ನಗರೀಕರಣ:ಅಮಾಯಕರ ಬವಣೆಯ ಪರಿಣಾಮಕಾರಿ ಚಿತ್ರಣ ‘ಕಾಲಯಾತ್ರೆ’


ಕೃಷ್ಣಮೂರ್ತಿ ಹನೂರು ಅವರ ಹೊಸ ಕಾದಂಬರಿ ‘ಕಾಲಯಾತ್ರೆ’. ನಗರೀಕರಣದ ಪರಿಣಾಮ ಮಹಾನಗರಗಳಲ್ಲಿರುವ ಅಮಾಯಕ ಜನರ ಬದುಕು-ಬವಣೆಗಳನ್ನು ಚಿತ್ರಿಸಿರುವ ಈ ಕಾದಂಬರಿಯ ಆಯ್ದ ಭಾಗ ನಿಮ್ಮ ಓದಿಗಾಗಿ.

ಬೆಂಗಳೂರು ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟ್‌ನಿಂದ ಡ್ರೈವರ್ ಮಾರುತಿ ತಳವಾರನು ಕ್ಲೀನರ್‌ನೊಂದಿಗೆ ಭಾರಿ ಸರಕಿನ ಲಾರಿ ಹತ್ತಿ ಉತ್ತರ ಭಾರತದ ಕಡೆ ಪಯಣವಾದರೆ, ಅವನು ತಿರುಗಿ ಧೂಳು ಮೆತ್ತಿದ ಮುಖ, ಕೊಳೆ ಅಂಟಿದ ಸಮವಸ್ತ್ರದೊಂದಿಗೆ ಹೊರಟ ಈ ಜಾಗವಿರಲಿ, ಕರ್ನಾಟಕದ ಗಡಿ ಮುಟ್ಟುತ್ತಿದ್ದುದೇ ಎರಡು ಮೂರು ತಿಂಗಳ ಮೇಲೆ. ಹಾಗೆ ಅವನು ಪಯಣ ಹೊರಡುವಲ್ಲಿ ಹೆಂಡತಿ ಯರಿಲಕ್ಷ್ಮಮ್ಮನ ಕೈಯಲ್ಲಿ ಚಿತ್ರಾನ್ನ, ಅನ್ನ ಸಾಂಬಾರಿನ ಬುತ್ತಿ ಹಿಡಿದು ಗಂಡನ ಕೈಗಿಡುತ್ತ ’ಎಂದ ಬರ್‍ತೀ’ ಅನ್ನುವ ಮಾಮೂಲಿ ಪ್ರಶ್ನೆ ಕೇಳುವಳು.

ದಿನ ಬೆಳಗು ಸೂರ್ಯ ಪರಮಾತ್ಮನು ಹುಟ್ಟಿ ಮುಳುಗುವುದನ್ನು ಲೆಕ್ಕ ಹಾಕುತ್ತಿರು ಎಂಬ ಉತ್ತರ ಕೊಡಬೇಕೆಂದುಕೊಂಡವನು ಅದು ಬಾಯಿಗೆ ಬಂದಂತಾಗದೆ ತಾನು ಎಂದಿದ್ದರೂ ವಾಪಸು ಬರುವವನೇ ಅಂತಲೂ ಅಂದುಕೊಳ್ಳುವನು. ಗಂಡನು ಆ, ಹ್ಞೂ ಅನ್ನದಿರುವಲ್ಲಿ ಲೋಕ ಪ್ರಯಾಣ ಗೈಯ್ಯುತ್ತಿರುವವನೊಂದಿಗೆ ಒಂದಾದರೂ ಮಾತನಾಡಬೇಕೆಂಬ ಬಯಕೆಯಲ್ಲಿ ’ಇನ್ನೂ ಎಸ್ಟ ದಿನಾಂತ ಈ ಲಾರಿ ಸರಕಿನ ಸಂಗಾಟ ಸಂಸಾರ ಮಾಡಿ ಲೋಕ ತಿರಗಾವ್ಞ ನೀ’ ಅನ್ನುವಳು.

’ದೇವರನ್ನಾವ್ಞ ಕಣ್ಣು ಬಿಡಲಿ ತಾಳಲೇ, ಇದು ಬೆಂಗಳೂರು. ಹೊತ್ತು ಮೂಡಾಣ ಮುಳುಗಾಣ ಅಂಬದು ಗೊತ್ತಾಗಂಗಿಲ್ಲ.’

’ಹೊತ್ತು ಮೂಡಾದು ಎಂದಂತೀ...’ ಮಾರುತಿಯ ಮುಖದಲ್ಲಿ ನಗು ಮೂಡುವುದು.

ಇದು ಬೆಂಗಳೂರಿನ ಪೀಣ್ಯ ಲಾರಿ ಯಾರ್ಡಿನಲ್ಲಿ ನಿತ್ಯ ಭಾರಿ ಸರಕಿನೊಂದಿಗೆ ದೇಶದ ದಶ ದಿಕ್ಕುಗಳಿಗೆ ಪ್ರಯಾಣ ಹೊರಡುವ ಲಾರಿಗಳ ಆಜೂ ಬಾಜೂ ಡ್ರೈವರ್ ಗಂಡಂದಿರನ್ನು ಪ್ರಯಾಣಕ್ಕೆ ಕಳಿಸುವಲ್ಲಿನ ಮಾಮೂಲಿ ಪ್ರಶ್ನೋತ್ತರದ ನಿತ್ಯ ನಿರಂತರದ ದೃಶ್ಯ. ಅಲ್ಲೇ ಗಂಡ ಹೆಂಡತಿಯರ ನಡುವೆ ಈ ಮೇಲಿನ ಥರದಂತೆಯೇ ಸಂಭಾಷಣೆ ಆರಂಭವಾಗಿ ಒಂದು ಸಣ್ಣ ಜಗಳವೂ ಹುಟ್ಟಿಕೊಳ್ಳುವುದು-

’ಅಲ್ಲಾಕಣೆ, ಬೇಕಾದರೆ ದಿನಾ ಹೊತ್ತು ಮೂಡುತ್ಲು ಎದ್ದು ನಿನ ಮುಂದೆ ಕೂತು ನೀ ಚಂದಗಿದ್ದೀಯೆ, ನೀ ಹೆತ್ತ ಮಕ್ಳು ನಿನಗಿಂತ ಚಂದ ಅಂದ್ಕಂತ ಕುಂತ್ಕತ್ತೀನಿ. ಹಂಗೆ ಕುಂತರೆ ಹೊಟ್ಟೆ ಬಟ್ಟೆ ಕಟ್ಟದು ಹೆಂಗೆ ಹೇಳು’ ಅನ್ನುವುದು ಗಂಡನ ಪ್ರಶ್ನೆಯಾದರೆ ಹೆಂಡತಿಯೂ ’ಅದ್ಸರಿ ಹಂಗಂತ ಈ ಪಾಟಿ ಬೆಂಗಳೂರಲಿ ನಿಂಗೆ ಸಿಕ್ಕುದ್ದು ಇದೇ ಕೆಲ್ಸವಾ’ ಅನ್ನುವಳು.

’ನೀನೇನು ನಿಮ್ಮಪ್ಪನ ಹಟ್ಟಿಯಿಂದ ಘನಂದಾರಿ ಆಸ್ತಿಪಾಸ್ತಿ ಹೊತ್ತು ತಂದವಳಾ? ಹಂಗೇನಾದುರೂ ಇದ್ರೆ ಈಗಲೂ ಹೋಗಿ ಈಸ್ಕೆಂಬಾ. ಸಾವಿರಾರು ಜನಾ ಓಡಾಡೋ ಮೆಜೆಸ್ಟಿಕ್‌ನಲ್ಲಿ ಚಿನ್ನದಂಗಡಿ ಇಟ್ಟು ಹೊಟ್ಟೆ ಸವರಿಕೊಂಡು ಯಾಪಾರ ಮಾಡಿಕಂಡಿರ್‍ತೀನಿ, ಆಯ್ತಾ?’

ಮಕ್ಕಳಾದ ಮೇಲೂ ಗಂಡ ವರದಕ್ಷಿಣೆಯ ಮಾತು ತೆಗೆದದ್ದಲ್ಲದೆ, ಅಪ್ಪ ಅವ್ವನ ಬಡತನದ ಸುದ್ದಿ ಎತ್ತಿದ್ದಕ್ಕೆ, ಚಿನ್ನದಂಗಡಿ ನೆನಪಿಸಿದ್ದಲ್ಲದೆ ತನ್ನ ಬರೀ ಕತ್ತಿನಲ್ಲಿ ಕರಿಮಣಿ ಸರವಷ್ಟೇ ಇಳಿಬಿದ್ದಿರುವುದಕ್ಕೆ, ಇದೀಗ ತಿಂಗಳುಗಟ್ಟಲೆ ಕಣ್ಣಿಗೆ ಕಾಣದಂತೆ ಎತ್ತಲೋ ಲಾರಿ ಹತ್ತುತ್ತಿರುವುದಕ್ಕೆ; ಇದರೊಂದಿಗೆ ಅಗಲಿಕೆಯ ದುಃಖ, ಗಂಡನೆಂಬವ ಆಡಿದ ಮಾತಿಗೆ ಸಿಟ್ಟು ಎರಡೂ ಸೇರಿ ಮುಂದೇನೂ ಉಸುರಲಾಗದೆ ನಿಂತ ಹೆಂಡತಿಯ ಕಣ್ಣಲ್ಲಿ ನೀರಷ್ಟೇ ಉದುರುವುದು-
ಮಾರುತಿ ತಳವಾರನು ನಿಧಾನದಲ್ಲಿ ಲಾರಿಯನ್ನು ಯಾರ್ಡ್ ಆಚೆಯ ರಸ್ತೆಗೆ ಹರಿಸಲು ಆ ಭಾರಿ ವಾಹನದ ಹಿಂದೆ ತಗುಲಿಸಿದ ’ಕೀಪ್ ಡಿಸ್ಟೆನ್ಸ್, ಕೀಪ್ ಸೈಲೆನ್ಸ್’ ಎಂಬ ತಗಡು ಬೋರ್ಡ್ ಅಲ್ಲೇ ನಿಂತ ಹೆಂಡತಿಗೆ ಟಾಟಾ, ಬೈ ಬೈ ಹೇಳುವಂತೆ ತೂಗಾಡುವುದು. ಲಾರಿ ಹೊರಡುವಲ್ಲಿ ಯರಿಲಕ್ಷ್ಮವ್ವ ಮಗಳು ಸರಸಿಯ ಹೆಗಲ ಮೇಲೆ ಕೈ ಹಾಕಿ ಗಾಡಿ ಹೋದ ದಿಕ್ಕನ್ನೇ ನೋಡುತ್ತ ನಿಂತರೆ, ಮಾರುತಿಯ ನಾಯಿ ಸಿಂಗ್ಯಾ ನಾಗಾಲೋಟದಲ್ಲಿ ವಾಹನದ ಹಿಂದೆಯೇ ಓಡುವುದು. ಅದರ ಓಟ ಲಾರಿಯ ಕ್ಯಾಬಿನ್ನಿನ ಗಾಜಿನಲ್ಲಿ ಕಾಣಿಸುವುದು.

ಲಾರಿ ಜರುಗಿ, ಚಕ್ರ ನಾಲ್ಕು ಸುತ್ತು ಉರುಳುವಲ್ಲಿ ಲಕ್ಷ್ಮವ್ವನಿಗೆ ಥಟ್ಟನೆ ಹೊಳೆಯುತ್ತಿದ್ದುದೆಂದರೆ ಬುತ್ತಿಯಲ್ಲಿ ಅನ್ನ ಕಡಿಮೆಯಾಯಿತೇನೋ, ಮೂರು ಹೊತ್ತಿಗಾದರೂ ಬರುವುದೇ? ನಾಲ್ಕು ರೊಟ್ಟಿಯಾದರೂ ಬಡಿದು ಕಟ್ಟಬೇಕಿತ್ತು. ಅಯ್ಯೋ ಸಿವನಾ ಜೋಳದ ಹಿಟ್ಟೇ ಇರಲಿಲ್ಲವಲ್ಲ ಅಂದುಕೊಳ್ಳುವಳು.

ಪೀಣ್ಯ ದಾಟಿ ಅಲ್ಲೊಂದು ಫುಟ್ಪಾತಿನ ಮರದ ನೆರಳಿನ ಕಡೆ ಲಾರಿ ನಿಲ್ಲಿಸಿ ಮಾರುತಿ ಹೆಂಡತಿಯ ಬುತ್ತಿಯೊಡನೆ ಇಳಿಯುವ. ಸಿಂಗ್ಯಾನ ಮುಂದೆ ಅನ್ನವಿಟ್ಟರೆ ಅದು ಪದಾರ್ಥವನ್ನು ಮೂಸಿ ನಿಂತಲ್ಲೇ ನಿಂತು ಯಜಮಾನನನ್ನು ನೋಡುವುದು. ಮಾರುತಿ ಸಿಂಗ್ಯಾನ ತಲೆ ಸವರುತ್ತ ’ನೀ ಹಿಂದಕ್ಕ ನಿಲ್ಲಲೇ ನಾ ಜಲ್ದಿ ಬರಾವ್ಞ’ ಅಂದು ಹೆಂಡತಿಗೆ ಹೇಳದ ಸಮಾಧಾನವನ್ನು ಹೇಳಿ ತಿರುಗಿ ಲಾರಿ ಹತ್ತಲು ಹೋದರೆ ಸಿಂಗ್ಯಾ ಸಿಟ್ಟಿನ ದನಿ ಎತ್ತುವುದು.

* * * * *

ಹೀಗೆ ಮೊನ್ನೆ ಗಂಡನನ್ನು ಕನ್ಯಾಕುಮಾರಿಯತ್ತ ಕಳಿಸಿಕೊಟ್ಟ ಯರಿಲಕ್ಷ್ಮವ್ವನು ಯಶವಂತಪುರದ ತಾನಿರುವ ಬಚ್ಚಲ ಬೀದಿಯ ವಠಾರದ ಕಡೆ ನಡೆಯದೆ, ಲಾರಿ ಯಾರ್ಡಿನ ಆಫೀಸಿನ ಮುಂದೆ ಬಂದಳು. ಯಾರ್ಡಿನ ಹೊರ ಕಾಂಪೌಂಡಿಗೆ ಪ್ರತ್ಯೇಕವೆಂಬಂತೆ ಅಂಟಿಕೊಂಡಿದ್ದ ವಾತಾನುಕೂಲಿತ ಕಛೇರಿಯ ಮುಂದೆ ಇಂಗ್ಲಿಷು ಕನ್ನಡದಲ್ಲಿ ದೊಡ್ಡ ಬೋರ್ಡು. ಅದರಲ್ಲಿ ’ಲಕ್ಷ್ಮೀ ವೆಂಕಟೇಶ್ವರ ಇಂಟರ್ ನ್ಯಾಷನಲ್ ಸರ್ವೀಸಸ್ ಅಂಡ್ ಟ್ರೇಡರ್‍ಸ್’ ಎಂಬ ವಾಕ್ಯ. ಅವ್ವನಿಗೆ ಅರ್ಥವಾಗದ ಆ ವಾಕ್ಯದಲ್ಲಿನ ಒಂದೊಂದೇ ಅಕ್ಷರವನ್ನು ಜೋಡಿಸಿಕೊಂಡು ಸರಸಿಯು ಓದುತ್ತ ನಿಂತಳು.

ಹಗಲಾದರೂ ಝಗಮಗಿಸುವ ಲೈಟು ಬೆಳಕಿನಲ್ಲಿದ್ದ ಅಕ್ಷರಗಳನ್ನು ಎರಡು-ಮೂರು ಸರ್ತಿ ಓದುವಷ್ಟು ಸಮಯ ಸರಸಿಗೆ ಯಾಕಾಯಿತೆಂದರೆ, ಅವ್ವನಿಗೆ ಬಂದ ಘಳಿಗೆಯಲ್ಲೇ, ಕಛೇರಿಯ ಒಳಗೆ ಪ್ರವೇಶವಾಗಲಿಲ್ಲ. ಹೊರಗೆ ನಿಂತ ಸೆಕ್ಯೂರಿಟಿ, ’ಸಾಹೇಬರು ಬಿಜಿ. ವಳಗೆ ಯಾರೋ ಕುಂತು ಮಾತಾಡತವರೇ, ವಸಿ ಕಾಯ್ಬೇಕು’ ಅಂದ.

ಯರಿಲಕ್ಷ್ಮವ್ವ ಒಳಗೆ ಬಂದರೆ ಅಲ್ಲಿ ಸಾಲುಸಾಲಿನಲ್ಲಿ ಕೂತ ಪ್ರಾಯಸ್ಥ ಯುವಕ ಯುವತಿಯರು. ಅವರ ಮುಂದಿನ ಕುರ್ಚಿಯಲ್ಲಿ ಹೊರಗಿಂದ ಬಂದಿರುವ ಕಸ್ಟಮರ್‌ಗಳು. ಎದುರು ಬದುರು ಕೂತವರ ನಡುವೆ ಅಗಲಗಲಕ್ಕೆ ತಲೆಯೆತ್ತಿ ಸ್ಥಾಪಿತವಾಗಿದ್ದ ಕಂಪ್ಯೂಟರ್ ಸಾಲು. ಈ ಸಾಲನ್ನು ದಾಟಿ ಬಂದಲ್ಲಿ ಅಲ್ಲೊಂದು ಕೋಣೆ. ಅದರೊಳಗಿದ್ದ ಬಾರಿಯ ಟೇಬಲಿನ ಹಿಂದೆ ಎತ್ತರದ ಮೆತ್ತನೆಯ ಕುರ್ಚಿಯಲ್ಲಿ ಸುಖಾಸೀನರಾಗಿದ್ದ ಪಿ.ಆರ್.ಓ. ತಲೆತಗ್ಗಿಸಿ ಕಂಪ್ಯೂಟರ್ ವೀಕ್ಷಣೆಯಲ್ಲಿದ್ದವರು ಲಕ್ಷ್ಮವ್ವನತ್ತ ದೃಷ್ಟಿಯಿಡಲು, ಲಕ್ಷ್ಮವ್ವ ಅವರ ಪಾದ ಮುಟ್ಟುವಂತೆ ನಿಂತಲ್ಲೇ ನೆಲಕ್ಕೆ ಹಸ್ತ ಸೋಕಿಸಿ ನೆಟ್ಟಗಾದಳು. ಎಂಟು ವರ್ಷದ ಕೂಸು ಸರಸಿಯೂ ಅದನ್ನೇ ಮಾಡಿ ನಿಂತಿತು.

ಸಾರ್ವಜನಿಕ ಸಂಪರ್ಕಾಧಿಕಾರಿಗಳು ಮಾತಿಲ್ಲದೆ ’ಬಂದದ್ದು ಏನು’ ಎಂಬಂತೆ ತಲೆಯಾಡಿಸಿ ಸೂಚನೆ ನೀಡಲು, ಲಕ್ಷ್ಮವ್ವ ಮೊದಲ ವಾಕ್ಯವಾಗಿ ’ನಾ ಲಕ್ಷ್ಮವ್ವ ಅಂತರೀ. ನಿಮ್ಮ ಕಂಪನಿದಾಗ ಡ್ರೈವರ್ ಮಾರುತಿ ತಳವಾರ ಅಂತ ಅದಾನಲ್ಲರೀ, ಅವನ ಹೆಣ್ತಿರಿ. ಇದು ನನ ಎಂಟು ವರ್ಷದ ಕೂಸರೀ’ ಅಂದಳು. ಪಿ.ಆರ್.ಓ ’ಸರಿ ಬಂದದ್ದು ಹೇಳು’ ಅಂದರು. ತಾನು ಹೇಳುವುದನ್ನೆಲ್ಲ ಬೇಗ ಹೇಳಬೇಕೆಂದು ತಿಳಿದ ಲಕ್ಷ್ಮವ್ವ ಮಗಳ ತಲೆಯ ಮೇಲೆ ಕೈಯಿಟ್ಟು ’ಸಾಹೇಬರಾ ನಿಮ ವ್ಯಾಪಾರದ ದಾರಿಮಾರ್ಗ, ದೇಸ ದೇಸದ ಮೂಲಿಮೂಲಿನೆಲ್ಲ ನನಗಂಡ ಸುತ್ತಾವ್ಞದನಲ್ಲರೀ...’

’ಹೌದು ನಿನಗಂಡ ಡ್ರೈವರ್ ಅಂತ ಗೊತ್ತಲ್ಲ, ಇನ್ನೇನು? ಅವನಿಗೆ ನನ್ನ ಸೀಟು ಬಿಟ್ಟು ಇಲ್ಲಿ ನೌಕರಿ ಮಾಡಿಕೊಂಡು ಕೂರಿಸು ಅಂತ ಹೇಳುವಳಾ ನೀನು’

’ಹಂಗಲ್ಲರೀ, ಅವ್ಞಾ ಯಾಕ ದೇಸಾ ಸುತ್ತಿ ಬರವಲ್ಲಾ, ಸುತ್ತಲೀರೀ...’

’ಮತ್ತೆ ನೀನು ಬಂದದ್ದೇನು’ ಅಂದು ಕೊಂಚ ಕಂದು ಬಣ್ಣಕ್ಕೂ ಕಪ್ಪಗೂ ಗಟ್ಟಿಮುಟ್ಟಾಗಿದ್ದ ಲಕ್ಷ್ಮವ್ವನನ್ನು ಸಾಹೇಬರು ಆಶ್ಚರ್ಯವೆಂಬಂತೆ ನೋಡುತ್ತಲಿರಲು; ನಿಧಾನವಾಗಿ ಅವರ ಮಾತಿನಲ್ಲಿ ಇರಬೇಕಾದ ಅಸಮಾಧಾನಕ್ಕಿಂತ ಒಂದು ಕಿರುನಗೆಯೇ ಮೂಡಿದಂತೆ ಲಕ್ಷ್ಮವ್ವನಿಗೆ ಕಂಡಿತು. ನಾಲಿಗೆಗೆ ಧೈರ್ಯ ತಂದುಕೊಂಡವಳಾಗಿ ’ಸಾಹೇಬರಾ ನನ ಗಂಡ ತಿಂಗಳ ಪಗಾರನೆಲ್ಲ ದೇಸಾನುದೇಸದ ಹಾದಿಬೀದಿಯ ಹೆಂಗಸರ ಬಾಯಾಕ ಹಾಕುವುದಲ್ಲದೆ, ವಠಾರಕ್ಕ ಎಂದೋ ಯಾವತ್ತೋ ಮುಖಾ ತೋರವುನ ಸಮ್ಮಂದ ಇರಲಿ, ಇಲ್ಲದಾಂಗಿರಲಿ ನನಗ ನಿಮ್ಮ ಲಾರಿ ಆಫೀಸಿನ್ಯಾಗ ಒಂದು ಕಸಾ ಗೂಡಿಸೂ ಕೆಲಸಾ ದಯ ಮಾಡಿಸರೀ. ನಿಮ ಪಾದ ನೆನಸ್ಕೋತ ಕಸ ಗೂಡಿಸ್ಕಂತ ಇರತನ್ರಿ..’ ಅಂದಳು.
ಯಾವಾಗ ಸಾಹೇಬರ ಪಾದವು ದೇವರ ಪಾದಕ್ಕೆ ಸಮ ಎಂಬಂತೆ ಲಕ್ಷ್ಮವ್ವ ಮಾತಾಡಿದಳೋ ಆ ಪದವು ದೊಡ್ಡವರ ಕಿವಿಗೆ, ಮನಸ್ಸಿಗೆ ಆಪ್ಯಾಯಮಾನವಾಗಿ ಕೇಳಿಬಂದಿತು. ಆದರೂ ಅಧಿಕಾರಿಗಳು ಇನ್ನೂ ಒಂದೆರಡು ಘಳಿಗೆಯ ಮಾತಿನ ಮುಂದುವರಿಕೆಗಾಗಿ ’ಮದುವೆಗೆ ಮುಂಚೆಯೇ ಗೊತ್ತಿರಲಿಲ್ಲವಾ ನಿನಗಂಡ ಅಂಥವನು ಅಂತ’ ಅಂದರು.

’ಲಗ್ನಕ ಮದಲಾ ಇರಲಿ, ಆದ ಮ್ಯಾಲಿರಲಿ ಆ, ಈ ಹೆಣಮಕ್ಕಳ ಸಾವಾಸ ಬ್ಯಾಡ ಅಂತ ಈ ಗಣಸರಗ ಹೇಳಾವರು ಯಾರಾ ಸರ? ಲಾರಿ ಹತ್ತಿಕಂಡವ್ಞ ಮೂರ್‍ನಾಕು ತಿಂಗಳಾ ಮನೀ ಬಾಗಿಲಾಚೆ ಹೋದಾವ್ಞ ಮೈ ಬಿಸಿ ಹತ್ತಿಕಂಡರ ತಡಕಂತ ಹೆಂಗ ಕುಂಡರತಾನರೀ. ತಣ್ಣೀರಾಗ ಮೈ ಅದ್ದಬೇಕಲ್ಲರೀ...!’

ಪಿ.ಆರ್.ಓ. ಸಾಹೇಬರು ಯರಿಲಕ್ಷ್ಮವ್ವನ ಮಾತಿನ ವರಸೆಗೆ ಅಚ್ಚರಿ ಬಿದ್ದು ನೋಡುತ್ತಿದ್ದ ಕಂಪ್ಯೂಟರ್ ಪರದೆ ಬಿಟ್ಟು ಕುರ್ಚಿಯ ಹಿಂದಕ್ಕೆ ಒರಗಿದರು. ಆಶ್ಚರ್ಯವೆಂದರೆ ಲಕ್ಷ್ಮವ್ವನ ಮಾತು ತಮಗೂ ಅನ್ವಯವಾಗುವಂತೆ ಕಂಡುಬಿಟ್ಟಿತು. ತಲೆಯಲ್ಲಿ ಒಂದು ಘಳಿಗೆಯ ಮಿಂಚಿನ ಶಾಖದ ಸೆಳಕು ಸುಳಿದಂತಾಯಿತು. ಈ ಚಳುಕಿನಿಂದ ಹೊರಬಂದವರಾಗಿ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಎದುರು ನಿಂತ ಹೆಂಗಸನ್ನು ಸಮಗ್ರ ವೀಕ್ಷಿಸಿ; ಇನ್ನೂ ಪ್ರಾಯವಿರುವ ಈ ಹೆಂಗಸಿಗೆ ಲಾರಿ ಯಾರ್ಡಿನಲ್ಲಿ ಕಸ ಗುಡಿಸುವ ಕಾಯಕ ಕೊಟ್ಟುಬಿಟ್ಟರೆ ಇವಳನ್ನು ಇಲ್ಲಿಯ ನೂರಾರು ಡ್ರೈವರ್, ಕ್ಲೀನರುಗಳ ಕಣ್ಣು, ಕೈಯ್ಯಿಂದ ತಾವೇ ಕಾಯಬೇಕಾಗುತ್ತದೆಂದುಕೊಂಡರು.
ನಿತ್ಯವೂ ನೂರಾರು ವಾಹನಗಳು ದೇಶದ ಮೇಲೆಲ್ಲ ಹಾಯುವ, ವಾಪಸಾಗುವ ಈ ಲಾರಿ ಯಾರ್ಡಿನಲ್ಲಿ ಇಂಥ ನೇರ ನೆಟ್ಟಗಿನ ಹೆಂಗಸರು ಇದ್ದರೆ ಕಷ್ಟ. ಇದ್ದರೆ ಹೊರಗೆ ಹೋದ ಡ್ರೈವರ್, ಕ್ಲೀನರ್‌ಗಳು ದಾರಿಯುದ್ದದ ಡಾಬಾಗಳಲ್ಲಿ ಎದ್ದುಬಿದ್ದು ಗತಿ ಕೆಡಿಸಿಕೊಂಡು ಬರುವುದನ್ನೇ ಇಲ್ಲಿಯೂ ಮುಂದುವರೆಸಬಹುದೆಂಬ ಆತಂಕದಲ್ಲಿ, ಲಾರಿ ಅಂಗಳದಲ್ಲಿ ಇಂಥ ಹೆಂಗಸಿನ ಸುಳಿವೇ ಇರಲಾಗದೆಂದು, ಗೊತ್ತಿದ್ದ ಮುನಿಸಿ ಪಾಲಿಟಿಯ ಕೌನ್ಸಿಲರಿಗೆ ಮೊಬೈಲ್ ಹಚ್ಚಿದರು.

ಹಾಗೆ ಮೊಬೈಲ್ ಹಚ್ಚುವಲ್ಲಿ, ಅರೇ ಇದ್ದಕ್ಕಿದ್ದಂತೆ ಎದುರು ಬಂದು ನಿಂತ ಹೆಂಗಸಿಗೆ ಕೆಲಸ ಖಾಲಿ ಇಲ್ಲವೆಂದು ಕೈಯ್ಯಲ್ಲಾಡಿಸಿ, ಅಧಿಕಾರ ದರ್ಪ ತೋರಿಸಿ ಸಾಗ ಹಾಕಬಹುದಿತ್ತಲ್ಲ. ಇವಳಿಗೆ ಸಹಾಯ ಮಾಡ ಹೊರಟಿರುವುದರ ತಮ್ಮ ಔದಾರ್ಯದ ಮೂಲ ಯಾವುದೆಂದುಕೊಂಡರು.

ಮೊಬೈಲಿಂದ ಬಂದ ಮಿತ್ರರ ದನಿ ’ಅಯ್ಯೋ ಸಾರ್ ನಮ್ಮ ಮುನಿಸಿಪಾಲಿಟಿಯಲ್ಲಿ ಕಸ ಗುಡಿಸುವವರಿಗೇ ಸಂಬಳವಿಲ್ಲ. ಈ ಸಿಟಿಯ ಜನ ನೆಟ್ಟಗೆ ನೀರಿನ ಕಂದಾಯ, ರಸ್ತೆ ರಿಪೇರಿ, ಮನೆಕಂದಾಯ ಅಂತ ಕಟ್ಟುವುದೇ ಇಲ್ಲವಲ್ಲ ಸಾರ್. ಈ ಲೋ ಇನ್‌ಕಮ್‌ನವರದೊಂದು ಕಷ್ಟ. ಹೈ ಇನ್‌ಕಮ್‌ನವರದೊಂದು ದಂಧೆ. ಮುನಿಸಿಪಾಲಿಟಿ ಕಷ್ಟ ನಿಮಗೇ ಗೊತ್ತಲ್ಲ’ ಅನ್ನುವಲ್ಲಿ ಪಿ.ಆರ್.ಓ. ಯಲಾ ಇದೀಗ ಒಂದು ಘಳಿಗೆ ಹಿಂದೆ ಈ ಹೆಂಗಸು ನನ್ನಂಥ ಪುರುಷ ಸಮೂಹದ ಒಳಮರ್ಮ ಬಿಚ್ಚಿಟ್ಟಂತೆ ಈ ಕೌನ್ಸಿಲರ್ ನಮ್ಮಂಥವರ ಕಂಪೆನಿಗಳ ಹಗಲು ದಂಧೆಯನ್ನು ನನಗೇ ಹೇಳುತ್ತಿರುವನಲ್ಲ ಅಂದುಕೊಳ್ಳುತ್ತ ಅದೇ ಮಿತ್ರರ ಮುಂದಿನ ಮಾತಿಗೆ ಕಿವಿಗೊಟ್ಟರು.

’...ಆದರೂ ನೀವು ನಮ್ಮೊಂದಿಗೆ ಮಾತಾಡುವ ದೊಡ್ಡ ಮನಸ್ಸು ಮಾಡಿರುವುದರಿಂದ ಪಾಲಿಕೆ ವ್ಯಾಪ್ತಿಯ ಒಂದು ಉದ್ಯೋಗದ ವಿಚಾರ ಹೇಳಿಬಿಡುವೆ. ಅದು ಸರಿ, ಕೆಲಸಾ ಕೇಳಿಕೊಂಡು ಬಂದಿರುವ ಆಸಾಮಿ ಯಾರು...’

’ಉತ್ತರ ಕರ್ನಾಟಕದವರು ಅನ್ನಿ. ಯಾವ ಕೆಲಸವಾದರೂ ಮಾಡುವಂಥವರು...’

’ಸರಿ ನಮ್ಮ ಹರಿಶ್ಚಂದ್ರಾ ಘಾಟ್ ಇದೆಯಲ್ಲ. ಅಲ್ಲೊಬ್ಬ ಗುಂಡಿ ತೋಡುತ್ತ, ಹೆಣ ಸುಡುತ್ತ, ಹೆಂಡತಿ ಮಕ್ಕಳೊಂದಿಗಿದ್ದವ ಅಲ್ಲೆಲ್ಲೋ ಪ್ಯೂನ್ ಕೆಲಸ ಸಿಕ್ಕಿತು ಅಂತ ಜಾಗ ಖಾಲಿ ಮಾಡಿಬಿಟ್ಟಿದ್ದಾನೆ. ಸತ್ತವರಿಗೆ ತಾವೇ ಗುಂಡಿ ತೋಡಿಕೊಳ್ಳಬೇಕಂತ ಜನಾ ಗಲಾಟೆ ಮಾಡ್ತಾ ಇದ್ದಾರೆ. ಈ ಬೆಂಗಳೂರಿನ ಜನಕ್ಕೆ ಗುಂಡಿ ತೋಡುವ ಕಷ್ಟದ ಕೆಲಸ ಎಲ್ಲಿಂದ ಬರಬೇಕು ಹೇಳಿ. ಇವರು ತೋಡುವ ಗುಂಡಿಯೇ ಬೇರೇ ಅನ್ನಿ ಅಂದು ನಕ್ಕು, ಅದು ಸರಿ, ನಿಮ್ಮೊಂದಿಗೆ ಕೆಲಸಾ ಕೇಳಿಕೊಂಡು ಬಂದಿರುವುದು ಹೆಂಗಸಾ, ಗಂಡಸಾ...’

ಪಿ.ಆರ್.ಓ ಮತ್ತೊಮ್ಮೆ ಯರಿಲಕ್ಷ್ಮವ್ವನನ್ನು ಫೋನ್ ಹಿಡಿದಿರುವಲ್ಲೇ ಕಡೆಗಣ್ಣಿಂದ ವೀಕ್ಷಿಸಿ, ’ಅದು ಹೆಂಗಸೇ ಅನ್ನಿ. ಆದರೆ ಧೈರ್ಯಸ್ಥೆ. ಬೇಕಾದರೆ ಅವಳ ಗಂಡನೊಂದಿಗೆ ನಮ್ಮಲ್ಲೇ ಇರುವ ಇನ್ನೊಬ್ಬ ಗಂಡಸನ್ನೂ ಸ್ಮಶಾನದಲ್ಲಿರುವಂತೆ ತಾಕೀತು ಮಾಡಿ ಕಳಿಸಬಹುದು’ ಅಂದರು. ಕೌನ್ಸಿಲರ್ ಮಿತ್ರರು ’ಸಾಹೇಬರೇ ಈಗಲೇ ಹೇಳಿಬಿಡುವೆ. ಅಲ್ಲಿ ಹೆಣಾ ತಂದವರಿಂದ ಕಾಸು, ಕರಿಮಣಿ, ಕಮಾಯಿ ಬಿಟ್ಟರೆ ಮುನಿಸಿಪಾಲಿಟಿಯಿಂದ ಸಂಬಳವಿಲ್ಲ. ಅದೆಲ್ಲ ಆಮೇಲೆ. ಮೊದಲು ಅವರ ಕೆಲಸ ಹೆಂಗಂತ ನೋಡುವಾ. ಈ ಕೆಲಸದ ಮೇಲೆ ಬಂದವರು ಬಹಳ ದಿನ ಇರುವುದಿಲ್ಲ. ಸದ್ಯಕ್ಕೆ ಟೆಂಪೊರರಿ ಅಂತ ಸ್ಮಶಾನದ ಸಂಪಾದನೆಯಲ್ಲೇ ಇರಲಿ, ಏನಂತೀರಿ’ ಅಂದರು.

ಮಾರುತಿ ತಳವಾರನ ಪತ್ನಿಯನ್ನು ಲಾರಿ ಅಂಗಳದಿಂದ ದೂರ ತಳ್ಳುವುದೇ ಮಾರ್ಗೋಪಾಯವೆಂದು ಬಗೆದ ಪಿ.ಆರ್.ಓ., ಲಕ್ಷ್ಮವ್ವನಿಗೆ ಮುನಿಸಿಪಾಲಿಟಿಯ ಉದ್ಯೋಗದ ಅವಕಾಶ ಅರುಹಿದರು. ಲಕ್ಷ್ಮವ್ವ ಸ್ಮಶಾನದಲ್ಲಿ ತನಗೆ ಗುಂಡಿ ತೋಡುವ, ಸೌದೆ ಜೋಡಿಸುವ ನೌಕರಿ ಆಗಿಬರುತ್ತದೆಂದೂ, ಗಂಡ ಜೇವರ್ಗಿಯಲ್ಲಿ ತನ್ನ ಲಗ್ನವಾಗುವಾಗ ತನ್ನಪ್ಪ ಊರಾಚೆಯವರ ಹೊಲದಲ್ಲಿ ಕೂಲಿ ಮಾಡಿಕೊಂಡಿರುವಲ್ಲಿ ತಮ್ಮದೊಂದೇ ಸಂಸಾರವಾಗಿತ್ತೆಂದೂ, ಅದರ ದಂಡೆಗೇ ಊರಸ್ಮಶಾನವಿತ್ತೆಂದೂ, ಅಲ್ಲೇ ತಾನು ಆಡಿ ಬೆಳೆದದ್ದೆಂದೂ ಇದೀಗ ಬೆಂಗಳೂರು ಸಿಟಿ ಮಧ್ಯದ ಸ್ಮಶಾನ ದಲ್ಲಿರುವುದು ತನಗೇನೂ ಭಯವಿಲ್ಲವೆಂದುಬಿಟ್ಟಳು.

ಲಕ್ಷ್ಮವ್ವ ತನ್ನ ಬಾಲ್ಯ ಜೀವನವನ್ನು ಹೇಳುವಲ್ಲಿ ಸಾಹೇಬರೇ ಕೊಂಚ ಹೆದರಿದವ ರಾಗಿ, ಅವಳ ಗಂಡ ಮಾರುತಿಯೊಂದಿಗೆ ಗುಳೆ ಬಂದು ಯಾರ್ಡಿನಲ್ಲಿ ದಿನವೂ ಬಂದ ಲಾರಿಗಳನ್ನು ತೊಳೆಯುತ್ತಿದ್ದ ಅಲ್ಲಾಭಕ್ಷ ಲಾಡಸಾಬ ಲಗಾಟಿಯನ್ನು ಈ ಒಬ್ಬೊಂಟಿ ಹೆಂಗಸಿನ ಸಹಾಯಕ್ಕೆಂದು ಕಳಿಸಿದರು. ಪಿ.ಆರ್.ಓ. ಸಾಹೇಬರು ಲಕ್ಷ್ಮವ್ವನಿಗೆ ಅವಳು ಕೇಳಿದ ಕ್ಷಣದಲ್ಲಿ ಎಂಥದೋ ನೌಕರಿ ದೊರಕಿಸಿಕೊಡುವಲ್ಲಿ ಅವರಿಗೆ ಬಂದ ಅನುಮಾನವೆಂದರೆ ಮಾರುತಿ ತಳವಾರನು ಎಂದೂ ತಮಗೆ ರೋಗಪೀಡಿತನಂತೆ ಕಾಣಿಸಲಿಲ್ಲವಲ್ಲ! ಔಷಧಿ ಮಾತ್ರೆಗೆಂದು ಭತ್ಯೆ ಕೇಳಿಯೇ ಇಲ್ಲವಲ್ಲ! ಇಷ್ಟರ ಮೇಲೆ ಈ ಚಾಲಾಕಿ, ಧೈರ್ಯಸ್ಥ ಹೆಂಗಸು ಬೇಕಂತಲೇ ಗಂಡನ ಮೇಲೆ ದೂರು ಹೊರಿಸಿ ಒಂದು ನೌಕರಿ ಗಿಟ್ಟಿಸಿ, ಕಾಸು ಮಾಡಿ ತನಗಿಂತಲೂ ಅಂದಚಂದದಿಂದ ಇರುವ ಹೆಣ್ಣು ಕೂಸನ್ನು ಓದಿಸುವ, ಸಾಕುವ ಉಪಾಯದಲ್ಲಿ ಹೀಗೆ ಎಂಥ ಕೆಲಸವಾದರೂ ಸರಿ ಅಂತ ಬಂದಿರಬಹುದೇ ಅಂದುಕೊಂಡರು.

ಅಷ್ಟರಲ್ಲಿ ಲಕ್ಷ್ಮವ್ವ ’ಸಾಹೇಬರಾ ನನಗ ದೇವರು ಬ್ಯಾರೆಯಲ್ಲ, ನೀವು ಬ್ಯಾರೆಯವರಲ್ಲರೀ’ ಅಂದು ಬಂದಾಗ ಹೇಳಿದ್ದನ್ನೇ ಹೇಳಿ, ತಿರುಗಿ ನಿಂತಲ್ಲೇ ಅವರ ಪಾದಕ್ಕೆರಗಿದಂತೆ ಮಾಡಿ; ಅಲ್ಲೇ ಏನೂ ಅರಿಯದೆ ಹಳೆಯ ಲಂಗದಲ್ಲಿ ಮುಗ್ಧ ಮುಖಬಿಟ್ಟು ಎಂದೂ ಕಾಣದ ಹೊಸ ಲೋಕವೊಂದನ್ನು ನೋಡುವವಳಂತೆ ನಿಂತ ಸರಸಿಗೂ ಸಾಹೇಬರಿಗೆ ನಮಸ್ಕಾರ ಮಾಡುವಂತೆ ಹೇಳಿದಳು.

ಲಕ್ಷ್ಮವ್ವ ಮಗಳೊಡನೆ ಆ ಏಕಾಂತದ ಕೋಣೆಯಿಂದ ಹೊರಗಾಗುವಲ್ಲಿ ಸಾಹೇಬರು ’ಯಲಾ ಈ ಹೆಂಗಸಿನ ನೌಕರಿಯ ಅಹವಾಲು ಇಷ್ಟು ಬೇಗ ಬಗೆಹರಿಯಿತೇ, ಇವಳನ್ನು ನಿಲ್ಲಿಸಿಯೇ ಮಾತಾಡಿಸಿ ಕಳಿಸಿದೆನಲ್ಲ, ಕೂರಲು ಹೇಳಬೇಕಿತ್ತು. ಹಾಗೆ ಹೇಳಿದ್ದರೆ ಇನ್ನೂ ಒಂದು ಘಳಿಗೆ ಮಾತು ಮುಂದುವರಿಯುತ್ತಿತ್ತೇನೋ’ ಎಂಬ ಭಾವವೊಂದು ಅವರ ಮನದಲ್ಲಿ ಆ ಕ್ಷಣಕ್ಕೆ ಮೂಡಿ ಮಾಯವಾಯಿತು.

* * * * *

 

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...