ಲೇಖಕ ತನ್ನ ಕೃತಿ ಕುರಿತು ಬರುವ ಹೊಗಳಿಕೆಯನ್ನು ಅನುಮಾನದಿಂದ ನೋಡಬೇಕು: ಜೋಗಿ

Date: 07-04-2024

Location: ಬೆಂಗಳೂರು


ಬೆಂಗಳೂರು: ಟೋಟಲ್‌ ಕನ್ನಡ ಆಶ್ರಯದಿಂದ ಲೇಖಕ ಭಗೀರಥ ಅವರ 'ಅಮೀಬಾ' ಕಾದಂಬರಿಯ ಲೋಕಾರ್ಪಣಾ ಕಾರ್ಯಕ್ರಮವು 2024 ಏಪ್ರಿಲ್ 07, ಭಾನುವಾರದಂದು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ನಡೆಯಿತು.

ಹಿರಿಯ ಚಲನಚಿತ್ರ ಸಂಭಾಷಣಕಾರ, ನಿರ್ದೇಶಕ ಗುರುರಾಜ್ ದೇಸಾಯಿ ಮಾತನಾಡಿ, “ಭಗೀರಥ ಎಲ್ಲಾ ಕೆಲಸವನ್ನು ಕೂಡ ಶೃದ್ಧೆಯಿಂದ ಮಾಡುತ್ತಾನೆ. ಅದರ ಪ್ರತಿಫಲವೇ ‘ಅಮೀಬಾ’. ಇದೊಂದು ತಂತ್ರಜ್ಞಾನದ ಕುರಿತ ಕಾದಂಬರಿಯಾಗಿದ್ದು, ಮಧ್ಯಮ ವರ್ಗದ ಜನರ ಪಾಡು, ಭವನೆ, ಸಾಧಿಸುವ ಛಲವಿದ್ದರೂ ಆರ್ಥಿಕ ಪರಿಸ್ಥಿತಿ ಹೀಗೆ ಹಲವಾರು ವಿಚಾರಗಳನ್ನು ಮುಖ್ಯ ಪಾತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ. ಸಾಮಾನ್ಯ ವರ್ಗದ ವ್ಯಕ್ತಿಯೊಬ್ಬ ತನ್ನ ಅರಿವಿನ ತಂತ್ರಜ್ಞಾನದ ಮೂಲಕ ತನ್ನದೇ ಹೆಸರಿನ ಬಿಟ್ ಕಾಯಿನ್ ಅನ್ನು ರೆಡಿ ಮಾಡುತ್ತಾನೆ. ಅಲ್ಲಿಯ ವರೆಗೂ ಈ ಕಾದಂಬರಿಯ ಕತೆ ವಿಸ್ತರಿಸಿಕೊಂಡಿದೆ,” ಎಂದರು.

ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದ ಲೇಖಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಮಾತನಾಡಿ, “ಲೇಖಕರೆಲ್ಲರೂ ತಮ್ಮ ಕಾದಂಬರಿಯ ಕುರಿತು ಬರುವಂತಹ ಹೊಗಳಿಕೆಯನ್ನು ಅನುಮಾನದಿಂದ ನೋಡಿ, ಓದುಗರು ಕೃತಿಗಳ ಬಗ್ಗೆ ಬರುವಂತಹ ಹೊಗಳಿಕೆಯನ್ನು ಬಹಳ ಮುಕ್ತವಾಗಿ ಸ್ವೀಕರಿಸಿ. ಹಾಗೆಯೇ ಲೇಖಕರು ತಮ್ಮ ಬಗ್ಗೆ ಬರುವಂತಹ ಟೀಕೆಗಳನ್ನು ನಿಜವೆಂದು ನಂಬಿ, ಓದುಗರು ಟೀಕೆಗಳನ್ನು ತಿರಸ್ಕರಿಸಿ. ಆಗಲೇ ಸಾಹಿತ್ಯ ಉಳಿಯುತ್ತದೆ, ಬೆಳೆಯುತ್ತದೆ,” ಎಂದರು.

ಮೈಂಡ್‌ಫುಲ್‌ ಮೀಡಿಯಾ ನಿರ್ದೇಶಕ ಅನಂತ ಚಿನಿವಾರ್‌ ಮಾತನಾಡಿ, “ಜೀವನದಲ್ಲಿ ಏನನ್ನದಾರೂ ಸಾಧಿಸಬೇಕು ಅನ್ನುವಂತಹ ವ್ಯಕ್ತಿ ಭಗೀರಥ. ಅವರ ‘ಅಮೀಬಾ’ ಕಾದಂಬರಿಯ ವಸ್ತು ಒಂದು ವ್ಯವಸ್ಥೆಯ ಬಗೆಗೆ ಅಂದರೆ ಬಿಟ್ ಕಾಯಿನ್, ಬೆಟ್ಟಿಂಗ್ ಆ್ಯಪ್‌, ಕ್ರಿಪ್ಟೋ, ಡ್ರಗ್ಸ್ ಹೀಗೆ ಎಲ್ಲಾ ಸ್ಕ್ಯಾಂಡಲ್ ಗಳನ್ನು ನಾವು ಹಲವು ವರ್ಷಗಳಿಂದ ನೋಡುತ್ತಿದ್ದೇವೆ. ತನ್ನದೇ ಆದಂತಹ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದೆ. ಹೀಗೆ ಇವೆಲ್ಲವನ್ನೂ ಕೂಡ ಈ ಕೃತಿಯು ತಿಳಿಸುತ್ತದೆ,” ಎಂದರು.

“ಸಾಹಿತ್ಯದಲ್ಲಿ ಕೂಡ ನಾಲ್ಕಾರು ಜನರ ಸಮೂಹವಿದೆ. ಆ ಸಮೂಹವೇ ಸಾಹಿತ್ಯವನ್ನು ನಿಯಂತ್ರಿಸುತ್ತಿದೆ. ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ಸಮೂಹಗಳು ಸಾಹಿತ್ಯವನ್ನು ನಿಯಂತ್ರಿಸಿಕೊಂಡು ಬರುತ್ತಿದೆ. ಆದರೆ ಒಂದು ಕಾಲದಲ್ಲಿ ಇದ್ದಂತಹ ಪಟ್ಟಭದ್ರ ಹಿತಾಸಕ್ತಿಗಳ ಸಮೂಹ ಅವು ಶ್ರೇಷ್ಠತೆಯನ್ನು ತಿಳಿಸುತ್ತಾ, ತಮ್ಮ ವೈಯಕ್ತಿಕ ಇಷ್ಟ ಕಷ್ಟಗಳನ್ನು ಕೂಡ ತರುತ್ತಿದ್ದರು. ಇಷ್ಟವಾದವರನ್ನು ಕೂಡ ಕೆಲವೊಂದು ವಿಚಾರಗಳಲ್ಲಿ ವಿರೋಧಿಸುತ್ತಿದ್ದರು. ಹೀಗೆ ಮೂಲಭೂತವಾಗಿ ಒಂದು ಶ್ರೇಷ್ಠತೆಯ ಹುಡುಕಾಟ ಆ ಸಮೂಹಗಳಲ್ಲಿ ಇರುತ್ತಿತ್ತು. ಹಾಗಾಗಿ ಶ್ರೇಷ್ಠ ಸಾಹಿತ್ಯವೆಂದು ಮಾಸ್ತಿ ಅವರ ಕಾಲಘಟ್ಟದಿಂದ ಶುರುವಾಗಿ ಇಂದಿನ ಜಯಂತ್ ಕಾಯ್ಕಿಣಿ, ವಸುಧೇಂದ್ರ, ಜೋಗಿ ಅವರ ತಲೆಮಾರಿಗೆ ಬಂದು ನಿಲ್ಲುತ್ತೆ. ಅಲ್ಲಿಂದ ಶ್ರೇಷ್ಠ ಅನ್ನುವಂತಹ ಸಾಹಿತ್ಯ ನಮ್ಮಲ್ಲಿ ಬಂದಿಲ್ಲವೇ?.. ಬಂದಿಲ್ಲವೆಂದರೆ ಏಕೆ ಬಂದಿಲ್ಲ?.. ಬಂದಿದ್ದರೆ ಅದು ಏಕೆ ನಮಗೆ ಕಂಡಿಲ್ಲ.. ಹೀಗೆ ಹಲವಾರು ರೀತಿಯ ಪ್ರಶ್ನೆಗಳು ಸಾಹಿತ್ಯದ ಹುಡುಕಾಟದಲ್ಲಿ ನಮಗೆ ಕಾಣಸಿಗುತ್ತದೆ,” ಎಂದು ತಿಳಿಸಿದರು.

ಲೇಖಕಿ ಯಶೋಮತಿ ರವಿಬೆಳಗೆರೆ ಮಾತನಾಡಿ, “ಕ್ರೈಂ ಸ್ಟೋರಿಗೆ ಅಮೀಬಾ ಅನ್ನುವಂತಹ ಶೀರ್ಷಿಕೆ ಬಹಳ ಸೂಕ್ತವಾಗಿದೆ. ಅದರ ಆಳವನ್ನು ತಿಳಿಯಬೇಕಾದರೆ ಪ್ರತಿಯೊಬ್ಬರೂ ಕೂಡ ಆ ಪುಸ್ತಕವನ್ನು ಓದಲೇಬೇಕು,” ಎಂದು ಹೇಳಿದರು.

ನಟ ನೆನಪಿರಲಿ ಪ್ರೇಮ್‌ ಮಾತನಾಡಿ, “ಇಡೀ ಪ್ರಪಂಚವು ಅನ್ನದ ಮೇಲೆ ಎಷ್ಟು ಅವಲಂಬಿತವಾಗಿದೆಯೋ ಅಷ್ಟೇ ಅಕ್ಷರದ ಮೇಲೆಯೂ ಅವಲಂಬಿತವಾಗಿದೆ. ಬರಹಗಾರರು ಯಾವುದೇ ತರಹದ ಹಣದ ನಿರೀಕ್ಷೆಯಿಲ್ಲದೇ ಸಾಹಿತ್ಯಿಕವಾಗಿ ತೊಡಗಿಕೊಂಡಿದ್ದಾರೆ. ನಿಜಕ್ಕೂ ಅವರು ಬಹಳ ಶ್ರೇಷ್ಠರು. ಇನ್ನು ಅಮೀಬಾಕ್ಕೆ ಯಾವುದೇ ಆಕರವಿಲ್ಲ. ಹಾಗೆಯೇ ಪುಸ್ತಕವನ್ನು ಕೂಡ ನಿರ್ದಿಷ್ಟ ಆಕರವನ್ನು ನೀಡಿ ಓದದೇ, ಓದಿದ ಮೇಲೆ ಅದಕ್ಕೆ ಆಕರ ನೀಡುವುದು ಸೂಕ್ತವೆಂದು ನನ್ನ ಅನಿಸಿಕೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಖ್ಯಾತ ನಿರ್ದೇಶಕ ಎ. ಪಿ. ಅರ್ಜುನ್‌ ಮಾತನಾಡಿ, “ಅಕ್ಷರ ಜ್ಞಾನ ಅನ್ನುವಂತಹದ್ದು ನಮ್ಮ ಬಾಲ್ಯದಿಂದಲೇ ಶುರುವಾಗುತ್ತದೆ. ಹೀಗೆ ಶುರುವಾದ ಅಕ್ಷರ ಜ್ಞಾನ ನಮ್ಮ ಇಡೀ ಜನುಮ ಮುಗಿದು ಮಣ್ಣಿಗೆ ಹೋಗುವವರೆಗೂ ಆ ಅಕ್ಷರ ಕಲಿಸಿದ ಪ್ರತಿಯೊಬ್ಬ ವ್ಯಕ್ತಿಗಳು ಅವರ ಕೊಡುಗೆಗಳೊಂದಿಗೆ ನೆನಪಿರುತ್ತಾರೆ,” ಎಂದರು.

ನಟ ವಿರಾಟ್ ಮಾತನಾಡಿ, “ಭಗೀರಥ ಅವರ ಕಾದಂಬರಿ ಎಷ್ಟು ಹೊಸತೋ ಅಷ್ಟೇ ಭಗೀರಥ ಅವರು ಕೂಡ ಯಾವಾಗಲೂ ಹೊಸತನದಿಂದ ತುಂಬಿರುತ್ತಾರೆ. ಅಮೀಬಾ ಅನ್ನುವುದು ಕೇವಲ ಕೃತಿಯಲ್ಲ. ಅದೊಂದು ಸಿನಿಮಾ ನೋಡಿದ ಅನುಭವವನ್ನು ಕೂಡ ನೀಡುತ್ತದೆ,” ಎಂದು ಹೇಳಿದರು.

‘ಅಮೀಬಾ,’ ಕೃತಿಯ ಲೇಖಕ ಭಗೀರಥ ಮಾತನಾಡಿ, “ನನಗೆ ನಟ ಶಂಕರ್ ಸರ್ ಎಂದರೆ ಬಹಳ ಇಷ್ಟ. ಅವರ ಕುರಿತು ಕೂಡ ನಾನು ಈ ಕಾದಂಬರಿಯ ಮೊದಲಲ್ಲಿ ಬರೆದಿದ್ದೇನೆ. ಅವರೇ ನನಗೆ ಸ್ಪೂರ್ತಿಯಾಗಿದ್ದಾರೆ. ಹೀಗೆ ನನ್ನ ಪ್ರಕಾರ ಕತೆ ಹೇಳಲು ವೇದಿಕೆ ಮುಖ್ಯವಲ್ಲ. ಪ್ರೇಕ್ಷಕ ಮುಖ್ಯ. ಕತೆ ಅವನಿಗೆ ತಲುಪಬೇಕು. ಅದು ಯಾವುದೇ ಮಾಧ್ಯಮದ ಮೂಲಕ ಆಗಬಹುದು ಅದು ಪುಸ್ತಕ, ಸಿನಿಮಾ ಅಥವಾ ನಾಟಕವೇ ಆಗಿರಬಹುದು. ನನ್ನ ‘ಅಮೀಬಾ’ ಕತೆಯು ನಿಮಗೆ ಪುಸ್ತಕದ ಮೂಲಕ ತಲುಪುತ್ತಿದೆ," ಎಂದು ತಮ್ಮ ನುಡಿಗಳನ್ನಾಡಿದರು. ಕಾರ್ಯಕ್ರಮವು ಬುಕ್ ಬ್ರಹ್ಮ ಫೇಸ್ ಬುಕ್ ಪೇಜ್ ಹಾಗೂ ಯೂಟ್ಯೂಬ್ ಗಳಲ್ಲಿ ನೇರ ಪ್ರಸಾರವಾಯಿತು.

MORE NEWS

ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣ ಕೃತಿ ‘ಯಕ್ಷಹಂಸ’ ಲೋಕಾರ್ಪಣೆ

01-05-2024 ಬೆಂಗಳೂರು

ಹೊಸ್ತೋಟ ಮಂಜುನಾಥ ಭಾಗವತರ ಬಗ್ಗೆ ಬರೆದಿರುವ ‘ಯಕ್ಷಹಂಸ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 2024 ಏಪ್ರ...

ಹರಿದಾಸ ಸಾಹಿತ್ಯದ ಮೇರು ಶೃಂಗ ಶ್ರೀವಿಜಯದಾಸರು: ಅರಳುಮಲ್ಲಿಗೆ ಪಾರ್ಥಸಾರಥಿ

30-04-2024 ಬೆಂಗಳೂರು

ಬೆಂಗಳೂರಿನ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯ ಶ್ರೀಪಾದರಾಜ ಸಭಾಭವನದಲ್ಲಿ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್,...

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-04-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...