ಮಾಸ್ತಿ ಪುರಸ್ಕಾರದ ಗೌರವ: ಎಚ್.ಎಸ್. ಸತ್ಯನಾರಾಯಣ

Date: 23-10-2021

Location: ಬೆಂಗಳೂರು


‘ಆಧುನಿಕ ಕನ್ನಡ ಸಾಹಿತ್ಯ ಕಂಡ ಮಹಾ ಚೇತನಗಳಲ್ಲೊಬ್ಬರೆನಿಸಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ವಿಶೇಷವಾಗಿ ಕನ್ನಡ ಕಥನದಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಕಾಶನದಲ್ಲಿ ವಿಶೇಷವಾದ ಪ್ರೀತಿಯಿತ್ತು’ ಎನ್ನುತ್ತಾರೆ ಲೇಖಕ ಎಚ್.ಎಸ್. ಸತ್ಯನಾರಾಯಣ. ಅವರ ಅಂಕಣ ‘ಸಂಪ್ರಾತ’ದಲ್ಲಿ ಮಾಸ್ತಿ ಪುರಸ್ಕಾರದ ಕುರಿತು ವಿಶ್ಲೇಷಿಸಿದ್ದಾರೆ.

ಇತ್ತೀಚೆಗಷ್ಟೇ ಪತ್ರಿಕೆಯಲ್ಲಿ ನಮ್ಮ ಹಲವು ಗಣ್ಯ ಲೇಖಕರಿಗೆ ಜೀವಮಾನ ಸಾಧನೆಗಾಗಿ 'ಮಾಸ್ತಿ' ಪುರಸ್ಕಾರ ಲಭಿಸಿದ ಸುದ್ದಿ ಪ್ರಕಟವಾಗಿದೆ. ನಮ್ಮ ನಡುವೆ ಇಂದು ಘನತೆ ಉಳಿಸಿಕೊಂಡಿರುವ ಕೆಲವೇ ಕೆಲವು ಪ್ರಶಸ್ತಿಗಳಲ್ಲಿ ಮಾಸ್ತಿ ಪುರಸ್ಕಾರ ಕೂಡ ಒಂದಾದ್ದರಿಂದ, ಅರ್ಹರಿಗೆ ಅದು ಸಂದಿರುವುದರಿಂದ ಸಹಜವಾಗಿಯೇ ಎಲ್ಲರಿಗೂ ಸಂತೋಷವಾಗಿದೆ.

ಈಗೆಲ್ಲ ದಿನ ಬೆಳಗಾದರೆ ಪ್ರಶಸ್ತಿಗಳ ವಿಚಾರವೇ. ಲೆಕ್ಕ ಹಾಕಲೂ ಸಾಧ್ಯವಿಲ್ಲದಷ್ಟು ಪ್ರಶಸ್ತಿಗಳು ನಮ್ಮ ಸಾಹಿತ್ಯ ವಲಯದಲ್ಲಿವೆ. ಪ್ರತಿ ವರ್ಷ ಅವುಗಳನ್ನು ಯಾರಿಗಾದರೂ ಕೊಡಲೇ ಬೇಕಾದ ಅನಿವಾರ್ಯತೆ ಇರುವಾಗ ಕೆಲವು ಸಲ ಯೋಗ್ಯರಿಗೂ, ಹಲವು ಸಲ ಅರ್ಹರಲ್ಲದವರ ಕೃತಿಗಳಿಗೂ ಪ್ರಶಸ್ತಿಗಳನ್ನು ಕೊಟ್ಟು ಸುಮ್ಮನಾಗಬೇಕಾದ ಪರಿಸ್ಥಿತಿಗಳಿರುತ್ತವೆ. ಕೆಲವು ಪ್ರಶಸ್ತಿಗಳು ಮಾತ್ರ ಯಾವಾಗ ಪ್ರಕಟವಾಗುತ್ತವೆ? ಯಾರಿಗೆ ಈ ಗೌರವ ಸಲ್ಲಬಹುದು? ಎಂದು ಸಾಹಿತ್ಯವಲಯ ಆಸಕ್ತಿಯಿಂದ ಎದುರು ನೋಡುವಂತಿರುತ್ತವೆ. ಅಂಥ ಪ್ರಶಸ್ತಿಗಳ ಸಾಲಿನಲ್ಲಿ 'ಮಾಸ್ತಿ ಪುರಸ್ಕಾರ' ಕೂಡ ಗಣ್ಯವಾದುದು.

ಕಳೆದ ಇಪ್ಪತ್ತೊಂಬತ್ತು ವರ್ಷಗಳಿಂದ ಮಾಸ್ತಿ ಪುರಸ್ಕಾರವನ್ನು ನಮ್ಮ ಗಣ್ಯ ಲೇಖಕರ ಜೀವಮಾನದ ಸಾಧನೆಗಾಗಿ ಸಲ್ಲಿಸುತ್ತಾ ಬರಲಾಗಿದೆ. ಕನ್ನಡದ ಅನನ್ಯ ಕಥೆಗಾರ ಶ್ರೀ ಯಶವಂತ ಚಿತ್ತಾಲರಿಗೆ ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ಪ್ರದಾನ ಮಾಡಲಾಯ್ತು. ಈ ಸಮಾರಂಭದ ನೆನಪು ಇನ್ನೂ ಮಾಸಿಲ್ಲ. ಚಿತ್ತಾಲರಿಗೆ ಪ್ರಶಸ್ತಿ ಕೊಟ್ಟಿದ್ದನ್ನು, ಸ್ವೀಕರಿಸಿ ಅಂದು ಅವರಾಡಿದ ಮಾತುಗಳಿನ್ನೂ ಕಿವಿಯಲ್ಲಿ ಗುಯ್ಗುಡುತ್ತಿದೆ. 'ಈ ಪ್ರಶಸ್ತಿ ನನ್ನ ಹೊಣೆಗಾರಿಕೆಯನ್ನು ವೃದ್ಧಿಸಿದೆ' ಎಂದು ಅಂದು ಚಿತ್ತಾಲರಾಡಿದ ಮಾತುಗಳು ಎಲ್ಲ ಪ್ರಶಸ್ತಿಗಳ ವಿಚಾರದಲ್ಲೂ ನಿಜವೇ. ಆನಂತರದ ವರ್ಷಗಳಲ್ಲಿ ಎಸ್. ಎಲ್. ಭೈರಪ್ಪ, ಎ. ಎನ್. ಮೂರ್ತಿರಾವ್, ಯು. ಆರ್. ಅನಂತಮೂರ್ತಿ, ಜಿ.ಎಚ್.ನಾಯಕ ಮುಂತಾದ ಹಿರಿಯರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದನ್ನು ನೋಡಿ ಸಂತೋಷಪಟ್ಟಿರುವೆ. ಮೊದಮೊದಲು ವರ್ಷಕ್ಕೆ ಒಬ್ಬ ಲೇಖಕರಿಗೆ ಮಾತ್ರ ಈ ಗೌರವ ಸಲ್ಲಿಸಲಾಗುತ್ತಿತ್ತು. ಇದು ಹೀಗೆ ಮುಂದುವರಿದರೆ ನಮ್ಮ ಎಷ್ಟೋ ಜನ ಲೇಖಕರಿಗೆ ಈ ಗೌರವ ಸಲ್ಲದೇ ಹೋಗಬಹುದಾದ ಸಂದರ್ಭವನ್ನು ನೆನಪಿನಲ್ಲಿಟ್ಟು ಕೊಂಡು ಇತ್ತೀಚೆಗೆ ಪ್ರತಿ ವರ್ಷ ಹಲವು ಲೇಖಕರಿಗೆ ಒಟ್ಟಾಗಿ ಪ್ರಶಸ್ತಿ ಪ್ರದಾನ ಮಾಡುವ ಯೋಜನೆಯನ್ನು ಮಾಸ್ತಿ ಟ್ರಸ್ಟ್ ರೂಪಿಸಿದ್ದರ ಪರಿಣಾಮವಾಗಿ ಅನೇಕರಿಗೆ ಈ ಗೌರವ ಸಲ್ಲುವಂತಾಯ್ತು. ಅಂತೆಯೇ ಈ ವರ್ಷ ಕನ್ನಡದಲ್ಲಿ ಹೊಸ ಚಿಂತನೆಗಳನ್ನು ಹುಟ್ಟುಹಾಕಿದ ಘನ ವಿದ್ವಾಂಸರಾದ ಬಿ. ವಿವೇಕ ರೈ, ಮಾಧವ ಕುಲಕರ್ಣಿ, ವಸುಮತಿ ಉಡುಪ, ವಿಜಯರಾಘವನ್, ಜಯಂತ ಕಾಯ್ಕಿಣಿ, ಎಂ ಎಸ್ ಆಶಾದೇವಿ, ಎಚ್ ಎಲ್ ಪುಷ್ಪ ಅವರುಗಳ ಅನುಪಮ ಸಾಹಿತ್ಯ ಸೇವೆಗಾಗಿ ಮಾಸ್ತಿ ಪುರಸ್ಕಾರ ಲಭಿಸಿದೆ. ಇವರೆಲ್ಲರಿಗೂ ಕನ್ನಡಿಗರ ಶುಭಾಶಯ ಮತ್ತು ಮಾಸ್ತಿಯವರ ಆಶೀರ್ವಾದಗಳೆರಡೂ ದೊರೆತಂತಾಗಿದೆ.

ಆಧುನಿಕ ಕನ್ನಡ ಸಾಹಿತ್ಯ ಕಂಡ ಮಹಾ ಚೇತನಗಳಲ್ಲೊಬ್ಬರೆನಿಸಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ವಿಶೇಷವಾಗಿ ಕನ್ನಡ ಕಥನದಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಕಾಶನದಲ್ಲಿ ವಿಶೇಷವಾದ ಪ್ರೀತಿಯಿತ್ತು. ಇದನ್ನು ಬಲ್ಲ ಟ್ರಸ್ಟ್ ಮಾಸ್ತಿಯವರ ಹೆಸರಿನಲ್ಲಿ 2006ರಿಂದ ಮಾಸ್ತಿ ಕಥಾ ಪುರಸ್ಕಾರವನ್ನೂ 2009ರಿಂದ ಮಾಸ್ತಿ ಕಾದಂಬರಿ ಪುರಸ್ಕಾರಗಳನ್ನೂ ನೀಡಲಾರಂಭಿಸಿತು. ಮೊದಲಿಗೆ ಈ ಎರಡೂ ಪ್ರಶಸ್ತಿಗಳಿಗಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುವ ಪರಿಪಾಠವಿತ್ತು. ಮೊದಲ ಮೂರು ವರ್ಷಗಳಲ್ಲಿ ಸ್ಪರ್ಧೆಗೆ ಬಂದ ಹಸ್ತಪ್ರತಿಗಳು ಗುಣಮಟ್ಟದಲ್ಲಿ ಸೋತುಹೋಗುತ್ತಿದ್ದವೇ ಹೆಚ್ಚಿಗೆ ಇರುತ್ತಿದ್ದವು. ಆದ್ದರಿಂದ ನಿಗದಿತ ವರ್ಷದಲ್ಲಿ ಪ್ರಕಟಗೊಂಡ ಕಥೆ, ಕಾದಂಬರಿಗಳಿಗೆ ಪುರಸ್ಕಾರ ನೀಡುವ ಯೋಜನೆ ಜಾರಿಗೆ ಬಂತು. ಪ್ರಶಸ್ತಿಗಾಗಿ ಕಳಿಸುವ ಕೃತಿಗಳನ್ನು ಆಯಾ ಕ್ಷೇತ್ರದಲ್ಲಿ ಪರಿಣತಿ ಪಡೆದಿರುವ ತಜ್ಞರ ಸಮಿತಿ ಆಯ್ಕೆ ಮಾಡುತ್ತದೆ. ಹಲವು ಸುತ್ತುಗಳಲ್ಲಿ ನಡೆಯುವ ಈ ಆಯ್ಕೆ ಪ್ರಕ್ರಿಯೆಯು ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡುತ್ತದೆ ಮತ್ತು ಈ ವಿಚಾರದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಹಿರಿಯ ಕಥೆಗಾರ ಶ್ರೀ ಮಾವಿನಕೆರೆ ರಂಗನಾಥ್ ಅವರು ರಾಜಿ ಮಾಡಿಕೊಳ್ಳುವ ಮಾತಿಲ್ಲದಷ್ಡು ಶ್ರದ್ಧಾವಂತರಾಗಿರುವುದು ತುಂಬ ಮಹತ್ತ್ವದ ಸಂಗತಿ. ಅವರ ಶ್ರದ್ಧೆ ಮತ್ತು ಬದ್ಧತೆಗಳು ಅನುಕರಣೀಯವಾದವು. ಪ್ರತಿವರ್ಷವೂ ಅವರು ಆಯ್ಕೆಯಾದ ಕಥೆ-ಕಾದಂಬರಿಕಾರರಿಗೆ 25 ಸಾವಿರ ನಗದು ನೀಡುವುದರ ಜೊತೆಗೆ, ಪ್ರಶಸ್ತಿ ವಿಜೇತ ಕೃತಿಗಳ ಪ್ರಕಾಶಕರಿಗೂ 10 ಸಾವಿರ ನಗದು ನೀಡಿ ಸನ್ಮಾನಿಸುವ ಯೋಜನೆ ರೂಪಿಸಿದ್ದಾರೆ. ಲೇಖಕರಿಗೆ ಮತ್ತು ಪ್ರಕಾಶಕರಿಗೆ ಮಾಸ್ತಿಯವರು ಸಲ್ಲಿಸುತ್ತಿದ್ದ ಗೌರವವನ್ನು ಈ ಮೂಲಕ ಪಾಲಿಸಿಕೊಂಡು ಬರುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಕೂಡ ಮಾವಿನಕೆರೆ ರಂಗನಾಥ್ ಅವರಿಗೆ ಸಲ್ಲಬೇಕು. ಲೇಖಕರೇ ಪ್ರಕಾಶಕರಾಗಿದ್ದಾಗ ಅವರಿಗೆ ಡಬಲ್ ಧಮಾಕ!

ಗೌರವ ಪ್ರಶಸ್ತಿಯನ್ನು ಕಾವ್ಯ, ಕಥೆ, ಕಾದಂಬರಿ, ಸಾಹಿತ್ಯ ವಿಮರ್ಶೆ, ಜಾನಪದ ಮುಂತಾದ ಕ್ಷೇತ್ರಗಳಲ್ಲಿನ ಸಾಧನೆಗಾಗಿ ನೀಡಲಾಗುತ್ತಿದೆ. ಸಂಶೋಧನೆ, ಗ್ರಂಥ ಸಂಪಾದನೆ, ಭಾಷಾ ವಿಜ್ಞಾನ, ಅಂಕಣ ಸಾಹಿತ್ಯ ಮುಂತಾದವುಗಳನ್ನೂ ಈ ಪರಿಧಿಗೆ ಪರಿಗಣಿಸಿದರೆ ಪ್ರಶಸ್ತಿಯ ವ್ಯಾಪ್ತಿ ಇನ್ನಷ್ಟು ವಿಸ್ತರಿಸುತ್ತದೆ.

ಈಗಿರುವ ಕಥಾಸ್ಪರ್ಧೆ ಮತ್ತು ಕಾದಂಬರಿ ಸ್ಪರ್ಧೆಗಳಲ್ಲಿ ಯಾವುದೇ ವಯೋಮಾನಕ್ಕೆ ಗಡಿ ಹಾಕಿಲ್ಲವಾದರೂ ಇದುವರೆಗೆ ವಿಜೇತರಾದವರಲ್ಲಿ ಹಿರಿಯರೇ ಹೆಚ್ಚಿರುವುದನ್ನು ಗಮನಿಸಿ, ಮೂವತ್ತೈದು-ನಲವತ್ತು ವಯಸ್ಸಿನೊಳಗಣ ಕಿರಿಯ ಲೇಖಕಿರಿಗಾಗಿ ಒಂದು ಪ್ರಶಸ್ತಿ ಯೋಜಿಸುವುದು ಸಾಧ್ಯವಾದರೆ ನಮ್ಮ ಹೊಸ ತಲೆಮಾರಿನ ಅನೇಕ ಪ್ರತಿಭಾವಂತರಿಗೂ ಈ ಪುರಸ್ಕಾರದ ಮೂಲಕ ಪ್ರೋತ್ಸಾಹ ನೀಡಿದಂತಾಗಬಹುದು. ಮಾಸ್ತಿಯವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ತುಂಬ ತಡವಾಗಿ ಘೋಷಿಸಿದಾಗ ಹೇಳಿದ ಮಾತೆಂದರೆ; "ಮನೆಗೆ ಸಿಹಿ ತಂದಾಗ ಮೊದಲು ಚಿಕ್ಕವರಿಗೆ ಕೊಡಬೇಕು, ನಂತರ ಹಿರಿಯರಿಗಲ್ಲವೇ?" ಎಂಬುದು. ಅವರ ಈ ಮಾತಿನ ಹಿಂದಿನ ಮರ್ಮವನ್ನು ಅರಿತು ಹೊಸ ಲೇಖಕರಿಗೊಂದು ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಕೆಲಸಕ್ಕೆ ಮಾಸ್ತಿ ಟ್ರಸ್ಟ್ ಮುಂದಾದರೆ ಮಾಸ್ತಿಯವರಿಗೆ ಸಂತೋಷವಾದೀತಲ್ಲದೆ, ಮುಂದಿನ ತಲೆಮಾರಿಗೂ ಸಂತಸವಾದೀತು.

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...