ಮಾನವನ ಮೂರ್ಖತನದ ಬಗ್ಗೆ ಲೇಖಕರು ಬರೆಯದೇ ಮತ್ಯಾರು ಬರೆಯಬೇಕು?


'ಕಠಾರಿಯವರ ವ್ಯಂಗ್ಯ ಮತ್ತು ವಿಡಂಬನೆಗಳು ವಾಸ್ತವದ ವೈರುದ್ಧ್ಯಗಳನ್ನು ದಿಟ್ಟವಾಗಿ ತೆರೆದಿಡುತ್ತವೆ. ಇವುಗಳ ಓದು  ಸಮಾಜದ ಹಲವು ಬೆಳವಣಿಗೆಗಳ  ಬಗ್ಗೆ ಮಾತಾಡಲು ಮತ್ತು ಚರ್ಚಿಸಲು ಪ್ರಚೋದನೆ ನೀಡುತ್ತದೆ' ಎನ್ನುತ್ತಾರೆ ಹಿರಿಯ ಲೇಖಕ ಪುರುಷೋತ್ತಮ ಬಿಳಿಮಲೆ ಅವರು ಚಂದ್ರಪ್ರಭ ಕಠಾರಿ ಅವರ ಕಠಾರಿ ಅಂಚಿನ ನಡಿಗೆ ಅಂಕಣ ಸಂಕಲನಕ್ಕೆ ಬರೆದ ಬೆನ್ನುಡಿ ನಿಮ್ಮ ಓದಿಗಾಗಿ. 

ಚಂದ್ರಪ್ರಭ ಕಠಾರಿಯವರ ಪ್ರಸ್ತುತ ಪುಸ್ತಕ ʼಕಠಾರಿ ಅಂಚಿನ ನಡಿಗೆʼ, ಅವರು ಸಾಂದರ್ಭಿಕವಾಗಿ ಬರೆದ 34 ಅಂಕಣ ಬರೆಹಗಳ ಸಂಕಲನ. ನೇರ ಮತ್ತು ಖಚಿತ ಮಾತುಗಳಿಗೆ ಹೆಸರಾಗಿರುವ ಅವರು ಈ ಪುಸ್ತಕದಲ್ಲಿ ವ್ಯಂಗ್ಯ ಮತ್ತು ವಿಡಂಬನೆಗಳು ಕೂಡಾ ಎಷ್ಟು ಪರಿಣಾಮಕಾರಿಯಾಗ ಬಲ್ಲವು ಎಂಬುದನ್ನು ಓದುಗರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಹೀಗೆ ಬರೆಯಲು ಬೇಕಾದ ಧೈರ್ಯ ಅವರಲ್ಲಿರುವುದು ವಿಶೇಷವೇ ಸರಿ. ಅನೇಕರು ಗುಟ್ಟಾಗಿ ಮಾತಾಡಲೂ ಹೆದರುವ ವಿಷಯಗಳ ಬಗ್ಗೆ  ಕಠಾರಿಯವರು ಇಲ್ಲಿ ಯಾವ ಸಂಕೋಚವೂ ಇಲ್ಲದೆ ಬರೆದಿದ್ದಾರೆ. 

ಕಠಾರಿಯವರ ಹರಿತವಾದ ವ್ಯಂಗ್ಯ-ವಿಡಂಬನೆಗಳು ವರ್ತಮಾನದ ಹಲವು ಘಟನೆಗಳ ಸುತ್ತ ಬೆಳೆದಿವೆ. ಕೋಮುವಾದ, ದ್ವೇಷ ಭಾಷಣ, ಧಾರ್ಮಿಕ ಅವಾಂತರಗಳು, ಬಡವರ ಮನೆಯ ಮೇಲೆ ಮಾತ್ರ ಹರಿಯುವ ಬುಲ್ಡೋಜರುಗಳು, ಭ್ರಷ್ಟಾಚಾರದ ಹೆಚ್ಚಳ, ಪಠ್ಯ ಪುಸ್ತಕ ರಚನೆಯ ಬಿಕ್ಕಟ್ಟುಗಳು,  ಮಾಧ್ಯಮಗಳ ದಯನೀಯ ಸ್ಥಿತಿ, ದಿಢೀರನೆ ಹುಟ್ಟಿ ಮಾಯವಾದ ಉರಿಗೌಡ- ನಂಜೇಗೌಡರು, ವಾಟ್ಸಪ್‌ ವಿಶ್ವವಿದ್ಯಾಲಯದ ಪದವೀಧರರ ಜ್ಞಾನ ಮೀಮಾಂಸೆ, ಸುಳ್ಳುಗಳ ವಿಜೃಂಭಣೆ, ನಕಲಿ ನಾಯಕರ ಕಿತಾಪತಿಗಳು, ಸಮಾಜವನ್ನು ಹಿಂದಕ್ಕೆ ತಳ್ಳುತ್ತಿರುವ ಮೌಢ್ಯಗಳು, ರಾಜಕಾರಣಿಗಳ ಹಾಸ್ಯಾಸ್ಪದ ಹೇಳಿಕೆಗಳು, ಟ್ರೋಲ್‌ ಗಿರಾಕಿಗಳ ಕಷ್ಟಗಳೇ ಮೊದಲಾದ ಹಲವು ಸಂಗತಿಗಳು ಇಲ್ಲಿ ಕಠಾರಿಯವರ ಮಾತಿನೇಟಿಗೆ ಗುರಿಯಾಗಿವೆ.  

ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿ, ಲಂಕೇಶ್‌ ಮೊದಲಾದವರು ವ್ಯಂಗ್ಯವನ್ನು ಪರಿಣಾಮಕಾರಿಯಾಗಿ ಬಳಸಿದ್ದುಂಟು. ಚಾಪ್ಲಿನ್‌ ಈ ವಿಷಯದಲ್ಲಿ ಅದ್ಭುತವನ್ನೇ ಸಾಧಿಸಿದ. ನಮ್ಮ ಸಾಮಾನ್ಯ ಗ್ರಹಿಕೆಗಳಲ್ಲಿಯ ವಿರೋಧಾಭಾಸಗಳನ್ನು ಅವರು ದಿಟ್ಟವಾಗಿ ಬಯಲಿಗೆಳೆದಿದ್ದರು.  ಲಂಕೇಶರು ಬಳಸಿದ ʼಬಂʼ ಮತ್ತು ʼಗುಂʼ ಪದಗಳು ಒಂದು ಕಾಲಕ್ಕೆ ರಾಜ್ಯದ ರಾಜಕಾರಣವನ್ನೇ ಅಲ್ಲಾಡಿಸಿದ್ದವು. ಈ ಪರಂಪರೆಯನ್ನು ತನ್ನದೇ ರೀತಿಯಲ್ಲಿ ಮುಂದುವರೆಸಿರುವ ಚಂದ್ರಪ್ರಭ ಕಠಾರಿಯವರು ವರ್ತಮಾನ ಕಾಲದಲ್ಲಿ ಪ್ರಚಲಿತದಲ್ಲಿರುವ ಅನೇಕ ಪದಗಳನ್ನು ಈ ಪುಸ್ತಕದಲ್ಲಿ  ಬಳಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇವು ಭಾಷಾಭ್ಯಾಸಿಗಳ ಪ್ರಯೋಜನಕ್ಕೂ ಬರಬಹುದು. 

ಕಠಾರಿಯವರ ವ್ಯಂಗ್ಯ ಮತ್ತು ವಿಡಂಬನೆಗಳು ವಾಸ್ತವದ ವೈರುದ್ಧ್ಯಗಳನ್ನು ದಿಟ್ಟವಾಗಿ ತೆರೆದಿಡುತ್ತವೆ. ಇವುಗಳ ಓದು  ಸಮಾಜದ ಹಲವು ಬೆಳವಣಿಗೆಗಳ  ಬಗ್ಗೆ ಮಾತಾಡಲು ಮತ್ತು ಚರ್ಚಿಸಲು ಪ್ರಚೋದನೆ ನೀಡುತ್ತದೆ. ಮಾನವನ ಮೂರ್ಖತನಗಳ ಬಗ್ಗೆ ಲೇಖಕರು ಬರೆಯದೇ ಹೋದರೆ ಮತ್ಯಾರು ಬರೆಯಬೇಕು? 

  • ಪುರುಷೋತ್ತಮ ಬಿಳಿಮಲೆ 

MORE FEATURES

ಧೀರಜ್ ಪೊಯ್ಯೆಕಂಡ ಅವರ ‘ಆತ್ಮ ಕತೆ’ ಕಾದಂಬರಿ ಬಿಡುಗಡೆ

13-05-2024 ಬೆಂಗಳೂರು

ಪತ್ರಕರ್ತ ಧೀರಜ್‌ ಪೊಯ್ಯೆಕಂಡ ಅವರ, ಹಾರರ್‌ ಥ್ರಿಲ್ಲರ್‌ ಕಾದಂಬರಿ ‘ಆತ್ಮ ಕತೆ’ಯನ್ನು...

ಇಲ್ಲಿ ಸ್ವಾನುಭವದ ಕುತೂಹಲಕಾರಿ ಸಂಕಥನಗಳಿವೆ

13-05-2024 ಬೆಂಗಳೂರು

'ಈ ಪುಸ್ತಕದ ಲೇಖನಗಳು ಲಲಿತ ಪ್ರಬಂಧದ ದಾಟಿಯಲ್ಲಿದ್ದರೂ ಪರಿಸರದ ಕುರಿತು ಗಂಭೀರವಾದ ಸಮಸ್ಯೆಗಳ ಪರಿಸರ ನಾಶದ ಕಾರಣಗಳ...

ಉಡುಪಿ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಭಾವಗೀತೆ ಗಾಯನ ಸ್ಪರ್ಧೆ

13-05-2024 ಬೆಂಗಳೂರು

ಬೆಂಗಳೂರು: ಉಡುಪಿ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸುವರ್ಣಾವಕಾಶ. ಡಾ. ಎಂ ಗೋಪಾಲಕೃಷ್ಣ ಅಡಿಗರ ಯಾವುದಾ...