ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

Date: 23-04-2024

Location: ಬೆಂಗಳೂರು


ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್ನುವುದರಲ್ಲಿ ಇರುವ ಪ್ರೀತಿ ಇದೆಯಲ್ಲ, ಪ್ರೀತಿಯನ್ನು ಉಳಿಸಿಕೊಂಡವರಿಗೆ ಯಾವ ಕಾರಣಕ್ಕೂ ಆ ಪ್ರೀತಿ ಕಮ್ಮಿನೂ ಆಗಿರುವುದಿಲ್ಲ ಆ ಪ್ರೀತಿಯನ್ನು ಓದುಗರು ಕಳೆಯುವುದಕ್ಕೂ ಸಾಧ್ಯವಿಲ್ಲ ಎಂದು ಖ್ಯಾತ ವಿಮರ್ಶಕಿ ಡಾ.ಎಮ್.ಎಸ್. ಆಶಾದೇವಿ ಅವರು ಅಭಿಪ್ರಾಯ ಪಟ್ಟರು.

ದಿನಾಂಕ 2024 ಏಪ್ರಿಲ್ 23 ರಂದು ಕರ್ನಾಟಕ ಪ್ರಕಾಶಕರ ಸಂಘ (ರಿ.) ಮತ್ತು ಬಿ. ಎಂ. ಶ್ರೀ. ಪ್ರತಿಷ್ಠಾನ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಪುಸ್ತಕ, ಕೃತಿಸ್ವಾಮ್ಯ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಹಳ ಆಶ್ಚರ್ಯಪಡುವ ವಿಚಾರವೆಂದರೆ, ಪತ್ರಿಕೋದ್ಯಮ ಪುಸ್ತಕೋದ್ಯಮ, ಮಾಧ್ಯಮ ಇವೆಲ್ಲದರ ಬಗ್ಗೆಗೆ ನೂರು ಪ್ರಶ್ನೆಗಳು ಇರುವ ಹೊತ್ತಿನಲ್ಲಿ ಪುಸ್ತಕೋದ್ಯಮದ ಬಗೆಗೆ ನಮ್ಮ ಆಸ್ತಕಿಯೇನು ಕುಂದಿಲ್ಲ. ಇದಕ್ಕೆ ಸಾಕ್ಷಿ ಇಲ್ಲಿ ಇಂದು ನೆರೆದಿರುವಂತಹ ಪ್ರಕಾಶಕರ ಸಂಖ್ಯೆ ಎಂದರು.

"ಯಾರು ಸ್ವತಃ ನಿಜವಾದ ಅರ್ಥದಲ್ಲಿ ಓದುಗರು ಆಗಿರುವುದಿಲ್ಲವೋ, ಯಾರ ಒಳಗೆ ಒಬ್ಬ ಲೇಖಕ ಅಥವಾ ಲೇಖಕಿ ಇರುವುದಿಲ್ಲವೋ ಅವರು ಓದುಗರಾಗಲೂ ಸಾಧ್ಯವೇ ಇಲ್ಲ. ಆದ್ದರಿಂದ ನಮ್ಮನ್ನೆಲ್ಲಾ ಇಲ್ಲಿ ಸೇರಿಸಿರುವುದು ನಿಜವಾದ ಸಾಹಿತ್ಯ. ಸಾಹಿತ್ಯ ಅಂದರೆ ಬರೀ ಕತೆ, ಕಾದಂಬರಿಯಲ್ಲ," ಎಂದು ತಿಳಿಸಿದರು.

"ಪ್ರಸ್ತುತ ಜಗತ್ತಿನಲ್ಲಿ ಇ-ಬುಕ್ ಕಡೆಗೆ ಓದುಗರು ವಾಲಿಕೊಂಡಿದ್ದರೂ ಕೂಡ ಕೈಯಲ್ಲಿ ಒಂದು ಪುಸ್ತಕವನ್ನು ಹಿಡಿದುಕೊಂಡು ಓದುವಾಗ ಸಿಗುವ ನೆಮ್ಮದಿಯೇ ಬೇರೆ. ಆ ನಿಟ್ಟಿನಲ್ಲಿ ಇಂದು ಕನ್ನಡ ಓದುಗರನ್ನು ಮತ್ತಷ್ಟು ಸಾಹಿತ್ಯದತ್ತ ಸೆಳೆಯುವಲ್ಲಿ ಕೆ.ಎನ್. ಗಣೇಶಯ್ಯ ಅವರ ಪಾತ್ರ ಬಹಳಷ್ಟಿದೆ. ಅವರ ಸಾಹಿತ್ಯ ಎಲ್ಲರಿಗೂ ಇಷ್ಟವಾಗುತ್ತದೆ. ಹಾಗೆಯೇ ಅವರ ಕೃತಿಗಳನ್ನು ಪ್ರಕಟಿಸುತ್ತಿರುವ ಪ್ರಕಾಶ್ ಕಂಬತ್ತಳ್ಳಿ ದಂಪತಿಗಳಿಗೂ ಧನ್ಯವಾದಗಳು," ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಲೇಖಕ ಕೆ.ಎನ್. ಗಣೇಶಯ್ಯ ಮಾತನಾಡಿ, "ನಮ್ಮಲ್ಲಿನ ಹಲವಾರು ಪ್ರಕಾಶಕರನ್ನು ನೋಡಿದರೆ ಅವರು ಮೂಲತಃ ಬರಹಗಾರರೇ ಆಗಿದ್ದಾರೆ. ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ. ಏಕೆಂದರೆ ಅವರೆಲ್ಲರಲ್ಲಿ ಇದ್ದದ್ದು ಒಂದೇ ಹುಚ್ಚು. ಅದು ಕನ್ನಡ ಭಾಷೆಯನ್ನ ಓದುಗರಿಂದ ಅಥವಾ ಪ್ರಕಾಶಕರಿಂದ ಓದುಗರಿಗೆ, ಬರಹಗಾರರಿಂದ ಓದುಗರಿಗೆ ಮುಟ್ಟಿಸಬೇಕು ಕನ್ನಡ ಭಾಷೆಯನ್ನು ಬೆಳೆಸಬೇಕು. ಕನ್ನಡವನ್ನ ಎಲ್ಲ ಕಡೆ ಮುಟ್ಟುವ ಹಾಗೆ ಅಥವಾ ಕನ್ನಡ ಸಾಹಿತ್ಯ ಎಲ್ಲರಿಗೂ ಸೇರೋ ಮಾಡಬೇಕು ಅನ್ನುವ ಹುಚ್ಚು ಅಭಿಮಾನ ಅಥವಾ ಅಭಿಲಾಷೆ ಅವರಿಗೆ ಇದ್ದಿದ್ದರಿಂದ ಅವರು ತಮ್ಮದೇ ಆದಂತಹ ಪ್ರಕಾಶನ ಸಂಸ್ಥೆಗಳನ್ನು ತೆರೆದರು," ಎಂದರು.

ಬಿ. ಎಂ. ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ಮಾತನಾಡಿ, "ವಿಶ್ವ ಪುಸ್ತಕ ದಿನದಂದು ಬಹಳ ಪ್ರೀತಿಯಿಂದ, ಹೆಮ್ಮೆಯಿಂದ ಅಭಿಮಾನದಿಂದ ನಮ್ಮೆಗೆಲ್ಲರಿಗೂ ಆದರ್ಶ ಎನ್ನುವ ರೀತಿಯಲ್ಲಿ ನಾವು ನೆನಪು ಮಾಡಿಕೊಳ್ಳಬೇಕಾಗಿರುವ ವ್ಯಕ್ತಿತ್ವ ಡಾ. ಬಿ.ಆರ್. ಅಂಬೇಡ್ಕರ್. ನಮ್ಮ ಕಾಲಕ್ಕಿಂತ ಸ್ವಲ್ಪ ಮುಂಚಿನ ಅಂಬೇಡ್ಕರ್ ಪ್ರೀತಿಯ, ಅಗಾಧವಾದ, ವೈವಿಧ್ಯಮಯವಾದ ಓದಿನಿಂದ ಎಷ್ಟು ಉನ್ನತವಾದ ವ್ಯಕ್ತಿತ್ವವನ್ನು ಗಳಿಸಿಕೊಳ್ಳಬಹುದು ಎನ್ನುವುದಕ್ಕೆ ಬಹುಶಃ ಸರ್ವಕಾಲಿಕವಾದಂತಹ ಉದಾಹರಣೆ ಎಂದು ನನಗನ್ನಿಸುತ್ತಿದೆ," ಎಂದು ತಿಳಿಸಿದರು.

ಕರ್ನಾಟಕ ಪ್ರಕಾಶಕರ ಸಂಘದ ಉಪಾಧ್ಯಕ್ಷೆ ಡಾ. ವಸುಂಧರಾ ಭೂಪತಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಯನ್ನು ಸಲ್ಲಿಸಿದರು.

2024ನೇ ಸಾಲಿನ ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿಗೆ ಪಾತ್ರರಾದ ವಿಜಯಪುರದ ಪುಸ್ತಕ ಪ್ರೀತಿ ಮಳಿಗೆಯ ರೂಪ ಮತ್ತೀಕೆರೆ ಹಾಗೂ 2024ನೇ ಸಾಲಿನ ಎಂ. ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಗೆ ಪಾತ್ರರಾದ ಮೈಸೂರಿನ ಕನ್ನಡ ಪುಸ್ತಕ ಪ್ರಾಧಿಕಾರ ಮಳಿಗೆಯ ನಿಂಗರಾಜ್ ಚಿತ್ತಣ್ಣನವರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಸ್ತಾವನೆಯ ಮಾತುಗಳನ್ನಾಡಿದ ಕರ್ನಾಟಕ ಪ್ರಕಾಶಕ ಸಂಘದ ಅಧ್ಯಕ್ಷ ಪ್ರಕಾಶ್‌ ಕಂಬತ್ತಳ್ಳಿ, "ನಮ್ಮಲ್ಲಿ ಕ್ಲಾಸಿಕಲ್ ಲಿಟರೇಚರ್‍ ಅನ್ನು ಓದುವಂತಹ ಪ್ರವೃತ್ತಿ ಬಹಳಷ್ಟು ಕಡಿಮೆಯಾಗುತ್ತಿದೆ. ಒಂದು ಪ್ಯಾರಾ, ಎರಡು ಪ್ಯಾರಾಗಳಿಗೆ ಮಾತ್ರ ನಮ್ಮ ಓದಿನ ಆಸಕ್ತಿ ಸೀಮಿತವಾಗುತ್ತಿದೆ. ಹಾಗಾಗಿ ಪುಸ್ತಕಗಳನ್ನು ಓದುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಪುಸ್ತಕಗಳಿಗೂ ಒಂದು ಮೌಲ್ಯವಿದೆ. ನಮ್ಮ ವಸ್ತುಗಳನ್ನು ನಾವು ಹೇಗೆ ಮೌಲ್ಯವಾಗಿ ಪ್ರೀತಿಸುತ್ತೇವೆಯೋ ಹಾಗೆಯೇ ನಾವು ಪುಸ್ತಕಗಳನ್ನು ಕೂಡ ಪ್ರೀತಿಸಬೇಕು," ಎಂದು ತಿಳಿಸಿದರು.

ಬೆಂಗಳೂರಿನ ನವಕರ್ನಾಟಕ ಪಬ್ಲಿಕೇಷನ್ಸ್‌ ನ ಎ. ಆರ್‌. ಉಡುಪ ಅವರು ಸ್ವಾಗತಿಸಿದರು. ಪ್ರಕಾಶಕರ ಸಂಘದ ಜಂಟಿ ಕಾರ್ಯದರ್ಶಿ ಸೃಷ್ಟಿ ನಾಗೇಶ್ ವಂದನಾರ್ಪಣೆ ಮಾಡಿದರು. ಪ್ರಕಾಶಕರ ಸಂಘದ ಪ್ರಧಾನ ಕಾರ್ಯದರ್ಶಿ ನ. ರವಿಕುಮಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮವನ್ನು ಬುಕ್ ಬ್ರಹ್ಮ ಯುಟ್ಯೂಬ್ ಚಾನೆಲ್ ಮೂಲಕ ಆನ್ ಲೈನ್ ನಲ್ಲಿ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.

MORE NEWS

ಮೈಸೂರಿನಲ್ಲಿ ಚಿಣ್ಣರಿಗಾಗಿ ಜನಪದ ಸಾಹಿತ್ಯ ಕಮ್ಮಟ

03-05-2024 ಬೆಂಗಳೂರು

ಮೈಸೂರು: ಚಿಣ್ಣರಿಗಾಗಿ ಜನಪದ ಸಾಹಿತ್ಯವನ್ನು ಪರಿಚಯಾತ್ಮಕವಾಗಿ ತಿಳಿಸಿಕೊಡುವ ನಿಟ್ಟಿನಲ್ಲಿ ಅದಮ್ಯ ರಂಗಶಾಲೆ ಹಾಗೂ ಸ್ಪಂ...

ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣ ಕೃತಿ ‘ಯಕ್ಷಹಂಸ’ ಲೋಕಾರ್ಪಣೆ

01-05-2024 ಬೆಂಗಳೂರು

ಹೊಸ್ತೋಟ ಮಂಜುನಾಥ ಭಾಗವತರ ಬಗ್ಗೆ ಬರೆದಿರುವ ‘ಯಕ್ಷಹಂಸ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 2024 ಏಪ್ರ...

ಹರಿದಾಸ ಸಾಹಿತ್ಯದ ಮೇರು ಶೃಂಗ ಶ್ರೀವಿಜಯದಾಸರು: ಅರಳುಮಲ್ಲಿಗೆ ಪಾರ್ಥಸಾರಥಿ

30-04-2024 ಬೆಂಗಳೂರು

ಬೆಂಗಳೂರಿನ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯ ಶ್ರೀಪಾದರಾಜ ಸಭಾಭವನದಲ್ಲಿ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್,...