ಮನಸ್ಸನ್ನು ತೀವ್ರವಾಗಿ ತಟ್ಟುವ ಕೃತಿ ʻಬಿಚ್ಚಿಟ್ಟ ನೆನಪುಗಳು' : ಅರುಣಾ ರಾಯ್ 


ನನ್ನ ವೈಯಕ್ತಿಕ ಜೀವನದಲ್ಲಿ ಮಧು ನನ್ನ ಆಪ್ತ ಗೆಳತಿ ಮತ್ತು ದಿಲ್ಲಿಯ ಇಂದ್ರಪ್ರಸ್ಥ ಕಾಲೇಜಿನಲ್ಲಿಯ ನಾವಿಬ್ಬರೂ ಒಟ್ಟಿಗೆ ಕಳೆದ ವರ್ಷಗಳಿಂದ ಪ್ರಾರಂಭಿಸಿ, ಇಲ್ಲಿ ತನಕ, ನನ್ನ ಎಲ್ಲ ಸಾಮಾಜಿಕ ಚಟುವಟಿಕೆಗಳಲ್ಲಿ ಮಧು ಬಹು ಮುಖ್ಯ ಪಾತ್ರಧಾರಿ. ಅವರ ನೇರ ನಡೆ, ನುಡಿ ಮತ್ತು ಮುಚ್ಚು ಮರೆಯಿಲ್ಲದ ದಿಟ್ಟ ವರ್ತನೆ ಬೆರಗು ಹುಟ್ಟಿಸುವಂಥದು ಎನ್ನುತ್ತಾರೆ ಅರುಣಾ ರಾಯ್.‌ ಅವರು ಅರುಂಧತಿ ಸವದತ್ತಿ ಅವರು ಕನ್ನಡಕ್ಕೆ ಅನುವಾದಿಸಿದ ʻಬಿಟ್ಟಿಟ್ಟ ನೆನಪುಗಳುʼ ಪುಸ್ತಕದ ಮುನ್ನುಡಿಯಲ್ಲಿ ಬೆರದ ಮಾತುಗಳು ಇಲ್ಲಿವೆ.

ರಾಯಭಾರೀ ವೃತ್ತಿಯ ಜಟಿಲತೆಯ ಸಿಕ್ಕುಗಳನ್ನು ಬಿಡಿಸುತ್ತ ಓರ್ವ ಬರಹಗಾರ್ತಿಯ ಆಲೋಚನೆಗಳು ಹೆಣೆದಿರುವ ಈ “ಬಿಚ್ಚಿಟ್ಟ ನೆನಪುಗಳು” ನಮ್ಮ ಮನಸ್ಸನ್ನು ತೀವ್ರವಾಗಿ ತಟ್ಟುತ್ತವೆ. ಇದು ಪುರುಷರೇ ಪ್ರಧಾನವಾಗಿರುವ ಜಗತ್ತಿನ ಒಂದು ಮೂಲೆಯಲ್ಲಿ, ರಾಜನೀತಿಯ ಅಸ್ತವ್ಯಸ್ತ ಗೊಂದಲ ಮತ್ತು ಸರಕಾರದ ಎಣೆಯಿಲ್ಲದೆ ನಿಯಂತ್ರಣದ ನಡುವೆ ತನ್ನ ವೃತ್ತಿ ಜೀವನವನ್ನು ಬದ್ಧತೆಯಿಂದ ಕಟ್ಟಿಕೊಂಡ ಕಾರ್ಯಕರ್ತೆಯೊಬ್ಬಳ ಕತೆ. ಪ್ರಸ್ತುತ ಮನುಷ್ಯ ಅನುಭವಿಸುವ ಸ್ವಭಾವ ಸಹಜ ಒತ್ತಡಗಳು ಮತ್ತು ಅದರ ಜತೆ ಜತೆಯಲ್ಲೇ ಇತಿಹಾಸ ಹುಟ್ಟಿಕೊಳ್ಳುವ ಬಗೆಯನ್ನು ಮತ್ತು ಅಧ್ಯಯನಯೋಗ್ಯವೆಂದು ಅವುಗಳಲ್ಲಿ ಹಣಕಿ ಹಾಕಬೇಕೆಂಬ ನಮ್ಮೆಲ್ಲರ ಕುತೂಹಲವನ್ನು ತಣಿಸಬಲ್ಲ ರೋಚಕತೆ ಈ ಕತೆಗಳಿಗಿದೆ. ಮಧು ಭಾದುರಿಯವರ ನಿರೂಪಣೆ, ರಾಯಭಾರಿತ್ವ ಮತ್ತು ಪ್ರಭುತ್ವಗಳ ಸಂಕೀರ್ಣ ಸಂಬಂಧ ಮತ್ತು ಸಂದರ್ಭಗಳ ನಡುವೆ ಸ್ತ್ರೀ ದೃಷ್ಟಿಕೋನದ ಅನುಭವವನ್ನು ಅಯಾಚಿತವಾಗಿ ನೀಡುತ್ತದೆ.

1968ರಲ್ಲಿ ಮಧು ಭಾದುರಿಯವರು ಜಂಟಿ ನಾಗರಿಕ ಸೇವಾ ಪರೀಕ್ಷೆಯನ್ನು (Joint Civil Service Examination) ಬರೆದು ಉಚ್ಚ ಶ್ರೇಣಿಯಲ್ಲಿ ಉತ್ತೀರ್ಣರಾದ ಕಾರಣ ಅವರಿಗೆ ಅವರು ಬಯಸಿದ ಭಾರತೀಯ ವಿದೇಶ ಸೇವೆ (Indian Foreign Service- IFS)ಗೆ ಸೇರ್ಪಡೆಯಾಗುವ ಅವಕಾಶ ದೊರಕಿತು. ಆ ದಿನಗಳಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆ ಕೊಟ್ಟವರಲ್ಲಿ ಭಾರತೀಯ ವಿದೇಶೀ ಸೇವೆಗೆ ಸೇರಬೇಕೆಂಬ ಹಂಬಲದವರೇ ಹೆಚ್ಚಿದ್ದರು. ಇಂದಿನ ದಿನಮಾನಗಳಲ್ಲಿ ಈ ಪರಿಸ್ಥಿತಿ ಬುಡಮೇಲಾಗಿದೆ ಎಂದು ಕೇಳಿದ್ದೇನೆ. ಬಹಳಷ್ಟು ಸಲ ಭಾರತೀಯ ಕಂದಾಯ ಸೇವೆ (Indian Revenue Service- IRS) ಉಳಿದವುಗಳಿಗಿಂತ ಬಹು ಬೇಡಿಕೆಯ ಇಲಾಖೆಯಾಗಿದೆ. ಇದು ಭಾರತದ ಮಧ್ಯಮ ವರ್ಗೀಯರ ಬದಲಾದ ಮನೋಸ್ಥಿತಿಯ ಸಂಕೇತವಾಗಿದೆ. ಪ್ರತಿಷ್ಠೆ ಮತ್ತು ಅಂತಸ್ತಿಗಿಂತ ಹಣ ಹೆಚ್ಚು ಅಮೂಲ್ಯವಾಗಿದೆ. ಹೊರದೇಶಗಳಲ್ಲಿ ಭಾರತದ ಹಿತಾಸಕ್ತಿಗಳನ್ನು ನಿಭಾಯಿಸುವದಕ್ಕಿಂತ ಇಲ್ಲಿಯೇ ಆಯಕರವನ್ನು ಸಂಗ್ರಹಿಸುವುದು ಹೆಚ್ಚು ಲಾಭದಾಯಕ ಎಂಬ ಪ್ರವೃತ್ತಿ ಬೆಳೆದಿದೆ. ಜೊತೆಗೆ ಬದಲಾದ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯೂ ವಿದೇಶೀ ಸೇವೆಯ ಆಕರ್ಷಣೆಯನ್ನು ಕಡಿಮೆ ಮಾಡಿವೆ.

1960ರ ಕೊನೆಯವರೆಗಿನದು, ವಿದೇಶೀ ಸೇವೆ ಮತ್ತು ರಾಜದೂತರ ಅಥವಾ ರಾಯಭಾರಿಗಳ ಹೆಗ್ಗಳಿಕೆಯ ಕಾಲ. ಇಪ್ಪತ್ತನೆ ಶತಮಾನದ ಮಧ್ಯದಲ್ಲಿ ಸ್ವತಂತ್ರ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ತಳವೂರಿದ ಮೇಲೆ ವಿದೇಶಗಳಿಗೆ ಸಂಬಂಧಪಟ್ಟ ವ್ಯವಹಾರಗಳು, ರಾಯಭಾರಿಗಳ ನಿಯಂತ್ರಣದಿಂದ ಪಲ್ಲಟಗೊಂಡು ಶಾಸಕಾಂಗದ ಇಲಾಖೆಗಳು ಮತ್ತು ವಿದೇಶಿ ವ್ಯವಹಾರಗಳ ಸಚಿವಾಲಯದ ಹತೋಟಿಗೆ ಒಳಪಟ್ಟವು. ಇದು ಹೊರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ರಾಜದೂತರ ನೈಜ ಪರಿಸ್ಥಿತಿ. ಅದಲ್ಲದೇ, ಶೀತಲ ಸಮರದಿಂದ ಇಬ್ಭಾಗಗೊಂಡಿದ್ದ ಜಗತ್ತಿನಲ್ಲಿ, ಭಾರತ ಕಟ್ಟು ನಿಟ್ಟಾಗಿ ತಟಸ್ಥ ನೀತಿಯ ಪಾಲನೆಯ ಪಣ ತೊಟ್ಟ ಕಾಳದಲ್ಲಿ ಪರದೇಶಗಳಿಂದ ಭಾರತಕ್ಕೆ ಬರುತ್ತಿದ್ದ ರಾಜದೂತರ ಮಟ್ಟಿಗೂ ಅಷ್ಟೇ ಸತ್ಯ. ಅದೇ ತಾನೇ ಸ್ವಾತಂತ್ರ್ಯ ಪಡೆದ ಭಾರತಕ್ಕೆ ರಾಜದೂತರೆಂದು ಅಸಾಮಾನ್ಯ ಮೇಧಾವಿಗಳ, ಸಾರ್ವಜನಿಕ ಜೀವನದಲ್ಲಿ ಅಪ್ರತಿಮರೆನಿಸಿದವರ ಮೆರವಣಿಗೆಯೇ ಬಂದಿತ್ತು – ಚೆಸ್ಟರ್ ಬೋವ್ಲಸ್, ಜಾನ್ ಕೆನ್ನೆಥ್ ಗಾಲ್ಬ್ರೈಥ್, ಮತ್ತು ಕವಿ ಒಕ್ಟೇವಿಯೊ ಪಾಝ (ಆನಂತರ ಅವರಿಗೆ ಸಾಹಿತ್ಯ ನೊಬೆಲ್ ಪಾರಿತೋಷಕ ದೊರೆಯಿತು) ಮುಂತಾದವರನ್ನು ಇಲ್ಲಿ ಹೆಸರಿಸಬಹುದು. ಆದರೆ, ಕಳೆದ ಮೂರು-ನಾಲ್ಕು ದಶಕಗಳಲ್ಲಿ ರಾಯಭಾರಿಗಳೆಂದು ನಿಯುಕ್ತಿಯಾಗಿ ಬಂದು ದಿಲ್ಲಿಯಲ್ಲಿ ನೆಲೆಸಿದ ಅನೇಕರಲ್ಲಿ ಕೇವಲ ಕೆಲವೇ ಹೆಸರುಗಳು ಮಾತ್ರ ಸ್ಮರಣೆಗೆ ಬರುತ್ತವೆ.

ಆದಾಗ್ಯೂ, ನಮಗೆ ವರ್ತಮಾನದ ಜಗತ್ತನ್ನು ಅರ್ಥೈಸಲು ಕೂಡ, ರಾಯಭಾರಿಯಾಗಿ ಮತ್ತೊಂದು ದೇಶದಲ್ಲಿ ಜೀವಿಸುವದು ಅದೆಷ್ಟು ಮಹತ್ವದ್ದು ಎಂಬುದನ್ನು ತಿಳಿದುಕೊಳ್ಳಲು 'ಬಿಚ್ಚಿಟ್ಟ ನೆನಪುಗಳು' ಅವಕಾಶ ಮಾಡಿಕೊಡುತ್ತದೆ. ಹುದ್ದೆ ಅಥವಾ ವಿಷಯದ ವೈಶಿಷ್ಟ್ಯಗಳಿಗೆ ಮಾರುಹೋಗದೇ, ತನ್ನಿಂದ ಸಾಧ್ಯವಾದಷ್ಟು ಒಳಿತನ್ನು ಎಸಗಬೇಕೆಂಬ ಶ್ರದ್ಧೆ ಮತ್ತು ದೃಢ ನಿಶ್ಚಯವುಳ್ಳ ಓರ್ವ ಸರಕಾರಿ ಸೇವಾನಿರತಳ ಮಸೂರದಿಂದ ಮೂಡಿಬಂದ ಹೊಸ ದೃಷ್ಟಿಕೋನದ ಪರಿಚಯವನ್ನು ಈ ಪುಸ್ತಕ ನೀಡುತ್ತದೆ. ಎಲ್ಲ ಉತ್ತಮ ಬರಹಗಾರರ ಮಾದರಿಯಲ್ಲೇ ಮಧು ಅವರ ಬರವಣಿಗೆ ಕೂಡ ಸಾಮಾನ್ಯ ಮತ್ತು ಅಸಾಮಾನ್ಯ ಜೀವನಗಳ ಸಂಕೀರ್ಣತೆಯ ವಿವಿಧ ಆಯಾಮಗಳ ಮಧ್ಯದಿಂದ ಹಾದು ಬರುತ್ತದೆ. ಇಲ್ಲಿ ನೈಜ ಘಟನೆಗಳು ತಮ್ಮ ವಾದವನ್ನು ಮಂಡಿಸುತ್ತವೆ. ತತ್ಫಲವಾಗಿ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಒತ್ತಾಯಗಳು ತಂದಿಡುವ ತೊಡಕುಗಳ ಬಗ್ಗೆ ಅರಿವು ಮೂಡುತ್ತದೆ. ಮಧು ತಾವು ಹೇಗಿದ್ದಾರೋ ಹಾಗೆಯೇ ಬರೆಯುತ್ತಾರೆ: ನೇರವಾಗಿ, ಪ್ರಾಮಾಣಿಕವಾಗಿ ಮತ್ತು ತಾನು ನಂಬಿರುವ ಮತ್ತು ಅವನ್ನು ರಕ್ಷಿಸಲು ಬದ್ಧಳಾಗಿರುವ ಮೌಲ್ಯಗಳಿಗಾಗಿ.

ನನ್ನ ವೈಯಕ್ತಿಕ ಜೀವನದಲ್ಲಿ ಮಧು ನನ್ನ ಆಪ್ತ ಗೆಳತಿ ಮತ್ತು ದಿಲ್ಲಿಯ ಇಂದ್ರಪ್ರಸ್ಥ ಕಾಲೇಜಿನಲ್ಲಿಯ ನಾವಿಬ್ಬರೂ ಒಟ್ಟಿಗೆ ಕಳೆದ ವರ್ಷಗಳಿಂದ ಪ್ರಾರಂಭಿಸಿ, ಇಲ್ಲಿ ತನಕ, ನನ್ನ ಎಲ್ಲ ಸಾಮಾಜಿಕ ಚಟುವಟಿಕೆಗಳಲ್ಲಿ ಮಧು ಬಹು ಮುಖ್ಯ ಪಾತ್ರಧಾರಿ. ಅವರ ನೇರ ನಡೆ, ನುಡಿ ಮತ್ತು ಮುಚ್ಚು ಮರೆಯಿಲ್ಲದ ದಿಟ್ಟ ವರ್ತನೆ ಬೆರಗು ಹುಟ್ಟಿಸುವಂಥದು. ಅವರು ಇಂದ್ರಪ್ರಸ್ಥ ಕಾಲೇಜಿನಲ್ಲಿ ತತ್ವಶಾಸ್ತ್ರವನ್ನು ಕಲಿಸುತ್ತಿದ್ದರು. ಅವರಿಗಿಂತ ಕೆಲ ವರ್ಷ ಕಿರಿಯಳಾದ ನಾನು ಅಲ್ಲಿ ಒಂದು ವರ್ಷದ ಮಟ್ಟಿಗೆ ಇಂಗ್ಲಿಷ್ ಕಲಿಸಿದೆ. ಈ ಪುಟ್ಟ, ಆದರೆ ಆಕರ್ಷಕ ಮಹಿಳೆಯಲ್ಲಿ ನಾನು ಕಂಡ ವೈಶಿಷ್ಟ್ಯಗಳು ಮತ್ತು ಗುಣಗಳು ಅನೇಕ. ಅವರದು ಶಂಕೆ ಮತ್ತು ಅಂಜಿಕೆಗೆ ಆಸ್ಪದವಿಲ್ಲದ ಧೀರ ಮನಸ್ಸು ನಾನೋ ಆ ಎಳೆಯ ದಿನಗಳಲ್ಲಿ ಆ ಗುಣಕ್ಕೆ ಬಹುವಾಗಿ ಮಾರು ಹೋದವಳು. ಅವರ ಬಗೆಗಿನ ನನ್ನ ಮೆಚ್ಚುಗೆ ಮತ್ತು ನನ್ನ ಬಗೆಗಿನ ಅವರ ಕಾಳಜಿಯಿಂದ ನಮ್ಮ ಗೆಳೆತನ ಪ್ರಾರಂಭವಾಯಿತು. ತನ್ನ ಮಾನಸಿಕ ಸ್ವಾಸ್ಥ್ಯಕ್ಕೆ ಒಂದು ದಕ್ಷ ವೃತ್ತಿಯ ಅವಶ್ಯಕತೆ ಇದೆ ಎಂಬುವದು ಅವರ ಖಚಿತ ತಿಳುವಳಿಕೆ. ನಾನೋ, ಹೆಣ್ಣುಮಕ್ಕಳ 'ಮದುವೆ' ಎಂಬ ಪರಂಪರಾಗತ ಮತ್ತು ಏಕಮೇವ ಜೀವನ ಧ್ಯೇಯ, ತಮ್ಮ ಜಾಣ್ಮೆ ಮತ್ತು ಬುದ್ಧಿಮತ್ತೆಯ ಸದುಪಯೋಗಕ್ಕೆ ಅವರಿಗೆ ಒದಗಿಸುವ ಅವಕಾಶ ಬಲು ಕಿರಿದು ಎಂದು ಮೊದಲಿನಿಂದ ನಂಬಿದವಳು. ಈ ವಿಷಯದಲ್ಲಿ ನಮ್ಮ ಒಮ್ಮತ ನಮ್ಮ ಗೆಳೆತನದ ತಳಹದಿ ಮತ್ತು ಇಂದಿನ ತನಕದ ನಮ್ಮ ಜೀವನದ ಬಿಗು ಬಂಧನ.

***

ಈ ಪುಸ್ತಕದೊಳಗಿನ ಎಷ್ಟೋ ಕತೆಗಳನ್ನು ಓದುತ್ತ ಹೋದ ಹಾಗೆ ನಮ್ಮಿಬ್ಬರ ಚಿರಂತನ ಮೈತ್ರಿಯ ತೀವ್ರ ಸ್ಮೃತಿಗಳ ಮೆಲುಕುಗಳ ಜೊತೆಗೆ ಇಂದಿನ ರಾಜಕೀಯದ ಗೊಂದಲಮಯ ಅಸ್ಥಿರತೆಯಲ್ಲಿ ಕಳೆದುಹೋಗಿರುವ ಮೌಲ್ಯಗಳನ್ನು ನೆನೆಸಿ ನನ್ನ ಮನಸ್ಸು ವಿಷಣ್ಣವಾಗುತ್ತದೆ. ನನ್ನ ಮಟ್ಟಿಗೆ, ವೈಯಕ್ತಿಕ ಜೀವನ ಮತ್ತು ಸಾಮಾಜಿಕ ಅಥವಾ ರಾಜಕೀಯ ಕ್ಷೇತ್ರಗಳು ಬೇರೆ ಬೇರೆಯಲ್ಲ, ಎರಡರಲ್ಲಿಯ ಅನುಭವ ಮತ್ತು ಕಾರ್ಯಗಳು ಅಭೇದ್ಯ. ಈ ಕತೆಗಳು ಮತ್ತು ಮಧು ಅವರ ಜೀವನ ಕೂಡ ಇದೇ ತತ್ವವನ್ನು ಪ್ರತಿಬಿಂಬಿಸುತ್ತವೆ. ಆಸ್ಟ್ರಿಯಾದ ಚಲನಚಿತ್ರವೊಂದನ್ನು ಪ್ರದರ್ಶಿಸಲು ಭಾರತ ಸರಕಾರ ಅನುಮತಿ ನಿರಾಕರಿಸಿದಾಗಿನ ಅವರ ಪ್ರತಿಭಟನೆಯ ಪ್ರಯತ್ನಗಳು, ವಿಯಟ್‌ನಾಮಿನ ಚಲನಚಿತ್ರವೊಂದರ ಇಂಗ್ಲಿಷ್ ಪ್ರತಿಯನ್ನು ಸಿದ್ಧಪಡಿಸುವದರಲ್ಲಿ ಅವರ ಪಾಲುದಾರಿಕೆಯ ವಿವರಗಳನ್ನು ಕಾಳಜೀಪೂರ್ವಕವಾಗಿ ಬಿಂಬಿಸಲಾಗಿದೆ. ಅವರ ಮೆಕ್ಸಿಕೊದ ನಿಯುಕ್ತಿಯ ಸ್ಮರಣೆಗಳು, ಆ ಅವಧಿಯಲ್ಲಿನ ನಮ್ಮಿಬ್ಬರ ಪರಸ್ಪರರ ಸಂಭ್ರಮದ ಭೇಟಿಗಳು ಮತ್ತು ಕ್ವಚಿತ್ತಾಗಿ ನಡೆಯುತ್ತಿದ್ದ ನಮ್ಮ ನಡುವಣ ಪತ್ರಗಳ ವಿನಿಮಯದ ಅನುಭವಗಳನ್ನು ಹಸಿರಾಗಿಸಿದವು. ನನ್ನ ಕುತೂಹಲ ಕೆರಳಿಸಿದ ಮತ್ತು ನನ್ನ ಮನಸ್ಸನ್ನು ಯಾವಾಗಲೂ ಸೂರೆಗೊಂಡ ಸಂಸ್ಕೃತಿಯೊಂದರ ಯಥಾರ್ಥ ದರ್ಶನವಾಗಿತ್ತದು. ಸಾಹಿತ್ಯ, ರಾಜಕಾರಣ ಮತ್ತು ನಿಮಗೆ ಬೇಕಿದ್ದರೆ-ಪೌರ್ವಾತ್ಯ ಮತ್ತು ಲ್ಯಾಟಿನ್ ಅಮೇರಿಕನ್ ಸಂಸ್ಕೃತಿಗಳ ನಡುವಿನ ಅಂತರಗಳು, ಯಾವ ಕಾಲಕ್ಕೂ ಆಸಕ್ತಿದಾಯಕ, ಜನಾಂಗ ಮತ್ತು ವರ್ಣಗಳ ಸೈದ್ಧಾಂತಿಕ ಚರ್ಚೆಯ ಗೊಡವೆಗೆ ಹೋಗದೆ, ಮಧು ಅವರು ತಮ್ಮ ಮಗಳು ರಾಖಿ ತನ್ನ ಶ್ವೇತ ವರ್ಣದ ಹಿರಿಯ ಸಹಪಾಠಿಗಳ ಪೂರ್ವಗ್ರಹಪೀಡಿತ ಮನೋಭಾವವನ್ನು ಅಳುಕಿಲ್ಲದೆ ಎದುರಿಸಿದ ಬಗೆ ಮತ್ತು ಆ ಶಾಲಾ ವಾಹನ ಚಾಲಕನ ಅಸಾಧಾರಣ, ಸಕಾಲಿಕ ಮತ್ತು ಸ್ವಯಂಪ್ರೇರಿತ ಪ್ರತಿಕ್ರಿಯೆಯನ್ನು ಸ್ಮರಿಸಿರುವ ರೀತಿ ಅನನ್ಯ. ಅವರು ನಿರೂಪಿಸಿರುವ ಈ ಸಣ್ಣ ಘಟನೆ, ಓರ್ವ ಚಿಕ್ಕ ಬಾಲಿಕೆಯ ಅನ್ಯಾಯದ ವಿರುದ್ಧ ಹೋರಾಡಬೇಕೆನ್ನುವ ಕೆಚ್ಚು ಮತ್ತು ಸ್ಥೈರ್ಯ ಹಾಗೂ ಸಮಾನತೆಯಲ್ಲಿ ವಿಶ್ವಾಸವುಳ್ಳ ಜನರ ಸಹಜ ಪ್ರತಿಕ್ರಿಯೆಯ, ಅದಾವ ಬಗೆಯ ಪೂರ್ವ ನಿಯೋಜಿತ ಪ್ರವಚನದ ಜಂಜಾಟವಿಲ್ಲದ ಮನೋಜ್ಞ ಚಿತ್ರಣ.

ಲ್ಯಾಟಿನ್ ಅಮೇರಿಕನ್ ರಾಜಕೀಯ ತತ್ವ ಪ್ರಣಾಲಿಗಳು ಮತ್ತು ಪರಂಪರೆಗಳು ಜೊತೆಯಲ್ಲೇ ಅಲ್ಲಿಯ ಪ್ರಭುತ್ವ ಮತ್ತು ಧೀಮಂತ ಸಾಹಿತಿವೃಂದ, ದಕ್ಷಿಣ ಏಶಿಯಾದ ರಾಜನೈತಿಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗಿಂತ ಬಹು ಭಿನ್ನವಾದ ದೃಷ್ಟಿಕೋನವನ್ನು ಅನಾವರಣಗೊಳಿಸುತ್ತವೆ. ಈ ಸರಳ ಕತೆಗಳಲ್ಲಿ ಈ ತುಲನೆ ಮತ್ತೆ ಮತ್ತೆ ಮರುಕಳಿಸಿದೆ. ಹಾಮಬರ್ಗ, ಮಿನ್ಸ್ಕ, ಲಿಸ್ಬೊಆ ಜೊತೆಗೆ ಮತ್ತೂ ಉಳಿದ ದೇಶಗಳಲ್ಲಿಯ ಮಧು ಅವರ ಎಲ್ಲ ನಿಯುಕ್ತಿಗಳು ನನ್ನ ಗ್ರಾಮೀಣ ರಾಜಸ್ಥಾನದ ಜೀವನಕ್ಕೆ ವೈವಿಧ್ಯಮಯ ರಂಗು ತಂದವು. ಅವರು ಪುನರುಚ್ಚರಿಸಿದ ಮುತ್ತಮ್ಮನವರ ಪ್ರಸಂಗವೇ ಎನ್ನಿ, ಅಥವಾ ಮಿನ್ಸ್ಕದ ಅಕ್ರಮ ವಲಸೆಗಾರರ ದುಸ್ಥಿತಿಯೇ ಇರಲಿ, ಎಲ್ಲವೂ ಮುಗಿಯದ ಕತೆಗಳು; ಅವು ಆಯಾಕಾಲದ ಮತ್ತು ನಿರಂತರವಾಗಿ ಅನುರಣಿಸುವಂತಹವು. ನಾವು ಇಂದು ಕೋವಿಡ್-19ರ ವಲಸೆ ಹೋದ ಕಾರ್ಮಿಕರ ಶೋಚನೀಯ ಸ್ಥಿತಿಗೆ ಸಾಕ್ಷೀದಾರರು; ಈ ವಲಸೆ ಕೂಲಿಕಾರರು ತಮ್ಮ ಸ್ವಂತ ದೇಶದಲ್ಲೇ ಹೇಳಲಸಾಧ್ಯವಾದ ಬವಣೆಗೆ ತುತ್ತಾಗಿದ್ದಾರೆ. ಬಹುಶಃ ವಿಶ್ವದ ಯಾವ ಮೂಲೆಯಲ್ಲಾದರೂ ಸರಿಯೆ, ವಲಸೆಗಾರರ ಈ ಪೀಡನೆ ತಪ್ಪಿದ್ದಲ್ಲ ಎನ್ನಿಸುತ್ತದೆ.

ಮಧು ಅವರ ಈ ಕತೆಗಳ ಶಕ್ತಿ ಇರುವದು ಅವರು ಓದುಗನ ಎದುರು ಕುಳಿತು ಆಪ್ತವಾಗಿ ಮಾತನಾಡುತ್ತಿದ್ದಾರೇನೋ ಎಂಬ ಭ್ರಮೆ ಹುಟ್ಟಿಸುವ ಅವರ ನೇರವಾದ ಶೈಲಿಯಲ್ಲಿ. ಸರಕಾರಿ ಸೌಲಭ್ಯ ಮತ್ತು ಸವಲತ್ತುಗಳ ಹಿಂದೆ ನಡೆಯುವುದೇನು ಎಂಬುದನ್ನು ತಿಳಿದುಕೊಳ್ಳಬೇಕೆಂಬ ಕೌತುಕವುಳ್ಳ ಎಲ್ಲ ಓದುಗರನ್ನೂ ಇದು ಆಕರ್ಷಿಸದೇ ಬಿಡದು. ಇಲ್ಲಿ ಉದ್ಧರಿಸಿರುವ ಘಟನೆಗಳು ಬಿಚ್ಚಿಕೊಳ್ಳುತ್ತ ಹೋದ ಹಾಗೆ, ನೈತಿಕ ಆಡಳಿತ ನೀಡಬೇಕೆಂಬ ಇಚ್ಛೆಯುಳ್ಳವರಿಗೆ ಅವರ ಆ ಪಯಣದಲ್ಲಿ ಮಾರ್ಗದರ್ಶನ ಸಹ ಇಲ್ಲಿ ಸಿಗುತ್ತದೆ. ತಮ್ಮ ನಿರ್ಣಯಗಳ ಪರಿಣಾಮವಾಗಿ 'ಶಿಕ್ಷಾರ್ಹ ನಿಯುಕ್ತಿ ಸಿಕ್ಕರೂ ಅದನ್ನು ತೆಗೆದುಕೊಳ್ಳಲು ಹಿಂಜರಿಯದವರು, ದೇಶಾಡಳಿತದ ತಮ್ಮ ಈ ಕಾರ್ಯದಲ್ಲಿ, ಬದ್ಧತೆ ಮತ್ತು ಋಜುತ್ವವನ್ನು ಉಳಿಸಿಕೊಳ್ಳಲು ಸಾಧ್ಯವೆಂದು ಈ ಪುಸ್ತಕದ ಮೂಲಕ ಮಧು ಹೇಳುತ್ತಿದ್ದಾರೆ ಎಂದು ಭಾಸವಾಗುತ್ತದೆ. ಸಂವಿಧಾನ ತತ್ವಗಳು ಮತ್ತು ಕಾರ್ಯನೀತಿಯನ್ನು ಸರಕಾರದ ಆಡಳಿತದ ಕ್ರಿಯಾ ಸಾಧನಗಳಾಗಿ ಅದು ಹೇಗೆ ಬಳಸಬಹುದೆಂಬುದನ್ನು ಕಲಿಯಲು ಸೇವಾಡಳಿತ ಆಕಾಂಕ್ಷಿಗಳಿಗೆ ಇಲ್ಲಿ ಪ್ರೇರಣೆ ಸಿಗುತ್ತದೆ. ಏನಿದ್ದರೂ, ನ್ಯಾಯದ ಸತ್ಯ ಮತ್ತು ಯುಕ್ತವಾದ ದಾರಿಯಲ್ಲಿಯ ಪಯಣ ಇಂದಿಗೂ ಸಾಧ್ಯ.

-ಅರುಣಾ ರಾಯ್

*****

ಮೂಲ ಕೃತಿಯ ಲೇಖಕಿ ಮಧು ಭಾದುರಿ ಅವರು ಬರೆದ ಪ್ರಸ್ತಾವನೆಯ ಮಾತುಗಳು...

ನಾನು ಸೇವೆ ಸಲ್ಲಿಸಿದ್ದು ಭಾರತೀಯ ವಿದೇಶಾಂಗ ಖಾತೆಯಲ್ಲಿ. ಬೇರೆ ಬೇರೆ ದೇಶಗಳಲ್ಲಿಯ ನನ್ನ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಳ್ಳಬೇಕೆಂಬ ಮತ್ತು ಅದರ ಬಗ್ಗೆ ಬರೆಯಬೇಕೆಂಬ ವಿಚಾರ ನನ್ನನ್ನು ಅದೆಷ್ಟೋ ದಿನಗಳಿಂದ ಕಾಡುತ್ತಲೇ ಇದೆ. ತುಸು ಸೋಮಾರಿತನ ಮತ್ತು ಅದಕ್ಕೂ ಹೆಚ್ಚಾಗಿ ಹೊಸದೇನನ್ನಾದರೂ ಶುರು ಮಾಡುವ ಮೊದಲಿನ ಸಹಜ ಹಿಂಜರಿಕೆ ಮತ್ತು ಆತಂಕಗಳೇ ಕಾರಣವಾಗಿ ಈ ಕೆಲಸವನ್ನು ವರ್ಷಗಟ್ಟಲೇ ಮುಂದೂಡಿದ್ದಾಯಿತು. ನನ್ನ ಜೀವಂತ ಕತೆಗಳ ಪಟ್ಟಿ ಸಾಕಷ್ಟು ದೊಡ್ಡದಿದೆ. ವೈಯಕ್ತಿಕ ಮತ್ತು ಅಲ್ಪಕಾಲಿಕ ಪ್ರಸ್ತುತಿಯನ್ನು ಮೀರಿದವುಗಳನ್ನಷ್ಟೇ ಇಲ್ಲಿ ನಾನು ಹಂಚಿಕೊಳ್ಳಲು ಆಯ್ಕೆ ಮಾಡಿಕೊಂಡಿದ್ದೇನೆ. ಈ ಸಂಗ್ರಹದಲ್ಲಿ ಕಾಣಸಿಗದ ಕತೆಗಳು ವೈಯಕ್ತಿಕವಾಗಿ ನನಗೆ ಬಹಳ ಅಮೂಲ್ಯವಾದವು ಮತ್ತು ಅವು ಚಿರಕಾಲಕ್ಕೂ ನನ್ನ ಸ್ವಂತದ ಸಂಪತ್ತಾಗಿಯೇ ಉಳಿಯುತ್ತವೆ.

ಹಿಂದಿ ಬಾರದ ನನ್ನ ಕೆಲವು ಸ್ನೇಹಿತರು ಈ ನನ್ನ ಅನುಭವಗಳ ಕಂತೆಯನ್ನು ನಾನು ಇಂಗ್ಲಿಷಿನಲ್ಲೇ ಬರೆಯಬೇಕೆಂದು ಇಚ್ಛಿಸಿದರು. ನಾನೂ ಅದನ್ನೇ ಬಯಸಿದೆ. ಆದರೆ, ಲೆಕ್ಕಣಿಕೆ ಹಾಳಿಯನ್ನು ಮುಟ್ಟಿದಾಕ್ಷಣ, ನನ್ನ ಅರಿವನ್ನು ಮೀರಿ, ಅನೈಚ್ಛಿಕವಾಗಿ ಮೂಡಿಬಂದ ಲಿಪಿ ದೇವನಾಗರಿಯಾಗಿತ್ತು. ಇನಗ್ರಿಡ್, ಕುಂದಾ, ನವರೇಖಾ ಮತ್ತು ಸುಧಾರ ಮಾತಿಗೆ ಮನ್ನಣೆ ಕೊಟ್ಟು ನಾನೀಗ ನನ್ನ ಹಿಂದೀ ಬರಹದ ಇಂಗ್ಲಿಷ್ ತುರ್ಜುಮೆ ಬರೆಯುತ್ತಿದ್ದೇನೆ.

ಭಾರತೀಯ ವಿದೇಶ ಸೇವೆಯಿಂದ ನಿವೃತ್ತಿಗೊಂಡಾಗ, 'ವಿದೇಶ ಸೇವೆಯಿಂದ ನಿವೃತ್ತಿ, ಕೊನೆಗೂ ಸಿಕ್ಕಿತಪ್ಪ ಮುಕ್ತಿ' ಎಂಬ ನಿರಾಳ ಭಾವನೆ ಹುಟ್ಟಿತೆಂದರೆ ತಪ್ಪಾಗಲಿಕ್ಕಿಲ್ಲ. ಮತ್ತಾರಿಗೂ ನಾನು ಇನ್ನು ಮುಂದೆ ಹೊಣೆಗಾರಳಲ್ಲ; ನನ್ನ ಜವಾಬ್ದಾರಿ ಕೇವಲ ನನ್ನ ಆಗುಹೋಗುಗಳಿಗಷ್ಟೇ ಸೀಮಿತ ಎಂಬ ಅರಿವು ನನ್ನ ಭುಜಗಳ ಮೇಲಿನ ಬಹು ದೊಡ್ಡ ಭಾರವನ್ನು ಇಳಿಸಿತೆನ್ನಬೇಕು. ನಾನು ಎಷ್ಟೋ ಹಗುರಳಾದೆ. ಜೊತೆಗೆ, ಮತ್ತೋರ್ವರನ್ನು ಪ್ರತಿನಿಧಿಸುವ ಕರ್ತವ್ಯದಿಂದ ನಿವೃತ್ತಿಯಾದಾಗ ಸಿಗುವ ಸ್ವಾತಂತ್ರ್ಯ ಏರಿಸುವ ಮತ್ತೇ ಬೇರೆ. ನನ್ನ ಸೇವಾ ನಿವೃತ್ತಿಯ ಜೀವನವನ್ನು, ಪ್ರತಿನಿಧಿತ್ವದ ಸಕಲ ಮೆರವಣಿಗೆಗಳಿಂದ ದೂರವಿಡುವ ಶಪಥಗೈದೆ. ಸಾರ್ವಜನಿಕ ಸತ್ಕಾರ ಸಮಾರಂಭಗಳು, ಔಪಚಾರಿಕ ಊಟೋಪಚಾರಗಳ ಆಮಂತ್ರಣಗಳು, ಚಹ, ಪಾನೀಯಗಳ ಕೂಟಗಳು ನನ್ನ ಮನೆಯಿಂದ ಹೇಳಹೆಸರಿಲ್ಲದೇ ಮಾಯವಾದವು.

ವಿದೇಶಾಂಗ ಖಾತೆಯನ್ನು ಸೇರುವ ಪೂರ್ವದಲ್ಲಿ ನಾನು ದಿಲ್ಲಿ ವಿಶ್ವವಿದ್ಯಾಲಯದ ಇಂದ್ರಪ್ರಸ್ಥ ಕಾಲೇಜಿನಲ್ಲಿ ತತ್ವಶಾಸ್ತ್ರದ ಶಿಕ್ಷಕಿಯಾಗಿದ್ದೆ. ಶಿಕ್ಷಕವೃತ್ತಿಯ ಮೂರುವರ್ಷಗಳು ಮರೆಯಲಸಾಧ್ಯವಾದ ಮಧುರ ನೆನಪುಗಳು! ಮುಂದಿನ ದಿನಗಳಲ್ಲಿ, ಈ ಶಿಕ್ಷಕವೃತ್ತಿ ಬಿಟ್ಟು ರಾಯಭಾರಿತ್ವದ ಕೆಲಸಕ್ಕೆ ಜಿಗಿದು ತಪ್ಪು ಮಾಡಿದೆನೇನೋ ಎಂದು ಆಗಾಗ ಹಳಹಳಿಸಿದ್ದೇನೆ.

ನನ್ನ ವಿದೇಶಾಂಗ ಖಾತೆಯಲ್ಲಿನ ಸೇವಾವಧಿಯಲ್ಲಿ, ನನ್ನ ನಿಯುಕ್ತಿಯಾದ ಬೇರೆ ಬೇರೆ ದೇಶಗಳಲ್ಲಿ ನಡೆದ ಘಟನೆಗಳ, ಆದ ಸಂಗತಿಗಳ ಮತ್ತು ಅಲ್ಲಿಯ ನನ್ನ ಸ್ವಂತ ಅನುಭವಗಳ ಸಂಗ್ರಹ, ಈ ಕತೆ! ನನ್ನ ಸೇವಾ ನಿವೃತ್ತಿಯ ನಂತರದ ಕೆಲವು ಸಾಹಸ ಮತ್ತು ದುಸ್ಸಾಹಸಗಳನ್ನೂ ಇಲ್ಲಿ ಉಲ್ಲೇಖಿಸಿದ್ದೇನೆ. ಈ ಕೆಲವೊಂದು ಘಟನೆಗಳು, ಆಯಾ ದೇಶಗಳ ಬಗೆಗಿನ, ಅಲ್ಲಿಯ ಜನರ ಬಗೆಗಿನ ಮತ್ತು ಎಲ್ಲಕ್ಕೂ ಹೆಚ್ಚಾಗಿ ನನ್ನ ಅಸ್ಮಿತೆಯ ಬಗೆಗಿನ ನನ್ನ ಕಲ್ಪನೆಗೆ ಹೊಸ ಆಯಾಮವನ್ನಿತ್ತವು. ಕೆಲವೊಮ್ಮೆ ಈ ಎಲ್ಲದರ ಬಗ್ಗೆ ನನ್ನ ದೃಷ್ಟಿಕೋನವನ್ನು ಹಟಾತ್ತಾಗಿ ಮತ್ತು ಇಡಿಯಾಗಿ ಬದಲಿಸಿದವು ಕೂಡ.

ʻಬಿಚ್ಚಿಟ್ಟ ನೆನಪುಗಳು' ಮೊದಲ ಬಾರಿಗೆ ಹಿಂದಿ ಸಾಹಿತ್ಯ ನಿಯತಕಾಲಿಕ 'ಹಂಸ'ದಲ್ಲಿ ಅಂಕಣ ರೂಪದಲ್ಲಿ 'ಸಫರನಾಮಾ' ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರವಾಸ ಕಥನವಾಗಿ ಪ್ರಕಟವಾಯಿತು.

-ಮಧು ಭಾದುರಿ

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...