ಕುವೆಂಪು, ಬೇಂದ್ರೆ ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ: ರಾಜೇಂದ್ರ ಚೆನ್ನಿ

Date: 07-04-2024

Location: ಬೆಂಗಳೂರು


ಧಾರವಾಡ: ರಾಷ್ಟ್ರಕವಿ ಕುವೆಂಪು ಹಾಗೂ ವರಕವಿ ಬೇಂದ್ರೆ ಅವರನ್ನು ಕೆಲವರು ತಮ್ಮ ಸಾಂಸ್ಕೃತಿಕ ಬಂಡವಾಳವನ್ನಾಗಿ ಬಳಸಿಕೊಂಡರು ಎಂದು ಹಿರಿಯ ವಿಮರ್ಶಕ ರಾಜೇಂದ್ರ ಚೆನ್ನಿ ಅಭಿಪ್ರಾಯ ಪಟ್ಟರು. 2024 ಏಪ್ರಿಲ್ 07ರಂದು, ಬೆಳಗ್ಗೆ 10ಕ್ಕೆ ಸಂಗಾತ ಪುಸ್ತಕ ಹಮ್ಮಿಕೊಂಡಿದ್ದ ರಾಜೇಂದ್ರ ಬಡಿಗೇರ್ ಅವರ 'ಯುಗದ ಕವಿ' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುವೆಂಪು ಮತ್ತು ಬೇಂದ್ರೆಯ ನಡುವೆ ವೈಯಕ್ತಿಕ ನೆಲೆಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇರಲಿಲ್ಲ. ಪರಸ್ಪರ ಗೌರವ ಹಾಗೂ ವಿಶ್ವಾಸವಿತ್ತು ಎಂದು ತಿಳಿಸಿದರು.

ಕುವೆಂಪು ಜೊತೆಗಿದ್ದು ಅವರ ಕೃತಿಗಳ ಬಗ್ಗೆ ಬರೆದವರು ಅವರ ಸಮಾಜದವರಾಗಿದ್ದರು. ಬೇಂದ್ರೆ ಜೊತೆಗಿದ್ದು ಅವರ ಕೃತಿಗಳ ಬಗ್ಗೆ ಬರೆದವರು ಅವರ ಸಮಾಜದವರಾಗಿದ್ದರು. ಕುವೆಂಪು ವಿರೋಧಿಗಳು ಬ್ರಾಹ್ಮಣರು, ಬೇಂದ್ರೆ ವಿರೋಧಿಗಳು ಲಿಂಗಾಯತರು ಎನ್ನುವಂತಾಗಿತ್ತು. ಆದರೆ, ಇಬ್ಬರೂ ವೈಯಕ್ತಿಕವಾಗಿ ವೈಮನಸ್ಸು ಉಂಟಾಗಿರಲಿಲ್ಲ. ಕುವೆಂಪು ಪರವಾಗಿ ಬೇಂದ್ರೆ ಯುಗದ ಕವಿ ಕೃತಿ ಬರೆದಿರುವುದು ನಮ್ಮ ಎದುರಿಗಿದೆ ಎಂದರು.

ಇದೇ ವೇಳೆ ಆಧುನಿಕ ಸಮಾಜದಲ್ಲಿ ಸಂಸ್ಕೃತಿ ಇನ್ನೆಲ್ಲಾ ಶಕ್ತಿಗಳಿಗೆ ಹೆಚ್ಚು ಪ್ರಬಲವಾಗಿದೆ. ಸಂಸ್ಕೃತಿ ಹೆಸರಿನಲ್ಲಿಯೇ ಅನೇಕ ಹೋರಾಟಗಳು ನಡೆದಿವೆ. 20ನೇ ಶತಮಾನದಲ್ಲೂ ನಮ್ಮ ಸಂಸ್ಕೃತಿಯೇ ಮೇಲು ಎಂಬ ವಾದಗಳಿವೆ. ಧಾರವಾಡದ ಕಾವ್ಯ ಜೀವನಾಡಿಗೆ ಹತ್ತಿರವಾ? ಕುವೆಂಪು ಅವರ ಕಾವ್ಯ ಜೀವನಾಡಿಗೆ ಹತ್ತಿರವೇ ಬರಲಿಲ್ಲವಾ? ಈ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಕವಿಗಳು ಇದನ್ನೆಲ್ಲಾ ಹೇಳದೆ ಇದ್ದರೂ ಆ ಕವಿಗಳನ್ನು ಲಾಂಛನವಾಗಿ ಇಟ್ಟುಕೊಂಡ ಗುಂಪುಗಳು ಕೆಲವು ವಾಗ್ದಾದ, ಚಳುವಳಿಗಳನ್ನು ಮಾಡಿದ್ದಾರೆ. ವಾಗ್ವಾದಕ್ಕೆ ಸಾಂಸ್ಕೃತಿಕ ಮೌಲ್ಯ ಇತ್ತಾ? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಕೃತಿಕಾರ ಬಡಿಗೇರ ಅವರು ಇಬ್ಬರೂ ಕವಿಗಳ ಕುರಿತಾಗಿ ನಡೆದಿರುವ ವಾಗ್ದಾಗಳ ವಿವರಗಳನ್ನು ಸಮಚಿತ್ತವಾಗಿ ನೀಡಿದ್ದಾರೆ ಎಂದರು.

ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿ, ಬೇಂದ್ರೆ-ಕುವೆಂಪು ಕುರಿತಾಗಿ ಲೇಖಕರ 441 ವಾಗ್ವಾದದ ಹೇಳಿಕೆಗಳನ್ನು ಹೆಕ್ಕಿ ತೆಗೆದು ಕವಿಗಳಿಬ್ಬರ ಸಂಬಂಧವನ್ನು ಕನ್ನಡ ಸಂಸ್ಕೃತಿ ಲೋಕದ ನೆಲೆಯಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಕನ್ನಡ ಸಂಸ್ಕೃತಿ ಬಗ್ಗೆ ಆಳವಾದ ಕಳಕಳಿಯಿಂದ ಬರೆದಿದ್ದಾರೆ ಎಂದರು.

ಸಾಹಿತಿ ಅರವಿಂದ ಮಾಲಗತ್ತಿ ಕೃತಿ ಕುರಿತು ಮಾತನಾಡಿ, ಸಮಾಜದ ಪರಿವರ್ತನೆ, ಬದಲಾವಣೆಗೆ ಸಾಹಿತ್ಯ ಅಗತ್ಯವಾಗಿ ಬೇಕು. ಅಂತಹ ಸಮಾಜದ ಪರಿವರ್ತನೆಯ ಕೃತಿ ಇದಾಗಿದ್ದು, ಜಾತಿ -ವರ್ಣ ಅಪಾಯಕಾರಿ. ಇಂತಹ ಸಂದರ್ಭದಲ್ಲಿ ಕುವೆಂಪು -ಬೇಂದ್ರೆ ಕುರಿತಾದ ವಾಗ್ವಾದಗಳನ್ನು ಬಡಿಗೇರ ಅವರು ಎಲ್ಲೂ ದಾರಿ ತಪ್ಪದೇ ಮೂಲ ಕೃತಿಕಾರರು ಮಂಕಾಗದಂತೆ ವಿಷಯವನ್ನು ನಿರೂಪಿಸಿದ್ದಾರೆ. ಆದರೆ, ಕೃತಿಯಲ್ಲಿ ಬಳಸಿರುವ ಹೇಳಿಕೆಗಳು ಯಾವ ಸಂದರ್ಭ ಮತ್ತು ಕಾಲದಲ್ಲಿ ಹೇಳಲಾಗಿತ್ತು ಎಂಬುದನ್ನು ದಾಖಲು ಮಾಡಿದ್ದರೆ ಕೃತಿಗೆ ಇನ್ನಷ್ಟು ತೂಕ ಬರುತ್ತಿತ್ತು. ಇಷ್ಟಾಗಿಯೂ ಕೃತಿ ಚರ್ಚೆಗೆ ಬರಲಿ ಎಂದು ಹಾರೈಸಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಪ್ರಕಾಶಕ ಟಿ.ಎಸ್‌. ಗೊರವರ, ಯುಗದ ಕವಿ ಕೃತಿ ವಾಗ್ವಾದ ಪರಂಪರೆಯನ್ನು ಹುಟ್ಟುಹಾಕಿದೆ. 441 ಹೇಳಿಕೆಗಳನ್ನು ಬಳಸಿ ಕುವೆಂಪು-ಬೇಂದ್ರೆ ಸುತ್ತಲಿನ ವಾಗ್ವಾದವನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಪ್ರಸ್ತುತ ವಿಮರ್ಶೆ, ಸಂವಾದ ಗೌಣವಾಗುತ್ತಿದೆ. ಕಾವ್ಯ, ಕಥೆಗಳು ಬರೀ ಮೆಚ್ಚುಗೆ ಬಯಸುತ್ತಿವೆಯೇ ಹೊರತು ವಿಮರ್ಶೆಗೆ ಒಳಗಾಗುತ್ತಿಲ್ಲ. ಪುಸ್ತಕ ವಿಮರ್ಶೆಯ ಮಾನದಂಡ ಬದಲಾಗಿದ್ದು ಕೃತಿ ಪರಿಚಯಕ್ಕೆ ಸೀಮಿತವಾಗಿದ್ದು, ಇಂತಹ ಸಂದರ್ಭದಲ್ಲಿ ಯುಗದ ಕವಿ ಹೆಚ್ಚು ವಿಮರ್ಶೆಗೆ ಒಳಗಾಗಲಿ ಎಂಬುದೇ ನನ್ನ ಆಶಯ ಎಂದರು. ಕಾರ್ಯಕ್ರಮದಲ್ಲಿ ಅನೇಕ ಸಾಹಿತ್ಯಾಸಕ್ತರು ಉಸ್ಥಿತರಿದ್ದರು.

MORE NEWS

ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣ ಕೃತಿ ‘ಯಕ್ಷಹಂಸ’ ಲೋಕಾರ್ಪಣೆ

01-05-2024 ಬೆಂಗಳೂರು

ಹೊಸ್ತೋಟ ಮಂಜುನಾಥ ಭಾಗವತರ ಬಗ್ಗೆ ಬರೆದಿರುವ ‘ಯಕ್ಷಹಂಸ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 2024 ಏಪ್ರ...

ಹರಿದಾಸ ಸಾಹಿತ್ಯದ ಮೇರು ಶೃಂಗ ಶ್ರೀವಿಜಯದಾಸರು: ಅರಳುಮಲ್ಲಿಗೆ ಪಾರ್ಥಸಾರಥಿ

30-04-2024 ಬೆಂಗಳೂರು

ಬೆಂಗಳೂರಿನ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯ ಶ್ರೀಪಾದರಾಜ ಸಭಾಭವನದಲ್ಲಿ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್,...

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-04-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...