ಓದುಗರ ಮನೆಬಾಗಿಲಿಗೆ ಪುಸ್ತಕ: ಸಾಧನೆಯ ಹಾದಿಯಲ್ಲಿ ಕರ್ನಾಟಕ ಗ್ರಂಥಾಲಯ ಇಲಾಖೆ


ಕೋವಿಡ್-19 ಸಂಕಷ್ಟದಿಂದಾಗಿ ಜನರು ಮನೆಯಿಂದ ಹೊರಬರಲು ಹೆದರುವ ಸ್ಥಿತಿ ಎದುರಾಗಿದೆ. ಎಲ್ಲ ಕ್ಷೇತ್ರಗಳು ಸಮಸ್ಯೆಗೆ ಸಿಲುಕಿವೆ. ಆದರೆ, ಈ ಲಾಕ್ ಡೌನ್ ಸಮಯದಲ್ಲೂ ಗ್ರಂಥಾಲಯ ಇಲಾಖೆ ಜನರಿಗೆ ಪುಸ್ತಕಗಳನ್ನು ತಲುಪಿಸುವ ಸಲುವಾಗಿ ಹೊಸ ಯೋಜನೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎನ್ನುತ್ತಾರೆ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ. ಲಾಕ್ ಡೌನ್ ಅವಧಿಯಲ್ಲಿ ಗ್ರಂಥಾಲಯ ಇಲಾಖೆ ಕಾರ್ಯವೈಖರಿಯ ಕುರಿತು ಪತ್ರಕರ್ತೆ ಮಂಜುಳಾ ಹುಲಿಕುಂಟೆ ಅವರ ಬರಹ ಇಲ್ಲಿದೆ.

ಲಾಕ್ ಡೌನ್.. ಲಾಕ್ ಡೌನ್.. ಲಾಕ್ ಡೌನ್.. ಕಳೆದ ಒಂದೂವರೆ ವರ್ಷದಿಂದ ಈ ಶಬ್ದ ಮನುಷ್ಯರನ್ನ ತಮ್ಮದೇ ಪಂಜರಗಳಲ್ಲಿ ಮುದುರಿಕೊಳ್ಳುವಂತೆ ಮಾಡಿದೆ. ಸಾಂಕ್ರಾಮಿಕ ರೋಗ ಕೋವಿಡ್-19ನಿಂದಾಗಿ ಇಡೀ ದೇಶವೇ ನಲುಗಿದ್ದು, ನಿತ್ಯದ ಬದುಕು ವಿಚಿತ್ರ ದಿನಚರಿಗೆ ಒಗ್ಗಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಶಾಲಾ-ಕಾಲೇಜುಗಳ ಬಾಗಿಲು ಮುಚ್ಚಿ ವಿದ್ಯಾರ್ಥಿಗಳೊಂದಿಗೆ ಅವರ ಪೋಷಕರು ಮಾನಸಿಕವಾಗಿ ಕುಗ್ಗುವಂತಾಗಿದೆ. ಎಷ್ಟೋ ಜನರ ಉದ್ಯೋಗಗಳು ಸಣ್ಣ ಪುಟ್ಟ ವ್ಯವಹಾರಗಳು ನೆಲಕಚ್ಚಿ ಕೂತಲ್ಲಿಯೇ ಕೊರಗುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಮನೋರಂಜನಾ ಕ್ಷೇತ್ರ ಹೊಸ ಆವಿಷ್ಕಾರಗಳಿಗೆ ಒಳಗಾಗುತ್ತಾ ಜನರನ್ನು ಆ ಕಿನ್ನತೆಯಿಂದ ಹೊರತರುವ ಕಾರ್ಯದಲ್ಲಿ ನಿರತವಾಗಿವೆ. ಆದರೇ ಇದೆಲ್ಲಕ್ಕಿಂತಲೂ ಮುಖ್ಯವಾದದ್ದು ಓದು, ಪುಸ್ತಕಗಳ ಓದನ್ನೇ ಹವ್ಯಾಸವಾಗಿಸಿಕೊಂಡ ಲಕ್ಷಾಂತರ ಮಂದಿಗೆ ಓದಲು ಪುಸ್ತಕಗಳಿಲ್ಲದೇ ಸಾರ್ವಜನಿಕ ಗ್ರಂಥಾಲಯಗಳಿಗೆ ಪ್ರವೇಶವಿಲ್ಲದೇ ಮತ್ತೊಂದು ರೀತಿಯ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಗ್ರಂಥಾಲಯ ಇಲಾಖೆ ತನ್ನ ಓದುಗರನ್ನು ತಲುಪಲು ಏನು ಮಾಡುತ್ತಿಲ್ಲವೇ ಎಂಬ ಪ್ರಶ್ನೆ ಎದುರಾಗಬಹುದು. ಇದೇ ಪ್ರಶ್ನೆಯ ಬೆನ್ನು ಬಿದ್ದಾಗ ನಮಗೆ ಸಿಕ್ಕ ಮಾಹಿತಿ ಹಾಗೂ ಕರ್ನಾಟಕ ಗ್ರಂಥಾಲಯ ಇಲಾಖೆಯ ಕಾರ್ಯವೈಖರಿಯ ಮೇಲೆ ಬೆಳಕು ಚೆಲ್ಲುವ ಹಿನ್ನೆಲೆಯಲ್ಲಿ ಈ ಲೇಖನ ಮೂಡಿಬಂದಿದೆ.

ಹೌದು.. ಲಾಕ್ ಡೌನ್ ಪ್ರತೀ ಕ್ಷೇತ್ರಗಳನ್ನೂ ಹೊಸ ಸವಾಲುಗಳಿಗೆ ಗುರಿಮಾಡಿದೆ. ಅದನ್ನು ಸಮರ್ಥವಾಗಿ ಎದುರಿಸಿ ಹೊಸ ಆವಿಷ್ಕಾರಗಳೊಂದಿಗೆ ಹಲವು ಕ್ಷೇತ್ರಗಳು ಕಾರ್ಯನಿರ್ವಹಿಸುತ್ತಿವೆ. ಇದೇ ಸಾಲಿನಲ್ಲಿ ನಮ್ಮ ಕರ್ನಾಟಕ ಗ್ರಂಥಾಲಯ ಇಲಾಖೆ ಕೂಡ ಕಾರ್ಯನಿರ್ವಹಿಸುತ್ತಿದೆ. ಓದುಗರನ್ನು ತಲುಪುವ ಸಲುವಾಗಿ ಹೊಸ ಆವಿಷ್ಕಾರಗಳೊಂದಿಗೆ ಸಿದ್ಧವಾಗಿದೆ. ಈ ಬಗ್ಗೆ ಖುದ್ದು ಗ್ರಂಥಾಲಯ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ ಅವರೇ ಹಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಲಾಕ್ ಡೌನ್ ಶುರುವಾದಾಗಲಿಂದಲೂ ಗ್ರಂಥಾಲಯ ಇಲಾಖೆ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ. ಜನರನ್ನು ತಲುಪಲು ಹೊಸದಾದ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ನಿರ್ದೇಶಕರೇ ಹೇಳುವಂತೆ ಈ ಹಿಂದಿಗಿಂತಲೂ ಹೆಚ್ಚಿನ ಸ್ಪಂದನೆ ಮತ್ತು ಒಳ್ಳೆಯ ಕಾರ್ಯಗಳು ನಡೆಯುತ್ತಿದ್ದು, ಓದುಗರಿಗೆ ಸರಳ ರೀತಿಯಲ್ಲಿ ಪುಸ್ತಕಗಳನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ. ಲಾಕ್ ಡೌನ್ ಕಿರಿಕಿರಿಯಿಂದ ಜನರು ಮಾನಸಿಕವಾಗಿ ಕುಗ್ಗದಂತೆ ಆರೋಗ್ಯಕರ ಜೀವನ ಶೈಲಿ ರೂಪಿಸಿಕೊಳ್ಳುವಲ್ಲಿ ಪುಸ್ತಕಗಳು ಅತ್ಯಂತ ಮುಖ್ಯವಾದವು. ಆದರೆ ಸರ್ಕಾರದ ನಿಯಮಗಳು, ಮತ್ತು ಸಾಮಾಜಿಕ ಅಂತರದ ಕಾರಣದಿಂದಾಗಿ ಪುಸ್ತಕಗಳನ್ನು ನೇರವಾಗಿ ತಲುಪಿಸಲು ಸಾಧ್ಯವಾಗುವುದಿಲ್ಲ ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗ್ರಂಥಾಲಯಗಳು ಬಾಗಿಲು ಮುಚ್ಚಿದೆ, ಆದರೂ ಜನರ ಓದಿನ ಅಭಿರುಚಿಗೆ ತಕ್ಕನಾಗಿ ಮತ್ತು ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿ ಬೆಳೆಸುವಲ್ಲಿ ಗ್ರಂಥಾಲಯ ಇಲಾಖೆ ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯದ ಅಂಕಿ ಅಂಶಗಳ ಸಮೇತವಾಗಿ ಮಾಹಿತಿಯೂ ದೊರಕುತ್ತಿದೆ. ಹೊಸ ತಂತ್ರಜ್ಞಾನದೊಂದಿಗೆ ಓದುಗ ಲೋಕವನ್ನು ಬೆಸೆಯುವ ಕಾರ್ಯವೂ ನಡೆಯುತ್ತಿದೆ. ಪುಸ್ತಕಗಳ ಓದನ್ನು ಡಿಜಿಟಲ್ ವ್ಯವಸ್ಥೆಯೊಂದಿಗೆ ಸಂಯೋಜಿಸುವ ಮೂಲಕ ಓದುಗರಲ್ಲಿ ಒಂದಿಷ್ಟು ನಿರಾಳತೆಯನ್ನು ಮೂಡಿಸುತ್ತಿದ್ದಾರೆ.

ಗ್ರಂಥಾಲಯ ಇಲಾಖೆ ಗ್ರಾಮಾಂತರ ಹಾಗೂ ನಗರಕೇಂದ್ರಿತ ಗ್ರಂಥಾಲಯ ಸೇರಿದಂತೆ ಪ್ರತೀ ಹಂತದಲ್ಲೂ ಹೆಚ್ಚೆಚ್ಚು ಓದುಗರನ್ನು ತಲುಪುವಂತೆ ಕಾರ್ಯ ರೂಪಿಸುತ್ತಿದ್ದಾರೆ. ಸರ್ಕಾರಿ ವೆಬ್ ಸೈಟ್ ಗಳ ಮೂಲಕ ಉಚಿತವಾಗಿ ಸದಸ್ಯತ್ವ ನೀಡುವ ಮೂಲಕ ಅವರ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಪೂರೈಸುತ್ತಿದ್ದಾರೆ. https://www.karnatakadigitalpubliclibrary.org ಎಂಬ ವೆಬ್ ಸೈಟ್ ಮೂಲಕ ಗ್ರಂಥಾಲಯ ಇಲಾಖೆಯ ನೂತನ ಕಾರ್ಯಕ್ರಮಗಳ ಜೊತೆಗೆ ತಮ್ಮಿಷ್ಟದ ಪುಸ್ತಕಗಳನ್ನು ಓದಬಹುದಾಗಿದೆ.

ಇನ್ನೂ ಓದುಗರ ಮನೆಬಾಗಿಲಿಗೆ ಉಚಿತವಾಗಿ ಪುಸ್ತಕಗಳನ್ನು ತೆಗೆದುಕೊಂಡು ಹೋಗುವ ಕಾರ್ಯ ಮಾಡುತ್ತಿದ್ದೇವೆ ಇದಕ್ಕೆ ಒಳ್ಳೆಯ ಸ್ಪಂದನೆ ಕೂಡಾ ಸಿಗುತ್ತಿದೆ ಎನ್ನುತ್ತಾರೆ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ. ಜೊತೆಗೆ ಡಿಜಿಟಲ್ ವ್ಯವಸ್ಥೆಯ ಮೂಲಕ ಇ-ಬುಕ್ಸ್, ಆಡಿಯೋ ಬುಕ್ಸ್ ಹಾಗೂ ವಿಡಿಯೋ ಬುಕ್ಸ್ ಗಳಾಗಿ ವಿಂಗಡಿಸಿ ಜನರ ಅಭಿರುಚಿಗೆ ತಕ್ಕದಾದ ರೀತಿಯಲ್ಲಿ ಪುಸ್ತಕಗಳನ್ನು ಒದಗಿಸಲಾಗುತ್ತಿದೆ ಎನ್ನುತ್ತಾರೆ.

ದೇಶಾದ್ಯಂತ ಆರಂಭಿಸಿದ ಗ್ರಂಥಾಲಯ ಡಿಜಿಟಲ್ ವ್ಯವಸ್ಥೆಯನ್ನು ಕರ್ನಾಟಕ ಗ್ರಂಥಾಲಯ ಇಲಾಖೆ ಅತೀ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ಇಳಿಸಿದ್ದು, ಲಕ್ಷಾಂತರ ಓದುಗರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಈ ಸಂಕಷ್ಟದ ದಿನಗಳಲ್ಲಿ ಜನರ ಓದಿನ ಹವ್ಯಾಸಕ್ಕೆ ತೊಂದರೆಯಾಗದಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸ್ಪಂದಿಸುತ್ತಿರುವುದು ಪ್ರಶಂಸನೀಯ ಸಂಗತಿ.

ಗ್ರಂಥಾಲಯ ಇಲಾಖೆಯ ಕುರಿತಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...