ಒಂದು ಕ್ಲಾಸಿಕ್ ಕಾದಂಬರಿಯನ್ನು ಓದಿದ ಸಾರ್ಥಕತೆ ನೀಡುವ ಕೃತಿ ‘ಗಂಗಾಪಾಣಿ’


"ಗಂಗಾಪಾಣಿ" ಒಂದು ವಿಶಿಷ್ಠವಾದ ಕಾದಂಬರಿ. ಈ ಕಾದಂಬರಿ ತಳಸ್ಥರದ ಸಮುದಾಯಗಳ, ಕೃಷಿ ಸಂಸ್ಕೃತಿಯ ತಲಸ್ಪರ್ಶಿ ಬದುಕನ್ನು ನಿಖರವಾಗಿ ಚಿತ್ರಿಸುತ್ತದೆ. ಕೃಷಿ ಬದುಕು ಹಳ್ಳಿಯ ವಿವಿಧ ದೇಸಿ ಕೈಗಾರಿಕೆಗಳೊಂದಿಗಿನ ಅವಿನಾವ ಭಾವ ಸಂಬಂಧವನ್ನು ಪ್ರಸ್ತುತಪಡಿಸುತ್ತದೆ‌ ಎನ್ನುತ್ತಾರೆ ಲೇಖಕ ಉದಯಕುಮಾರ ಹಬ್ಬು ಅವರು ಎಸ್. ಗಂಗಾಧರಯ್ಯ ಅವರ ಗಂಗಾಪಾಣಿ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ಎಸ್. ಗಂಗಾಧರಯ್ಯ ಪ್ರಜಾವಾಣಿ ದೀಪಾವಳಿ ಸಂಚಿಕೆಯಲ್ಲಿ ಕಥಾಸ್ಪರ್ಧೆಯಲ್ಲಿ ಒಮ್ಮೆ ತೃತಿಯ ಬಹುಮಾನವನ್ನೂ ಒಮ್ಮೆ ಸಮಾಧಾನಕರ ಬಹುಮಾನವನ್ನೂ ಪಡೆದಿರುತ್ತಾರೆ‌, ಗ್ಯಾಬ್ರಿಯಲ್ ಗ್ರೇಸಿಯಾ ಮಾರ್ಕ್ವೆಜನ ಸಣ್ಣ ಕಥೆಗಳನ್ನು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದವರು. ಇವರಿಗೆ ಕಥನ ಕಲೆ ಸಿದ್ಧಿಸಿದೆ‌. ಪ್ರಸ್ತುತ ಈ ಕಾದಂಬರಿ "ಗಂಗಾಪಾಣಿ" ಒಂದು ವಿಶಿಷ್ಠವಾದ ಕಾದಂಬರಿ. ಈ ಕಾದಂಬರಿ ತಳಸ್ಥರದ ಸಮುದಾಯಗಳ, ಕೃಷಿ ಸಂಸ್ಕೃತಿಯ ತಲಸ್ಪರ್ಶಿ ಬದುಕನ್ನು ನಿಖರವಾಗಿ ಚಿತ್ರಿಸುತ್ತದೆ. ಕೃಷಿ ಬದುಕು ಹಳ್ಳಿಯ ವಿವಿಧ ದೇಸಿ ಕೈಗಾರಿಕೆಗಳೊಂದಿಗಿನ ಅವಿನಾವ ಭಾವ ಸಂಬಂಧವನ್ನು ಪ್ರಸ್ತುತಪಡಿಸುತ್ತದೆ‌. ಅಷ್ಟಲ್ಲದೆ ಕಾದಂಬರಿಯ ಕಥಾನಕಗಳು ನಡೆಯುವ ಕಾಲಮಾನ ಆಗಷ್ಟ್ 25, 1925 ರಿಂದ ಪ್ರಾರಂಭಗೊಂಡು ಇಂದಿನವರೆಗೂ ವಿಸ್ತಾರವಾದ ಹಳ್ಳಿಯ ಬದುಕಿನೊಡನೆ ಗಾಂಧಿಜಿ ಸ್ವಾತಂತ್ರ್ಯ ಹೋರಾಟ, ಆ ಹೊರಾಟದಲ್ಲಿ ತೊಡಗಿಕೊಂಡು ಸರ್ವಸ್ವವನ್ನೂ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಬದುಕುಗಳ ನಡುವೆ ತಳಕು ಹಾಕಿಕೊಂಡಿವೆ‌‌. ಜೊತೆಯಲ್ಲಿ ವಿನೊಬಾ ಭಾವೆ ಅವರ ಭೂದಾನ ಚಳವಳಿಯ ಭಾಗವಾಗಿ ಹಳ್ಳಿಯ ಕೆಲವರು ವಿನೋಬಾರ ಆದರ್ಶಗಳಿಂದ ಪ್ರೇರೇಪಿತರಾಗಿ ಸಕಲ ಭೂದಾನ ಮಾಡಿದ ಮಹಾನ್ ತ್ಯಾಗಿಗಳ ಚಿತ್ರಣವನ್ನೂ ಕೊಡುತ್ತದೆ‌. ಮತ್ತು ಹಳ್ಳಿಯವರ ಅಧ್ಯಾತ್ಮ ವೈದಿಕ ನಂಬಿಕೆಗಳಿಂದ ಕಳಚಿಕೊಂಡ ತತ್ವಪದಗಳು, ವಚನಗಳು‌ ಇವುಗಳ ನೆಲಮೂಲದ‌ ಅಧ್ಯಾತ್ಮದ ವಾತಾವರಣದ ಪ್ರಭಾವ ಅವರ ಬದುಕುಗಳನ್ನು ರೂಪಿಸಿದ್ದ ಗ್ರಾಮಜೀವನದ ಬದುಕುಗಳ ತಳಸ್ಪರ್ಷಿ ಚಿತ್ರಣಗಳಿವೆ‌. ಮತ್ತು ಸ್ವಾತಂತ್ರ್ಯ ಪೂರ್ವ ಭಾರತದ ಹಳ್ಳಿಗಳ ಸೌಹಾರ್ದಯುತ ಬದುಕು ಆ ನಂತರದ ಹಣದ ಆಮಿಷದಿಂದ ಅವನತಿ ಹೊಂದಿದ, ಯಂತ್ರಗಳ ಬಳಕೆಯಿಂದ ನಿಸರ್ಗದ ಮೇಲೆ ಅತ್ಯಾಚಾರ ಮಾಡಿ ನೀತಿಗೆಟ್ಟ ಭ್ರಷ್ಟ ವ್ಯಕ್ತಿಗಳ ಆಧುನಿಕ ಬದುಕನ್ನೂ ಚಿತ್ರಿಸುತ್ತದೆ‌‌. ಹೀಗೆ ಈ ಕಾದಂಬರಿ ಹಲವಾರು ಆಯಾಮಗಳ ಮೂಲಕ ತಲುಪಬೇಕಿದೆ‌‌.

ಗದ್ದಿಗಪ್ಪ ಎಂಬ ವ್ಯಕ್ತಿ ಈ ಕಾದಂಬರಿಯ ದುರಂತ ನಾಯಕ. ಅವನ ಬದುಕಿನ ದುರಂತಗಳು ಅವನನ್ನು ಮನೆ ಬಿಟ್ಟು ದಿಕ್ಕು ತಪ್ಪಿದ ಅಲೆಮಾರಿಯಂತೆ ಊರೂರು ಅಲೆಯುತ್ತ, ಎಲ್ಲಿಯೂ ನಿಲ್ಲದೆ ಅಂತಿಮವಾಗಿ ತನ್ನೂರಿಗೆ ಬಂದು ತನ್ನೂರು ಪರಿಚಯವಾಗದಷ್ಟು ಬದಲಾಗದ್ದು, ಅವನತಿಯನ್ನು ಹೊಂದಿದ್ದು ಕಂಡು ಮರುಗುತ್ತಾನೆ‌.

ಗದ್ದಗಪ್ಪ ಗಾಂಧಿ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಆ ಊರಿಗೆ ಬಂದು ಸ್ವಾತಂತ್ರ್ಯದ ಹೋರಾಟದ ಕಿಡಿಯನ್ನು ಹೊತ್ತಿಸಿ ಹೋಗಿದ್ದ ಹೋರಾಟದ ತ್ಯಾಗದ ಕಥೆಯನ್ನು ಅಜ್ಜ ಸಣ್ಣೀರಪ್ಪನಿಂದ ತಿಳಿಯುತ್ತಾನೆ. ಅಜ್ಜ ಗಾಂಧಿಜೀ ಊರಿಗೆ ಬಂದು ಸಭೆಯಲ್ಲಿ ಪ್ರೇರಣೆಯ ಮಾತುಗಳನ್ನಾಡಿದಾಗ ಸಣ್ಣೀರಪ್ಪ, ಅವನ ಜೊತೆಗಾರರು ಹೋರಾಟಕ್ಕೆ ತಯಾರಾಗುತ್ತಾರೆ‌. ಸಣ್ಣೀರಪ್ಪ ಗಂಗಾಪಾಣಿ ಎಂಬ ತೆಂಗಿನ ಗಿಡವನ್ನು ಗಾಂಧಿಜೀ ಅವರ ಸ್ಪರ್ಷ ಪಡೆದ ಗಂಗಾಪಾಣಿ ತೆಂಗಿನ ಗಿಡವನ್ನು ತನ್ನ ತೋಟದಲ್ಲಿ ನೆಡಬೇಕೆಂಬ ಹಂಬಲ ಇದ್ದು ಹೊರಟವನು. ಅಂತೆಯೆ ಗಾಂಧಿಜೀಯವರು ಗಂಗಾಪಾಣಿ ತೆಂಗಿನ ಗಿಡವನ್ನು ಸ್ಪರ್ಷಿಸುತ್ತಾರೆ. ಆ ಗಿಡವನ್ನು ತನ್ನ ತೋಟದಲ್ಲಿ ನೆಟ್ಟು ಗಾಂಧಿಜೀಯನ್ನೆ ಆ ಗಿಡದಲ್ಲಿ ಕಾಣುತ್ತ ಸಂತೃಪ್ತರಾಗಿದ್ದು ಭೂಗತ ಹೋರಾಟವನ್ನು ಮಾಡಿ ಪೊಲೀಸರ ಕೈಗೆ ಸಿಕ್ಕು ಜೈಲುಪಾಲಾಗುತ್ತಾರೆ. ಸಣ್ಣೀರಪ್ಪ ಈ ಹೋರಾಟದ ಕಥೆಯನ್ನು ಮೊಮ್ಮಗ ಗದ್ದಗಪ್ಪನಿಗೆ ಹೇಳುತ್ತಾರೆ‌. ಇದರಿಂದ ಗದ್ದಗಪ್ಪ ಪ್ರಭಾವಿತನಾಗುತ್ತಾನೆ‌. ಸಣ್ಣೀರಪ್ಪ ತತ್ವಪದ ಹಾಡುಗಾರ. ತತ್ವಪದ ಜಾಡುಗಾರರ ತಂಡಗಳು ಕೆಲವು ಇದ್ದು ಅವರೆಲ್ಲ ಒಂದೆಡೆ‌ ಸೇರಿ ಬೆಳತನಕವೂ ತತ್ವಪದಗಳನ್ನು ಹಾಡುತ್ತ ಮೈಮರೆಯುತ್ತಾರೆ‌. ಈ ಹಾಡುಗಳು ಗದ್ದಗಪ್ಪನ ಮೇಲೆ ಪ್ರಭಾವ ಬೀರಿರುತ್ತವೆ‌.

ಗದ್ದಗಪ್ಪನ ವೈಯಕ್ತಿಕ ಬದುಕಿನಲ್ಲಿ ಹಲವು ದುರಂತಗಳು ಸಂಭವಿಸುತ್ತವೆ‌‌.‌ ಜೀವಸ್ಯ ಜೀವವಾದ ತಾಯಿ ಸಾಯುತ್ತಾಳೆ‌‌. ಮಗನಿಗೆ ಗಾಂಧಿ ಅಂತ ಹೆಸರಿಟ್ಟಿದ್ದ ಆ ಮಗನು ಬಂದೂಕು ಸ್ಫೋಟದಲ್ಲಿ ಎರಡೂ ಕಣ್ಣುಗಳನ್ನು ಕಳೆದುಕೊಂಡು ಕುರುಡನಾಗುತ್ತಾನೆ.‌ ಒಂದು ದಿನ ಮಗನೂ ಬಾವಿಯಲ್ಲಿ ಬಿದ್ದು ಸಾಯುತ್ತಾನೆ. ಒಬ್ಬ ಹಿರಿಯ ತತ್ವಪದಕಾರನು ವ್ಯಾಮೋಹವೆ ದುಃಖಕ್ಕೆ ಕಾರಣ ಎನ್ನುತ್ತಾನೆ.

ಮಧ್ಯಂತರದಲ್ಲಿ ರಾಮಣ್ಣ ಎಂಬ ಒಬ್ಬ ಹಿರಿಯರ ಆದರ್ಶಗಳಿಂದ ಪ್ರಭಾವಿತನಾದ ಗದ್ದಗಪ್ಪ‌ ತನ್ನೆಲ್ಲ ಹತ್ತು ಎಕರೆ ಜಮೀನನ್ನು ವಿನೋಬಾರ ಕರೆಯಂತೆ ದಾನ ಮಾಡುತ್ತಾನೆ‌‌. ರಾಮಣ್ಣನೂ ವಯೋವೃದ್ಧನಾದ್ದರಿಂದ ತನ್ನ ತೊಂಬತ್ತರ ವಯಸ್ಸಿನಲ್ಲಿ ಮೃತಪಡುತ್ತಾನೆ. ಈ ಎಲ್ಲ ದುರಂತಗಳಿಂದ ದಿಕ್ಕೆಟ್ಟ ಗದಗಪ್ಪ ಊರು ಬಿಟ್ಟು ದಿಕ್ಕು ತೋಚಿದತ್ತ ಮನೆ ಬಿಟ್ಟು ನಡೆದುಬಿಡುತ್ತಾನೆ‌.

ಹೀಗೆ ಊರೂರು ಅಲೆಯುತ್ತ ಸಿಕ್ಕ ಕೆಲಸವನ್ನು ಮಾಡಿ ಜೀವನ ಸಾಗಿಸುತ್ತಾನೆ‌‌‌‌. ಹಿಮಾಲಯ ಪ್ರದೇಶಕ್ಕೂ ಹೋಗಿ ಅಲ್ಲಿ ಓರ್ವ ಮಹಿಳೆಯೊಡನೆ ಸಂಸಾರ ನಡೆಸುತ್ತಾನೆ‌. ಅವಳ ಅತ್ಯಾಚಾರವಾಗಿ ಕೊಲೆಯಾಗುತ್ತದೆ. ಆ ಪ್ರದೇಶವನ್ನು ಬಿಟ್ಟು ಮುಂದೆ ನಡೆಯುತ್ತ ಬೆಟ್ಟದ ಮೇಲಿದ್ದ ಗುಡಿಗೆ ಬರುತ್ತಾನೆ. ಅಲ್ಲಿ ಎರಡು ಹೆಣ್ಣು ಮಕ್ಕಳೊಂದಿಗೆ ಸೀತಾ ಎಂಬ ಹೆಣ್ಣಿನ ಸಂಪರ್ಕಕ್ಕೆ ಬರುತ್ತಾನೆ. ಆ ಸಂಬಂಧದ ವ್ಯಾಮೋಹವನ್ನು ಕಳಚಿಕೊಂಡು ಊರ ಕಡೆಗೆ ಮುಖ ಮಾಡುತ್ತಾನೆ‌. ಊರಿಗೆ ಬಂದಾಗ ಅಲ್ಲಿ ಊರು ಪರಿಚಯ ಸಿಗದಷ್ಟು ಬದಲಾವಣೆಗೊಂಡಿರುತ್ತದೆ. ಇವನು ದಾನ ಮಾಡಿದ ಜಮೀನು ದುರುಪಯೋಗಕ್ಕೊಳಗಾಗಿರುತ್ತದೆ. ಗಣಿಗಾರಿಕೆ ಊರಿನ ಮುಖವನ್ನೆ ಬದಲಾಯಿಸಿಬಿಟ್ಟಿರುತ್ತದೆ. ಗಣಿ ಮಾಲಿಕರು ಗುಡ್ಡ ಬೆಟ್ಟಗಳನ್ನು ಅಗೆದು ಪ್ರಾಕೃತಿಕ ಅತ್ಯಾಚಾರ ಮಾಡಿ ಊರಿಡಿ ಕೆಂಪು ಧೂಳಿನ ಊರಾಗಿರುತ್ತದೆ‌. ಗಣಿಗಾರಿಕೆಯನ್ನು ಪ್ರತಿಭಟಿಸಿದ ನಾಯಕರು ಕೊಲೆಗೀಡಾಗುತ್ತಾರೆ‌. ಗಾಂಧಿಜೀ ಸ್ಪರ್ಶ ಮಾಡಿ ಕೊಟ್ಟ ಗಂಗಾಪಾಣಿ ತೆಂಗಿನ ಗಿಡವನ್ನು ಬುಡಮೇಲು ಮಾಡಿರುತ್ತಾರೆ‌. ಗದಗಪ್ಪ ತನ್ನ ಮನೆಗೆ ಬಂದಾಗ ಅದು ಹಾಳು ಸುರಿಯುತ್ತಿರುತ್ತದೆ‌. ಗಾಂಧಿಜೀ ಹಾಗೂ ವಿನೋಬಾ ಭಾವೆ ಅವರ ಪಟಗಳಿಗೆ ಗೆದ್ದಲು ಹಿಡಿದಿರುತ್ತದೆ. ಸಣ್ಣೀರಪ್ಪ ಬಳಸಿದ್ದ ತಂಬೂರಿ ನಾಶಗೊಂಡ ಸ್ಥಿತಿಯಲ್ಲಿರುತ್ತದೆ‌. ಮಡಿಕೆ ಮಾಡುವ ಕುಂಬಾರಿಕೆಯಂತಹ ದೇಸೀಯ ಗುಡಿ ಕೈಗಾರಿಕೆ ಮೂಲೆಗುಂಪಾಗಿರುತ್ತದೆ. ಹೀಗೆ ಗಂಗಾಪಾಣಿ‌ ತೆಂಗಿನ ಗಿಡದ ನಾಶ ಗಾಂಧಿ ಹಾಗೂ ವಿನೋಬಾರ ಮೌಲ್ಯಗಳ ವಿನಾಶದ ಸಂಕೇತವಾಗಿ ಬರುತ್ತದೆ‌. ಕೊನೆಗೆ ಗದಗಪ್ಪ ತನ್ನ ಪಾಳುಬಿದ್ದ ಮನೆಯಲ್ಲಿ ಷಡಕ್ಷರಿಯವರ ತತ್ವಪದಗಳನ್ನು ಹಾಡುತ್ತ ಮೈಮರೆಯುತ್ತಾನೆ.

ಕಾದಂಬರಿಯನ್ನು ಒಂದು ಪ್ರಾದೇಶಿಕ ಭಾಷೆಯ ಕಾದಂಬರಿ ಎನ್ನಬಹುದು. ಬಹುಶಃ ಕೋಲಾರ ಅಥವಾ ತುಮುಕೂರಿನ ಕನ್ನಡ ಭಾಷೆಯಾಗಿರಬಹುದು‌. ಕೆಲವು ಪ್ರಾದೇಶಿಕ ಪದಗಳಿಗೆ ಕಾದಂಬರಿಯ ಕೊನೆಯ ಪುಟಗಳಲ್ಲಿ ಶಬ್ದಕೋಶವನ್ನು ಕೊಡಲಾಗಿದೆ. ಆದರೆ ಇನ್ನೂ ಕೆಲವು ಕರ್ನಾಟಕ ಇತರ ಭಾಗದ ಕನ್ನಡಿಗರಿಗೆ ಅರ್ಥವಾಗದ ಶಬ್ದಗಳು ಕಾದಂಬರಿಯಲ್ಲಿವೆ.‌ ನಿರೂಪಣಾ ತಂತ್ರದಲ್ಲಿ stream of consciousness theory ಬಳಸಿದಂತಿದೆ‌‌ ಇದು flash back technique ಅಲ್ಲ‌ ಒಂದು ಕ್ಲಾಸಿಕ್ ಕಾದಂಬರಿಯನ್ನು ಓದಿದ ಸಾರ್ಥಕತೆ ಓದುಗನಿಗೆ ಉಂಟಾಗುತ್ತದೆ‌

ಕಥೆ ಕೆಲವೆಡೆ ರಿಪೀಟ್ ಆದಂತೆನಿಸಿತು‌ ಆದರೆ ಕೃಷಿ ಜಗತ್ತಿನ ಸಮೃದ್ಧ ವಿವರಗಳು ಕಾದಂಬರಿಯಲ್ಲಿವೆ. ಅನೇಕ ಅಧ್ಯಾತ್ಮಿಕ ವಿಚಾರಗಳೂ ಚೆನ್ನಾಗಿ ಮೂಡಿಬಂದಿವೆ‌‌. ಗದಗಪ್ಪ ತಿರುಗಾಟದಲ್ಲಿ ವಿನೋಬಾ ಅವರ ಆಶ್ರಮಕ್ಕೂ ಹೋಗುತ್ತಾನೆ‌. ಅಲ್ಲಿ ತಮ್ಮ‌ ಜಮೀನನ್ನೆಲ್ಲಾ ದಾನ ಮಾಡಿ ಆಶ್ರಮವಾಸಿಗಳಾದ ತನ್ನೂರಿನವರನ್ನೂ ಕಾಣುತ್ತಾನೆ‌.

ಮಾವೋವಾದಿಗಳೂ ಕೂಡ ಕಾದಂಬರಿಯಲ್ಲಿ ಪ್ರತ್ಯಕ್ಷಗೊಳ್ಳುತ್ತಾರೆ. ಕಥಾನಕಕ್ಕೂ ಮಾವೋವಸದಿಗಳು ಬರುವುದಕ್ಕೂ ಇದ್ದ ಸಂಬಂಧ ಗೊತ್ತಾಗುವುದಿಲ್ಲ. ಮತ್ತೆ ಗದಗಪ್ಪ ಊರು ಬಿಟ್ಟು ಇಪ್ಪತ್ತು ವರ್ಷಗಳ ನಂತರ ಊರಿಗೆ ಬಂದಿರುತ್ತಾನೆ‌. ಆಗ ಅವನ ಮನೆ ಕೂಡ ಜೀರ್ಣಾವಸ್ಥೆಯಲ್ಲಿರುತ್ತದೆ. ಇದು ಅವನತಿ ಹೊಂದಿದ ಮೌಲ್ಯಗಳ ರೂಪಕವಾಗಿಯೂ ಬರುತ್ತದೆ‌.

MORE FEATURES

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...

‘ಪಾತಕ ಲೋಕ’ ತರುಣರಿಗೆ ಅತ್ಯಂತ ಆಕರ್ಷಣೀಯ ವಸ್ತು

16-05-2024 ಬೆಂಗಳೂರು

"ನಾ ಕಂಡ ಈ ಭೂಗತ ಜಗತ್ತಿನಲ್ಲಿ ಬೆಂಗಳೂರು ನಗರ ಹಾಗೂ ಮುಂಬೈ ನಗರದ ರೌಡಿಗಳ ಸಂಪರ್ಕ ಹಾಗೂ ಮಂಗಳೂರು ನಗರದ ರೌಡಿಗಳ ...

ಪ್ರೀತಿ ಅರಳಿದರೆ ಬದುಕು ತೆರೆದಂತೆ

15-05-2024 ಬೆಂಗಳೂರು

"ಬದುಕು ಭಾವತೆರೆಯ ಮೇಲಿನ ತಾವರೆ, ಪ್ರತಿಯೊಂದು ಭಾವದಲೆಗೂ ಬದುಕು ಕಂಪಿಸುತ್ತದೆ. ಬದುಕಿನಲಿ ಕಾಡಿದ ಪ್ರೇಮ, ವಿರಹ,...