‘ಒಳ್ಳೆಯ ಸಾಹಿತ್ಯ ಓದುವುದೆಂದರೆ ಒಳ್ಳೊಳ್ಳೆ ಮನಸ್ಸುಗಳನ್ನು ಓದಿದಂತೆ’


ಪತ್ರಿಕೋದ್ಯಮ, ಛಾಯಾಗ್ರಹಣ, ಸಾಹಿತ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಡಿ.ಜಿ. ಮಲ್ಲಿಕಾರ್ಜುನ. ಇವರ ‘ಯೋರ್‍ಡಾನ್ ಪಿರೆಮಸ್’ ಪ್ರವಾಸ ಕಥನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ‘ಬುಕ್ ಬ್ರಹ್ಮ’ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ಬುಕ್ ಬ್ರಹ್ಮ: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ನಿಮ್ಮ ಪ್ರತಿಕ್ರಿಯೆ?
ಡಿ.ಜಿ.ಮಲ್ಲಿಕಾರ್ಜುನ:
“ಯೋರ್ದಾಹನ್ ಪಿರೆಮಸ್-ಜೋರ್ಡಾನ್ ಈಜಿಪ್ಟ್ ಪ್ರವಾಸ ಕಥನ” ಪುಸ್ತಕ ಬರೆದಾಗ, ಲೇಖನಗಳ ನಡುನಡುವೆ ಚಿತ್ರಗಳು ಬರಬೇಕು. ಆಗ ಓದುಗರಿಗೆ ಚಿತ್ರರೂಪದಲ್ಲಿ ಪ್ರವಾಸ ಕಥನವನ್ನು ಓದುತ್ತಾ ನೋಡಲು ಅಥವಾ ನೋಡುತ್ತಾ ಓದಲು ಚೆನ್ನಾಗಿರುತ್ತದೆ ಎಂಬುದು ನನ್ನ ಬಯಕೆಯಾಗಿತ್ತು. ನವಕರ್ನಾಟಕ ಪ್ರಕಾಶನದವರು ತುಂಬಾ ಇಷ್ಟಪಟ್ಟು ಆಸಕ್ತಿವಹಿಸಿ ಸುಂದರವಾಗಿ ಪ್ರಕಟಿಸಿದರು. ಹೆಚ್ಚೆಚ್ಚು ಜನರಿಗೆ ಪುಸ್ತಕ ತಲುಪಲಿ ಎಂಬುದಷ್ಟೇ ನನ್ನ ನಿರೀಕ್ಷೆಯಾಗಿತ್ತು. ನನಗೆ ಪ್ರಶಸ್ತಿ ಬಗ್ಗೆ ಕಲ್ಪನೆಯೂ ಇರಲಿಲ್ಲ. 2019 ನೆಯ ವರ್ಷದ ಪುಸ್ತಕ ಬಹುಮಾನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದಾಗ ಅಚ್ಚರಿ ಮತ್ತು ಸಂತೋಷ ಏಕಕಾಲದಲ್ಲಾಯಿತು. ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ನನ್ನ ನೆಚ್ಚಿನ ಲೇಖಕರಾದ ವಸುಧೇಂದ್ರ, ಚ.ಹ.ರಘುನಾಥ್, ವಸುಮತಿ ಉಡುಪ ಮೊದಲಾದವರಿರುವುದು ನನ್ನನ್ನು ವಿನೀತನನ್ನಾಗಿಸಿದೆ. ಜಯಂತ ಕಾಯ್ಕಿಣಿ ಅವರು ಹೇಳುವಂತೆ `ನಾವೆಲ್ಲಾ ಮ್ಯಾರೆಥಾನ್ ಓಟದಲ್ಲಿದ್ದೇವೆ. ಈ ಪ್ರಶಸ್ತಿ ಪುರಸ್ಕಾರಗಳೆಲ್ಲ ಓಟಗಾರನಿಗೆ ದಾರಿಯಲ್ಲಿ ಶರಬತ್, ಗ್ಲೂಕೋಸ್ ಕೊಟ್ಟು ಭೇಷ್, ಭೇಷ್ ಎನ್ನುವ ಬೆನ್ತಟ್ಟುವ ರೀತಿ. ನಾವಲ್ಲೇ ಜ್ಯೂಸ್ ಆಸ್ವಾದಿಸುತ್ತಾ ನಿಲ್ಲಬಾರದು. ಓಡುತ್ತಲೇ ಇರಬೇಕು..' ಈ ಎಚ್ಚರಿಗೆ ನನ್ನ ಮನದಲ್ಲಿದೆ.

ಬುಕ್ ಬ್ರಹ್ಮ: ಸಾಹಿತ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ..?
ಡಿ.ಜಿ.ಮಲ್ಲಿಕಾರ್ಜುನ:
ಓದುವುದು ಮತ್ತು ಛಾಯಾಗ್ರಹಣ ನನ್ನ ಹವ್ಯಾಸಗಳು. ಛಾಯಾಗ್ರಹಣ ಎಂಬ ಹವ್ಯಾಸ ನನ್ನನ್ನು ಹಲವಾರು ಸ್ಥಳಗಳಿಗೆ ಕೊಂಡೊಯ್ದಿದೆ. ರಾಜ್ಯದ ನಾನಾ ಸ್ಥಳಗಳು, ದೇಶದ ಹಲವು ಮೂಲೆಗಳನ್ನು ತೋರಿಸಿದೆ. ಕ್ಯಾಮೆರಾ ಎಂಬ ಪಾಸ್ ಪೋರ್ಟ್ 19 ದೇಶಗಳನ್ನು ಸುತ್ತಿಸಿದೆ. ಕುತೂಹಲ, ಅಚ್ಚರಿಯಿಂದ ಹೋದೆಡೆಯೆಲ್ಲಾ ಪರಿಸರ, ಸೌಂದರ್ಯ, ಸಂಸ್ಕೃತಿ, ಜನಜೀವನ, ಭಾಷೆ, ಆಹಾರ, ಆಚಾರ ಮುಂತಾದವುಗಳನ್ನು ಕಂಡು ಅನುಭವಿಸಿದ್ದೇನೆ. ನನ್ನ ಬೊಗಸೆಗೆ ನಿಲುಕಿದ್ದನ್ನು ಚಿತ್ರ ಹಾಗೂ ಬರಹಗಳ ರೂಪದಲ್ಲಿ ಕೊಡಲು ಪ್ರಯತ್ನಿಸಿದ್ದೇನೆ. ಅರೆಕ್ಷಣದ ಅದೃಷ್ಟ (ನಿಸರ್ಗಕ್ಕೆ ಸಂಬಂಧಿಸಿದ ಚಿತ್ರ ಲೇಖನಗಳ ಸಂಗ್ರಹ) ಎಂಬ ಮೊಟ್ಟಮೊದಲ ಪುಸ್ತಕದಿಂದ ಪ್ರಾರಂಭವಾಗಿ, ಕ್ಲಿಕ್(ಚಿತ್ರ ಲೇಖನಗಳ ಸಂಗ್ರಹ), ಚಿಟ್ಟೆಗಳು (ಚಿಟ್ಟೆಗಳ ಕುರಿತಂತೆ ಚಿತ್ರಗಳು ಮತ್ತು ಮಾಹಿತಿ), ಭೂತಾನ್ - ನಳನಳಿಸುವ ಪ್ರಶಾಂತತೆಯ ನಾಡಿನಲ್ಲಿ (ಪ್ರವಾಸಕಥನ), ‘ನಮ್ಮ ಶಿಡ್ಲಘಟ್ಟ’ - ಶಿಡ್ಲಘಟ್ಟ ತಾಲ್ಲೂಕಿನ ಸಮಗ್ರ ಪರಿಚಯ (ಚಿತ್ರ ಸಹಿತ), ರಸ್ಕಿನ್ ಬಾಂಡ್ ಕತೆಗಳು(ಅನುವಾದ) ಮತ್ತು ಯೋರ್ದಾಘನ್ ಪಿರೆಮಸ್ (ಜೋರ್ಡಾತನ್ - ಈಜಿಪ್ಟ್ ಪ್ರವಾಸಕಥನ) ವರೆಗೂ ಮುಂದುವರೆದಿದೆ.

ಬುಕ್ ಬ್ರಹ್ಮ: ಸಾಹಿತ್ಯಿಕ ಪಯಣದಲ್ಲಿ ನೀವು ಹೆಮ್ಮೆ ಪಡುವ ವಿಚಾರ ಯಾವುದು..?
ಡಿ.ಜಿ.ಮಲ್ಲಿಕಾರ್ಜುನ:
ಕೆಲವೊಂದು ಅದೃಷ್ಟಗಳು ಒಲಿದು ಬಂದಾಗ ಹೆಮ್ಮೆಯಾಗುವುದು ಸಹಜ. ಮೊಟ್ಟಮೊದಲ ಬಾರಿಗೆ ಹಕ್ಕುಗಳನ್ನು ಪಡೆದು ರಸ್ಕಿನ್ ಬಾಂಡ್ ಅವರ ಇಂಗ್ಲಿಷ್ ಕತೆಗಳನ್ನು ಕನ್ನಡ ಮನಸ್ಸುಗಳಿಗೆ ತಲುಪಿಸಿದ ಅದೃಷ್ಟ ನನ್ನದು. ಬ್ರಿಟಿಷ್ ಮೂಲದ ಭಾರತೀಯ ಲೇಖಕ ರಸ್ಕಿನ್ ಬಾಂಡ್, ಭಾರತದಲ್ಲಿ ನೆಲೆನಿಂತು ಭಾರತೀಯತೆಯ ಕುರಿತು ಬರೆದ ಇಂಗ್ಲಿಷಿನ ಮಹತ್ವದ ಲೇಖಕರಲ್ಲಿ ಪ್ರಮುಖರು. ಅವರ ಕತೆಗಳು, ಮಗುವಿನ ಮನಸ್ಸು, ಚಿತ್ರರೂಪಿ ನವಿರಾದ ನಿರೂಪಣೆ ನನ್ನನ್ನು ಆವರಿಸಿಕೊಂಡಿತ್ತು. ನವಕರ್ನಾಟಕ ಪ್ರಕಾಶನದವರು ಹಕ್ಕುಗಳನ್ನು ಪಡೆದು ಅನುವಾದಿಸಲು ಪ್ರೇರೇಪಿಸಿದರು. ಸಾಹಿತ್ಯಿಕ ಪಯಣದಲ್ಲಿ ಅತ್ಯಂತ ಖುಷಿ ಕೊಟ್ಟ ವಿಚಾರವಿದು.

ಬುಕ್ ಬ್ರಹ್ಮ: ಯಾವ ಲೇಖಕರ ಕೃತಿಗಳು ನಿಮ್ಮನ್ನು ಹೆಚ್ಚು ಪ್ರೇರೇಪಿಸುತ್ತವೆ ಅಥವಾ ಕಾಡುತ್ತವೆ...?
ಡಿ.ಜಿ.ಮಲ್ಲಿಕಾರ್ಜುನ:
ಓದುಗನಾಗಿ ಬಹಳಷ್ಟು ಲೇಖಕರ ಕೃತಿಗಳು ನನ್ನನ್ನು ಪ್ರೇರೇಪಿಸಿವೆ. ಪ್ರಮುಖವಾಗಿ ಹೆಸರಿಸಬೇಕೆಂದರೆ ಪೂರ್ಣಚಂದ್ರ ತೇಜಸ್ವಿ ಮತ್ತು ಕೃಷ್ಣಾನಂದ ಕಾಮತರ ಕೃತಿಗಳು. ಈ ಇಬ್ಬರಿಗೂ ಛಾಯಾಗ್ರಹಣ, ಪೇಂಟಿಂಗ್, ಸಂಗೀತ ಮುಂತಾದ ಹವ್ಯಾಸಗಳಿದ್ದವು. ಇವರಿಬ್ಬರಿಗೂ ಈ ಎಲ್ಲಾ ಕಲೆಗಳು ಬರವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತಿದ್ದವು. ಪರಿಸರ, ಹಕ್ಕಿ, ಕ್ರಿಮಿ ಕೀಟಗಳನ್ನು ನೋಡುವುದು, ಅವುಗಳ ಸ್ವಭಾವವನ್ನು ಅರಿಯುವ ಬಗೆಯನ್ನು ತೋರಿಸಿಕೊಟ್ಟವರು ಈ ಇಬ್ಬರು ಲೇಖಕರು ಅಥವಾ ಛಾಯಾಗ್ರಾಹಕರು.

ಬುಕ್ ಬ್ರಹ್ಮ: ಇದನ್ನು ನಾನು ಬರೆಯಬೇಕಿತ್ತು ಎನಿಸುವಂತಹ ಇತರೆ ಲೇಖಕರ ಕೃತಿ ಯಾವುದು...?
ಡಿ.ಜಿ.ಮಲ್ಲಿಕಾರ್ಜುನ:
ಇತರರ ಕೃತಿಗಳಿಂದ ಪ್ರೇರಣೆ ಪಡೆದು ಕೆಲವೊಂದು ಕೃತಿಗಳನ್ನು ಹೊರತರುವ ಗುರಿಯನ್ನಿರಿಸಿಕೊಂಡಿರುವೆ. ನಮ್ಮ ತಾಲ್ಲೂಕಿನ ಕುರಿತಂತೆ ಸಮಗ್ರವಾದ ಪುಸ್ತಕ, ಚಿಕ್ಕಬಳ್ಳಾಪುರದಲ್ಲಿ ಬುಕನನ್ ದಾಖಲಿಸಿದ ಸಂಗತಿಗಳ ಕುರಿತು, ನಂದಿ ಬೆಟ್ಟದ ಕುರಿತು ಪುಸ್ತಕಗಳನ್ನು ಹೊರತರಬೇಕಿದೆ. ಇದಲ್ಲದೆ, ಹಕ್ಕುಗಳು ಸಿಕ್ಕರೆ ರಸ್ಕಿನ್ ಬಾಂಡ್ ಅವರ ಇನ್ನಷ್ಟು ಕಥೆಗಳನ್ನು ಕನ್ನಡಕ್ಕೆ ತರುವ ಇರಾದೆಯಿದೆ.

ಬುಕ್ ಬ್ರಹ್ಮ: ನಿಮ್ಮ ಸಾಹಿತ್ಯಿಕ ಬದುಕಿನ ಮೂಲ ಧ್ಯೇಯವೇನು...?
ಡಿ.ಜಿ.ಮಲ್ಲಿಕಾರ್ಜುನ:
ನನ್ನನ್ನು ಪ್ರೇರೇಪಿಸಿದ ಪೂರ್ಣಚಂದ್ರ ತೇಜಸ್ವಿ ಮತ್ತು ಕೃಷ್ಣಾನಂದ ಕಾಮತರು ಬರೆದಂತೆ ಬದುಕಿದರು ಮತ್ತು ಬದುಕಿನ ಅನುಭವಗಳಿಗೆ ಅಕ್ಷರ ರೂಪ ನೀಡಿದರು. ಅದೇ ನನಗೆ ಗುಣಪಾಠವಾಗಿದೆ.

ಬುಕ್ ಬ್ರಹ್ಮ: ಸಾಹಿತ್ಯದಿಂದ ನಿಮ್ಮ ಬದುಕಿನಲ್ಲಾದ ಮಹತ್ವದ ಬದಲಾವಣೆಗಳೇನು...?
ಡಿ.ಜಿ.ಮಲ್ಲಿಕಾರ್ಜುನ:
ಸಾಹಿತ್ಯ ಹೆಚ್ಚು ಮಾನವಂತನನ್ನಾಗಿಸುತ್ತದೆ. ಕಲೆ ಸಾಹಿತ್ಯ ಸಂಸ್ಕೃತಿ ಒಳ್ಳೆಯದನ್ನು ನೋಡಲು, ಮೆಚ್ಚಲು, ಆಸ್ವಾದಿಸಲು ಮತ್ತು ಇತರರ ನೋವು, ದುಗುಡ, ಕಷ್ಟವನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡಿದೆ. ಒಳ್ಳೆಯ ಸಾಹಿತ್ಯ ಓದುವುದೆಂದರೆ ಒಳ್ಳೊಳ್ಳೆ ಮನಸ್ಸುಗಳನ್ನು ಓದಿದಂತೆ. ಛಾಯಾಚಿತ್ರ ಕಲೆ ಮತ್ತು ಸಾಹಿತ್ಯ ನನ್ನ ಒಳಗಣ್ಣನ್ನು ತೆರೆದು ನೋಡಲು ಪ್ರೇರೇಪಿಸಿವೆ.

ಬುಕ್ ಬ್ರಹ್ಮ: ನಿಮ್ಮ ಬದುಕಿನಲ್ಲಿ ಬರವಣಿಗೆಯ ಪಾತ್ರ...?
ಡಿ.ಜಿ.ಮಲ್ಲಿಕಾರ್ಜುನ:
ಬರವಣಿಗೆ ದೇಹದ ಒಂದು ಅಂಗದಂತೆ. ಯಾವ ನಿರೀಕ್ಷೆಗಳನ್ನೂ ಇರಿಸಿಕೊಳ್ಳದೆ ಅದರ ಕೆಲಸ ಅದು ಮಾಡುತ್ತಿರಲೇಬೇಕು. ಛಾಯಾಗ್ರಹಣ, ಬರವಣಿಗೆ, ಓದು ಇವೆಲ್ಲವೂ ಮನಸ್ಸಿನ ಬ್ಯಾಟರಿ ಚಾರ್ಜ್ ಮಾಡುವಂತಹವು. ಇವು ನಿಲ್ಲದೇ ನಡೆಯುತ್ತಿದ್ದರೇ ಬದುಕು ಸುಂದರ.

ಡಿ.ಜಿ. ಮಲ್ಲಿಕಾರ್ಜುನ ಅವರ ಕುರಿತಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ವಿವಿಧ ಕಾರ್ಯಕ್ರಮಗಳಲ್ಲಿ ಲೇಖಕ ಡಿ.ಜಿ. ಮಲ್ಲಿಕಾರ್ಜುನ:

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...