ಮರಾಠಿಯನ್ನು ಮೀರಿ ಕನ್ನಡ ಪತ್ರಿಕೋದ್ಯಮದ ’ಚಂದ್ರೋದಯ’

Date: 15-07-2022

Location: ಬೆಂಗಳೂರು


ಒಂದು, 1876ರಲ್ಲಿ ಶುರುವಾಗಿದ್ದ - ರಾಷ್ಟ್ರೀಯ ಆಂದೋಲನ ಕಾಲದ ಪ್ರಥಮ ಕನ್ನಡ ಪತ್ರಿಕೆ ಹಾಗೂ ಧಾರವಾಡದ ಮೊದಲ ಕನ್ನಡ ಸುದ್ದಿ ಪತ್ರಿಕೆಯ ಕುರಿತು ಇವತ್ತಿನ ಪತ್ರಿಕೋದ್ಯಮಕ್ಕೆ ಪರಿಚಯಿಸುವ ಕೃತಿಯಾದರೆ, ಇನ್ನೊಂದು ನವೋದಯ ಕಾಲಘಟ್ಟದ ಪ್ರಾತಿನಿಧಿಕ ಸಂಕಲನ. ಈ ಎರಡು ಅಪರೂಪದ ಪುಸ್ತಕಗಳ ಬಗ್ಗೆ, ಲೇಖಕ ಶ್ರೀಧರ ಹೆಗಡೆ ಭದ್ರನ್ ಕನ್ನಡ ಜನಸಮುದಾಯದ ಮುಂದೆ ಕಾಣಿಸಿಕೊಳ್ಳಬೇಕಾದ ಪುಸ್ತಕಗಳನ್ನು ಪರಿಚಯಿಸುವ ಉದ್ದೇಶದ ತಮ್ಮ ಹೊಸ ಅಂಕಣ ’ಸಮಕಾಲೀನ ಪುಸ್ತಕ ಲೋಕ’ದಲ್ಲಿ ಬರೆದಿದ್ದಾರೆ.

ಕನ್ನಡ ಪುಸ್ತಕ ಲೋಕದಲ್ಲಿ ಪ್ರತಿ ತಿಂಗಳೂ ನೂರಾರು ಪುಸ್ತಕಗಳು ಪ್ರಕಟವಾಗುತ್ತವೆ. ಇವುಗಳಲ್ಲಿ ಕನ್ನಡದ ಓದುಗರ ಗಮನಕ್ಕೆ ಬರಬೇಕಾದ ಹಲವು ಪುಸ್ತಕಗಳು ಇರುತ್ತವೆ. ಅಂತಹ ಪುಸ್ತಕಗಳನ್ನು ಪರಿಚಯಿಸುವುದು ಇದೀಗ ಈ “ಸಮಕಾಲೀನ ಪುಸ್ತಕ ಲೋಕ” ಅಂಕಣದ ಮೂಲ ಉದ್ದೇಶ. ಹೀಗೆ ಅವಕಾಶ ಪಡೆಯುವ ಪುಸ್ತಕ ಶ್ರೇಷ್ಠವಾದುದು ಎಂದು ಅರ್ಥವಲ್ಲ. ಒಂದು ಪುಸ್ತಕದ ಮಹತ್ವಕ್ಕೆ ಹಲವು ಕಾರಣಗಳಿರುತ್ತವೆ. ವೈಯಕ್ತಿಕ ಅಭಿರುಚಿ, ಹೊಸತನ, ಸಾಂದರ್ಭಿಕ ಮಹತ್ವ, ಉಪಯುಕ್ತತೆ ಹೀಗೆ.... ನನ್ನ ನಿರಂತರ ಓದಿನ ಮಧ್ಯೆ ಒದಗುವ ವೈಶಿಷ್ಟ್ಯಗಳನ್ನು ಆಧರಿಸಿ ಪ್ರಸ್ತುತ ಅಂಕಣವಿರುತ್ತದೆ. ಹೀಗಾಗಿ ಈ ಆಯ್ಕೆ ತೀರಾ ವೈಯಕ್ತಿಕವಾದುದು. ಯಾಕೆಂದರೆ ಒಂದು ತಿಂಗಳ ಕಾಲಾವಧಿಯಲ್ಲಿ ಪ್ರಕಟವಾದ ಒಂದು ಅತ್ಯುತ್ತಮ ಪುಸ್ತಕ ನನಗೆ ಲಭ್ಯವಾಗದೇ ಹೋಗಬಹುದು. ಅಥವಾ ಓದಲು ಸಾಧ್ಯವಾಗದಿರಬಹುದು. ಪುಸ್ತಕ ಅದೇ ತಿಂಗಳಲ್ಲಿ ಪ್ರಕಟವಾದುದು ಎನ್ನುವುದಕ್ಕಿಂತ ನನ್ನ ಓದಿನ ಮಿತಿಯಲ್ಲಿ ಸಮಾನ ಮನಸ್ಕ ಪುಸ್ತಕಾಸಕ್ತರ ಗಮನಕ್ಕೆ ಬರಬೇಕಾದ ಕೃತಿ ಎಂಬುದು ಮುಖ್ಯ ಗ್ರಹಿಕೆಯಾಗಿರುತ್ತದೆ. ಇದರ ಸ್ವರೂಪ ಶುದ್ಧ ವಿಮರ್ಶಾತ್ಮಕ ಎನ್ನುವುದಕ್ಕೂ ಸಿದ್ಧನಿಲ್ಲ. ಜೊತೆಗೆ ಪರಿಚಯದ ಧಾಟಿಯೂ ಸೇರಬಹುದು. ಇವೆರಡರ ಮಿಶ್ರಣದಿಂದ ಕನ್ನಡ ಜನ ಸಮುದಾಯದ ಮುಂದೆ ಕಾಣಿಸಿಕೊಳ್ಳಬೇಕಾದ ಪುಸ್ತಕಗಳನ್ನು, ಕೆಲವೊಮ್ಮೆ ಲೇಖಕರನ್ನು ಆಧರಿಸಿದ ಮುಖ್ಯ ಪ್ರಸ್ತಾಪಗಳನ್ನು ತರುವುದು ಈ ಅಂಕಣದ ಉದ್ದೇಶ. ಜೊತೆಗೆ ಹೊಸ ಪುಸ್ತಕ ಬಿಡುಗಡೆಯ ಕಾರ್ಯಕ್ರಮದ ವಿವರಗಳೂ ಸಾಂದರ್ಭಿಕವಾಗಿ ಬರಬಹುದು. ಈ ರೀತಿಯ ಬರವಣಿಗೆಗೆ ನನ್ನ ಮುಂದಿರುವ ಆದರ್ಶ ‘ಗ್ರಂಥಲೋಕ’ ಪತ್ರಿಕೆಗೆ ಡಾ. ಹಾ. ಮಾ. ನಾಯಕರು ಬರೆಯುತ್ತಿದ್ದ ಅಂಕಣ ಬರಹಗಳು. ಕನ್ನಡ ಪುಸ್ತಕ ಲೋಕಕ್ಕೆ; ಬರಹಗಾರರು-ಪ್ರಕಾಶಕರು-ಓದುಗರಿಗೆ ‘ಬುಕ್ ಬ್ರಹ್ಮ’ ಮಾಡುತ್ತಿರುವ ಸೇವೆ ಅನನ್ಯವಾದುದು. ಈಗಾಗಲೇ ‘ಬದುಕಿನ ಬುತ್ತಿ’ ಎಂಬ ಕನ್ನಡ ಸಾಹಿತ್ಯದ ಚಿರಕೃತಿಗಳ ಕುರಿತಾದ ಒಂದು ಅಂಕಣವನ್ನು ಕಳೆದೆರಡು ವರ್ಷಗಳಿಂದ ಇಲ್ಲಿ ನಡೆಸಿಕೊಂಡು ಬರುತ್ತಿದ್ದೇನೆ. ಗೆಳೆಯರ ಒತ್ತಾಸೆ ಕಾರಣವಾಗಿ ಈ ಇನ್ನೊಂದು ಅಂಕಣಕ್ಕೆ ತೊಡಗಿಕೊಂಡಿರುವೆ. ಓದು-ಬರೆಹಗಳನ್ನು ದೈನಂದಿನ ಚಟುವಟಿಕೆಯ ಭಾಗವನ್ನಾಗಿಸಿಕೊಂಡಿರುವ ನನಗೆ ಇದು ಪ್ರೀತಿಯ ಕಾಯಕವೇ ಆಗಿದೆ. ವೇದಿಕೆ ಒದಗಿಸಿಕೊಡುತ್ತಿರುವ ‘ಬುಕ್ ಬ್ರಹ್ಮ’ ಬಳಗಕ್ಕೆ ಕೃತಜ್ಞ.

***

ಧಾರವಾಡದ ಚಂದ್ರೋದಯ - ಎನ್. ದಿನೇಶ ನಾಯಕ್
ಪ್ರಕಾಶಕರು: ಅನನ್ಯ ಪ್ರಕಾಶನ, ಧಾರವಾಡ
ಪುಟಗಳು-112; ಬೆಲೆ-110/-

ಕನ್ನಡ ಪತ್ರಿಕೋದ್ಯಮಕ್ಕೆ ಒಂದೂಮುಕ್ಕಾಲು ಶತಮಾನದ ಸಮೃದ್ಧ ಇತಿಹಾಸವಿದೆ. ಕಾಲದ ಅಗತ್ಯಗಳಿಗೆ ಸ್ಪಂದಿಸುತ್ತಾ ಅದು ವೈವಿಧ್ಯಮಯವಾಗಿ ಬೆಳೆದು ಬಂದಿರುವುದು ಈಗ ಚರಿತ್ರೆಯ ಪುಟಗಳಿಗೆ ಸಂದುಹೋಗಿರುವ ಸಂಗತಿ. ಆ ಚರಿತ್ರೆಯನ್ನು ಕಟ್ಟುವ ಪ್ರಯತ್ನಗಳು ಕನ್ನಡದಲ್ಲಿ ಹಲವರಿಂದ ನಡೆದಿವೆಯಾದರೂ ಅದು ವ್ಯವಸ್ಥಿತವಾಗಿ ನಡೆದಿಲ್ಲ ಎಂದೇ ಹೇಳಬೇಕು. ಇಂದು ‘ಉದ್ಯಮ’ವಾಗಿ ಬೆಳೆದಿರುವ ಪತ್ರಿಕಾರಂಗ ಹಾದು ಬಂದಿರುವ ಏಳು ಬೀಳಿನ ಕಥನ ತುಂಬಾ ಕುತೂಹಲಕಾರಿಯಾದುದು. ಅಂತಹ ಕನ್ನಡ ಸುದ್ದಿ ಪತ್ರಿಕೆಗಳ ಚರಿತ್ರೆಯ ಒಂದು ಮಹತ್ವದ ಪುಟ “ಚಂದ್ರೋದಯ”.

ಸುಮಾರು ಒಂದೂವರೆ ಶತಮಾನದ ಹಿಂದೆ ಧಾರವಾಡದಿಂದ ಪ್ರಕಟವಾಗುತ್ತಿದ್ದ ಸಮಾಚಾರ ಪತ್ರಿಕೆಯೊಂದು ಜನಮಾನಸದಿಂದ ಮರೆಯಾಗಿ ಹೋಗಿ, ಇತಿಹಾಸಕ್ಕೆ ಆಗಬಹುದಾಗಿದ್ದ ಬಹುದೊಡ್ಡ ಅಪಾಯವನ್ನು ಈ ಪುಸ್ತಕ ನಿವಾರಿಸಿದೆ ಎಂದರೆ ಅತಿಶಯೋಕ್ತಿಯಲ್ಲ. ‘ಮಂಗಳೂರು ಸಮಾಚಾರ’ ಪ್ರಕಟಣೆಯ ಮೂಲಕ ಕನ್ನಡದಲ್ಲಿ 1843ರಲ್ಲಿ ಪತ್ರಿಕಾ ವ್ಯವಸಾಯದ ಆರಂಭವಾಯಿತಾದರೂ ಅದು ರಾಷ್ಟ್ರೀಯ ಪತ್ರಿಕಾ ಸ್ವರೂಪವನ್ನು ಪಡೆದುಕೊಂಡದ್ದು ತಡವಾಗಿಯೇ. ಅದು ಸಾಧ್ಯವಾದುದು 1876ರಲ್ಲಿ ಆರಂಭವಾದ ‘ಚಂದ್ರೋದಯ’ ಸುದ್ದಿ ಪತ್ರದ ಮೂಲಕ. 1849ರಲ್ಲಿ ಶುರುವಾಗಿದ್ದ ‘ಸುಬುದ್ಧಿ ಪ್ರಕಾಶ’ ಆ ಮೊದಲೇ ಬಹಳ ಬೇಗ ನಿಂತು ಹೋಗಿತ್ತು. ಧಾರವಾಡ ಪ್ರಾಂತದಲ್ಲಿ ಕನ್ನಡ ಸುದ್ದಿ ಪತ್ರಿಕೆಗಳೇ ಇರದೇ ಎಲ್ಲವೂ ಮರಾಠಿ ಪತ್ರಿಕೆಗಳ ಪ್ರಾಬಲ್ಯವಾಗಿತ್ತು. ಬೆಳಗಾವ ಸಮಾಚಾರ, ಧಾರವಾಡ ವೃತ್ತ, ಹುಬಳೀ ವೃತ್ತ ಇವೆಲ್ಲವುಗಳ ಹೆಸರು ಕನ್ನಡದಂತೆಯೇ ಕಂಡರೂ ಮರಾಠಿ ಭಾಷೆಯ ಪತ್ರಿಕೆಗಳಾಗಿದ್ದವು. ಕುತೂಹಲದ ಸಂಗತಿಯೆಂದರೆ; ಕರ್ನಾಟಕ ವೃತ್ತ ಎಂಬ ಹೆಸರಿನ ಮರಾಠೀ ಪತ್ರಿಕೆಯೂ ಇತ್ತು. ತದನಂತರ ಪ್ರಕಟಣೆ ಆರಂಭಿಸಿದ ಪತ್ರಿಕೆಗಳಾದರೂ ‘ಚಂದ್ರೋದಯ’ ಪತ್ರಿಕೆಯ ಮೊದಲ ಸಂಪಾದಕರಾಗಿದ್ದ ಹುಚ್ಚಯ್ಯ ವಿಭೂತಿಯವರು ಬರೆದಿರುವ ಪ್ರಕಾರ; “ನಮ್ಮ ಇಲಾಖೆಯಲ್ಲಿರುವ ಬಹುತೇಕ ಎಲ್ಲ ಕನ್ನಡ ಪತ್ರಿಕೆಗಳೂ ಸರ್ವಸಾಧಾರಣವಾಗಿ ಮರಾಠೀ ಪತ್ರಿಕೆಗಳ ಎಂಜಲವನ್ನೇ ನೆಕ್ಕಿ ‘ಈ ಎಂಜಲವು ಅಮೃತಕ್ಕಿಂತ ಹೆಚ್ಚು ರುಚಿಕರವಾಗಿದೆ’ ಎಂದು...”

ಈ ಮೇಲಿನ ಮಾತುಗಳು ‘ಚಂದ್ರೋದಯ’ ಪತ್ರಿಕೆಯ ಅನನ್ಯತೆಯನ್ನು ಬಿಂಬಿಸುವುದರೊಂದಿಗೆ ಕನ್ನಡದ ಸ್ವಾಭಿಮಾನದ ದ್ಯೋತಕವಾಗಿಯೂ ಮಾರ್ದನಿಸಿವೆ. ಕನ್ನಡ ಪತ್ರಿಕಾ ಇತಿಹಾಸದಲ್ಲಿ ಧಾರವಾಡಕ್ಕೆ ಒಂದು ಮಹತ್ವದ ಅಧ್ಯಾಯವನ್ನು ಜೋಡಿಸಿದ ಖ್ಯಾತಿ ಈ ‘ಚಂದ್ರೋದಯ’ ಪತ್ರಿಕೆಯದು. ಸರಿಸುಮಾರು ಕಾಲು ಶತಮಾನಗಳ ಕಾಲ ಹಲವು ರೂಪಗಳಲ್ಲಿ ಪ್ರಕಟವಾದರೂ ಇಂದು ಲಭ್ಯವಿರುವ ಅವುಗಳ ಪ್ರತಿಗಳು ಬೆರಳೆಣಿಕೆಯಲ್ಲಿವೆ. ಇದೇ ಕಾರಣಕ್ಕೆ ಇತಿಹಾಸದ ಮೂಲೆಯನ್ನು ಸೇರಿದ್ದ ‘ಚಂದ್ರೋದಯ’ಕ್ಕೆ ಅರುಣೋದಯದ ಭಾಗ್ಯ ಕರುಣಿಸಿದ್ದವರು ಹಿರಿಯ ಸಂಶೋಧಕ ಡಾ. ಶ್ರೀನಿವಾಸ ಹಾವನೂರ ಅವರು. ತಮ್ಮ ‘ಹೊಸಗನ್ನಡದ ಅರುಣೋದಯ’ ಮಹಾಪ್ರಬಂಧದಲ್ಲಿ ಸಂಶೋಧನಾತ್ಮಕ ದೃಷ್ಟಿಯಿಂದ ಪತ್ರಿಕೆಯ ವಿಚಾರವನ್ನು ಅವರು ದಾಖಲಿಸಿದ್ದರು. ಮುಂದೆ ಶ್ರೀ ಎನ್. ಎಸ್. ಘಳಗಿಯವರಿಗೆ ಕೆಲವು ಪ್ರತಿಗಳು ಸಿಕ್ಕು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯಲ್ಲಿ ಈ ಕುರಿತ ಲೇಖನವನ್ನೂ ಅವರು ಬರೆದರು. ‘ಚಂದ್ರೋದಯ’ ಪತ್ರಿಕೆಯ ಇತಿಹಾಸ ನಿರ್ಮಾಣದ ಮೂರನೆಯ ಹಂತವಾಗಿ ಡಾ. ಹೇಮಾ ಪಟ್ಟಣಶೆಟ್ಟಿಯವರಿಗೆ ಲಭ್ಯವಾದ ಎರಡು ಪ್ರತಿಗಳು. ಇವೆಲ್ಲವೂ ಸೇರಿ ಸಿಕ್ಕಷ್ಟು ಪ್ರತಿಗಳ ಆಧಾರದ ಮೇಲೆ ಒಂದು ಪೂರ್ಣಪ್ರಮಾಣದ ಇತಿಹಾಸ ಹಾಗೂ ಸ್ವರೂಪ ಕಥನದ ಬರೆಹ ‘ಚಂದ್ರೋದಯ’ದ ಕುರಿತು ಹೊರಬಂದಿರುವುದು ಈ ಪುಸ್ತಕದ ಮೂಲಕ.

‘ಹೊನ್ನಪುರ’ ಸಂಸ್ಮರಣ ಗ್ರಂಥವನ್ನು 1981ರಲ್ಲಿ ಪ್ರಕಟಿಸುವುದರೊಂದಿಗೆ ಡಾ. ಹೇಮಾ ಪಟ್ಟಣಶೆಟ್ಟಿಯವರು ‘ಚಂದ್ರೋದಯ’ದ ಸಂಪಾದಕರಾಗಿದ್ದ ತಮ್ಮ ಅಜ್ಜ ಗದಿಗೆಯ್ಯ ಹೊನ್ನಾಪುರಮಠ ಅವರ ಜೀವನ-ಸಾಧನೆಗಳ ಪರಿಚಯದ ಮೂಲಕ ಬಹು ಅಮೂಲ್ಯ ಕಾರ್ಯ ಮಾಡಿದ್ದರು. ಈಗಾಗಲೇ ಮೂರು ಮುದ್ರಣಗಳನ್ನು ಕಂಡಿರುವ ಪುಸ್ತಕ ಅದರ ಮಹತ್ವಕ್ಕೆ ಸಾಕ್ಷಿ. ಪತ್ರಿಕಾ ಸಂಪಾದನೆಯ ಜೊತೆಗೆ ಗದಿಗೆಯ್ಯನವರು ಮಾಡಿದ್ದ ಸಾಹಿತ್ಯ ರಚನೆ ಹಾಗೂ ಏಕೀಕರಣದ ಕನ್ನಡಪರ ಕಾರ್ಯಗಳ ಪರಿಚಯ ಅಲ್ಲಿ ನಡೆದಿತ್ತು. ಇದೀಗ ಎನ್. ದಿನೇಶ ನಾಯಕ್ ಬರೆದಿರುವ ಈ ಪುಸ್ತಕದ ಪ್ರಕಟಣೆಯನ್ನೂ ಅವರೇ ಮಾಡಿದ್ದಾರೆ. ಇದನ್ನು ಹೇಳುವ ಕಾರಣವೆಂದರೆ; ಕನ್ನಡದ ವಿದ್ವತ್ ಪ್ರಪಂಚದಲ್ಲಿ ನಿರ್ಮಾಣವಾಗಿರುವ ಅನಿವಾರ್ಯತೆಯನ್ನು ಗಮನಕ್ಕೆ ತರುವುದು. ಕನ್ನಡದ ಕಾರಣಕ್ಕೆ ಜೀವ ತೇಯ್ದವರ ಬಗ್ಗೆ ಯಾವುದಾದರೂ ವಿಶ್ವವಿದ್ಯಾಲಯದ ವಿದ್ವಾಂಸರೋ ಸಂಶೋಧಕರೋ ಮಾಡಬೇಕಾಗಿದ್ದ ಈ ಕಾರ್ಯಗಳನ್ನು ಮನೆತನದವರೇ ಮಾಡಬೇಕಾದ ಸಂದರ್ಭಕ್ಕೆ ನಮ್ಮ ಸಾಮುದಾಯಿಕ ಕೃಪಣತೆ ಬಂದು ತಲುಪಿದೆ ಎಂದು ಖೇದದಿಂದಲೇ ಹೇಳಬೇಕಾಗಿದೆ.

ರಾಷ್ಟ್ರೀಯ ಆಂದೋಲನ ಕಾಲದ ಪ್ರಥಮ ಕನ್ನಡ ಪತ್ರಿಕೆ ಹಾಗೂ ಧಾರವಾಡದ ಮೊದಲ ಕನ್ನಡ ಸುದ್ದಿ ಪತ್ರಿಕೆ ‘ಧಾರವಾಡದ ಚಂದ್ರೋದಯ’. ಹುಚ್ಚಯ್ಯ ಸಂಗಯ್ಯ ವಿಭೂತಿಯವರು ಹಾಗೂ ಅವರ ಮಗ ಗದಿಗೆಯ್ಯ ಹೊನ್ನಾಪುರಮಠ ಅವರ ಕನಸಿನ ಕೂಸಾಗಿದ್ದ ‘ಚಂದ್ರೋದಯ’ ಕನ್ನಡ ಪತ್ರಿಕೋದ್ಯಮಕ್ಕೆ ಸಲ್ಲಿಸಿದ್ದ ಸೇವೆ ಅಪಾರವಾದುದು. ಇದು ಇಂದಿನ ನಮ್ಮ ಪತ್ರಿಕೋದ್ಯಮ ಮರೆತಿರುವ ಸಂಗತಿ. ಇದನ್ನು ಸ್ವತಃ ಪತ್ರಕರ್ತರಾಗಿರುವ ಎನ್. ದಿನೇಶ ನಾಯಕ್ ಅವರು ಪ್ರಸ್ತುತ ಬರೆಹದ ಮೂಲಕ ನೆನಪಿಸಿದ್ದಾರೆ. ಲಭ್ಯವಾದ ಕೆಲವೇ ಪ್ರತಿಗಳ ಆಧಾರದ ಮೇಲೆ ಅಂದಿನ ಕನ್ನಡ ಪತ್ರಿಕೋದ್ಯಮದ ಸ್ವರೂಪ, ರಾಷ್ಟ್ರೀಯತೆಯ ಕಾಲದ ಅನಿವಾರ್ಯತೆಗಳು ಹಾಗೂ ಚಂದ್ರೋದಯದ ಗುಣ ಲಕ್ಷಣಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಕೃತಿ ರಚನೆಯಲ್ಲಿ ಕೆಲಸ ಮಾಡಿರುವ ಶೈಕ್ಷಣಿಕ ಬದ್ಧತೆ ಮತ್ತು ಶಿಸ್ತು ಗಮನಸೆಳೆಯುತ್ತದೆ. ಭಾಷೆಯೂ ಸರಳ ಸಂವಹನಯೋಗ್ಯವಾಗಿ ವಾಚನೀಯವಾಗಿದೆ.

ಹೀಗೆ ಕಾಲದ ಕತ್ತಲೆಯಲ್ಲಿ ಕಳೆದುಹೋಗಿರುವ ಹಳೆಗಾಲದ ಸುದ್ದಿ ಹಾಗೂ ಸಾಹಿತ್ಯ ಪತ್ರಿಕೆಗಳನ್ನು ಇಂದಿನ ತಲೆಮಾರಿಗೆ ಪರಿಚಯಿಸಬೇಕಾದ ಅಗತ್ಯವನ್ನು ಪ್ರಸ್ತುತ ಕೃತಿ ಎತ್ತಿಹಿಡಿದೆ ಹಾಗೂ ಒಂದು ಮಾದರಿಯಾಗಿಯೂ ಒದಗಿ ಬಂದಿದೆ. ಇದೀಗ ಎರಡನೆಯ ಮುದ್ರಣವನ್ನು ಕಾಣುವ ಮೂಲಕವೂ ಇದು ತನ್ನ ಪ್ರಸ್ತುತತೆಯನ್ನು ಸಾಬೀತು ಪಡಿಸಿದೆ. ಕನ್ನಡ ಪುಸ್ತಕ ಪ್ರೇಮಿಗಳು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಲೇಖಕರು ಮತ್ತು ಪ್ರಕಾಶಕರಿಗೆ ಈ ಕಾರ್ಯಗೌರವಕ್ಕಾಗಿ ಕೃತಜ್ಞರಾಗಿದ್ದಾರೆ.

***

ನವೋದಯವೆಂಬ ತಂತಿಯ ಮಿಡಿದು -(ಸಂ) ಡಾ. ಗುರುಪಾದ ಮರಿಗುದ್ದಿ
ಪ್ರಕಾಶಕರು: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ
ಪುಟ-208; ಬೆಲೆ-190/-

ಡಾ. ಗುರುಪಾದ ಮರಿಗುದ್ದಿಯವರು ಕನ್ನಡ ವಿದ್ವತ್ ಪರಂಪರೆಯ ಮುಖ್ಯ ಕೊಂಡಿ. ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವರು ಬರವಣಿಗೆ, ಉಪನ್ಯಾಸಗಳ ಮೂಲಕ ನಿರಂತರವಾಗಿ ಕನ್ನಡ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ತಮ್ಮ ಸ್ವತಂತ್ರವಾದ ಬರವಣಿಗೆಯ ಜೊತೆಗೆ ಸಮಕಾಲೀನ ಕನ್ನಡ ಸಾಹಿತ್ಯ ಮತ್ತು ಪುಸ್ತಕಗಳ ಅಗತ್ಯವನ್ನೂ ಗಮನಿಸಿ ವಿಶಿಷ್ಟ ಸಂಪಾದಿತ ಕೃತಿಗಳನ್ನೂ ಪ್ರಕಟಿಸುತ್ತ ಬಂದಿದ್ದಾರೆ. ಹಲವು ಅಭಿನಂದನ ಗ್ರಂಥಗಳ ಸಂಪಾದಕರಾಗಿ ವಿಷಯಾಧಾರಿತ ಲೇಖನಗಳನ್ನು ತಜ್ಞರಿಂದ ಬರೆಸಿ ಸಂಪಾದಿಸಿ ಅವರು ಪ್ರಕಟಿಸಿದ್ದಾರೆ. ಅವು ವಿದ್ಯಾರ್ಥಿಗಳು ಮತ್ತು ಆಸಕ್ತರಿಗೆ ಉಪಯುಕ್ತ ಪ್ರಕಟಣೆಗಳು ಎಂದು ಸ್ವೀಕೃತವಾಗಿದೆ. ಅವುಗಳಲ್ಲಿ ಇದೀಗ ಡಾ. ಗುರುಪಾದ ಮರಿಗುದ್ದಿಯವರು ಸಂಪಾದಿಸಿ, ಕಲಬುರ್ಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಪ್ರಕಟಿಸಿರುವ ‘ನವೋದಯವೆಂಬ ತಂತಿಯ ಮಿಡಿದು’ ಎಂಬ ಪುಸ್ತಕವೂ ಒಂದು.

ಇದು ಕನ್ನಡ ನವೋದಯ ಕಾಲಘಟ್ಟದ ಇಪ್ಪತ್ತೆರಡು ಕವಿಗಳ ಒಂದೊಂದು ಕವನಗಳನ್ನು ಆಯ್ದು ಅವುಗಳಿಗೆ ಬರೆಸಲಾದ ಪ್ರಾಯೋಗಿಕ ವಿಮರ್ಶೆಗಳ ಸಂಕಲನ. ವಿಮರ್ಶೆಯ ಒಂದು ಪ್ರಕಾರವಾದ ಪ್ರಾಯೋಗಿಕ ಅಥವಾ ಆನ್ವಯಿಕ ವಿಮರ್ಶೆ ಕನ್ನಡದಲ್ಲಿ ಅಷ್ಟೇನೂ ಹುಲುಸಾಗಿ ಬೆಳೆದಿರುವ ಪ್ರಕಾರವಲ್ಲ. ಡಾ. ಜಿ. ಎಸ್. ಶಿವರುದ್ರಪ್ಪನವರ ಪ್ರಧಾನ ಸಂಪಾದಕತ್ವದಲ್ಲಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಸಂಪಾದಿಸಿ ಪ್ರಕಟಿಸಿದ್ದ “ಪ್ರಾಯೋಗಿಕ ವಿಮರ್ಶೆ” (1971, 2015) ಪ್ರಾಯೋಗಿಕ ವಿಮರ್ಶೆಯ ಸ್ವರೂಪ, ಸಿದ್ಧಾಂತ, ಪ್ರಾಯೋಗಿಕತೆ, ಪ್ರಕಾರಗಳು ಮುಂತಾದ ವಿಚಾರಗಳ ಮೇಲೆ ವಿದ್ವತ್ ಪೂರ್ಣ ಲೇಖನಗಳನ್ನು ಒಳಗೊಂಡಿತ್ತು. ಅನಂತರ ಅನೇಕ ಬಿಡಿ ಕವಿತೆಗಳ ವಿಮರ್ಶೆಗಳು ‘ಪದ್ಯ ಬಗೆವ ಬಗೆ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಡಾ. ಯು. ಆರ್. ಅನಂತಮೂರ್ತಿಯವರ ಸಂಪಾದಕತ್ವದ ‘ಋಜುವಾತು’ ಪತ್ರಿಕೆ ಹಾಗೂ ಇನ್ನೂ ಹಲವೆಡೆ ಪ್ರಕಟವಾಗುತ್ತಿದ್ದವು. ಡಾ. ಜಿ. ಎಸ್. ಶಿವರುದ್ರಪ್ಪನವರು ಹಾಗೂ ಶ್ರೀ ಚೆನ್ನವೀರ ಕಣವಿಯವರ ಬಿಡಿ ಕವನಗಳ ಪ್ರಾಯೋಗಿಕ ವಿಮರ್ಶೆಗಳ ಹೆಬ್ಬೊತ್ತಿಗೆಗಳೂ ಪ್ರಕಟವಾಗಿವೆ. ಓ. ಎಲ್. ನಾಗಭೂಷಣಸ್ವಾಮಿಯವರ ಸಂಪಾದಕತ್ವದ ಕನ್ನಡ ವಿಶ್ವವಿದ್ಯಾಲಯದ ಪ್ರಕಟಣೆ; ‘ನಮ್ಮ ಕನ್ನಡ ಕಾವ್ಯ’ ಪ್ರಾಚೀನ ಕನ್ನಡ ಕಾವ್ಯ ಸಂದರ್ಭವನ್ನೂ ಒಳಗೊಂಡು ಜನಪದ ಕಾವ್ಯ, ಆಧುನಿಕ ಕನ್ನಡ ಕಾವ್ಯ ಕೃತಿಗಳ ಆಯ್ದ ಭಾಗಗಳ ಪಠ್ಯ ಮತ್ತು ವಿಮರ್ಶೆಯನ್ನು ಒಳಗೊಂಡಿದೆ. 2018ರಲ್ಲಿ ಡಿ. ಡಿ. ರಾಮಕೃಷ್ಣ ಅವರ ಸಂಪಾದಕತ್ವದಲ್ಲಿ ಬಹು ಮಹತ್ವಾಕಾಂಕ್ಷೆಯ ‘ಪ್ರಾಯೋಗಿಕ ವಿಮರ್ಶೆ: ಕಾವ್ಯಾನುಸಂಧಾನ’ ಶೀರ್ಷಿಕೆಯ ಪುಸ್ತಕ; ವಿವಿಧ ವಿದ್ವಾಂಸರ ಭಿನ್ನ ಪ್ರಕಾರದ ಸಾಹಿತ್ಯದ ಮೇಲಿನ 31 ಲೇಖನಗಳನ್ನು ಒಳಗೊಂಡು ಪ್ರಕಟವಾಯಿತು.

ಹೀಗೆ ಕನ್ನಡದಲ್ಲಿ ಪ್ರಕಟವಾಗುತ್ತ ಬಂದಿರುವ ಪ್ರಾಯೋಗಿಕ ವಿಮರ್ಶಾ ಸಾಹಿತ್ಯಕ್ಕೆ ಹೊಸ ಸೇರ್ಪಡೆ; ಡಾ. ಗುರುಪಾದ ಮರಿಗುದ್ದಿಯವರು ಸಂಪಾದಿಸಿರುವ ‘ನವೋದಯವೆಂಬ ತಂತಿಯ ಮಿಡಿದು’. ನವೋದಯದ ಮಹತ್ವದ ಕವಿಗಳ ಒಂದು ಕವಿತೆಯನ್ನು ಆಯ್ದು ಅವುಗಳಿಗೆ ಪ್ರಾಯೋಗಿಕ ವಿಮರ್ಶೆ ಬರೆಯಲಾಗಿದೆ. ಈ ಕವನಗಳ ಆಯ್ಕೆಗೂ ಯಾವುದೇ ಮಾನದಂಡವಿಲ್ಲ. ಅದು ಲೇಖಕರದೇ ಆಯ್ಕೆಯಾಗಿದೆ. ಅವರು ಆಯಾ ಕವಿಗಳ ತಮಗೆ ಮಹತ್ವಪೂರ್ಣವೆನಿಸಿದ ಕವನವನ್ನು ಆಯ್ದುಕೊಂಡಿದ್ದಾರೆ. ಲೇಖನದ ಆರಂಭದಲ್ಲಿ ತುಸು ಕವಿ-ಕಾವ್ಯ ಪರಿಚಯವನ್ನು ನೀಡಿ ಪ್ರಾಯೋಗಿಕ ವಿಮರ್ಶೆಗೆ ತೊಡಗಲಾಗಿದೆ. ಹೀಗೆ ಮಾಡುವಾಗ ನವೋದಯದ ಎಲ್ಲ ಕಾವ್ಯ ಪ್ರಕಾರ, ಪ್ರಯೋಗಗಳನ್ನೂ ಗಮನಿಸದೆ, ಕೇವಲ ಭಾವಗೀತೆಯ ಸ್ವರೂಪದ ಬಿಡಿ ಕವನಗಳನ್ನು ಮಾತ್ರ ಪರಿಗಣಿಸಲಾಗಿದೆ.

ಪಂಜೆಯವರ ‘ತೆಂಕಣಗಾಳಿಯಾಟ’, ಬಿಎಂಶ್ರೀಯವರ ‘ಕವಿತೆ’, ಸಾಲಿಯವರ ‘ಕಾರ್ಮೋಡಗಳು’, ಮಾಸ್ತಿಯವರ ‘ನೀತಿ’, ಬೇಂದ್ರೆಯವರ ‘ಅನಂತ ಪ್ರಣಯ’, ವಿಸೀಯವರ ‘ಸೆಳೆ’, ಆನಂದಕಂದರ ‘ನಲ್ವಾಡುಗಳು’, ಮಧುರಚೆನ್ನರ ‘ಸಲಿಗೆಯ ಸಲ್ಲಾಪ’ ಕುವೆಂಪು ಅವರ ‘ನಟರಾಜ: ಸೃಷ್ಟಿ ಪುರಾಣ’, ಪುತಿನರ ‘ನೆರಳು’, ಕರ್ಕಿಯವರ ‘ಹಚ್ಚೇವು ಕನ್ನಡದ ದೀಪ’, ರಾಜರತ್ನಂ ಅವರ ‘ರತ್ನನ ಪ್ರೀತಿ’, ತೀನಂಶ್ರೀಯವರ ‘ಸಮಾಧಾನ’, ಗೋಕಾಕರ ‘ಪ್ರತಿಜ್ಞೆ’, ಬೆಳಗೆರೆ ಜಾನಕಮ್ಮನವರ ‘ಹೆಣ್ಣಾಟ’, ಎಸ್ವಿಪಿಯವರ ‘ಅಂಚೆಯಪೆಟ್ಟಿಗೆ’, ಕೆ.ಎಸ್.ನ.ರ ‘ಬಾರೆ ನನ್ನ ಶಾರದೆ’, ಹಿಮನಾರ ‘ಆಶಾ ಕಿರಣ’, ಜಿ.ಎಸ್.ಎಸ್.ರ ‘ಜಡೆ’, ಕಣವಿಯವರ ‘ಹೂವು ಹೊರಳುವವು ಸೂರ್ಯನ ಕಡೆಗೆ’ ಹೀಗೆ ಒಟ್ಟೂ 22 ಕವಿತೆಗಳು ಇಲ್ಲಿ ಜಾಗ ಪಡೆದಿವೆ. ಪ್ರಾಯೋಗಿಕ ವಿಮರ್ಶೆಯನ್ನು ಬರೆದಿರುವ ಲೇಖಕರೂ ಹೆಸರಾಂತ ವಿಮರ್ಶಕರೇ ಆಗಿದ್ದಾರೆ. ಹೀಗಾಗಿ ಒಂದು ಅಧಿಕೃತ ಪಠ್ಯವಾಗಿ ಕೃತಿ ರೂಪುಗೊಂಡಿದೆ. ಆದರೆ ಲೇಖನಗಳ ಸ್ವರೂಪದಲ್ಲಿ ಏಕಸೂತ್ರತೆಯಿಲ್ಲ. ಪ್ರಾಯೋಗಿಕ ವಿಮರ್ಶೆಯ ಗೆರೆಕೊರೆದ ಮಾನದಂಡಗಳನ್ನು ಇಲ್ಲಿ ಅನುಸರಿಸಲಾಗಿಲ್ಲ. ಕೆಲವು ಲೇಖನಗಳು ಪ್ರತಿ ಸಾಲಿನ ವಿಶ್ಲೇಷಣೆಯಲ್ಲಿ ತೊಡಗಿದ್ದರೆ; ಕೆಲವು ನುಡಿಗಳನ್ನು ಘಟಕಗಳನ್ನಾಗಿಸಿಕೊಂಡಿವೆ. ಒಟ್ಟಾರೆಯಾಗಿ ಒಂದು ಕವಿತೆಯ ಪೂರ್ತಿ ಹೂರಣವನ್ನು ಬಿಚ್ಚಿಡುವುದೇ ಎಲ್ಲ ಲೇಖನಗಳ ಉದ್ದೇಶವಾಗಿದೆ.

ಪಂಜೆಯವರ ತೆಂಕಣಗಾಳಿಯಾಟ ಕವಿತೆಯ;
ಬರುತದೆ! ಮೈದೋರದೆ ಬರುತದೆ! ಅದೆ!
ನಡುಮುರಿಯುತ ನಗ ನಾವೆಗೆ, ಕೂವೆಗೆ

ಈ ಎರಡು ಸಾಲುಗಳಿಗೆ ನೀಡಿರುವ ವಿವರಣೆ ಇಂತಿದೆ; ಇಲ್ಲಿರುವ ‘ಬರುತ್ತದೆ’ ಎಂಬ ಪದ ‘ತೆಂಕಣ ಗಾಳಿ’ ಅತ್ಯಂತ ಸಮೀಪಕ್ಕೆ ಬಂದಿರುವ ಸೂಚನೆಯನ್ನು ನೀಡುತ್ತದೆ. ಆದರೂ ಅದು ಕಣ್ಣಿಗೆ ಕಾಣಿಸುವುದಿಲ್ಲ. ಏಕೆಂದರೆ ಅದು; ಮೈದೋರದೆ ಬರುತದೆ’. ಆದರೆ ಅದರ ಬರುವಿಕೆಗೆ ಸಾಕ್ಷಿಗಳು ಸಮುದ್ರದ ಮೇಲ್ಮೈಯಲ್ಲಿ ಗೋಚರಿಸುತ್ತವೆ. ನಗ ಅಂದರೆ ಒಂದು ಜಾತಿಯ ಹಡಗು. ಅದರ ಹಾಗೂ ನಾವೆಯ ಕೂವೆ ಅಂದರೆ ಹಾಯಿ ಪರದೆಯನ್ನು ಕಟ್ಟುವ ಕಂಬ. ಅವುಗಳ ನಡ ಮುರಿದು, ಉಡಿಸಿದ ಹಾಯಿಯನ್ನು ಹರಿಯುತ...ತೆಂಕಣಗಾಳಿ ಬರುತ್ತಿದೆ.

ಇನ್ನೊಂದು ಉದಾಹರಣೆ; ವಿಸೀಯವರ ‘ಸೆಳೆ’ ಕವನದ;
ಕಣ್ಗೆ ರೂಪವು ಇಳಿವ ಮುನ್ನವೇ ಎದೆಗೆ ಪ್ರೇಮವು ಹರಿಯಿತು

ಈ ಸಾಲಿಗೆ ನೀಡಿರುವ ವಿವರಣೆ ಹೀಗಿದೆ; “ಪ್ರೇಮಿಸಿದ ಹೃದಯಗಳಿಗೆ ದೇಶ, ಕಾಲ, ಭಾಷೆ, ತಂದೆ , ತಾಯಿ ಇವೆಲ್ಲವನ್ನೂ ಮೀರಿದ ಮನಸ್ಥಿತಿ ಇರುತ್ತದೆ. ಅದರ ಪರಿಣಾಮವಾಗಿ ಎಲ್ಲೋ ಹುಟ್ಟಿ ಬೆಳೆದವರಾದರೂ ಯಾವುದೋ ತಂದೆ ತಾಯಿಯ ಮಕ್ಕಳಾದರೂ ಅವರ ಹೃದಯದಲ್ಲಿ ಅಂಕುರಗೊಂಡ ಪ್ರೀತಿಯ ಕಾವ್ಯ ಪ್ರೇಮಿಗಳ ಅಂತರಂಗವನ್ನು ಬೆಸೆಯುವಲ್ಲಿ ಸಫಲವಾದುದನ್ನು ಕಾಣಬಹುದಾಗಿದೆ”.

ಕನ್ನಡ ನವೋದಯ ಕಾವ್ಯದ ಪ್ರಾತಿನಿಧಿಕ ಸಂಕಲನವಾದ ಇದರಲ್ಲಿ; ಸೇಡಿಯಾಪು, ಮುಗಳಿ, ಕಾವ್ಯಾನಂದ, ಎಂ.ವಿ.ಸೀ, ಕಡೆಂಗೋಡ್ಲು, ಬಿ. ಎಚ್. ಶ್ರೀಧರ, ಹಿಮನಾ, ಕೈಯ್ಯಾರ, ಸಣಕಲ್ಲ ಮುಂತಾದ ಕವಿಗಳ ಕವನಗಳೂ ಸೇರಬಹುದಿತ್ತು. ಸಂಪಾದಕರೇ ಹೇಳಿದಂತೆ; ಕೃತಿಯ ಗಾತ್ರ ಹೆಚ್ಚಾಗುತ್ತಿತ್ತು. ಅಲ್ಲಿಗೆ ಇದು ನವೋದಯದ ಸಮಗ್ರ ಕವಿಗಳನ್ನು ಒಳಗೊಳ್ಳುವ ಉದ್ದೇಶದ್ದಲ್ಲ ಎಂಬುದು ಸ್ಪಷ್ಟವಾಗುತ್ತದೆ. ನವೋದಯ ಕನ್ನಡ ಕಾವ್ಯಕ್ಕೆ ಸಮಕಾಲೀನ ಲೇಖಕರ ಸ್ಪಂದನೆಯನ್ನೂ ದಾಖಲಿಸುವ ಒಂದು ಅರ್ಥಪೂರ್ಣ ಪ್ರಯತ್ನವಾಗಿ ಇದು ಸಫಲವಾಗಿದೆ. ವಿದ್ಯಾರ್ಥಿಗಳಿಗೆ, ಯುವಜನರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿ ಎಂಬ ಆಶಯ ಸಂಪಾದಕರದಾಗಿದ್ದರೂ ಕನ್ನಡ ಕಾವ್ಯದಲ್ಲಿ ಆಸಕ್ತರಾಗಿರುವ ಎಲ್ಲ ಓದುಗರೂ ಅಪ್ಪಿಕೊಳ್ಳಬಹುದಾದ ಪ್ರಕಟಣೆ ಇದಾಗಿದೆ.

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...