ಪ್ರಾದೇಶಿಕತೆಯ ದಟ್ಟ ವಿವರಗಳ-ಮಲೆಗಳಲ್ಲಿ ಮದುಮಗಳು

Date: 25-04-2021

Location: ಬೆಂಗಳೂರು


ಆಧುನಿಕ ಕನ್ನಡ ಸಾಹಿತ್ಯದ ಹಲವು ‘ಮಹಾ’ ಪರಂಪರೆಗೆ ಸೇರುವ ಮಹತ್ವದ ಕೃತಿಗಳಲ್ಲಿ ರಾಷ್ಟ್ರಕವಿ ಕುವೆಂಪು ಅವರ ‘ಕಾನೂರು ಹೆಗ್ಗಡತಿ’ ಹಾಗೂ ‘ಮಲೆಗಳಲ್ಲಿ ಮದುಮಗಳು’ ಕೃತಿಗಳು ಪ್ರಮುಖವಾದವು. ಈ ಎರಡೂ ಕೃತಿಗಳಲ್ಲಿ ಮಲೆಗಳಲ್ಲಿ ಮದುಮಗಳು ರಂಗಭೂಮಿಯಲ್ಲಿಯೂ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿತು. ಈ ಕಾದಂಬರಿಯ ಕುರಿತು ಲೇಖಕ ವಿಮರ್ಶಕ ಶ್ರೀಧರ ಹೆಗಡೆ ಭದ್ರನ್ ಅವರು ತಮ್ಮ ‘ಬದುಕಿನ ಬುತ್ತಿ’ ಅಂಕಣದಲ್ಲಿ ವಿಶ್ಲೇಷಿಸಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ಎರಡು ಮಹಾ ಕಾದಂಬರಿಗಳು ಆಧುನಿಕ ಕನ್ನಡ ಸಾಹಿತ್ಯದ ಹಲವು ‘ಮಹಾ’ ಪರಂಪರೆಗೆ ಸೇರುವ ಮಹತ್ವದ ಕೃತಿಗಳು. ಮೊದಲನೆಯದಾದ ‘ಕಾನೂರು ಹೆಗ್ಗಡತಿ’ 1937ರಲ್ಲಿ ಪ್ರಕಟವಾದರೆ; ಎರಡನೆಯದು-‘ಮಲೆಗಳಲ್ಲಿ ಮದುಮಗಳು’ ಪ್ರಕಟವಾದುದು 1967ರಲ್ಲಿ (ಕಾಲೋಸ್ಮಿ ಎಂಬ ಮೂರನೆಯ ಬೃಹತ್ ಕಾದಂಬರಿಯನ್ನು ಬರೆಯಬೇಕೆಂಬ ಕುವೆಂಪು ಸಂಕಲ್ಪ ಈಡೇರಲೇ ಇಲ್ಲ). ಎರಡು ಕಾದಂಬರಿಗಳ ಮಧ್ಯೆ ಮೂವತ್ತು ವರ್ಷಗಳ ಅಂತರವಿದೆ. ಇದು ಭೌತಿಕವಾಗಿ ಪ್ರಕಟಣೆಯ ಅಂತರವಷ್ಟೆ. ಏಕೆಂದರೆ; ಕೃತಿಯ ಘಟನಾವಳಿಗಳ ದೃಷ್ಟಿಯಿಂದ ಮೊದಲ ಕಾದಂಬರಿಗಿಂತ ಮೂವತ್ತು ನಲವತ್ತು ವರ್ಷ ಹಿಂದಿನ ಕತೆಯನ್ನು ಎರಡನೆಯ ಕಾದಂಬರಿ ನಿರೂಪಿಸಿದೆ. ಹಾಗೆ ನೋಡಿದರೆ, ಕಾನೂರು ಹೆಗ್ಗಡತಿ ಬರೆದ ಕಾಲದಲ್ಲೇ ಕುವೆಂಪು ಎರಡನೆಯ ಕಾದಂಬರಿಯಾದ ‘ಮಲೆಗಳಲ್ಲಿ ಮದುಮಗಳು’ವನ್ನೂ ಬರೆಯಲು ಪ್ರಾರಂಭಿಸಿದ್ದರು ಎಂಬುದು ಕುತೂಹಲದ ಸಂಗತಿ. ಈ ವಿಚಾರದೆಡೆಗೆ ಲೇಖಕ ಸುಜನಾ ನಮ್ಮ ಗಮನ ಸೆಳೆದಿದ್ದಾರೆ. ‘1936ರಲ್ಲಿ ‘ಅರ್ಥಸಾಧಕ’ ಪತ್ರಿಕೆಯಲ್ಲಿ ಕಾದಂಬರಿಯ ಸುಮಾರು 80 ಪುಟಗಳ ಬರವಣಿಗೆ ಪ್ರಕಟವಾಗಿತ್ತು’ ಎಂದಿದ್ದಾರೆ. ಚಾರಿತ್ರಿಕವಾಗಿ ನೋಡಿದಾಗ ಬಹುಶಃ ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯ ರಚನೆಯನ್ನು ಅದೇ ಕಾಲದಲ್ಲಿ ಆರಂಭಿಸಿದ್ದರಿಂದ ಈ ಕಾದಂಬರಿಯ ಬರವಣಿಗೆ ಹಿಂದೆ ಬಿದ್ದಿರಬೇಕು.

‘ಮಲೆಗಳಲ್ಲಿ ಮದುಮಗಳು’ ಮಲೆನಾಡು ಪ್ರದೇಶದ ಜೀವನ ಸಮಸ್ತವನ್ನೂ – ಅದರ ಅವಿಭಾಜ್ಯ ಅಂಗವಾದ ಪ್ರಕೃತಿ; ಅಲ್ಲಿಯ ಜನರ ಆಚಾರ – ವಿಚಾರ; ನೋವು- ನಲಿವುಗಳು; ನಂಬಿಕೆಗಳು; ಸಂಪ್ರದಾಯ- ಆಚರಣೆಗಳು; ಬಳಸುವ ಭಾಷೆ ಹೀಗೆ ಒಂದು ಪ್ರದೇಶದ ಬದುಕನ್ನು ಅನ್ಯಾದೃಶವಾಗಿ ಚಿತ್ರಿಸಿದೆ. ಈ ಬದುಕು ಇಲ್ಲಿಯ ನೆಲದಲಲ್ಲದೇ ಬೇರೆಡೆ ಮೂಡಲು ಸಾಧ್ಯವೇ ಇಲ್ಲ ಎಂಬಂತಹ ತಾದಾತ್ಮ್ಯ ಬರವಣಿಗೆಯಲ್ಲಿ ಲೇಖಕರಿಗೆ ಸಿದ್ಧಿಸಿದೆ. ಹೀಗಾಗಿಯೇ ಕನ್ನಡದ ಪ್ರಾತಿನಿಧಿಕ ಪ್ರಾದೇಶಿಕ ಕಾದಂಬರಿಗಳ ಪಟ್ಟಿಯಲ್ಲಿ ... ಮದುಮಗಳಿಗೆ ಅಗ್ರಸ್ಥಾನ.

ಗಾತ್ರದಲ್ಲೂ ಪಾತ್ರದಲ್ಲೂ ಮಹತ್ತನ್ನು ಸಾಧಿಸಿರುವ ಕಾದಂಬರಿ ಮಲೆನಾಡಿನ ವಿಶಿಷ್ಟ ಬದುಕನ್ನು ದಾಖಲಿಸುವುದರೊಂದಿಗೆ ಬದುಕಿನ ಎಲ್ಲ ಸ್ತರಗಳನ್ನೂ ಸ್ಪರ್ಶಿಸಿದೆ. ಸಾಮಾನ್ಯವಾಗಿ ಕಾದಂಬರಿಗೆ ಒಬ್ಬ ನಾಯಕ- ನಾಯಕಿ ಇರುವುದು ಧೋರಣೆ. ಉಳಿದ ಪಾತ್ರಗಳು ಅವುಗಳಿಗೆ ಪೂರಕವಾಗಿ ಹೆಣೆದುಕೊಂಡಿರುತ್ತವೆ. ಆದರೆ ಈ ಕಾದಂಬರಿಯಲ್ಲಿ ಒಬ್ಬ ನಾಯಕ ಒಬ್ಬ ನಾಯಕಿ ಎಂಬ ಪರಿಕಲ್ಪನೆಗೆ ಅವಕಾಶವಿಲ್ಲ. ಒಂದೇ ಕೇಂದ್ರವಾಗಲೀ ಒಂದೇ ಕೇಂದ್ರ ಪಾತ್ರ ಕೇಂದ್ರ ಪ್ರಜ್ಞೆಯಾಗಲೀ ಇಲ್ಲಿಲ್ಲ. ಇದನ್ನೇ ಆರಂಭದಲ್ಲಿ ಕುವೆಂಪು ‘ಓದುಗರಿಗೆ’ ಎಂದು ಸೂಚ್ಯವಾಗಿ ಹೇಳಿದ್ದಾರೆನ್ನಬಹುದು;

“ಇಲ್ಲಿ,
ಯಾರೂ ಮುಖ್ಯರಲ್ಲ;
ಯಾರೂ ಅಮುಖ್ಯರಲ್ಲ;
ಯಾವುದೂ ಯಃಕಶ್ಚಿತವಲ್ಲ!
ಇಲ್ಲಿ,
ಯಾವುದಕ್ಕೂ ಮೊದಲಿಲ್ಲ;
ಯಾವುದಕ್ಕೂ ತುದಿಯಿಲ್ಲ;
ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
ಕೊನೆ ಮುಟ್ಟುವುದೂ ಇಲ್ಲ!
ಇಲ್ಲಿ,
ಅವಸರವೂ ಸಾವಧಾನದ ಬೆನ್ನೇರಿದೆ!

ಇಲ್ಲಿ,
ಎಲ್ಲಕ್ಕೂ ಇದೆ ಅರ್ಥ;
ಯಾವುದೂ ಅಲ್ಲ ವ್ಯರ್ಥ;
ನೀರೆಲ್ಲ ಊ ತೀರ್ಥ!

ಇದು ಕಾದಂಬರಿಯ ಪ್ರವೇಶಿಕೆಯಾಗಿರುವಂತೆ; ಕಾದಂಬರಿಯನ್ನು ರೂಪಿಸಿರುವ ತಾತ್ವಿಕತೆಯೂ ಹೌದು. ಮುಕುಂದಯ್ಯನಿಗೆ ಇರುವ ಅವಕಾಶ ಗುತ್ತಿ, ಐತ, ಚೀಂಕ್ರ, ದೇವಯ್ಯ, ಸುಬ್ಬಣ್ಣ ಎಲ್ಲರಿಗೂ ಇದೆ. ಹಾಗೆಯೇ ಪೀಂಚಲು, ತಿಮ್ಮಿ, ಕಾವೇರಿಯರಿಗೆ ಚಿನ್ನಮ್ಮನಿಗೆ ಇರುವಷ್ಟೇ ಅವಕಾಶ ಇದೆ. ಇವರೆಲ್ಲರೂ ಬದುಕಿನಿಂದ ನೇರವಾಗಿ ಒಡಮೂಡಿದವರು. ತಮಗೆ ತಾವೇ ವಿಶಿಷ್ಟರಾಗುವುದರೊಂದಿಗೆ ಉಳಿದವರಿಗೆ ಪೋಷಕವಾಗಿಯೂ ಇವರು ನಿಲ್ಲುತ್ತಾರೆ. ಈ ಎಲ್ಲ ವ್ಯಕ್ತಿತ್ವಗಳ ಸಂಬಂಧಾಂತರಗಳಲ್ಲಿ ಮಲೆನಾಡಿನ ಬದುಕಿನ ಚಿತ್ರಣ ಸಮಷ್ಟಿ ರೂಪವನ್ನು ಪಡೆಯುತ್ತದೆ. ಆದ್ದರಿಂದಲೇ, ಈ ಕಾದಂಬರಿಯ ಕತೆಯನ್ನು ಸಂಗ್ರಹಿಸುವುದೋ ವಸ್ತುವನ್ನು ಸರಳ ಸೂತ್ರದಲ್ಲಿ ಹೇಳುವುದೋ ಅಸಾಧ್ಯ.

‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಪ್ರಧಾನವಾಗಿ ಕತೆಯ ಎರಡು ಎಳೆಗಳಿವೆ. ಒಂದು; ತಿಮ್ಮಿ-ಗುತ್ತಿಯರ ಕತೆಯಾದರೆ ಇನ್ನೊಂದು; ಮುಕುಂದಯ್ಯ-ಚಿನ್ನಮ್ಮರ ಕತೆ. ಇವರ ಕತೆಯೊಂದಿಗೆ ಹೆಣೆದುಕೊಂಡು ಉಳಿದ ಪಾತ್ರ ಜಗತ್ತು ಹಾಗೂ ಘಟನೆಗಳು ನಡೆಯುತ್ತಾ ಹೋಗುತ್ತವೆ. ಒಂದೆಡೆ ಮುಕುಂದಯ್ಯ ಕೇಂದ್ರವೆನಿಸಿದರೆ; ಇನ್ನೊಂದೆಡೆ ಗುತ್ತಿ ಕೇಂದ್ರವೆನಿಸುತ್ತಾನೆ. ಆದರೆ ಇವೆರಡೂ ಸುಳ್ಳಾಗಿ ಇಡೀ ಮಲೆನಾಡೇ ಕಾದಂಬರಿಯಲ್ಲಿ ಪ್ರಧಾನ ಪಟ್ಟವನ್ನು ಅಲಂಕರಿಸುತ್ತದೆ.

ಮಲೆಗಳಲ್ಲಿ ಮದುಮಗಳು - ಶೀರ್ಷಿಕೆಯಲ್ಲಿನ ಮದುಮಗಳು- ಎಂಬ ಪದ ಕೃತಿಯ ಎಲ್ಲ ಪಾತ್ರ- ಘಟನೆಗಳನ್ನು ಹೆಣೆಯುತ್ತಾ ಸಾಗುತ್ತದೆ. ಸಿಂಬಾವಿ, ಬೆಟ್ಟಳ್ಳಿ, ಕೋಣೂರು, ಹೂವಳ್ಳಿ ಹಾಗೂ ಹಳೆಮನೆ; ಈ ಐದು ಮನೆತನಗಳ ನಡುವಣ ಸಂಬಂಧ ಬೆಸೆದುಕೊಂಡಿರುವುದೇ ಮದುವೆಯಿಂದ. ಇವರೊಂದಿಗೆ ಬದುಕು ಮಾಡುವ ಜೀತದಾಳುಗಳ ಮದುವೆ ಹಾಗೂ ಪ್ರಣಯಗಳೂ ಸೇರಿ ಈ ಪ್ರಪಂಚ ನಿರ್ಮಾಣವಾಗುತ್ತದೆ. ಬೇರೆಯವರೊಂದಿಗೆ ಮದುವೆಯಾಗಿ ಹೋಗಿಬಿಡಬಹುದಾದ ತನ್ನ ಸೋದರತ್ತೆಯ ಮಗಳಾದ ತಿಮ್ಮಿಯನ್ನು ಗುತ್ತಿ ಹಾರಿಸಿಕೊಂಡು ಬರಲು ಹೊರಟಲ್ಲಿಂದ ಕಾದಂಬರಿ ಪ್ರಾರಂಭವಾಗುತ್ತದೆ. ಇಲ್ಲಿಂದಲೇ ಮಲೆನಾಡಿನ ವೈವಿಧ್ಯಮಯವಾದ ಬದುಕಿನ ಹೂರಣ ಅನಾವರಣಗೊಳ್ಳುತ್ತಾ ಸಾಗುತ್ತದೆ. ಅವನು ತಿಮ್ಮಿಯೊಂದಿಗೆ ತುಂಗಾ ನದಿಯನ್ನು ದಾಟುವಲ್ಲಿಗೆ ಒಂದು ನಿಲುಗಡೆ ತಲುಪುತ್ತದೆ. ಗುತ್ತಿಯ ಈ ‘ಪಯಣ’ವನ್ನು ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು; ಒಂದು ಪ್ರಧಾನ ರೂಪಕವಾಗಿ ಗ್ರಹಿಸಿದ್ದಾರೆ. ವಸಾಹತುಶಾಹಿಯ ಆಗಮನದಿಂದ ಉಂಟಾದ ಪರಿಣಾಮಗಳೊಂದಿಗೆ ಇದೊಂದು ಸಾಮಾಜಿಕ ಚಲನೆ ಎಂದೇ ಅವರು ಗುರುತಿಸಿದ್ದಾರೆ. ಒಡೆಯ ಸಿಂಬಾವಿ ಹೆಗ್ಗಡೆಯವರು ಕೊಟ್ಟ ಪತ್ರವನ್ನು ಹಳೆಮನೆ ಸುಬ್ಬಣ್ಣ ಹೆಗ್ಗಡೆಯವರಿಗೆ ತಲುಪಿಸುವುದು ಗುತ್ತಿಗಿದ್ದ ಬಾಹ್ಯಕಾರಣವಾದರೂ ಅವನ ಆಂತರಂಗಿಕ ಉದ್ದೇಶ ಈಗಾಗಲೇ ಹೇಳಿದಂತೆ ಸೋದರತ್ತೆ ಸೇಸಿಯ ಮಗಳು ತಿಮ್ಮಿಯನ್ನು ಓಡಿಸಿಕೊಂಡು ಬರುವುದು.

ಹೀಗೆ ಬಾಹ್ಯ ಹಾಗೂ ಆಂತರಿಕ ಉದ್ದೇಶಗಳನ್ನು ಇಟ್ಟುಕೊಂಡು ಹೊರಟ ನಾಯಿಗುತ್ತಿಯ ತಿರುಗಾಟ ಸಿಂಬಾವಿಯಿಂದ ಪ್ರಾರಂಭವಾಗುತ್ತದೆ. ಸೀತೂರ ಹಳ್ಳವನ್ನು ದಾಟಿ ಲಕ್ಕುಂದಕ್ಕೆ ಬಂದಾಗ ಸೇಸ ನಾಯ್ಕರ ಕಥನ; ಅಲ್ಲಿ ರಾತ್ರಿ ಕಳೆದು ಮೇಗರವಳ್ಳಿಗೆ ಬಂದಾಗ ಕರೀಂಸಾಬಿ ಕಣ್ಣಾ ಪಂಡಿತ ಅಂತಕ್ಕ ಕಾವೇರಿಯರ ಜಗತ್ತು; ಹಾದಿಯಲ್ಲಿ ನಾಗಕ್ಕ-ನಾಗತ್ತೆ, ವೆಂಕಟಪ್ಪನ ಬದುಕು; ಹಳೆಮನೆ ತಲಪಿದಾಗ ಅಲ್ಲಿ ಕಾಣುವ ಸುಬ್ಬಣ್ಣ ಹೆಗ್ಗಡೆಯವರ ದರ್ಬಾರು; ಪತ್ರ ತಲಪಿಸಿ ಅಲ್ಲಿಂದ ಹೊರಟು ಬೆಟ್ಟಳ್ಳಿಗೆ ಬಂದರೆ ಅಲ್ಲಿ ಹಕ್ಕಲಿನಲ್ಲಿ ಕಾಣುವ ‘ಬೀಸೆಕಲ್ಲು ಸವಾರಿ’; ಅಂತಿಮ ಗಮ್ಯವಾದ ಹೊಲಗೇರಿಯನ್ನು ರಾತ್ರಿ ಮುಟ್ಟಿ ತಿಮ್ಮಿಯನ್ನು ಹಾರಿಸಿಕೊಂಡು ಹೊರಟು ಹುಲಿಕಲ್ಲು ನೆತ್ತಿಯಲ್ಲಿ ಅವರು ಕಳೆಯುವ ರಾತ್ರಿ; ಅಲ್ಲಿಂದ ಸಿಂಬಾವಿಯನ್ನು ಮುಟ್ಟುವವರೆಗೆ ಗುತ್ತಿಯ ಪಯಣದ ಚಕ್ರವಿದೆ. ಹೀಗೆ ಅವನು ಹೋದಲ್ಲೆಲ್ಲ ಕಾದಂಬರಿ ಒಂದು ಹೊಸ ಪ್ರಪಂಚವನ್ನು ತೋರಿಸುತ್ತಾ ಸಾಗುತ್ತದೆ. ಹೀಗಾಗಿಯೇ ಕಾದಂಬರಿಗೂ ಒಂದು ಸಹಜ ಚಲನೆ ಪ್ರಾಪ್ತವಾಗಿದೆ.

ಈ ಪಯಣದ ಉದ್ದಕ್ಕೂ ಕಾದಂಬರಿ ಸಾಂಸ್ಕೃತಿಕವಾಗಿ ತುಂಬಾ ಮುಖ್ಯವಾದ ವಿವರಗಳನ್ನು ಮಂಡಿಸುತ್ತಾ ಹೋಗುತ್ತದೆ. ಹಾಗೂ ಅಷ್ಟೇ ಸಹಜವಾಗಿ ಇವು ಕತೆಯಲ್ಲಿ ಒಂದಾಗಿ ಬೆರೆತು ಬಂದಿವೆ. ಅವುಗಳಲ್ಲಿ ಮುಖ್ಯವಾದವನ್ನು ಹೀಗೆ ಗಮನಿಸಬಹುದು; ಮಲೆಮಾಡಿನ ಗೌಡರ ಜೀವನ ಪದ್ಧತಿ, ಅವರ ಮೌಢ್ಯಗಳು, ಹುಸಿ ಪ್ರತಿಷ್ಠೆ, ದರ್ಪ-ದಬ್ಬಾಳಿಕೆಗಳು, ಮೃಗೀಯವೆನಿಸುವ ಪ್ರಣಯದಾಟಗಳು, ಹೆಂಗಸರ ಸ್ವಾತಂತ್ರ್ಯರಹಿತ ಬಾಳು, ಅವರ ಮುಗ್ದತೆ, ಗೌಡರ ಹೊಲಗಳಲ್ಲಿ ಕೂಲಿ ಮಾಡುವ ಜನಾಂಗಗಳಾದ; ಹಳೇ ಪೈಕದವರು, ಹೊಲೆಯರು, ದೀವರು, ಬಿಲ್ಲವರು ಮುಂತಾದವರ ವಿಶಿಷ್ಟ ಪದ್ಧತಿಗಳು, ಇವರನ್ನು ನಂಬಿ ಬದುಕುವ, ಶೋಷಿಸುವ ಸಮುದಾಯಗಳು; ನವ ನಾಗರಿಕತೆಯ ಹೆಸರಿನಲ್ಲಿ, ಹೊಸ ವಿಚಾರಗಳ ಸೋಗಿನಲ್ಲಿ ಮತಾಂತರದಲ್ಲಿ ತೊಡಗಿರುವ ಪಾದ್ರಿಗಳು ಹೀಗೆ ಹತ್ತು ಹಲವು ಸಂಗತಿಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.

ಕಾದಂಬರಿಯಲ್ಲಿ ಬರುವ ‘ಮದುಮಗಳ’ ಜೋಡಿಗಳಲ್ಲಿ; ಗುತ್ತಿ-ತಿಮ್ಮಿ, ಐತ-ಪೀಂಚಲು, ಮುಕುಂದಯ್ಯ-ಚಿನ್ನಮ್ಮ ನಮ್ಮ ಗಮನ ಸೆಳೆಯುತ್ತಾರೆ. ಸಿಂಬಾವಿಯ ಭರಮೈ ಹೆಗ್ಗಡೆಯವರ ಜೀತದಾಳು ಗುತ್ತಿಯನ್ನು ಲೇಖಕರು ಚಿತ್ರಿಸುವ ಪರಿಯೇ ಅಪರೂಪದ್ದು; “ಕುಳ್ಳಾದರೂ ದಢೂತಿಯಾದ ಕಟ್ಟುಮಸ್ತಾದ ಆಳ್ತನ ಅವನದು. ಅವನಿಗೆ ತಕ್ಕಂತೆ ಅವನ ನಿಷ್ಠ ಸೇವಕ ನಾಯಿ-ಹುಲಿಯ, ಹೊಲೆಯನು ಕೊಳೆ ಸರ್ವವ್ಯಾಪಿಯಾಗಿದ್ದರೂ ಷೋಕಿಯಾಗಿದ್ದನು. ತಲೆಗೆ ಕೆಂಪು ವಸ್ತ್ರ ಸುತ್ತಿದ್ದನು. ಮೈಗೊಂದು ಕಸೆ ಅಂಗಿ ಹಾಕಿದ್ದನು. ಪಂಚೆಯ ತುದಿ ಮೊಣಕಾಲನ್ನು ದಾಟಿತ್ತು. ಕಿವಿಗೆ ಒಂಟಿ ಬೇರೆ. ಎಲ್ಲಕ್ಕೂ ತಿಲಕಪ್ರಾಯವಾಗಿ ಮುಖಕ್ಕೆ ಕ್ಷೌರ, ಹೊಲೆಯನಾದರೂ ಬೆಳ್ಳಗಿದ್ದುದರಿಂದ ಮಲೆಯನಂತೆ ಕಾಣುತ್ತಿದ್ದ. ಹೆಗಲ ಮೇಲೆ ಮಡಿಸಿ ಹಾಕಿಕೊಂಡಿದ್ದ ಕಂಬಳಿ ಕೊಪ್ಪೆ ಅವನು ಮಳೆಗೆ ತಯಾರಾಗಿ ಹೊರಟಿದ್ದನ್ನು, ಬಗಲಲ್ಲಿ ಇರುಕಿಕೊಂಡಿದ್ದ ಬಗನಿಯ ಮರದ ಕರಿದೊಣ್ಣೆ, ಹೊಡೆದಾಟಕ್ಕೆ ಅವನು ಸಿದ್ಧವಾಗಿದ್ದಾನೆ ಎಂಬುದನ್ನು ಸೂಚಿಸುತ್ತಿದ್ದವು”. ಕಗ್ಗತ್ತಲ ರಾತ್ರಿಯಲ್ಲಿ ದಟ್ಟ ಅಡವಿಯಲ್ಲಿ ಗುತ್ತಿ ನಡೆಯುವುದು, ಹಳ್ಳವನ್ನು ದಾಟುವುದು, ಆಗ ದಾರಿಯಲ್ಲಿ ಬರುವ ವಿಘ್ನಗಳನ್ನು ಪರಿಹರಿಸಿಕೊಳ್ಳುವ ರೀತಿ ಮುಂತಾದ ಧೀರ ಕ್ರಿಯೆಗಳಿಗೆ ಪೂರಕವಾಗಿ ಅವನ ಶಕ್ತಿಶಾಲಿ ವ್ಯಕ್ತಿತ್ವದ ನಿರೂಪಣೆ ಬಂದಿದೆ. ನಾಯಿ ಹುಲಿಯನಿಗೂ ಗುತ್ತಿಗೂ ಇರುವ ಸಂಬಂಧ ಕಾದಂಬರಿಯ ಮುಖ್ಯ ಅಂಶಗಳಲ್ಲಿ ಒಂದು. ತಾನೇ ಹೊಟ್ಟಬಾಕನಾದರೂ ತನ್ನನ್ನು ನಂಬಿ ಬಂದ ಮೂಕಪ್ರಾಣಿಯೆಡೆಗೆ ಗುತ್ತಿ ತೋರುವ ಕಾಳಜಿ, ಅದು ಕುರ್ಕನಿಂದ ಗಾಯಗೊಂಡಾಗ ಈತ ತಪಿಸುವ ರೀತಿ, ತಿಮ್ಮಿಯನ್ನು ಪಡೆಯುವ ಬಗ್ಗೆ ಸಂಶಯವಾದಾಗ ಹುಲಿಯನನ್ನು ತಬ್ಬಿಕೊಂಡು ಗುತ್ತಿ ಅಳಲನ್ನು ಹೊರಹಾಕಿದ ವಿಧಾನ, ಕೊನೆಗೆ ತುಂಗಾ ನದಿಯನ್ನು ದಾಟುವಾಗ ಇವನೊಡನೆ ಬರಲು ಹೆಣಗುತ್ತಾ ಮುಳುಗಿ ಹೋದಾಗ ಪಡುವ ಪರಿತಾಪ –ಇಲ್ಲೆಲ್ಲ ಗುತ್ತಿ-ನಾಯಿಯ ಸಂಬಂಧದ ಪಾಕ ಕಾಣಿಸುತ್ತದೆ. ಹುಲಿಯನ ಸಾವಿನಲ್ಲಿ ಗುತ್ತಿಯ ಅರ್ಧ ವ್ಯಕ್ತಿತ್ವವೂ ಸತ್ತು ಹೋದ ಅನುಭವವಾಗುತ್ತದೆ. ಹೀಗಾಗಿಯೇ ಗುತ್ತಿಯನ್ನು ನಾಯಿಗುತ್ತಿ ಎಂದೂ ಹುಲಿಯನನ್ನು ಗುತ್ತಿನಾಯಿ ಎಂದೂ ಕರೆಯುವುದು ವಾಡಿಕೆಯಾಗಿತ್ತು. ಇಲ್ಲಿ ಕುವೆಂಪು ಮನುಷ್ಯನೊಂದಿಗೆ ಪ್ರಾಣಿ ಪ್ರಪಂಚವನ್ನೂ ಹೆಣೆಯುವ, ವ್ಯಕ್ತಿತ್ವ ಪ್ರದಾನ ಮಾಡುವ ಅವರ ಬರವಣಿಗೆಯ ಸಹಜ ರೀತಿಯನ್ನು ಕಾಣುತ್ತೇವೆ.

ಐತ-ಪೀಂಚಲು ಇವರದು ಸಾಮಾಜಿಕ ಸಮ್ಮತಿಯನ್ನು ಪಡೆದಿರುವ ಆದರ್ಶ ದಾಂಪತ್ಯ. ಕಾಡಿನಲ್ಲಿ ಉಲ್ಲಾಸದಿಂದ ನಡೆದುಬರುತ್ತಿದ್ದ ಈ ಜೋಡಿಯನ್ನು ಕಂಡ ಮುಕುಂದಯ್ಯನ ಅನಿಸಿಕೆ ಮುಖ್ಯವಾದುದು; “ಆ ಕಾಡಿನ ಹಿನ್ನೆಲೆಯಲ್ಲಿ, ಆ ಏಕಾಂತದಲ್ಲಿ, ಆ ಏಕಾಂತದಲ್ಲಿ, ಆ ವಿರಳ ಪಕ್ಷಿಕೂಜನದ ಸಮ್ಮೋಹಕತೆಯಲ್ಲಿ ಅವರಿಬ್ಬರೂ ಗಟ್ಟದ ತಗ್ಗಿನಿಂದ ಹೊಟ್ಟೆಪಾಡಿಗಾಗಿ ದುಡಿಯಲು ಬಂದಿದ್ದ ಬಿಲ್ಲರ ಜಾತಿಯ ನಮ್ಮ ಬಡ ಕೂಲಿಯಾಳುಗಳಂತೆ ಕಾಣಿಸುತ್ತಿರಲಿಲ್ಲ. ಆ ತರುಣ ದಂಪತಿ ಪ್ರಾಚೀನ ಕಾಲದಲ್ಲಿ ಪೌರಾಣಿಕ ಯುಗದಲ್ಲಿ ದಂಡಕಾರಣ್ಯಕ್ಕೋ ನೈಮಿಷಾರಣ್ಯಕ್ಕೋ ಕಾರ್ಯಾರ್ಥವಾಗಿ ಅವತರಿಸಿ ಅಲೆಯುತ್ತಿರಬಹುದಾದ ಭಿಲ್ಲ ವೇಷದ ಶಿವಶಿವಾಣಿಯರಂತೆ ತೋರಿದರು!” ಇಲ್ಲಿಯ ವೈಭವೀಕರಣ ಹೆಚ್ಚಾಯಿತೆಂದು ತೋರಿದರೂ ಕಾದಂಬರಿಯಲ್ಲಿ ಈ ಪಾತ್ರಗಳಿಗಿರುವ ಪ್ರಾಮುಖ್ಯದ ಹಿನ್ನೆಲೆಯಲ್ಲಿ ಸಹಜವೆನಿಸುತ್ತದ್ದೆ. ಐತನ ವಾಚಾಳಿತನ, ಮಡದಿಯ ಬಗೆಗಿನ ಉತ್ಕಟ ಪ್ರೇಮ ಅವನನ್ನು ಆತ್ಮೀಯನನ್ನಾಗಿಸುತ್ತದೆ. ಪೀಂಚಲು ಕೂಡ ಸ್ವಾಭಿಮಾನಿ, ಪ್ರಣಯ ಚತುರೆ, ಸಾಹಸಪ್ರಿಯೆ, ಹಾಸ್ಯಮಯಿ, ಸೇವಾ ನಿಷ್ಠೆ- ಯಾರಿಗೇ ಕಷ್ಟ ಬಂದರೂ ಅವಳು ಅಲ್ಲಿ ಹಾಜರಾಗುತ್ತಾಳೆ. ಮುಕುಂದಯ್ಯ-ಚಿನ್ನಮ್ಮರ ಬಾಳು ಹಸನಾಗಲು ಇವಳು ಮಾಡುವ ಸಹಾಯ-ಸಾಹಸ ಅಪಾರ. ಹೀಗಾಗಿ ಈ ಜೋಡಿ ಸುಳಿದಲ್ಲೆಲ್ಲ ಚೆಲುವಿನ, ಚೈತನ್ಯದ ಸುಳಿಗಾಳಿ ಬೀಸುತ್ತದೆ.

ಮುಕುಂದಯ್ಯ-ಚಿನ್ನಮ್ಮರ ಚರಿತ್ರೆ ವರ್ತಮಾನವನ್ನು ದಾಟಿ ಭೂತ ಭವಿಷ್ಯಕ್ಕೂ ಚಾಚುತ್ತದೆ. ಮುಕುಂದಯ್ಯ ಹತ್ತು ವರ್ಷದವನಿದ್ದಾಗ ಹಾಗೂ ಚಿನ್ನಮ್ಮ ಆರು ವರ್ಷದವಳಿದ್ದಾಗ ಅವರ ಪರಸ್ಪರ ಭೇಟಿಯಾಗುತ್ತದೆ. ಮುಕುಂದಯ್ಯನನ್ನು ತೋರಿಸಿ ದಾನಮ್ಮ ಹೆಗ್ಗಡಿತಿ ಚಿನ್ನಮ್ಮನಿಗೆ; “ಇಂವ ಯಾರು? ಹೇಳು ನೋಡಾನ” ಎಂದು ಕೇಳಿದಾಗ ಅವಳು ಕ್ರಮೇಣ ಗುರುತು ಹಿಡಿವಳಂತೆ ಬಾಯಿ ತೆರೆದು ಮುಗುಳು ನಗೆ ಬೀರಿ, ಕೊನೆಗೆ ನಾಚಿ ತಲೆಬಾಗಿ “ಅವರು” ಎನ್ನುತ್ತಾಳೆ. ಎಲ್ಲರಿಗೂ ಮುಗ್ಧವಾಗಿ ಕಂಡ ಈ ಘಟನೆಯನ್ನು ಕುವೆಂಪು ಜನ್ಮಾಂತರದ ಸಂಬಂಧವಾಗಿ ವ್ಯಾಖ್ಯಾನಿಸಿದ್ದಾರೆ. ಮುಂದೆ ಚಿನ್ನಮ್ಮನ ಮದುವೆ ಸಿಂಬಾವಿ ಭರಮೈ ಹೆಗ್ಗಡೆಯೊಂದಿಗೆ ಆಗುವುದೆಂದು ನಿಶ್ಚಿತವಾದಾಗ ಮುಕುಂದಯ್ಯ ಕಳವಳಗೊಳ್ಳುತ್ತಾನೆ. ಮುಂದೆ ಐತ, ಪೀಂಚಲು, ಗುತ್ತಿ ಎಲ್ಲರ ಸಹಕಾರ ಪಡೆದು ಅವಳನ್ನು ಹಾರಿಸಿಕೊಂಡು ಹೋಗುತ್ತಾನೆ. ಅದಕ್ಕಾಗಿ ಅವನು ತೋರುವ ಸಾಹಸ, ಅದಕ್ಕಾಗಿ ಮನೆಯ ಹಿರಿಯರನ್ನೂ ಎದುರುಹಾಕಿಕೊಳ್ಳಲು ಹೆದರದ ಅವನ ಧೈರ್ಯ, ತಾನು ಮೇಲ್ಜಾತಿಯವನಾದರೂ ಕೆಳಜಾತಿಯ ಆಳುಮಕ್ಕಳೊಂದಿದೆ ಅವನು ತೋರುವ ಪ್ರೀತಿ, ಸ್ನೇಹ, ಸಲುಗೆ, ದೇವಯ್ಯನ ಮತಾಂತರವನ್ನು ತಡೆಯುವಲ್ಲಿ ಅವನು ಪ್ರದರ್ಶಿಸಿದ ದಿಟ್ಟತನ, ಅಕ್ಕ ರಂಗಮ್ಮ ಹಾಗೂ ಸೋದರಳಿಯ ಧರ್ಮುವಿನ ಸಂತಾಪ ನೀಗುವಲ್ಲಿ ಅವನು ವಹಿಸುವ ಪಾತ್ರ ಈ ಎಲ್ಲಾ ಸಂಘಟನೆಗಳಿಂದ ಮುಕುಂದಯ್ಯ ಕಾದಂಬರಿಯಲ್ಲಿ ಒಂದು ಆದರ್ಶಮಯ ವ್ಯಕ್ತಿತ್ವವಾಗಿ ಮೂಡಿನಿಂತಿದ್ದಾನೆ. ಇನಿಯನಿಗಾಗಿ ಮನೆಯನ್ನು ತೊರೆದು ಹೊರಡುವ ಚಿನ್ನಮ್ಮ; ಸ್ನೇಹಶೀಲೆ, ಪ್ರೇಮಮಯಿ, ಮುಗ್ದೆಯಾಗಿ ಮುಕುಂದಯ್ಯನಿಗೆ ಸರಿಜೋಡಿಯಾಗಿದ್ದಾಳೆ.

ಈ ಮದುಮಕ್ಕಳ ಬದುಕಿನೊಂದಿಗೆ ಸಕಲ ಜೀವಿಗಳ ಪ್ರಣಯವೂ ಕಾದಂಬರಿಯಲ್ಲಿ ಜೀವ ಪಡೆದಿದೆ. ಪಶುಕಾಮದಿಂದ ಹಿಡಿದು ದೈವಿಕ ಪ್ರೇಮದವರೆಗೆ ಭಿನ್ನ ಸ್ತರದ ಚಿತ್ರಗಳು ಇಲ್ಲಿವೆ. ರಂಗಮ್ಮ-ದೊಡ್ಡಣ್ಣ ಹೆಗ್ಗಡೆಯವರ ದೈವಿಕ ಪ್ರೇಮವನ್ನು ಚಿತ್ರಿಸುವಷ್ಟೇ ನಿಷ್ಠೆಯಿಂದ ಹಂದಿ, ನಾಯಿಗಳ ಪ್ರಣಯ ವ್ಯಾಪಾರವನ್ನೂ ಲೇಖಕರು ನಿರೂಪಿಸಿದ್ದಾರೆ. ಗುತ್ತಿ-ತಿಮ್ಮಿಯರ ಪ್ರಣಯ ಒಂದು ಬಗೆಯದಾದರೆ; ಐತ-ಪೀಂಚಲು ನಡುವಿನ ಪ್ರಣ ಇನ್ನೊಂದು ಬಗೆಯದು. ಮುಕುಂದಯ್ಯ-ಚಿನ್ನಮ್ಮರದು ಮತ್ತೊಂದು ಬಗೆಯದು. ಮಧ್ಯೆ; ತಿಮ್ಮಪ್ಪ ಹೆಗಡೆಯ ಪಶುಕಾಮ, ಹೂವಳ್ಳಿ ವೆಂಕಣ್ಣ ನಾಯಕನ ಕಾಮದಾಟ, ಸೇರೆಗಾರ ಚೀಂಕ್ರನ ದೈತ್ಯಕಾಮ, ಕೋಣೂರು ರಂಗಪ್ಪಗೌಡರು ಅಕ್ಕಣಿಯನ್ನು ಹೊಂದುವುದು, ವ್ಯಾವಹಾರಿಕ ಮಟ್ಟದ ದೇವಯ್ಯ-ಕಾವೇರಿಯರ ಪ್ರಣಯ... ಹೀಗೆ ಮನುಷ್ಯ ಸಹಜ-ಅಸಹಜ ಪ್ರಣಯಗಳ ಸರಮಾಲೆಯೇ ಕಾದಂಬರಿಯಲ್ಲಿ ಜರುಗುತ್ತದೆ. ಈ ಮೂಲಕ ಕುವೆಂಪು ಲೈಂಗಿಕತೆಯ ನೈತಿಕ-ಅನೈತಿಕ ಪ್ರಶ್ನೆಗಳನ್ನು ಶೋಧಿಸಿದ್ದಾರೆ.

ಹತ್ತಾರು ಕತೆಗಳ ಎಳೆಗಳಿಂದ ಹೆಣೆದಿರುವ ಕಾದಂಬರಿ ನವ್ಯರ ಕೆಂಗಣ್ಣಿಗೆ ಗುರಿಯಾಗಿದ್ದು; ‘ಕೇಂದ್ರಪ್ರಜ್ಞೆ’ ಇಲ್ಲ ಎಂಬ ಕಾರಣಕ್ಕೇ ಆಗಿದೆ. ಎಂ. ಜಿ. ಕೆ. ಅವರು;ವಿವಿಧ ಅನುಭವಗಳನ್ನು ಅರ್ಥ ಮಾಡಬಲ್ಲ ಚೌಕಟ್ಟು ಅಥವಾ ಬಂಧ ಕಾದಂಬರಿಯಲ್ಲಿಲ್ಲ” ಎಂದು ತಕರಾರು ಪ್ರಾರಂಭಿಸಿದರು. ಅನಂತಮೂರ್ತಿಯವರು; “ಮಲೆಗಳಲ್ಲಿ ಮದುಮಗಳು ಸೂತ್ರರೂಪದ ಕೇಂದ್ರ ಪ್ರಜ್ಞೆಯಿಲ್ಲದೆ ವಿವರಗಳಲ್ಲಿ ಸೊಕ್ಕಿಬಿಡುತ್ತದೆ” ಎಂದೂ ಲಂಕೇಶ್; “ಮಲೆಗಳಲ್ಲಿ ಮದುಮಗಳು ಕಾದಂಬರಿಗೆ ಕೇಂದ್ರವಿಲ್ಲ, ಆದರೆ ಅಲ್ಲಿಯ ಜೀವನ ಚಿತ್ರಣ ದಟ್ಟ, ತೀವ್ರ” ಎಂದೂ ಪ್ರತಿಕ್ರಿಯಿಸಿದ್ದರು. ಗಿರಡ್ಡಿಯವರು; “ಮಲೆಗಳಲ್ಲಿ ಮದುಮಗಳು ಕಾದಂಬರಿಗೆ ಒಂದು ಕೇಂದ್ರ ಪಾತ್ರವಿಲ್ಲ, ಇಲ್ಲಿಯ ಅನುಭವಗಳು ಯಾವುದೇ ವ್ಯಕ್ತಿಯ ಕಣ್ಣಿಗಾಗಲೀ ಮನಸ್ಸಿಗಾಗಲೀ ಸೀಮಿತವಾಗಿಲ್ಲ” ಎನ್ನುತ್ತಾರೆ. ಈ ಎಲ್ಲ ಮಾತುಗಳೂ ಒಂದೇ ಅಭಿಪ್ರಾಯವನ್ನು ಅಭಿವ್ಯಕ್ತಿಸಿವೆ. ಜಿ. ಎಸ್. ಆಮೂರ ಅವರು; “ಮಲೆಗಳಲ್ಲಿ ಮದುಮಗಳುದಂಥ ಎಪಿಕ್ ಮಾದರಿಯ ಕೃತಿಯನ್ನು ಓದುವಾಗಲೂ ಕೂಡ ನವ್ಯ ಕಾದಂಬರಿಯ ನಿಕಷಗಳನ್ನು ನಂಬುವುದು ವಿಚಿತ್ರವಾಗಿದೆ” ಎನ್ನುತ್ತಾ ಇವಕ್ಕೆಲ್ಲ ಉತ್ತರಿಸಿದ್ದಾರೆ.

ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ತಮ್ಮ ಮಹತ್ವಾಕಾಂಕ್ಷೆಯ ‘ಬಾ ಕುವೆಂಪು ದರ್ಶನಕೆ’ ಎಂಬ ಕುವೆಂಪು ಸಮಗ್ರ ಓದಿನ ಕೃತಿಯಲ್ಲಿ ಇದುವರೆಗಿನ ವಿಮರ್ಶೆಗೆ ಉತ್ತರಿಸಿದ್ದಾರೆ; “ಮಲೆಗಳಲ್ಲಿ ಮದುಮಗಳು ಕಾದಂಬರಿಯ ಕೇಂದ್ರದಲ್ಲಿ ಮನುಷ್ಯನ ಸಹಜ ಸ್ವಾತಂತ್ರ್ಯದ ಹಂಬಲವಿದೆ. ಗುತ್ತಿ, ಮುಕುಂದಯ್ಯ, ದೇವಯ್ಯ, ಸೇಸನಾಯ್ಕ, ಸೇಸಿ- ಎಲ್ಲರೂ ಈ ಎಲ್ಲರ ಕತೆಯೂ ಬಿಡುಗಡೆಗಾಗಿ ತುಡಿಯುವುದನ್ನು ಕಾಣುತ್ತೇವೆ” ಎಂದಿದ್ದಾರೆ. ಗುತ್ತಿಯದು ಸಾಮಾಜಿಕ ಅಂತಸ್ತುಗಳ ವಿರುದ್ಧದ ಹೋರಾಟವಾದರೆ; ಮುಕುಂದಯ್ಯ ಜಮೀನ್ದಾರಿ ವ್ಯವಸ್ಥೆಯ ಕಟ್ಟುಪಾಡುಗಳನ್ನು ಪ್ರಶ್ನಿಸಿದ್ದಾನೆ. ದೇವಯ್ಯ ಧಾರ್ಮಿಕ ವಿಧಿ ವಿಧಾನಗಳ ಹಾಗೂ ಸಾಂಪ್ರದಾಯಿಕ ಬದುಕಿನಿಂದ ಬಿಡುಗಡೆ ಬಯಸಿದರೆ; ಸೇಸ ನಾಯ್ಕ ಮೇಲ್ವರ್ಗದವರ ಸಾಮಾಜಿಕ ರೀತಿ ನೀತಿಗಳಿಂದ ಬಿಡುಗಡೆಗಾಗಿ ಹಾತೊರೆಯುತ್ತಾನೆ. ಬಿಡುಗಡೆಯ ಹಂಬಲ, ಸ್ವಾತಂತ್ರ್ಯದ ಅಭೀಪ್ಸೆಗಳು ಕಾದಂಬರಿಯ ಒಳ ಹೆಣಿಗೆಯೇ ಆಗಿವೆ.

ಕುವೆಂಪು ಅವರಿಗೆ ಮೊದಲಿಗೆ ಕಾದಂಬರಿ ಬರವಣಿಗೆಯ ಬಗ್ಗೆ ಅಂತಹ ಗೌರವವೇನೂ ಇರಲಿಲ್ಲ. ಒಂದು ಬಗೆಯ ತಿರಸ್ಕಾರವೇ ಇತ್ತು. ಆದರೆ ಟಾಲ್ ಸ್ಟಾಯ್ ಕಾದಂಬರಿಗಳನ್ನು ಓದಿದ ಮೇಲೆ ಅವರ ಮನೋಧರ್ಮ ಬದಲಾಯಿತು. ಕಾದಂಬರಿ ಪ್ರಕಾರದ ಬಗ್ಗೆ ಇದ್ದ ಪೂರ್ವಗ್ರಹ ಹೊರಟುಹೋಗಿ ಕಾದಂಬರಿಯೂ ಗಂಭೀರ ಕಾಣ್ಕೆಯನ್ನು ಹೊರಹೊಮ್ಮುವ ಕೃತಿಯಾಗಬಹುದು ಎಂದು ಮನವರಿಕೆಯಾಯಿತು. ಮುಂದೆ ಥಾಮಸ್ ಹಾರ್ಡಿ, ರೋಲಾ, ಗಾಲ್ಸ್‍ವರ್ದಿಯ ಕಾದಂಬರಿಗಳೂ ಅವರನ್ನು ಆಕರ್ಷಿಸಿದವು.

ತಮ್ಮ ಗುರುಗಳಾದ ಟಿ.ಎಸ್. ವೆಂಕಣ್ಣಯ್ಯನವರೊಂದಿಗೆ; ‘ಕನ್ನಡದಲ್ಲೂ ಅಂತಹ ಮಹಾಕಾದಂಬರಿ ಬರಬೇಕು’ ಎಂಬ ಆಶಯ ವ್ಯಕ್ತಮಾಡಿದಾಗ; ‘ನೀವೇ ಏಕೆ ಬರೆಯಬಾರದು?’ ಎಂದರಂತೆ. ಆಗ ಕುವೆಂಪು; “ಅದೇನು ಭಾವಗೀತೆ, ಸಣ್ಣಕತೆ, ನಾಟಕ ಬರೆದಂತೆಯೇ? ಮಹಾಕಾದಂಬರಿಗೆ ಇಂಗ್ಲಿಷ್ ನಲ್ಲಿ ಗ್ರೇಟರ್ ನಾವೆಲ್ ಎನ್ನುತ್ತಾರೆ. ಅದರ ಪಾತ್ರಸಂಖ್ಯೆಯ ವಿಪುಲತೆ, ಅದರ ದಿಗಿಲು ಹುಟ್ಟಿಸುವ ವಿಸ್ತಾರ, ಅದರ ಭಯಂಕರ ವೈವಿಧ್ಯಾ ಅಲೋಚಿಸಿದರೆ ಮೈ ಜುಮ್ಮೆನ್ನುತ್ತದೆ” ಎಂದು ನಿರಾಕರಿಸುತ್ತಾರೆ. ಆದರೆ ವೆಂಕಣ್ಣಯ್ಯನವರು; ‘ಕಾದಂಬರಿಗೆ ಆವಶ್ಯಕವಾದ ಕೆಲವು ಶಕ್ತಿಗಳು ನಿಮ್ಮಲ್ಲಿ ಆಗಲೇ ಪ್ರಕಟಗೊಂಡು ಸಾರ್ಥಕವಾಗಿವೆ. ಕಥನ, ಸಂವಾದ ಮತ್ತು ವರ್ಣನ ಈ ಮೂರೂ ಶಕ್ತಿಗಳು ನಿಮ್ಮಲ್ಲಿ ಇವೆ’ ಎನ್ನುವ ಮೂಲಕ ಪ್ರೋತ್ಸಾಹಿಸುತ್ತಾರೆ. ಆಗ ಕುವೆಂಪು ತಮ್ಮ ಮೊದಲ ಕಾದಂಬರಿ ‘ಕಾನೂರು ಹೆಗ್ಗಡಿತಿ’ ಬರೆಯಲು ತೊಡಗಿದರು.

ಜಿ. ಎಸ್. ಶಿವರುದ್ರಪ್ಪನವರಿಗೆ ನೀಡಿದ ಸಂದರ್ಶನವೊಂದರಲ್ಲಿ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಬಗ್ಗೆ ಕುವೆಂಪು ಹೀಗೆ ಹೇಳಿದ್ದಾರೆ; “ಮಲೆಗಳಲ್ಲಿ ಮದುಮಗಳು ಬರೆಯೋ ಹೊತ್ತಿಗೆ ನನ್ನ ದೃಷ್ಟಿಯಲ್ಲೇ ಬದಲಾವಣೆಯಾಗಿತ್ತು. ಜೀವ-ಜಗತ್ತು-ಬ್ರಹ್ಮ ಈ ವಿಚಾರಗಳಲ್ಲಿ ಒಂದು ಅತ್ಯಂತ ಪರಿಣತ ಸ್ಥಿತಿಗೆ ಬಂದ ಮೇಲೆ ನಾನು ಅದನ್ನು ಬರೆದದ್ದು. ಈ ಒಂದು ಮನೋಧರ್ಮ ಇದಕ್ಕೂ ಹಿಂದೆಯೇ ರೂಪುಗೊಂಡಿತ್ತಾದರೂ ಈ ಕಾದಂಬರಿ ಬರೆಯೋ ಹೊತ್ತಿಗೆ ನಾನು ಸಂಪೂರ್ಣ ಬದಲಾಗಿದ್ದೆ. ಈ ಕಾದಂಬರಿಯ ಮೊದಲಲ್ಲೇ ಹೇಳಿದ್ದೀನಲ್ಲ, ಇಲ್ಲಿ ಯಾರೂ ಮುಖ್ಯರಲ್ಲ ಇತ್ಯಾದಿ...ಅದು ಕೇವಲ ಕಾದಂಬರಿಯ ಮಾತಲ್ಲ. ಪೂರ್ಣದೃಷ್ಟಿಯಿಂದ ನೋಡಿದಾಗ ಜೀವನದಲ್ಲೂ ನನಗೆ ಮೇಲು-ಕೀಳು ಎಂಬುದಕ್ಕೆ ಅರ್ಥವಿಲ್ಲ ಅನ್ನಿಸಿತ್ತು...” ಇಂತಹ ಮಹಾನ್ ದರ್ಶನದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಪ್ರಸ್ತುತ ಕಾದಂಬರಿ ಇಂದಿಗೂ ತನ್ನ ಸತ್ವ ಶ್ರೀಮಂತಿಕೆಯಿಂದ ಆಕರ್ಷಿಸುತ್ತಲೇ ಇದೆ.

ಈ ಅಂಕಣದ ಹಿಂದಿನ ಬರೆಹಗಳು:

ಗ್ರಾಮಾಯಣ ಎಂಬ ಸಮಕಾಲೀನ ಪುರಾಣ

ಬದುಕಿನ ದಿವ್ಯದರ್ಶನ ಮೂಡಿಸುವ `ಮರಳಿ ಮಣ್ಣಿಗೆ’

ಮಾಸ್ತಿಯವರ ಕತೆಗಾರಿಕೆಗೆ ಹೊಸ ಆಯಾಮ ದಕ್ಕಿಸಿಕೊಟ್ಟ ಕೃತಿ ‘ಸುಬ್ಬಣ್ಣ’

ಮೈಸೂರ ಮಲ್ಲಿಗೆ ಎಂಬ ಅಮರ ಕಾವ್ಯ

ಪುಸ್ತಕ ಲೋಕವೆಂಬ ಬದುಕಿನ ಬುತ್ತಿ

ಎ.ಆರ್. ಕೃಷ್ಣಶಾಸ್ತ್ರಿಯವರ 'ವಚನ ಭಾರತ'

ಅಂಬಿಕಾತನಯದತ್ತರ ಸಖೀಗೀತ

ಡಿ. ವಿ. ಜಿ.ಯವರ ಮಂಕುತಿಮ್ಮನ ಕಗ್ಗ

 

 

 

 

MORE NEWS

ನಾದದ ಇಂಪು ಅಡುಗೆಯ ಕಂಪು- ರಾಗ ಎನ್...

12-05-2021 ಬೆಂಗಳೂರು

ಖ್ಯಾತ ಗಾಯಕಿ, ಲೇಖಕಿ ಹಾಗೂ ಕಿರಾನಾ ಘರಾನೆಯ ಗಾಯಕಿ ಶೀಲಾ ಧರ್ ಅವರ ಆತ್ಮಕಥೆ ‘ರಾಗ ಎನ್ ಜೋಶ್’. ಒಬ್ಬ ವ್...

ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು...

11-05-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...

ರವೀಂದ್ರನಾಥ ಟ್ಯಾಗೋರರ ಪ್ರಭಾವದಲ್ಲ...

07-05-2021 ಬೆಂಗಳೂರು

ಗುರುದೇವ ರವೀಂದ್ರನಾಥ ಟ್ಯಾಗೋರರ ಸಾಧನಾ ಎಂಬ ಅದ್ಭುತ ಪ್ರಬಂಧಗಳ ಸಂಕಲನ ಮತ್ತು ಕೆಲವು ಕವಿತೆಗಳ ಅಚ್ಚಳಿಯದ ಪ್ರಭಾವದಲ್ಲಿ...