ಲಲಿತಾ ಸಿದ್ಧಬಸವಯ್ಯನವರ “ಇನ್ನೊಂದು ಸಭಾಪರ್ವ”

Date: 20-12-2021

Location: ಬೆಂಗಳೂರು


ಲಲಿತಾ ಸಿದ್ಧಬಸವಯ್ಯ ತುಂಬ ಗಟ್ಟಿಯಾಗಿ ಬರೆಯುತ್ತಿರುವ ಕನ್ನಡದ ಸೃಜನಶೀಲ ಲೇಖಕರಲ್ಲಿ ಒಬ್ಬರಾಗಿದ್ದಾರೆ. ಅವರಿಗೆ ದಟ್ಟವಾದ ಜೀವನಾನುಭವವಿದೆ. ಭಾಷೆಯನ್ನು ಸಮರ್ಥವಾಗಿ ಬಳಸುವ ಶಕ್ತಿಯಿದೆ’ ಎನ್ನುತ್ತಾರೆ ಬಸವರಾಜ ಸಬರದ. ಅವರು ತಮ್ಮ 'ಮಹಿಳಾ ರಂಗಭೂಮಿ’ ಅಂಕಣದಲ್ಲಿ ಲಲಿತಾ ಸಿದ್ಧಬಸವಯ್ಯನವರ ಇನ್ನೊಂದು ಸಭಾಪರ್ವ ನಾಟಕದ ಕುರಿತು ವಿಶ್ಲೇಷಿಸಿದ್ದಾರೆ.

ವ್ಯಾಸನ ಮಹಾಭಾರತವು ಈ ದೇಶದ ಸಾಂಸ್ಕೃತಿಕ ಪಠ್ಯವಾಗಿದೆ. ಇದನ್ನಾಧರಿಸಿ ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ರೀತಿಯ ಮಹಾಭಾರತಗಳು ಹುಟ್ಟಿಕೊಂಡಿವೆ. ಕನ್ನಡದಲ್ಲಿ ಪಂಪ, ರನ್ನ, ಕುಮಾರವ್ಯಾಸ, ಲಕ್ಷ್ಮೀಶರಂತಹ ಕವಿಗಳು, ಎಸ್.ಎಲ್.ಭೈರಪ್ಪನವರಂತಹ ಕಾದಂಬರಿಕಾರರು ಅಂತಹ ಪ್ರಯತ್ನಗಳನ್ನು ಮಾಡಿದ್ದಾರೆ. ಇತ್ತೀಚಿನ ಮಹಿಳಾ ನಾಟಕಕಾರಲ್ಲಿಯೂ ಈ ರೀತಿಯ ಪ್ರಯೋಗಗಳು ನಡೆದಿವೆ. 2003ರಲ್ಲಿ ಪ್ರಕಟವಾದ ಡಾ. ವಿಜಯಾಸುಬ್ಬರಾಜ್ ಅವರ “ಮತ್ತೊಂದು ಮಹಾಭಾರತ” ಹಾಗೂ 2009ರಲ್ಲಿ ಪ್ರಕಟವಾದ ಡಾ. ಎಸ್.ವಿ. ಪ್ರಭಾವತಿಯಂತಹ “ಪಾಂಚಾಲಿಯ ಸ್ವಗತ” ನಾಟಕಗಳನ್ನಿಲ್ಲಿ ಉದಾಹರಿಸಬಹುದಾಗಿದೆ. “ಮತ್ತೊಂದು ಮಹಾಭಾರತ” ತೆಲುಗಿನ ಮಹಾಕವಿ ಶ್ರೀನಾಥ “ಪಲ್ನಾಟಿ ವೀರಚರಿತ್ರಂ” ಕಾವ್ಯವನ್ನಾಧರಿಸಿ ಬರೆದಿದ್ದಾರೆ. “ಪಾಂಚಾಲಿಯ ಸ್ವಗತ” ಪ್ರಭಾವತಿಯವರದೇ ಕಾದಂಬರಿ “ದ್ರೌಪದಿ”ಯನ್ನಾಧರಿಸಿದ ಏಕವ್ಯಕ್ತಿ ಪ್ರದರ್ಶನದ ರೂಪಕವಾಗಿದೆ.

ಲಲಿತಾ ಸಿದ್ಧಬಸವಯ್ಯನವರ ನಾಟಕ “ಇನ್ನೊಂದು ಸಭಾಪರ್ವ” 2010ರಲ್ಲಿ, ವಿಜಾಪುರದ ಚಾಣಕ್ಯ ಪ್ರಕಾಶನದಿಂದ ಪ್ರಕಟವಾಗಿದೆ. ಇದು ಲಲಿತಾ ಅವರ ಪ್ರಥಮ ನಾಟಕವಾಗಿದೆ. ಏಳು ದೃಶ್ಯಗಳಲ್ಲಿ ವ್ಯಾಪಿಸಿರುವ ಈ ನಾಟಕವು ಮಹಿಳಾ ಸಾಧ್ಯತೆಗಳ ಹೊಸ ಭರವಸೆಯಾಗಿದೆ. ಇಲ್ಲಿ ಬರುವ ದ್ರೌಪದಿಯ ಕಥಾನಕ ಹೊಸದು. ದ್ರೌಪದಿಯ ತಾಯ್ತನದ ತುಡಿತವನ್ನು ಲೇಖಕಿ ಇಲ್ಲಿ ಸಾಮಾನ್ಯ ಮಹಿಳೆಯ ತಾಯ್ತನದ ತೀವ್ರತೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ದ್ರೌಪದಿಯನ್ನು ಅಗ್ನಿಯ ಮಗಳೆಂದು ಕರೆಯುತ್ತಾರೆ. ಸುಡುವುದಷ್ಟೇ ಅಗ್ನಿಯ ಗುಣವನ್ನು, ಬೆಳಗಿಸುವುದು, ಶುದ್ಧೀಕರಿಸುವುದು ಕೂಡಾ ಅಗ್ನಿಯ ಗುಣವೆಂಬುದನ್ನು ತೋರಿಸುವ ಪ್ರಯತ್ನ ಇಲ್ಲಿದೆ. ಹೀಗಾಗಿ ಮೂಲದಲ್ಲಿ ಉರಿಯುವ ದ್ರೌಪದಿ ಇಲ್ಲಿ ಶಾಂತಚಿತ್ತದವಳಾಗಿದ್ದಾಳೆ. ತಾಯಿಯ ಅಂತಃಕರಣ ಎಷ್ಟೊಂದು ದೊಡ್ಡದೆಂಬುದನ್ನು ಪ್ರತಿಪಾದಿಸುವ ವಿಶಿಷ್ಟ ಪಾತ್ರವಾಗಿ ಕಾಣಿಸಿಕೊಂಡಿದ್ದಾಳೆ.

ದ್ರೌಪದಿ ಪಂಚಪಾಂಡವರ ಸತಿಯಾಗಿರುವಂತೆ ಪಂಚ ಉಪಪಾಂಡವರ ತಾಯಿಯಾಗಿದ್ದಾಳೆ. ಮೂಲಭಾರತದಲ್ಲಿ ಪಂಚಪಾಂಡವರ ಸತಿಯಾಗಿ ಆಕೆ ತನ್ನ ಸಿರಿಮುಡಿಯನ್ನು ಬಿಚ್ಚಿ ಸೇಡುತೀರಿಸಿಕೊಂಡರೆ, ಇಲ್ಲಿ ಆಕೆ ತನ್ನ ಐದು ಮಕ್ಕಳ ಅನಾಥ ಪ್ರಜ್ಞೆಯನ್ನು ಕಂಡು ಚಿಂತಾಕ್ರಾಂತಳಾಗಿದ್ದಾಳೆ. ತಾಯಿಯಾಗಿ ತಾನು ಈ ಮಕ್ಕಳಿಗೆ ಏನು ಮಾಡಿದೆ? ಎಂಬ ಪ್ರಶ್ನೆಯೊಂದಿಗೆ ಆತ್ಮಾವಲೋಕನಕ್ಕೆ ತೊಡಗುತ್ತಾಳೆ. ದ್ರೌಪದಿಯ ಜೇಷ್ಠಪುತ್ರ ಕೀರ್ತಿಕುಮಾರ, ಎರಡನೆಯವ ಅಜೇಯ, ಮೂರನೆಯವ ಅಮಥರ, ನಾಲ್ಕನೆಯವ ಸಮರ್ಥ, ಐದನೆಯವ ಮಂಗಳ ಹೀಗೆ ಈ ಐದೂ ಪುತ್ರರೂ ದ್ರೌಪದೇಯರರಾಗಿದ್ದಾರೆ. ಕೀರ್ತಿಕುಮಾರರಾಗಿದ್ದಾರೆ.

ದ್ರೌಪದಿ 14ವರ್ಷ ವನವಾಸ-ಅಜ್ಞಾತವಾಸದಲ್ಲಿದ್ದಾಗ ಈ ಪಂಚ ಮಕ್ಕಳು, ದ್ರೌಪದಿಯ ತಂದೆ ದ್ರುಪದರಾಜನ ಮನೆಯಲ್ಲಿಯೇ ಬೆಳೆಯುತ್ತಾರೆ. 14ವರ್ಷ ತಾಯಿಯಿಂದ ದೂರವಿದ್ದ ಅವರಿಗೆ ಅನಾಥಪ್ರಜ್ಞೆಕಾಡತೊಡಗಿದೆ. ತಾವು ಕುರುಕುಲ ಚಕ್ರವರ್ತಿ ಪಾಂಡುವಿನ ಮೊಮ್ಮಕ್ಕಳಾಗಿದ್ದರೂ, ತಾಯಿಯ ತವರುಮನೆಯಲ್ಲಿ ಬೆಳೆಯುವ ಸ್ಥಿತಿ ತಮಗೆ ಬಂತೆಂದು ಬೇಸರ ವ್ಯಕ್ತಪಡಿಸುತ್ತಾರೆ. 14ವರ್ಷ ತಾಯಿ-ತಂದೆಯರ ಸಾಮೀಪ್ಯವಿಲ್ಲದೆ ಅನಾಥರಾಗಬೇಕಾದ ಸ್ಥಿತಿಯೊದಗಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಇದಕ್ಕೆ ನಾವು ಮಾಡಿದ ತಪ್ಪೇನು? 14 ವರ್ಷಗಳ ನಂತರ ಈಗ ಬಂದಿದ್ದಾಳೆ ದ್ರೌಪದಿ, ತಾನು ಇವರಿಗೆಲ್ಲ ತಾಯಿಯೆಂದು ಹೇಳಿಕೊಂಡು. ಈಗ ನಾವು ನೆನಪಾದೇವು? ಎಂಬುದು ಅವರ ಪ್ರಶ್ನೆ ಇದಕ್ಕೆ ದ್ರೌಪದಿ ಎಷ್ಟೇ ಸಮಜಾಯಷಿಯ ಉತ್ತರಗಳನ್ನು ನೀಡಿದರೂ ಅವರು ಒಪ್ಪುವುದಿಲ್ಲ. 14 ವರ್ಷಗಳ ನಂತರ ಬಂದು ನೋಡಿದರೆ, ಯಾವ ಮಕ್ಕಳಿಗೆ ತಾಯಿಯ ಬಗೆಗೆ ಮಮತೆ ಇರಲು ಸಾಧ್ಯ? ಹೆತ್ತ ಮಾತ್ರಕ್ಕೆ ಮಕ್ಕಳಾಗುವುದಿಲ್ಲ, ಜೋಪಾನ ಮಾಡಿ ಬೆಳೆಸುವುದು, ಮಕ್ಕಳನ್ನು ಪಾಲನೆ ಪೋಷಣೆ ಮಾಡುವುದು ಮುಖ್ಯವಾಗುತ್ತದೆ. ಜನಸಾಮಾನ್ಯರ ತಿಳುವಳಿಕೆ, ಇಲ್ಲಿಯ ಮುಖ್ಯ ಕಥೆಯಾಗಿ ಬೆಳೆದುನಿಂತಿದೆ.

ಸುಭದ್ರೆಯ ಮಗ ಅಭಿಮನ್ಯುವಿನ ಮದುವೆಯ ಸಮಾರಂಭದೊಂದಿಗೆ ಈ ನಾಟಕ ಪ್ರಾರಂಭವಾಗುತ್ತದೆ. ಅಭಿಮನ್ಯುವಿನ ಮದುವೆಗೆಂದು ಬಂದ ಗಣ್ಯರು, ನೆಂಟರಿಷ್ಟರು ಬೇರೆ ಬೇರೆ ಬಿಡಾರಗಳಲ್ಲಿ ಬೀಡುಬಿಟ್ಟಿದ್ದಾರೆ. ಪಾಂಡವರ ಹಿರಿಯ ಪತ್ನಿಯಾದ ದ್ರೌಪದಿ ಇಲ್ಲಿ ಎಲ್ಲ ಬಿಡಾರಗಳಿಗೂ ಭೇಟಿಕೊಟ್ಟು ಮದುವೆಗೆ ಬಂದ ಅತಿಥಿಗಳ ಯೋಗಕ್ಷೇಮ ವಿಚಾರಿಸುತ್ತಾಳೆ. ಅರ್ಜುನನ ಹೆಂಡತಿ ಸುಭದ್ರೆ ಮಾಡಬೇಕಾಗಿದ್ದ ಈ ಕಾರ್ಯವನ್ನು ಹಿರಿಯವಳಾಗಿದ್ದರಿಂದ ದ್ರೌಪದಿಯೇ ಉಪಚರಿಸುತ್ತಿದ್ದಾಳೆ. ಮದ್ರ ದೇಶದ ದೊರೆ ಶಲ್ಯನ ಬಿಡಾರ, ಹಿಂಡಂಬೆಯ ಬಿಡಾರ, ಹೀಗೆ ಹಲವು ಬಿಡಾರಗಳಿಗೆ ಹೋಗಿ ಉಪಚರಿಸುವ ಸಮಯದಲ್ಲಿಯೇ ಐದು ದೃಶ್ಯಗಳು ಮುಗಿದು ಹೋಗುತ್ತವೆ. ಒಂದು ದೃಶ್ಯ ಒಳಗಿನ ದ್ರೌಪದಿ-ಹೊರಗಿನ ದ್ರೌಪದಿಯ ಮುಖಾಮುಖಿಗೆ ಸಂಬಂಧಿಸಿದ್ದು, ಇಲ್ಲಿ ದ್ರೌಪದಿಯ ಆತ್ಮಾವಲೋಕನ ಕ್ರಿಯೆನಡೆದಿದೆ. ಏಳನೇ ದೃಶ್ಯ ಈ ಕಥಾಹಂದರಕ್ಕೆ ಪೂರಕವಾಗದೆ, ಏಕಾಏಕಿ ಒಂದು ಸೇರಿ ಕೊಳ್ಳುತ್ತದೆ. ಹಸ್ತಿನಾಪುರದ ಸಭಾಭವನದಲ್ಲಿ ಈ ದೃಶ್ಯ ನಡೆಯುತ್ತದೆ. 1 ರಿಂದ 6 ದೃಶ್ಯಗಳವರೆಗೆ ಒಂದುಲಿಂಕ್ ಇದೆ. ಆದರೆ ಏಳನೇ ದೃಶ್ಯ ಒಮ್ಮಿಂದೊಮ್ಮೆಲೇ ಬಂದು ಸೇರಿಕೊಂಡುಬಿಡುತ್ತದೆ. ಈ ದೃಶ್ಯದಲ್ಲಿ ಭೀಷ್ಮ ಗಾಂಧಾರಿ, ದುಶ್ಯಾಸನ, ದ್ರೋಣ, ವಿದುರ, ಶಕುನಿ, ಕರ್ಣ, ದುರ್ಯೋಧನ, ಆಚಾರ್ಯ, ದ್ರೌಪದಿ, ಪಂಚಪಾಂಡವರ ಮಕ್ಕಳು ಧೃತರಾಷ್ಟ್ರ, ಭಾನುಮತಿ ಎಲ್ಲರೂ ಸೇರಿಕೊಂಡು ಮತ್ತೊಂದು ಕಥಾಪ್ರಸಂಗವನ್ನು ಸೃಷ್ಟಿಸಿಬಿಡುತ್ತಾರೆ. ಮೊದಲಿನ ಆರು ದೃಶ್ಯಗಳಿಗೂ ಈ ಏಳನೆಯ ದೃಶ್ಯಕ್ಕೂ ಸಂಬಂಧವೇ ಇಲ್ಲದಂತಾಗಿದೆ. ಯಾವುದೇ ಒಂದು ರಂಗಕೃತಿ ದೃಶ್ಯದಿಂದ ದೃಶ್ಯಕ್ಕೆ ಲಿಂಕ್ ಕೊಡುತ್ತಾ ಬೆಳವಣಿಗೆಯಾಗಬೇಕು. ಆದರೆ ಇಲ್ಲಿ ಬರುವ ಕೊನೆಯ ದೃಶ್ಯ ಗೊಂದಲವನ್ನುಂಟುಮಾಡಿದೆ. ಇಲ್ಲಿ ದುಶ್ಯಾಸನನು ಪಶ್ಚಾತಾಪ ಪಟ್ಟುಕೊಂಡು ದ್ರೌಪದಿಯನ್ನು ಅತ್ತಿಗೆಯೆಂದು ಕರೆದು ಅವಳ ಕ್ಷಮೆಯಾಚಿಸುತ್ತಾನೆ. ಭೀಷ, ದ್ರೋಣ, ವಿದುರ ಮೊದಲಾದವರು ಪಾಪಪ್ರಜ್ಞೆಯ ಬಗೆಗೆ ಮಾತನಾಡುತ್ತಾರೆ.

ಏಳನೇಯ ದೃಶ್ಯವೇ ಒಂದು ಪ್ರತ್ಯೇಕ ನಾಟಕವಾಗುವಂತಿದೆ ಇನ್ನೊಂದು ಸಭಾಪರ್ವದ ಕಥಾನಕ ಏಳನೇ ದೃಶ್ಯದಲ್ಲಿಯೇ ಹುಟ್ಟಿಕೊಂಡು, ಅದೇ ದೃಶ್ಯದಲ್ಲಿ ಮುಗಿದುಹೋಗುತ್ತದೆ. ಹೀಗಾಗಿ ಪ್ರಾರಂಭದ ಆರು ದೃಶ್ಯಗಳಿಗೂ, ಏಳನೇ ದೃಶ್ಯಕ್ಕೂ ಸಂಬಂಧವೇ ಇಲ್ಲದಂತಾಗಿದೆ. ಇನ್ನೊಂದು ಸಭಾಪರ್ವವು ಏಳನೇ ದೃಶ್ಯದಲ್ಲಿ ಕಾಣಿಸಿಕೊಂಡು ಬೇಗನೇ ಮುಕ್ತಾಯವಾಗಿಬಿಡುವುದರಿಂದ ಲೇಖಕಿಯ ಆಶಯ ಪಾತ್ರಗಳ ಮೂಳಕ ಬೆಳವಣಿಗೆ ಯಾಗುವುದಿಲ್ಲ. ದ್ರೌಪದಿ ಕೇವಲ ಅಗ್ನಿಯಂತೆ ದಹಿಸುವವಳಲ್ಲ, ಅವಳಲ್ಲಿಯೂ ಅಂತಃಕರಣ-ಕ್ಷಮಾಗುಣಗಳಿವೆ ಯೆಂಬುದನ್ನು ಲೇಖಕಿಗೆ ಹೇಳಬೇಕಾಗಿದೆ. ಉದ್ದೇಶ ಹೀಗಿದ್ದಾಗ ಅಭಿಮನ್ಯುವಿನ ಮದುವೆಯೊಂದಿಗೆ ನಾಟಕವನ್ನು ಪ್ರಾರಂಭಿಸುವ ಅಗತ್ಯವುರಲಿಲ್ಲ. ಮೂಲಭಾರತದ ಸಭಾಪರ್ವಕ್ಕಿಂತ ಭಿನ್ನವಾದ ಸಭಾಪರ್ವವನ್ನು ಮೊದಲನೇ ದೃಶ್ಯದಿಂದಲೇ ಕಟ್ಟಿದ್ದರೆ ಈ ನಾಟಕ ಮಹಾಭಾರತದ ಹೊಸ ಕಥಾನಕವಾಗುತ್ತಿತ್ತು. ಆದರೆ ಕೊನೆಯ ದೃಶ್ಯದಲ್ಲಿ ತಮ್ಮ ಉದ್ದೇಶವನ್ನು ನಾಟಕಕಾರರು ಹೇಳಲು ಹೊರಟಿದ್ದರಿಂದ ಅಲ್ಲಿ ಸ್ಪಷ್ಟತೆ ಕಾಣದೆ, ಗೊಂದಲವುಂಟಾಗಿದೆ.

ದ್ರೌಪದಿಯ ವಸ್ತ್ರಾಪಹರಣ ಪ್ರಸಂಗವು ಅನೇಕ ಮಹಾಭಾರತಗಳ ಪಠ್ಯಗಳ ಮೂಲಕ ಜಗಜ್ಜಾಹಿರಾಗಿದೆ. ಈ ಕಥಾವಸ್ತುವಿಗೆ ಭಿನ್ನವಾದ ಕಥಾನಕವನ್ನು ಕಟ್ಟುವುದು ತಪ್ಪಲ್ಲ. ಆದರೆ ಅದಕ್ಕೆ ತುಂಬಸಿದ್ಧತೆಬೇಕಾಗುತ್ತದೆ. ಪ್ರಾರಂಭದ ದೃಶ್ಯದಿಂದ ಕೊನೆಯ ದೃಶ್ಯದವರೆಗೆ ಆ ಕಥಾನಕ ಬೆಳೆದು ನಿಲ್ಲಬೇಕಾಗುತ್ತದೆ. ಒಂದೇ ದೃಶ್ಯದಲ್ಲಿ ಇನ್ನೊಂದು ಸಭಾಪರ್ವ ಕಾಣಿಸುವುದು, ಅಲ್ಲಿ ದುಶ್ಯಾಸನ ತಾನು ಮಾಡಿದತಪ್ಪಿಗೆ ಪಶ್ಚಾತಾಪ ಪಡುವುದು ಉಳಿದ ಹಿರಿಯರು ಪಾಪಪ್ರಜ್ಞೆಯನ್ನು ವ್ಯಕ್ತಪಡಿಸುವುದು, ದ್ರೌಪದಿ ತನ್ನ ಪ್ರತಿಜ್ಞೆಯನ್ನು ಮರೆತು ಬಿಚ್ಚಿದ ಮುಡಿಯನ್ನು ಎತ್ತಿಕಟ್ಟಿಕೊಳ್ಳುವುದು ಇವೆಲ್ಲ ಸಂಭಾಷಣೆಯ ಹಂತದಲ್ಲಿ ನಿಂತು ಬಿಡುತ್ತವೆಯೇ ಹೊರತು ರಂಗಕ್ರಿಯೆಗಳಾಗಿ ಬೆಳೆಯುವುದಿಲ್ಲ. ಹೀಗಾಗಿ ನಾಟಕ, ಮೊದಲಿದ್ದ ಸಭಾಪರ್ವವನ್ನು ಒಪ್ಪಿಕೊಳ್ಳದೆ, ಇನ್ನೊಂದು ಸಭಾಪರ್ವವನ್ನು ಹೊಸದಾಗಿ ಕಟ್ಟಿಕೊಡದೆ ಗೊಂದಲದ ಸ್ಥಿತಿಯಲಲಿ ನಿಂತುಬಿಡುತ್ತದೆ. ಲಲಿತಾ ಅವರ ಈ ಹೊಸ ಕಥಾನಕ ಕುತೂಹಲಕಾರಿಯಾಗಿದೆ, ಆದರೆ ರಂಗದ ಮೂಲಕ ಅದು ವಿಫಲವಾಯಿತೆನಿಸುತ್ತದೆ.

ಮೂಲ ಕಥಾವಸ್ತುವನ್ನು ಬದಲಿಸಿಕೊಂಡು ಹೊಸತನವನ್ನು ತಂದ ಅನೇಕ ಕೃತಿಗಳು ನಮ್ಮಲ್ಲಿವೆ. ಕನ್ನಡ ಸಾಹಿತ್ಯದಲ್ಲಿ ಪಂಪನೇ ಆ ಕಾರ್ಯವನ್ನು ಪ್ರಥಮವಾಗಿ ಪ್ರಾರಂಭಿಸಿದ್ದಾನೆ. ಪಂಪಭಾರತದಲ್ಲಿ ಅರ್ಜುನ ನಾಯಕ, ಧರ್ಮರಾಯ ನಾಯಕನಲ್ಲ. ತನ್ನನ ಗದಾಯುದ್ಧ ಕೃತಿಯಲ್ಲಿ ದುರ್ಯೋಧನ ಪ್ರತಿನಾಯಕ, ಖಳನಾಯಕನಲ್ಲ. ಕುಮಾರವ್ಯಾಸನ ಗದುಗಿನ ಭಾರತದಲ್ಲಿ ಕೃಷ್ಣನಾಯಕ ಹೀಗೆ ಅನೇಕ ಕವಿಗಳು ತಮ್ಮ ತಮ್ಮ ಸಂದರ್ಭಕ್ಕೆ ತಕ್ಕಂತೆ ಮೂಲಕ ಕಥಾ ವಸ್ತುವಿಗಿಂತ ಭಿನ್ನವಾದ ಕಥಾನಕಗಳನ್ನು ಕಟ್ಟಿಕೊಂಡಿದ್ದಾರೆ. ಇಲ್ಲಿಯೂ ಕೂಡ ಲಲಿತಾ ಅವರು ಅಂತಹ ಪ್ರಯತ್ನ ಮಾಡಿದ್ದಾರೆ. ಆದರೆ ಆ ಪ್ರಯತ್ನ ಕೊನೆಯ ದೃಶ್ಯದಲ್ಲಿ ಮಿಂಚಿ ಮಾಯವಾಗಿಬಿಡುತ್ತೆಯೇ ಹೊರತು, ಪ್ರೇಕ್ಷಕರಲ್ಲಿ ಸ್ಥಾಯಿಯಾಗಿ ನಿಲ್ಲುವುದಿಲ್ಲ. ಇದು ಇವರ ಮೊದಲ ನಾಕಟವಾದುದರಿಂದ, ರಂಗದ ಅನುಭವ ಸಾಲದೇನಿಸುತ್ತದೆ.

ಮೂಲ ಕಥೆಯನ್ನು ಬದಲಿಸುವುದು ಅಷ್ಟು ಸುಲಭದ ಕೆಲಸವಲ್ಲ, ದುಷ್ಟ ದುಶ್ಯಾಸನ ಪಶ್ಚಾತಾಪ ಪಡುವ ಪಾತ್ರವೇ ಅಲ್ಲ. ಒಮ್ಮಿಂದೊಮ್ಮೆಗೆ ಉಲ್ಟಾಕಥೆಯನ್ನು ಹೇಳಹೊರಟರೆ ಪ್ರೇಕ್ಷಕರು ಒಪ್ಪಿಕೊಳ್ಳುವುದಿಲ್ಲ. ಒಂದು ವೇಳೆ ಹಾಗೆ ಹೇಳುವುದೇ ಉದ್ದೇಶವಾಗಿದ್ದರೆ ಅಂತಹ ಕಥಾನಕವನ್ನು ಮೊದಲನೇ ದೃಶ್ಯದಿಂದಲೇ ಕಟ್ಟಿಕೊಳ್ಳುತ್ತ ಹೋಗಬೇಕಾಗುತ್ತದೆ. ಇಲ್ಲಿ ಹಾಗಾಗಿಲ್ಲ, ಹೀಗಾಗಿ ಲೇಖಕಿಯ ಉದ್ದೇಶ, ಹೊಸತನ ಪ್ರೇಕ್ಷಕರಿಗೆ ಗಾಢವಾಗಿ ತಟ್ಟುವುದಿಲ್ಲ.

ಕಥೇ-ಕಾದಂಬರಿಯಂತೆ ಕೇವಲ ಹೊಸಕಥೆಯನ್ನು ಹೇಳುವುದರಿಂದ ರಂಗಕೃತಿ ಯಶಸ್ವಿಯಾಗುವುದಿಲ್ಲ. ರಂಗಭೂಮಿಯಲ್ಲಿ ಕಥೆಯಷ್ಟೇ, ರಂಗಸಾಧ್ಯತೆಗಳು ಮುಖ್ಯವಾಗುತ್ತವೆ. ನಾಟಕ ಮನರಂಜನೆಯ ಮಾಧ್ಯಮವೂ ಆಗಿದೆ. ಮನರಂಜನೆಯ ಮೂಲಕವೇ ಹೊಸ ಕಥೆಯನ್ನು ಹೇಳಿದರೆ ಪ್ರೇಕ್ಷಕರು ಸ್ವಾಗತಿಸುತ್ತಾರೆ. ಅದು ಬಿಟ್ಟು ನನಗೆ ಏನನ್ನೋ ಹೇಳುವುದಿದೆಯೆಂದು ಬರೀ ಕಥೆಯನ್ನೇ ಹೇಳುತ್ತ ಹೋದರೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೇ ಹೋಗುತ್ತದೆ.

ಕುವೆಂಪು ಅವರು ತಮ್ಮ “ಶೂದ್ರತಪಸ್ವಿ” ನಾಟಕದಲ್ಲಿ ಹೊಸ ರಾಮನನ್ನೇ ಸೃಷ್ಟಿಮಾಡಿದ್ದಾರೆ. ಮೂಲ ರಾಮಾಯಣದಲ್ಲಿ ಬರುವ ರಾಮನು ಬ್ರಾಹ್ಮಣನ ಮಾತನ್ನು ಕೇಳಿಕೊಂಡು ಶೂದ್ರತಪಸ್ವಿಯನ್ನು ಕೊಂದು ಹಾಕಿದರೆ, ಕುವೆಂಪು ರಚಿತ “ಶೂದ್ರತಪಸ್ವಿ” ನಾಟಕದ ರಾಮನು, ಶೂದ್ರತಪಸ್ವಿಗೆ ಪಾದಮುಟ್ಟಿ ನಮೀಸುತ್ತಾನೆ. ಗೌರವಿಸುತ್ತಾನೆ. ರಾಮನು ಬಿಟ್ಟ ಬಾಣವು ಬ್ರಾಹ್ಮಣನನ್ನೇ ಕೊಲ್ಲಲು ಹೋದಾಗ ಬ್ರಾಹ್ಮಣನೇ ಬಂದು ರಾಮನಲ್ಲಿ ಪ್ರಾಣಭಿಕ್ಷೆ ಕೇಳುತ್ತಾನೆ. ಹೀಗೆ ಮೂಲ ಕಥೆಯನ್ನು ಅನೇಖ ಲೇಖಕರು ಬದಲಿಸಿಕೊಂಡು ತಮ್ಮ ಕಾದಂಬರಿ, ನಾಟಕಗಳನ್ನು ರಚಿಸಿದ್ದಾರೆ. ಅದೇ ರೀತಿ ಇಲ್ಲಿ ಲಲಿತಾ ಸಿದ್ಧಬಸವಯ್ಯನವರು ದ್ರೌಪದಿಯನ್ನು ಮಹಾತಾಯಿಯಂತೆ, ಸಹನಾಮಯಿಯಂತೆ ಚಿತ್ರಿಸಲು ಹೊರಟಿದ್ದಾರೆ. ತಾಯ್ತನದ ಹಿರಿಮೆಯನ್ನು ಹೇಳಿದ್ದಾರೆ. ಆದರೆ ಅದು ರಂಗದ ಮೇಲೆ ಸ್ಪಷ್ಟವಾಗಿ ಅಭಿವ್ಯಕ್ತಗೊಳ್ಳುವುದಿಲ್ಲ. ಆದರೆ ದ್ರೌಪದಿ ಪಾತ್ರ ಇಲ್ಲಿ ಹೊಸ ರೂಪದಲ್ಲಿ ಕಾಣಿಸಿಕೊಂಡಿದೆ.

ಈ ನಾಟಕದ ಪ್ರಾರಂಭದಲ್ಲಿ ಈ ನಾಟಕದ ಉದ್ದೇಶವನ್ನು ಕುರಿತು ಲಲಿತಾ ಸಿದ್ಧಬಸವಯ್ಯ ಅವರು ಹೀಗೆ ಬರೆಯುತ್ತಾರೆ. “ಇಲ್ಲಿನ ಆಲೋಚನಾ ಸರಣಿಗೆ ಯಾವ ಪಾಠಾಂತರವನ್ನೂ ನಾನು ಅವಲಂಬಿಸಿಲ್ಲ. ಅವಲಂಬಿಸಿದ್ದೇ ಆದರೆ ಅದು ಜಗತ್ತಿನ ಎಲ್ಲ ತಾಯಂದಿರಲ್ಲಿರುವ ಮಕ್ಕಳ ಮೇಲಿನ ಮೋಹವೆಂಬ ತತ್ವವನ್ನು ಮಾತ್ರ” (ಪು:4) ಎಲ್ಲ ತಾಯಂದಿರರಿಗೂ ತಮ್ಮ ಮಕ್ಕಳ ಮೇಲೆ ಮೋಹ, ವಾತ್ಸಲ್ಯ ಇದ್ದೇ ಇರುತ್ತದೆ. ಅದು ದ್ರೌಪದಿಯಲ್ಲಿಯೂ ಇರುತ್ತದೆ. ಇದರಲ್ಲಿ ವಿಶೇಷವೇನಿಲ್ಲ. ಇದೊಂದೇ ವಸ್ತುವನ್ನಿಟ್ಟುಕೊಂಡು ನಾಟಕ ರಚಿಸಿದರೆ ಹೇಗೆ ನಾಟಕವೊಂದು ರಂಗಕೃತಿ, ಇಲ್ಲಿ ಪ್ರೇಕ್ಷಕರು ಪ್ರಮುಖರಾಗುತ್ತಾರೆ. ನಾಟಕ ರಚಿಸುವ ಪ್ರತಿಯೊಬ್ಬ ಲೇಖಕರಿಗೂ ರಂಗಪ್ರಜ್ಞೆ ತುಂಬ ಅಗತ್ಯ. ಇದನ್ನು ಎಲ್ಲ ನಾಟಕಕಾರರೂ ಗಮನಿಸಬೇಕಾಗುತ್ತದೆ.

ಕತೆ-ಕಾದಂಬರಿಗಳ ಹಾಗೆ ಬರೆದು ಕುಳೀತರೆ ನಾಟಕ-ರಂಗಕೃತಿಯಾಗುವುದಿಲ್ಲ. ಇಲ್ಲಿ ವಿರಾಟಪರ್ವದ ನಂತರ ಇನ್ನೊಂದು ಸಭಾಪರ್ವ ಬಂದಿದೆ. ಇದರ ಔಚಿತ್ಯವನ್ನು ಪ್ರೇಕ್ಷಕ ಪ್ರಶ್ನಿಸುತ್ತಾನೆ. ಪ್ರಾರಂಭದಿಂದ ಕೊನೇವರೆಗೂ ಇನ್ನೊಂದು ಸಭಾ ಪರ್ವದ ಬಗೆಗೆ ಬರೆದಿದ್ದರೆ, ಅದಕ್ಕೊಂದು ಆವರಣದಕ್ಕುತ್ತಿತ್ತು. ಲಲಿತಾ ಸಿದ್ಧಬಸವಯ್ಯನವರು ಮಹತ್ವದ ಕವಯತ್ರಿ, ಅವರು ಮಹತ್ವದ ನಾಟಕಗಳನ್ನು ರಚಿಸಬಲ್ಲರೆಂಬುದಕ್ಕೆ ಈ ನಾಟಕದಲ್ಲಿಯೇ ಅನೇಕ ವಿಶಿಷ್ಟತೆಗಳನ್ನು ತಂದಿದ್ದಾರೆ. ಇವರ ಸಂಭಾಷಣೆಗಳು ತುಂಬ ಪವರ್ ಫುಲ್ ಆಗಿವೆ, ಅಷ್ಟೇ ಮೀನಿಂಗ್‍ಫುಲ್ ಆಗಿವೆ. ಇಲ್ಲಿ ಬಂದಿರುವ ಪಡೆನುಡಿಗಳು, ಗಾದೆಮಾತುಗಳು ನಾಟಕಕ್ಕೆ ಕಳೆಕಟ್ಟಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಉದಾಹರಿಸಬಹುದಾಗಿದೆ.

ಈ ನಾಟಕದಲ್ಲಿರುವ ಗಾದೆಮಾತುಗಳು ಮತ್ತು ಒಗಟುಗಳು

1.ಕೋತಿ ಕೈಲಿ ಮಾಣಿಕ್ಯ ಕೊಟ್ರೆ ಕಚ್ಚಿ ನೋಡಿ ನೆಲಕ್ಕುಗಿಯುತ್ತೆ (ಪು:8)
2.ನಾಯಿಯ ಬಾಲಕ್ಕೆ ದಬ್ಬೆ ಕಟ್ಟಿದಂತೆ (ಪು:17)
3.ಬರಗೆಟ್ಟ ಊರಿಗೆ ಮಳೆಬಂದಂತೆ (ಪು:43)
4.ಚೋಟುದ್ದ ಹುಡುಗಿಗೆ ಮಾರುದ್ದ ಜಡೆ (ಒಗಟು, ಪು:5)
5.ಹುಡ್ಗಿ ದೀಪ ಹಚ್ತಾಳೇ, ಹುಡ್ಗ ದೀಪ ಆರಿಸ್ತಾನೆ (ಒಗಟು, ಪು:5)

ಈ ಗಾದೆಮಾತುಗಳು, ಒಗಟುಗಳು ತುಂಬ ಪರಿಣಾಮವನ್ನುಂಟು ಮಾಡಿವೆ. ಗ್ರಾಮೀಣ ಬದುಕಿನಿಂದ ಬಂದ ಲಲಿತಾ ಅವರು ಇಲ್ಲೆ ಆ ನೆಲದ ಮಾತನ್ನು ಸಹಜವಾಗಿ, ಆಯಾ ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ಇವರು ಬಳಸಿದ ಪಡೆನುಡಿಗಳು ಹೀಗಿವೆ.

1.ನಾವಿಲ್ಲಿ ಸುರಕೊಂಡ ಸುಖ ಅಷ್ಟರಲ್ಲೇ ಇದೆ. (ಪು:9)
2.ನನ್ನ ಮಾನ ಇಟ್ಟಾಡಿ ಹೋಗ್ತದೆ
3.ನಿಮ್ಮಮ್ಮ ಬೆಂಡುಗೀಲಿದ್ದಾಳೆ
4.ಅಸ್ತ್ರವೂ ಆಯ್ತು ಪ್ರಸ್ತವೂ ಆಯ್ತು

ಹೀಗೆ ಅನೇಕ ಗಾದೆಮಾತು-ಪಡೆನುಡಿ-ಒಗಟುಗಳಿಂದ ನಾಟಕ ತುಂಬ ವಿಶಿಷ್ಟವಾಗಿ ಕಾಣಿಸುತ್ತದೆ. “ಕಣ್ಣು ಕಂಡಿದ್ದು, ಬಾಯಿ ಉಂಡಿದ್ದು ಮುಗಿದ ಮೇಲೆ ಒಳಗಣ್ಣು ತೆರೆಯ ತೊಡಗುತ್ತದೆ” (ಪು:38) ಎಂಬ ನುಡಿಯನ್ನು ಒಳಗಿನ ದ್ರೌಪದಿ ಹೇಳುತ್ತಾಳೆ. ಈ ಮಾತು ಆತ್ಮಾವಲೋಕನದ ಪ್ರತೀಕವಾಗಿದೆ. ಮೂರನೇ ದೃಶ್ಯದಲ್ಲಿ ಉಪಪಾಂಡವರ ಹಿರಿಯ ಪುತ್ರ ಆಡುವ ಮಾತುಗಳು ತುಂಬ ಪರಿಣಾಮಕಾರಿಯಾಗಿವೆ.

“ಗುರುತುಬೇಕು ತಾಯೀ ನಮಗೆ ಗುರುತುಬೇಕು... ಹಸ್ತಿನಾವತಿಯಲ್ಲದಿದ್ದರೂ ಇಂದ್ರಪ್ರಸ್ಥವಾದರೂ ನನಗೆ ಮುಸುಕು ಮಸುಕಾಗಿದೆ. ಆದರೆ ಈ ನನ್ನ ತಮ್ಮಂದಿರಿಗೆ ಇಂದ್ರಪ್ರಸ್ಥವೂ ಇಲ್ಲ, ಹಸ್ತಿನಾವತಿಯೂ ಇಲ್ಲ. ಅವರಿಗೆ ತಮ್ಮದೇನ್ನುವ ನೆನಪುಗಳೇ ಇಲ್ಲ ತಾಯೀ... ಸ್ವಂತದ್ದೆನ್ನುವ ಊರಿಲ್ಲದ, ಸ್ವಂತ ನೆನಪುಗಳಿಲ್ಲದ ಬದುಕೊಂದು ಬದುಕೇ ಹೇಳು? ನಾವು ದ್ರುಪದರಾಜನ ಮನೆಯ ನೆಂಟರು ಅದೇ... ಅದೇ... ನೆಂಟರೆಂಬುದೇ ನಮ್ಮ ಗುರುತಾಗಿ ಹೋಗಿದೆ... ನೆಂಟರು ಎಂದೂ ಮನೆಯವರಾಗುವುದಿಲ್ಲ ತಾಯೀ... ನೆಂಟರು ಎಂದೂ ಮನೆಯವರಾಗುವುದಿಲ್ಲ. ಅವರದು ಒಳಗೊಂದು ಕಾಲು, ಹೊರಗೊಂದು ಕಾಲು... ಅಜ್ಜನ ಮನೆಯೊಳಗೆ ಒಂದು ಕಾಲಿಟ್ಟಿರುವ ನಮಗೆ ಇನ್ನೊಂದು ಕಾಲೂರಲು ತಾವೇ ಇಲ್ಲ. ಒಂಟಿ ಕಾಲಲ್ಲೇ ನಿಂತಿದ್ದೇವೆ... ತಾಯೀ ತೋರಿಸು... ಈಗಲಾದರೂ ನಮ್ಮ ಎರಡೂ ಕಾಲುಗಳನ್ನು ಒಂದೆಡೆ ಊರಬಹುದಾದ ನಮ್ಮ ತಾತನನ್ನು ನಮಗೆ ತೋರಿಸು, ನಮಗೆ ಸಾಕಾಗಿ ಹೋಗಿದೆ. ಈ ಪರದೇಸಿತನ ಸಾಕಾಗಿ ಹೋಗಿದೆ” (ಪು:25)

ಇದೇ ದೃಶ್ಯದಲ್ಲಿ ಎರಡನೇ ಮಗ ಹೀಗೆ ಹೇಳುತ್ತಾನೆ. “ಥೂ... ನಿಲ್ಲಿಸಮ್ಮ ಸಾಕು... ನಿನಗೆ ನಾಚಿಕೆಯಿಲ್ಲ ವೆಂದರೆ ನಮಗೂ ಇಲ್ಲವೇ... ಧರ್ಮೇಯ... ಪಾರ್ಥೇಯ... ಥೂ... ಆ ಹೆಸರುಗಳಿಂದ ನಮ್ಮನ್ನು ಕರೆಯಬೇಡ. ಅದರ ಬದಲು ನಾವು ದ್ರೌಪದೇಯರಾಗೇ ಉಳಿಯುತ್ತೇವೆ. (ಪು:25) ಇಂತಹ ಪವರ್ ಫುಲ್ ಸಂಭಾಷಣೆ ಗಳಿಂದ ನಾಟಕ ಗಮನ ಸೆಳೆಯುತ್ತದೆ. ಮಕ್ಕಳ ಇಂತಹ ಮಾತುಗಳನ್ನು ಕೇಳಿ ದ್ರೌಪದಿ ಕಲ್ಲಾಗಿ ನಿಂತು ಬಿಡುತ್ತಾಳೆ. ಇಲ್ಲಿ ಲಲಿತಾ ಸಿದ್ಧಬಸವಯ್ಯ ಮಹತ್ವದ ನಾಟಕಕಾರರಾಗಿ ಕಾಣಿಸಿಕೊಳ್ಳುತ್ತಾರೆ. ಇದೇ ಕಥಾನಕವನ್ನು ಮುಂದುವರಿಸಿದ್ದರೆ, ಇದೊಂದು ಅಸ್ತಿತ್ವವಾದದ ಬಗೆಗಿನ ಮಹತ್ವದ ನಾಟಕವಾಗುತ್ತಿತ್ತು. ಅನಾಥ ಪ್ರಜ್ಞೆಯಿಂದ ಪರಿತಪಿಸುವ ಈ ಉಪಪಾಂಡವರ ಬಗೆಗೆ ಇದುವರೆಗೆ ಯಾರೂ ಗಮನ ಕೊಟ್ಟಿಲ್ಲ. ಪಂಪನ ಆದಿನಾಥ ಪುರಾಣದ ಕಥೇಯೂ ಅಷ್ಟೆ. ಭರತ-ಬಾಹುಬಲಿಗಳ ಕಥಾನಕಗಳೇ ಪ್ರಸಿದ್ಧಿ ಪಡೆದಿವೆ. ನೂರು ಜನ ಸೋದರರ ನೆನಪು ಯಾರಿಗೂ ಆಗುವುದಿಲ್ಲ. ಬಾಹುಬಲಿಯಷ್ಟೇ, ನೂರಜನ ಸೋದರರು ಭರತನ ವಿರುದ್ಧ ಬಂಡಾಯ ವೇಳುತ್ತಾರೆ. ಬಾಹುಬಲಿ ನೇರವಾಗಿ ಭರತನ ವಿರುದ್ಧ ಯುದ್ಧಕ್ಕೆ ನಿಂತರೆ, ನೂರುಜನ ಸೋದರರು ಭರತನ ವಿರುದ್ಧ ಯುದ್ಧಕ್ಕೆ ನಿಂತರೆ, ನೂರುಜನ ಸೋದರರು ಭರತನ ಏಕಚಕ್ರಾಧಿಪತಿಯೆಂಬ ಅಹಂಭಾವವನ್ನು ವಿರೋಧಿಸಿ ಊರನ್ನೇ ಬಿಟ್ಟು ಹೋಗುತ್ತಾರೆ. ನನ್ನ ‘ಭರತ-ಬಾಹುಬಲಿ’ ನಾಟಕದಲ್ಲಿ ನಾನಿದನ್ನು ಸ್ಪಷ್ಟಪಡಿಸಿದ್ದೇನೆ. ಅದೇ ರೀತಿ ಇಲ್ಲಿ ಲಲಿತಾ ಅವರು ಆಯ್ದುಕೊಂಡಿರುವ ಉಪಪಾಂಡವರ ಕಥಾನಕ ಉಂಬ ಮನ ಮಿಡಿಯುವಂತಿದೆ.

ಈ ನಾಟಕದಲ್ಲಿ ದೋಷಗಳು ಕಡಿಮೆ. ಅಂಕಿಗಳೆಲ್ಲ ಕನ್ನಡದಲ್ಲಿರದೆ ಇಂಗ್ಲಿಷ್‍ನಲ್ಲಿವೆ ಸ್ವತಂತ್ರ ಕೃತಿಗೆ, ಸಂಪಾದಕರು ಏಕೆಬೇಕು? ಹಲವು ನಾಟಕಗಳ ಸಂಕಲನವಾಗಿದ್ದರೆ ಸಂಪಾದಕಬೇಕಾಗುತ್ತದೆ. ಒಂದೇ ನಾಟಕಕ್ಕೆ ಸಂಪಾದಕ ಏಕೆ ಬೇಕು? ಮುಂದೆ ನಾಟಕದ ಹಕ್ಕಿನ ಪ್ರರ್ಶನೆ ಬಂದಾಗ ಸಮಸ್ಯೆಗಳೇಳುತ್ತವೆ. ಈ ನಾಟಕಕ್ಕೆ ಸಂಪಾದಕನ ಅಗತ್ಯವಿರಲಿಲ್ಲ. ಇಂತಹ ಕೆಲವು ಸಂಗತಿಗಳಿದ್ದರೂ ನಾಟಕ ಹೊಸತನ್ನು ಹೇಳುವಲ್ಲಿ ಯಶಸ್ವಿ ಯಾಗಿದೆ.

ಲಲಿತಾ ಸಿದ್ಧಬಸವಯ್ಯ ತುಂಬ ಗಟ್ಟಿಯಾಗಿ ಬರೆಯುತ್ತಿರುವ ಕನ್ನಡದ ಸೃಜನಶೀಲ ಲೇಖಕರಲ್ಲಿ ಒಬ್ಬರಾಗಿದ್ದಾರೆ. ಅವರಿಗೆ ದಟ್ಟವಾದ ಜೀವನಾನುಭವವಿದೆ. ಭಾಷೆಯನ್ನು ಸಮರ್ಥವಾಗಿ ಬಳಸುವ ಶಕ್ತಿಯಿದೆ. ಹೊಸ ರೀತಿಯಿಂದ ಚಿಂತಿಸಬಲ್ಲ ಸೃಜನಶೀಲ ಮನಸ್ಸಿದೆ. ಇವರಿಂದ ಇನ್ನೂ ಮಹತ್ವದ ನಾಟಕಗಳು ಬರಲೆಂದು ಆಶಿಸುತ್ತೇನೆ. ನಾಟಕ ರಚನೆಯಲ್ಲಿ ಸಮರ್ಥ ಮಹಿಳೆಯರ ಸಂಖ್ಯೆ ಕಡಿಮೆ ಇರುವ ಈ ಕಾಲಘಟ್ಟದಲ್ಲಿ ಲಲಿತಾ ಅವರು ರಂಘಭೂಮಿಯಲ್ಲಿ ಎತ್ತರೆತ್ತರಕೆ ಬೆಳೆಯಲೆಂಬ ಕಾರಣದಿಂದ ವಸ್ತುನಿಷ್ಠವಾಗಿ ಈ ನಾಟಕದ ಬಗೆಗೆ ನಾಲ್ಕು ಮಾತು ಬರೆದಿದ್ದೇನೆ. ರಂಗಭೂಮಿ ಅತ್ಯಂತ ಪ್ರಬಲವಾದ ಮಾಧ್ಯಮ. ಇದೊಂದು ಸಾಮುದಾಯಿಕ ಕಲೆ. ಇಲ್ಲಿ ಒಂದು ನಾಟಕ ಸತ್ವಯುತವಿದ್ದರೆ ಸಾಲದು, ಅದನ್ನು ಆಡುವ ಕಲಾವಿದರು, ನಿರ್ದೇಶಕರು, ಗಾಯಕರು, ರಂಗಪರಿಕರಗಳು ಅಷ್ಟೇ ಮುಖ್ಯವಾಗುತ್ತವೆ. ಈ ನೆಲೆಯಲ್ಲಿ ನಮ್ಮ ನಾಟಕಕಾರ್ತಿಯರು ಆಲೋಚಿಸಬೇಕೆಂಬುದೇ ನನ್ನ ಒತ್ತಾಸೆಯಾಗಿದೆ.

ಡಾ. ಬಸವರಾಜ ಸಬರದ
ಮೊಬೈಲ್ ನಂ: 9886619220

ಈ ಅಂಕಣದ ಹಿಂದಿನ ಬರಹಗಳು:
ಎಂ. ಉಷಾ ಅವರ-“ಶೂಲಿ ಹಬ್ಬ” (2015)
ಪಿ. ಚಂದ್ರಿಕಾ ಅವರ “ಮೋದಾಳಿ”
ದು.ಸರಸ್ವತಿಯವರ-“ರಾಮಾಯ್ಣ”
ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ
ಮಹಿಳಾ ರಂಗಭೂಮಿ ಪರಂಪರೆ


MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...