ಕುರಿಕಾಯುವವರ ಆಶ್ರಯದಲ್ಲಿ ಬೆಳೆದು ಬಲಿಷ್ಟ ರಾಜ್ಯವನ್ನು ಕಟ್ಟಿದ ಚಂದ್ರಗುಪ್ತ


"ಒಂದು ಕತ್ತಲೆಯ ರಾತ್ರಿಯಲ್ಲಿ ಮುರಾ ಶಿಶುವನ್ನು ಎತ್ತಿಕೊಂಡು ಹಿಮವಂತ ರಾಜ್ಯಕ್ಕೆ ನಡೆದುಕೊಂಡು ಹೋದಳು. ಗುಡ್ಡ ಬೆಟ್ಟ ನದಿಗಳನ್ನು ದಾಟಿ ತಮ್ಮ ಹಾಳುಗೆಡವಿದ ಅರಮನೆಯ ಕಾಡಿಗೆ ಬಂದಳು. ಮಗುವನ್ನು ಅಲ್ಲಿಯೆ ತ್ಯಜಿಸಿ ಹೋಗುವ ನಿರ್ಧಾರ ಮಾಡಿದಳು. ಕಾಡಿನಲ್ಲಿ ದನಗಳ ಅಕ್ಕಚ್ಚು ತುಂಬಿಸುವ ಕಲ್ಲಿನ ಮರಿಗೆಯಿತ್ತು," ಎನ್ನುತ್ತಾರೆ ಉದಯಕುಮಾರ ಹಬ್ಬು. ಅವರು ತಮ್ಮ ಅನುವಾದಿತ ‘ಚಂದ್ರಗುಪ್ತ ಮೌರ್ಯ’ ಕೃತಿಗೆ ಬರೆದ ಲೇಖಕನ ನುಡಿ.

ಹಿಮಾಲಯದಲ್ಲಿನ ಒಂದು ರಾಜ್ಯ ಹಿಮವಂತ. ಹಿಮವಂತ ಅಲ್ಲಿನ ಸಾಮಂತ ಅರಸ, ಸುಖನೆಮ್ಮದಿಯಿಂದ ಇದ್ದ ಹಿಮವಂತ ರಾಜ್ಯದ ಮೇಲೆ ಮಗಧ ರಾಜ್ಯದ ನಂದರು ಏಕಾಏಕಿ ಯುದ್ಧ ಸಾರಿದರು. ಆ ಯುದ್ಧದಲ್ಲಿ ಹಿಮವಂತ ರಾಜ ಮೃತಪಟ್ಟ, ಅರಮನೆಯಲ್ಲಿದ್ದ ಹಿಮವಂತನ ಮಡದಿ ಮುರಾ ವೈರಿಗಳ ಕಣ್ಣಪ್ಪಿಸಿಕೊಂಡು ತನ್ನ ತವರು ಮನೆಗೆ ಹೋದಳು. ಅವಳನ್ನು ಹಿಮವಂತ ಪ್ರೀತಿಸಿ ಮದುವೆಯಾಗಿದ್ದ. ಅಲ್ಲಿ ಅವಳು ಒಂದು ಗಂಡು ಮಗುವನ್ನು ಹೆತ್ತಳು. ಅವಳು ಆ ಮಗುವನ್ನು ಹಿಮವಂತ ರಾಜ್ಯದಲ್ಲಿ ದೇವರಿಗೆ ಅರ್ಪಿಸಿ, ಅವನು ಮುಂದಿನ ರಾಜನಾಗಬೇಕೆಂದು ಕನಸು ಕಂಡಳು. ಒಂದು ಕತ್ತಲೆಯ ರಾತ್ರಿಯಲ್ಲಿ ಮುರಾ ಶಿಶುವನ್ನು ಎತ್ತಿಕೊಂಡು ಹಿಮವಂತ ರಾಜ್ಯಕ್ಕೆ ನಡೆದುಕೊಂಡು ಹೋದಳು. ಗುಡ್ಡ ಬೆಟ್ಟ ನದಿಗಳನ್ನು ದಾಟಿ ತಮ್ಮ ಹಾಳುಗೆಡವಿದ ಅರಮನೆಯ ಕಾಡಿಗೆ ಬಂದಳು. ಮಗುವನ್ನು ಅಲ್ಲಿಯೆ ತ್ಯಜಿಸಿ ಹೋಗುವ ನಿರ್ಧಾರ ಮಾಡಿದಳು. ಕಾಡಿನಲ್ಲಿ ದನಗಳ ಅಕ್ಕಚ್ಚು ತುಂಬಿಸುವ ಕಲ್ಲಿನ ಮರಿಗೆಯಿತ್ತು. ಮುರಾ, ಆ ಕಲ್ಲು ಮರಿಗೆಯನ್ನು ಕಾಡು ಹೂಗಳ ಬಳ್ಳಿಯಿಂದ ಅಲಂಕರಿಸಿದಳು. ಅಡಿ ಭಾಗದಲ್ಲಿ ಎಲೆಗಳನ್ನು ಹರಡಿ ಮಗುವಿನ ಕೈಯಲ್ಲಿ ನವಿಲುಗರಿಯನ್ನು ಇಟ್ಟಳು. ಮತ್ತು ಕೊನೆಯ ಸಲ ಮಗುವಿಗೆ ಹಾಲುಣಿಸಿ, ಅವನನ್ನು ಒಮ್ಮೆ ಮೇಲಕ್ಕೆ ಹಾರಿಸಿ ನಗುವಂತೆ ಮಾಡಿದಳು. ಮಗುವನ್ನು ಆ ತೊಟ್ಟಿಯಲ್ಲಿಟ್ಟು ಮೌರ್ಯರ ಲಾಂಛನವಾದ ಕಠಾರಿಯೊಂದನ್ನು ಪಕ್ಕದಲ್ಲೇ ನೆಲದಲ್ಲಿ ನೆಟ್ಟಳು. ಮತ್ತೆ ಹಿಂತಿರುಗಿ ನೋಡದೆ ದೇವತೆ ಮೇನಕೆಯನ್ನು ಪ್ರಾರ್ಥಿಸುತ್ತ ಹೊರಟುಹೋದಳು. ಆ ಭಾಗದಲ್ಲಿ ಕುರಿಗಾಹಿಗಳು ವಾಸಿಸುತ್ತಿದ್ದರು. ಅವರು ಕಾಡಿನಲ್ಲಿ ಬೇಟೆಯಾಡುತ್ತ ಜೀವನ ಕಳೆಯುತ್ತಿದ್ದರು. ಕುರಿಗಾಹಿ ಯೊಬ್ಬ ಕಾಡಲ್ಲಿ ಪಾರಿವಾಳದ ಗುಟುರಿನಂತಹ ಒಂದು ಶಬ್ದವನ್ನು ಕೇಳಿದನು. ಮುಂದೆ ನಡೆಯುತ್ತಿದ್ದಂತೆ ತೊಟ್ಟಿಯಲ್ಲಿ ಅಳುತ್ತಿದ್ದ ಮಗುವನ್ನು ನೋಡಿದನು. ತೊಟ್ಟಿಯ ಹತ್ತಿರ ನೆಟ್ಟ ಪುಟ್ಟ ಕಠಾರಿಯನ್ನು ಕಂಡನು. ಮಗು ನೋಡಲು ಸುಂದರವಾಗಿತ್ತು. ಕುರಿಗಾಹಿ ಆ ಮಗುವನ್ನು ಸಾಕಬೇಕೆಂಬ ಮನಸ್ಸು ಮಾಡಿ ತನ್ನ ಹಟ್ಟಿಗೆ ಕರೆತಂದನು. ಕುರಿಗಾಹಿಯ ಹೆಂಡತಿ ನಟ್ಟಾ. ಅವಳೂ ಕೂಡ ಮಗುವನ್ನು ಇಷ್ಟಪಟ್ಟು ತನ್ನ ಮೊಲೆ ಹಾಲು ಕೊಟ್ಟು ಬೆಳೆಸಿದಳು.

ಹೀಗೆ ಬಾಲಕ ಕುರಿಗಾಹಿಗಳೊಂದಿಗೆ ಬೆಳೆಯುತ್ತ ನಡೆದ. ಒಮ್ಮೆ ಕುರಿಗಾಹಿಯ ಎತ್ತೊಂದು ಮಗುವಿನ ಬಳಿ ಬಂದು ಮೂಸಿತು. ಆ ಎತ್ತಿನ ಹೆಸರು ಚಂದ್ರ ಎಂದು ಅದೇ ಹೆಸರನ್ನು ಶಿಶುವಿಗೂ ಕೂಡ ಇಟ್ಟು ನಾಮಕರಣ ಮಾಡಿದರು. ಬಾಲಕ ಬೆಳೆಯುತ್ತಿದ್ದಂತೆ ಎಲ್ಲರಿಗಿಂತ ಹೆಚ್ಚು ಕುಶಾಗ್ರಮತಿಯಾಗಿದ್ದ. ತುಂಬ ತುಂಟನಾಗಿ ಸುತ್ತಮುತ್ತಲಿನ ಮನೆಗಳ ಹೆಂಗಸರಿಗೆ ಮರುಳು ಮಾಡಿ ಬೆಣ್ಣೆ ತಿನ್ನುತ್ತಿದ್ದ. ಅಷ್ಟಲ್ಲದೆ ಒಂದು ಚಿರತೆ ಮರಿಯನ್ನು ತನ್ನ ಗೆಳೆಯನಾಗಿ ಇಟ್ಟುಕೊಂಡಿದ್ದ. ಕುರಿಗಾಹಿಗಳ ಮಕ್ಕಳಿಗಿಂತ ಚುರುಕಾಗಿದ್ದ. ಬೇಟೆಯ ಅವನ ಕೌಶಲ್ಯವನ್ನು ಕಂಡು ಜನರು ಅವನಿಗೆ ಕುರಿಕಾಯುವ ಜವಾಬ್ದಾರಿಯನ್ನು ಕೊಟ್ಟರು. ಕಾಡಿನ ಎಲ್ಲ ಪ್ರಾಣಿಗಳನ್ನು ಬೇಟೆಯಾಡುವ ಅವುಗಳನ್ನು ಪಳಗಿಸುವ ವಿದ್ಯೆ ಕಲಿತ. ಕಾಡಿನ ಎಲ್ಲ ಪಕ್ಷಿಗಳ ಸ್ವರಗಳನ್ನು ಅನುಕರಣೆ ಮಾಡುತ್ತಿದ್ದ.

ಒಂದು ದಿನ ಸಾಕುತಂದೆ, ಚಂದ್ರ ತನಗೆ ಸಿಕ್ಕ ಬಗೆಯನ್ನು ಕುರಿತು ಹೇಳಿದ. ನೀನು ರಾಜವಂಶದವನು. ನಾನು ಮೇನಕಾ ದೇವಿಯಿಂದ ನಿನ್ನನ್ನು ಕದ್ದಿದ್ದೇನೆ ಎಂದ ಮತ್ತು ಕಠಾರಿಯ ಬಗ್ಗೆ ಹೇಳಿದ. ಆದರೆ ಕಠಾರಿಯನ್ನು ಕುರಿಗಾಹಿ ಎಲ್ಲೊ ಒಂದು ಕಡೆ ಹುಗಿದಿಟ್ಟಿದ್ದ. ಕಠಾರಿ ಹುಗಿದ ಸ್ಥಳ ಅವನಿಗೆ ಮರೆತು ಹೋಗಿತ್ತು. ಒಂದು ದಿನ ಚಂದ್ರ ಕಾಡಿನಲ್ಲಿ ತನ್ನ ಚಿರತೆಯೊಂದಿಗೆ ತಿರುಗಾಡುವಾಗ ಕಠಾರಿಯ ತುದಿಯು ಅವನ ಕಾಲಿಗೆ ಹೆಟ್ಟಿ ರಕ್ತ ಹರಿಯಿತು. ಅದನ್ನು ಕಿತ್ತು ಅವನು ತನ್ನ ಸಾಕು ಅಪ್ಪನಿಗೆ ಕೊಟ್ಟ. ಕೆಲವು ದಿನಗಳ ನಂತರ ಕಠಾರಿಯನ್ನು ಅಪ್ಪ ಅವನಿಗೇ ಕೊಟ್ಟ.

ಚಂದ್ರನ ಕೀರ್ತಿ ಎಲ್ಲೆಡೆ ಹಬ್ಬಿತು. ಅದು ಮಗಧವನ್ನು ಆಳುತ್ತಿದ್ದ ನಂದರ ಕಿವಿಗೂ ತಲುಪಿತು. ಆಗ ಸಿಂಹಳದ ಅರಸು ಒಂದು ಸಮಸ್ಯೆಯನ್ನು ಬಿಡಿಸಲು ಮಗಧದ ಅರಸನಿಗೆ ಸವಾಲು ಹಾಕಿದ್ದ. ಪಂಜರದೊಳಗಿನ ಸಿಂಹವನ್ನು ಬಾಗಿಲು ತೆರೆಯದೆ ಹೊರತರಬೇಕು ಎಂಬುದೇ ಆ ಸವಾಲು.

ಆಗ ನಂದರಾಜನು ಕಾಡಿನಲ್ಲಿ ಕುರಿಗಾಹಿಗಳೊಡನೆ ಚಂದ್ರನೆಂಬುವನಿದ್ದಾನೆ. ಅವನಿಗೆ ಪ್ರಾಣಿಗಳ ಭಾಷೆಯೂ ಗೊತ್ತಂತೆ ಎಂದು ತಿಳಿದು ದೂತರನ್ನು ಚಂದ್ರ ಇದ್ದ ಕಾಡಿಗೆ ಕಳಿಸುತ್ತಾನೆ. ದೂತನು ರಾಜನ ಆದೇಶವನ್ನು ಹೊತ್ತು ತಂದಾಗ ಚಂದ್ರ ಅಲ್ಲಿರಲಿಲ್ಲ. ಗ್ವಾಲೆ ಹಬ್ಬಕ್ಕೆ ಸಿಹಿಯನ್ನು ತಯಾರಿಸಿ ತರಲು ಬೇರೆಡೆಗೆ ಹೋಗಿದ್ದ. ಚಂದ್ರ ಹಿಂದಿರುಗಿ ಬಂದಾಗ ಕುರಿಗಾಹಿಗಳು ನಂದರ ದೂತನ ಸಂದೇಶ ಹೇಳಿದರು. ನಂದರ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ಅವನನ್ನು ನಂದರ ಆಸ್ಥಾನಕ್ಕೆ ಕಳಿಸಿದರು.

ಮಗಧಕ್ಕೆ ಬಂದ ಚಂದ್ರ ಆ ಪಂಜರದ ಸಿಂಹವನ್ನು ನೋಡಿ ಇದರಲ್ಲಿ ಮೋಸವಿದೆ ಎಂದು ತಿಳಿದು ಉರಿಯುತ್ತಿರುವ ಕಬ್ಬಿಣದ ಸಲಾಕೆಯನ್ನು ತರಲು ಹೇಳಿದ. ಸಲಾಕೆಯನ್ನು ಪಂಜರದೊಳಗೆ ನೂಕಿದಾಗ ಅಲ್ಲಿದ್ದ ಮೇಣ ಕರಗಿಹೋಯಿತು. ಎಲ್ಲರೂ ಚಂದ್ರನ ಬುದ್ಧಿವಂತಿಕೆಯನ್ನು ಕೊಂಡಾಡಿದರು. ನಂದನಿಗೆ ಆ ಹುಡುಗನ ಬಗ್ಗೆ ಹೊಟ್ಟೆಯುರಿ. ಪಂಜರದ ಬಳಿ ಒಬ್ಬ ಪುಟ್ಟ ಬಾಲಕ ಚಂದ್ರನ ಕೈ ಹಿಡಿದುಕೊಂಡ. ಚಂದ್ರ ತನ್ನ ಸೊಂಟದಲ್ಲಿರುವ ಕಠಾರಿಯನ್ನು ಹೊರತೆಗೆದು ಬಾಲಕನಿಗೆ ತೋರಿಸಿದ. ಇದನ್ನು ಕಂಡ ನಂದ ಅರಸರು ಕಠಾರಿಯನ್ನು ಚಂದ್ರನಿಂದ ಕಿತ್ತುಕೊಳ್ಳುವಂತೆ ಹೇಳಿದರು. ಮತ್ತು ಅರಮನೆಯ ಜ್ಯೋತಿಷಿಯನ್ನು ಕರೆಸಿ ಕಠಾರಿಯಲ್ಲಿ ಕೆತ್ತಿದ ಅಕ್ಷರವನ್ನು ಓದಲು ಹೇಳಿದರು. ಕಠಾರಿಯಲ್ಲಿ ಮುರಾ ಎಂದು ಕೆತ್ತಲಾಗಿತ್ತು. ಚಂದ್ರ ತಮ್ಮ ವೈರಿಯ ಮಗ ಎಂದು ತಿಳಿದು ಅವನನ್ನು ಸರಪಳಿಯಿಂದ ಬಂಧಿಸಿ ಎಂದು ನಂದ ಅರಸು ಆಜ್ಞೆ ಇತ್ತ. ಆದರೆ ಆಗಲೆ ಅಪಾಯವನ್ನು ಊಹಿಸಿ ಚಂದ್ರನು ಪಂಜರದಲ್ಲಿ ಕುಳಿತುಕೊಂಡು ಸಿಂಹಳದ ಸೈನಿಕರಲ್ಲಿ ವಿನಂತಿಸಿ ಅಲ್ಲಿಂದ ಪಾರಾಗಿದ್ದ. ಮತ್ತೆ ತನ್ನ ಕಾಡಿಗೆ ಬಂದಾಗ ಅವನ ಸಾಕು ಅಪ್ಪ ಚಂದ್ರನಲ್ಲಿ ಅವನನ್ನು ಮಗಧಕ್ಕೆ ಕಳುಹಿಸಿದಕ್ಕಾಗಿ ಕ್ಷಮೆ ಯಾಚಿಸಿದ. ಆದರೆ ಅಂದು ಮಲಗಿದ ಅಪ್ಪ ಬೆಳಿಗ್ಗೆ ಏಳಲಿಲ್ಲ.

ಅಪ್ಪ ಸತ್ತ ದುಃಖ ಚಂದ್ರನನ್ನು ಆವರಿಸಿತು. ಅಪ್ಪನ ಶವಸಂಸ್ಕಾರ ಮಾಡಿ ತನ್ನವರು ಈಗ ಯಾರೂ ಇಲ್ಲಿ ಇಲ್ಲ ಎಂದು ಆ ಕಾಡಿಂದ ನಡೆದುಬಿಟ್ಟ. ಕಾಡಿನ ಮೂಲಕ ಕೆಲವು ಸಾರ್ಥರು ವ್ಯಾಪಾರ ಮಾಡಲು ಊರಿಂದ ಊರಿಗೆ ಸಂಚಾರ ಮಾಡುತ್ತಿದ್ದರು. ಅವರೊಡನೆ ಚಂದ್ರ ಸೇರಿಕೊಂಡ. ಕಾಡಿನಲ್ಲಿದ್ದಾಗ ಚಂದ್ರನು ವೇದ ಗಳನ್ನು ಅಲ್ಲಿರುವ ತಪಸ್ವಿಗಳಿಂದ ಕಲಿತಿದ್ದ. ಖಗೋಳ ಶಾಸ್ತ್ರಜ್ಞರಿಂದ ಆಕಾಶಕಾಯಗಳ ಬಗ್ಗೆ ಕಲಿತಿದ್ದ. ಈ ಸಾರ್ಥರು ತಾವು ಕಂಡ ಅನುಭವದ ಕಥೆಯನ್ನು ಹೇಳುತ್ತಿದ್ದರು. ಅವುಗಳನ್ನು ಕೇಳುತ್ತ ಚಂದ್ರ ತನ್ನ ಜ್ಞಾನವನ್ನು ಬೆಳೆಸಿಕೊಂಡ. ಈ ಸಾರ್ಥರ ಗುಂಪನ್ನು ಸೇರಲು ಒಬ್ಬ ಗೂನು ಬೆನ್ನಿನವನು ಬಂದ. ಅವನು ಕೈಮೇಲೆ ರಣಹದ್ದನ್ನು ಇಟ್ಟು ಕೊಂಡಿದ್ದ, ಬಡಿಗೆಗೆ ಗಂಟೆಗಳನ್ನು ಜೋಡಿಸಿದ್ದ. ಗಂಟೆಯ ಶಬ್ದಕ್ಕೆ ಪ್ರಾಣಿಗಳು ಹೆದರಬಹುದೆಂದು ಗಂಟೆಗಳ ಶಬ್ದ ಮಾಡುತ್ತ ಬರುತ್ತಿದ್ದ. ಅವನು “ಗಾಂಧಾರಕ್ಕೆ ಹೋಗುವ ದಾರಿಯನ್ನು ಯಾರಾದರೂ ತೋರಿಸಬಲ್ಲಿರಾ?' ಎಂದು ಕೇಳುತ್ತ ಬಂದ.

ಚಂದ್ರ ಆ ಗೂನುಬೆನ್ನಿನವನಿಗೆ ಸಹಾಯ ಮಾಡಲು ಮುಂದೆ ಬಂದ. ಅವನು ಬೇರೆ ಯಾರೂ ಅಲ್ಲ, ಚಾಣಕ್ಯನಾಗಿದ್ದ. ನಂದರಿಂದ ಅವಮಾನಿತನಾಗಿ ಹೊರನಡೆದಿದ್ದ, ಅವನನ್ನು ಪತ್ತೆ ಮಾಡಲು ನಂದರು ಗೂಢಾಚಾರರನ್ನು ಬಿಟ್ಟಿದ್ದರು. ಗಾಂಧಾರ ಚಾಣಕ್ಯನ ತವರೂರು.

ಚಂದ್ರ ಮತ್ತು ಚಾಣಕ್ಯ ಕಾಡಿನ ಮೂಲಕ ಗಾಂಧಾರದತ್ತ ನಡೆದರು. ಚಾಣಕ್ಯ ಮನಸ್ಸಿನಲ್ಲೆ ಈ ಚಂದ್ರನು ಮುಂದಿನ ಅರಸನಾಗಲು ಅರ್ಹನಿರುವನೆ? ಎಂದು ಯೋಚಿಸುತ್ತಿದ್ದ. ದಾರಿಯಲ್ಲಿ ಹಲವು ಪರೀಕ್ಷೆಗಳನ್ನೊಡ್ಡಿ ಚಂದ್ರಗುಪ್ತನನ್ನು ಚಾಣಕ್ಯ ಪರೀಕ್ಷೆ ಮಾಡಿದ. ಅದರಲ್ಲಿ ಗೆದ್ದು ಬಂದ ಚಂದ್ರನಲ್ಲಿ ಚಾಣಕ್ಯನಿಗೆ ವಿಶ್ವಾಸ ಬೆಳೆದು, ನಂದರನ್ನು ಸೋಲಿಸಿ ಚಂದ್ರನನ್ನು ಸಾಮ್ರಾಟನನ್ನಾಗಿ ಮಾಡಲು ನಿರ್ಧರಿಸಿದ. ಗಾಂಧಾರಕ್ಕೆ ತಲುಪಿದ ಮೇಲೆ ಅಲ್ಲಿ ತನ್ನ ಸೈನ್ಯವನ್ನು ಹೇಗೆ ಸೇರಿಸಬಹುದು ಎಂದು ಚಂದ್ರ ಲೆಕ್ಕ ಹಾಕಿದ. ದಾರಿಯಲ್ಲಿ ಮೆಸಿಡೋನಾದ ಅಲೆಕ್ಸಾಂಡರ್ ಭಾರತವನ್ನು ಆಳುತ್ತಿದ್ದಾನೆ ಎಂದು ಗೊತ್ತಾಗಿ ಅವರು ಅವನಿರುವಲ್ಲಿಗೆ ಪಯಣ ಬೆಳೆಸಿದರು. ಹೋಗುತ್ತಿದ್ದಂತೆ ವಿದೇಶಿ ಗ್ರೀಕ್ ದೊರೆ ಅಲೆಕ್ಸಾಂಡರನನ್ನು, ನಮ್ಮ ದೇಶಕ್ಕೆ ಸ್ವಾಗತಿಸಿ ದವನು ಅಂಬಿ ಎಂದು ತಿಳಿಯಿತು. ಮುಂದೆ ಹೋಗುತ್ತಿದ್ದಂತೆ ಅವರು ಎತ್ತರದ ಕೋಟೆಯೊಂದನ್ನು ಕಂಡರು ಮತ್ತು ಸೈನಿಕರನ್ನು ಕಂಡರು. ಅವರು ಅಲೆಕ್ಸಾಂಡರನಿಂದ ಸೋತ ಪೌರವ ಅರಸರ ಸೈನಿಕರಾಗಿದ್ದರು. ಯುದ್ಧದ ನಂತರ ನಿನ್ನನ್ನು ಹೇಗೆ ನಡೆಸಿ ಕೊಳ್ಳಬೇಕು? ಎಂದು ಪೌರವನಿಗೆ ಕೇಳಿದಾಗ ಒಬ್ಬ ರಾಜನು ಇನ್ನೊಬ್ಬ ರಾಜನನ್ನು ನಡೆಸಿಕೊಂಡಂತೆ' ಎಂದು ಅವನು ಉತ್ತರಿಸಿದಾಗ ಅಲೆಕ್ಸಾಂಡರನಿಗೆ ಅವನ ಸ್ವಾಭಿಮಾನ ಕಂಡು ಸಂತೋಷವಾಯಿತಂತೆ. ಚಂದ್ರ ಮತ್ತು ಚಾಣಕ್ಯ ಪೋರಸ್‌ನ ಅರಮನೆಗೆ ಹೋದರು. ಅಲ್ಲಿ ಪೋರಸ್‌ನಿಂದ ಮುರಾ ಚಂದ್ರನ ತಾಯಿ ಎಂದು ಗೊತ್ತಾಗಿ ಚಂದ್ರ ದುಃಖದ ಕಡಲಲ್ಲಿ ಮುಳುಗಿಬಿಟ್ಟ, ಪೋರಸ್ ಹೇಳಿದ “ಮೌರ್ಯರಿಗೆ ಬಲಿಷ್ಠ ನಾಯಕತ್ವ ಇದ್ದಿದ್ದರೆ ಸೋಲುತ್ತಿರಲಿಲ್ಲ. ನಾವು ಮೌರ್ಯರ ಸಾಮಂತ ಅರಸರು ಎಂದ.

ಹೀಗೆ ಚಂದ್ರನು ಪೋರಸ್‌ನ ಸಹಾಯದ ಭರವಸೆ ಪಡೆದುಕೊಂಡ. ತಾನು ಮೌರ್ಯರ ದೊರೆ ಎಂದು ಘೋಷಿಸಿದ ಮತ್ತು ಕಾಡಿನ ಎಲ್ಲ ಅಲೆಮಾರಿಗಳಿಗೆ ಯುದ್ಧಕ್ಕೆ ಸನ್ನದ್ಧರಾಗುವಂತೆ ಕರೆಕೊಟ್ಟ, ಅಶ್ವಮೇಧಯಾಗ ಮಾಡಿದ. ಅನೇಕರು ಅವನ ಸಾಮಂತರಾದರು. ಈ ಎಲ್ಲ ಯೋಜನೆಗಳಿಗೆ ಚಾಣಕ್ಯನ ಸಲಹೆ ಸೂಚನೆಗಳು ಸೂಕ್ತಕಾಲಕ್ಕೆ ಅವನಿಗೆ ದೊರೆಯುತ್ತಿದ್ದವು.

ಎಲ್ಲವೂ ಸಜ್ಜುಗೊಂಡ ನಂತರ ಸೈನಿಕರನ್ನೆಲ್ಲ ದೊಡ್ಡ ಬಯಲಲ್ಲಿ ಸೇರಿಸಿದ ಚಾಣಕ್ಯ, ಕೆಲವು ಗೂಢಾಚಾರರನ್ನು ನಂದರ ಅರಮನೆಯ ದ್ವಾರಪಾಲಕರನ್ನಾಗಿ ಮಾಡಿದ. ಒಂದು ದಿನ ಲಂಕಾದಹನ ಮಾಡಿದಂತೆ ನಂದರ ಮಗಧವನ್ನು ಸುಟ್ಟು ಬೂದಿ ಮಾಡಲಾಯಿತು. ಎಲ್ಲ ನಂದರೂ ಸತ್ತರು. ಸಾಮ್ರಾಟನಾದ ಮೇಲೆ ಚಂದ್ರ ಹಲವಾರು ಕಲ್ಯಾಣ ಕೆಲಸಗಳನ್ನು ಮಾಡಿದ. ಹಡಗುಗಳ ಮೂಲಕ ಗ್ರೀಸ್, ಮೆಸೆಪಟೋಮಿಯಾ ಈಜಿಪ್ಟ್ ಸಿರಿಯಾ ಮುಂತಾದ ದೇಶಗಳೊಂದಿಗೆ ವ್ಯಾಪಾರ ವಹಿವಾಟು ಬೆಳೆದು ಜನರು ಸಂಪದ್ಭರಿತರಾದರು.

ಮತ್ತೆ ಹದಿನೈದು ವರ್ಷಗಳ ನಂತರ ಚಂದ್ರ ಒಬ್ಬ ಸಾಮಂತ ಅರಸನ ಮಗಳನ್ನು ಮದುವೆಯಾದ. ಬಿಂದುಸಾರ ಎಂಬ ಮಗ ಹುಟ್ಟಿದ. ಮಧ್ಯಂತರದಲ್ಲಿ ಸೆಲ್ಯೂಕಸ್‌ ಭಾರತದ ಮೇಲೆ ಧಾಳಿ ಮಾಡಿದ. ಆದರೆ ಅವನು ಸೋತ ಕಾರಣ ಸಿರಿಯಾ, ಈಜಿಪ್ಟ್ ಮೆಸೊಪೊಟೋಮಿಯ ಚಂದ್ರನ ಸಾಮ್ರಾಜ್ಯಕ್ಕೆ ಸೇರಿತು. ಕಾಲಾಂತರದಲ್ಲಿ ಬಿಂದುಸಾರನಿಗೆ ಅಶೋಕ ಎಂಬ ಮಗ ಹುಟ್ಟಿದ.

ಚಂದ್ರನಿಗೆ 24 ವರ್ಷಗಳ ರಾಜ್ಯಭಾರ ಸಾಕಾಯಿತು. ರಾಜ್ಯದ ಹೊಣೆಗಾರಿಕೆ ಯನ್ನು ಬಿಂದುಸಾರನಿಗೆ ಒಪ್ಪಿಸಿದ. ಚಾಣಕ್ಯನು ಅರಮನೆಯಲ್ಲಿ ಉಳಿದುಕೊಂಡು ಅಶೋಕನಿಗೆ ತರಬೇತಿ ಕೊಡುವುದರಲ್ಲಿ ನಿರತನಾದ.

ಚಂದ್ರಗುಪ್ತನು ಶ್ರವಣಬೆಳಗೊಳಕ್ಕೆ ಹೋಗಿ ಅಲ್ಲಿ ಜೈನದೀಕ್ಷೆ ಪಡೆದು ಜೈನ ಮುನಿಯಾದ.

ಇದಿಷ್ಟು ಕಾದಂಬರಿಯ ಸಾರಾಂಶ.

ಲೇಖಕಿ ಹಿಮಾಲಯ ಟಿಬೆಟ್ಟಿನ ಪ್ರದೇಶಗಳಲ್ಲಿ ತಿಂಗಳುಗಟ್ಟಲೆ ಪ್ರವಾಸ ಮಾಡಿ ಚಂದ್ರಗುಪ್ತ ಆಳಿದ ಸಾಮ್ರಾಜ್ಯದ ಪ್ರದೇಶಗಳ ಅಮೂಲಾಗ್ರವಾದ ಮಾಹಿತಿ ಪಡೆದು ಕತೆಯನ್ನು ಕಾವ್ಯಾತ್ಮಕವಾಗಿ ನಿರೂಪಿಸಿದ್ದಾರೆ.

ಈ ಕೃತಿ 1940ರಲ್ಲಿ ಪ್ರಕಟಗೊಂಡಿದೆ. ಲೇಖಕಿ ಹೀಲ್ದಾ ಮ್ಯಾಕ್ ಡೋವೆಲ್ ವಿಂಬಲ್ಡನ್‌ನ ಕಾಮನ್‌ನ ನಿವಾಸಿ, ವಿಶೇಷವೆಂದರೆ ಈ ಕೃತಿಗೆ ರವೀಂದ್ರನಾಥ ಠಾಗೂರರ ಶುಭ ಸಂದೇಶವಿದೆ.

- ಉದಯಕುಮಾರ ಹಬ್ಬು

MORE FEATURES

ತಲೆ ಮೇಲೆ ಸುರಿದ ನೀರು ಕಾಲಿಗೆ ಬಂದೇ ಬರುತ್ತದೆ: ವಿ. ಗಣೇಶ್

19-05-2024 ಬೆಂಗಳೂರು

`ಇಂದು ಜಗತ್ತಿನಾದ್ಯಂತ ಎದ್ದುಕಾಣುತ್ತಿರುವ ಹಿರಿಯರ, ಅದರಲ್ಲೂ ಇಳಿ ವಯಸ್ಸಿನ ತಂದೆ-ತಾಯಿಂದಿರ ನಿರ್ಲಕ್ಷತನ ಕಾದಂಬರಿಯಲ್...

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ

19-05-2024 ಬೆಂಗಳೂರು

`ಪ್ರಕೃತಿಯಿಂದ ನಾವು ಎಲ್ಲವನ್ನು ಪಡೆದುಕೊಳ್ಳುತ್ತೇವೆ, ಆದರೂ ಎಲ್ಲವೂ ನಮ್ಮಿಂದಲೇ ಎನ್ನುವ ಸ್ವಾರ್ಥತೆ ಮಾತ್ರ ನಾವು ಬಿಟ...

'ಕೊಡಗಿನ ಲಿಂಗರಾಜ' ಕೊಡಗಿನ ಚರಿತ್ರೆಯ ಕೆಲವು ಪುಟಗಳನ್ನು ತೆರೆದಿರಿಸುತ್ತದೆ

19-05-2024 ಬೆಂಗಳೂರು

‘ಕಥಾ ವಿನ್ಯಾಸವನ್ನು ಹೇಳುವುದಾದರೆ ಶಿಶಿಲರು ಮೊದಲ ಅಧ್ಯಾಯದಲ್ಲಿ ಭೂಮಿಕೆಯನ್ನು ಸೃಷ್ಟಿ ಮಾಡಿದ್ದಾರೆ’ ಎನ...