’ಮಿತಾಕ್ಷರ’ ಖ್ಯಾತಿಯ ವಿಜ್ಞಾನೇಶ್ವರ

Date: 02-02-2020

Location: ಬೆಂಗಳೂರು


1932 ರಲ್ಲೇ ಇತಿಹಾಸ ತಜ್ಞ ಡಾ. ಪಿ.ಬಿ. ದೇಸಾಯಿ ಅವರು ’ಮಿತಾಕ್ಷರ’ ಖ್ಯಾತಿಯ ವಿಜ್ಞಾನೇಶ್ವರನು ಕರ್ನಾಟಕದವನು ವಿಶೇಷವಾಗಿ ಗುಲಬರ್ಗಾ ಜಿಲ್ಲೆಯ ಶಹಾಬಾದ್ ಬಳಿಯ ಮರತೂರು ಗ್ರಾಮದವನು ಎಂದು ಹಾಗೂ ಶಾಸನ ತಜ್ಞ ಮೈಸೂರಿನ ಸೀತಾರಾಮ ಜಾಗೀರದಾರರು, 64 ಸಾಲುಗಳ  ಶಾಸನದ ಪೂರ್ತಿ ಪಾಠ ಓದಿ, ಅದರ ತಾರೀಕು 1123 ಜನವರಿ 6 ಎಂದು, ಭಾಷಾಂತರಿಸಿ ಪ್ರಕಟಿಸಿದರೂ ನಮಗಿನ್ನೂ ಜಾಣ-ಕಿವುಡು. 

ಚಾಲುಕ್ಯ ಚಕ್ರವರ್ತಿ 6ನೇ ವಿಕ್ಷಮಾದಿತ್ಯನ ಆಸ್ಥಾನದಲ್ಲಿದ್ದ ವಿಜ್ಞಾನೇಶ್ವರನು, ಹಿಂದೂ ಕಾನೂನಿಗೆ ಆಧಾರವಾದ ಮಿತಾಕ್ಷರ ಗ್ರಂಥ ಬರೆದ. ಬ್ರಿಟಿಷ್ ಆಡಳಿತ ವ್ಯವಸ್ಥೆಗೆ ಇಡೀ ಭಾರತಕ್ಕೆ ಅನ್ವಯಿಸಬಹುದಾದ ಒಂದು ಕಾನೂನುಸಂಹಿತೆಯ ಅಗತ್ಯವಿತ್ತು. ಬಂಗಾಳ ಮತ್ತು ಅಸ್ಸಾಂಗಳನ್ನು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳೂ ‘ಮಿತಾಕ್ಷರಾ’ದ ಅಧಿಕೃತತೆಯನ್ನು ಒಪ್ಪಿಕೊಂಡವು. 

ಆಸ್ತಿಯ ಹಕ್ಕುಗಳು, ದತ್ತಕ ಪದ್ಧತಿ, ಸ್ಥಿರ ಆಸ್ತಿಗಳ ಹಂಚಿಕೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಹಿಂದೂ ನ್ಯಾಯಶಾಸ್ತ್ರದ ನಿಲುವುಗಳನ್ನು ತಜ್ಞರು ಈ ಪುಸ್ತಕಕ್ಕೆ ಮೊರೆಹೋಗುತ್ತಾರೆ.90 ಬೇರೆ ಬೇರೆ ಧರ್ಮಗ್ರಂಥ, ಉಪನಿಷತ್ತು, ಧರ್ಮಸೂತ್ರಗಳನ್ನು ಅಧ್ಯಯನ ಮಾಡಿ ಬರೆದ ಗ್ರಂಥದ ಉಲ್ಲೇಖಗಳಿಲ್ಲದೇ ಭಾರತೀಯ ನ್ಯಾಯ ಪದ್ಧತಿ ಪೂರ್ಣಗೊಳ್ಳದು ಎಂಬಷ್ಟು ಪ್ರಭಾವ ವಿತಾಕ್ಷರದ್ದಾಗಿದೆ. ಮಧ್ಯಯುಗದಲ್ಲಿ ಮಿತಾಕ್ಷರವೇ ಸಂವಿಧಾನವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ.ವಿಜ್ಞಾನೇಶ್ವರನ ಪರಿಚಯ ನೀಡುವ ಎರಡು ಶಾಸನವು ಕಾಶಿಯ ವಿಶ್ವನಾಥ ದೇವಾಲಯ ಬಳಿ ದೊರೆತಿವೆ.  

ಹೆನ್ರಿ ಥಾಮಸ್ ಕೋಲ್ ಬ್ರೂಕ್, ಈ ಪುಸ್ತಕವನ್ನು ಕ್ರಿ.ಶ. 1810 ರಷ್ಟು ಹಿಂದೆಯೇ ಇಂಗ್ಲಿಷಿಗೆ ಅನುವಾದ ಮಾಡಿದರು.ಭಾರತದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಬೇಕಾದರೂ ಮಿತಾಕ್ಷರವು ಅತ್ಯುತ್ತಮ ಆಧಾರವಾಗಿದ್ದಿತು’ ಎಂದು ‘ಹಿಸ್ಟರಿ ಆಫ್ ಹಿಂದು ಧರ್ಮಶಾಸ್ತ್ರ’ ಎಂಬ ಕೃತಿಯಲ್ಲಿ ಮಹಾ ಮಹೋಪಾಧ್ಯಾಯ ಪಿ.ವಿ. ಕಾಣೆ ಅಭಿಪ್ರಾಯಪಡುತ್ತಾರೆ.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ. ರಾಮಾಜೋಯಿಸ್ ಅವರು ಮರತೂರಿನಲ್ಲಿ ವಿಜ್ಞಾನೇಶ್ವರ ಸೌಹಾರ್ದ ಸಹಕಾರಿ (ನಿಯಮಿತ) ಸಂಘ ಸ್ಥಾಪಿಸಿ, ವಿಜ್ಞಾನೇಶ್ವರನ ಹೆಸರಲ್ಲಿ (2002)ಒಂದು ಸ್ಮಾರಕ ನಿರ್ಮಿಸಿದ್ದಾರೆ.ಗುಲಬರ್ಗಾ ವಿ.ವಿ. ಸಹ ಸಹಕರಿಸಿ, ಕಾನೂನು ವಿಭಾಗದ ಮೇಲ್ವಿಚಾರಣೆಯಲ್ಲಿ ಸಂಶೋಧನೆಗೆ ಅನುವು ಮಾಡಿಕೊಟ್ಟಿತು.ಈ ಕೇಂದ್ರಕ್ಕೆ ಅಖಿಲ ಭಾರತ ಮನ್ನಣೆಯೂ ದೊರೆತಿದೆ. 

ಆದರೂ... ವಿಜ್ಞಾನೇಶ್ವರನ ಮರತೂರು ನಿರ್ಲಕ್ಷ್ಯ

ಮರತೂರಿನಲ್ಲಿ ಹತ್ತು ಹಲವು ದೇವಾಲಯಗಳಿವೆ. ಸುಮಾರು 800 ವರ್ಷಗಳ ಇತಿಹಾಸದ ಹತ್ತು ಹಲವು ಅಸ್ತಿತ್ವಗಳು ಕಣ್ಣ ಮುಂದಿವೆ. ಚಾಲುಕ್ಯ ಶೈಲಿಯ ಕಾಶಿ ವಿಶ್ವನಾಥ ಹಾಗೂ ಶಂಕರಲಿಂಗನ ದೇವಾಲಯವಿದೆ. ಹಿಂಭಾಗ ಪುರಾತನ ಪುಷ್ಕರಣಿ ಇದೆ. ತ್ರಿಕೂಟಾಚಲ ರಚನೆಯ ಈಶ್ವರ ದೇವಾಲಯ, ಇಲ್ಲೊಂದು ಕೋಟೆಯೂ ಇದೆ. ಮರತೂರಿನಲ್ಲಿ ಚಾಲಕ್ಯರು 300 ದೇವಾಲಯಗಳು ಹಾಗೂ 300 ಬಾವಿಗಳಿದ್ದವು ಎಂದು ಇತಿಹಾಸ ಅರಚಿಕೊಳ್ಳುತ್ತದೆ. ಆದರೆ, ಬೆರಳೆಣಿಕೆಯಷ್ಟು ಸಿಗುವ ದೇವಾಲಯಗಳನ್ನು ಮುಳ್ಳು ಜಾಲಿ ಕಂಟಿಗಳು ಆವರಿಸಿಕೊಂಡಿವೆ. ಗರ್ಭಗುಡಿಗಳು ನಾಯಿಗಳ ಆವಾಸ ಸ್ಥಳಗಳಾಗಿವೆ. ಜನರಿಗೆ ಜೂಜು-ಮೋಜಿನ ತಾಣಗಳಾಗಿವೆ. ಕೆಲವು ದೇವಾಲಯಗಳ ಪ್ರಾಂಗಣಗಳು ದನಕರುಗಳ ಕೊಟ್ಟಿಗೆಗಳಾಗಿವೆ. ದ್ವಾರಪಾಲಕ ಶಿಲ್ಪಗಳು ಬೋರಲು ಬಿದ್ದಿವೆ.ಮುಳ್ಳು-ಕಂಟಿ ಆವರಿಸಿರುವ ಕೋಟೆಯ ಪ್ರವೇಶಕ್ಕೆ ದಾರಿ ಹುಡುಕಬೇಕು. ಬಹುತೇಕ ದೇವಾಲಯಗಳು ಜೀರ್ಣಾವಸ್ಥೆಯಲ್ಲಿವೆ. 

ವಿಜ್ಞಾನೇಶ್ವರನ ಸೌಹಾರ್ದ ಸಹಕಾರಿ ನಿಯಮಿತ ನಂತರವಾದರೂ ಈ ಎಲ್ಲ ಸ್ಮಾರಕಗಳ ಸಂರಕ್ಷಣೆ-ಅಭಿವೃದ್ಧಿ ಯಾಗುವ ನಿರೀಕ್ಷೆ ಇತ್ತು. ಸರ್ಕಾರವು ಸಹ ಅರೆ ಕಾಸಿನ ಮಜ್ಜಿಗೆಯಷ್ಟು ಧನ ಸಹಾಯ ನೀಡಿ ಕೈತೊಳೆದುಕೊಂಡಿದೆ. ಮರತೂರಿಗೆ ರೈಲು ನಿಲ್ದಾಣವಿದೆ. ಗುಲಬರ್ಗಾದಿಂದ ಹೆಚ್ಚೆಂದರೆ 18 ಕಿ.ಮೀ. ದೂರವಿರುವ ಊರೇ ಐತಿಹಾಸಿಕ ದೃಷ್ಟಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ವಾಸ್ತವ ಹೀಗಿರುವಾಗ, ರಾಷ್ಟ್ರಕೂಟರು, ಚಾಲುಕ್ಯರು, ಕಳಚೂರಿಗಳು, ವಾರಂಗಲ್ ಕಾಕತೀಯರು, ದ್ವಾರಸಮುದ್ರದ ಹೊಯ್ಸಳರು, ಬಹಮನಿ...  ಹೀಗೆ ಸಾಲು ಸಾಲು ರಾಜವಂಶರಾಳಿದ ನಾಡು ಎಂದು ಬೀಗಲು ನಮಗೆ ಯಾವ ಹಕ್ಕಿದೆ ಎಂಬುದು ಪ್ರಶ್ನೆ.

-ವೆಂಕಟೇಶ ಮಾನು

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...