ಮಲೆನಾಡಿನ ಮಧ್ಯಮ ವರ್ಗದ ಜನರ ಜೀವನದ ಕಥೆ  ‘ನಿಲುಕಲೊಲ್ಲದ ಬದುಕು’ 


"ಸರಳವಾಗಿ ಕಥೆ ಹೇಳುವ ಶೈಲಿಯನ್ನು ರೂಢಿಸಿಕೊಂಡಿರುವ ವಸುಮತಿ ಅವರಿಗೆ ಮಲೆನಾಡಿನ ಮಧ್ಯಮ ವರ್ಗದ ಜನಜೀವನವೆಂದರೆ ಬಲು ಪ್ರೀತಿ, ಮಲೆನಾಡಿನ ಮಳೆ, ಅಲ್ಲಿನ ಸುಂದರ ಪರಿಸರ, ಒಂಟಿ ಮನೆಗಳು, ಪರಸ್ಪರರನ್ನು ಅವಲಂಬಿಸಿದ ಜೀವನ ಎಲ್ಲವೂ ಅವರ ಕಥೆಗಳಲ್ಲಿ ಬಂದು ಹೋಗುತ್ತವೆ" ಲೇಖಕಿ ವಸುಮತಿ ಉಡುಪ ಅವರ ‘ನಿಲುಕಲೊಲ್ಲದ ಬದುಕು’ ಕಥಾಸಂಕಲನದ ಆಯ್ದ ಭಾಗ ನಿಮ್ಮ ಓದಿಗಾಗಿ...

ಬ್ರಹ್ಮಕಪಾಲ

ಮೊದಲು ನಾಗಮ್ಮನನ್ನು ನೋಡಿದ್ದು ಶ್ರೀಲತಾ. ಉಪ್ಪರಿಗೆಯ ಕಿಟಕಿ ದಂಡೆಯ ಮೇಲೆ ಕೂತು ಉಗುರಿಗೆ ಬಣ್ಣ ಬಳಿದುಕೊಳ್ಳುತ್ತಿತ್ತು ಸವಾರಿ. ನಾಯಿ ಬೊಗಳಿದ್ದಕ್ಕೆ ಏಕಾಗ್ರತೆಗೆ ಭಂಗ ಬಂದು ಕಿಟಕಿಯಾಚೆ ಹಣಿಕಿ ನೋಡಿದರೆ ಉಣುಗೋಲಿನ ಗಳ ಸರಿಸಿ ನಾಗಮ್ಮ ಈಚೆಗೆ ಬಂದು ಮತ್ತೆ ಗಳ ಜೋಡಿಸುತ್ತಿದ್ದಾರೆ.

“ಅಯ್ಯಯ್ಯೋ, ಅಮ್ಮನ ಫ್ರೆಂಡ್ ಮತ್ತೆರ‍್ತಿದೆ ಕಣೇ. ಮೊನ್ನೆ ಮೊನ್ನೆ ಬಂದು ಹೋಗಿದ್ದಲ್ವಾ? ಮತ್ಯಾಯಾಕೆ ಕಾಲುತುರಿಕೆ ಶುರುವಾಯ್ತೋ?”

“ಮೊನ್ನೆ ಮೊನ್ನೆ ಅಂತ ತಟ್ಟಿ ಹಾರಿಸ್ಬೇಡ. ಮರ‍್ನಾಲ್ಕು ತಿಂಗಳು ಆಗರ‍್ಬೇಕು. ನಮ್ಮ ಎಕ್ಸಾಮ್ ನಡಿಯೋ ಹೊತ್ತಿಗಲ್ವಾ ಅವರು ಬಂದಿದ್ದು? ಆಗ್ಲೇ ಮತ್ತೊಂದು ಸೆಮಿಸ್ಟರ್ ಶುರುವಾಗಿ ಎರಡು ತಿಂಗಳು ಕಳೆದುಹೋಯ್ತಲ್ಲ?”

“ಇನ್ನು ನಮ್ಮ ಗತಿ ಗೋ..ವಿಂ..ದಾ.. ಅಮ್ಮಂಗೆ ಬ್ರೆನ್ ವಾಶ್ ಮಾಡಿ ತುದಿಬೆರಳಲ್ಲಿ ಕುಣಿಸುತ್ತೆ ಈ ಹೆಂಗಸು. ನಮ್ಮನೇಲಿ ನಾವೇ ಹೊರಗಿನೋರಾಗಿಬಿಡ್ತೀವಿ”

“ಈ ಅಮ್ಮಂಗಾದ್ರೂ ಬುದ್ಧಿ ಬೇಡ್ವಾ? ನಮಗಿಂತಾ ಯಾರೋ ಹೊರಗಿನೋರು ಹೆಚ್ಚಾಗೋದು ಆಶ್ಚರ್ಯ..” ಸವಿತಾ ಓದುತ್ತಿದ್ದ ಪುಸ್ತಕದ ಪುಟದ ತುದಿ ಮಡಚಿ ಬದಿಗಿಟ್ಟಳು. ಈಗ ಬರುತ್ತದೆ ಅಮ್ಮನ ಕರೆ ಎಂದು ಅಕ್ಕ, ತಂಗಿಯರಿಬ್ಬರಿಗೂ ಗೊತ್ತು. ಕೈಲಿದ್ದ ಚೀಲವನ್ನು ನಡುಮನೆಯ ಮೂಲೆಯಲ್ಲಿ ಗೋಡೆಗೆ ವರಗಿಸಿಟ್ಟು, ಬಚ್ಚಲಿಗೆ ಹೋಗಿ ಕೈಕಾಲು ತೊಳೆದು ಬರುತ್ತಿದ್ದಂತೆ ಅಮ್ಮನ ಕಿವಿ ಕಚ್ಚಲು ಶುರು. “ಅಡುಗೆಮನೇಲಿ ನೀನೊಬ್ಳೇ ವದ್ಗೋತಿದೀಯಲ್ಲ, ಎಲ್ಲಿ ಅವರಿಬ್ರೂ? ಪ್ರಾಯಕ್ಕೆ ಬಂದ ಹುಡುಗೀರು ಅಮ್ಮಂಗೆ ಸಹಾಯ ಮಾಡಿದ್ರೆ ಕೈ ಸಮೆಯುತ್ತಾ? ಅವರೂ ಕೆಲಸಕಾರ್ಯ ಕಲಿಯೋದು ಬೇಡ್ವಾ? ನೀನು ಸಡಿಲ ಬಿಟ್ಟಿದ್ದು ಜಾಸ್ತಿ ಆಯ್ತು ಕಣೇ. ಇಕಾ, ಹೇಳಿಟ್ಟರ‍್ತೀನಿ. ನೀನು ಕಿವಿ ತಿರುಪಿ ಬುದ್ಧಿ ಹೇಳ್ದಿದ್ರೆ ಅವು ಹದ್ದು ಮೀರಿ ಹೋಗ್ತಾವೆ..” ಇಷ್ಟು ಸಾಕು ಅಮ್ಮನಿಗೆ.

“ನೀವಾದ್ರೂ ಹೇಳಿ ನಾಗಕ್ಕಾ. ಮೂರು ಹೊತ್ತೂ ಉಪ್ಪರಿಗೇಲಿ ಹೊಕ್ಕಂಡಿರೋಕೆ ಅಲ್ಲೇನು ಗಂಟು ಹೂತಿಟ್ಟಿದಾವಾ? ಮನೆಕೆಲಸ ಅಂದ್ರೆ ನನ್ನ ಗುತ್ತಿಗೆ ಅಂದ್ಕೊಂಡಿದಾರೆ ಇಬ್ರೂ..” ಹೀಗೇ ಅಂತಲ್ಲ, ಈ ನಮೂನಿಯ ಮಾತುಕತೆಗಳು ಅವರಿಬ್ಬರ ನಡುವೆ ನಡೆಯುತ್ತವೆ. ನಾಗಮ್ಮ ಮನೆ ಹೊಗುತ್ತಿದ್ದಂತೆ ಅಮ್ಮನಿಗೆ ಪಿತ್ತ ಕೆರಳುವುದು ಯಾಕೆ ಎನ್ನುವುದು ಅಕ್ಕತಂಗಿಯರಿಗೆ ಗೊತ್ತಿಲ್ಲ.

ಯಾವತ್ತೂ ಇಲ್ಲದ ಧುಸುಮುಸು ಮಾಡುತ್ತಾಳೆ ಅಮ್ಮ. ‘ಕೇಳಿಸ್ಕೊಳ್ರೇ, ಕಲಿತ್ಕೊಳ್ರೇ..’ ಎನ್ನುತ್ತಾ ನಾಗಮ್ಮನ ಕಡೆ ಬೆಟ್ಟು ಮಾಡುತ್ತಾಳೆ. ಅಮ್ಮ ಒಬ್ಬಳೇ ಇದ್ದಾಗ ಪ್ರತಿವಾದ ಮಾಡಲು ಅಕ್ಕತಂಗಿಯರಿಗೆ ಹಿಂಜರಿಕೆ ಇಲ್ಲ. ಅಮ್ಮನ ಹತ್ತಿರ ಅಷ್ಟು ಸಲಿಗೆ ಇದೆ. ಆದರೆ ಹೊರಗಿನವರಾದ ನಾಗಮ್ಮನ ಎದುರು ಅಮ್ಮನ ಮಾತಿಗೆ ಪ್ರತಿ ಹೇಳಿ, “ಅವಾ, ಕೊಬ್ಬಿಸಿಟ್ಟಿದಾಳೆ ಅವರಮ್ಮ. ನನ್ನಂತೋಳಾಗಿದ್ರೆ ಮೂಲೇಲಿರೋದನ್ನ ಕೈಗೆ ತಗಂತಿದ್ದೆ” ಎಂದು ಯಾರೆದುರಾದರೂ ನಾಗಮ್ಮ ಆಡಿಕೊಳ್ಳುವುದಕ್ಕೆ ಆಸ್ಪದ ಕೊಡಲು ಇವರು ತಯಾರಿಲ್ಲ. ಮನಸ್ಸು ಮಾಡಿಲ್ಲ. ಅಬ್ಬಬ್ಬಾ ಅಂದರೆ ಹದಿನೈದು ದಿನ. ಅದೂ ಅಮ್ಮ ಒತ್ತಾಯ ಮಾಡಿ ಉಳಿಸಿಕೊಳ್ಳುವುದರಿಂದ. ಬಂದು ನಾಲ್ಕೈದು ದಿನ ಆಗುತ್ತಿದ್ದಂತೆ ಹೊರಡುವ ಮಾತಾಡುತ್ತಾರೆ ನಾಗಮ್ಮ. “ನೀನು ಕರ‍್ಸಿ ಅನ್ನ ಹಾಕ್ತಿ ಅಂತ ಕೂತೇಬಿಡೋದೇನೇ? ನಾಳೆ ಬೆಳಗಾಗ್ತಿದ್ಹಾಗೆ ಫಸ್ಟ್ ಬಸ್ಸಿಗೆ ಹೊರಡ್ತೀನಿ ನಾನು. ಒಂದ್ಲೋಟ ಕಾಫಿ ಕಾಸಿ ಕೊಟ್ಬಿಡು ಸಾಕು..”

“ಸುಮ್ನಿರಿ ನಾಗಕ್ಕಾ, ಇನ್ನೊಂದು ವಾರ ಕಳೀಲಿ. ಆಮೇಲೇ ಹೊರಡೋ ಮಾತು..”
“ನಿಂಗೇನಂತೆ, ಸಸಾರಕ್ಕೆ ಹೇಳ್ಬಿಡ್ತಿ. ನಾನು ಹೂಂಗುಟ್ಟಿದ್ರೆ ಇಲ್ಲೇ ಇಟ್ಕೊಳ್ಳೋಕೂ ತಯಾರು ನೀನು..”
“ಇರಿ ಇರಿ. ನೀವೊಬ್ರು ಈ ಮನೇಲಿ ಜಾಸ್ತಿ ಆಗಲ್ಲ. ದೇವ್ರು ಅಷ್ಟ್ರಮಟ್ಟಿಗೆ ಕೊಟ್ಟಿಟ್ಟಿದಾನೆ..”

ಅಕ್ಕತಂಗಿಯರಿಗೆ ಎದೆ ಝಗ್ ಅನ್ನುತ್ತದೆ. ಅಮ್ಮ ಅವರನ್ನೇನಾದರೂ ಖಾಯಂ ಆಗಿ ಮನೆಯಲ್ಲಿಟ್ಟುಕೊಳ್ಳುವ ಮನಸ್ಸು ಮಾಡಿದರೆ ತಾವಿಬ್ಬರೂ ಮನೆ ಬಿಟ್ಟು ಹೋಗಿ ಹಾಸ್ಟೆಲ್‌ನಲ್ಲಿರುತ್ತೀವಿ ಎಂದು ಅಮ್ಮನಿಗೆ ಹೇಳಿಟ್ಟಿದ್ದಾರೆ. ಅದೇನು ಮಾಯೆಯೋ, ನಾಗಮ್ಮ ವಾಪಸ್ಸು ಹೋಗುತ್ತಿದ್ದಂತೆ ಶಾಂತಮ್ಮನ ತಲೆ ಸ್ತಿಮಿತಕ್ಕೆ ಬರುತ್ತದೆ. ಮಾಮೂಲಿನಂತೆ ಮನೆಯಲ್ಲಿ ಸೋದರಿಯರು ಹಕ್ಕಿಯಂತೆ ಹಾರಾಡಿಕೊಂಡಿರುತ್ತಾರೆ. ‘ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ’ ಅನ್ನುವಂತೆ ಇನ್ನೇನು ಅವರ ನೆನಪು ಮರವೆಗೆ ಸಲ್ಲುತ್ತದೆ ಅನ್ನುವಾಗ ಹೆಂಗಸು ಮತ್ತೆ ಹಾಜರು. ಮತ್ತೊಮ್ಮೆ ಉಸಿರುಗಟ್ಟುವ ಕಿರಿಕಿರಿಯ ದಿನಗಳ ಪುನರಾವರ್ತನೆ. “ಯಾಕಮ್ಮಾ ಹೀಗೆ? ಅವರೇನಾದ್ರೂ ಛೂಮಂತ್ರ ಹಾಕ್ತಾರಾ ನಿಂಗೆ? ವಶೀಕರಣ ಮಾಡ್ತಾರಾ?” ಕೇಳಿದ್ದಾಳೆ ಶ್ರೀಲತಾ.

“ಹೌದು ಕಣೇ. ತಲೆಗೆ ಮೆಚ್ಚುಮದ್ದು ತಿಕ್ತಾರೆ. ನೋಡಿಲ್ವಾ ನೀನು?” ಉಡಾಫೆಯ ಉತ್ತರ ಕೊಡುತ್ತಾರೆ ಶಾಂತಮ್ಮ, ಹೌದೇನೋ ಅನಿಸಬೇಕು ಹಾಗೆ.
ನಿರೀಕ್ಷೆಯಂತೆ ಕೆಳಗಿನಿಂದ ಅಮ್ಮನ ಕರೆ ಬಂತು,
“ಎಲ್ಲಿದರ‍್ರೇ? ನಾಗಕ್ಕ ಬಂದಿದಾರೆ. ಬನ್ನಿ ಕೆಳಗೆ..”

“ಹೋಗು ನೀನು..” ಅಂದಳು ಶ್ರೀಲತಾ. ಅವಳಿಗಿನ್ನೂ ಕೈಕಾಲು ಉಗುರುಗಳಿಗೆ ಬಣ್ಣ ಹಚ್ಚಿಕೊಳ್ಳುವ ಉದ್ಯೋಗ ಮುಗಿದಿರಲಿಲ್ಲ. ಒಳ್ಳೇ ದಿನ ನೋಡಿಕೊಂಡು ಹಾಜರಿ ಹಾಕಿದೆ ಪ್ರಾಣಿ. ಭಾನುವಾರ, ರಜಾ ದಿನ.
“ಕಿವಿ ಕೆಪ್ಪಾ? ಕರೆಯೋದು ಕೇಳಿಸ್ತಿಲ್ವಾ?” ಮತ್ತೆ ಬಂತು ಅಮ್ಮನ ಕರೆ. ದನಿಯಲ್ಲಿ ಒಂದಲ್ಪ ಅಸಹನೆ. ಗಾಳಿ ಮೆಟ್ಟಿಕೊಳ್ಳಲು ಶುರುವಾಗಿದೆ ಎನ್ನುವುದರ ಸೂಚನೆ.

“ಹೋಗೇ ಪುಣ್ಯಾತ್ಗಿತ್ತಿ. ಇಲ್ದಿದ್ರೆ ಸಹಸ್ರನಾಮ ಶುರುವಾಗುತ್ತೆ.” ತಂಗಿ ಇಷ್ಟು ಹೇಳಿದ ಮೇಲೆ ಅರೆಮನಸ್ಸಿನಿಂದ ಮೇಲೆದ್ದಳು ಸವಿತಾ. “ನೀನೂ ಬೇಗ ಬಂದ್ಬಿಡು. ಇಲ್ದಿದ್ರೆ ‘ಎಲ್ಲಿದಾಳೆ, ಏನ್ಮಾಡ್ತಿದಾಳೆ?’ ಅಂತ ಶುರುವಾಗುತ್ತೆ ವಿಚಾರಣೆ” ಎಂದು ತಂಗಿಗೆ ಎಚ್ಚರಿಕೆ ಕೊಡಲು ಮರೆಯಲಿಲ್ಲ.

ಸವಿತಾ ಅಡುಗೆಮನೆಗೆ ಬಂದಾಗ ಶಾಂತಮ್ಮ ಮೇಲೋಗರಕ್ಕೆ ಹಲಸಿನ ಗುಜ್ಜಿ ಕೊಚ್ಚುತ್ತಿದ್ದರು. ಗೋಡೆ ಒತ್ತಿಗೆ ಮಣೆಯ ಮೇಲೆ ಸ್ಥಾಪನೆಯಾಗಿದ್ದರು ನಾಗಮ್ಮ. ಸವಿತನ ಮುಖ ನೋಡುತ್ತಿದ್ದಂತೆ ಅವರ ಬಾಯಿಂದ ಉದುರಿಬಿತ್ತು ಆಣಿಮುತ್ತು,

“ಏನೇ ಇದು, ಬೋಳು ಹಣೆ? ಹಣೇಲಿದ್ದಿದ್ದನ್ನ ನಾಯಿ ನೆಕ್ಕಂಡು ಹೋಯ್ತಾ?”
“ಹೇಳಿ ನಾಗಕ್ಕಾ, ಬರೀ ಹಣೇಲಿರೋದು ಫ್ಯಾಷನ್ ಆಗ್ಬಿಟ್ಟಿದೆ. ಒಂದು ಬೊಟ್ಟು ಅಂಟಿಸ್ಕೊಳ್ಳೋಕೆ ಬೆಳೆದ ಹುಡುಗೀರಿಗೆ ಹೇಳ್ಕೊಡ್ಬೇಕಾ? ಯಾರಾದ್ರೂ ಅಪ್ಪಂತೋರು ಮನೆಗೆ ಬಂದ್ರೆ ಚೆನ್ನಾಗಿರುತ್ತಾ?”

“ಎಲ್ರ ಮನೇಲೂ ಇದೇ ಹಣೇಬರ ಕಣೇ. ಲಕ್ಷಣವಾಗಿ ಸೀರೆ ಉಡೋದು ಬೇಡ, ಬಳೆ ತೊಡೋದು ಬೇಡ. ಒಂದು ನೈಟಿ ನೇಲಿಸ್ಕೊಂಬಿಟ್ರೆ ಅದೇ ದೋಡ್ಡ ಅಲಂಕಾರ..”
ಸತ್ಯಕ್ಕಾದರೂ ಬೋಳು ಹಣೆ, ಬೋಳು ಕೈಗಳಲ್ಲಿದ್ದ ಸವಿತಾ ಉಗುಳು ನುಂಗಿಕೊAಡು ಆಕ್ಷೇಪಣೆಯ ದೃಷ್ಟಿಯಿಂದ ಅಮ್ಮನ ಕಡೆ ನೋಡಿದರೆ ಅಮ್ಮನ ದೃಷ್ಟಿ ಹೆಚ್ಚುತ್ತಿರುವ ಹಲಸಿನ ಗುಜ್ಜಿಯತ್ತ.

“ಯಾಕೆ ಕರೆದಿದ್ದು?” ಕೇಳಿದಳು ಸವಿತಾ.
“ಬಿರುಬಿಸಿಲಲ್ಲಿ ನಡ್ಕೊಂಡ್ಬಂದಿದಾರೆ. ತಣ್ಣಗೆ ಒಂದು ಲೋಟ ಪಾನಕ ಮಾಡ್ಕೊಡು ನಾಗಕ್ಕಂಗೆ..”

ಪಾನಕ ಕದರುವಷ್ಟು ಹೊತ್ತೂ ಮುಂದುವರಿಯಿತು ನಾಗಮ್ಮನ ಉಪದೇಶ,
“ಲಿಂಬೆಹಣ್ಣನ್ನ ನೆಲಕ್ಕೆ ತಿಕ್ಕಿ ರಸ ಹಿಂಡು, ಜಾಸ್ತಿ ರಸ ಬರುತ್ತೆ. ಸೌಟು ಹಾಕಿ ಕದರು, ಸಕ್ಕರೆ ಬೇಗ ಕರಗುತ್ತೆ. ಒಂದು ಯಾಲಕ್ಕಿ ಪುಡಿ ಮಾಡಿ ಹಾಕು, ಘಮ್ ಅಂತಿರುತ್ತೆ”
ಅಯ್ಯಬ್ಬಾ, ತನಗೆ ಒಂದು ಲೋಟ ಪಾನಕ ಮಾಡುವುದಕ್ಕೂ ಬರುವುದಿಲ್ಲ ಅಂದುಕೊಂಡಿದೆಯಾ ಈ ಹೆಂಗಸು? ಸ್ಕೂಲಿನಲ್ಲಿ ಸಣ್ಣಮಕ್ಕಳಿಗೆ ಪಾಠ ಮಾಡಿದ ಹಾಗೆ ಹದ ಹೇಳುತ್ತಿದ್ದಾರೆ.
“ಕೇಳಿಸ್ಕೋ, ನೆನಪಿಟ್ಕೋ. ಈಚೆ ಕಿಮೀಲಿ ಕೇಳಿ ಆಚೆ ಕಿಮೀಲಿ ಹೊರಗೆ ಬಿಡ್ಬೇಡ..” ಮಾಮೂಲಿನ ಒಗ್ಗರಣೆ ಹಾಕುತ್ತಿದ್ದಾಳೆ ಅಮ್ಮ.

ಎರಡು ಲೋಟ ಪಾನಕ ಇಳಿಸಿ ತಣ್ಣಗಾದರು ಬಿಸಿಲಲ್ಲಿ ನಡೆದು ಬಂದಿದ್ದ ನಾಗಮ್ಮ. ಬಸ್ಸಿಳಿದ ಮೇಲೆ ಒಂದು ಮೈಲಿ ಕಾಲುನಡಿಗೆ. ಯಾವತ್ತೂ ಬರುವುದು ಮಧ್ಯಾಹ್ನದ ಊಟದ ಹೊತ್ತಿಗೆ. ತಮ್ಮೂರಲ್ಲಿ ಬೆಳಿಗ್ಗೆ ತಿಂಡಿ ತಿಂದು ಬಸ್ಸು ಹಿಡಿದರೆ ಮಧ್ಯಾಹ್ನದ ಊಟಕ್ಕೆ ಇಲ್ಲಿಗೆ ಹಾಜರಿ. ಪಾನಕ ಕುಡಿದ ಲೋಟವನ್ನು ನಲ್ಲಿಕಟ್ಟೆಯಲ್ಲಿ ತೊಳೆದು ಕವುಚಿಡುವುದಕ್ಕಿಲ್ಲ, ಸೊಂಟಕ್ಕೆ ಸೆರಗು ಬಿಗಿದರು ನಾಗಮ್ಮ.

“ಏಳೇ ಶಾಂತಿ, ನಾನು ಗುಜ್ಜಿ ಹೆಚ್ಕೊಡ್ತೀನಿ. ನಿಂಗೆ ಬೇರೆ ಕೆಲಸ ಇದ್ರೆ ನೋಡ್ಕಾ..”
“ಒಂದು ಗಳಿಗೆ ಸುಧಾರಿಸ್ಕಳಿ ನಾಗಕ್ಕಾ. ಈಗಿನ್ನೂ ಉಸ್ಸಪ್ಪಾ ಅಂತ ಬಂದು ಕೂತಿದೀರಿ..”
“ಏಳು ಅಂದ್ರೆ ಏಳ್ಬೇಕು. ಈ ಕೆಲ್ಸ ಎಲ್ಲಾ ಹೆಣ್ಣುಮಕ್ಳ ಹತ್ರ ಮಾಡಿಸ್ಬೇಕು, ಎಲ್ಲಿ ಕೇಳ್ತಿ ನೀನು?”

ಶಾಂತಮ್ಮ ಮೆಟ್ಟುಗತ್ತಿ ಬಿಟ್ಟು ಎದ್ದು ಸೊಂಟ ನೆಟ್ಟಗೆ ಮಾಡಿಕೊಂಡರು. ನಾಗಮ್ಮ ಮಣೆಯ ಮೇಲೆ ಅಂಡೂರಿದರು. ಇನ್ನು ಇವರಿವರ ವಾರ್ತಾಲಾಪ ಶುರುವಾಗುತ್ತದೆ. ನಾಗಮ್ಮ ಇಲ್ಲಿಂದ ಗಾಡಿ ಬಿಡುವವರೆಗೆ ನಡೆಯುತ್ತಲೇ ಇರುತ್ತದೆ, ರಾತ್ರಿ ನಿದ್ದೆ ಮಾಡುವ ಹೊತ್ತನ್ನು ಹೊರತುಪಡಿಸಿ. ನಿಧಾನಕ್ಕೆ ಅಲ್ಲಿಂದ ಜಾರಿಕೊಂಡಳು ಸವಿತಾ. ಕಳ್ಳ ಹೆಜ್ಜೆ ಇಟ್ಟು ಉಪ್ಪರಿಗೆ ಮೆಟ್ಟಿಲು ಹತ್ತುವಾಗ ಅವಳಿಗೆ ತನ್ನಷ್ಟಕ್ಕೆ ನಗು. ತನ್ನ ಮನೆಯಲ್ಲಿ ತಾನೇ ಅಂಜಿಕೊಳ್ಳುತ್ತಿದ್ದೇನೆ. ಯಾವಾಗಿನ ಅಭ್ಯಾಸದಂತೆ ಧಡಬಡ ಶಬ್ದ ಮಾಡುತ್ತಾ ಮೆಟ್ಟಿಲು ಹತ್ತಿ ಹೋದರೆ ಹಿಂದಿನಿಂದ ತೂರಿ ಬರುತ್ತದೆ ನಾಗಮ್ಮನ ವಾಗ್ಬಾಣ,

“ಹೆಣ್ಣುಮಕ್ಕಳು ನಡೆದ್ರೆ ಎಲ್ಲಿ ಭೂಮಿತಾಯಿಗೆ ಪೆಟ್ಟಾಗುತ್ತೋ ಅನ್ನೋ ಹಾಗೆ ನಿಧಾನಕ್ಕೆ ನಡೀಬೇಕು ಅಂತರ‍್ತಿದ್ಲು ನಮ್ಮಮ್ಮ. ಈಗಿನೋವು ಕುದುರೆ ಹಂಗೆ ನಡೀತಾವೆ..”

ಇಂತಾ ಪುಣ್ಯಾತ್ಗಿತ್ತಿಯನ್ನು ಹೆತ್ತ ಆ ಅಮ್ಮನನ್ನು ಕಲ್ಪಿಸಿಕೊಂಡು ಕೌತುಕವಾಗುತ್ತಿತ್ತು ಸೋದರಿಯರಿಗೆ. ಹಡೆದಿದ್ದು ಮಾತ್ರವಲ್ಲ, ಹೆಣ್ಣುಮಕ್ಕಳು ಹೇಗಿರಬೇಕೆಂಬ ರಿವಾಜನ್ನು ಅರೆದು ಹುಯ್ದಿದ್ದಾರೆ ಕೂಡಾ ಅಥವಾ ಈ ನಾಗಮ್ಮನೇ ಏನೆಲ್ಲವನ್ನೂ ಸ್ವತಾ ರೂಢಿಗತ ಮಾಡಿಕೊಂಡಿದ್ದೋ?

ಅಕ್ಕ ಮೇಲೆ ಬರುತ್ತಿದ್ದಂತೆ ವಿಚಾರಿಸಿಕೊಂಡಳು ತಂಗಿ,
“ಏನ್ಮಾಡ್ತಿದ್ಯೇ ಇಷ್ಟು ಹೊತ್ತು?”
“ಪಾನಕ..”
“ಸ್ವಲ್ಪ ಜಾಸ್ತೀನೇ ಮಾಡ್ಬರ‍್ದಿತ್ತಾ? ನಾವಿಬ್ರೂ ಕುಡೀಬಹುದಿತ್ತು..”
“ಮಾಡಿದ್ದೆ ಕಣೇ. ಅವರೇ ಎರಡು ಲೋಟ ಇಳಿಸಿದ್ರು..”
“ಅಮ್ಮ ಉಪಚಾರ ಹೇಳಿದ್ಲೇನೋ, ಎಂತಾ ಬಿಸಿಲು ನಾಗಕ್ಕಾ, ತಣ್ಣಗೆ ಇನ್ನೊಂತೊಟ್ಟು ಕುಡೀರಿ ಅಂತ..”
“ಅವರಿಗೆ ಪ್ರತ್ಯೇಕವಾಗಿ ಉಪಚಾರ ಹೇಳ್ಬೇಕಾ? ‘ನಿಮ್ದೇ ಮನೆ’ ಅಂತಾಳೆ ನಮ್ಮಮ್ಮ”
“ಅಮ್ಮನ ಕೈಲಿ ಯಜಮಾನಿಕೆ ಇದ್ದಿದ್ರೆ ಬರೆದೇ ಕೊಟ್ಬಿಡ್ತಿದ್ಲೇನೋ..”

ಬಾಯಿಗೆ ಕೈ ಅಡ್ಡ ಹಿಡಿದು ಇಬ್ಬರೂ ನಕ್ಕರು. ಜೋರಾಗಿ ನಕ್ಕರೆ ಕೇಳಬೇಕಾಗುತ್ತದೆ ಕೊಂಕು ಮಾತು, ‘ಏನಿದು ಅಸಂಯ್ಯ? ಅಂಕೆ ಶಂಕೆ ಒಂದೂ ಬ್ಯಾಡ್ವಾ?’ ಅಮ್ಮನ ಮೇಲೆ ಕೂರುತ್ತದೆ ಗೂಬೆ.
“ಮೊದಲು ಸ್ನಾನ ಮಾಡಿ, ಒಗೆದ ಬಟ್ಟೆ ಹಾಕ್ಕೊಂಡು, ಲಕ್ಷಣವಾಗಿ ಹಣೆಗಿಟ್ಕೊಂಡು, ನಾಗಮ್ಮನಿಗೆ ಮುಖ ತರ‍್ಸೇ ಮೂದೇವಿ. ಇಲ್ದಿದ್ರೆ ಉಗಿಸ್ಕೋತಿ..” ತಂಗಿಗೆ ಬುದ್ಧಿವಾದ ಹೇಳಿದಳು ಸವಿತಾ.
“ಹುಳುಕು ಹುಡುಕೋರಿಗೆ ಏನೋ ಒಂದು ಸಿಗುತ್ತೆ ಬಿಡು..” ಎನ್ನುತ್ತಾ ಶ್ರೀಲತಾ ಬಣ್ಣದ ಬಾಟ್ಲಿಯನ್ನು ಎತ್ತಿಟ್ಟು ಸ್ನಾನಕ್ಕೆ ಹೊರಡಲು ಅಣಿಯಾದಳು.* *

 

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...