ಮೃದಂಗದ ಜಾಡು ಹಿಡಿದು ಹೊರಟ 'ವರ್ಗೀಕರಣ' ಮೀರಿದ ಕೃತಿ

Date: 09-08-2020

Location: ಬೆಂಗಳೂರು


ಪಕ್ಕವಾದ್ಯ ಆಗಿರುವ ಮೃದಂಗವನ್ನು ಕೇಂದ್ರ ಸ್ಥಾನಕ್ಕೆ ತಂದು ನಿಲ್ಲಿಸುವ ಪುಸ್ತಕದ ಬಗ್ಗೆ ಶೈಲಜಾ ಮತ್ತು ವೇಣುಗೋಪಾಲ್‌ ಅವರು ವಿವರಿಸಿದ್ದಾರೆ, ಖ್ಯಾತ ಗಾಯಕ ಟಿ.ಎಂ. ಕೃಷ್ಣ ಅವರು ಮೃದಂಗವನ್ನು ಕುರಿತು ರಚಿಸಿದ ಪುಸ್ತಕ ಸ್ವರೂಪ ಹಾಗೂ ಅದರ ಮಹತ್ವವನ್ನು ಈ ಬರೆಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಮೃದಂಗ ತಯಾರಿಕೆಯ ವಿಧಾನವೂ ಸೇರಿದಂತೆ ಕುಶಲಿಕರ್ಮಿ-ಕಲಾವಿದರ ಮೇಲೆ ಬೆಳಕು ಚೆಲ್ಲುವ ಪುಸ್ತಕದ ಮಹತ್ವ ಒದಗಿಸಿರುವುದು ಪುಸ್ತಕ ಹಾಗೂ ಈ ಲೇಖನದ ವಿಶೇಷ.

ಇದನ್ನು ಏನೆಂದು ಕರೆಯೋಣ?

ಕಳೆದ ವಾರವಷ್ಟೇ ಮೃದಂಗ ತಯಾರಕರನ್ನು ಕುರಿತು ಟಿ.ಎಂ. ಕೃಷ್ಣ ಅವರ ಸೆಬಾಸ್ಟಿಯನ್ ಅಂಡ್ ಸನ್ಸ್ (Sebastian and Sons: A Brief History of Mrdangam Makers, 2020) ಎಂಬ ಪುಸ್ತಕವನ್ನು ಓದಿದೆ. ಈ ಪುಸ್ತಕವನ್ನು ಏನೆಂದು ಕರೆಯಬೇಕೆಂದೇ ನನಗೆ ತಿಳಿಯಲಿಲ್ಲ. ಕ್ಷೇತ್ರಸಮೀಕ್ಷೆ, ಕಾದಂಬರಿ, ಜೀವನಚರಿತ್ರೆ, ವಾದನ ತಯಾರಿಕಾ ವಿಧಾನ, ಸಂಸ್ಕೃತಿ ಅಧ್ಯಯನ, ಮೃದಂಗದ ಇತಿಹಾಸ ಇಂತಹ ಯಾವುದೇ ವರ್ಗೀಕರಣಕ್ಕೂ ಸುಲಭವಾಗಿ ಸಿಲುಕದ ಕೃತಿ ಇದು. ಮೃದಂಗ ತಯಾರಿಕೆಯ ವಿಧಾನವನ್ನು ಕೃತಿ ತುಂಬಾ ಕುಲಂಕಷವಾಗಿ ವಿವರಿಸುತ್ತದೆ. ಹೀಗೆ ವಿವರಿಸುವಾಗ ವರ್ತಮಾನದಿಂದ ಗತಕ್ಕೆ, ಮತ್ತೆ ವರ್ತಮಾನಕ್ಕೆ ಚಲಿಸುತ್ತಾ, ವಾದ್ಯದ ತಯಾರಕನಿಗೂ, ಸಂಗೀತಕ್ಕೂ, ಅದನ್ನು ಮೂಡಿಸುವ ವಾದ್ಯಕ್ಕೂ; ಸಂಗೀತವನ್ನು ಸೃಷ್ಟಿಸುವ ಕಲಾವಿದನಿಗೂ ಮತ್ತು ಈ ಲೋಕದ ಉಳಿದೆಲ್ಲ ವ್ಯಾಪಾರಕ್ಕೂ ಇರುವ ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮವಾದ ಸಂಬಂಧ, ಪ್ರಭಾವ ಕೃತಿಯಲ್ಲಿ ಪದರ ಪದರವಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತೆ.

“ನಾವೆಲ್ಲ ಮರೆತುಬಿಡಬೇಕೆಂದು ತೀರ್ಮಾನಿಸಿರುವ ಮೃದಂಗ ತಯಾರಕರಿಗೆ ಈ ಪುಸ್ತಕವನ್ನು ಅರ್ಪಿಸುತ್ತಿದ್ದೇನೆ” ಎನ್ನುತ್ತಾರೆ ಲೇಖಕ ಟಿ.ಎಂ. ಕೃಷ್ಣ. ಇಂದು ಮೃದಂಗವಿಲ್ಲದೆ ಕರ್ನಾಟಕ ಸಂಗೀತವೇ ಇಲ್ಲ ಎನ್ನಬಹುದು. ಇಂದಿನ ಸ್ವರೂಪದ ಮೃದಂಗ ಹೆಚ್ಚೆಂದರೆ 100ರಿಂದ 150 ವರ್ಷ ಹಳೆಯದಿರಬಹುದು. ಹಾಗಿದ್ದಾಗ್ಯೂ ಅದಿಲ್ಲದೆ ಇಂದು ಕರ್ನಾಟಕ ಸಂಗೀತ ಕಚೇರಿಯೇ ಇಲ್ಲ ಎಂದಾಗಿದೆ. ಈ ವಾದ್ಯದ ವಿಕಾಸ ಮತ್ತು ಬೆಳವಣ ಗೆಗೆ ಮೃದಂಗವಾದಕರು ಕಾರಣವೆಂದು ಅವರಿಗೆ ಮೆಚ್ಚುಗೆ ಸಲ್ಲುತ್ತದೆ. ಆದರೆ ವಾಸ್ತವವಾಗಿ ಹೆಚ್ಚಿನ ಮೃದಂಗವಾದಕರಿಗೆ ಮೃದಂಗಕ್ಕೆ ಬಳಸುವ ಚರ್ಮ, ಅದರ ತಯಾರಿಕೆ, ಶ್ರುತಿನಿರ್ಧಾರ ಇವುಗಳ ಬಗ್ಗೆ ಅತ್ಯಂತ ಸರಳ ಜ್ಞಾನವೂ ಇರುವುದಿಲ್ಲ. “ಮೃದಂಗ ಒಂದು ಸಂಕೀರ್ಣ, ಸುಮಧುರ ಸಂಗೀತವಾದ್ಯವಾಗಿ ವಿಕಾಸಗೊಳ್ಳುವ ಪ್ರಕ್ರಿಯೆಯು ಮೃದಂಗ ತಯಾರಕರ ಹಲವು ತಲೆಮಾರುಗಳ ಚಿಂತನೆ ಬೌದ್ಧಿಕತೆ, ಕೌಶಲ, ಸೌಂದರ್ಯಪ್ರಜ್ಞೆ, ರಸಪ್ರಜ್ಞೆ ಮತ್ತು ದೈಹಿಕ ಶ್ರಮ ಇವೆಲ್ಲವನ್ನೂ ಒಳಗೊಂಡಿದೆ. ಹಾಗಿದ್ದಾಗ್ಯೂ ನಾವು ಯಾರೂ ಈ ಕುರಿತು ಮಾತೇ ಆಡುವುದಿಲ್ಲ. ಮೃದಂಗ ತಯಾರಕರು ಅಸ್ತಿತ್ವದಲ್ಲಿಯೇ ಇಲ್ಲ ಎನ್ನುವಂತೆ ಇರುತ್ತೀವಲ್ಲಾ ಏಕೆ” ಎನ್ನುವ ಪ್ರಶ್ನೆಯು ಸ್ವತಃ ಖ್ಯಾತ ಕಲಾವಿದರಾದ ಕೃಷ್ಣ ಅವರನ್ನು ಪದೇ ಪದೇ ಕಾಡಲಾರಂಭಿಸಿತು. “ಹಾಗಾಗಿ ಒಂದು ಮಹಾನ್ ಪರಂಪರೆಯನ್ನು ಹೀಗೆ ಅದೃಶ್ಯವಾಗಿ ಇದ್ದುಕೊಂಡೇ ಈವರೆಗೆ ಜೀವಂತವಾಗಿ ಇಟ್ಟಿರುವ ಮೃದಂಗ ತಯಾರಕರ ಇತಿಹಾಸವನ್ನು ಬರೆಯಲು ಪ್ರಾರಂಭಿಸಿದೆ” ಎನ್ನುತ್ತಾರೆ ಕೃಷ್ಣ.

ಪುಸ್ತಕ ಪ್ರಾರಂಭವಾಗುವುದೇ ಲೇಖಕ ಅವರ ಜಾಡು ಹುಡುಕಿಕೊಂಡು, ಸಂದುಗೊಂದುಗಳನ್ನು ಹಾದು, ಊರ ಹೊರವಲಯಕ್ಕೆ ಬರುವ ಘಟನೆಯಿಂದ. ಇದು ಹಲವು ಸಾಮಾಜಿಕ, ಸಾಂಸ್ಕೃತಿಕ ಸೂಕ್ಷ್ಮಗಳನ್ನು ಧ್ವನಿಸುತ್ತದೆ. ಅವರನ್ನು ಕಂಡು “ಮಾತು ಮಾತಿನಲ್ಲಿ ನೂತು ಅನಾವರಣಗೊಂಡ ಲೋಕ ನಾನು ನಿರೀಕ್ಷಿಸಿಯೇ ಇರದಷ್ಟು ಸಂಕೀರ್ಣವಾಗಿದ್ದು, ಸುಲಭ ಸಮೀಕರಣಗಳಿಗೆ ಸಿಗದೆ, ಗೊಂದಲಗಳನ್ನು ಹುಟ್ಟುಹಾಕಿ, ನನ್ನನ್ನು ತಲ್ಲಣಕ್ಕೆ ಒಳಗುಮಾಡಿ, ಕಸಿವಿಸಿಗೊಳಿಸಿತು” ಎನ್ನುತ್ತಾರೆ. ಇದನ್ನೋದುವ ಓದುಗನ ಅನುಭವವೂ ಇದಕ್ಕಿಂತ ಹೆಚ್ಚು ಭಿನ್ನವಲ್ಲ.

ಸಾಧ್ಯವಾದ ಮಟ್ಟಿಗೆ ತಯಾರಕರು, ತಯಾರಿಕೆಯ ಪ್ರಕ್ರಿಯೆಯಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿರುವವರು, ತಯಾರಕರ ಕುಟುಂಬದವರು, ಹಲವು ವರ್ಷಗಳು ಅವರೊಂದಿಗೆ ಒಡನಾಡಿ, ಬಳಿಯಲ್ಲಿಯೇ ಕುಳಿತು ಮೃದಂಗ ಮಾಡಿಸಿಕೊಂಡ ಸುವಿಖ್ಯಾತ ಮೃದಂಗ ಕಲಾವಿದರರ ನೇರವಾದ ಮಾತುಗಳಲ್ಲಿಯೇ ಅವರ ಇತಿಹಾಸವನ್ನು ಹಿಡಿದಿಡಲು ಕೃಷ್ಣ ಪ್ರಯತ್ನಿಸಿದ್ದಾರೆ. ಹಾಗಾಗಿ ಪುಸ್ತಕದುದ್ದಕ್ಕೂ ಈ ಪಾತ್ರಗಳ ದನಿ, ಅವರ ಭಾವನೆಗಳು, ಅಭಿಪ್ರಾಯಗಳು ನಮ್ಮನ್ನು ನೇರವಾಗಿ ಮುಟ್ಟುತ್ತಿರುತ್ತದೆ.

ಈ ಹುಡುಕಾಟದಲ್ಲಿ ಲೇಖಕ ಮೊತ್ತಮೊದಲು ಭೇಟಿಯಾಗುವುದು ಮೃದಂಗ ತಯಾರಿಕೆಯಲ್ಲಿ ಅತ್ಯಂತ ಖ್ಯಾತಿವೆತ್ತ ತಂಜಾವೂರು ಕುಟುಂಬದ ಮೂರನೆಯ ತಲೆಮಾರಿನ ಅತ್ಯಂತ ಹಿರಿಯ ಸದಸ್ಯರಾದ ಸೆಲ್ವರಾಜ್ ಅವರನ್ನು. ಎಲ್ಲರೂ ಅವರನ್ನು ಸೆಲ್ವಂ ಎಂದೇ ಕರೆಯುತ್ತಾರೆ. ಆ ಕುಟುಂಬವು ಲಯಬ್ರಹ್ಮ ಎನಿಸಿಕೊಂಡ, ನಂದಿಕೇಶ್ವರನ ಅವತಾರ ಎಂದೇ ಪ್ರಸಿದ್ಧರಾಗಿದ್ದ ಮೃದಂಗವಾದಕ ಪಾಲ್ಘಾಟ್ ಮಣಿ ಅಯ್ಯರ್ ಅವರಿಗೆ ಅವರ ಅಸದೃಶ ಲಯ ಪ್ರಾವೀಣ್ಯವನ್ನು ಅಭಿವ್ಯಕ್ತಿಸಲು ಕಳಂಕರಹಿತವಾದ ಮಾಧ್ಯಮವನ್ನು ಒದಗಿಸುತ್ತಿತ್ತು. ಅಂತಹ ಸೊಗಸಾದ ಮೃದಂಗ ಮಾಡುತ್ತಿದ್ದ ಸೆಲ್ವಂ ಈಗ ಅಪಘಾತದಲ್ಲಿ ತಮ್ಮ ಬಲಗೈ ಕಳೆದುಕೊಂಡಿದ್ದಾರೆ. ಇವರಲ್ಲದೆ ಮದ್ರಾಸ್, ಕೇರಳ, ಕರ್ನಾಟಕದ ಮೃದಂಗ ತಯಾರಕರನ್ನೂ ಲೇಖಕ ಸಂದರ್ಶಿಸಿದ್ದಾರೆ. ಹಾಗಾಗಿ ಇಡೀ ದಕ್ಷಿಣ ಭಾರತದ ಒಂದು ಸಮಗ್ರ ಚಿತ್ರ ಓದುಗರಿಗೆ ದೊರಕುತ್ತದೆ.

ಕರ್ನಾಟಕ ಸಂಗೀತ ತ್ರಿಮೂರ್ತಿಗಳ ಸ್ಥಳವಾಗಿದ್ದ ತಂಜಾವೂರಿಗೆ ಮೃದಂಗ ಬಂದಿದ್ದು ಬಹುಶಃ ಮಹಾರಾಷ್ಟ್ರದ ಮರಾಠಾ ದೊರೆಗಳು ತಂಜಾವೂರಿನ ಅಧಿಕಾರದ ಚುಕ್ಕಾಣಿ ಹಿಡಿದಾಗ. ಅವರೊಂದಿಗೆ ತಂಜಾವೂರಿಗೆ ಬಂದ ನಾರಾಯಣಸ್ವಾಮಿ ಅಪ್ಪಾ ಅವರನ್ನು ಮೃದಂಗವಾದನ ಪಿತಾಮಹ ಎನ್ನಬಹುದು. ಆದರೆ ತಮಿಳುನಾಡಿನಲ್ಲಿ ಆ ಹೊತ್ತಿಗಾಗಲೇ ತವಿಲ್‍ವಾದನದಿಂದ ಪ್ರಭಾವಿತವಾಗಿದ್ದ ಮೃದಂಗವಾದನ ಪರಂಪರೆ ಒಂದಿತ್ತು. ಆದರೆ ಈ ಹಳೆಯ ಪರಂಪರೆಯು ವಿಸ್ಮೃತಿಗೆ ಸರಿದುಹೋಗುವಂತಾದದ್ದು ಉದ್ದೇಶಪೂರ್ವಕ ಎನ್ನುತ್ತಾರೆ ಕೃಷ್ಣ ಏಕೆಂದರೆ ಅದು ಸಾದಿರ್ ಅಂದರೆ ದೇವದಾಸಿ ಸಮುದಾಯದ ನೃತ್ಯವನ್ನು ಆಧರಿಸಿದ ಇಸೈ ವೆಲ್ಲಲಾರ್ (ಕಲಾ ಕೃಷಿಕರ) ಕುಲದ ಪುದುಕೋಟೆಯ ಶೈಲಿ. ಮರಾಠಾ ಪ್ರಭಾವಕ್ಕೆ ಒಳಪಟ್ಟಿದ್ದ ತಂಜಾವೂರು ಶೈಲಿಯು ಬ್ರಾಹ್ಮಣರ ಶೈಲಿ ಎನಿಸಿಕೊಂಡಿತ್ತು.

ಮೌಖಿಕ ಇತಿಹಾಸದಲ್ಲಿ ಕಿವಿಗೆ ಬೀಳುವ ಮೊದಲ ಮೃದಂಗವಾದಕನ ಹೆಸರು ಆರೋಗ್ಯಂ ಕೆಲವರು ಆತನನ್ನು ಅದೈಕಲಂ ಎನ್ನುತ್ತಾರೆ. ಇಂದು ಜೀವಂತವಿರುವ ಈ ಕುಟುಂಬದ ಯಾವ ಸದಸ್ಯರಿಗೂ ಆರೋಗ್ಯಂ ಅವರಿಗಿಂತ ಹಿಂದೆ ಈ ಕುಟುಂಬದ ಕಸುಬು ಏನಾಗಿತ್ತು ಎನ್ನುವುದು ತಿಳಿಯದು. ಆರೋಗ್ಯಂ ಕೇವಲ ತವಿಲ್ ತಯಾರಿಕೆಯಲ್ಲಿ ತೊಡಗಿಕೊಂಡಿದ್ದರು. ಸೆವಿಟ್ಟಿಯನ್ (ಸೆಬಾಸ್ಟಿಯನ್) ಅವರನ್ನು ಮೃದಂಗ ತಯಾರಿಕೆಯತ್ತ ಹೊರಳಿಸಿದ್ದು ಮಧುರೆಯ ರತ್ನಂ (ಈ ಪುಸ್ತಕದ ಮುಖಪುಟದಲ್ಲಿರುವ ಚಿತ್ರ) ಎನ್ನುತ್ತಾರೆ ಸೆಲ್ವಂ. ಬಹುಶಃ ರತ್ನಂ ಅವರ ತಂದೆ ಸಿಲ್ವಮುತ್ತು ಮತ್ತು ಆರೋಗ್ಯಂ ಸಹೋದರರು ಎನಿಸುತ್ತದೆ. ರತ್ನಂ ಮತ್ತು ಸೆವಿಟ್ಟಿಯನ್ ದಾಯಾದಿಗಳು. ಒಂದರ್ಥದಲ್ಲಿ ತಂಜಾವೂರು ಬಾನಿಯ ಮೃದಂಗ ತಯಾರಿಕೆಯ ಪ್ರವರ್ತಕ ಸೆವಿಟ್ಟಿಯನ್.

ಮೂಲತಃ ದಲಿತರಾಗಿದ್ದ ಇವರೆಲ್ಲರೂ ಸುಮಾರು 80 ಅಥವಾ 90 ವರ್ಷಗಳ ಹಿಂದೆ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡರು. ಸಾಮಾಜಿಕ, ಸಾಂಸ್ಕೃತಿಕ ಮೇಲ್ಚಲನೆ ಸಾಧ್ಯವಾಗಿ, ಹೆಚ್ಚಿನ ಅಂತಸ್ತು ದೊರಕುತ್ತದೆ ಎನ್ನುವ ಕಾರಣಕ್ಕಾಗಿ ಅವರು ಕ್ರೈಸ್ತರಾಗಿ ಮತಾಂತರ ಹೊಂದಿದ್ದಾರೆ ಎನ್ನುತ್ತಾರೆ ಖ್ಯಾತಮೃದಂಗವಾದ ಹಾಗೂ ಗಾಯಕ ಸಂಗೀತ ಕಲಾನಿಧಿ ಟಿ.ವಿ. ಗೋಪಾಲಕೃಷ್ಣ ಅವರು. ಮೃದಂಗ ತಯಾರಿಕೆಯು ಚರ್ಮ ಸುಲಿಯುವುದು, ಕತ್ತರಿಸುವುದು, ಹಸಿ ಚರ್ಮವನ್ನು ಹದಮಾಡುವುದು ಮುಂತಾದ ಎಲ್ಲಾ ಕೆಲಸಗಳನ್ನೂ ಒಳಗೊಂಡಿರುತ್ತದೆ. ಈಗಷ್ಟೇ ಅಲ್ಲ ಒಂದು ಶತಮಾನದ ಹಿಂದೆಯೂ ಈ ಕೆಲಸಗಳನ್ನೆಲ್ಲಾ ಮಾಡುತ್ತಿದ್ದದ್ದು ಅಸ್ಪೃಶ್ಯರು. ಅಸ್ಪೃಶ್ಯರ ವಿಭಿನ್ನ ಸಮುದಾಯಗಳನ್ನು ಮದ್ರಾಸಿನಲ್ಲಿ ಆದಿದ್ರಾವಿಡ ಎಂಬ ಹೆಸರಿನಿಂದ ಎಂ.ಸಿ. ರಾಜಾ ಕರೆದರು. ಸೆವಿಟ್ಟಿಯನ್ ಕುಟುಂಬದವರು ತಾವು ಆದಿದ್ರಾವಿಡರು ಎಂದು ಹೇಳಿದರು. ಮೃದಂಗ ತಯಾರಿಕೆಯ ಉದ್ಯಮವನ್ನು ಕಿರೀಟವಿಲ್ಲದೆ ಆಳಿದ ಈ ತಂಜಾವೂರು ಕುಟುಂಬದ ಸೆವಿಟ್ಟಿಯನ್‍ಗೆ ಮೂರು ಜನ ಮಕ್ಕಳು – ಎಸ್ ಶಂಗೋಲ್, ಪರ್ಲಾಂಡು (ಫರ್ಡಿನಾಂಡ್) ಮತ್ತು ಆಂಟೋನಿ (ಶೆಟ್ಟಿ). ಇವರಲ್ಲಿ ಪರ್ಲಾಂಡು ಅತ್ಯಂತ ಪ್ರತಿಭಾವಂತ, ಸೃಜನಶೀಲ ಹಾಗೂ ಪ್ರಯೋಗಶೀಲ ಎನ್ನುವ ಅಂಶವನ್ನು ಮೃದಂಗ ತಯಾರಕರೆಲ್ಲರೂ ಹೇಳುತ್ತಾರೆ. ಮೃದಂಗವಾದಕರೂ ಹೇಳುತ್ತಾರೆ ಆದರೆ ನೇರವಾಗಿ ಅಲ್ಲ.

ಮೃದಂಗ ತಯಾರಕರಿಗೆ ಮೃದಂಗವನ್ನು ಕುರಿತ ಪ್ರತಿಯೊಂದನ್ನೂ ಕಲಿಸಿಕೊಟ್ಟಿರುವುದು ಮೃದಂಗ ಕಲಾವಿದರು ಎಂದು ಮೃದಂಗವಾದಕರೆಲ್ಲರೂ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಹೇಳುತ್ತಾರೆ. ಸೆವಿಟ್ಟಿಯನ್ ಮತ್ತು ಅವರ ಮಕ್ಕಳಿಗೆ ಮೃದಂಗದ ಬಗ್ಗೆ ಎಲ್ಲವನ್ನೂ ಕಲಿಸಿಕೊಟ್ಟಿದ್ದು ತಂಜಾವೂರು ವೈದ್ಯನಾಥ ಅಯ್ಯರ್ ಎಂದು ಟಿ ಕೆ ಮೂರ್ತಿಯವರು ಒತ್ತಿ ಒತ್ತಿ ಹೇಳುತ್ತಾರೆ. ವೈದ್ಯನಾಥ ಅಯ್ಯರ್ ಆ ವಾದ್ಯದಿಂದ ಹೊಮ್ಮುವ ಸಂಗೀತದ ಕೆಲವು ಸೂಕ್ಷ್ಮಗಳನ್ನು ಈ ಮೊದಲ ತಲೆಮಾರಿನ ಈ ತಯಾರಕರಿಗೆ ತಿಳಿಸಿಕೊಟ್ಟಿರಬಹುದು. ಆದರೆ ಚರ್ಮದ ಗುಣ, ಸ್ವಭಾವ, ವೈವಿಧ್ಯ, ಹದ ಇವುಗಳನ್ನು ಕುರಿತ ಈ ತಯಾರಕರ ಜ್ಞಾನ ಅಗಾಧ. ವಿಪರ್ಯಾಸವೆಂದರೆ, ಸ್ವತಃ ಮೃದಂಗ ತಯಾರಕರು ವಿಭಿನ್ನ ಸಾಮಾಜಿಕ ಸಾಂಸ್ಕೃತಿಕ ಕಾರಣಗಳಿಂದಾಗಿ ತಮ್ಮ ಅಸ್ಮಿತೆಯನ್ನೇ ಅಳಿಸಿಹಾಕಿಕೊಳ್ಳುವ ಮನಃಸ್ಥಿತಿಯವರಾಗಿದ್ದಾರೆ. ಹಾಗಾಗಿ ತಮ್ಮ ಎಲ್ಲಾ ಸಾಧನೆಗಳಿಗೂ ತಮ್ಮನ್ನು ಪೋಷಿಸುವ ಮೃದಂಗವಾದಕರೇ ಕಾರಣ ಎನ್ನುತ್ತಾರೆ. ಉದಾಹರಣೆಗೆ ಸಾಮಾನ್ಯವಾಗಿ ಮೃದಂಗದ ಮರದ ಕಟ್ಟೆಗಳು ಒಂದರಂತೆ ಇನ್ನೊಂದು ಇರುವುದಿಲ್ಲ. ಒಂದಕ್ಕೆ ಕತ್ತರಿಸಿದ ಚರ್ಮದ ಮುಚ್ಚಿಗೆಗಳನ್ನು ಇನ್ನೊಂದು ಮೃದಂಗಕ್ಕೆ ಅಡ್ಜಸ್ಟ್ ಮಾಡಿ ಹಾಕುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಸೋಮು ಆಚಾರಿ ಮಾಡುತ್ತಿದ್ದ ಮೃದಂಗದ ಕಟ್ಟೆಗಳು ಎರಕ ಹುಯ್ದು ತೆಗೆದಿದ್ದಾರೇನೋ ಎನ್ನುವಷ್ಟು ಕರಾರುವಾಕ್ಕಾಗಿ ಒಂದೇ ಅಳತೆಯವು ಆಗಿರುತ್ತಿದ್ದವು. ಒಂದು ಮೃದಂಗದಿಂದ ಇನ್ನೊಂದು ಮೃದಂಗಕ್ಕೆ ಚರ್ಮದ ಮುಚ್ಚಿಗೆಗಳನ್ನು ತೆಗೆದು ಸಲೀಸಾಗಿ ಹಾಕಬಹುದಿತ್ತು. ಅದು ಬೇರೊಂದು ಮೃದಂಗಕ್ಕೆ ಮಾಡಿದ್ದು ಅಂತ ಅನ್ನಿಸುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ. ಆದರೆ ಸೋಮು ಆಚಾರಿಯ ಬಳಿ ಮಾತನಾಡಿದರೆ “ತನಗೇನೂ ತಿಳಿಯದು, ಪ್ರತಿಯೊಂದಕ್ಕೂ ಪಾಲ್ಘಾಟ್ ಮಣಿ ಅಯ್ಯರ್ ಅವರ ಅಸಾಧಾರಣ ಪ್ರತಿಭೆಯೇ ಕಾರಣ” ಎಂದು ಹೇಳುತ್ತಾ, ತಾನು ಕೇವಲ ಇನ್ನೊಂದು ಲೇತ್ ಯಂತ್ರ ಎನ್ನುವಂತೆ ಮಾತನಾಡುತ್ತಿದ್ದ. “ನನ್ನಂತಹ ಅಜ್ಞಾನಿಗೆ ಸ್ವಂತವಾಗಿ ಏನು ಗೊತ್ತಿರಲು ಸಾಧ್ಯ? ಮೃದಂಗಕ್ಕೆ ಪಾಲ್ಘಾಟ್ ಮಣಿ ಅಯ್ಯರ್ ಅವರಂತೆ ಯಾರೂ ಏನೂ ಮಾಡಿಲ್ಲ.” ಎಂದು ತನ್ನ ಸ್ವಂತ ಕಲ್ಪನೆಯನ್ನೂ ಮಣಿ ಅಯ್ಯರ್ ಅವರ ಕಲ್ಪನೆ ಎಂದು ಮಾನಸಿಕವಾಗಿ ಒಪ್ಪಿಕೊಂಡುಬಿಟ್ಟಿದ್ದರು. ಹಾಗೆಯೇ ಸಂದರ್ಶನ ನೀಡಿದ ಯಾವ ವಾದಕರೂ ಸೋಮು ಸ್ವತಃ ಮೃದಂಗದ ಕಟ್ಟೆಗೆ ಮಾಡಿದ್ದ ಸೃಜನಶೀಲ ಬದಲಾವಣೆಗಳ ಬಗ್ಗೆ ಒಂದೇ ಒಂದು ಮಾತನ್ನೂ ಆಡಲಿಲ್ಲ.

ಮೃದಂಗಕ್ಕೆ ಮೂರು ಬಗೆಯ ಚರ್ಮವನ್ನು ಬಳಸುತ್ತಾರೆ. ಹಸು, ಎಮ್ಮೆ ಮತ್ತು ಆಡು. ಈ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸೂಕ್ಷ್ಮಗಳನ್ನೂ ಮೃದಂಗ ತಯಾರಕರು ತಮ್ಮ ಅನುಭವ ಮತ್ತು ಪ್ರಯೋಗಶೀಲತೆಯಿಂದ ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಪ್ರಯೋಗಶೀಲತೆಯಿಂದ ಕಂಡುಕೊಂಡಿರುವ ಅವರ ಆ ಸಾಂಪ್ರದಾಯಿಕ ಜ್ಞಾನದ ಹಿಂದೆ ಸ್ಪಷ್ಟವಾದ ವೈಜ್ಞಾನಿಕತೆ ಇದೆ. ಚರ್ಮವನ್ನು ನೋಡಿದ ಕೂಡಲೆ ಅದು ಮಂದವಾಗಿದೆಯೋ ತೆಳುವಾಗಿದೆಯೋ ಎನ್ನುವುದು ಅವರಿಗೆ ತಿಳಿದುಹೋಗುತ್ತದೆ. ಹಸುವಿನ ಚರ್ಮದಲ್ಲಿ ಎರಡು ಬಾರಿ ಕರುಹಾಕಿದ ಹಸುವಿನ ಚರ್ಮ ಅತಿಶ್ರೇಷ್ಠ. ಏಕೆಂದರೆ ಅದು ಚೆನ್ನಾಗಿ ಹಿಗ್ಗುತ್ತದೆ. ಹೆಚ್ಚು ನಮ್ಯವಾಗಿರುತ್ತದೆ. ಸಹಜವಾಗಿ ಸಾವನ್ನಪ್ಪಿರುವ ಯಾವುದೋ ಹಸು ಅಥವಾ ಎಮ್ಮೆ ಅಥವಾ ಆಡಿನ ಚರ್ಮವನ್ನು ಮೃದಂಗ ತಯಾರಿಕೆಗೆ ಬಳಸುವುದಕ್ಕೆ ಸಾಧ್ಯವಿಲ್ಲ. ಜೀವಂತ ಹಸು, ಎಮ್ಮೆ, ಅಥವಾ ಆಡನ್ನು ನೋಡಿ, ಅದರ ಚರ್ಮ ಸೂಕ್ತವಾಗುತ್ತದೆಯೇ ಎಂದು ನಿರ್ಧರಿಸಿದ ನಂತರ ಆ ಪ್ರಾಣಿಯನ್ನು ಮೃದಂಗ ತಯಾರಿಸುವುದಕ್ಕಾಗಿಯೇ ಕೊಲ್ಲಲಾಗುತ್ತದೆ. ಹೀಗೇಕೆ ಮಾಡುತ್ತಾರೆ ಎನ್ನುವುದನ್ನು ಖ್ಯಾತ ತಯಾರಕ ಜಾನ್ ಬ್ರಿಟ್ಟೋ ವಿವರಿಸುತ್ತಾರೆ. ಪ್ರಾಣಿಯ ಕುತ್ತಿಗೆಯನ್ನು ಕತ್ತರಿಸಿದಾಗ ರಕ್ತವೆಲ್ಲವೂ ಹೊರಗೆ ಚಿಮ್ಮಿ ಬಂದುಬಿಡುತ್ತದೆ. ಅಗ ಚರ್ಮದ ಅಡಿಯಲ್ಲಿರುವ ರಕ್ತನಾಳಗಳಿಂದ ರಕ್ತ ಸಂಪೂರ್ಣವಾಗಿ ಹೊರಬಂದು ಚರ್ಮದಲ್ಲಿ ರಕ್ತದ ಅಂಶ ಸ್ವಲ್ಪವೂ ಇರುವುದಿಲ್ಲ. ಇದು ಚರ್ಮಕ್ಕೆ ಚೆನ್ನಾಗಿ ಹಿಗ್ಗುವ ಗುಣವನ್ನು ನೀಡುತ್ತದೆ. ಸಹಜವಾಗಿ ಮರಣಹೊಂದಿರುವ ಪ್ರಾಣಿಯ ರಕ್ತ ಹೆಪ್ಪುಗಟ್ಟುತ್ತದೆ ಹಾಗಾಗಿ ಚರ್ಮ ಕಾರ್ಡ್‍ಬೋರ್ಡಿನಂತೆ ಆಗಿಬಿಡುತ್ತದೆ. ಅದನ್ನು ನೀರಿನಲ್ಲಿ ನೆನೆಸಿ ಹಿಗ್ಗಿಸಲು ಪ್ರಯತ್ನಿಸಿದರೆ, ಅದು ತುಂಡಾಗುತ್ತದೆ. ಮೃದಂಗ ತಯಾರಕರು ಆಗಷ್ಟೇ ಸುಲಿದ ಆಡಿನ ಚರ್ಮಕ್ಕೆ ಅಂಟಿಕೊಂಡಿರುವ ಮಾಂಸ ಮತ್ತು ಕೊಬ್ಬನ್ನು ತೆಗೆದ ನಂತರ ಅದಕ್ಕೆ ಧಾರಾಳವಾಗಿ ಸುಣ್ಣವನ್ನು ಸವರಿ, ಮಡಿಸಿ, ನೀರಿನಲ್ಲಿ ಒಂದೆರೆಡು ದಿನ ನೆನಸಿ ಇಡುತ್ತಾರೆ. ಮೂರನೆಯ ದಿನ ಅದನ್ನು ಹೊರತೆಗೆದಾಗ ಅದು ಮನುಷ್ಯ ಮಾತ್ರದವರು ಸಹಿಸಿಕೊಳ್ಳಲು ಸಾಧ್ಯವಿಲ್ಲದ ದುರ್ನಾತ ಸೂಸುತ್ತಿರುತ್ತದೆ. ಅದನ್ನು ಅವರು ಷರ್ಟು ಅಥವಾ ಪ್ಯಾಂಟನ್ನು ಉಜ್ಜುವಂತೆ ಚೆನ್ನಾಗಿ ಕೈಯಿಂದ ಉಜ್ಜುತ್ತಾರೆ. ಇದು ಚರ್ಮದ ತೂಕವನ್ನು ಅಥವಾ ಅದರ ಬಲವನ್ನು ತಗ್ಗಿಸುತ್ತದೆ. ನಂತರ ಅದನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿದರೆ ಅದನ್ನು ಸುಲಭವಾಗಿ ಸುರುಳಿ ಸುತ್ತಬಹುದು. ಅದನ್ನು ಅವರಿಗೆ ಬೇಕಾದಾಗ ಬಳಸುತ್ತಾರೆ. ಹೀಗೆ ಸುಣ್ಣ ಹಚ್ಚುವುದರಿಂದ ಚರ್ಮದ ಮೇಲಿನ ಕೂದಲನ್ನು ಸುಲಭವಾಗಿ ತೆಗೆದುಬಿಡಬಹುದು. ಹೀಗೆ ಸಿದ್ಧವಾದ ಚರ್ಮವನ್ನು ಉಪಯೋಗಿಸುವದು ಬಲಮುಚ್ಚಿಗೆಗೆ ಮಾತ್ರ. ಈ ಪ್ರಕ್ರಿಯೆಯ ವೈಜ್ಞಾನಿಕ ಅಂಶವನ್ನು ಕುರಿತು ಕೃಷ್ಣ ಅವರು ವಿಜ್ಞಾನಿಗಳ ಜೊತೆ ಚರ್ಚಿಸಿದಾಗ ಈ ವಿಧಾನವು ಚರ್ಮದಲ್ಲಿ ಇರುವ ಕೆಲವು ಸ್ಟ್ರಕ್ಚರಲ್ ಪ್ರೋಟೀನ್ ಮತ್ತು ನಾನ್-ಸ್ಟ್ರಕ್ಚರಲ್ ಪ್ರೋಟೀನುಗಳಾದ ಅಲ್ಬಮಿನ್, ಗ್ಲೋಬುಲಿನ್, ಮ್ಯೂಸಿನ್ ಮತ್ತು ಮ್ಯುಕಾಯ್ಡ್ ಮುಂತಾದವುಗಳನ್ನು ಕರಗಿಸಿಬಿಡುತ್ತದೆ. ಅವು ಒಂದು ವೇಳೆ ಚರ್ಮದಲ್ಲಿಯೇ ಉಳಿದುಬಿಟ್ಟರೆ, ಚರ್ಮ ಒಣಗಿದಾಗ ಒರಟಾಗಿ ಗಟ್ಟಿಯಾಗಿಬಿಡುತ್ತದೆ. ಈ ವಿಧಾನದಿಂದ ಚರ್ಮ ತೆಳುವಾಗಿಯೂ, ಮೃದುವಾಗಿಯೂ ಉಳಿಯುತ್ತದೆ. ಇಂತಹ ಚರ್ಮವನ್ನು ಬಲಮುಚ್ಚಿಗೆಗೆ ಬಳಸಿದರೆ ಅದು ಮೃದಂಗದ ನಾದವನ್ನು ಹೆಚ್ಚಿಸುತ್ತದೆ ಮತ್ತು ಅದರ ನಾದಗುಣವನ್ನು ಹೆಚ್ಚು ತೀವ್ರಗೊಳಿಸುತ್ತದೆ. ಮೃದಂಗದ ಎರಡು ಭಾಗಗಳನ್ನು ಎಳೆದು ಕಟ್ಟುವ ಚರ್ಮದ ದಾರ/ಬಾರನ್ನು ವರು ಎನ್ನುತ್ತಾರೆ. ಇದನ್ನು ಎಮ್ಮೆಯ ಚರ್ಮದಿಂದ ತಯಾರಿಸುತ್ತಾರೆ. ಈ ಬಾರುಗಳು ಬಹುಕಾಲ ಹುಳ ಹೊಡೆಯದೆ ಉಳಿಯಲು ಅದನ್ನು ಶೇಖರಿಸಿಡುವ ಮೊದಲು ಅದನ್ನು ಗಟ್ಟಿಯಾದ ಕೆನೆಮೊಸರಿನಲ್ಲಿ ಒಂದು ದಿನ ನೆನಸಿಡುತ್ತಾರೆ. ನಂತರ ಅದಕ್ಕೆ ಚೆನ್ನಾಗಿ ಹರಳೆಣ್ಣೆಯನ್ನು ಸವರಿರುತ್ತಾರೆ. ಹಾಗೆಯೇ ಮೃದಂಗದ ಬಲಮುಚ್ಚಿಗೆಯಲ್ಲಿ ಒಂದು ಕಪ್ಪು ಭಾಗವಿರುತ್ತದೆ ಅದನ್ನು ಕರಣೆ ಎನ್ನುತ್ತಾರೆ, ಅನ್ನ ಮತ್ತು ಕಬ್ಬಿಣದ ನಯವಾದ ಪುಡಿಯನ್ನು ಕಲಸಿ, ಅದನ್ನು ಸವರಿ ಈ ಕರಣೆಯನ್ನು ಮಾಡುತ್ತಾರೆ. ಅದನ್ನು ಸಾದಂ ಎನ್ನುತ್ತಾರೆ. ಅದರಲ್ಲಿ ಸಣ್ಣ ಸಣ್ಣ ರಂಧ್ರಗಳು ಮತ್ತು ಬಿರುಕುಗಳು ಇರುತ್ತವೆ. ಹಾಗಾಗಿ ಇದನ್ನು ನುಡಿಸಿದಾಗ ಸೊಗಸಾದ ನಾದ ಹೊಮ್ಮುತ್ತದೆ. ಇದು ತಯಾರಕರು ತಮ್ಮ ಅನುಭವದಿಂದ ಮತ್ತು ಪ್ರಯೋಗಶೀಲತೆಯಿಂದ ಕಂಡುಕೊಂಡದ್ದು. 1920ರಲ್ಲಿ ಈ ಕುರಿತು ಸಂಶೋಧನೆ ನಡೆಸಿದ ಸರ್ ಸಿ ವಿ ರಾಮನ್ ಪ್ರಖ್ಯಾತ ನೇಚರ್ ಪತ್ರಿಕೆಯಲ್ಲಿ“The central load also improves the musical effect by increasing the energy of vibration and thus prolonging the duration of the tones.” ಎಂದು ಬರೆದರು.

ಒಬ್ಬ ಶ್ರೇಷ್ಠ ಮೃದಂಗ ತಯಾರಕ ಮತ್ತು ಒಬ್ಬ ಶ್ರೇಷ್ಠ ಮೃದಂಗವಾದಕ ಇಬ್ಬರ ಮನಸ್ಸು ಸದಾ ಉತ್ಕೃಷ್ಟತೆಯ ಗೀಳಿನಿಂದ ತೊಯ್ದುಹೋಗಿರುತ್ತದೆ. ಹೊಸತನ್ನು ಅರಸುತ್ತಿರುತ್ತದೆ. ಸಾರ್ವಕಾಲಿಕ ಶ್ರೇಷ್ಠ ಮೃದಂಗವಾದಕ ಪಾಲ್ಘಾಟ್ ಮಣಿ ಅಯ್ಯರ್‌ಗೆ ತಮ್ಮ ತೊಪ್ಪಿ ಅಂದರೆ ಮೃದಂಗದ ಎಡಮುಚ್ಚಿಗೆಯ ನಾದ ತನ್ನ ಸಮಕಾಲೀನ ಶ್ರೇಷ್ಠವಾದಕ ಪಳನಿ ಸುಬ್ರಹ್ಮಣ್ಯ ಪಿಳ್ಳೈ ಅವರಂತೆ ಸೊಗಸಾಗಿಲ್ಲವಲ್ಲ ಎಂಬ ಕೊರಗು. ಅದಕ್ಕಾಗಿ ಅವರು ಬಗೆಬಗೆಯಾಗಿ ಪ್ರಯತ್ನಿಸಿದರು. ಏನೆಲ್ಲಾ ಬದಲಾವಣೆಗಳನ್ನು ತಮ್ಮ ಮೃದಂಗದಲ್ಲಿ ಮಾಡಿದರು. ತಮ್ಮ ಖಾಯಂ ಮೃದಂಗ ತಯಾರಕ ಪರ್ಲಾಂಡು ಪಳನಿಯವರಿಗೆ ತೊಪ್ಪಿ ಮಾಡಿಕೊಟ್ಟು ಬಂದ ಮೇಲೆ ಆ ಕುರಿತು ಪರ್ಲಾಂಡುವನ್ನು ಒಂದು ಸಾವಿರ ಪ್ರಶ್ನೆಗಳನ್ನು ಕೇಳಿ ತಲೆತಿಂದಾಗ, ಇವರ ಕಾಟ ತಡೆಯಲಾಗದೆ ಕೀಟಲೆಕೋರ ಪರ್ಲಾಂಡು “ಆ ನಾದ ಅವರ ಕೈಯ್ಯಲ್ಲಿದೆ ತೊಪ್ಪಿಯಲ್ಲಿಲ್ಲ” ಎಂದು ಮುಸಿನಕ್ಕರಂತೆ. ಪರ್ಲಾಂಡು ಕೂಡ ಇಂಥದ್ದೇ ಹುಡುಕಾಟದಲ್ಲಿ ಆವಿಷ್ಕರಿಸಿದ ಕಪ್ಪಿ ಮೃದಂಗ ಇಡೀ ಮೃದಂಗ ವಾದನವನ್ನೇ ಅಭೂತಪೂರ್ವವಾಗಿ ಬದಲಿಸಿತು. ಹೊಸ ವಾದನ ಶೈಲಿಗೇ ನಾಂದಿ ಹಾಡಿತು. ಆದರೆ ಕರ್ನಾಟಕ ಸಂಗೀತಲೋಕ ಅದರ ಕ್ರೆಡಿಟ್ ಅವನಿಗೆ ಕೊಡಲು ಸಿದ್ಧವಿಲ್ಲ. ಆ ಸಾಧನೆಯ ಗೌರವವನ್ನು ಪಾಲ್ಘಾಟ್ ಮಣಿ ಅಯ್ಯರ್‌ಗೆ ನೀಡುತ್ತದೆ. ಆದರೆ ಕೃಷ್ಣ ಈ ಪುಸ್ತಕ ಬರೆಯುವವರೆಗೆ ಉಳಿದವರಿಗೆ ಹೋಗಲಿ ಹೆಚ್ಚಿನ ಮೃದಂಗ ವಾದಕರಿಗೂ ಈ ಬಗ್ಗೆ ತಿಳಿದಿರಲಿಲ್ಲವೆನಿಸುತ್ತದೆ.

ಸಾಮಾನ್ಯವಾಗಿ ಸಂಗೀತಲೋಕದಲ್ಲಿ ಒಂದು ನಂಬಿಕೆಯಿದೆ. ಸಂಗೀತಕ್ಕೂ ಲೌಕಿಕಕ್ಕೂ ಸಂಬಂಧವಿಲ್ಲ. ಅದು ಶುದ್ಧ ಕಲೆ. ಶುದ್ಧ ಆಧ್ಯಾತ್ಮ. ಈ ಲೋಕದ ಉಳಿದ ಯಾವುದೇ ವ್ಯಾಪಾರವೂ ಅದನ್ನು ಪ್ರಭಾವಿಸುವುದಿಲ್ಲ. ಯಾವ ಪೂರ್ವಗ್ರಹದ ಸೋಂಕೂ ಅದನ್ನು ತಟ್ಟುವುದಿಲ್ಲ, ಇತ್ಯಾದಿ, ಇತ್ಯಾದಿ. ಇಂದಿಗೂ ಹೆಚ್ಚಿನವರು ತುಂಬಾ ಮುಗ್ಧವಾಗಿ ಇದನ್ನು ನಂಬಿದ್ದಾರೆ. ಆದರೆ ಅದರೊಳಗೆ ಹೆಚ್ಚೆಚ್ಚು ಪ್ರವೇಶಿಸಿದಂತೆ ಅಲ್ಲಿ ಬೇರೊಂದು ಲೋಕವೇ ತೆರೆದುಕೊಳ್ಳುತ್ತದೆ. ಪರಿಸರ, ಆಹಾರ, ಪುರುಷಪ್ರಧಾನ ಮನಃಸ್ಥಿತಿ, ವರ್ಗ, ಜಾತಿ, ಧರ್ಮ, ವೃತ್ತಿಕೌಶಲ, ಹೀಗೆ ಪ್ರತಿಯೊಂದೂ ಸಂಗೀತದೊಂದಿಗೆ ತಕ್ಕೆ ಹಾಕಿಕೊಂಡಿದೆ. ಸಂಗೀತವೂ ಈ ಲೋಕದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯದೊಳಗೆ ನೆಲೆಗೊಂಡಿರುವ ವಿದ್ಯಮಾನ ಎನ್ನುವುದು ಕೃತಿಯನ್ನು ಓದುತ್ತಾ ಹೋದಂತೆ ಸ್ಪಷ್ಟವಾಗುತ್ತದೆ.

ಉದಾಹರಣೆಗೆ ಇತ್ತೀಚಿನ ದಿನಗಳಲ್ಲಿ ಚರ್ಮದ ಗುಣಮಟ್ಟದ ಬಗ್ಗೆ ಮೃದಂಗ ತಯಾರಕರು ಮತ್ತು ವಾದಕರಿಬ್ಬರಲ್ಲೂ ತೀವ್ರ ಅಸಮಾಧಾನವಿದೆ. ಅದನ್ನು ಕುರಿತು ಖ್ಯಾತ ಮೃದಂಗವಾದಕ ಕಾರೈಕುಡಿ ಮಣಿ “ಇಂದು ಪ್ರಾಣಿಗಳು ಕೇವಲ ಪೋಸ್ಟರ್ ಮತ್ತು ಪ್ಲಾಸ್ಟಿಕ್ ತಿನ್ನುವುದರಿಂದ ಚರ್ಮಕ್ಕೆ ಮತ್ತು ಮೃದಂಗಕ್ಕೆ ಎರಡಕ್ಕೂ ಜೀವವಿಲ್ಲ” ಎನ್ನುತ್ತಾರೆ. ಹಾಗೆಯೇ ಪ್ರಾಣಿಗಳ ಚರ್ಮದ ಗುಣಕ್ಕೂ ಅವು ಬದುಕುವ ಹವಾಮಾನಕ್ಕೂ ಇರುವ ಸಂಬಂಧ ಆ ಚರ್ಮದಿಂದ ಹೊಮ್ಮುವ ನಾದವನ್ನು ನಿರ್ಧರಿಸುತ್ತದೆ. ಬೆಂಗಳೂರಿನಲ್ಲಿ ವಾಸಿಸುವ ಪಾಲ್ಕಕಾಡಿನ ಪೆರುವೆಂಬ ಮೃದಂಗ ತಯಾರಕರ ಕುಟುಂಬಕ್ಕೆ ಸೇರಿದ ಪಿ. ಕೃಷ್ಣಕುಮಾರ್ ಹೇಳುತ್ತಾರೆ, “ಕೇರಳದ ಹಸುವಿನ ಚರ್ಮಕ್ಕೂ, ತಮಿಳುನಾಡಿನ ಹಸುವಿನ ಚರ್ಮಕ್ಕೂ ವ್ಯತ್ಯಾಸವಿದೆ. ತಂಜಾವೂರಿನಲ್ಲಿ ಹಸುವಿನ ಚರ್ಮ ಭಾರವಾಗಿರುತ್ತದೆ. ಕೇರಳದಲ್ಲಿ ನಾನು ಹಸುವನ್ನು ಸುಡುಬಿಸಿಲಿನಲ್ಲಿ ಮೇಯಲು ಬಿಟ್ಟುಬಿಡುತ್ತೇವೆ ಹಾಗಾಗಿ ಇಲ್ಲಿನ ಹಸುಗಳ ಚರ್ಮದಲ್ಲಿ ಕೊಬ್ಬಿನ ಅಂಶ ಕಡಿಮೆ ಇರುತ್ತದೆ. ಮೃದಂಗದಲ್ಲಿಯೇ ಎರಡು ಬಗೆ ಇದೆ ಒಂದು ಕುಚ್ಚಿ (ಕಡ್ಡಿಗಳು) ಮೃದಂಗ ಮತ್ತು ಕಪ್ಪಿ (ಸಣ್ಣ ಸಣ್ಣ ಕಲ್ಲುಗಳು) ಮೃದಂಗ. ಕುಚ್ಚಿ ಮೃದಂಗದಲ್ಲಿ ಬಲಮುಚ್ಚಿಗೆಯಲ್ಲಿ ಸಣ್ಣ ಸಣ್ಣ ಕಡ್ಡಿಗಳನ್ನು ಒಳಗೆ ತೂರಿಸಿರುತ್ತಾರೆ. ಇದನ್ನು ನುಡಿಸಲು ತುಂಬಾ ಹೆಚ್ಚಿನ ತೋಳ್ಬಲ ಬೇಕಿಲ್ಲ ಎಂದು ತಯಾರಕರು ಹೇಳುತ್ತಾರೆ. ಕಪ್ಪಿ ಮೃದಂಗದಲ್ಲಿ ಕಡ್ಡಿಗೆ ಬದಲಾಗಿ ಸಣ್ಣ ಸಣ್ಣ ಕಲ್ಲುಗಳನ್ನು ತೂರಿಸಿರುತ್ತಾರೆ. ಇದರ ನಾದ ಹೆಚ್ಚು ಘನವಾಗಿರುತ್ತದೆ ಮತ್ತು ಇದನ್ನು ನುಡಿಸುವುದಕ್ಕೆ ಹೆಚ್ಚಿನ ತೋಳ್ಬಲ ಬೇಕು, ಜೊತೆಗೆ ಇದಕ್ಕೆ ಚರ್ಮದ ಬಾರನ್ನು ತುಂಬಾ ಹುಷಾರಾಗಿ ಬಲವಾಗಿ ಬಿಗಿದು ಕಟ್ಟಬೇಕು. ಇವೆರಡು ಮೃದಂಗವನ್ನು ಸ್ವೀಕರಿಸಿ, ಗ್ರಹಿಸುವ ರೀತಿಯಲ್ಲೇ ಗಾಢವಾದ ಲಿಂಗಾಧಾರಿತ ಮನಃಸ್ಥಿತಿ ಕಂಡುಬರುತ್ತದೆ. “ಕಪ್ಪಿ ಮೃದಂಗ ಎಂದರೆ ಸೀರೆಯುಟ್ಟ ಹೆಣ್ಣಿನಂತೆ ಗಂಭೀರ ಮತ್ತು ಕುಚ್ಚಿ ಮೃದಂಗವೆಂದರೆ ಜೀನ್ಸ್ ತೊಟ್ಟ ಹೆಣ್ಣಿನಂತೆ” ಎಂದು ಕಾರೈಕುಡಿ ಮಣಿ ಹೇಳುತ್ತಾರೆ. ಈ ಲಿಂಗಾಧಾರಿತ ಮನಃಸ್ಥಿತಿಗೆ ಜಾತಿ, ಧರ್ಮಗಳ ಕಟ್ಟಿಲ್ಲ. ಸ್ವತಃ ತಂಜಾವೂರು ಮೃದಂಗ ತಯಾರಕರೆಲ್ಲರೂ ಕಪ್ಪಿ ಮೃದಂಗ ಶ್ರೇಷ್ಠ ಮತ್ತು ಮಾಡುವುದಕ್ಕೆ ಕಷ್ಟ ಎಂದು ಹೇಳುತ್ತಾರೆ. ಕಪ್ಪಿ ಮೃದಂಗ ಗಂಭೀರವಾಗಿದ್ದು ಗಂಡಸರ ಗಾಯನಕ್ಕೆ ಸೂಕ್ತ ಮತ್ತು ಕುಚ್ಚಿ ಮೃದಂಗ ಹೆಂಗಸರಿಗೆ ಸರಿ ಎನ್ನುವ ಮಾತುಗಳು ಕರ್ನಾಟಕ ಸಂಗೀತ ವಲಯದಲ್ಲಿ ತುಂಬಾ ವ್ಯಾಪಕ. ಇದು ಎಷ್ಟರ ಮಟ್ಟಿಗೆ ಇದೆ ಎಂದರೆ ಕುಚ್ಚಿಮೃದಂಗವನ್ನು ನುಡಿಸುತ್ತಾರೆ ಅಥವಾ ನುಡಿಸುತ್ತಿದ್ದರು ಎಂದು ಯಾರ ಬಗ್ಗೆಯಾದರೂ ಹೇಳುವುದೇ ಅವಮಾನದ ಸಂಗತಿ. ಆದರೆ ಎಲ್ಲರೂ ಈ ಬಲೆಗೆ ಸಿಲುಕಿಕೊಂಡಿಲ್ಲ, ಭಿನ್ನವಾಗಿ ಯೋಚಿಸುವವರೂ ಇದ್ದಾರೆ ಎನ್ನುವುದನ್ನೂ ಕೃಷ್ಣ ದಾಖಲಿಸುತ್ತಾರೆ. ಭಾರತರತ್ನ ಎಂ ಎಸ್ ಸುಬ್ಬುಲಕ್ಷ್ಮಿಯವರಿಗೆ ಹಲವು ದಶಕಗಳು ಮೃದಂಗ ನುಡಿಸಿದ ಟಿ. ಕೆ. ಮೂರ್ತಿಯವರು ಈ ಎರಡೂ ವಾದವನ್ನೂ ಸಾರಾಸಗಟಾಗಿ ತಿರಸ್ಕರಿಸಿಬಿಡುತ್ತಾರೆ. ಅವರು ನುಡಿಸುತ್ತಿದ್ದದ್ದು ಕಪ್ಪಿ ಮೃದಂಗವನ್ನೇ ಮತ್ತು ಅದನ್ನು ನುಡಿಸುತ್ತಿದ್ದುದು ಎಂ.ಎಸ್ ಸುಬ್ಬುಲಕ್ಷ್ಮಿ ಅವರಿಗೆ. ಕುಚ್ಚಿ ಮೃದಂಗವನ್ನು ನುಡಿಸುವ ಉಮಯಾಳಪುರಂ ಸಿವರಾಮನ್ ಈ ಚರ್ಚೆ ಪುರುಷಾಭಿಮಾನದಿಂದ ಹುಟ್ಟಿರುವುದು ಎಂದು ಟೀಕಿಸುತ್ತಾರೆ. ವಿಪರ್ಯಾಸವೆಂದರೆ ಅವರು ಹೆಂಸರಿಗೆ ನುಡಿಸುವುದಿಲ್ಲ. ಗಂಡಸರಿಗೆ ಕುಚ್ಚಿ ಮೃದಂಗವನ್ನು ನುಡಿಸುತ್ತಾರೆ!!

ಒಬ್ಬ ಅತ್ಯುತ್ತಮ ಮೃದಂಗ ತಯಾರಕನ ಮಗನಿಗೂ ಒಬ್ಬ ಒಳ್ಳೆಯ ಕೈತುಂಬ ಕೆಲಸವಿರುವ ಮೃದಂಗವಾದಕನಾಗುವುದು ಸಾಧ್ಯವಿಲ್ಲ. ಈ ಕುರಿತು ಸುಪ್ರಸಿದ್ಧ ಕೇರಳ ಕಲಾಮಂಡಲಂನಿಂದ ಎಂ.ಮ್ಯೂಸಿಕ್ ಪದವಿ ಪಡೆದಿರುವ ರಾಜೇಶ್ ಹೇಳುವ ಮಾತುಗಳು ಕಣ್ತೆರೆಸುವಂತಿದೆ. “ನಾವಿರುವ ಸ್ಥಳವೇನಾದರೂ ಅಗ್ರಹಾರವಾಗಿದ್ದರೆ ಇಲ್ಲಿ ತುಂಬಾ ಕಚೇರಿಗಳು ನಡೆಯುತ್ತಿದ್ದವು. ನಾವು ಸುಲಭವಾಗಿ ಗಮನಿಸಿ, ಕಲಿಯಬಹುದಾಗಿತ್ತು. ಆದರೆ ಇಲ್ಲಿ ಹಾಗಿಲ್ಲ.” ಸಂಗೀತ ಸಂಬಂಧಿ ಜ್ಞಾನದ ಹಲವು ಬಾಗಿಲುಗಳು ರಾಜೇಶ್ ಪಾಲಿಗೆ ಎಂದೆಂದಿಗೂ ಮುಚ್ಚಿಹೋಗಿವೆ. ಇನ್ನು ಹೆಂಗಸರ ವಿಷಯಕ್ಕೆ ಬಂದರಂತೂ ಮೃದಂಗವಾದನ ಮತ್ತು ಮೃದಂಗ ತಯಾರಿಕೆ ಎರಡೂ ಕ್ಷೇತ್ರವೂ ಹೆಚ್ಚು ಕಡಿಮೆ ಪುರುಷರದ್ದೇ. ಎರಡೂ ಕ್ಷೇತ್ರದಲ್ಲಿಯೂ ಅವರು ತಮ್ಮ ಅಸ್ಮಿತೆಗಾಗಿ ತುಂಬಾ ಹೋರಾಟ ಮಾಡುವ ಸ್ಥಿತಿಯೇ ಇದೆ. ಅಲ್ಲಿ ಇಲ್ಲಿ ಎಲ್ಲೋ ಅಂಬೂರಿನ ಮಾಧಮ್ಮಾಳ್, ದೊಡ್ಡಬಳ್ಳಾಪುರದ ಆರ್ ಎಸ್ ಅಶ್ವಥ್ಥಮ್ಮ, ಚರ್ಮ ಹದಮಾಡುವ ಪರಿಣತೆ ಪಾಲಕ್ಕಾಡಿನ ಎ. ಗೀತಾ ಇವರು ಕೆಲವು ಅಪರೂಪದ ಉದಾಹರಣೆಗಳು ಅಷ್ಟೇ. ಉಳಿದಂತೆ ಹೆಂಗಸರು ಸಹಾಯಕಿಯರೇ ಹೊರತು ಪ್ರಧಾನ ತಯಾರಕರಲ್ಲ.

ಮತ್ತೊಂದು ಗಮನಾರ್ಹ ಅಂಶವೆಂದರೆ ಸೋಮು ಆಚಾರಿ ಅಥವಾ ಪರ್ಲಾಂಡುವಿನಂತಹ ದಲಿತ ತಯಾರಕರ ಬಗ್ಗೆ ದಲಿತೇತರ ಕಲಾವಿದರು ಮಾತನಾಡುವಾಗ ಅವರ ಕೌಶಲದ ಬಗ್ಗೆ ಮಾತನಾಡುವುದಕ್ಕೆ ಬದಲಾಗಿ, ಅವರ ಕುಡಿತದ ದೌರ್ಬಲ್ಯ ಕುರಿತು ಮಾತನಾಡುತ್ತಾರೆ. ಆದರೆ ಅಷ್ಟೇ ಕುಡಿಯುವ ಅಥವಾ ಇನ್ನೂ ಹೆಚ್ಚು ಕುಡಿಯುತ್ತಿದ್ದ ಟಿ ಆರ್ ಮಹಾಲಿಂಗಂ ಅವರಂತಹ ಮೇಲ್ಜಾತಿಯ ಕಲಾವಿದರ ಬಗ್ಗೆ ಜೀನಿಯಸ್‍ಗಳೆಲ್ಲಾ ಹಾಗೆ ಎನ್ನುವ ಮಮತೆಯಿಂದ ಮಾತನಾಡುತ್ತಾರೆ. ಮೃದಂಗ ತಯಾರಕರು ಕೂಡ ತಮ್ಮದೇ ಆದ ರೀತಿಯಲ್ಲಿ ಇಡೀ ವ್ಯವಸ್ಥೆಯನ್ನು ಪ್ರಶ್ನಿಸಿ, ಸುಲಭವಾಗಿ ಬಗೆಹರಿಸಿಕೊಳ್ಳಲಾಗದಂತಹ ಧರ್ಮಸಂಕಟವನ್ನು ತಂದೊಡ್ಡುವುದನ್ನು ಅವರ ಮಾತುಗಳಲ್ಲೇ ಕೃಷ್ಣ ದಾಖಲಿಸುತ್ತಾರೆ. “ಹೆಚ್ಚಿನ ಮೃದಂಗವಾದಕರು ಬ್ರಾಹ್ಮಣರು. ನಾವು ಹಸು ಮತ್ತು ಆಡು ಎಂದು ಮಾತನಾಡುತ್ತೇವೆ. ಅವರಿಗೆ ಅದರ ವಾಸನೆ ಇಷ್ಟವಾಗುವುದಿಲ್ಲ, ನಾವು ಚರ್ಮವನ್ನು ಹೇಗೆ ಹದಮಾಡುತ್ತೀವಿ ಎನ್ನುವುದು ಅವರಿಗೆ ತಿಳಿಯದು. ಆದರೆ ಈ ವಾದ್ಯ ಅವರ ಪೂಜಾ ಕೋಣೆಯಲ್ಲಿರುತ್ತದೆ. ಆದರೆ ಅಂತಹ ಶ್ರೇಷ್ಠ ವಾದ್ಯವನ್ನು ಮಾಡುವ ನಮ್ಮ ಬಗ್ಗೆ ಅವರಿಗೆ ಗೌರವವಿಲ್ಲ. ಮೃದಂಗವನ್ನು ಮಾಡುವಾಗ ನಾವು ಅದನ್ನು ಕಾಲಿನಿಂದ ಒತ್ತಿ ಹಿಡಿದು ಮಾಡುತ್ತೇವೆ. ಅದೇ ಮೃದಂಗವನ್ನು ನೀವು ನಿಮ್ಮ ದೇವರಕೋಣೆಯಲ್ಲಿಟ್ಟು ಪೂಜಿಸುತ್ತೀರಿ.” ಜೀವಂತ ಹಸುವನ್ನು ಕೊಲ್ಲಬೇಕಾಗುವ ಧರ್ಮಸಂಕಟವನ್ನು ತಾಳಲಾರದೆ ಶ್ರೇಷ್ಠ ಮೃದಂಗ ವಿದ್ವಾಂಸರಾದ ಪಾಲ್ಘಾಟ್ ಮಣಿ ಅಯ್ಯರ್ ಅವರು ರಾಜಾಜಿಯವರನ್ನು ಕಂಡು, ಅವರ ಮೂಲಕ ಕಂಚಿಯ ಹಿರಿಯ ಪರಮಾಚಾರ್ಯರ ಅಭಿಪ್ರಾಯ ಕೇಳುತ್ತಾರೆ. ಯಾವುದರ ಮೂಲವನ್ನೂ ಹುಡುಕಬಾರದೆಂಬ ಸಲಹೆಯನ್ನು ನೀಡಿ ರಾಜಾಜಿಯವರು ಮಣಿ ಅಯ್ಯರ್ ಅವರನ್ನು ಪಾರುಮಾಡಿದ್ದು ಇಂದು ಇತಿಹಾಸ. ಹಿಂದೆ ಮೃದಂಗದ ಎಡಮುಚ್ಚಿಗೆಗೆ ರವೆಯನ್ನು ಕಲಸಿ ಹಚ್ಚುತ್ತಿದ್ದರು. ಆದರೆ ಇಂದು ಪ್ಲಾಸ್ಟಿಕ್ ಫರ್ಮಿಟ್ ಎಂಬ ಒಂದು ಬಗೆಯ ಅಂಟನ್ನು ಬಳಸುತ್ತಾರೆ. ವಿಪರ್ಯಾಸವೆಂದರೆ ಅದು ಸಾಮಾನ್ಯವಾಗಿ ಕಕ್ಕಸ್ಸುಗಳಲ್ಲಿ ಬಳಸುವ ಅಂಟು. ಹೀಗೆ ಇಡೀ ಕೃತಿ ಮಡಿ-ಮೈಲಿಗೆ, ಶುದ್ಧ-ಅಶುದ್ಧ, ಪವಿತ್ರ-ಅಪವಿತ್ರ ಇವುಗಳನ್ನು ಕುರಿತು ಇರುವ ಲೋಕದೃಷ್ಟಿಯ ಬಗ್ಗೆ ತುಂಬಾ ಗಂಭೀರವಾದ ಪ್ರಶ್ನೆಗಳನ್ನು ಮುನ್ನೆಲೆಗೆ ತರುತ್ತದೆ.

ಆದರೆ ಅದೇ ಹೊತ್ತಿಗೆ ಜಾತಿಯ ಮನಃಸ್ಥಿತಿಯನ್ನು ಕಪ್ಪು ಬಿಳುಪಾಗಿ ಚಿತ್ರಿಸಲಾಗುವುದಿಲ್ಲ. ಅದು ಸುಲಭ ವಿವರಣೆಗೆ ಸಿಲುಕದೆ ಸಮಸ್ಯಾತ್ಮಕವಾಗಿ ಇರುತ್ತದೆ ಎನ್ನುವ ಬಹುಮುಖ್ಯ ಅಂಶವನ್ನು ಕೃಷ್ಣ ಸ್ಪಷ್ಟವಾಗಿ ಕಾಣಿಸುತ್ತಾರೆ. “ಬ್ರಾಹ್ಮಣರು ಮತ್ತು ಮೃದಂಗ ಎರಡೂ ದೇವರು ಹಾಗಾಗಿ ಎರಡೂ ಶುದ್ಧ ಮತ್ತು ಪವಿತ್ರ” ಎಂದು ಗಾಢವಾಗಿ ನಂಬಿರುವ ದಲಿತ ತಯಾರಕರು ಇರುವಂತೆಯೇ ಮೇಲ್ಜಾತಿಯವರ ಧೋರಣೆಯನ್ನು ಕಟುವಾಗಿ ಟೀಕಿಸುವ, ಪ್ರಶ್ನಿಸುವ ತಯಾರಕರೂ ಇರದ್ದಾರೆ. ಇನ್ನು ಮೃದಂಗ ತಯಾರಕ ಬ್ರಾಹ್ಮಣನಾಗಿದ್ದರೆ ಅವನನ್ನು ಗೌರವಿಸಿ ಜಾತಿಯ ಕಾರಣಕ್ಕೆ ಉಳಿದ ಮೇಲ್ಲ್ಜಾತಿಯ ಮೃದಂಗವಾದಕರು ಅವನಿಂದ ಮೃದಂಗ ಕೊಳ್ಳುತ್ತಿದ್ದರು ಎನ್ನುವ ಸುಲಭ ಸಮೀಕರಣವೂ ಸಾಧ್ಯವಿಲ್ಲ. ಮದ್ರಾಸಿನಲ್ಲಿರುವ ಎಸ್ ಬಾಲಗುರು ಒಬ್ಬ ಬ್ರಾಹ್ಮಣ ಮೃದಂಗ ತಯಾರಕ. ತನ್ನ ಜಾತಿಯ ಕಟ್ಟುಪಾಡಿಗೆ ವಿರುದ್ಧವಾಗಿ ಚರ್ಮದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ತಾನೊಬ್ಬ ಬ್ರಾಹ್ಮಣ ಎನ್ನುವ ಕಾರಣಕ್ಕೆ ಬ್ರಾಹ್ಮಣ ಮೃದಂಗವಾದಕರೆಲ್ಲರೂ ತನ್ನನ್ನು ಬೆಂಬಲಿಸಿಬಹುದು ಎಂದು ಅವರು ನಿರೀಕ್ಷಿಸಿದ್ದರು. ಆದರೆ ಹಾಗಾಗಲಿಲ್ಲ.

ಹೀಗೆ ಕೃಷ್ಣ ಅವರ ಕೃತಿ ಸಂಗೀತವಾದ್ಯವೊಂದರ ತಯಾರಿಕೆ ಮತ್ತು ತಯಾರಕರನ್ನು ಕುರಿತು ಮಾತನಾಡುತ್ತಲೇ ಉಳಿದೆಲ್ಲಾ ವಿಚಾರಗಳ ಬಗ್ಗೆ ನಮ್ಮನ್ನು ಗಂಭೀರ ಚಿಂತನೆಗೆ ಹಚ್ಚುತ್ತದೆ.

**

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...