ಕೇಳ್ವಿಯೆಂಬ ಕೂರಲಗು ಮತ್ತು ಪ್ರಭುತ್ವ

Date: 15-09-2020

Location: ಬೆಂಗಳೂರು


ಪ್ರಶ್ನೆಗಳು ಆರೋಗ್ಯಕರ ಪ್ರಜಾಪ್ರಭುತ್ವದ ಜೀವ ಎನ್ನುವ ಲೇಖಕ-ವಿಮರ್ಶಕ ರಂಗನಾಥ ಕಂಟನಕುಂಟೆ ಅವರು ’ಕೇಳ್ವಿ’ಗಳಿಲ್ಲದೇ ಕಟ್ಟುವುದು-ಬೆಳೆಸುವುದು- ಬೆಳೆಯುವುದು ಸಾಧ್ಯವಿಲ್ಲ ಎನ್ನುತ್ತಾರೆ. ’ಮಾತಿನ ಮರೆ’ ಸರಣಿಯಲ್ಲಿ ಪ್ರಶ್ನೆಗಳ ಮಹತ್ವವನ್ನ ವಿವರಿಸಿ-ವಿಶ್ಲೇಷಿಸಿದ್ದಾರೆ.

 

ಪ್ರಶ್ನೆ ಯಾವುದೇ ಭಾಶೆಯ ಮೂಲ ಘಟಕ. ಪ್ರಶ್ನೆ-ಪ್ರಶ್ನಾರ್ಥಕ ವಾಕ್ಯಗಳಿಲ್ಲದೆ ಯಾವುದೇ ನುಡಿಗಳ ನುಡಿಕಾರ್‍ಯವೇ ನಡೆಯುವುದಿಲ್ಲ. ನುಡಿಯ ಬಹುಮುಖ್ಯ ಕೆಲಸವೇ ಪ್ರಶ್ನೆ ಕೇಳುವುದು; ಕೇಳಿದ ಪ್ರಶ್ನೆಗೆ ಉತ್ತರಿಸುವುದು. ಅಂದರೆ ಮಾತುಕತೆ ಸಂವಾದಗಳ ಮೂಲಕ ವಿಶಯವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದಾಗಿರುತ್ತದೆ. ಪ್ರಶ್ನೆ ಕೇಳದೆ ಯಾವುದೇ ಸಂಗತಿಯನ್ನು ತಿಳಿಯಲು ತಿಳಿಸಲು ಸಾಧ್ಯವಿಲ್ಲ. ನೀನು ಎಲ್ಲಿಗೆ ಹೋಗುವೆ? ನಾನು ಬರಲೆ? ನಿನಗೆ ಕಣ್ಣು ಕಾಣಿಸುವುದಿಲ್ಲವೆ? ನಿನಗೆ ತಲೆ ಕೆಟ್ಟಿದೆಯೇ? ಎಂಬಂತಹ ಪ್ರಶ್ನಾರ್ಥಕ ವಾಕ್ಯಗಳಿಂದ ಮೊದಲುಗೊಂಡು, ಯಾವ ಶಾಸ್ತ್ರ ಏನು ಹೇಳಿದರೇನು? ಎದೆಯ ದನಿಗೂ ಮಿಗಿಲಾದ ಶಾಸ್ತ್ರವಿಹುದೇನು? ಎಂಬ ಕುವೆಂಪು ಅವರ ಕವಿತೆಯ ಪ್ರಶ್ನೆ, ನಾ ದೇವನಲ್ಲದೆ ನೀ ದೇವನೆ? ಎಂಬ ಅಲ್ಲಮನ ವಚನದ ಪ್ರಶ್ನೆ, ಆತ್ಮ ಯಾವ ಕುಲ ಜೀವ ಯಾವ ಕುಲ? ಎಂಬ ಕನಕನ ಕೀರ್‍ತನೆಯ ಜಿಜ್ಞಾಸು ಪ್ರಶ್ನೆಗಳವರೆಗೆ ಅಸಂಖ್ಯ ಪ್ರಶ್ನೆಗಳನ್ನು ನಿತ್ಯದ ಜೀವನದಲ್ಲಿ ಕೇಳಲಾಗುತ್ತದೆ. ನೀನು ನನ್ನನ್ನು ಪ್ರೀತಿಸುವೆಯಾ? ಎಂಬ ಒಲವಿನ ನುಡಿಯವರೆಗೆ ಪ್ರಶ್ನೆಗಳದೇ ಕಾರುಬಾರು. ಇಂತಹ ಅಸಂಖ್ಯ ಪ್ರಶ್ನೆಗಳಿಂದಲೇ ಕನ್ನಡದ ಭಾರತದ ಮತ್ತು ವಿಶ್ವದ ಜ್ಞಾನ ಪರಂಪರೆ ಸಶಕ್ತವಾಗಿ ಬೆಳೆದಿರುವುದು. ಇಂತಹ ಪ್ರಶ್ನೆಗಳೇ ಇಲ್ಲದಿದ್ದರೆ ಯಾವುದೇ ಕ್ಶೇತ್ರದ ಜ್ಞಾನದ ಕ್ಶಿತಿಜ ವಿಸ್ತಾರವಾಗುವುದೇ ಇಲ್ಲ. ಲೋಕದ ನಿತ್ಯ ಮತ್ತು ಅನಿತ್ಯದ ಕ್ರಿಯೆಗಳ ರಹಸ್ಯ ಅಡಗಿರುವುದೇ ಪ್ರಶ್ನೆಗಳಲ್ಲಿ. ಪ್ರಶ್ನೆಗಳಿಲ್ಲದೆ ಯಾವುದೇ ವಿಚಾರವೂ ಅನಾವರಣವಾಗದು. ಮಾನವರನ್ನು ಹೊರತುಪಡಿಸಿ ಉಳಿದ ಯಾವ ಪ್ರಾಣಿ ಪಕ್ಶಿಗಳ ಸಮೂಹಗಳಲ್ಲಿ ಇಂತಹ ಪ್ರಶ್ನೆಗಳಿಗೆ ಅವಕಾಶವೇ ಇಲ್ಲ. ಅಂದರೆ ಇತರೆ ಜೀವಜಗತ್ತಿನಲ್ಲಿ ಭಾವನೆಗಳ, ವಿಚಾರಗಳ ಮತ್ತು ಜ್ಞಾನದ ಪರಸ್ಪರ ವಿನಿಮಯವೇ ಸಾಧ್ಯವಿಲ್ಲ ಎಂದರ್ಥ.

ಇನ್ನು ಲೋಕಕ್ಕೆ ಹೊಸದಾಗಿ ತೆರೆದುಕೊಳ್ಳುವ ಚಿಕ್ಕ ಮಕ್ಕಳಂತೂ ಅಸಂಖ್ಯ ಕೇಳ್ವಿಗಳನ್ನು ಕೇಳುತ್ತಲೇ ಇರುತ್ತಾರೆ. ಕೆಲವೊಮ್ಮೆ ದೊಡ್ಡವರಿಗೆ ರೇಜಿಗೆ ಹುಟ್ಟಿಸುವಶ್ಟು ಇಲ್ಲವೇ ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದಶ್ಟು ಸಂಕೀರ್‍ಣ ಪ್ರಶ್ನೆಗಳನ್ನು ಕೊನೆಯಿಲ್ಲದಂತೆ ಕೇಳುತ್ತಲೇ ಇರುತ್ತಾರೆ. ಹೀಗೆ ಕೇಳುವುದರ ಉದ್ದೇಶವೇ ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದು. ಮಕ್ಕಳು ಹಾಗೆ ಪ್ರಶ್ನೆ ಮಾಡದೆ ಏನನ್ನೂ ತಿಳಿಯರು. ಅವರ ಕಲಿಕೆಯ ಮೂಲಭೂತ ಚಹರೆಯೇ ಪ್ರಶ್ನೆ ಕೇಳುವುದು. ಹಾಗಾಗಿ ದೊಡ್ಡವರು, ಪೋಶಕರು ಇಲ್ಲವೇ ಶಿಕ್ಶಕರು ಅಪಾರ ಸಹನೆಯಿಂದ ಮಕ್ಕಳ ಪ್ರಶ್ನೆಗಳನ್ನು ಆಲಿಸಬೇಕಿರುತ್ತದೆ. ಅವರ ಜ್ಞಾನದ ಕುತೂಹಲವನ್ನು ತಣಿಸಬೇಕಿರುತ್ತದೆ. ಕೊಂಚ ತಾಳ್ಮೆ ಕಳೆದುಕೊಂಡರೂ ಕೂಡ ಮಕ್ಕಳು ಕಲಿಕೆಯಿಂದ ವಂಚಿತರಾಗುತ್ತಾರೆ. ಆದರೆ ಮನೆಗಳಲ್ಲಿ ಶಾಲೆಗಳಲ್ಲಿ ಅಂತಹ ಮುಕ್ತ ಪರಿಸರ ಇರುವುದು ಕಡಿಮೆ. ಇದರಂತೆಯೇ ಪ್ರಜಾಪ್ರಭುತ್ವದಲ್ಲಿ ಜನರು ಕೇಳುವ ಪ್ರಶ್ನೆಗಳನ್ನು ಆಳುವವರು ಬಹಳ ಸಹನೆಯಿಂದ ಕೇಳಿಸಿಕೊಂಡು ಅದಕ್ಕೆ ಪ್ರತಿಕ್ರಿಯಿಸಬೇಕಾಗಿರುತ್ತದೆ. ಜನರ ಪ್ರಶ್ನೆಗಳಿಗೆ ಉತ್ತರಿಸಬೇಕಿರುವುದು ಆಳುವವರ ಕರ್‍ತವ್ಯ. ಪ್ರಶ್ನೆಗಳಿಗೆ ಹೆದರಿ ಪ್ರಶ್ನೆ ಕೇಳುವವರನ್ನು ಹತ್ತಿಕ್ಕಿದರೆ ಪ್ರಜಾಪ್ರಭುತ್ವದ ಕನಸು ನುಚ್ಚುನೂರಾಗಿ ನಿರಂಕುಶಾಧಿಕಾರ ಬೆಳೆಯುತ್ತದೆ.

ಆದರೆ ಮಕ್ಕಳು ಕುತೂಹಲದಿಂದ ಕೇಳುವ ಪ್ರಶ್ನೆಗಳನ್ನು ಮನೆ, ಶಾಲೆ ಇಲ್ಲವೇ ಸಮಾಜ ನಿಧಾನವಾಗಿ ಮೊಟಕುಗೊಳಿಸುವ ಕೆಲಸವನ್ನು ಮಾಡುತ್ತದೆ. ಮಕ್ಕಳು ಪ್ರಶ್ನೆ ಕೇಳುವುದನ್ನು ಮೊಟಕುಗೊಳಿಸಿದಂತೆಲ್ಲಾ ಅವರ ಕಲಿಕೆಯ ಆಸಕ್ತಿ ಕುಂದುತ್ತಾ ಹೋಗುತ್ತದೆ. ಅವರು ಪ್ರಶ್ನೆ ಕೇಳದೇ ಇದ್ದರೆ ಅವರ ಜ್ಞಾನದ ಆಸಕ್ತಿ ಕುಂದುತ್ತಾ ಹೋಗುತ್ತದೆ. ಇಂದು ಶಾಲೆಗಳಲ್ಲಿ ಶೇ. ೯೯ರಶ್ಟು ಮಕ್ಕಳು ಪ್ರಶ್ನೆಗಳನ್ನೇ ಕೇಳುವುದಿಲ್ಲ. ಪ್ರಶ್ನೆ ಕೇಳುವ ಆಸಕ್ತಿ ಉಳಿದಶ್ಟೂ ಮಕ್ಕಳಲ್ಲಿ ಕಲಿಯುವ ಆಸಕ್ತಿ ಉಳಿದಿರುತ್ತದೆ. ಯಾವುದೇ ಜ್ಞಾನದಾಹಿಗಳು ಕೂಡ ಇಂತಹ ಅಸಂಖ್ಯ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಹಾಗೆ ಪ್ರಶ್ನೆಗಳನ್ನು ಕೇಳಿಕೊಳ್ಳದೆ ಯಾವುದೇ ವ್ಯಕ್ತಿ ಹೊಸದಾಗಿ ಏನನ್ನೂ ಕಲಿಯುವುದಿಲ್ಲ. ಕನ್ನಡದ ಜ್ಞಾನ ಪರಂಪರೆ ಪ್ರಶ್ನಿಸುವುದರಿಂದಲೇ ಬೆಳೆದಿದೆ. ಧಾರ್ಮಿಕ ಮೌಢ್ಯ ಬೆಳೆದಿರುವುದೇ ಪ್ರಶ್ನೆ ಮಾಡದೆ ಕುರುಡು ಆಚರಣೆಗಳನ್ನು ಆಚರಿಸುವುದರಿಂದ ಎಂಬುದು ತಿಳಿದ ಸಂಗತಿ. ತತ್ವಶಾಸ್ತ್ರ ಬೆಳೆಯುವುದೇ ತಾರ್ಕಿಕ ಚಿಂತನೆ ಮತ್ತು ಪ್ರಶ್ನೆಗಳನ್ನು ಕೇಳಿಕೊಳ್ಳುವುದರಿಂದ. ಸಾಕ್ರೆಟಿಸನ ಬಲಿದಾನ ಪ್ರಶ್ನೆಗಳಿಗಾಗಿಯೇ ನಡೆದದ್ದು ನಮಗೆಲ್ಲಾ ಗೊತ್ತೇ ಇದೆ. ಬಸವಣ್ಣ ಅಲ್ಲಮರು ಇಂದೂ ಕೂಡ ಜೀವಂತವಾಗಿರುವುದು ಅವರು ಸೃಶ್ಟಿಸಿದ ಪ್ರಶ್ನೆಗಳಿಂದ. ಈ ನಡುವೆ ಧರ್ಮ ಮತ್ತು ಪ್ರಭುತ್ವಗಳ ದುಶ್ಟತನ ಪ್ರಶ್ನಿಸಿದ ಅದೆಶ್ಟೋ ಜನರ ಬಲಿದಾನವಾಗಿದೆ. ಇಂದಿಗೂ ಅದು ಮುಂದುವರಿದಿದೆ. ಹೀಗೆ ಅನೇಕ ಮೂಲಭೂತ ಮತ್ತು ವ್ಯಾವಹಾರಿಕ ಪ್ರಶ್ನೆಗಳನ್ನು ಕೇಳುತ್ತಲೇ ಲೋಕ ತನ್ನ ಜ್ಞಾನದ ಹಸಿವನ್ನು ತಣಿಸಿಕೊಳ್ಳುತ್ತಿರುತ್ತದೆ. ಅದಕ್ಕಾಗಿ ಬಲಿದಾನವನ್ನೂ ನೀಡುತ್ತಿರುತ್ತದೆ. ಬಲಿದಾನದ ನೆತ್ತರ ಸೋಪಾನಗಳ ಮೇಲೆಯೇ ಜ್ಞಾನದ ಮರ ಚಿಗುರುತ್ತಿರುತ್ತದೆ. ಅಂತಹ ಮರಗಳಿಂದ ಹೊರಹೊಮ್ಮಿದ ಹೂವು ಹಣ್ಣು ಬೀಜಗಳೇ ಇಂದಿಗೂ ಫಲ ನೀಡುತ್ತಿರುವುದು. ಹಾಗಾಗಿ ಜ್ಞಾನವೆಂದರೆ ಅದು ಕೇವಲ ಮಾಹಿತಿಯಲ್ಲ. ಅದು ನೆನಪಿಟ್ಟುಕೊಳ್ಳುವುದಕ್ಕೆ ಸಂಬಂಧಿಸಿದ್ದಲ್ಲ. ಅದು ಪ್ರಶ್ನಿಸುವುದರ ಮೂಲಕ ಹೊಸ ತಿಳಿವನ್ನು ಪಡೆಯುವ ಆತ್ಯಂತಿಕ ಸಾಧನವೇ ಪ್ರಶ್ನೆಗಳು. ಇವು ಖಡ್ಗಕ್ಕಿಂತ ಹೆಚ್ಚು ಹರಿತವಾದವು ಮತ್ತು ಶಾಶ್ವತವಾದವು. ಪ್ರಶ್ನೆ-ಉತ್ತರ-ಪ್ರಶ್ನೆಗಳ ಸರಣಿಯಲ್ಲಿ ಅವು ಮುಂದುವರಿಯುತ್ತವೆ.

ಇಲ್ಲಿ ಪ್ರಶ್ನೆಗಳನ್ನು ಎರಡು ಬಗೆಯಲ್ಲಿ ಗುರುತಿಸಬಹುದು. ಒಂದು. ಲೋಕದ ದೈನಂದಿನ ಬದುಕಿಗೆ ಸಂಬಂಧಿಸಿದ ವ್ಯಾವಹಾರಿಕ ಪ್ರಶ್ನೆಗಳಿವೆ. ಇವು ನಿತ್ಯ ಅಸಂಖ್ಯ ರೂಪದಲ್ಲಿ ಉತ್ಪಾದನೆಗೊಳ್ಳುತ್ತಲೇ ಇರುತ್ತವೆ. ಇವುಗಳನ್ನು ಯಾರೂ ತಡೆಯಲಾಗುವುದಿಲ್ಲ. ಲೋಕದಲ್ಲಿ ಭಾಶೆಗಳಿಲ್ಲದ ದಿನ ಈ ಪ್ರಶ್ನೆಗಳೂ ಇರುವುದಿಲ್ಲ. ಎರಡು. ಆಳುವ ವ್ಯವಸ್ಥೆಯ ಹೆಜಮಾನಿಕೆಯನ್ನು ಪ್ರಶ್ನಿಸುವ ತಾತ್ವಿಕ ಪ್ರಶ್ನೆಗಳು. ಗಂಡಿನ ದೌರ್ಜನ್ಯವನ್ನು ಪ್ರಶ್ನಿಸುವ ಹೆಣ್ಣಿನ ಪ್ರಶ್ನೆಗಳು. ಇವಕ್ಕೆ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಆಯಾಮಗಳಿರುತ್ತವೆ. ಇವು ಸ್ಥಾಪಿತ ವ್ಯವಸ್ಥೆಯ ಎಲ್ಲ ಬಗೆಯ ಮೌಲ್ಯಗಳನ್ನು ಪ್ರಶ್ನಿಸುತ್ತಲೇ ಇರುತ್ತವೆ. ಇವುಗಳೇ ಪ್ರಾಣಘಾತಕವಾದ ನೈಜ ಪ್ರಶ್ನೆಗಳು. ಇವೇ ಆಳುವವರನ್ನು, ಪ್ರಬಲರನ್ನು, ಬಲಿಶ್ಟರನ್ನು ನಿರಂತರವಾಗಿ ಇರಿವ ಕೂಲಗಿನ ಪ್ರಶ್ನೆಗಳು. ಉದಾಹರಣೆಗೆ, ಮಕ್ಕಳು ತಂದೆತಾಯಿಗಳ ಕೇಡಿನ ವರ್‍ತನೆಗಳನ್ನು ಪ್ರಶ್ನಿಸಿದರೆ ಮಕ್ಕಳು ಅಹಂಕಾರಿಗಳಂತೆ ಕಾಣಿಸುತ್ತಾರೆ. ಶಿಕ್ಶಕರ ತಪ್ಪುಗಳನ್ನು ಶಿಶ್ಯರು ಪ್ರಶ್ನಿಸಿದರೆ ಆ ಶಿಶ್ಯರು ಉದ್ದಟರಂತೆ ಕಾಣಿಸುತ್ತಾರೆ. ಹಾಗೆಯೇ ಹೆಂಡತಿ ಗಂಡನ ಗರ್‍ವವನ್ನು ಅನೈತಿಕ ವರ್‍ತನೆಗಳನ್ನು ಪ್ರಶ್ನಿಸಿದರೆ ಅವಳು ಗಂಡುವಿರೋಧಿಯಂತೆ ಕಾಣಿಸುತ್ತಾಳೆ. ಪುರೋಹಿತಶಾಹಿಗಳ ಮೌಢ್ಯವನ್ನು ಜ್ಞಾನಿಗಳು ಪ್ರಶ್ನಿಸಿದರೆ ಅವರು ದೈವದ್ರೋಹಿಯಂತೆ ಕಾಣುತ್ತಾರೆ. ಹಾಗೆಯೇ ಆಳುವ ದೊರೆಗಳ ಅನ್ಯಾಯದ ವರ್‍ತನೆಗಳನ್ನು ಪ್ರಶ್ನಿಸಿದರೆ ರಾಜದ್ರೋಹಿ ಮತ್ತು ದೇಶದ್ರೋಹಿಯಂತೆ ಕಾಣುತ್ತಾರೆ.

ಇದು ಈಚಿನ ದಶಕಗಳಲ್ಲಿ ಮತ್ತಶ್ಟು ಅತಿರೇಕಕ್ಕೆ ತಲುಪಿ ಪ್ರಶ್ನೆ ಮಾಡುವವರನ್ನು ಸೆರೆಮನೆಗಳಲ್ಲಿ ಕೊಳೆಸುವ ಹಂತಕ್ಕೆ ಆಳುವ ವ್ಯವಸ್ಥೆ ಬಂದುಮುಟ್ಟಿದೆ. ಇನ್ನೂ ಮುಂದುವರೆದು ಪ್ರಶ್ನೆ ಮಾಡುವವರನ್ನು ಕೊಂದುಹಾಕುವ ಮಟ್ಟಕ್ಕೆ ತಲುಪಿದೆ. ಜನ ಸಾಮೂಹಿಕವಾಗಿ ಪ್ರಶ್ನೆ ಮಾಡುತ್ತ ಬೀದಿಗಳಿದರೆ ಅವರ ಮೇಲೆ ಗುಂಡುಹಾರಿಸಿ ಕೊಲ್ಲಲಾಗುತ್ತದೆ. ಅಂದರೆ ಪ್ರಶ್ನೆ ಎನ್ನುವುದು ಇಲ್ಲಿ ಕೇಳಿ ತಿಳಿಯುವ ಸಾಧನ ಮಾತ್ರವಾಗಿರದೆ ಆಳುವ ವ್ಯವಸ್ಥೆಯ ಅನ್ಯಾಯಗಳ ಗುಡ್ಡವನ್ನು ಕೆದಕಿ ಸತ್ಯವನ್ನು ಬಹಿರಂಗಗೊಳಿಸುವ ಗುದ್ದಲಿಗಳಾಗಿವೆ. ಇಂತಹ ಸತ್ಯಾನ್ವೇಶಣೆಯ ಮಾರ್‍ಗಿಯಾದ ಪ್ರಶ್ನೆ ಮಾಡುವ ಕೆಲಸವನ್ನೇ ಹತ್ತಿಕ್ಕುವ ಪ್ರಯತ್ನವು ಸತ್ಯವನ್ನು ಹತ್ತಿಕ್ಕುವ ಪ್ರಯತ್ನವೇ ಆಗಿರುತ್ತದೆ. ಅಂದರೆ ಆಳುವ ವ್ಯವಸ್ಥೆ ಸದಾ ಅನ್ಯಾಯದ ರಾಜಪಥದಲ್ಲಿಯೇ ಸಾಗುತ್ತ ತನ್ನನ್ನು ಪ್ರಶ್ನಿಸುವ ಜನರನ್ನು ಹತ್ತಿಕ್ಕಿಯೇ ಮುಂದೆ ಸಾಗುತ್ತದೆ. ಅದರ ನಗ್ನರೂಪವನ್ನು ಇಂದು ದೇಶ ಅನುಭವಿಸುತ್ತದೆ.
ಇಲ್ಲಿನ ದುರಂತವೆಂದರೆ ಪ್ರಶ್ನೆ ಕೇಳುವವರನ್ನು ಹತ್ತಿಕ್ಕಿ ಎಂದಿಗೂ ಆಳುವ ವ್ಯವಸ್ಥೆಯನ್ನು ಪ್ರಶ್ನಿಸದೆ ಅದನ್ನು ಹೊಗಳುತ್ತ ಜೈಕಾರ ಹಾಕುವ ಒಂದು ಜನಾಂಗವನ್ನು ಸೃಶ್ಟಿಸುತ್ತ ಅದರ ಮಾನ್ಯತೆ ಮತ್ತು ಬೆಂಬಲದಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವ ನವೀಕರಿಸಿಕೊಳ್ಳುವ ಪ್ರಯತ್ನ ಮಾಡುತ್ತದೆ. ಅಂದರೆ ತನಗೆ ಬೇಕಾದ ಜನಾಭಿಪ್ರಾಯವನ್ನು ತಾನೆ ಉತ್ಪಾದಿಸಿಕೊಳ್ಳುವ ಕೆಲಸವನ್ನು ಪ್ರಭುತ್ವ ಮಾಡುತ್ತಿದೆ. ಆ ಮೂಲಕ ವಾಸ್ತವವನ್ನು, ಸತ್ಯವನ್ನು ಬಚ್ಚಿಡಲಾಗುತ್ತಿದೆ. ಇದನ್ನು ಇಂದಿನ ದಿನಗಳಲ್ಲಿ ಜನರು ಅರಿಯದೆ ಪ್ರಭುತ್ವದ ಹೆಜ್ಜೆಗಳಲ್ಲಿ ಹೆಜ್ಜೆಗಳನ್ನಿಡುತ್ತಿದ್ದಾರೆ. ಪ್ರಶ್ನೆಗಳನ್ನು ನಿರಂತರವಾಗಿ ಕೇಳುವ ಮೂಲಕ ಆಳುವವರನ್ನು ಸದಾ ಕಟಕಟೆಯಲ್ಲಿ ನಿಲ್ಲಿಸಬೇಕಾಗಿದ್ದ ಮಾಧ್ಯಮಗಳು ಆಳುವವರನ್ನೂ ನಾಚಿಸುವಂತೆ ಬೆತ್ತಲಾಗಿ ವರ್‍ತಿಸುತ್ತಿವೆ. ಅಶ್ಟರ ಮಟ್ಟಿಗೆ ಅವು ಆಳುವವರ ಸೇವೆಯಲ್ಲಿ ತೊಡಗಿವೆ.

ಹೀಗೆ ಪ್ರಶ್ನೆ ಮಾಡದೆ ಸದಾ ಜೈಕಾರ ಹಾಕುವ ಮಂದಿ-ಮಾಧ್ಯಮಗಳು, ಆಳುವವರ ಎಲ್ಲ ಅನ್ಯಾಯಗಳಿಗೆ ಮಾನ್ಯತೆ ನೀಡಿ ಸಮಾಜದಲ್ಲಿ ಕೇಡಿನ ಸಂಗೋಪನೆಯನ್ನು ವ್ಯವಸ್ಥಿತವಾಗಿ ಮಾಡುತ್ತಾರೆ. ಇದು ಯಾವುದೇ ಸಮಾಜ ಇಲ್ಲವೇ ದೇಶ ಜ್ಞಾನ ಮತ್ತು ಸತ್ಯದ ವಿರೋಧಿಯಾಗಿ ಅವಸಾನದ ದಾರಿಯಲ್ಲಿ ಸಾಗುತ್ತಿರುವ ಸೂಚಕವಾಗಿದೆ. ಆದರೆ ಇದನ್ನು ಜ್ಞಾನದ ಹೆಸರಿನಲ್ಲಿಯೇ ನಾಶ ಮಾಡಲಾಗುತ್ತದೆ. ಯಾವುದೇ ವ್ಯಕ್ತಿಯಾಗಲಿ ಇಲ್ಲವೇ ಆಳುವ ವ್ಯವಸ್ಥೆಯಾಗಲೀ ತನ್ನನ್ನು ತಾನು ಪ್ರಶ್ನಿಸಿಕೊಂಡು ಇಲ್ಲವೇ ಬೇರೆಯವರ ಪ್ರಶ್ನೆಗಳ ಬೆಳಕಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ಅದು ಎಂದಿಗೂ ಒಳಿತನ್ನು ಮಾಡುವುದಿಲ್ಲ. ಬದಲಾಗಿ ಅಹಂಕಾರದ ಕೂಪದಲ್ಲಿ ಬಿದ್ದು ತನ್ನ ದುಶ್ಟತನದಿಂದಲೇ ನಾಶವಾಗುತ್ತದೆ. ಅಂದರೆ ಒಂದು ಇಡೀ ವ್ಯವಸ್ಥೆಯೇ ನಾಶವಾಗುತ್ತದೆ. ಇಂದು ಆಳುವ ವ್ಯವಸ್ಥೆಯೇ ಪ್ರಶ್ನೆ ಮಾಡುವ ಹಕ್ಕನ್ನು ಅವಕಾಶವನ್ನು ಕಸಿದುಕೊಳ್ಳುತ್ತಿದೆ. ಇದು ದೇಶ ಅಂಧಕಾರದತ್ತ ಸಾಗಿರುವ ನಿಚ್ಚಳ ವಿದ್ಯಮಾನವಾಗಿರುವುದನ್ನು ಸೂಚಿಸುತ್ತದೆ. ಇತ್ತೀಚೆಗೆ ಸಂಸತ್ತಿನಲ್ಲಿ ಪ್ರಶ್ನೋತ್ತರದ ಅವಧಿಯನ್ನು ರದ್ದುಪಡಿಸಿರುವುದು ವರದಿಯಾಗಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜೀವಂತವಾಗಿಡುವುದೇ ಮುಕ್ತ ಚರ್ಚೆಗಳು. ನಿಶ್ಟುರ ಪ್ರಶ್ನೆಗಳನ್ನು ಎತ್ತುವ ಮೂಲಕ ಜನರಿಗೆ ಸತ್ಯವನ್ನು ತಿಳಿಸುವ ಸಾಮರ್ಥ್ಯ ಪ್ರಶ್ನೆಗಳಿಗೆ ಇರುತ್ತದೆ. ಅದಿಲ್ಲದೆ ಇದ್ದರೆ ಸಂಸತ್ತು ಸಂಸತ್ತಾಗಿರದೆ ಅದೊಂದು ಕೇವಲ ಆಡಳಿತ ಕಚೇರಿಯಾಗಿರುತ್ತದೆ. ದೇಶದ ಗಂಭೀರ ಸಮಸ್ಯೆಗಳ ಬಗೆಗೆ ಪ್ರಶ್ನೆಗಳನ್ನು ಕೇಳುವುದು ಮತ್ತು ಅದರ ಬಗೆಗೆ ಚರ್ಚೆಯೇ ನಡೆಯದಿದ್ದರೆ ಸಂಸತ್ತಿಗೆ ಅರ್ಥವಾದರೂ ಎಲ್ಲಿರುತ್ತದೆ. ಜನರ ಪ್ರತಿನಿಧಿಗಳಿಗೆ ಸಂಸತ್ತಿನಲ್ಲಿ ಚರ್ಚಿಸುವ ಅವಕಾಶವೇ ಇಲ್ಲದಿದ್ದರೆ ಜನಪ್ರತಿನಿಧಿಗಳು ಸಂಸತ್ತಿನಲ್ಲಿ ಏನು ಕೆಲಸ ಮಾಡುತ್ತಾರೆ? ಎಂಬ ಗಂಭೀರ ಪ್ರಶ್ನೆ ಮೂಡುತ್ತದೆ.

ಈಚೆಗೆ ನಮ್ಮ ದೇಶದ ಹಣಕಾಸಿನ ಸಚಿವರು ಇಂದಿನ ಎಲ್ಲ ಆರ್ಥಿಕ ಕಶ್ಟಗಳು ದೇವರ ಸೃಶ್ಟಿ ಎಂದು ಹೇಳಿದ್ದಾರೆ. ಅವರ ಈ ಮಾತನ್ನು ಹಲವು ನೆಲೆಗಳಲ್ಲಿ ಚರ್ಚಿಸಲು ಅವಕಾಶವಿದೆ. ಇದು ಇಡೀ ದೇಶಕ್ಕೆ ತಪ್ಪು ಸಂದೇಶವನ್ನು ರವಾನಿಸುವ ಮಾತೂ ಆಗಿದೆ. ತಮ್ಮ ಜವಾಬ್ದಾರಿಯನ್ನು ಕಣ್ಣಿಗೆ ಕಾಣದ ದೇವರ ಮೇಲೆ ಹೊರಿಸಿ ತಾವು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದಾಗಿರುತ್ತದೆ. ಇಂತಹ ವಿಚಾರಗಳ ಬಗೆಗೆ ಸಂಸತ್ತಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಶಗಳ ಸದಸ್ಯರು ಕೂಡಿ ಚರ್ಚಿಸಬೇಕು. ಹೀಗಿರುವಾಗ ಪ್ರಶ್ನೋತ್ತರಕ್ಕೆ ಸಮಯವೇ ಇಲ್ಲದಿದ್ದರೆ ಸಂಸತ್ತು ಏಕಮುಖಿ ಆದೇಶಗಳನ್ನು ಮಾಡುವ ಕಚೇರಿಯಂತಾಗುತ್ತದೆ. ಇದು ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕುಗೊಳಿಸಿದಂತಾಗುತ್ತದೆ. ಅಂದರೆ ಒಂದು ಪ್ರಜಾತಂತ್ರ ರಾಶ್ಟ್ರದಲ್ಲಿ ಪ್ರಜೆಗಳಿಗೆ ಮತ್ತು ಅವರ ಪ್ರತಿನಿಧಿಗಳಿಗೆ ಮುಕ್ತವಾಗಿ ಚರ್ಚಿಸುವ ಅವಕಾಶವೇ ಇಲ್ಲವಾದರೆ ಅಲ್ಲಿ ಪ್ರಜಾತಂತ್ರಕ್ಕೆ ಅರ್ಥವಾದರೂ ಇರುವುದೇ?
ಮನೆಯಾಗಲಿ, ಶಾಲೆಯಾಗಲಿ ಇಲ್ಲವೇ ಸಂಸತ್ತಾಗಲಿ; ಎಲ್ಲೇ ಆದರೂ ಪ್ರಶ್ನೆಗಳನ್ನು ಕೇಳುವ ಮತ್ತು ಅದಕ್ಕೆ ಪ್ರಾಮಾಣಿಕವಾದ ಪ್ರತಿಕ್ರಿಯೆ ನೀಡುವ ಅಭ್ಯಾಸವನ್ನು ಪ್ರತಿಯೊಬ್ಬರೂ ಇಟ್ಟುಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಆರೋಗ್ಯಕರ ಚರ್ಚೆಗಳೇ ನಡೆಯದೇ ಯಾವುದೇ ಹೊಸ ವಿಚಾರಗಳು ಹುಟ್ಟುವುದೇ ಇಲ್ಲ. ಹಳಿ ತಪ್ಪಿರುವ ವ್ಯವಸ್ಥೆ ಸರಿ ದಾರಿಯೆಡೆಗೆ ಹೊರಳುವುದೇ ಇಲ್ಲ. ಹಾಗಾಗಿ ಪ್ರಶ್ನಿಸುವ ಶಕ್ತಿಯನ್ನು ಜನರು ಪಡೆದುಕೊಳ್ಳಬೇಕು. ಅಂತಹ ಕಸುವು ತುಂಬುವ ಕೆಲಸವನ್ನು ಆಳುವ ವ್ಯವಸ್ಥೆ ಮಾಡಬೇಕು. ಮತ್ತು ಜನರ ಪ್ರಶ್ನೆಗಳಿಗೆ ಆಳುವವರು ಪ್ರಾಮಾಣಿಕವಾಗಿ ಉತ್ತರಿಸಬೇಕು. ಹಾಗಾದರೇ ಮಾತ್ರವೇ ಪ್ರಜಾಪ್ರಭುತ್ವಕ್ಕೆ ಅರ್ಥ ಬರುವುದು. ಮತದಾರರು ಮತ್ತು ಜನಪ್ರತಿನಿಧಿಗಳ ನಡುವೆ ಸಂವಹನ ಸಾಧ್ಯವಾಗುವುದೇ ಮಾತುಕತೆಯ ಮೂಲಕವಾಗಿರುತ್ತದೆ. ಅದಿಲ್ಲದೆ ಕೇವಲ ಗಾಜಿನ ಕೋಣೆಗಳಲ್ಲಿ ಭದ್ರವಾಗಿ ನಿಂತು ಮಾತುಗಳನ್ನು ಏಕಮುಖವಾಗಿ ತೂರಿಬಿಟ್ಟರೆ ಅದರಿಂದ ಯಾವುದೇ ಪ್ರಯೋಜನವಿಲ್ಲ.

ಇಂದಿನ ಆಳುವವರು ಜನರ ಪ್ರಶ್ನೆಗಳಿಗೆ ಪ್ರಾಮಾಣಿಕವಾದ ಉತ್ತರ ನೀಡದೆ ಏಕಮುಖಿಯಾದ ಮಾತುಗಳನ್ನು ಮಾತ್ರ ತೂರಿಬಿಡುತ್ತಿದ್ದಾರೆ. ಆ ಮಾತುಗಳಿಗೂ ಯಾವುದೇ ನೈತಿಕ ಮತ್ತು ಸತ್ಯದ ಬುನಾದಿ ಇರುವಂತೆ ಕಾಣುವುದಿಲ್ಲ. ಆರ್ಥಿಕ ಸಮಸ್ಯೆಗಳು ದೇವರ ಸೃಶ್ಟಿ ಎಂಬುದೂ ಕೂಡ ಅಂತಹ ಒಂದು ಅತಾರ್ಕಿಕ ಮಾತಾಗಿಯೇ ಉಳಿಯುತ್ತದೆ. ದೇವರು ಅದೊಂದು ವೈಯಕ್ತಿಕ ನಂಬಿಕೆಯ ವಿಚಾರ. ಅದನ್ನು ವಿಫಲ ಆರ್ಥಿಕ ನೀತಿಗಳಿಗೆ ತಳುಕು ಹಾಕುವುದು ಜನರನ್ನು ದಾರಿ ತಪ್ಪಿಸುವ ಕೆಲಸವಾಗಿರುತ್ತದೆ. ಎಶ್ಟೋ ಶತಮಾನಗಳಿಂದ ಹೀಗೆ ಆಳುವವರು ತಮ್ಮ ಹೊಣೆಯನ್ನು ದೇವರ ಮೇಲೆ ಎತ್ತಿ ಹಾಕಿ ತಾವು ಮಾತ್ರ ತಪ್ಪಿಸಿಕೊಳ್ಳುತ್ತಲೇ ಬರುತ್ತಿದ್ದಾರೆ. ಜನರೂ ಕೂಡ ತಮ್ಮ ಕಶ್ಟಗಳನ್ನು ಹಿಂದಿನ ಜನ್ಮದ ಕರ್ಮಫಲ, ಹಣೆಬರೆಹ ವಿಧಿಬರೆಹ ಎಂದೇ ನಂಬಿಕೊಂಡಿದ್ದಾರೆ; ಅಥವಾ ಹಾಗೆ ನಂಬಿಸಿಕೊಂಡು ಬರಲಾಗಿದೆ. ಸಚಿವರ ಈ ಮಾತೂ ಕೂಡ ಜನರನ್ನು ಹಾಗೆ ನಂಬಿಸುವುದೇ ಆಗಿರುವಂತೆ ಕಾಣುತ್ತಿದೆ. ಇದು ಆತಂಕಕಾರಿ ವಿಚಾರ. ಹಾಗಾಗಿ ಇಂತಹ ವಿಚಾರಗಳ ಬಗೆಗೆ ಮುಕ್ತವಾಗಿ ಚರ್ಚೆ ಮಾಡಬೇಕಾದ ಅಗತ್ಯವಿದೆ. ಆದರೆ ಇಂತಹ ಅತಾರ್ಕಿಕ ಮಾತುಗಳನ್ನು ಪ್ರಶ್ನೆ ಮಾಡಿದರೆ ರಾಶ್ಟ್ರ ವಿದ್ರೋಹವಾಗಿ ಕಾಣಿಸುತ್ತದೆ. ಅಂದರೆ ಪ್ರಶ್ನೆ ಮಾಡುವ ಜನರನ್ನು ದುರುಳೀಕರಿಸುವ ರಾಕ್ಶಸೀಕರಣ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಹಾಗೆ ಮಾಡುವ ಮೂಲಕ ನಿಜದನಿಗಳನ್ನು ಹತ್ತಿಕ್ಕಲಾಗುತ್ತಿದೆ. ಹೀಗೆ ದುರುಳೀಕರಿಸುವ ಪ್ರಯತ್ನಗಳ ಒಳಹುನ್ನಾರಗಳನ್ನು ಅರಿಯದಿದ್ದರೆ ಅದು ಇಡೀ ದೇಶವನ್ನೇ ನಾಶ ಮಾಡಿಬಿಡುತ್ತದೆ.

ಇಂತಹ ಅಪಾಯದಿಂದ ಪಾರಾಗಲು ಜನರು ಪ್ರಶ್ನಿಸುವುದನ್ನು ಕಲಿಯಬೇಕು; ಮತ್ತು ಪ್ರಶ್ನೆ ಮಾಡುವವರನ್ನು ಗೌರವಿಸಲೂಬೇಕು. ಆಗ ಮಾತ್ರವೇ ಆರೋಗ್ಯಕರವಾದ ಸಂವಾದ ಸಾಧ್ಯವಾಗುವುದು. ಭಾಶೆ ಮತ್ತು ಸಮಾಜಗಳು ಸೃಜನಶೀಲವಾಗುವುದು. ಪ್ರಶ್ನೆ ಮಾಡುವುದನ್ನು ಬಿಟ್ಟರೆ ಮತ್ತು ಪ್ರಶ್ನಿಸುವವರನ್ನು ಅಗೌರವಿಸಿದರೆ ಇಲ್ಲವೇ ನಾಶಗೊಳಿಸಿದರೆ ಯಾವುದೇ ಸಮಾಜ ನಿಶ್ಕ್ರಿಯ ಮತ್ತು ಸೃಜನಶೀಲತೆಯಿಂದ ದೂರವಾಗುತ್ತದೆ. ಜ್ಞಾನ ವಿರೋಧಿಯೂ ಆಗಬೇಕಾಗುತ್ತದೆ. ಕೊನೆಗೊಂದು ಮಾತು. ಪ್ರಶ್ನೆ-ಹಾಗಂದರೇನು? ಎನ್ನುವುದು ಒಂದು ತಾತ್ವಿಕ ಪ್ರಶ್ನೆ.

*

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...