ಮನೋಜ್ಞ ಮತ್ತು ರೋಚಕ ಕಾದಂಬರಿ ‘ಕರಮಜೋವ್ ಸಹೋದರರು’


ರಷ್ಯಾದ ಫ್ಯೋದೊರ್ ದಾಸ್ತೋವ್ ಸ್ಕಿ ಅವರ ಕಾದಂಬರಿ- ದಿ. ಬ್ರದರ್ಸ್ ಕರಮಜೋವ್ . ಲೇಖಕ ಕೆ. ಶ್ರೀನಾಥ ಅವರು ‘ಕರಮಜೋವ್ ಸಹೋದರರು’ ಶೀರ್ಷಿಕೆಯಡಿ ಕನ್ನಡೀಕರಿಸಿದ್ದು, ವಿಶ್ವದ ಶ್ರೇಷ್ಠ ಕಾದಂಬರಿ ಎಂದೇ ಖ್ಯಾತಿಯ ಈ ಕೃತಿಯ ಕುರಿತು ಲೇಖಕರ ಮಾತುಗಳು ಇಲ್ಲಿವೆ.

ಬ್ರದರ್ಸ್ ಕರಮಜೊವ್ ಪುಸ್ತಕವನ್ನು ಓದಲು ಶುರುಮಾಡಿಕೊಂಡಾಗ ಅದರಲ್ಲಿನ ಬದುಕಿನ ವಿವಿಧ ರೀತಿಯ ಸ್ಪಂದನಗಳು ಮತ್ತು ಅಪಸ್ವರಗಳ ಬಗ್ಗೆ ಚಿತ್ರಿಸಿರುವ ಬಗೆಯು ನನ್ನ ಮನಸ್ಸನ್ನು ಕದಡಿತು. ಇಂತಹ ಮಹಾನ್ ಕೃತಿಯ ಪಾಕವನ್ನು ಕನ್ನಡಿಗರಿಗೆ ಭಾಷಾಂತರಿಸಿ ಬಡಿಸುವ ಇಚ್ಚೆ ನನ್ನಲ್ಲಿ ತೀವ್ರವಾಗ ತೊಡಗಿತು. ಪ್ರಪಂಚದಲ್ಲಿನ ಶ್ರೇಷ್ಟ ಕೃತಿಗಳಾದ ಈಡಿಪಸ್ ರೆಕ್ಸ್, ಹ್ಯಾಮ್ಲೆಟ್ ಮತ್ತು ಬ್ರದರ್ಸ್ ಕರಮಜೊವ್, ಇವುಗಳೆಲ್ಲದರಲ್ಲೂ ಒಂದು ಏಕಸ್ವಾಮ್ಯತೆ ಇದೆ. ಅದೇ ಪಿತೃ ಹತ್ಯೆ. ಮತ್ತು ಬ್ರದರ್ಸ್ ಕರಮಜೊವ್ ನಲ್ಲಿ ಅದನ್ನು ಫ್ರಾಯ್ಡ್ ಅಪಸ್ಮಾರಕ್ಕೆ (epilepsy) ಜೋಡಿಸುತ್ತಾನೆ.

ಈ ಕೃತಿಯಲ್ಲಿ ಜೂಜಿನ ಬಗ್ಗೆ ವಿಶೇಷವಾದ ವಿಶ್ಲೇಷಣೆಯಿದೆ. ಈ ಜೂಜಿನ ಬಗ್ಗೆಗಿನ ಒಕ್ಕಣೆ ಫ್ಯೋದೊರ್ ದಾಸ್ತೋವ್ ಸ್ಕಿಯ ಸ್ವಂತ ಅನುಭವದಿಂದಲೇ ಹೊರ ಹೊಮ್ಮಿದಂತಿದೆ. ಈ ಜೂಜೆನ್ನುವುದು ಪ್ರತಿಭಟನೆಯಿಂದ ಕೂಡಿರುವ ವಿಧಿಯ ಜತೆ ಹೆಣಗಾಡುವ ಒಂದು ಸಂಘರ್ಷ. ಇದರ ಜತೆಯೇ ಹುಟ್ಟುವ ಪಾಪ ಪ್ರಜ್ಞೆ ಜೂಜುಕೋರನ ಮನಸ್ಸಿನಲ್ಲಿ ಹುಟ್ಟುವಂತಹ ಸೋಲ ಬೇಕೆನ್ನುವ ಒತ್ತಡವನ್ನು ಹೆಚ್ಚಿಸುತ್ತದೆ. ಮತ್ತು ಈ ಪ್ರವೃತ್ತಿಯನ್ನು ಫ್ಯೋದೊರ್ ದಾಸ್ತೋವ್ ಸ್ಕಿ ತನ್ನ ಹೆಂಡತಿಯಲ್ಲಿ ಕಂಡ. "ಅವಳು ಗಮನಿಸಿದ್ದು ಮುಕ್ತಿಯ ಭರವಸೆಯನ್ನು ನೀಡುವ ವಿಷಯವೇನೆಂದರೆ-ಗಂಡನ ಸಾಹಿತ್ಯಕ ನಿರ್ಮಾಣಗಳು. ಆದರೆ ಅವರು ಎಲ್ಲವನ್ನೂ ಕಳೆದುಕೊಂಡಾಗ ಸಾಹಿತ್ಯದ ಕಾರಣದಿಂದ ಉತ್ತಮ ಸ್ಥಿತಿಗೆ ಬರಲಾಗಲಿಲ್ಲ. ಮತ್ತು ಅವನ ಪಾಪ ಪ್ರಜ್ಞೆಗೆ ತೃಪ್ತಿ ತಂದಿದ್ದು ತನ್ನ ಮೇಲೆ ತಾನೇ ವಿಧಿಸಿಕೊಂಡ ಶಿಕ್ಷೆ.

ಬ್ರದರ್ಸ್ ಕರಮೊಜೊವ್ ಯಾರೂ ಬರೆಯದೇ ಇದ್ದಂತಹ ಅತ್ಯಂತ ಭವ್ಯವಾದ ಕಾದಂಬರಿ ಎಂದು ಹೇಳಲಾಗಿದೆ. ಇದು ದಾಸ್ತೋವ್ ಸ್ಕಿಯ ಜೀವನದ ಅಂತ್ಯಕ್ಕಿಂತ ಮುಂಚೆ ರಚಿಸಿದ ಅನುಪಮ ಕೃತಿ. ಇದರಲ್ಲಿ ಲೇಖಕ ಯಶಸ್ವಿಯಾಗಿ ಅವನ ಬರಹದ ಕೌಶಲ್ಯದ ಉತ್ತುಂಗ ಶಿಖರಕ್ಕೇರುತ್ತಾನೆ. ಈ ಕಾದಂಬರಿಯಲ್ಲಿ ಅನೇಕ ಮನಶ್ಯಾಸ್ತ್ರದ ಒಳನೋಟಗಳನ್ನು ನಾವು ಕಾಣಬಹುದು, ಈಡಿಪಸ್ ಕಾಂಪ್ಲೆಕ್ಸ್ ನ ಲಕ್ಷಣಗಳನ್ನು ಆಗಾಗ್ಗೆ ಸಂಧಿಸುತ್ತೇವೆ, ಮನುಷ್ಯನ ಆಂತರಿಕ ಘರ್ಷಣೆಯ ಸ್ವಭಾವವನ್ನು ಕ್ರೈಸ್ತ ಧರ್ಮದ ಬಗ್ಗೆ ಅನೇಕ ಉಲ್ಲೇಖನಗಳನ್ನು ಕಾಣುತ್ತೇವೆ. ಹೆಣ್ಣಿನ ಬಗ್ಗೆಯ ಲೈಂಗಿಕ ಪ್ರತಿದ್ವಂದಿ, ಒಂದು ಕೆಲಸವನ್ನೆಸಗುವಾಗ ಉಂಟಾಗುವ ಪ್ರಚೋದನೆಗಳನ್ನು ಬಿಚ್ಚಿಡಲಾಗಿದೆ. ಇಡೀ ಕಾದಂಬರಿಯಲ್ಲಿ ತಂದೆಯ ವ್ಯಕ್ತಿತ್ವದ ಬಗ್ಗೆ ಪದೇ ಪದೆ ಉಲ್ಲೇಖಿಸಲಾಗುತ್ತಲೇ ಇರುತ್ತದೆ, ಮತ್ತು ಫೈಡರ್ ಪಾವ್ಲೊವಿಚ್, ತನ್ನ ಮಕ್ಕಳ ಮುಂದೆ ತನ್ನ ಹೆಂಡತಿ ಸೊಫಿಯ ಜತೆಯಲ್ಲಿ ಮಲಗುವ ಕೋಣೆಯಲ್ಲಿ ನಡೆದ ಘಟನೆಗಳ ಬಗ್ಗೆ ಹೇಳುವಷ್ಟು ಹೀನಾಯ ಮಟ್ಟಕ್ಕಿಳಿಯುತ್ತಾನೆ. ಇಡೀ ಕಾದಂಬರಿಯಲ್ಲಿ ಪಿತೃತ್ವದ ಅಧಿಕಾರದ ಬಗ್ಗೆ ಎದುರು ಬೀಳುವುದನ್ನು ಕಾಣುತ್ತೇವೆ.

ಇವಾನ್ ಒoಟಿಗನಾಗಿ ತನ್ನ ತಂದೆಯ ಮೇಲೆ ಕೈಮಾಡಿದ್ದರ ಬಗ್ಗೆ ಅಪರಾಧಿ ಮನೋಭಾವವನ್ನು ತಾಳುತ್ತಾನೆ. ಇಲ್ಲಿ ಸುಂದರಿ ಗ್ರುಶೆಂಕಳ ಬಗ್ಗೆ ಡಿಮಿಟ್ರಿಯ ತಂದೆಯ ಜತೆಯಲ್ಲಿನ ಸ್ಪರ್ಧೆಯಲ್ಲಿ ಈಡಿಪಸ್ ಕಾಂಪ್ಲೆಕ್ಸನ್ನು ಕಾಣುತ್ತೇವೆ, ಮತ್ತು, ಕೊನೆಗೆ ತನ್ನ ತಂದೆಯನ್ನೇ ಕೊಂದನೆಂಬ ಸುಳ್ಳು ಆಪಾದನೆಯನ್ನು ಡಿಮಿಟ್ರಿ ಎದುರಿಸ ಬೇಕಾಗುತ್ತದೆ. ಫೈಡರ್ ಪಾವ್ಲೊವಿಚ್ ಗೆ ಅನೈತಿಕವಾಗಿ ಹುಟ್ಟಿದ ಮಗ, ಸ್ಮೆರ್ಡ್ಯಕೊವ್, ತಂದೆಯ ಕೊಲೆಗೆ ಕಾರಣಕರ್ತನಾಗುತ್ತಾನೆ. ಮತ್ತು ಎಲ್ಲಾ ಮಕ್ಕಳನ್ನೂ ಈ ಕೊಲೆಗೆ ಹೀನಾಯವಾಗಿ ಜವಾಬ್ದಾರಿಯುತರನ್ನಾಗಿ ಮಾಡಲಾಗುತ್ತದೆ.

ಸೈದ್ಧಾಂತಿಕವಾದ ತಳಹದಿಯಿರುವ ಅಧ್ಯಾಯಗಳೆಂದರೆ ಎಲ್ಡರ್ ಜೊಸಿಮ ಅವರ ತಿಳಿಹೇಳಿಕೆ. ಪ್ರಾಪಂಚಿಕವಾದ ಮತ್ತು ಸೈದ್ಧಾಂತಿಕವಾದ ಅನೇಕ ವಿಚಾರಗಳನ್ನು ಅವರ ಸಾವಿನ ಮುಂಚಿನ ಭಾಷಣದಲ್ಲಿ ನುಡಿಯುತ್ತಾರೆ. ಕೊನೆಗೂ ಇದರಲ್ಲಿ ಬರುವ ನ್ಯಾಯಾಲಯದ ದೃಶ್ಯಗಳು ಮನೋಜ್ಞ ಮತ್ತು ರೋಚಕವಾಗಿದೆ.

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...