ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

Date: 23-04-2024

Location: ಬೆಂಗಳೂರು


ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀಳಿಗೆಗೆ ಪುಸ್ತಕ ಸಂಸ್ಕೃತಿಯ ಮಹತ್ವವನ್ನು ರವಾನಿಸುವ ಕೆಲಸ ಮುಖ್ಯ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ಪಟ್ಟರು. 

ದಿನಾಂಕ 2024 ಏಪ್ರಿಲ್ 23ರಂದು ಶೇಷಾದ್ರಿಪುರಂ ಕಾಲೇಜಿನ ಕಾನ್ ಫರೆನ್ಸ್ ಹಾಲ್ ನಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ.) ಆಯೋಜಿಸಿದ್ದ ‘ವಿಶ್ವ ಪುಸ್ತಕ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಈ ವಿಶ್ವ ಪುಸ್ತಕ ದಿನಾಚರಣೆಯನ್ನ 1995ರಿಂದ ಆರಂಭ ಆಯಿತು ಅಂತಾ ನಿಡಸಾಲೆ ಅವರು ಹೇಳಿದರು. ವಾಸ್ತವವಾಗಿ ಮೂಲ ಕಲ್ಪನೆ ಬಾರ್ಸಿಲೋನದಲ್ಲಿ ಆರಂಭವಾದದ್ದು, ಬಾರ್ಸಿಲೋನ ಇದ್ದಂತಹ ಸೆರ್ವಾಂಟಿಸ್ ಪಬ್ಲಿಷಿಂಗ್ ಹೌಸ್ ಅದರ ಮಾಲೀಕ ಸೆರ್ವಾಂಟಿಸ್ ಒಬ್ಬ ಲೇಖಕ. ಅವನ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಬೇಕು ಅಂತಾ ಈ ಪುಸ್ತಕ ದಿನದ ಕಲ್ಪನೆ ನೀಡಿದ್ದು ಬಾರ್ಸಿಲೋನ. ಸರ್ವಾಂಟೀಸ್ ನಿಧನರಾದ ದಿನ ಏಪ್ರಿಲ್ 23, ಅವರ ಜನ್ಮದಿನ ಅಕ್ಟೋಬರ್ 7 , ಅಕ್ಟೋಬರ್ 7ಕ್ಕೆ ಈ ದಿನವನ್ನು ಆಚರಿಸಬೇಕು ಅಂತಾ ಯೋಚಿಸುತ್ತಾರೆ ಆದರೆ ಅವರು ಸತ್ತ ದಿನವಾದ ಏಪ್ರಿಲ್ 23ಕ್ಕೆ ಅವರ ಸ್ಮರಣಾರ್ಥ ಈ ದಿನವನ್ನು ಆಚರಿಸಬೇಕು ಅಂತಾ ನಿರ್ಧರಿಸಲಾಗುತ್ತೆ. 

ಈ ಯೋಜನೆಯನ್ನ ಮುಂದೆ ಯುನೆಸ್ಕೋ ಅವರು ಕೈಗೆತ್ತಿಕೊಳ್ಳುತ್ತಾರೆ. ಏಪ್ರಿಲ್ 23ರಂದೇ ಶೇಕ್ಸ್ ಪಿಯರ್ ಜನನ ಮತ್ತು ಸೆರ್ವಾಂಟಿಸ್ ಹಾಗೂ ಅನೇಕ ಮುಖ್ಯ ಲೇಖಕರು ಏನೋ ವಿಚಿತ್ರ ಎಂಬಂತೆ ಏಪ್ರಿಲ್ 23ಕ್ಕೆ ನಿಧನರಾಗಿರುತ್ತಾರೆ. ಆ ಸ್ಮರಣಾರ್ಥ ಯುನೆಸ್ಕೋ ಅವರೆಲ್ಲರ ನೆನಪಿನಲ್ಲಿ ವಿಶ್ವ ಪುಸ್ತಕ ದಿನವನ್ನು ಆಚರಿಸಬೇಕು ಅಂತೇಳಿ 1995ರಲ್ಲಿ ಈ ದಿನವನ್ನು ಆರಂಭಿಸಿತು. ಈಗಾಗಲೇ ನಿಡಸಾಲೆ ಅವರು ಹೇಳಿದಂತೆ ಓದುವಿಕೆ, ಪ್ರಕಟಣೆ ಮತ್ತು ಹಕ್ಕು ಸ್ವಾಮ್ಯದ ದಿನವಾಗಿ ಇದನ್ನು ಆಚರಿಸಲಾಗುತ್ತದೆ. ಇದು ವಿಶ್ವ ಪುಸ್ತಕ ದಿನಾಚರಣೆಯ ಸಣ್ಣ ಇತಿಹಾಸ ಎಂದು ವಿವರಿಸಿದರು. 

ಪುಸ್ತಕದ ಮಹತ್ವದ ಅನೇಕರು ಹೇಳುತ್ತಲೇ ಬಂದಿದ್ದಾರೆ. ನೆಹರು ಅವರು ಹೇಳಿದರು ‘ಪುಸ್ತಕಗಳು ನಾಡಿನ ಸಂಸ್ಕೃತಿಯ ಪ್ರತೀಕ’, ರವೀಂದ್ರನಾಥ ಠಾಗೂರರು ಹೇಳಿದರು ‘ಜಗತ್ತಿಗೆ ಸೂರ್ಯನ ಬೆಳಕು ಬೇಕು, ಬದುಕಿಗೆ ಪುಸ್ತಕದ ಬೆಳಕು ಬೇಕು’ ಅಂತ. ಅಂದರೆ ಪುಸ್ತಕ ಬೆಳಕು ಕೊಡುತ್ತೆ. ಅಜ್ಞಾನವೆಂಬ ಕತ್ತಲನ್ನು ಕಳೆದು, ಜ್ಞಾನದ ದೀವಿಗೆಯಾಗಿ ಪುಸ್ತಕಗಳು ಕೆಲಸ ಮಾಡುತ್ತವೆ. ಎಲ್ಲಾ ಪ್ರಬುದ್ಧರು ಪುಸ್ತಕಗಳ ಬಗ್ಗೆ ಮಾತಾಡುತ್ತಾ ಬಂದಿದ್ದಾರೆ ಎಂದರು.

ಪುಸ್ತಕಗಳಿಗೆ ಇವತ್ತು ಆತಂಕ ಬರುತ್ತಿದೆಯಾ ಅಂತಾ ಯೋಚಿಸಿದರೆ, ಕನ್ನಡದಲ್ಲಿ ವರ್ಷಕ್ಕೆ ಸುಮಾರು ಎಂಟು ಸಾವಿರ ಪುಸ್ತಕಗಳು ಯಾಕೆ ಪ್ರಕಟ ಆಗುತ್ತವೆ ಅಂತಾ ನೋಡಬೇಕು. ಎಂಟು ಸಾವಿರ ಪುಸ್ತಕಗಳನ್ನು ಸುಮ್ಮನೆ ಪ್ರಕಟಿಸುವುದಿಲ್ಲ. ಇಂದು ಪುಸ್ತಕೋದ್ಯಮಕ್ಕೆ ದಕ್ಕೆ ತರುವ ಕೆಲಸಗಳಾಗುತ್ತಿರುವುದು ನಿಜ. ಆದರೆ ಪುಸ್ತಕಗಳು ಹೊರಟು ಹೋಗಿಬಿಡುತ್ತವಾ ಅಂತ ಯೋಚಿಸಿದರೆ ಅದರ ಅಸ್ಥಿತ್ವ ಇದ್ದೇ ಇರುತ್ತೆ. ಯಾವುದೇ ತಂತ್ರಜ್ಞಾನ ಬಂದರೂ ಮೊದಲು ಅಚ್ಚಾಗಬೇಕು. ಅಚ್ಚಾದ ನಂತರವೇ ಅದನ್ನು ಹೊಸ ತಂತ್ರಜ್ಞಾನಕ್ಕೆ ಬಳಸೋಕೆ ಆಗೋದು. ಹಾಗಾಗಿ ಪುಸ್ತಕಕ್ಕೆ ಅದರದೇ ಆದ ಮಹತ್ವ ಇದೆ ಎಂದು ತಿಳಿಸಿದರು.

ನಮಗಿಂತ ಮುಂದುವರೆದಿರುವ ದೇಶಗಳಲ್ಲಿ ಸಹ ಬೀದಿ ಒಂದಕ್ಕೆ ಹತ್ತಾರು ಪುಸ್ತಕದ ಅಂಗಡಿಗಳಿವೆ. ಅಷ್ಟು ತಂತ್ರಜ್ಞಾನ ಮುಂದುವರೆದಿರುವ ದೇಶಗಳಲ್ಲಿ, ಅದು ಕೇಂಬ್ರಿಡ್ಜ್ ಇರಬಹುದು ಆಕ್ಸ್ ಫರ್ಡ್ ಇರಬಹುದು ಅಲ್ಲಿನ ಬೀದಿಯಲ್ಲಿ ಹತ್ತಾರು ಪುಸ್ತಕದ ಅಂಗಡಿಗಳು ಇರೋದು ಹೇಗೆ ಸಾಧ್ಯವಾಯಿತು. ಇದು ಏನನ್ನು ತೋರಿಸುತ್ತೆ ಅಂದರೆ ಪುಸ್ತಕಕ್ಕೆ ಯಾವತ್ತು ಸಾವಿಲ್ಲ, ಆದರೆ ಸವಾಲುಗಳಿರುತ್ತವೆ ಅಷ್ಟೇ, ಆ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಾ ಮಾಧ್ಯಮಗಳಿಗೆ ಸವಾಲಿರುತ್ತದೆ. ಆದರೆ ಮಾಧ್ಯಮಗಳೆಲ್ಲಾ ಉದ್ಯಮಗಳಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಪುಸ್ತಕ ಮಾಧ್ಯಮ ಕೂಡಾ ಉದ್ಯಮವಾಗಿದೆ. ಉದ್ಯಮವಾದಾಗ ಉದ್ಯಮ ಉಳಿಸಿಕೊಳ್ಳಬೇಕು ಅನ್ನುವ ಉಮೇದಿನ ಒಳಗಡೆ ಸಂಸ್ಕೃತಿ ನಾಶವಾಗಬಾರದು. ಅಂದರೆ ಪುಸ್ತಕ ಉದ್ಯಮವನ್ನು ಉಳಿಸಿಕೊಳ್ಳಬೇಕಾದರೆ ಪುಸ್ತಕ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿರುತ್ತೆ. ಹೇಗೆ ಪುಸ್ತಕಗಳು ಮಾರಾಟವಾಗಬೇಕೋ ಹಾಗೇ ಮನುಷ್ಯರ ಮನಸ್ಸುಗಳು ಮಾರಾಟವಾಗಬಾರದು ಎಂದರು. 

ಇವತ್ತಿನ ನಿಜವಾದ ಬಿಕ್ಕಟ್ಟು ಎಲ್ಲಾ ಕಾಲದಲ್ಲೂ ಉದ್ಯಮ ಮತ್ತು ಮಾಧ್ಯಮ ಅಥವಾ ಉದ್ಯಮ ಮತ್ತು ಸಂಸ್ಕೃತಿ ಇವುಗಳ ನಡುವೆ ಒಂದು ತಾಕಲಾಟ ನಡೆಯುತ್ತಿರುತ್ತದೆ. ಉದ್ಯಮಕ್ಕೆ ಸಂಪಾದನೆ ಪ್ರಧಾನ, ಸಂಸ್ಕೃತಿಗೆ ಸಂವೇದನೆ ಪ್ರಧಾನ. ನೀವು ಸಂವೇದನೆ ಉಳಿಸಿಕೊಳ್ತೀರಾ, ಸಂಪಾದನೆ ಉಳಿಸಿಕೊಳ್ತೀರಾ..ನೀವು ಪುಸ್ತಕಾನೇ ಪ್ರಿಂಟ್ ಆಗದಿದ್ದರೇ ಸಂವೇದನೆ ಎಲ್ಲಿ ಉಳಿಸಿಕೊಳ್ತೀರಾ, ಪುಸ್ತಕ ಮಾರಾಟವಾಗಿಲ್ಲವಾದರೇ ಸಂಪಾದನೆ ಹೇಗೆ ಉಳಿಸಿಕೊಳ್ತೀರಾ. ಹಾಗಾಗಿ ಇವತ್ತಿನ ನಿಜವಾದ ಸಮಸ್ಯೆಯೆಂದರೆ ಉದ್ಯಮದಲ್ಲಿ ಪ್ರಧಾನವಾಗಿರುವ ಸಂಪಾದನೆಯನ್ನ, ಪುಸ್ತಕ ಸಂಸ್ಕೃತಿಯಲ್ಲಿ ಪ್ರಧಾನವಾಗಿರುವ ಸಂವೇದನೆಯನ್ನ ಇವೆರಡನ್ನೂ ಸಮತೋಲನಗೊಳಿಸುವಂತಹ ಮನೋಧರ್ಮ ಬೇಕಿದೆ. ಅಂಥಾದ್ದೊಂದು ನೀತಿಬೇಕಾಗಿದೆ. ಇದು ಸರ್ಕಾರಗಳು ಮಾಡಬೇಕಾಗಿರುವ ಕೆಲಸ ಸಹ ಎಂದು ಎಚ್ಚರಿಸಿದರು. 

ಜೊತೆಗೆ ಪುಸ್ತಕ ಒಂದು ಸಂವೇದನೆಯನ್ನು ಕಲಿಸಬೇಕು, ಮನಸ್ಸಿಗೆ ದಾರಿದೀಪವಾಗಬೇಕು ಅದೇ ಆಗದಿದ್ದರೆ ಹಾದಿ ತಪ್ಪಿಸುವ ಅನೇಕ ಪುಸ್ತಕಗಳು ಬರುವುದಿಲ್ಲವಾ..ಹಾದಿ ತಪ್ಪಿಸುವ ಸಿನಿಮಾಗಳು ಬರುವುದಿಲ್ಲವಾ.. ಹಾದಿ ತಪ್ಪಿಸುವ ಧಾರಾವಾಹಿಗಳು ಬರುವುದಿಲ್ಲವಾ..ಧಾರಾವಾಹಿ ಬಂದ ಮೇಲೆ ಕೆಲವು ಜನಪ್ರಿಯ ಕಾದಂಬರಿಗಳನ್ನು ಓದುವುದು ನಿಂತೇ ಹೋಯಿತು. ಆದರೆ ಕಾದಂಬರಿಗಳು ಪ್ರಕಟ ಆಗುತ್ತಲೇ ಇವೆ. ಆದ್ದರಿಂದ ಪುಸ್ತಕೋದ್ಯಮವನ್ನು ಬೆಳೆಸುವ ಜೊತೆಗೆ ಪುಸ್ತಕ ಸಂಸ್ಕೃತಿಯನ್ನು ಬೆಳೆಸಬೇಕು ಅನ್ನೋದನ್ನು ಲೇಖಕರೂ ತಿಳಿದುಕೊಳ್ಳಬೇಕು. ಪ್ರಕಾಶಕರೂ ತಿಳಿದುಕೊಳ್ಳಬೇಕು, ಸರ್ಕಾರವೂ ತಿಳಿದುಕೊಳ್ಳಬೇಕು, ಇಲ್ಲದೇ ಹೋದರೇ ಮಾರಾಟವಷ್ಟೇ ಮುಖ್ಯ ಅಂತಾಗುತ್ತೆ. ಕಡೆಗೆ ಎಲ್ಲಿಗೆ ಹೋಗುತ್ತೆ ಅಂದರೆ ಮನಸ್ಸುಗಳ ಮಾರಾಟ ಆಗುತ್ತೆ. ಯಾವ ಸಮಾಜದಲ್ಲಿ ಮನಸ್ಸುಗಳ ಮಾರಾಟವಾಗುತ್ತೋ ಅಲ್ಲಿ ಮನುಷ್ಯತ್ವ, ಮೌಲ್ಯ ಬದುಕಿರೋದಿಲ್ಲ, ಅಲ್ಲಿ ಸಂಪಾದನೆಯಷ್ಟೇ ಮುಖ್ಯವಾಗುತ್ತದೆ. ಸಂಪಾದನೆ ಬದುಕೋಕೆ ಮುಖ್ಯ ಹೌದು. ಆದರೆ ಸಂಪಾದನೆಯಷ್ಟೇ ಮುಖ್ಯವಾದರೆ ಅಡ್ಡದಾರಿಗಳು ಹೆಚ್ಚಾಗುತ್ತವೆ. ಸಂವೇದನೆ ಇದ್ದಾಗ ಅಡ್ಡದಾರಿಗಳು ಕಡಿಮೆಯಾಗುತ್ತವೆ ಎಂದರು.

ವಾಸ್ತವವಾಗಿ ಗ್ರಂಥಾಲಯ ಇಲಾಖೆ ಸರ್ಕಾರ ಮಾತ್ರವಲ್ಲ, ಮಂತ್ರಿಗಳು ಸಹ ತೆಗೆದುಕೊಳ್ಳೋದಕ್ಕೆ ಇಷ್ಟ ಪಡುವುದಿಲ್ಲ, ಅದು ಇನ್ನೊಂದು ಖಾತೆಯ ಜೊತೆಗೆ ಸೇರುತ್ತೆ. ಸಚಿವರು ಇದು ಫಲವತ್ತಾದ ಖಾತೆ ಅಲ್ಲ ಅಂದುಕೊಂಡಿರುತ್ತಾರೆ. ಗ್ರಂಥಾಲಯ ಇಲಾಖೆಗೆ 20 ಕೋಟಿ ಕೊಡಿ ಅಂದರೆ, ಸರ್ಕಾರ ಕೊಡೋದಕ್ಕೆ ಸಿದ್ಧವಿಲ್ಲ. ಸರ್ಕಾರಗಳು ಪುಸ್ತಕಗಳ ಬಗ್ಗೆ ಮಾತಾಡೋದು ವ್ಯರ್ಥ. ಒಂದು ಪುಸ್ತಕ ಸಂಸ್ಕೃತಿಗೆ ಇರುವ ಮಹತ್ವವನ್ನ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಅದೂ ಸಹ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು. ಒಂದು ಕಾಲದಲ್ಲಿ ಎಲ್ಲರೂ ಅಕ್ಷರ ಕಲಿಯೋಕೆ ಸಾಧ್ಯವಿರಲಿಲ್ಲ. ಇವತ್ತು ಎಷ್ಟೊಂದು ಜನ ಹೆಣ್ಣು ಮಕ್ಕಳು ಓದುತ್ತಿದ್ದಾರೆ. ಅವರೆಲ್ಲರೂ ಸಾವಿತ್ರಿ ಬಾಯಿ ಫುಲೆಗೆ ಒಂದು ನಮಸ್ಕಾರ ಮಾಡಬೇಕು. ಸಾವಿತ್ರಿಬಾಯಿ ಫುಲೆಯಂತಹ ಹೆಣ್ಣು ಮಗಳು, ಆಕೆಯ ಜೊತೆ ಸೇರಿದ ಫಾತಿಮಾ ಶೇಖ್. ಇದು ಈ ದೇಶದ ಬಹಳ ದೊಡ್ಡ ಸೌಂದರ್ಯ. ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಇಬ್ಬರೂ ಒಟ್ಟಿಗೆ ಹೆಣ್ಣು ಮಕ್ಕಳಿಗೆ ಶಾಲೆ ತೆರೆದರು. ಅವರು ಎಷ್ಟೆಲ್ಲಾ ಅಡೆತಡೆಗಳನ್ನು ಎದುರಿಸಿದರು. ಇವರಿಬ್ಬರ ಕಾರಣಕ್ಕಾಗಿ ಇಷ್ಟು ಜನ ಹೆಣ್ಣು ಮಕ್ಕಳು ಓದುತ್ತಿದ್ದಾರೆ. ಸ್ವಂತತ್ರ್ಯ ಬಂದ ನಂತರ ಅದು ವಿಸ್ತರಣೆಯಾಯಿತು.

ದೇಶಕ್ಕೆ ಸ್ವತಂತ್ರ್ಯ ಬಂದಾಗ ಶೇಕಡಾ17% ಸಾಕ್ಷರತೆ ಇತ್ತು. ಇವತ್ತು ಅದು 80% ಮೀರಿ ಹೋಗಿದೆ. ಈ 75ವರ್ಷಗಳಲ್ಲಿ ಅನೇಕ ಪ್ರಗತಿಗಳಾಗಿದೆ. ನಾವೆಲ್ಲಾ ಅಕ್ಷರ ಕಲಿಯೋಕೆ ಸಾಧ್ಯವಾದದ್ದು, ಈ ದೇಶದ ಒಳಗೆ ಬಂದ ಪ್ರಜಾಪ್ರಭುತ್ವ ಅದು ಕೊಟ್ಟಂತಹ ಅಕ್ಷರ ಜ್ಞಾನದಿಂದ. ಆದರೇ ಬರಿ ಅಕ್ಷರ ಕಲಿತರೇ ಅಷ್ಟೇ ಸಾಕಾಗೋದಿಲ್ಲ, ಯಾಕೆಂದರೆ ಇವತ್ತು ವಿದ್ಯಾವಂತ ಅನಕ್ಷರಸ್ತರ ಸಂಖ್ಯೆ ಜಾಸ್ತಿಯಾಗಿದೆ. ಪದವಿ ಆದ ಮೇಲೆ ಇನ್ನೇನು ಓದಬೇಕಾಗಿಲ್ಲ, ಉಪನ್ಯಾಸಕರಾದವರಿಗೆ ಪಠ್ಯ ಓದಿದರೆ ಸಾಕು ಅಂದುಕೊಳ್ಳುತ್ತಾರೆ ಅವರು ಪಠ್ಯದಿಂದಾಚೆಗೆ ಪುಸ್ತಕಗಳನ್ನು ಓದಬೇಕು. ಒಂದು ಸಾಂಸ್ಕೃತಿಕತೆ ಅನ್ನೋದು ನಮ್ಮೊಳಗಿನ ಮೃಗೀಯತೆಯನ್ನ ನಾಶ ಮಾಡಿ ನಮ್ಮೊಳಗೆ ಮನುಷ್ಯತ್ವವನ್ನು ಹುಟ್ಟುಹಾಕುತ್ತದೆ. ಹಾಗಾಗಿ ನಿಜವಾದ ಮನುಷ್ಯರನ್ನ ರೂಪಿಸಬೇಕಾದ ಕೆಲಸ ಅದು ಪುಸ್ತಕಗಳಿಗೆ ಸಂಬಂಧ ಪಟ್ಟ ಕೆಲಸ. ಗ್ರಂಥಾಲಯ ಇಲಾಖೆಗೆ ಸಂಬಂಧಿಸಿದ ಕೆಲಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಿಸಿದ ಕೆಲಸ. ಅಂಥ ಇಲಾಖೆಗೆ ಸರ್ಕಾರ ಮಹತ್ವ ಕೊಡಬೇಕು. ಕೊನೆ ಪಕ್ಷ ಮುಂದಿನ ವರ್ಷವಾದರೂ ಗ್ರಂಥಾಲಯ ಇಲಾಖೆಗೆ ನಿರ್ಧಿಷ್ಠ ಬಜೆಟ್ ಅನ್ನು ಘೋಷಣೆ ಮಾಡಬೇಕು ಎಂಬ ಹಕ್ಕೊತ್ತಾಯದ ಮೂಲಕ ಮಾತು ಮುಗಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಪ್ರಾರಂಭವದ ದಿನಗಳನ್ನು ನೆನೆದರು.

ಕಾರ್ಯಕ್ರಮದಲ್ಲಿ ಪುಸ್ತಕ ಪರಿಚಾರಕರಾದ ಸಿ. ಮಾಯಣ್ಣ, ಪುಸ್ತಕ ವಿನ್ಯಾಸಕರಾದ ಆರ್‌. ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು.  ಹಾಗೇ ಹಿರಿಯ ಲೇಖಕ ಸು. ರುದ್ರಮೂರ್ತಿಶಾಸ್ತ್ರಿ, ಹಾಗೂ ಪುಸ್ತಕ ಪ್ರಚಾರಕರಾದ ರೂಪ ಮತ್ತೀಕೆರೆಯವರ ಅನುಪಸ್ಥಿತಿಯಲ್ಲಿಯೂ ಅವರನ್ನು ಸ್ಲಾಘಿಸಲಾಯಿತು. 

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಕಾರ್ಯದರ್ಶಿಗಳಾದ ಆರ್. ದೊಡ್ಡೇಗೌಡರು ಸ್ವಾಗತಿಸಿದರು. ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ (ರಿ.) ದ 20ನೇ ವರ್ಷದ ವಾರ್ಷಿಕೋತ್ಸವದ ಸವಿನೆನಪಿನಲ್ಲಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಘಟಕಗಳ ಸಂಚಾಲಕರಿಗೆ ಗೌರವಾರ್ಪಣೆ ಮಾಡಲಾಯ್ತು. 

ಅರ್ಚನಾ ತೇಜಸ್ವಿ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ನಾಡೋಜ ಡಾ. ವೂಡೇ ಪಿ. ಕೃಷ್ಣ , ನಿಡಸಾಲೆ ಪುಟ್ಟಸ್ವಾಮಯ್ಯ , ಆರ್‌. ದೊಡ್ಡೇಗೌಡ, ಎಂ. ಎಸ್‌. ನಟರಾಜ್‌, ಡಾ. ಬಿ. ಜಿ. ಬಾಸ್ಕರ, ಹೆಚ್.‌ ಎಂ. ಗೀತಾ ಸೇರಿದಂತೆ ಅನೇಕ ಪುಸ್ತಕ ಪ್ರೇಮಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. 

 

MORE NEWS

ಮೈಸೂರಿನಲ್ಲಿ ಚಿಣ್ಣರಿಗಾಗಿ ಜನಪದ ಸಾಹಿತ್ಯ ಕಮ್ಮಟ

03-05-2024 ಬೆಂಗಳೂರು

ಮೈಸೂರು: ಚಿಣ್ಣರಿಗಾಗಿ ಜನಪದ ಸಾಹಿತ್ಯವನ್ನು ಪರಿಚಯಾತ್ಮಕವಾಗಿ ತಿಳಿಸಿಕೊಡುವ ನಿಟ್ಟಿನಲ್ಲಿ ಅದಮ್ಯ ರಂಗಶಾಲೆ ಹಾಗೂ ಸ್ಪಂ...

ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣ ಕೃತಿ ‘ಯಕ್ಷಹಂಸ’ ಲೋಕಾರ್ಪಣೆ

01-05-2024 ಬೆಂಗಳೂರು

ಹೊಸ್ತೋಟ ಮಂಜುನಾಥ ಭಾಗವತರ ಬಗ್ಗೆ ಬರೆದಿರುವ ‘ಯಕ್ಷಹಂಸ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 2024 ಏಪ್ರ...

ಹರಿದಾಸ ಸಾಹಿತ್ಯದ ಮೇರು ಶೃಂಗ ಶ್ರೀವಿಜಯದಾಸರು: ಅರಳುಮಲ್ಲಿಗೆ ಪಾರ್ಥಸಾರಥಿ

30-04-2024 ಬೆಂಗಳೂರು

ಬೆಂಗಳೂರಿನ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯ ಶ್ರೀಪಾದರಾಜ ಸಭಾಭವನದಲ್ಲಿ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್,...