ಕಾವ್ಯ ಎನ್ನುವುದು ಕವಿ ಮನದ ಬಿಂಬ: ಜಬೀವುಲ್ಲಾ ಎಂ. ಅಸದ್


‘ಕವಿತೆಯೊಂದು ಜೀವಂತಿಕೆಯಿಂದ ಕೂಡಿರಬೇಕು ಎಂದರೆ, ಅದರಲ್ಲಿ ಆತ್ಮವಿರಬೇಕು. ಭಾವಗಳ ಪ್ರಾಣ ವಾಯುವಿನ ಚಲನೆ ಇರಬೇಕು. ಇಲ್ಲದಿರೆ ಆತ್ಮ ಮತ್ತು ಪ್ರಾಣವಿಲ್ಲದ ಬರೀ ಪದಗಳ ಶರೀರ ಮೃತದೇಹಕ್ಕೆ ಸಮಾನ’ ಎನ್ನುತ್ತಾರೆ ಜಬೀವುಲ್ಲಾ ಎಂ. ಅಸದ್ ಅವರು ಡಾ.ಎಚ್.ಎಸ್. ಸತ್ಯನಾರಾಯಣ ಅವರ ‘ಮರ ಬರೆದ ರಂಗೋಲಿ’ ಹಾಯ್ಕುಗಳ ಸಂಕಲನಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ಕವಿ ಮನಕೆ
ಬರೆಯದ ಕವಿತೆ
ಕನವರಿಕೆ

ಹೀಗೆ... ಬರೆಯದ ಅಥವಾ ಬರೆಯಲಾಗದ ಕವಿತೆ, ಕವಿಯ ಮನಸಿಗೆ ಕನವರಿಕೆಯಾಗಿ ಮಿಗಿಲಿಹೋಗುವ ಸುಖ ಅವ್ಯಕ್ತ, ಅವರ್ಣನಿಯ, ಅನಿರ್ವಚನೀಯ, ಅನರ್ಘ! ಅಷ್ಟೇ ಯಾತನಾಮಯವೂ ಹೌದು.

ಭ್ರಮೆಯು
ಕವಿತೆ ಬರೆವುದು
ಬರೆಯದಿರುವುದು

ಮೂಲತಃ ನಮ್ಮದು ಮುಖ್ಯವಾಗಿ ಮಹಾಕಾವ್ಯಗಳಿಂದ ಒಡಮೂಡಿದ ಕಾವ್ಯ ಪರಂಪರೆಯಾಗಿದ್ದರೂ ಸಹ, ಕಿರು ಗವಿತೆಗಳಿಗೂ ಕನ್ನಡ ಸಾರಸ್ವತ ಲೋಕದಲ್ಲಿ ತನ್ನದೇ ಆದ ಮಹತ್ವವಿದೆ. ಇಂದಿನ ಧಾವಂತದ ಬದುಕಿನಲ್ಲಿ ಯಾರಿಗೂ ಓದುವ ಹಾಗೂ ಬರೆಯುವ ಪುರುಸೋತ್ತಿಲ್ಲ. ಹಾಗಾಗಿಯೇ ಇಂದು ಬಹುತೇಕ ಕವಿಗಳು ಯಾವ ಗೊಡವೆ ಇಲ್ಲದ, ಯಾರ ಅಡೆತಡೆಗಳಿಲ್ಲದೆ ಚುಟುಕು, ಹನಿಗವಿತೆ, ಮುಕ್ತಕ, ತ್ರಿಪದಿ - ಚೌಪದಿ, ಆಧುನಿಕ ವಚನಗಳಂತಹ ಇತ್ಯಾದಿ ಪ್ರಕಾರಗಳ ಕಿರುಗವಿತೆಗಳ ರಚನೆಯಲ್ಲಿ ತೊಡಗಿಸಿಕೊಂಡಿರುವುದನ್ನು ಕಾಣಬಹುದಾಗಿದೆ.

ಮರ್ತ್ಯ ಮೀರಿದ
ಮಾತು, ಕನಸು
ರೆಕ್ಕೆ ಹರಿದ ಹಕ್ಕಿ

ದಟ್ಟವಾದ ಜೀವನ ಅನುಭವವಿಲ್ಲದೆ, ಅನುಭಾವದ ಅರಿವಿಲ್ಲದೆ, ಯಾವುದೇ ಅಧ್ಯಯನವಿಲ್ಲದೆ, ಪೂರ್ವ ಸೂರಿಗಳನ್ನು ಓದಿಕೊಳ್ಳದೆ, ಎಂದಾದರೂ ಬಿದ್ದು ಹೋಗಬಹುದಾದ ತೋಚಿದ ನಾಲ್ಕು ಸಾಲುಗಳನ್ನು ಪ್ರಯತ್ನಪೂರ್ವಕವಾಗಿ ಯಾವುದೇ ಜೀವಂತಿಕೆಯ ಸ್ಪರ್ಶವಿಲ್ಲದೆ ನಿರ್ಜಿವ ಗೋಡೆಯ ಹಾಗೆ ಕಟ್ಟಿಕೊಟ್ಟು ನಿಲ್ಲಿಸಿ ಹನಿಗವಿತೆಯಾಗಿಸುವ ಪ್ರಯತ್ನವನ್ನು ಅತಿ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಾವಿಂದು ಕಾಣುತ್ತಿದ್ದೇವೆ. ಅಂತಹ ರಚನೆಗಳನ್ನು ಸಹ ಮೆಚ್ಚಿಕೊಂಡು ಬಹುಪರಾಕ್ ಹೇಳುವವರ ಸಂಖ್ಯೆಗೂ ಇಲ್ಲಿ ಬರವಿಲ್ಲ. ಈ ಬಗೆಯ ಬೆಳವಣಿಗೆ ಇಂದು ಸಾಹಿತ್ಯಕ ವಲಯದಲ್ಲಿ ಪಿಡುಗಾಗಿ ಬೆಳೆಯುವುದರ ಜೊತೆಗೆ, ಮುಂದೊಂದು ದಿನ ಮಾರಕ ರೋಗವಾಗಿ ಪರಿಣಮಿಸ ಬಹುದಾದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಜಂಗಮ ಸ್ಥಾವರಗಳ
ಗೊಡವೆ
ಬಾಳೊಲುಮೆಗೇಕೆ?

ಕಾವ್ಯ ಎನ್ನುವುದು ಕವಿ ಮನದ ಬಿಂಬ. ಕವಿಯಾದವನು ತನ್ನ ಮನದ ಬಿಂಬವನ್ನು ಲೋಕದ ಕಣ್ಣಿಗೆ ಒಂದು ಆಕೃತಿ ಯಾಗಿಸಿ ಕಾಣಿಸಿ, ನಿರ್ದಿಷ್ಟ ಭಾಷೆಯ ಸಹಯೋಗದೊಂದಿಗೆ ಅಕ್ಷರಗಳ ಮೂಲಕ ಪದವಾಗಿಸಿ, ಪದಗಳ ಬಟ್ಟಲಲ್ಲಿ ಭಾವಾರ್ಥ ಗಳನ್ನು ತುಂಬಿಸಿ ಕಾವ್ಯಾಸಕ್ತರ ತುಟಿಗೆ ಜಾಮ್ ಆಗಿಸಿ, ಸ್ವರ ಲಯ - ಪ್ರಾಸಗಳೊಂದಿಗೆ ಕೇಳುಗ ಸಹೃದಯರ ಕಿವಿಗೆ ಕವಿಯ ಅಂತರಂಗದ ಕತ್ತಲ ಕೊಣೆಯಲ್ಲಿ ಹುಟ್ಟಿದ ಬೆಳಕಿನ ಹಾಡಾಗಿಸಿ, ರೂಪಕ-ಪ್ರತಿಮೆ-ಅಲಂಕಾರಗಳಂದದಿ, ಕಲಾತ್ಮಕತೆಯ ಕುಸುರಿ ಕೌಶಲ್ಯದಿಂದ ಸಂಯೋಜಿಸುವುದರ ಮುಖಾಂತರ ನವ ಕಾಣೆ ಮತ್ತು ಹೊಸ ಹೊಳಹುಗಳನ್ನು ಬಿತ್ತಬೇಕು. ಅದೇ ರೀತಿ ಓದುಗನು ಸಹ ಯಾವುದು ಕವಿತೆ? ಯಾವುದು ಕವಿತೆಯಾಗ ಲಾರದು! ಯಾವ ಪ್ರಕಾರ? ಅದರ ಹಿನ್ನೆಲೆ ಮತ್ತು ಏಕೆ. ಹೇಗೆ? ಎಂಬಿತ್ಯಾದಿ ವಿಚಾರಗಳು ಕೇವಲ ಕವಿಗಷ್ಟೆ ಅಲ್ಲ, ಅದನ್ನು ಓದಿ, ಅರ್ಥೈಸಿಕೊಂಡು, ಆಸ್ವಾದಿಸಿ, ಆನಂದಿಸುವ ಓದುಗನಿಗೂ ಆ ಬಗೆಯ ಅರಿವು ಮುಖ್ಯವಾಗುತ್ತದೆ. ಇಲ್ಲದಿದ್ದ ಪಕ್ಷದಲ್ಲಿ ಒಳ್ಳೆಯ ಮತ್ತು ಕವಿತೆಗಳೇ ಅಲ್ಲದವುಗಳ ನಡುವಿನ ಅಂತರ ಅಳಿಸಿ ಒಳ್ಳೆಯದರೊಂದಿಗೆ ಕೆಡುಕು ಸೇರಿ ಕಲಬೆರಕೆಯಾಗಿ ಸಂದಿಗ್ಧತೆ ಸೃಷ್ಟಿಯಾಗಿ ದ್ವಂದ್ವಕ್ಕೆ ಕಾರಣವಾಗುವ ಸಂಭವವಿದೆ.

ಹೊಸ ತಿಂಗಳಲಿ
ಹಳತು ಹಿಂದಕೆ
ನಾವೂ ಅಂತೆಯೇ

ಕಿರುಗವಿತೆಗಳು ಕನ್ನಡ ಕಾವ್ಯ ಪ್ರಕಾರದ ಮೂಲ ಶಕ್ತಿಯಾಗಿದ್ದು, ಪ್ರಾಯಶಃ ಪ್ರತಿಯೋರ್ವ ಬರಹಗಾರನು ಕಿರುಗವಿತೆಗಳನ್ನು ರಚಿಸುವುದರ ಮೂಲಕ ಮೊದಲ ಬಾರಿಗೆ ತನ್ನ ಬಾಲಿಶ ಹೆಜ್ಜೆಗಳನ್ನು ಇಡುವ ವಿದ್ಯಾರ್ಥಿಯಾಗಿ, ಸ್ವ-ಅನುಭವ ಮತ್ತು ದೃಷ್ಟಿಕೋನದ ಆಧಾರದ ಮೇಲೆ ಪಕ್ವತೆ ಹಾಗೂ ಪ್ರಬುದ್ಧತೆಯನ್ನು ಮೈಗೂಡಿಸಿಕೊಳ್ಳುವುದರ ಮುಖೇನ ಪರಿಪೂರ್ಣತೆಯನ್ನು, ಆ ನಿಟ್ಟಿನಲ್ಲಿ ಸಾರ್ಥಕತೆಯ ನಡಿಗೆಗೆ ನಾಂದಿ ಹಾಡುತ್ತಾನೆ. ಈವೊಂದು ಪಯಣದಲ್ಲಿ ಹಲವರು ಕಿರುಗವಿತೆ ಗಳನ್ನು ಅತಿಕ್ರಮಿಸಿ ಮುಂದುವರಿಯುವವರೆ ಹೆಚ್ಚು, ಕೆಲವರು ಮಾತ್ರ ಇರುವಲ್ಲೆ ನೆಲೆನಿಂತು ಸಾರ್ಥಕತೆಯನ್ನು ಕಂಡು ಕೊಳ್ಳುತ್ತಾರೆ.

ತಾಯ ಎದೆಹಾಲು
ಬರಿದಾದೀತು
ಪ್ರೀತಿ ರಸವಲ್ಲ

ಆದರೆ ಈಗಾಗಲೇ ಕಥೆ, ಲೇಖನ, ಪ್ರಬಂಧ, ಸಂಶೋಧನೆ ಹಾಗೂ ವಿಮರ್ಶೆಗಳ ಮೂಲಕ ಕನ್ನಡ ಸಾಹಿತ್ಯ ವಲಯದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸುವುದರ ಮುಖೇನ ಹಿರಿಯ ಸಾಹಿತಿಯಾಗಿ ಗುರುತಿಸಿಕೊಂಡಿರುವ, ತಮ್ಮದೇ ಓದುಗ ವರ್ಗವನ್ನು ಸೃಷ್ಟಿಸಿಕೊಂಡಿರುವ, ಸೃಜನಶೀಲ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿರುವ 'ಡಾ. ಎಚ್. ಎಸ್. ಸತ್ಯನಾರಾಯಣ' ಅವರು ಎಲ್ಲಾ ಪ್ರಕಾರದ ಸಾಹಿತ್ಯ ಕೃಷಿಯನ್ನು ಮಾಡಿದ ತದನಂತರ, ಈಗ ಭಿನ್ನಾಣಗಿತ್ತಿಯಾದ ಕಾವ್ಯ ಕನ್ನಿಕೆಯನ್ನು ಒಲಿಸಿಕೊಳ್ಳಲು ಹೊರಟಿರುವುದು... ಅದರಲ್ಲೂ ವಿದೇಶಿಯಾದ 'ಹೈಕು' ಎಂಬ ಜಪಾನಿ ಬೆಡಗಿಯ ಮೋಹಕ್ಕೆ ಒಳಗಾಗಿರುವುದು ಅಚ್ಚರಿ ಪಡುವ ಸಂಗತಿ.

ಋತುಮಾನಕ್ಕೆ
ಹೊಸ ಉಮೇದು
ಇಳೆಗೆ ಜೀವಸೆಲೆ

ಹಾಗೆ ಕವಿತೆಗಳನ್ನು ಒಂದು ಧ್ಯಾನದಂತೆ, ದರ್ಶನ ಯೋಗದಂತೆ ರಚಿಸಿದ ವಚನಕಾರರು, ಶರಣರು, ಸಂತರು, ದಾಸ ಶ್ರೇಷ್ಠರನ್ನು ಹೊರತುಪಡಿಸಿ ನೋಡುವುದಾದರೆ ಮಂಕುತಿಮ್ಮನ ಕಗ್ಗ ಬರೆದ 'ಡಿವಿಜಿ' ಅವರು, ಕನ್ನಡದ 'ಪನ್'- ಡಿತ ಎಂದೇ ಖ್ಯಾತನಾಮರಾದ 'ವೈಎನ್ನೆ' ಅವರು. ಹನಿಗವಿತೆಗಳ ಮೂಲಕವೇ ಕರ್ನಾಟಕದ ಮನೆ ಮಾತಾಗಿರುವ 'ಡುಂಡಿರಾಜ್' ಅವರು, ಚುಟುಕು ಬ್ರಹ್ಮ ಎಂದೇ ಹೆಸರಾದ 'ದಿನಕರ ದೇಸಾಯಿ' ಅವರು... ಹೀಗೆ ಉದಾಹರಣೆಗಳಿಗೇನೂ ಕಡಿಮೆ ಇಲ್ಲ.

ಪರಿಶುದ್ಧ ಬಾಳೂ
ಕವಿತೆಯೆ, ಬರೀ
ಪದಗಳಲ್ಲ.

ಕನ್ನಡದ ಕಿರುಗಳಿತೆಗಳ ಸಾಲಿಗೆ ಸೇರಬಹುದಾದಂತಹ, ಇತ್ತೀಚಿನ ದಿನಗಳಲ್ಲಿ ರುಬಾಯಿ, ಟಂಕಾ, ಚೋಕ, ತನಗ, ಫರ್ಡ್, ಶಾಯಿರಿ, ಅಬಾಬಿಗಳ ಜೊತೆಗೆ ಜೊತೆಗೆ ಹೈಕುಗಳಂತಹ ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ, ಆಯಾ ಭಾಷೆಯ ಸಿಲೆಬಲ್ ಗೆ ಅನುಗುಣವಾಗಿ ರಚಿಸಬಹುದಾದ ಇತರೆ ಭಾಷೆಗಳ ಕಾವ್ಯ ಪ್ರಕಾರಗಳು ಇತ್ತೀಚೆಗೆ ಹೊಸತಾಗಿ ಬರೆಯುತ್ತಿರುವವರನ್ನಷ್ಟೆ ಅಲ್ಲದೆ ಹಿರಿಯ ಸಾಹಿತಿಗಳನ್ನು ಸಹ ಬಹುವಾಗಿ ಆಕರ್ಷಿಸುತ್ತಿವೆ. ಅದಕ್ಕೆ ಸತ್ಯನಾರಾಯಣ ಅವರೂ ಸಹ ಹೊರತಾಗಿಲ್ಲ ಎಂದರೆ ತಪ್ಪಾಗಲಾರದು.

ನನ್ನಿಂದ ಸಾಧ್ಯ
ನಿಲವೆ ಗೆಲವು
ನನ್ನಿಂದ ಸಾಧ್ಯವೆ?

ಸತ್ಯನಾರಾಯಣ ಅವರೆ ಹೇಳಿಕೊಂಡಂತೆ ಕೆಲವು ಸಾರಿ ಕವಿತೆಗೆ ಕೈ ಹಾಕಿ, ಸೋಲುಂಡು ಕರ ಸುಟ್ಟುಕೊಂಡು ತಮ್ಮ ಕವಿತೆಗೆ 'ಸಾರಿ' ಹೇಳಿಕೊಂಡವರು ಅವರು. ಒಂದು ಮುಕ್ತ ಕವಿತೆ ರಚಿಸುವುದಕ್ಕಿಂತ ತನ್ನ ನೆಲದಲ್ಲದ, ಯಾವುದೋ ಕಂಡರಿಯದ ಅಪರಿಚಿತ ಭಾಷೆಯ, ಕೇಳರಿಯದ ಆಗಂತುಕ ಅರ್ಥದ, ಅಲ್ಲಿನ ಸಂಪ್ರದಾಯದ ಪರಿಧಿಯಲ್ಲಿ ಕಟ್ಟಲ್ಪಡುವ, ವಿಭಿನ್ನ ನಿಯಮಗಳಿಗೆ ಒಳಪಡುವ ಕಾವ್ಯ ಪ್ರಕಾರವನ್ನು ಅರಿತು ತನ್ನ ಮಾತೃ ಭಾಷೆಯಲ್ಲಿ ಅದನ್ನು ರಚಿಸುವುದು ನಿಜಕ್ಕೂ ಪ್ರಯಾಸ ದಾಯಕವೇ ಸರಿ.

ಗಡಿಗಳಿರುವುದು
ಹೊರಗಲ್ಲ
ನಮ್ಮಿ ಎದೆಯಲ್ಲಿ

ಕನ್ನಡ ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ ಇದು ಉತ್ತಮ ವಿಚಾರವೇ ಆದರೂ ಸಹ, ಆವೊಂದು ಕಾವ್ಯ ಪ್ರಕಾರಗಳ ಹಿನ್ನೆಲೆ, ಆಳ, ವ್ಯಾಪ್ತಿ, ಇತಿಹಾಸ, ಅಧ್ಯಯನ, ಗ್ರಹಿಕೆ ಇತ್ಯಾದಿ ಪೂರ್ವಾಪರಗಳ ಯಾವೊಂದು ತಯಾರಿಯಿಲ್ಲದೇನೆ ಕೇವಲ ಬಾಹ್ಯ ರಚನೆಗಷ್ಟೆ ಪ್ರಾಮುಖ್ಯತೆಯನ್ನು ನೀಡಿ ಬಹುತೇಕರು ಹೈಕುಗಳನ್ನು ರಚಿಸುತ್ತಿರುವುದು ವಿಷಾದನೀಯ ಸಂಗತಿ.

ಜ್ಞಾನಿ ನಾನೆಂಬ
ಭ್ರಮೆಯು ನನ್ನ
ಬೆನ್ನಿಗಂಟಿದ ಶತ್ರು

ಕವಿತೆಗಳ ರಚನೆಗೆ ಕವಿಗೆ ಕೇವಲ ಹಂಬಲವಿದ್ದರೆ ಸಾಲದು, ಜೊತೆಗೆ ಅಧ್ಯಯನಶೀಲತೆಯೂ ಬೇಕು. ಮನದ ತುಡಿತ ಮಿಡಿತಗಳನ್ನು ಅಕ್ಷರ ಸುಮವಾಗಿಸುವ, ಮಾಲೆಯೋಪಾದಿಯಲ್ಲಿ ಪದಗಳನ್ನು ಒಂದು ಬಂಧದಲ್ಲಿ ಬೆಸೆಯುವ, ಸುಗಂಧದಂತೆ ಭಾವಗಳನ್ನು ಹೊಸೆಯುವ ಕೌಶಲ್ಯ ಕರಗತವಾಗಿಸಿಕೊಳ್ಳಬೇಕು. ಅದೊಂದು ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ದಕ್ಕುವ ಸಿದ್ಧಿಯೆ ಸರಿ.

ಬಾಗುವುದ ಕಲಿಸು
ಓ ಚೇತನವೇ
ಬೀಗುವುದನ್ನಲ್ಲ

ಕವಿತೆಯೊಂದು ಜೀವಂತಿಕೆಯಿಂದ ಕೂಡಿರಬೇಕು ಎಂದರೆ, ಅದರಲ್ಲಿ ಆತ್ಮವಿರಬೇಕು. ಭಾವಗಳ ಪ್ರಾಣ ವಾಯುವಿನ ಚಲನೆ ಇರಬೇಕು. ಇಲ್ಲದಿರೆ ಆತ್ಮ ಮತ್ತು ಪ್ರಾಣವಿಲ್ಲದ ಬರೀ ಪದಗಳ ಶರೀರ ಮೃತದೇಹಕ್ಕೆ ಸಮಾನ.

ಹೈಕುವೊಂದನ್ನು ಓದಿದಾಗ ಅದು ಕೊಡುವ ಅನುಭೂತಿ, ಉಂಟುಮಾಡುವ ತತಕ್ಷಣದ ಪರಿಣಾಮ ಮುಖ್ಯವಾದುದು. ಏಕೆಂದರೆ ಒಬ್ಬ ಕಾದಂಬರಿಕಾರ ಒಂದು ಕೃತಿಯಲ್ಲಿ ಹೇಳುವ ವಿಚಾರವನ್ನು ಒಬ್ಬ ಸಮರ್ಥ ಕವಿ ಕೆಲವೇ ಸಾಲುಗಳಲ್ಲಿ ಅಭಿವ್ಯಕ್ತಿಸ ಬಲ್ಲ. ಅದು ಕವಿಯ ನಿಜವಾದ ತಾಕತ್ತು....

ಹದಿನೇಳರಾಟ
ಅಕ್ಕರದ
ಸರಮಾಲೆ ಕವಿತೆ

ಏಕೆಂದರೆ ಜಪಾನಿ ಭಾಷೆ ಒಂದು ಸ್ವರ ಪ್ರಧಾನವಾದ, ನವಿರಾದ, ಲಾಲಿತ್ಯತೆಯಿಂದ ಕೂಡಿದ, ಮೃದು ಮತ್ತು ಮಧುರ ಅನುಭೂತಿ ನೀಡುವ ನಾಜೂಕು ಭಾಷೆಯಾಗಿದೆ. ಸಾಮಾನ್ಯವಾಗಿ ಹಾಯ್ಕುಗಳನ್ನು ಜಪಾನಿಯರು ಅವರ ಭಾಷೆಗನುಗುಣವಾಗಿ ಸಿಲೆಬಲ್ ಮಾದರಿಯಲ್ಲಿ 'ಒಂದೇ ಸಾಲಿನಲ್ಲಿ' ಸಂಯೋಜಿಸುವ ವೈಶಿಷ್ಟ್ಯ ಪೂರ್ಣವಾದ ಒಂದು ಬಗೆಯ ಪಾರಂಪರಿಕ ಕ್ರಮಾನುಮಣಿಕೆ ಜಾರಿಯಲ್ಲಿರುವುದನ್ನು ಕಾಣಬಹುದಾಗಿದೆ. ಆದರೆ ನಮ್ಮ ಕನ್ನಡ ಭಾಷೆ ವ್ಯಂಜನ ಪ್ರಧಾನವಾದ ಗಂಡು(ಗಡಸು) ಭಾಷೆಯಾಗಿದ್ದು, ಅದನ್ನು ಜಪಾನಿ ಸಿಲೆಬಲ್ ಮಾದರಿಗೆ ಅಳವಡಿಸುವುದು ನಿಜಕ್ಕೂ ದುಸಾಧ್ಯವೆ ಸರಿ. ಇಲ್ಲಿ ಕವಿಗೆ ಮುಖ್ಯವಾಗಿ ಛಂದಸ್ಸಿನ ಸಮಸ್ಯೆ ಉಲ್ಬಣಿಸುತ್ತದೆ. ಹೀಗಿದ್ದಾಗ ಹಾಯ್ಕು ರಚಿಸುವ ಕವಿಗೆ ಎರಡೂ ಭಾಷೆಗಳ ಜ್ಞಾನ ಅನಿವಾರ್ಯವಾಗುತ್ತದೆ. ಕೇವಲ ಸಿಲೆಬಲ್ ಒಂದನ್ನೇ ಗಮನ ದಲ್ಲಿಟ್ಟುಕೊಂಡು, ಅಕ್ಷರಗಳ ಸಂಖ್ಯೆಯನ್ನು ಮುಖ್ಯವಾಗಿಸಿ ಭಾವಗಳನ್ನು ಗಾಳಿಗೆ ತೂರುವ, ಮುಕ್ಕಾಗಿಸುವ, ಕಾವ್ಯದ ಪರಿಭಾಷೆಯ ಅಂದವನ್ನೆ ಹದಗೆಡಿಸುವ ಕ್ರಮ ಸರಿಯಲ್ಲ ಅನಿಸುತ್ತದೆ. ಆಂಗ್ಲಭಾಷೆಯ ಅನುವಾದದ ಕ್ರಮದಲ್ಲಿ ಇಲ್ಲಿ ಚಾಲ್ತಿಯಲ್ಲಿರುವ 5+7+5=17 ಬಗೆಯ ಅಕ್ಷರ ವಿಂಗಡಣೆಯ ಕ್ರಮ ಅನುಚಿತ ಅನಿಸುತ್ತದೆ.

ಈ ಹೈಕು
ಹದಿನೇಳರಲ್ಲಿ
ಇಪ್ಪತ್ತೆಂಟನಾಡುವುದು

ಏಕೆಂದರೆ ನಿರ್ದಿಷ್ಟ ಸಂಖ್ಯೆಯಲ್ಲಿ ಪೂರ್ಣ ಭಾವಗಳನ್ನು ಕಟ್ಟಿಕೊಡಬಹುದು, ಆದರೆ ಮುಕ್ಕಾದ ಪದಗಳಲ್ಲಿ ಮುರಿದ ರೆಕ್ಕೆಯ ಹಾರಲಾಗದ ಹಕ್ಕಿಯಂತಿರುವ ಹೈಕುಗಳಲ್ಲಿ ಬ್ರಹ್ಮಾಂಡ ಹಾಗಿರಲಿ, ಆಕಾಶವನ್ನೂ ಕಾಣಿಸಲು ಕವಿ ಪ್ರಯಾಸ ಪಡಬೇಕಾಗುತ್ತದೆ. ಇದೊಂದು ರೀತಿಯ ಸರ್ಕಸ್ ಎನ್ನಬಹುದು. ಇಲ್ಲಿ ಪ್ರತಿಬಾರಿ ಯಶಸ್ವಿಯಾಗಬೇಕಾದರೆ ನಿರಂತರ ತಿದ್ದುವಿಕೆ ಮತ್ತು ಪೂರ್ವ ತಯಾರಿಯಿಂದ ಮಾತ್ರ ಸಾಧ್ಯ.

ಹಕ್ಕಿ ಉದುರಿಸಿದ
ಬೀಜವೀಗ
ಹೆಮ್ಮರದಿ ಹಣ್ಣು

ಬೀಜವೊಂದರಲ್ಲಿ ಒಂದು ವನವನ್ನೆ ಕಾಣುವಂತಹ ಗ್ರಹಿಕೆ, ದೂರ ದೃಷ್ಟಿ, ದರ್ಶನ, ಸಾರ್ವಕಾಲಿಕ ಯುಕ್ತಿ ಹಾಗೂ ಶಕ್ತಿ ಹೈಕು ಕವಿಗೆ ಇರಬೇಕಾಗುತ್ತದೆ. ಹಾಗಾಗಿಯೇ ಮೂಲ ಜಪಾನಿ ಭಾಷೆಯಲ್ಲಿ ರಚನೆಯಾಗುವ ಹೈಕು ಒಂದಕ್ಕೆ ಒಂದು ಸಮ್ಮೇಳನ ಮಾಡುವಷ್ಟು ಶಕ್ತತೆ, ಬದ್ಧತೆ ಇರುತ್ತದೆ. ಸತ್ಯ ನಾರಾಯಣ ಅವರು ರಚಿಸಿರುವ ಇಲ್ಲಿನ ಹೈಕುಗಳಿಗೆ ಅಂತಹ ಶಕ್ತಿ ಇದೆಯಾ ಎಂದರೆ, ಖಂಡಿತಾ ಹೌದು! ಎನ್ನುತ್ತೇನೆ.

ಖಡ್ಗಕ್ಕಿಂತ ಹರಿತ
ನಿಜ, ಲೇಖನಿಯೂ
ಕೊಲ್ಲುತ್ತದೆ

ನಾನಿಲ್ಲಿ ಸಿಲೆಬಲ್‌ನ ಮಿತಿಯಲ್ಲಿ ಹೈಕುಗಳನ್ನು ರಚಿಸುವವ ರನ್ನು ಕಂಡಿದ್ದೇನೆ. ನಿಯಮಗಳ ಕಟ್ಟಳೆ ಮೀರಿ ಹೈಕುಗಳನ್ನು ಮುರಿದು ಕಟ್ಟುವವರನ್ನೂ ಸಹ ಓದಿದ್ದೇನೆ. ಆದರೆ ಇಲ್ಲಿ ಸತ್ಯನಾರಾಯಣ ಅವರ ಪರಿಯೆ ವಿಭಿನ್ನ. 5-7-5 ಉಚ್ಚಾರಾಂಶಗಳ ನಿರ್ಬಂಧದಲ್ಲಿ ನಲುಗಿ ಉಸಿರುಗಟ್ಟದೆ, ಪದಗಳನ್ನು ಪೋಲುಮಾಡದೆ ಜಿಪುಣತನದಿಂದ ಸರಿಯಾದ ನಿಟ್ಟಿನಲ್ಲಿ ದುಡಿಸಿಕೊಂಡು ಆ ಮೂಲಕ ಪದಭಾವಗಳನ್ನು ಮುಕ್ಕಾಗಿಸದೆ 17 ಸಿಲೆಬಲ್‌ನಲ್ಲಿಯೇ ಹೈಕುಗಳನ್ನು ಆಳ ಮತ್ತು ವಿಶಾಲ ಅರ್ಥಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ.

ರೇಶಿಮೆ ಹುಳದ
ನೂಲಿನಲ್ಲಿ ಆ
ಜೀವ ಬಂಧ ಮುಕ್ತ

ಆದರೆ ಪ್ರಸ್ತುತ ಹೈಕುಗಳ ನಡಿಗೆಯನ್ನು ಅವಲೋಕಿಸಿ, ಅನುಸಂಧಾನ ನಡೆಸಿದ ನಂತರ ಸತ್ಯನಾರಾಯಣ ಅವರು ಅದನ್ನು ಸವಾಲಾಗಿ ಸ್ವೀಕರಿಸದೆ ತುಂಬು ಶ್ರದ್ಧೆಯಿಂದ ನಿಭಾಯಿಸಿದಂತೆ ಮನದಟ್ಟಾಗುತ್ತದೆ.

ಜಗತ್ತಿನ ಯಾವುದೇ ಪ್ರಕಾರದ ಸಾಹಿತ್ಯವನ್ನು ತಮ್ಮದಾಗಿಸಿ ಕೊಳ್ಳಲು ಹೊರಟವರು ಅದರ ಚರಿತ್ರೆ, ಬಳಸಿದ ಭಾಷೆ, ಅದರ ಆಳ, ವಿಸ್ತಾರ, ತೂಕ ಮತ್ತು ಗುಣಲಕ್ಷಣಗಳು, ಅದು ಬೀರುವ ಪ್ರಭಾವ ಇತ್ಯಾದಿ.... ಎಲ್ಲವನ್ನೂ ಅಲ್ಲದಿದ್ದರು ಸಾಧ್ಯವಾದಷ್ಟನ್ನಾ ದರೂ ಅರಿತುಕೊಳ್ಳುವ ಪ್ರಯತ್ನ ಮಾಡುವುದು ಒಳಿತು. ಆ ನಿಟ್ಟಿನಲ್ಲಿ ಸತ್ಯನಾರಾಯಣರವರು ಅಧ್ಯಯನದೊಂದಿಗೆ ತಮ್ಮ ಸಮಕಾಲಿನರಾದ ಹಿರಿಕಿರಿಯರನೇಕರ ಹೈಕುಗಳನ್ನು ಓದಿಕೊಂಡಿ ದ್ದಾರೆ ಎಂಬುದು ಅವರೊಟ್ಟಿಗಿನ ಚರ್ಚೆಯಲ್ಲಿ ಯಾರಿಗಾದರೂ ಮನದಟ್ಟಾಗಬಹುದು.

ಗುಡಿಸಿದಷ್ಟೂ
ಸೇರುತ್ತಲೇ
ಇದೆ ಈ ಮನದಕಸ

ಹೈಕು ಅಥವಾ ಹಾಯ್ಕು ಎಂದು ಕರೆಯಲ್ಪಡುವಈವೊಂದು ಕಾವ್ಯ ಪ್ರಕಾರ ಮೂಲತಃ ಜಪಾನ್ ದೇಶದ ವೈಶಿಷ್ಟ್ಯ ಪೂರ್ಣ ಸಂವೇದನೆಯನ್ನೊಳಗೊಂಡ ಸಂಕ್ಷಿಪ್ತ ಕಾವ್ಯಭಿವ್ಯಕ್ತಿಯಾಗಿ ಇಂದು ಜಗತ್ತಿನಾದ್ಯಂತ ಗುರುತಿಸಿಕೊಂಡಿದೆ.

ಹೈಕುಗಳನ್ನು ಮೊದಲು ರಚಿಸಿದ್ದು 'ಮಾಸ್ಟುವೊ ಬಾಶೋ' (1644-1694) ಎಂದು ಹೇಳಲಾಗುತ್ತದೆ. ಜೊತೆಗೆ ಜಗತ್ತಿನ ಸರ್ವಶ್ರೇಷ್ಠ ಹೈಕು ಕವಿ ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಬುಸನ್, ಇಸ್ಸಾ ಮತ್ತು ಶಿಕೆ ಈ ನಾಲ್ವರನ್ನು ಹೈಕು ಕಾವ್ಯವನ್ನು ಸರಳತೆಯೊಂದಿಗೆ ಆಳ ಅರ್ಥಗಳೊಂದಿಗೆ ಕಟ್ಟಿದ ಆಧಾರ ಸ್ತಂಭಗಳೆಂದು ಕರೆಯಲಾಗುತ್ತದೆ.

ಬಾಶೋ ಒಬ್ಬ ಬೌದ್ಧಧರ್ಮದ ಜ್ಞಾನಶಾಖೆಯಾದ ಝನ್ ಗುರುವಾಗಿದ್ದು, ಝನ್ ತತ್ವ-ಸಿದ್ಧಾಂತಗಳ ಸ್ಪರ್ಶ ಮತ್ತು ಹೊಳಹುಗಳನ್ನು ಜಪಾನಿ ಹೈಕುಗಳಲ್ಲಿ ಸರ್ವೆ ಸಾಮಾನ್ಯ. ಇದರ ಜೊತೆಗೆ ಪ್ರಧಾನವಾಗಿ ಪ್ರಾಕೃತಿಕವಾದ ಋತುಗಳು ಮತ್ತು ಕಾಲ ವಿಂಗಡಣೆಯ ಆಧಾರದ ಮೇಲೆ ಅಮೂರ್ತ ವಿಷಯಗಳ ಉದಾಹಣೆಗಳೊಂದಿಗೆ ಮನುಷ್ಯ ಬದುಕನ್ನು ಸಾರ್ಥಕಗೊಳಿಸುವ ಪ್ರಯತ್ನವಾಗಿದೆ ಎನ್ನಬಹುದು.

ಎದೆಗೆ ಬರೆದ
ರಂಗವಲ್ಲಿಯ
ಗಾಳಿ ಅಳಿಸದು

ಜೆನ್ ಹೀಗೆ ಹೇಳುತ್ತದೆ: 'ತನಗೆ ಎಲ್ಲಾ ಗೊತ್ತು' ಎಂದು ಯಾರಾದರೂ ಹೇಳಿದರೆ, 'ಅವನಿಗೆ ಏನೂ ಗೊತ್ತಿಲ್ಲ' ಎಂದರ್ಥವೆಂದು. ಆ ನಿಟ್ಟಿನಲ್ಲಿ ಹೈಕು ರಚನೆಗೆ ಜ್ಞಾನಕ್ಕಿಂತಲೂ ಮಿಗಿಲಾಗಿ ಬೇಕಾದುದು ದಟ್ಟವಾದ ಜೀವನ ಅನುಭವ, ಮಗುವಿನ ಮುಗ್ಧತೆ, ಪ್ರಕೃತಿಯ ಬಗೆಗಿನ ಕುತೂಹಲ- ಒಡನಾಟ-ಪ್ರೀತಿ- ಕಾಳಜಿ, ಉದಾತ್ತ ಚಿಂತನೆ, ತನ್ನನ್ನು ತಾನು ಕಂಡುಕೊಳ್ಳುವ ಪ್ರಯತ್ನವಷ್ಟೇ. ಈ ಎಲ್ಲಾ ಅಂಶಗಳನ್ನು ಸತ್ಯನಾರಾಯಣ ಅವರ ಸಂಪರ್ಕದಲ್ಲಿರುವ, ಆಪ್ತ ವಲಯದಲ್ಲಿದ್ದವರು ಬಹುಶಃ ಗಮನಿಸಿರಬಹುದು.

ಎಲ್ಲವೂ
ವಿಸ್ಮಯವೆ
ಈ ಮನಸ್ಸಿಗೆ ಪ್ರಕೃತಿಗಲ್ಲ!

ಹಾಯ್ಕು ಜಗತ್ತಿನಲ್ಲಿಯೇ ಒಂದು ವಿಶಿಷ್ಟವಾದ ಕಾವ್ಯ ಪ್ರಕಾರವಾಗಿ ಗುರುತಿಸಿಕೊಂಡಿದೆ. ಅದಕ್ಕೆ ಕಾರಣವೆಂದರೆ ಒಂದು ನಿರ್ದಿಷ್ಟ ಪಾರಂಪರಿಕವಾದ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ರೂಪುಗೊಂಡು, ತತ್ವ ಚಿಂತನೆಯೊಂದಿಗೆ, ದಾರ್ಶನಿಕ ಹೊಳಹು ಗಳನ್ನು ಪ್ರಾಕೃತಿಕ ಸಾಮರಸ್ಯವನ್ನು ಒಳಗೊಂಡಿರುವುದೆ ಹಾಯ್ಕುಗಳ ಪ್ರಸಿದ್ಧಿಗೆ ಕಾರಣವಾಗಿದೆ ಎನ್ನಬಹುದು.

ನಿಲಯದಿಂದ
ಬಯಲಿಗೆ ಸಾಗಿ
ಮಾಗಲಿ ಈ ಜೀವ

ಇದೊಂದು ಬಗೆಯಲ್ಲಿ ಅಂಗೈಯಲ್ಲಿ ಬ್ರಹ್ಮಾಂಡವನ್ನು ತೋರಿಸಿದಂತೆ. ಸಣ್ಣ ಸಸಿಯೊಂದು ಭೂಮಿಯ ಎದೆಯಾಳದಿ ಹುದುಗಿಸಿಕೊಂಡ ಬೇರುಗಳ ವೈಭವದಂತೆ ಎಂದು ಅರ್ಥೈಸಬಹುದು. ಹಾಯ್ಕುಗಳನ್ನು ಮಹಾಕಾವ್ಯಕ್ಕಿಂತಲೂ ಕಡಿಮೆಯೇನಲ್ಲ ಎಂದು ಅಭಿಪ್ರಾಯಿಸಲಾಗಿದೆ. ಕಾವ್ಯವೆಂದರೇನೆ ಸಂಕ್ಷಿಪ್ತ. ಒಬ್ಬ ಕಾದಂಬರಿಕಾರ ಇಡೀ ಒಂದು ಕಾದಂಬರಿಯಲ್ಲಿ ಹೇಳಲು ಹೊರಡುವ ವಿಚಾರವನ್ನು ಕವಿಯೊಬ್ಬ ಕೆಲವೇ ಸಾಲುಗಳಲ್ಲಿ ತನ್ನ ಸೃಜನಶೀಲತೆಯಿಂದ ಹಿದಿದಿಡಬಲ್ಲ. ಹಾಗಾಗಿಯೇ ಜಪಾನಿನಲ್ಲಿ ಕೇವಲ ಒಂದು ಹಾಯ್ಕುವಿಗೆ ಒಂದು ಸಮ್ಮೇಳನವನ್ನೇ ಆಯೋಜಿಸಿ, ಅದರ ಆಳ, ವಿಸ್ತಾರ, ಪೂರ್ವಾಪರಗಳನ್ನು ಚರ್ಚಿಸುವ, ವಿಶ್ಲೇಷಿಸುವ, ವಿಮರ್ಶಿಸುವ, ವಿವರಿಸುವ ವಿವಿಧ ದೃಷ್ಟಿಕೋನ ಮತ್ತು ವಿಭಿನ್ನ ನೆಲೆಗಳ ಆಧಾರದ ಮೇಲೆ ಹೊಸ ಕಾಣೆ ಮತ್ತು ಹೊಳಹುಗಳನ್ನು ಕಂಡುಕೊಳ್ಳುವ, ಲೋಕದ ಕಣ್ಣುಗಳಿಗೂ ಕಾಣಿಸುವ ಕ್ರಮ ಜಾರಿಯಲ್ಲಿದೆ. ಅಂತಹ ಗುಣ ಸತ್ಯನಾರಾಯಣ ಅವರ ಹೈಕುಗಳಲ್ಲಿ ಅಂತರ್ಗತವಾಗಿದೆ ಯಾದರೂ, ಮೂರು ಸಾಲಿನ ಕಿರುಗವಿತೆಯೊಂದನ್ನು ಸಿಲಬಲ್ಲೆ ಒಳಪಡಿಸಿದ ಮಾತ್ರಕ್ಕೆ ಎಲ್ಲಾ ರಚನೆಗಳು ಹೈಕು ಆಗಲಾರವು ಹಾಗೂ ಹೈಕುವಿನ ಲಿಖಿತ ನಿಯಮಗಳನ್ನು ಅನುಸರಿಸಿದರಷ್ಟೆ ಸಾಲದು, ಅಲಿಖಿತ ನಿಯಮಗಳ ಕುರಿತು ಸಹ ಅರಿತು ಕೊಳ್ಳಬೇಕಾದ ಜವಾಬ್ದಾರಿ ಇದೆ.

ಒಂದುವೇಳೆ ಜೆನ್, ತಾವೋ ಮತ್ತು ಸೂಫಿಸಂಗಳನ್ನು ಸತ್ಯನಾರಾಯಣ ಅವರು ಅಧ್ಯಯನ ಮಾಡಿದ್ದಲ್ಲಿ ಹೈಕುವಿನ ರಚನೆಗಳಲ್ಲಿ ಉನ್ನತ ಮಟ್ಟದ ಬದಲಾವಣೆಗಳನ್ನು ತರಲು ಖಂಡಿತ ಸಾಧ್ಯವಿದೆ ಎಂಬ ಕಿವಿಮಾತಿನೊಂದಿಗೆ.... ಇನ್ನು ಮುಂದೆ ಡಾ. ಎಚ್. ಎಸ್. ಸತ್ಯನಾರಾಯಣ ಅವರು ಒಬ್ಬ ಉತ್ತಮ ಕವಿಯಾಗಿಯೂ ಗುರುತಿಸಿಕೊಳ್ಳುವುದರಲ್ಲಿ ಸಂದೇಹ ವಿಲ್ಲ.

-ಜಬೀವುಲ್ಲಾ ಎಂ. ಅಸದ್
ಮೊಳಕಾಲ್ಕೂರು

MORE FEATURES

ಮಂಗಳ ಅವರ ಕವಿತೆಗಳು ತಿಳಿನೀರ ಕೊಳದಂತಿವೆ: ಚಿಂತಾಮಣಿ ಕೊಡ್ಲೆಕೆರೆ

03-05-2024 ಬೆಂಗಳೂರು

“ಭಾವಗಳ ಬಂಧದಲಿ” ಕವಿತೆ ನಿಜಕ್ಕೂ ತುಂಬ ಬಿಗಿಯಾಗಿದೆ. ತನ್ನ ಭಾವಮಯತೆಯನ್ನು ಶಕ್ತಿಯಾಗಿಸಿಕೊಂಡ ಹೆಣ್ಣಿನ ...

ದ್ವಾಪರ ಯುಗಕ್ಕೆ ಮುಗಿಯಲಿಲ್ಲ ಮಹಾಭಾರತ, ಇಂದಿಗೂ ಪ್ರಸ್ತುತ ಶಕುನಿಯ ಸಂಚು

03-05-2024 ಬೆಂಗಳೂರು

'400 ಪುಟಗಳ ದೊಡ್ಡ ಕಾದಂಬರಿಯನ್ನು ಓದಿಸುವ ಶೈಲಿಯಲ್ಲಿ ಬರೆಯುವಲ್ಲಿ ಜೋಗಿ ಸಂಪೂರ್ಣ ಯಶಸ್ವಿ ಅಗಿದ್ದಾರೆ. ಮಹಾಭಾರತ...

ತೇಜಸ್ವಿಯವರು ತಮ್ಮ ತಂದೆಯ ನೆನಪುಗಳಲ್ಲಿ ನೇಯ್ದ ಅದ್ಭುತ ಕೃತಿ 'ಅಣ್ಣನ ನೆನಪು'

03-05-2024 ಬೆಂಗಳೂರು

"ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಂತೆ ತೇಜಸ್ವಿಯವರು ಬರೆಯದ ವಿಷಯವಿಲ್ಲ ಎನ್ನಬಹುದು. ಕಥೆ, ಸಾಹಿತ್ಯ ವಿಜ್ಞಾನ ...