ಮೌರ್ಯ ವಂಶವನ್ನು ಸ್ಥಾಪಿಸುವ ಕತೆಯನ್ನು ಈ ಕಾದಂಬರಿಯಲ್ಲಿ ನಿರೂಪಿಸಲಾಗಿದೆ


'ರಾಣಿಯಾಗಿ ಹುಟ್ಟಿದರೂ ಅದೃಷ್ಟಹೀನೆಯಾಗಿ ಬದುಕಿದ ಮುರಾ ಎಂಬಾಕೆಯ ಪುತ್ರ ಚಂದ್ರಗುಪ್ತ ತಂತ್ರ ನಿಪುಣ ಚಾಣಕ್ಯ ಅಥವಾ ಕೌಟಿಲ್ಯನ ಸಹಾಯದಿಂದ ನಂದರಾಜನನ್ನು ಸೋಲಿಸಿ ಮೌರ್‌ ವಂಶವನ್ನು ಸ್ಥಾಪಿಸುವ ಕತೆಯನ್ನು ಈ ಕಾದಂಬರಿಯಲ್ಲಿ ನಿರೂಪಿಸಲಾಗಿದೆ' ಎನ್ನುತ್ತಾರೆ ಎನ್.‌ ತಿರುಮಲ ಭಟ್ಟ. ಅವರು ಉದಯಕುಮಾರ್ ಹಬ್ಬು ಅವರ ಚಂದ್ರಗುಪ್ತ ಮೌರ್ಯ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ

ಇಂಗ್ಲಿಷ್‌ ಮೂಲದಲ್ಲಿ ಹೀಲ್ಡಾ ಸೆಲಿಗ್ಮನ್‌ ಬರೆದ  ಹ್ವೆನ್‌ ಪೀಕೊಕ್ಸ್‌ ಕಾಲ್ಡ್‌ʼ ಎಂಬ ಶೀರ್ಷಿಕೆಯ ಕಾದಂಬರಿಯನ್ನು ಶ್ರೀಯುತ ಉದಯಕುಮಾರ ಹಬ್ಬು ಅವರು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.  ಕನ್ನಡದಲ್ಲಿ ಭಾಷಾಂತರಗೊಂಡ ಹೊತ್ತಿಗೆಗೆ ನನ್ನಿಂದ ಅವರು ಮುನ್ನುಡಿಯನ್ನು ಅಪೇಕ್ಷಿಸಿದ್ದಾರೆ. ಭಾಷಾಂತರ ಪ್ರಕ್ರಿಯೆಯ ಕುರಿತು ಸ್ವಲ್ಪ ಮಟ್ಟಿಗೆ ಚಿಂತನೆ ನಡೆಸುವುದು ಈ ಮುನ್ನುಡಿಯ ಆಶಯ.

ಒಂದು ಭಾಷೆಯಲ್ಲಿ ಉಕ್ತವಾದ ಅಥವಾ ಲಿಖಿತವಾದ ಪಠ್ಯವನ್ನು ಇನ್ನೊಂದು ಭಾಷೆಗೆ ಬದಲಾಯಿಸುವುದು ಭಾಷಾಂಥರ ಎಂದು ಸಾಧಾರಣ ಮಟ್ಟಿಗೆ ಹೇಳಬಹುದು. ಪಠ್ಯದ ಮಥಿತಾರ್ಥವನ್ನು ಪ್ರಕಟಿಸುವಲ್ಲಿ ಅದರ ಶಬ್ದಗಳು ಹೇಗೆ ತಮ್ಮ ಪಾತ್ರವನ್ನು ನಿರ್ವಹಿಸುತ್ತವೆ ಎಂಬುದು ಒಂದು ಯಕ್ಷಪ್ರಶ್ನೆ.

ಒಂದು ಭಾಷೆಯ ಶಬ್ದಕ್ಕೆ ಅಧೇ ಭಾಷೆಯಲ್ಲಿ ಏನರ್ಥ ಎಂಬುದು  ನಿರ್ಣಯವಾದ ಮೇಲಷ್ಟೆ ಇನ್ನೊಂದು ಭಾಷೆಯಲ್ಲಿ ಪರ್ಯಾಯ ಶಬ್ದ ಹುಡುಕಬೇಕು. ಈ ಪ್ರಾರಂಭಿಕ  ಕಾರ್ಯ ಎಣಿಸಿದಷ್ಟು ಸುಲಭವಲ್ಲ.  ಒಂದೇ ಶಬ್ದಕ್ಕೆ ಸಂದರ್ಭವನ್ನು ಅನುಸರಿಸಿ ಹೆಚ್ಚು ಅರ್ಥಗಳು ಬರುವ ಸಾಧ್ಯತೆ ಇದೆ.  ಕಮಲ ಎಂಬ ಶಬ್ದಕ್ಕೆ ಸಂದರ್ಭವನ್ನು ಹೊಂದಿಕೊಂಡು ಕಮಲ ಎಂ ಹೆಸರಿನವಳು ಅಥವಾ ತಾವರೆ ಎಂಬರ್ಥ ಮಾಡಬೇಕಾದೀತು.  ಸಿರಿ ಎಂದರೆ ಸಿರಿ ದೇವತೆ ಅಥವಾ ಸಂಪತ್ತು ಎಂಬರ್ಥ ಬಂದೀತು.

ನುಡಿಗಟ್ಟುಗಳನ್ನು ಭಾಷಾಂತರಿಸುವಾಗ ಸಾಮಾನ್ಯ ಪದಕೋಶಗಳು ಹೆಚ್ಚು ಉಪಯುಕ್ತವಾಗುವುದಿಲ್ಲ.  ಪ್ರತಿ ಭಾಷೆಯ ಶಬ್ದವು ಒಂದು ರೂಪಕ.  ಅದು ಮನಸ್ಸಿನ ಮನಸ್ಸಿನಲ್ಲಿ ಒಂದು ಚಿತ್ರವನ್ನು ಮೂಡಿಸುತ್ತದೆ. ಇನ್ನೊಂದು ಭಾಷೆಯಲ್ಲಿ ಅರ್ಥವನ್ನು  ಕೊಡಲು  ನಂದಿ ಇನ್ನೊಂದು ರೂಪಕ. ಇನ್ನೊಂದು ಚಿತ್ರ ಉಪಯೋಗವಾಗಬಹುದು. ಹೊಟ್ಟೆಕಿಚ್ಚು ಎಂಬ ಕನ್ನಡ ಪದಕ್ಕೆ  ಅದೇ ರೂಪಕವನ್ನು ಕೊಡುವ  ಇಂಗ್ಲಿಷ್‌ ಪರ್ಯಾಯ ಪದ ನನಗೆ ತಿಳಿದಿಲ್ಲ ನುಡಿಗಟ್ಟಾಗಿ  ಮರುಳು ಮಾಡುವುದು  ಆಕರ್ಷಿಸುವುದು ಎಂದಾಗುತ್ತದೆ.  ವಿನಾ ಮತಿಭ್ರಮಣೆ ಉಂಟು ಮಾಡುವುದು ಎಂದಾಗುವುದಿಲ್ಲ.  ಆರತಿ ಎತ್ತುವುದು  ಎಂಬ ನುಡಿಗಟ್ಟಿನಲ್ಲಿ  ಎತ್ತುವುದು ಎಂಬುದನ್ನು  ಟು ಲಿಪ್ಟ್‌ ಎ ಲ್ಯಾಂಪ್‌ ಅಥವಾ ಟು ರೇಸ್‌ ಎ ಲ್ಯಾಂಪ್‌  ಎಂಬುದಕ್ಕಿಂತ  ಟು ವೇವ್‌ ಎ ಲ್ಯಾಂಪ್‌  ಎಂಬುದು ಹೆಚ್ಚು ಉಚಿತ. ಆದರೂ  ಪರಿಪೂರ್ಣ ಭಾಷಾಂತರ  ಅಲ್ಲವೇನೋ.  ಪ್ರತ್ಯೇಕವಾದ ನುಡಿಗಟ್ಟುಗಳ ಭಾಷಾಂತರ ಕೋಶವೂ  ನಮಗೆ ಅಗತ್ಯ.

ಮುಂದಿನ ಹೆಜ್ಜೆ ಭಾಷಾಂತರಕ್ಕೆ  ಉದ್ದಿಷ್ಟವಾದ  ಭಾಷೆಯಲ್ಲಿ  ಮೂಲ ಭಾಷೆಯ ಪದಕ್ಕೆ  ಪರ್ಯಾಯ ಪದವನ್ನು  ಹುಡುಕುವುದು. ಮೂಲಪದವು ವ್ಯಕ್ತಿನಾಮ, ಸ್ಥಳನಾಮ, ಸಾಂಸ್ಕೃತಿಯ ಹಿನ್ನೆಲೆಯುಳ್ಳ ಪದ, ಪಾರಿಭಾಷಿಕ ಪದ- ಇವುಗಳ ಅರ್ಥವು ಸಾಮಾನ್ಯ ಪದಕೋಶಗಳಲ್ಲಿ ಸಿಗುವುದಿಲ್ಲ. ಪುರಾಣ ನಾಮಗಳನ್ನು  ಗುರುತಿಸಲು ಪುರಾನ ಪದಕೋಶಗಳು ಬೇಕು.  ವಿಜ್ಞಾನ ಸಂಬಂಧಿ ಪಾರಿಭಾಷಿಕ ಪದಗಳಿಗೆ ಆಯಾ ವಿಜ್ಞಾನದ ವಿಷಯಗಳಿಗೆ ಸಂಬಧಿಸಿದ  ಪಾರಿಭಾಷಿಕ ಪದ ಕೋಶ ಬೇಕು. ಇವನ್ನು ವೈಯಕ್ತಿಕವಾಗಿ ಹೊಂದಿರುವ ವ್ಯಕ್ತಿಗಳು ತೀರಾ ಕಡಿಮೆ.  ಎಲ್ಲಾ ಗ್ರಂಥಾಲಯಗಳಲ್ಲಿ  ಎಲ್ಲಾ ಬಗೆಗಳ ಪದಕೋಶಗಳು  ಪರ್ಯಾಯಪದ ನಿರ್ಣಯಗಳಿಗೆ ಅಗತ್ಯ..

ವೈಜ್ಞಾನಿಕ ಪದಕೋಶಗಳ ಸಂಬಂಧದಲ್ಲಿ ಒಂದು ವಿಶೇಷ ಸೂಚನೆಯನ್ನು ಮಾಡಬೇಕಾಗಿದೆ. ಬೇರೆ ಬೇರೆ ಪ್ರಾದೇಶಿಕ ತಜ್ಞರು ವಿದ್ವಾಂಸರು ಬೇರೆ ಬೇರೆ ಪ್ರಾದೇಶಿಕ ಪಾರಿಭಾಷಿಕ ಪದಗಳನ್ನು ಬಳಸಿದರೆ ವ್ಯಾವಹಾರಿಕವಾಗಿ ಪ್ರಯೋಜನಕಾರಿಯಾಗಲಾರವು. ಯಾವುದೇ ಒಂದು ವಿಷಯವನ್ನು ಬೇರೆ ಬೇರೆ ಪಾರಿಭಾಷಿಕ ಪದಗಳಲ್ಲಿ ನಿರ್ದೇಶಸಿಸಿದರೆ ಆಗಬಹುದಾದ ಅನಾಹತುಗಳಿಗೆ ಮಿತಿ ಇಲ್ಲ  ಒಂದೇ ಔಷಧೀಯ ಸಸ್ಯವನ್ನು ಬೇರೆ ಬೇರೆ ಹೆಸರುಗಳಲ್ಲಿ ನಿರ್ದೇಶಿಸಿದರೆ ಅದನ್ನು ಗುರುತಿಸುವ ಬಗೆ ಹೇಗೆ? ವಿವಿಧ ಪಾರಿಭಾಷಿಕ ಪದಗಳ ಬದಲು ಒಂದೇ ಸ್ವೀಕೃತ ಪಾರಿಭಾಷಿಕ ಪದವನ್ನು ಉಪಯೋಗಿಸುವುದು ಜಾಣತನ. ತ್ವರಿತವಾಗಿ ಸ್ವೀಕೃತ ಪಾರಿಭಾಷಿಕ ಶಬ್ದಕೋಶವು ನಿರ್ಮಾಣವಾಗಬೇಕು.

ಇಂದಿನ ಕಂಪ್ಯೂಟರ್‌ ಯುಗದಲ್ಲಿ ಇಂಗ್ಲಿಷನಲ್ಲಿರುವ ಪಠ್ಯಗಳನ್ನೆಲ್ಲ ಕನ್ನಡಕ್ಕೆ ಕಂಪ್ಯೂಟರ್‌ ಮುಖಾಂತರ ಭಾಷಾಂತರ ಮಾಡಿಸಬೇಕೆಂಬ ಸೂಚನೆಯನ್ನು ಕೆಲವರು ಮಾಡಿದ್ದನ್ನು ನಾನು ಕೇಳಿದ್ದೇನೆ. ಆದರೆ ಕಂಪ್ಯೂಟರ್‌ ತಾನು ಕಲಿತದ್ದನ್ನಷ್ಟನ್ನೆ ಮಾಡಿ ತೋರಿಸಲು ಸಾಧ್ಯ. ಇಂಗ್ಲಿಷ್ ಪಠ್ಯಗಳನ್ನು ಕನ್ನಡಕ್ಕಿಳಿಸಲು ಮಹಾ ಜ್ಞಾನಸತ್ರ ನಡೆಯಬೇಕಾಗಿದೆ. ಜ್ಞಾನ ಹಾಗೂ ಭಾಷೆ ಎಡರರಲ್ಲೂ ವಿಶ್ವಕೋಶಗಳ ರೀತಿಯಲ್ಲಿರುವ ಪಂಡಿತರು, ವಿದ್ವಾಂಸರು, ಸಿದ್ಧಾಂತ ವಿಜ್ಞಾನಿಗಳು, ಭಾಷಾ ವಿಜ್ಞಾನಿಗಳು , ತಜ್ಞರು ಈ  ಜ್ಞಾನಸತ್ರವನ್ನು ನಡೆಸಿ ಕೊಡಬೇಕಾಗುತ್ತದೆ. ಇದಕ್ಕೆ ಹಲವಾರು ವರ್ಷಗಳೋ, ದಶಕಗಳೋ ಬೇಕಾದೀತು. ಇದು ಅವಸರದಲ್ಲಿ ನಡೆಯುವ ಕೆಲಸವಲ್ಲ. 

ಹೇಳಿ ಕೇಳಿ ಇಂಗ್ಲಿಷ್‌ ನಲ್ಲಿ ರಚಿತವಾದ ಭಾರತೀಯಿತಿಹಾಸವನ್ನು ಆಧರಿಸಿದ ಕಾದಂಬರಿಯೊಂದರ ಕನ್ನಡ ಭಾಷಾಂತರದ ಮುನ್ನುಡಿಯಲ್ಲಿ ಭಾಷಾಂತರದ ಕುರಿತು ಇಷ್ಟೆಲ್ಲಾ ಬರೆಯುವುದು ಮೂಗಿಗೆ ಅದಕ್ಕಿಂತಲೂ ದೊಡ್ಡ ಮೂಗುತಿಯನ್ನು ತೊಡಿಸಿದಂತಾಗುತ್ತದೆ. ಅದರೂ ಭಾಷಾಂತರದ ಬಗೆಗೆ ಕೆಲವು ಚಿಂತನೆಗಳನ್ನು ಮಾಡಲು ಈ ಮುನ್ನುಡಿಯ ವೇದಿಕೆಯನ್ನು ಬಲಸುವ ಸಮಯಸಾದಕತನವನ್ನು ಮಾಡುತ್ತಿದ್ದೇನೆ. 

ರಾಣಿಯಾಗಿ ಹುಟ್ಟಿದರೂ ಅದೃಷ್ಟಹೀನೆಯಾಗಿ ಬದುಕಿದ ಮುರಾ ಎಂಬಾಕೆಯ ಪುತ್ರ ಚಂದ್ರಗುಪ್ತ ತಂತ್ರ ನಿಪುಣ ಚಾಣಕ್ಯ ಅಥವಾ ಕೌಟಿಲ್ಯನ ಸಹಾಯದಿಂದ ನಂದರಾಜನನ್ನು ಸೋಲಿಸಿ ಮೌರ್‌ ವಂಶವನ್ನು ಸ್ಥಾಪಿಸುವ ಕತೆಯನ್ನು ಈ ಕಾದಂಬರಿಯಲ್ಲಿ ನಿರೂಪಿಸಲಾಗಿದೆ. ಮೂಲ ಇಂಗ್ಲಿಷ್‌ ಕಾದಂಬರಿಯ ವಿಕ್ಟೋರಿಯಾ ಕಾಲದ ಇಂಗ್ಲಿಷ್‌ ಭಾಷೆಯನ್ನು ಈ ಕಾಲದ ಕನ್ನಡಕ್ಕೆ ಭಾಷಾಮತರಿಸುವುದು ಸುಲಭದ ಕೆಲಸವಲ್ಲ. ಇಲ್ಲಿ ತರ್ಜುಮೆಯಾಗಿರುವುದು ಮೂಲ ಕಾದಂಬರಿಯ ಮೊದಲ ಭಾಗ, ಚಂದ್ರಗುಪ್ತನ ಚರಿತ್ರೆ. ಕೆಲವಷ್ಟೇ ರೇಖೆಗಳಲ್ಲಿ ನಮ್ಮ ಚರಿತ್ರೆಯ ಪಠ್ಯಪುಸ್ತಕಗಳಲ್ಲಿ ಮೂಡಿದ ಕಥನವು ಇಂಗ್ಲಿಷ್ ಕಾದಂಬರಿಯಲ್ಲಿ ಕಲ್ಪನೆಯ ಕಲೆಗಾರಿಕೆಯ ಒಪ್ಪದಿಂದಾಗಿ ಉತ್ತಮ ಸಾಹಿತ್ಯ ಕೃತಿಯಾಗಿ ಮೂಡಿಬಂದಿದೆ. ಇದನ್ನು ಕನ್ನಡಕ್ಕೆ ಭಾಷಾಮತರಿಸಿದ ಸಾಧನೆ ಉದಯಕುಮಾರ ಹಬ್ಬು ಅವರದು.

ಕನ್ನಡ ಭಾಷಾಂತರದ ಪಠ್ಯವನ್ನು ಪರಿಶೀಲನೆಗಾಗಿ ಕಳುಹಿಸಿದ್ದರಿಂದ ನನಗಿದನ್ನು ಓದುವ ಅವಕಾಶವಾಯಿತು. ಈ ನಿಟ್ಟಿನಲ್ಲಿ ಹಬ್ಬು ಅವರಿಗೆ ನಾನು ಧನ್ಯವಾದ ಹೇಳಬೇಕು. ಭಾಷಾಂತವನ್ನು ಅಲ್ಲಲ್ಲಿ ಪರಿಷ್ಕರಿಸಿದ್ದು ನಿಜವಾದರೂ ಭಾಷಾಂತರದ ಸಾಧನೆ ಅವರದೇ.  ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಮುಂದಿನ ಭಾಗವು ಬೇಗನೆ ಅವರಿಂದ ಭಾಷಾಂತರಗೊಳ್ಳಲಿ. ಎಂದು ಆಶಿಸುತ್ತೇನೆ. ಈ ಭಾಷಾಂತರವನ್ನು ಓದುವ ಸುಖವು ಅಸಂಖ್ಯಾತ ಓದುಗರಿಗೆ ಒದಗಲಿ ಎಂದೂ ಆಶಿಸುತ್ತೇನೆ.

-ಎನ್.‌ ತಿರುಮಲ ಭಟ್ಟ
ಮಣಿಪಾಲ 


 

MORE FEATURES

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...

‘ಪಾತಕ ಲೋಕ’ ತರುಣರಿಗೆ ಅತ್ಯಂತ ಆಕರ್ಷಣೀಯ ವಸ್ತು

16-05-2024 ಬೆಂಗಳೂರು

"ನಾ ಕಂಡ ಈ ಭೂಗತ ಜಗತ್ತಿನಲ್ಲಿ ಬೆಂಗಳೂರು ನಗರ ಹಾಗೂ ಮುಂಬೈ ನಗರದ ರೌಡಿಗಳ ಸಂಪರ್ಕ ಹಾಗೂ ಮಂಗಳೂರು ನಗರದ ರೌಡಿಗಳ ...

ಪ್ರೀತಿ ಅರಳಿದರೆ ಬದುಕು ತೆರೆದಂತೆ

15-05-2024 ಬೆಂಗಳೂರು

"ಬದುಕು ಭಾವತೆರೆಯ ಮೇಲಿನ ತಾವರೆ, ಪ್ರತಿಯೊಂದು ಭಾವದಲೆಗೂ ಬದುಕು ಕಂಪಿಸುತ್ತದೆ. ಬದುಕಿನಲಿ ಕಾಡಿದ ಪ್ರೇಮ, ವಿರಹ,...