್ಠನಗೊಳಿಸಬೇಕಾಗುತ್ತದೆ. ಆಗ ಯಾವುದೇ ಭಾಷೆಯಾದರೂ ಅದು ಪ್ರೀತಿಯ ಕೊಡುಕೊಳೆಯಾಗದೇ ದ್ವೇಷವನ್ನು ಬಿತ್ತಿಬೆಳೆಯುವ ರಾಜಕಾರಣವಾಗುತ್ತದೆ. ಇದರಿಂದ ಹೊರ ಬರಬೇಕಾದರೆ ನಮಗೆ ಕವಿರಾಜಮಾರ್ಗದ ವಿವೇಕ ಬೇಕು. ಕವಿರಾಜಮಾರ್ಗವು, ಅಷ್ಟರಲ್ಲಾಗಲೇ ಬೃಹದಾಕಾರವಾಗಿ ವ್ಯಾಪಿಸಿದ್ದ ಸಂಸ್ಕೃತ ಹಾಗೂ ಅದಾಗ ತಾನೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಹಲವು ಭಾಷೆಗಳ ಮಧ್ಯದಲ್ಲಿ ಕನ್ನಡವನ್ನು ಸ್ಥಾಪಿಸಿತಲ್ಲದೇ, ಕನ್ನಡ ಅಳಿವುದೆಂಬ ಭಯವನ್ನಾಗಲೀ ಇನ್ನೂ ಸಂಸ್ಕೃತದಷ್ಟು ಪ್ರೌಢಿಮೆಯನ್ನು ಗಳಿಸಿಕೊಂಡಿಲ್ಲ ಎಂಬ ಕೀಳರಿಮೆಯನ್ನಾಗಲಿ ಇಟ್ಟುಕೊಂಡಿರಲಿಲ್ಲ. ವಸುಧಾವಲಯದೊಳಗೆ ವಿಶೇಷವಾಗಿರುವ ಕನ್ನಡವನ್ನು ಲೀನಗೊಳಿಸುವ ಅಥವಾ ಈ ಕನ್ನಡದೊಳಗೆ ವಸುಧಾವಲಯವನ್ನೇ ವಿಲೀನಗೊಳಿಸಿ ತಾನೇ ಒಂದು ವಿಶದ ಜಗತ್ತಾಗಲು ಪ್ರಯತ್ನಿಸಿತೇ ಹೊರತು ದ್ವೇಷ ರಾಜಕೀಯಕ್ಕೆ ಕವಿರಾಜಮಾರ್ಗ ಎಂದೂ ಹಪಹಪಿಸಲಿಲ್ಲ. ಇವತ್ತು ನಾವು ಕಟ್ಟಬೇಕಿರುವುದು ಇಂತಹ ಸೈರಣೆಯ ಸಹಬಾಳ್ವೆಯ ಕನ್ನಡ ಜಗತ್ತನ್ನೇ ಹೊರತು ಮತ್ತೇನನ್ನೂ ಅಲ್ಲ. ಇದನ್ನೇ ಸುಬ್ಬಣ್ಣ ಅವರು ‘ಕವಿರಾಜಮಾರ್ಗವೇ ನಿರ್ಮಿಸಿದ ಕನ್ನಡ ಜಗತ್ತು’ ಎನ್ನುತ್ತಾರೆ.

ಈ ಸರಣಿಯ ಹಿಂದಿನ ಬರಹಗಳು:
ಮಾದೊರುಬಾಗನ್ ಎಂಬ ಅರ್ಧನಾರೀಶ್ವರ: ಪ್ರೊ. ಜಯಲಲಿತಾ
ಲೋಕಹಿತಕ್ಕೆ ಅಗತ್ಯವಾದ ಲೋಕದೃಷ್ಟಿ: ಅಮರ್ ಬಿ ಹೊಳೆಗದ್ದೆ
ಅವಳ ಅರಿವು; ಸಮಕಾಲೀನ ಸಮಾಜಕ್ಕೆ ಹೆಣ್ಣಿನ ಪ್ರತಿಸ್ಪಂದನೆ
‘ದ್ರೌಪದಿ’ ತಂತ್ರದ ದೃಷ್ಟಿಯಿಂದಲೂ ತಾತ್ತ್ವಿಕ ದೃಷ್ಟಿಯಿಂದಲೂ ವಿಶಿಷ್ಟವಾದ ಕಾದಂಬರಿ
ಪೃಥ್ವಿಯಲ್ಲೊದಗಿದ ಘಟವು..ಕರ್ನಾಟಕದ ನೆನ್ನೆಗಳು
ರಮೇಶ ಅರೋಲಿಯವರ ಜುಲುಮೆ: ನೆಲಮೂಲ ಬದುಕಿನ ಕಾವ್ಯಕುಸುರಿ
ವ್ಯಕ್ತಿನಾಮಗಳು: ಸ್ವರೂಪ ಮತ್ತು ವಿಶ್ಲೇಷಣೆ: ಒಂದು ಮರು ಓದು
ಡಾ. ಎಂ.ಪಿ. ಉಮಾದೇವಿಯವರ 'ಶೈವ ವಾತ್ಸಲ್ಯʼ
ಕನಸಿಗೆ ರೆಕ್ಕೆ ಹಚ್ಚುವ ‘ಫ್ರಾಗಿ ಮತ್ತು ಗೆಳೆಯರು’: ಗುಂಡುರಾವ್ ದೇಸಾಯಿ
‘ಶಂಭಾಲ’ ಎಂಬ ರಾಜಕೀಯ ಕಾದಂಬರಿ – ಒಂದು ವಿಶ್ಲೇಷಣಾತ್ಮಕ ನೋಟ: ವ್ಯಾಸರಾವ್ ಜೆ.ಎಸ್
ನೇಗಿಲ ತುದಿಯ ನೋವು: ಅಂದಯ್ಯ ಅರವಟಗಿಮಠ
ಅವಳೆದೆಯ ಡೈರಿಯೊಳಗೆ
ಪ್ರೇಮದ ವಿಲಕ್ಷಣತೆಯ ಹುಡುಕಾಟ

MORE FEATURES

ಕನಸುಗಳ ಕಣಿವೆಯಲ್ಲಿ ಭ್ರಮೆಗಳನ್ನು ಮಾರಿದವಳು..

12-12-2025 ಬೆಂಗಳೂರು

"ಕದಡಿದ ಕೊಳವು ತಿಳಿಯಾಗಿರಲು (ಬಿಡಿ ಬರಹ, ಪ್ರಬಂಧ) ಓದಿದೆ. ಇಲ್ಲಿನ ಹೆಚ್ಚಿನ ಲೇಖನಗಳನ್ನು ನಾನು ಈ ಮೊದಲೇ ಓದಿದ್...

ಎರಡು ರಟ್ಟುಗಳ ನಡುವೆ ಏನಿದೆ, ಏನಿಲ್ಲ!

12-12-2025 ಬೆಂಗಳೂರು

"ಪುಸ್ತಕ, ಓದು ಮತ್ತು ಬರವಣಿಗೆ ಒಂದು ವರ್ಗದ ಪ್ಯಾಶನ್. ತನ್ಮಯತೆಯಿಂದ ಓದುತ್ತಾ ಕೂತ ವ್ಯಕ್ತಿ ನಮಗೆ ಯಾವತ್ತೂ ಒಂದ...

ಕಥನ ಕಾರಣ ವಿನೂತನ

11-12-2025 ಬೆಂಗಳೂರು

"ಈ ನಡುವೆ ದಶಕಗಳ ಹಿಂದೆಯೇ ಆಗೀಗ ಬರೆದಿಟ್ಟಿದ್ದ ಚೀಟಿಗಳು ಕಣ್ಣಿಗೆ ಬಿದ್ದಾಗೆಲ್ಲಾ 'ನಮ್ಮನ್ನು ಹೀಗೇ ಬಿಟ್ಟರ...