ಮರೆತುಹೋದ ಸ್ಪೇನಿನ ಗುರುತು ಹುಡುಕಿ ಹಾಡುವ 'ಜಿಪ್ಸಿ' ಎಂಬ ನಶೆಯ ಹಾಡು

Date: 09-10-2021

Location: ಬೆಂಗಳೂರು


‘ಜಿಪ್ಸಿ ಸಂಗೀತ ಒಂದು ರೀತಿ ನಶೆಯೇರಿಸುವ ಸಂಗೀತ, ನಮ್ಮ ಸೂಫಿ ಸಂಗೀತದಷ್ಟು ಕಳೆದುಹೋಗುವ ಭಾವ ಹೊರಡಿಸುತ್ತದೆ’ ಎನ್ನುತ್ತಾರೆ ಲೇಖಕಿ ಮೇಘನಾ ಸುಧೀಂದ್ರ. ಅವರು ತಮ್ಮ ‘ಪಿನ್ ಕೋಡ್-560069’ ಮರೆತುಹೋದ ಗುರುತು..ಅಂಕಣದಲ್ಲಿ ಮೊದಲಿಗೆ ಮರೆತುಹೋದ ಸ್ಪೇನಿನ ಗುರುತುಗಳಾದ ಜಿಪ್ಸಿಗಳ ಕಲೆ ಮತ್ತು ಬದುಕಿನ ಕುರಿತು ವಿಶ್ಲೇಷಿಸಿದ್ದಾರೆ.

ಸ್ಪೇನ್ ಯಾವುದಕ್ಕೆ ಫೇಮಸ್ ? ಎಂದು ಕೇಳಿದರೆ ನಾವು ಕಾವಾ, ಫ್ಲಮೆಂಕೋ, ಸ್ಪಾನಿಷ್ ಭಾಷೆ, ಪಯಾಯಾ, ಹಾಮೋನ್, ಇಬಿಝಾ, ಕೋಸ್ಟಾ ಬ್ರಾವಾ ವಗೈರೆ ವಗೈರೆ ಎನ್ನುತ್ತೇವೆ. ಭಾರತದಲ್ಲಿರುವವರಂತೂ ಸ್ಪೇನ್ ಎಂದರೆ ನೋಡಿದ , “ಝಿಂದಗಿ ಮಿಲೇಗಿ ದೊ ಬಾರಾ ಸಿನಿಮಾ ಅಲ್ಲಿ ಬರುವ ಬುಲ್ ಫೈಟಿಂಗು ಅದೂ ಇದೂ” ಎಂದು ಹೇಳಿ ಸುಮ್ಮನಾಗುತ್ತಾರೆ. ಕೆಲವು ಚರಿತ್ರೆ ಪಂಟರುಗಳು ಸ್ಪೇನಿನ ಕೇಸರಿ ಬಹಳ ಚೆನ್ನಾಗಿರತ್ತೆ, ಇರಾನ್, ಕಾಶ್ಮೀರದ್ದಕ್ಕಿಂತ ಬೊಂಬಾಟ್ ಆಗಿರತ್ತೆ ಎಂದೂ ಹೇಳುತ್ತಾರೆ. ಇನ್ನೂ ಫೆಡರಲಸಿಮ್, ಭಾಷೆ ಈಕ್ವಾಲಿಟಿ ಎನ್ನುವವರು ಕತಲೂನ್ಯಾ ಹೋರಾಟ, ಕತಲಾನ್ ಭಾಷೆ ಎಂದು ಅನ್ನುತ್ತಾರೆ. ಆದರೆ ಇಲ್ಲಿ ನಾವು ಮರೆತುಹೋದ ಸ್ಪೇನಿನ ಗುರುತು - ಜಿಪ್ಸಿಗಳು.

ಈ ಜಿಪ್ಸಿ ಅನ್ನುವ ಪದಕ್ಕೆ ಅಲೆಮಾರಿ ಎನ್ನುವ ಅರ್ಥ ಇದೆ. ಅಂದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಸತಿಗಾಗಿಯೂ, ಯುದ್ಧದ ಕಾರಣಕ್ಕೋ ಅಥವಾ ಜೀವನ ಕಟ್ಟುಕೊಳ್ಳುವುದಕ್ಕೋ ಹೋಗುವವರು. ಅಂತಹ ಒಂದು ಗುಂಪು ಈ ಜಿಪ್ಸಿಗಳು. ಅವರು ಅಲೆಮಾರಿಗಳು ಚೆಂದದ ಹಾಡು ಕಟ್ಟುತ್ತಾರೆ, ಹಾಡುತ್ತಾರೆ, ನಲಿಯುತ್ತಾರೆ ಕುಣಿಯುತ್ತಾರೆ. ಈ ಸಂಗೀತದ ಪ್ರಕಾರವನ್ನು ಕತಲೂನ್ಯದಲ್ಲಿ ಬಲ್ಕಾನ್ ಸಂಗೀತ ಎಂದು ಕರೆಯುತ್ತಾರೆ.

ಜಿಪ್ಸಿ ಸಂಗೀತ ಒಂದು ರೀತಿ ನಶೆಯೇರಿಸುವ ಸಂಗೀತ, ನಮ್ಮ ಸೂಫಿ ಸಂಗೀತದಷ್ಟು ಕಳೆದುಹೋಗುವ ಭಾವ ಹೊರಡಿಸುತ್ತದೆ. ಪಟ್ಟುಗಳೆಲ್ಲಾ ಕೆಲವು ಮಿಡಲ್ ಈಸ್ಟ್ರನ್ ಸಂಗೀತ ಮತ್ತು ಟರ್ಕಿಶ್ ಸಂಗೀತದ ಹಾಗೆ ಕೇಳಿದರೂ ಇದರಲ್ಲಿ ಇರುವ ಮಾಧುರ್ಯ ಮತ್ತು ಬರಿಸುವ ತಾಕತ್ತು ಇನ್ನೆಲ್ಲಿಯೂ ನಾನು ಕೇಳಿಲ್ಲ. ಒಂದು ದಿನ ಬಾರ್ಸಾದಲ್ಲಿನ ಬಾಲ್ಕನ್ ಸಂಗೀತದ ಆರ್ಕೆಸ್ಟ್ರಾದಲ್ಲಿ ಕೂತು ನಿಜವಾಗಿಯೂ ಹುಚ್ಚು ಕುಣಿಯುವ ಹಾಗಿತ್ತು. ಹೀಗೆ ಇಲ್ಲಿ ಸಂಗೀತ ಹಾಡಿಕೊಂಡು ಅಲೆಮಾರಿಗಳಾಗಿರುವ ಜನರು ಅದೆಷ್ಟು ಸುಖಿಗಳು ಎಂದು ನಾವಂದುಕೊಂಡರೆ ಅಲ್ಲಿನ ಸತ್ಯವೇ ಬೇರೆಯದ್ದು. ಪ್ರಾಯಶಃ ಅಲೆಮಾರಿ ಜನಾಂಗ ಪಡುವಷ್ಟು ಕಷ್ಟ ಕೋಟಳೆಗಳು ಇನ್ಯಾವ ಜನಾಂಗವು ಕಾಣುವುದಿಲ್ಲ ಅನ್ನಿಸುತ್ತದೆ. ಅವರು ಬಿಟ್ಟುಬಂದ ದೇಶಕ್ಕೆ ಮತ್ತೆ ವಾಪಸ್ಸು ಹೋಗುವುದಕ್ಕೆ ಸಾಧ್ಯವಿಲ್ಲ, ಇರುವ ಸಾವಿರಾರು ವರ್ಷಗಳಿಂದ ಇರುವ ದೇಶದಲ್ಲಿ ಅವರಿನ್ನೂ ಪರಕೀಯರು, ಅಲ್ಲಿನ ಸವಲತ್ತುಗಳಿಗೆ ಹಕ್ಕಿದಾರರಲ್ಲ ಇನ್ನೂ ಅಲ್ಲಿನ ಮೂಲನಿವಾಸಿಗಳಿಗಿಂತ ಕೆಳಗಿನ ಜಾಗದಲ್ಲೇ ಇರಬೇಕು ಎಂದು ಸರ್ಕಾರ, ಅಲ್ಲಿನ ಜನರೂ ಅಪೇಕ್ಷೆ ಪಡುತ್ತಾರೆ. ಇದು ಈ ಜಿಪ್ಸಿಗಳಿಗೂ ಹೊರತಲ್ಲ.

ಜಿಪ್ಸಿ ಎಂದು ಈಗ ಕರೆಯಬಾರದು ಎಂದು ಕೆಲವರು ಅನ್ನುತ್ತಾರೆ. ಆದರೆ ಅವರನ್ನು ರೊಮಾನಿಗಳು ಅಂದೂ ಕರೆಯುತ್ತಾರೆ. ಇವರಿಗೂ ನಮ್ಮ ಭಾರತಕ್ಕೂ ಬಹಳ ದೊಡ್ಡ ನಂಟಿದೆ. ಉತ್ತರ ಭಾರತದ ಮೂಲ ನಿವಾಸಿಗಳು 6ನೇ ಶತಮಾನದಿಂದ 11ನೇ ಶತಮಾನದವರೆಗೆ ಪೈರನೀಸ್ ಕಾಡನ್ನು ದಾಟಿಕೊಂಡು ಕತಲೂನ್ಯಾಗೆ ಕ್ರಿಸ್ಚಿಯನ್ ಯಾತ್ರಿಗಳ ಹಾಗೆ ವೇಷ ಹಾಕಿಕೊಂಡು ಬಂದರೆಂಬ ಕಥೆಯಿದೆ. ಆದರೆ ಅವರ ಬಟ್ಟೆ ಬರೆ ನೋಡಿದಾಗ ಇವರೆಲ್ಲಾ ಮಿಡಲ್ ಈಸ್ಟಿನವರೂ ಎಂದು ಅನ್ನಿಸಿ ನಂತರ ಈಜಿಪ್ಟಿನವರು ಎಂದು ಅಂದುಕೊಂಡರು. ಅವರನ್ನ ಸ್ಪಾನಿಷ್ ಭಾಷೆಯಲ್ಲಿ ಗಿತಾನೋ ಎಂದು ಕರೆದರು. ಅದಕ್ಕೆ ಈಜಿಪ್ಟಿನವರು ಎಂದರ್ಥ. ಆದರೆ ರೊಮಾನಿಗಳು ಅನ್ನೋದಕ್ಕೆ ಅರ್ಥ ರೊಮ್ ಎಂದರೆ ಪತಿ ಎಂದು ಅವರ ಭಾಷೆಯಲ್ಲಿ. ಅದಕ್ಕೆ ದೊಮ್, ಲೊಮ್ ಎಂಬ ಸಮಾನಾರ್ಥಕ ಶಬ್ದಗಳು ಇವೆ, ಈ ದೊಮ್ ಎಂಬ ಪದಕ್ಕೆ ಸಂಸ್ಕೃತದ ದಂಪತಿಯ ಒಂದು ಭಾಗ ಎಂದೂ ಅನ್ನುತ್ತಾರೆ. ಇನ್ನೊಂದು ಕಡೆ ಈ ದೊಮ್ ಗೆ ಸಮಾನಾರ್ಥಕ ಪದ ಸಂಸ್ಕೃತದ ಡೋಮ್ ಅಂದರೆ ಕೆಳಜಾತಿಯ ಹಾಡುಗಾರರು ಮತ್ತು ನರ್ತಕಿಯರು ಎಂದೂ ಅರ್ಥ ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ.

ಈ ರೊಮಾದವರು ಕತಲೂನ್ಯಾಗೆ 600 ವರ್ಷಗಳ ಹಿಂದೆ ವಲಸೆ ಬಂದರೂ ಅವರನ್ನು ಕಳ್ಳರು, ಜೂಜುಕೋರರು, ಡ್ರಗ್ ದಂಧೆ ಮಾಡುವವರು ಎಂದು ಸೈಡಲ್ಲಿಟ್ಟು ಕೊಳಗೇರಿಗಳು ಅಥವಾ ಯಾವುದೋ ಒಂದಷ್ಟು ಜಾಗಗಳಲ್ಲಿ ಮಾತ್ರ ಇರುವ ಹಾಗೆ ನೋಡಿಕೊಂಡಿದ್ದಾರೆ. ಆದರೆ ಅವರ ನಿಜವಾದ ಗುರುತು ಈ ದೇಶದ್ದೇ ಎಂದು ಹೇಳಿಕೊಂಡು ಓಡಾಡುತ್ತಾರೆ. ಹಂಗೇರಿ ಮತ್ತು ಬಲ್ಗೇರಿಯಾ ದೇಶದವರು ಇವರ ಮೇಲೆ ಜನಾಂಗೀಯ ದ್ವೇಷವನ್ನು ಸಾರುತ್ತಿದ್ದಾರೆ. ಇದೊಂಥರಾ ಹೇಗೆ ಎಂದರೆ ನಾವಿಗಲೂ ಭಾರತದ ಈಶಾನ್ಯ ಭಾಗದವರನ್ನು ಚೀನಾದವರು ಎಂದು ಕರೆದು ಅವಮಾನ ಮಾಡುತ್ತೀವೋ ಹಾಗೆಯೇ ಇದೂನು ಅವರಿಗೆ. ಒಟ್ಟಿನಲ್ಲಿ ಇವರು ಇಲ್ಲಿಯವರಲ್ಲ ಎಂದು ತಮ್ಮ ಮನದಲ್ಲೇ ಭಾವನೆ ಮೂಡಿಸಿಕೊಂಡು ಪೀಳಿಗೆ ಇಂದ ಪೀಳಿಗೆಗೆ ದ್ವೇಷವನ್ನು ದಾಟಿಸುತ್ತಿದ್ದಾರೆ. ಅವರು ಮಾಡಿದ್ದ ತಪ್ಪು ಏನು ಎಂಬುದು ಅವರಿಗೂ ತಿಳಿದಿಲ್ಲ. ಒಟ್ಟಿನಲ್ಲಿ ಇವರೆಲ್ಲ ಕಳ್ಳರು, ದಗಾಕೋರರು ವಲಸಿಗರು ಎಂದಷ್ಟೇ ಗೊತ್ತು. ಸ್ಪೇನ್ ಮತ್ತು ಕತಲೂನ್ಯ ಯುದ್ಧ ಆದಾಗ ಈ ಜಿಪ್ಸಿಗಳು ತಾವು ಕತಲಾನ್ ಭಾಷೆ ಕಲಿತು ನಾವು ಕತಲೂನ್ಯರು ಎಂದು ಹೇಳಿಕೊಂಡು ಅವರ ಭಾಷೆ ಸಂಸ್ಕೃತಿಯನ್ನು ತಮ್ಮದು ಎಂದು ಹೇಳಿಕೊಂಡು ಜೀವನ ನಡೆಸುತ್ತಿದ್ದರು.

ಈ ಗಿತಾನೋಸ್ ಸ್ಪೇನಿಗೆ ಬಂದಿಳಿದಾಗ ದಕ್ಷಿಣ ಸ್ಪೇನಿನವರ ಜೊತೆ ಸೇರಿಕೊಂಡು “ಫ್ಲೆಮೆಂಕೋ” ಎಂಬ ಸಂಗೀತ ಪ್ರಕಾರವನ್ನು ಹುಟ್ಟುಹಾಕಿ ಅದನ್ನು ಜಗತ್ಪ್ರಸಿದ್ಧ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಯಾವ ಮಟ್ಟಿಗೆ ಅಂದರೆ ಜಿಪ್ಸಿ ಸಂಗೀತ ಎಂಬುದನ್ನು ಮರೆತು ಪೂರ್ತಿ ಫ್ಲಮೆಂಕೋ ಇವರ ಗುರುತು ಎನ್ನುವ ಹಾಗೆ ಬದುಕಿದ್ದಾರೆ. ಈಗಲೂ ಸ್ಪೇನಿನ ಸಂಗೀತದ ಪ್ರಕಾರ ಯಾವುದೆಂದರೆ ಥಟ್ಟನೆ ನಾವು ಹೇಳೋದು ಫ್ಲಮೆಂಕೋ ಎಂದೇ. ಕತಲೂನ್ಯಾದ ಜನರ ಜೊತೆ ಸೇರಿಕೊಂಡು ರುಂಬಾ ಕತಲಾನಾ ಎಂಬ ಹೊಸ ಸಂಗೀತ ಪ್ರಕಾರವನ್ನ ಹುಟ್ಟಿಹಾಕಿದ್ದಾರೆ. 50 - 60ರ ದಶಕದಲ್ಲಿ ಇವರ ಸಂಗೀತ, ಕ್ಯೂಬನ್ ಸಂಗೀತ ಬಹಳ ಪ್ಯಾಪುಲರ್ ಆಗಿತ್ತು. ರಾಕ್ ಆಂಡ್ ರೋಲ್ ಜೊತೆಗೆ ರುಂಬಾ ಕತಲಾನಾ ಬಹಳ ಸುಪ್ರಸಿದ್ಧವಾಗಿತ್ತು. ಈಗೀಗ ನಾವು ಏರೋಬಿಕ್ಸಿನಲ್ಲಿ ಗೊತ್ತಿರದ ಭಾಷೆಯಲ್ಲಿ “ತಾಕಿ ತಾಕಿ ರುಂಬಾ” ಎಂದು ಮತ್ತೇರಿಸುವ ಸಂಗೀತದಲ್ಲಿ ಈ ರುಂಬಾ ಕತಲಾನಾ ಇದೆ.

ರೊಮಾ ಜನರಲ್ಲೂ ಬಹಳಷ್ಟು ಉಪ ಗುಂಪುಗಳಿವೆ. ಕಾಲ ಕ್ರಮೇಣ ಅವರುಗಳು ಯುರೋಪಿನ ಜನರೊಂದಿಗೆ, ಮಧ್ಯ ಏಷ್ಯಾದ ಜನರೊಂದಿಗೆ ಬೆರೆತು ತಮ್ಮದೇ ಹೊಸ ಉಪ ಗುಂಪನ್ನು ಶುರು ಮಾಡಿಟ್ಟುಕೊಂಡಿದ್ದಾರೆ. ಅದರಲ್ಲಿ ಬೇರೆ ಬೇರೆ ಧರ್ಮಗಳಿಗೆ ಸೇರಿದವರೂ ಆಗಿದ್ದಾರೆ. ಇದೊಂಥರಾ ನಾವೆಲ್ಲಿಂದ ಬಂದಿದ್ದೆವೋ ಅವೆಲ್ಲವನ್ನು ಬಿಟ್ಟು ಬಂದ ಜಾಗದಲ್ಲಿ ಹೇಗೆ ಇರಬೇಕೋ ಯಾವ ರೀತಿ ರಿವಾಜನ್ನ ಅನುಸರಿಸಬೇಕೋ ಅದನ್ನ ಮಾಡಿ ತಮ್ಮತನವನ್ನು ಕಳೆದುಕೊಂಡರೂ ಅವರನ್ನ ಇನ್ನೂ ವಲಸಿಗರೆಂದೇ ನೋಡುವ ಪ್ರವೃತ್ತಿ ಮಾತ್ರ ಕಡಿಮೆ ಆಗಿಲ್ಲ. ಅವರಿಗೂ ಪಾಪ ಅದೆಷ್ಟು ಬೆರೆಯಬೇಕು ಎಂಬುದು ಸಹ ಗೊತ್ತಿಲ್ಲ. ಕೆಲವೊಮ್ಮೆ ನಮ್ಮವರಲ್ಲ ಎಂದು ಅವರನ್ನು ದೂರಿದ್ದೂ ಇದೆ. ಆದರೂ ಹಾಗೆಂದುಕೊಳ್ಳದೇ ಜನರ ಜೊತೆ ಬೆರೆಯಲು ಶುರು ಮಾಡಿದ್ದಾರೆ. ಅಶ್ಕಲಿ ಎಂದು ಅಲ್ಬೇನಿಯಾದ ಗುಂಪು, ಯೆರ್ಲಿದೆ ಎಂಬ ಟರ್ಕಿಯ ಗುಂಪು, ಬಶಾಲ್ದೆ ಎಂಬ ಹಂಗೇರಿ ಸ್ಲೋವಾಕಿನ ಗುಂಪು, ಕಾಲೆ ಎಂಬ ಸ್ಪೇನ್ ಮತ್ತು ಪೋರ್ತುಗಲ್ ಗುಂಪು ಹೀಗೆ ಅದೆಷ್ಟೋ ಹೆಸರುಗಳಿರುವ ಉಪಗುಂಪುಗಳಾಗಿ ಈ ಜನಾಂಗ ಬೆಳೆದಿದೆ.

ಬಾರ್ಸಿಲೋನಾದ ಅದೆಷ್ಟೋ ಕಡೆ ಸಂಗೀತ ಹಾಡುವವರು ಇವರೆ. ಯಾವ ಮಟ್ಟದ್ದು ಎಂದರೆ ನಮ್ಮಲ್ಲಿ ಮುಂಚೆ ದಾಸರು , ವಾಗ್ಗೇಯಕಾರರು ತಮ್ಮ ವೃತ್ತಿ ಇದೊಂದೆ ಎಂದು ನಂಬಿಕೊಂಡು ಬರುತ್ತಿದ್ದರೂ ಹಾಗೆ ಇವರೂ ಎಲ್ಲಾ ಕಡೆ ಸಂಗೀತ ಹಾಡಿಕೊಂಡೇ ಜೀವನ ಮಾಡುತ್ತಾರೆ. ಕೆಲವೊಮ್ಮೆ ಅದು ಅವರ ಹೊಟ್ಟೆ ತುಂಬಿಸದಿರಬಹುದು ಕೆಲವೊಮ್ಮೆ ಅವರಿಗೆ ಕೆಲಸ ಸಿಗದಿರಬಹುದು ಅಂತಹ ಸಮಯದಲ್ಲಿ ಕೆಲವೊಮ್ಮೆ ಇಲ್ಲೀಗಲ್ ಕೆಲಸಗಳನ್ನು ಮಾಡುವುದಕ್ಕೆ ಕೈ ಹಾಕಿ ಸಿಕ್ಕಿಹಾಕೊಂಡು ಇದ್ದಾರೆ. ಇವರ ಭಾಷೆಯನ್ನು ಮಾತಾಡಬಾರದು, ಇವರ ಆಚರಣೆಗಳನ್ನು ಮಾಡಬಾರದು ಎಂದು ಎಷ್ಟೋ ದೇಶಗಳು ನಿರ್ಬಂಧ ಹೊಂದಿದ್ದವು. ಇವರ ಭಾಷೆಯನ್ನು ಆಳವಾಗಿ ಅಧ್ಯಯನ ಮಾಡಿದ ಕೆಲವು ಚರಿತ್ರಕಾರರು ಇದರಲ್ಲಿ ಕೆಲವು ಹಿಂದಿ ಶಬ್ದಗಳಿಗೆ, ಕೆಲವು ಬೆಂಗಾಲಿ ಪದಗಳಿವೆ, ಕಡೆ ಕಡೆಗೆ ಇದು ಮಾರ್ವಾರಿ ಭಾಷೆಗೆ ಹೋಲಿಕೆ ಇದೆ ಎಂದು ಅಂದಾಗ ರಾಜಸ್ಥಾನದಿಂದ ಹೊರಟು ಬಂದ ಮಂದಿಯೇನೋ ಎಂದು ಜನ ಅಂದುಕೊಳ್ಳುವಷ್ಟರಲ್ಲಿ ಅದ್ಯಾವುದರ ಕುರುಹೇ ಇಲ್ಲದೆ ಬದಲಾದವರು ಇವರು. ಕೆಲವೊಮ್ಮೆ ಇವರೇನಾದರೂ ಭಾರತದಲ್ಲೇ ಇದ್ದಿದ್ದರೆ . “ಕೇಸರಿಯಾ…” ಎಂದು ಹಾಡುತ್ತಿದ್ದರೇ ಎಂದು ನಾವು ಊಹಿಸಿಕೊಳ್ಳಬಹುದು.

ಈಗಿನ ಗಿತಾನೋಗಳು ತಮ್ಮ ಪರಂಪರೆಯನ್ನು ಮರೆಯುವುದಿಲ್ಲ ಎಂಬ ಶಪಥ ತೊಟ್ಟು ಅವರ ಬಾಲ್ಕನ್ ಸಂಗೀತವನ್ನು ಬರಿ ಮೆಟ್ರೋ ಸ್ಟೇಷನ್ ಮುಂದೆ ಹಾಡೋದಕ್ಕೆ, ಲ-ಮರ್ಸೆ ಹಬ್ಬದಲ್ಲಿ ಹಾಡೋದಕ್ಕೆ, ಸಂಪ್ರದಾಯ ಆಚರಣೆಗಳಿಗೆ ಸೀಮಿತವಾಗಿಸರೆ ಒಂದು ತಂಡ ಕಟ್ಟಿಕೊಂಡು ಬ್ಯಾಂಡಲ್ಲಿ ಹಾಡೋದಕ್ಕೆ ಶುರು ಮಾಡಿದ್ದಾರೆ. ಮೊದಲೆ ಫೆಡರಲಿಸಮ್ ನ ತವರೂರಾದ ಬಾರ್ಸಿಲೋನಾದಲ್ಲಿ ಬಾರ್ಸಿಲೋನಾ ಜಿಪ್ಸಿ ಬಾಲ್ಕನ್ ಆರ್ಕೆಸ್ಟ್ರಾ ಎಂಬುದನ್ನ ಹೊಸ ಹುಡುಗರು 2012ರಲ್ಲಿ ಶುರು ಮಾಡಿದ್ದಾರೆ. BGKO ಎಂದು ಕರೆಯಲ್ಪಡುವ ಈ ತಂಡ ತಮ್ಮ ಸಂಗೀತವನ್ನು ಎಲ್ಲಾ ಕಡೆ ಪಸರಿಸುವ ಕೆಲಸ ಮಾಡುತ್ತಿದ್ದೆ. ಯಾವುದೇ ಶಾಸ್ತ್ರೀಯ ಅಭ್ಯಾಸ ಇರದೆ ಬರೀ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಸಂಗೀತವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡದೆ ಅದರ ಜೊತೆಗೆ ಜಾಝ್, ಕ್ಲೆಝ್ಮರ್ ಸಂಗೀತ, ಸೌತ್ ಅಮೇರಿಕಾದ ಸಂಗೀತ ಎಲ್ಲದರ ವಿಶೇಷಣಗಳನ್ನು ಎತ್ತಿಕೊಂಡು ಸಂಗೀತದ ಔತಣ ಉಣಬಡಿಸುತ್ತಿದ್ದಾರೆ. ಹಾಡುಗಾರ್ತಿ ಮಾರ್ಗರೀಟಾ ಅಬೀತಾ, ಕ್ಲಾರಿನೆಟ್ ನುಡಿಸುವ ಡ್ಯಾನಿಯಲ್ ಕಾರ್ಬೊನೆಲ್, ಅಕಾರ್ಡಿಯನ್ ನುಡಿಸುವ ಮತಿಯಾ, ಗಿಟಾರ್ ನುಡಿಸುವ ಜೂಲಿಯನ್ ಇವರೆಲ್ಲಾ ಸೇರಿಕೊಂಡು ಮರೆತುಹೋದ ಅವರ ಗುರುತು ಬಾಲ್ಕನ್ ಸಂಗೀತವನ್ನು ಜನರಿಗೆ ಉಣಬಡಿಸುತ್ತಿದ್ದಾರೆ.

ಮಾರಿಜೊ ದೆಲ್ ಬೆಲ ಕುಮ್ರೊಜೋ ಈ ಬಾಲ್ಕನ್ ಸಂಗೀತದ ಗುಂಪಿನ ಸುಪ್ರಸಿದ್ಧ ಗೀತೆ. ಇದು ಸರ್ಬಿಯಾದ ಗಿಪ್ಸಿಗಳ ಹಾಡು. ಮರಿಯಾ ಎಂಬ ಒಂದು ಬಿಳಿ ಪಾರಿವಾಳಕ್ಕೆ ಯಾಕೆ ಹೀಗೆ ನಾಚಿಕೆಯಿಂದ ನಡೆಯುತ್ತಿದ್ದೀಯ, ಯಾಕೆ ಸುಮ್ಮನ್ನಿದ್ದೀಯ ಎಂದು ಕೇಳಿ ಕಿಚಾಯಿಸುವ ಗೀತೆ. ಇಲ್ಲಿ ಮರಿಯಾ ಎಂಬುವಳು ಹುಡುಗಿ ಎಂದು ಅಂದುಕೊಂಡರೆ ಕ್ಷೇಮ. ನಿನ್ನ ಕತ್ತಿನ ಆಭರಣ ಭಾರಾವಗಿದೆಯೇ, ನಿನ್ನ ನೋಡುವ ಆಸೆಗೆ ನಾನೇನು ಮಾಡಬೇಕು? ಎಂದು ವಿರಹದ ವೇದನೆಯನ್ನು ಹೇಳಿ ಪರಿವಾಳಕ್ಕೆ ತನ್ನ ಹುಡುಗಿಯ ಹತ್ತಿರ ಹೋಗು ಎಂದು ಪುಸಲಾಯಿಸುವ ರೀತಿ. ಥೇಟ್ ನಮ್ಮ ಹಂಸಲೇಖಾ ಅವರ ಹಾಡು, “ಕೆಂಪು ತೋಟದಲ್ಲಿ ಹಾರಬಾರದೇಕೆ ಪಾರಿವಾಳವೆ, ನೀ ಹೀಗೇಕೆ ನಾಚುತಿರುವೆ ಮರುಳೆ” ಎಂದು ಕೇಳಿದ ಹಾಗೆ. ಹೀಗೆ ತಮಾಷೆ ಮಾಡಿಕೊಂಡು ತಮ್ಮ ಮನಸ್ಸಿನ ಭಾವನೆಗಳನ್ನು ಹೇಳಿಕೊಂಡು ಅಲೆಮಾರಿಗಳು ಒಂದು ಊರಿಂದ ಇನ್ನೊಂದೂರಿಗೆ ಹೋಗುತ್ತಾ ಹಾಡುತ್ತಿದ್ದರು.

ಕಲೆಯೋಕೆ ಯಾಕಾ ಎಂಬ ಮಜಾ ಹಾಡಿನಲ್ಲಿ ಒಂದು ಹುಡುಗಿ ತನ್ನ ಅಮ್ಮನಿಗೆ ನನ್ನನ್ನು ಬೇಗ ಮದುಮಗಳು ಮಾಡು, ಒಬ್ಬಳೇ ಇಲ್ಲಿ ನಡೆಯೋಕೆ ಕಷ್ಟ ಆಗತ್ತೆ ಎಂದು ಹೇಳಿದಾಗ ಒಂದು ಒಂಟಿ ಹೆಣ್ಣಿನ ಆತಂಕಗಳನ್ನ ಹೇಳಿ ನನಗೆ ಎಂತಹ ಗಂಡನ್ನನ್ನು ಹುಡುಕಬೇಕು ಎಂದು ಹೇಳುತ್ತಾ ಹೋಗುತ್ತಾಳೆ. ಇದರಲ್ಲಿ ಹೆಣ್ಣಿನ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಂಡು ತನ್ನ ಸಂಗಾತಿಯನ್ನು ಆರಿಸಿಕೊಳ್ಳುವ ಎಲ್ಲಾ ಅವಕಾಶ ಇದೆ ಎಂಬ ಭಾವನೆಯನ್ನ ಹುಟ್ಟುಹಾಕುತ್ತದೆ.

ಮತ್ತೊಂದು ಹಾಡು ಕಂನ್ಸ್ಟಾನ್ಟೀನ್ ಕಂನ್ಸ್ಟ್ರಾನ್ಟೀನ್ ಅನ್ನುವ ಹಾಂಟಿಂಗ್ ಹಾಡು. ಕಂನ್ಸ್ಟಾಂಟೀನ್ ಅನ್ನುವ ಕಪ್ಪು ಅಂಗಿಯ ಹುಡುಗ ಮತ್ತು ಮರಿಯುರಾ ಎಂಬ ಬೇಟೆಗಾರನ ಹೆಂಡತಿಯ ನಡುವೆ ಆಗುವ ಮಾತುಕತೆಗಳನ್ನು ಹಾಡಾಗಿ ಪರಿವರ್ತಿಸಿದ್ದಾರೆ. ಇದರಲ್ಲಿ ಕಂನ್ಸ್ಟಾನ್ಟೀನ್ ಗಿಪ್ಸಿಯ ಹುಡುಗ, ಮರಿಯುರಾ ಸ್ಪಾನಿಷ್ ಹುಡುಗಿ ಅವಳನ್ನು ಬೇಟೆಗಾರ ಮನೆಗೆ ಬೀಗ ಹಾಕಿಕೊಂಡು ಹೆಂಡತಿಯನ್ನು ಕೂಡಿ ಹಾಕಿಕೊಂಡು ಹೋಗಿದ್ದಾನೆ. “ಓಹ್ ಕಂನ್ಸ್ಟಾನ್ಟೀನ್ ಇಲ್ಲಿ ಬಾ” ಎಂದು ಕರೆದು ಬಿಡುಗಡೆಗೆ ಒತ್ತಾಯಿಸುತ್ತಾಳೆ. ಇದೊಂಥರಾ ಜಿಪ್ಸಿಗಳ ಅಲೆಮಾರಿ ಬದುಕು ಬಿಡುಗಡೆ, ಒಂದೇ ಜಾಗದಲ್ಲಿರುವ ಸ್ಪಾನಿಷ್ ಜನರ ಬದುಕು ಬಂಧನ ಎಂದು ತೋರಿಸಿ ಹೇಳುವ ಕುರುಹಾಗಿದೆ.

ಬಿ ಎಸ್ ಕೆ ಓ ಎಂಬ ಯೂಟ್ಯೂಬ್ ಚಾನೆಲ್ಲಿನಲ್ಲಿ ಈ ಹುಡುಗ ಹುಡುಗಿಯರು ತಮ್ಮ ಮರೆತುಹೋದ ಗುರುತನ್ನು ಮತ್ತೆ ವಾಪಸ್ಸು ತಂದಿದ್ದಾರೆ. ಈ ಸಂಗೀತ ಕಳೆದುಹೋದ ಭಾಷೆ, ಸಂಸ್ಕೃತಿಯನ್ನ ಮತ್ತೆ ವಾಪಸ್ಸು ತಂದ ಹಾಗಿದೆ. ಕೇಳಿ ನೋಡಿ:

 

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...