ಸಾಹಿತ್ಯ ಸಮ್ಮೇಳನ ಒಂದಷ್ಟು ನೆನಪು-ಹಳಹಳಿಕೆ

Date: 28-01-2020

Location: ಬೆಂಗಳೂರು


ನಾನು ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದು 1987ರಲ್ಲಿ. ಅದೂ ಆಗಿನ ಗುಲ್ಬರ್ಗದಲ್ಲಿ ನಡೆದ 58ನೇ ಸಾಹಿತ್ಯ ಸಮ್ಮೇಳನದಲ್ಲಿ. ಆಗ ಸಿದ್ಧಯ್ಯ ಪುರಾಣಿಕ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ನಾನಾಗ ಎಸ್‌ಎಸ್‌ಎಲ್‌ಸಿ ಓದುತ್ತಿದ್ದೆ. ನಾನು ಓದುತ್ತಿದ್ದ ಹೈಸ್ಕೂಲ್‌ ಸೇರಿದಂತೆ ಎಲ್ಲ (ಬಹುತೇಕ ಇರಬಹುದೇ?) ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಸಮ್ಮೇಳನಕ್ಕಾಗಿ ತಲಾ ಎರಡು ರೂಪಾಯಿ ಸಂಗ್ರಹಿಸಿದ್ದರು. ಅದಕ್ಕೊಂದು ಕೂಪನ್‌ ಕೂಡ ಕೊಟ್ಟಿದ್ದರು. ಅದು ನಾಲ್ಕು ದಿನಗಳ ಕಾಲ ನಡೆದ ಸಮ್ಮೇಳನ. ಒಂದು ದಿನ ಮೆರವಣಿಗೆಯಲ್ಲಿಯೇ ಹೋಗುವುದರಿಂದ ಚರ್ಚೆಗೆ ಹೆಚ್ಚು ಕಾಲಾವಕಾಶ ದೊರೆಯಲಿ ಎಂದು ನಾಲ್ಕು ದಿನ ನಿಗದಿ ಪಡಿಸಿದ್ದರು. ಮೂರು ದಿನಗಳ ಊಟ ಮತ್ತು ವಸತಿಗಾಗಿ ೩೦ ರೂಪಾಯಿ ಶುಲ್ಕ ನಿಗದಿ ಪಡಿಸಲಾಗಿತ್ತು. 

ಸ್ವಾಗತ ಸಮಿತಿಯ ಅಧ್ಯಕ್ಷತೆ ಬಾಪುಗೌಡ ದರ್ಶನಾಪುರ ಅವರದಾಗಿತ್ತು. ಸಿದ್ಧಯ್ಯ ಪುರಾಣಿಕ ಅವರ ಅಧ್ಯಕ್ಷೀಯ ಭಾಷಣ ಅದರ ಹಿಂದಿನ ಸಮ್ಮೇಳನಗಳಿಗಿಂತ ಭಿನ್ನವಾಗಿತ್ತು. ೫೭ನೇ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹಾಮಾ ನಾಯಕ ಅವರು ಧ್ವಜ ಹಸ್ತಾಂತರಿಸಿದ್ದರು. ಎನ್ಕೆ ಕುಲಕರ್ಣಿ, ಕೃಷ್ಣಮೂರ್ತಿ ಕಿತ್ತೂರು, ಶಾಂತಲೆಯನ್ನು ಕುರಿತ ಬೃಹತ್‌ ಕಾದಂಬರಿ ರಚಿಸಿರುವ ಸಿ.ಕೆ. ನಾಗರಾಜರಾವ್, ಚಂದ್ರಶೇಖರ ಪಾಟೀಲ (ಚಂಪಾ),ಕೆಂಪಂಗಿಯ ಚೆನ್ನಣ್ಣ ಅವರನ್ನು ಮೊದಲ ಬಾರಿಗೆ ನೋಡಿದ್ದು ಈ ಸಮ್ಮೇಳನದಲ್ಲಿಯೇ. ಗುಲ್ಬರ್ಗದಲ್ಲಿ ನಡೆದ ಕಾರಣಕ್ಕಾಗಿ ಚಲನಚಿತ್ರರು ಭಾಗವಹಿಸದೇ ಇರುವ ಬಗ್ಗೆ ಕೂಡ ಚರ್ಚೆಯಾಗಿತ್ತು. ಗುಲ್ಬರ್ಗ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷ ತವಗ ಭೀಮಸೇನರಾಯರು ತೀರಾ ಹಣ್ಣಾಗಿದ್ದರು. ಎರಡು ತೋಳುಗಳಗೆ ಆಸರೆ ನೀಡಿ ವೇದಿಕೆಗೆ ಕರೆತಂದು ಸನ್ಮಾನ ಮಾಡಲಾಗಿತ್ತು. ಅವರೇ ಗುರ್ಲ್ಬ ಜಿಲ್ಲಾ ಮೊದಲ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದವರು ಹಾಗೂ ಕನ್ನಡ ಸಾಹಿತ್ಯ ಸಂಘದ ಮೂಲಕ ಕನ್ನಡ ಚಟುವಟಿಕೆ ಗುಲ್ಬರ್ಗದಲ್ಲಿ ಜೀವಂತವಾಗಿಟ್ಟವರು ಎಂದು ನಂತರ ಗೊತ್ತಾಯಿತು.

1987ರ ಸಾಹಿತ್ಯ ಸಮ್ಮೇಳನದ ಎಲ್ಲ ಗೋಷ್ಠಿಗಳ ವಿವರ ಸರಿಯಾಗಿ ನೆನಪಿಲ್ಲ. ಆದರೆ, ಕೆಲವು ಚರ್ಚೆಗಳು ಮಾತ್ರ ಈಗಲೂ ನನ್ನ ಸ್ಮೃತಿ ಪಟಲದಲ್ಲಿ ದಾಖಲಾಗಿವೆ. ಘನಮಠ ಶಿವಯೋಗಿಗಳ ’ಕೃಷಿಜ್ಞಾನ ಪ್ರದೀಪಿಕೆ’ಯ ಕುರಿತು ಲಿಂಗಣ್ಣ ಸತ್ಯಂಪೇಟೆ ಅವರು ಮಾತನಾಡಿದ್ದರು. ಅದರಲ್ಲಿ ಅವರು ಬಸ್‌ನಲ್ಲಿ ಬರುವಾಗ ಸಹಪ್ರಯಾಣಿಕ ’ಕುರ್ಚಿಜ್ಞಾನ ಪ್ರದೀಪಿಕೆ’ ಎಂದು ಓದಿದ್ದರು. ಈಗ ಜನರಿಗೆ ಬೇಕಿರುವುದು ಕೃಷಿಜ್ಞಾನ ಅಲ್ಲ ಕುರ್ಚಿಜ್ಞಾನ ಎಂದು ಹೇಳಿದ ನೆನಪು. ಸಂಶೋಧನೆಗೆ ಸಂಬಂಧಿಸಿದ ಗೋಷ್ಠಿ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು. ಸೀತಾರಾಮ ಜಹಾಗೀರದಾರ ಅವರು ಜೈಮಿನಿ ಭಾರತದ ಲಕ್ಷ್ಮೀಶ ಸುರಪುರದ ದೇವಪುರದವನು ಎಂಬುದನ್ನು ಸಾಕ್ಷ್ಯ ಆಧಾರಗಳೊಂದಿಗೆ ದೃಢಪಡಿಸಿದ್ದರು. ಆ ಗೋಷ್ಠಿಯ ಅಧ್ಯಕ್ಷತೆ ಕಮಲಾ ಹಂಪನಾ ವಹಿಸಿದ್ದಂತೆ ನೆನಪು. ಚರ್ಚೆಯಲ್ಲಿ ಹಾಮಾ ನಾಯಕರು ’ಲಕ್ಷ್ಮೀಶ ಕನ್ನಡ ನಾಡಿನವನು’ ಎಂಬ ತೇಲು ಉತ್ತರ ನೀಡಿದ್ದರು.

ಗೋಷ್ಠಿಯೊಂದರಲ್ಲಿ ಪತ್ರಿಕೆಗಳ ಕುರಿತು ಪ್ರಬಂಧ ಮಂಡಿಸಿದವರು (ಹೆಸರು ನೆನಪಿಲ್ಲ) ಮುಂದಿನ ದಿನಗಳಲ್ಲಿ ’ಬಣ್ಣದ ಮುದ್ರಣ ಬರುತ್ತದೆ’ ಎಂದು ಹೇಳಿದ್ದರು. ಅದಾದ ಒಂದೂವರೆ ದಶಕದ ನಂತರ ಬಣ್ಣದ ಮುದ್ರಣದ ಪತ್ರಿಕೆಗಳು ಕನ್ನಡದಲ್ಲಿ ಕಾಣಿಸಿಕೊಂಡವು.

ಸಾಹಿತ್ಯ ಸಮ್ಮೇಳನದ ದಿನಗಳಲ್ಲಿಯೇ ವಿಶ್ವಕಪ್‌ ಪಂದ್ಯಾವಳಿಯೂ ನಡೆಯುತ್ತಿತ್ತು. ಒಂದೆಡೆ ಸಮ್ಮೇಳನದ ಗೋಷ್ಠಿಗಳ ಚರ್ಚೆಯನ್ನು ಕೇಳುವುದು ಹಾಗೂ ಆಗಾಗ ಅಲ್ಲಲ್ಲಿ ಟ್ರಾನ್ಸಿಸ್ಟರ್‌ ಕಿವಿಗೆ ಇಟ್ಟುಕೊಂಡವರ ಬಳಿ ಹೋಗಿ ಸ್ಕೋರ್‌ ಕೇಳಿ ಬರುವುದು ನಡೆಯುತ್ತಿತ್ತು. ಸುನೀಲ್‌ ಗವಾಸ್ಕರ್‌ ಸುಡುವ ಜ್ವರದ ನಡುವೆಯೂ ಒಂದು ದಿನದ ಪಂದ್ಯಗಳಲ್ಲಿ ಶತಕ ಪೂರೈಸಿದ್ದು, ಚೇತನ್‌ ಶರ್ಮಾ ನ್ಯೂಜಿಲೆಂಡ್‌ ವಿರುದ್ಧ ಹ್ಯಾಟ್ರಿಕ್‌ ಗಳಿಸಿದ್ದು ಈ ಸಮ್ಮೇಳನದ ದಿನವೇ.

ಸಾಹಿತ್ಯ ಸಮ್ಮೇಳನದ ಮರುದಿನ ಪರಿಷತ್ತಿಗೆ ಆಡಳಿತಾಧಿಕಾರಿ ನೇಮಿಸಿ ಆದೇಶ ಹೊರಡಿಸಲಾಗಿತ್ತು. ಹೀಗಾಗಿ ನಂತರದ ಸಮ್ಮೇಳನ ನಡೆಯಲು ಒಂದೆರಡು ವರ್ಷ ತಡವಾಯಿತು. 

ಹುಬ್ಬಳ್ಳಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಆಯ್ಕೆಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತವಾಗಿ ಬೆಂಗಳೂರಿನಲ್ಲಿ ಪರ್ಯಾಯ ಸಾಹಿತ್ಯ ಸಮ್ಮೇಳನ ನಡೆದಿತ್ತು. ಕೆ.ಎಸ್‌.ನ. ಆಯ್ಕೆ ಆಗಬೇಕು ಎಂಬ ಅಭಿಪ್ರಾಯ ಇತ್ತಾದರೂ ಪರಿಷತ್ತು ಸ್ಥಳೀಯ (?) ವಿದ್ವಾಂಸ ಆರ್‌.ಸಿ. ಹಿರೇಮಠ ಅವರಿಗೆ ಮಣೆ ಹಾಕಿತ್ತು. ಆ ಸಮ್ಮೇಳನದಲ್ಲಿಯೂ ನಾನು ಭಾಗವಹಿಸಿದ್ದೆ. ಮಾತ್ರವಲ್ಲ, ಆಗ ಮಾರುಕಟ್ಟೆಯಲ್ಲಿದ್ದ ಎರಡು ಪ್ರಮುಖ ಕನ್ನಡ ದಿನಪತ್ರಿಕೆಗಳನ್ನು ಖರೀದಿಸಿ ಇಟ್ಟುಕೊಂಡಿದ್ದೆ. ಈಗಲೂ ಅವು ನನ್ನ ಬಳಿ ಇವೆ.

ಸಾಹಿತ್ಯ ಕೇಂದ್ರದಲ್ಲಿದ್ದು ಅದರ ವರದಿಗಾರಿಕೆಗೆ ಹೆಚ್ಚು ಆದ್ಯತೆ ದೊರಕುತ್ತಿತ್ತು. ಗುಲ್ಬರ್ಗ ಮತ್ತು ಹುಬ್ಬಳ್ಳಿಯಲ್ಲಿ ನಡೆದ ಸಮ್ಮೇಳನದಲ್ಲಿ ಊಟದ ಮತ್ತು ನೀರಿನ ವ್ಯವಸ್ಥೆ ಎಷ್ಟು ಚೆನ್ನಾಗಿತ್ತು ಎಂದರೆ ಸಮ್ಮೇಳನದಲ್ಲಿ ಭಾಗವಹಿಸಿದ್ದ ಗಣ್ಯರು (ಹಾ ಮಾ ನಾಯಕ, ಸಿದ್ದಯ್ಯ ಪುರಾಣಿಕ, ಸಿ.ಕೆ. ನಾಗರಾಜರಾವ್, ಕೃಷ್ಣಮೂರ್ತಿ ಪುರಾಣಿಕ) ನಮ್ಮ ಜೊತೆಗೆ (ಹೈಸ್ಕೂಲ್‌ ವಿದ್ಯಾರ್ಥಿ-ಸಾಮಾನ್ಯರು) ಸರದಿ ಸಾಲಿನಲ್ಲಿ ನಿಂತಿದ್ದರು. ನಾವು ಕುಳಿತ ಊಟಕ್ಕೆ ಕುಳಿತ ಸಾಲಿನಲ್ಲಿಯೇ ಕುಳಿತಿದ್ದರು.

ಅದಾದ ಮೇಲೆ ನಾನು ಭಾಗವಹಿಸಿದ ಮತ್ತೊಂದು ಸಾಹಿತ್ಯ ಸಮ್ಮೇಳನ ಕೊಪ್ಪಳದಲ್ಲಿ ನಡೆದದ್ದು. ಸಿಂಪಿ ಲಿಂಗಣ್ಣನವರು ಅಧ್ಯಕ್ಷತೆ ವಹಿಸಿದ್ದರು. ಶಾಂತರಸ ಅವರು ಅಧ್ಯಕ್ಷರಾಗುತ್ತಾರೆ ಎಂಬ ಚರ್ಚೆ ಇತ್ತು. ಶಾಂತರಸರು ಹಿಂದೆ ಸರಿದು ಸಿಂಪಿಯವರಿಗೆ ಗೌರವ ದೊರೆಯುವಂತೆ ಮಾಡಿದ್ದರು. ಸಮ್ಮೇಳನದ ಅಧ್ಯಕ್ಷರು ನಂತರ ನಡೆಯುವ ಸಮ್ಮೇಳನದಲ್ಲಿ ಧ್ವಜ ಹಸ್ತಾಂತರಿಸುವ ಪರಿಪಾಠ ಇದೆ. ಕೊಪ್ಪಳ ಸಮ್ಮೇಳನ ನಡೆದ ಕೆಲವೇ ದಿನಗಳಲ್ಲಿ ಸಿಂಪಿಯವರು ಇಲ್ಲವಾದರು. ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲಿ ಧ್ವಜ ಹಸ್ತಾಂತರಿಸದ ಏಕೈಕ ಅಧ್ಯಕ್ಷರು.

ಕೊಪ್ಪಳ ಸಮ್ಮೇಳನದ ನಂತರ ನಾನು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವುದರಿಂದ ದೂರ ಉಳಿದೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗ ಪುಸ್ತಕ ಖರೀದಿಸುವ ಉದ್ದೇಶದಿಂದ ಒಂದು ದಿನ ಬಾಗಲಕೋಟೆಗೆ ಹೋಗಿ ಬಂದಿದ್ದೆ. ಅದಾದ ಮೇಲೆ ಈಗಾಗಲೇ ಪ್ರಸ್ತಾಪಿಸಿದಂತೆ ಸಮ್ಮೇಳನಕ್ಕೆ ಹೋದದ್ದು ತುಮಕೂರು ಸಮ್ಮೇಳನಕ್ಕೆ ಅದು ವರದಿ ಮಾಡಲು.  ಜಿ. ವೆಂಕಟಸುಬ್ಬಯ್ಯ ಅವರು ಅಧ್ಯಕ್ಷರಾಗಿದ್ದ ಬೆಂಗಳೂರು ಸಮ್ಮೇಳನದಲ್ಲಿ ಎರಡನೆಯ ಬಾರಿಗೆ ಪ್ರಬಂಧ ಮಂಡಿಸಿದರೆ, ಗಂಗಾವತಿ ಸಮ್ಮೇಳನದಲ್ಲಿ ವರದಿ ಮಾಡುವುದು ಮತ್ತು ಪ್ರಬಂಧ ಮಂಡನೆಯ ಡಬಲ್‌ ರೋಲ್‌ ನಿರ್ವಹಿಸಿದ್ದೆ.

ಕಳೆದ ಮೂರು ಕಾಲು ದಶಕಗಳ ಅವಧಿಯಲ್ಲಿ ಭಾಗವಹಿಸಿದ್ದು ಎಣಿಸಿ ಏಳು ಸಮ್ಮೇಳನ ಮಾತ್ರ. ಇಷ್ಟೇ ಸೀಮಿತ ಅನುಭವ ಬೆನ್ನಿಗಿದೆ. 

ಆದರೆ, ಸಾಹಿತ್ಯದ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿರುವ ನಾನು 1987ರಿಂದ ಹಿಡಿದು 2019ರ ವರೆಗಿನ ಎಲ್ಲ ಸಾಹಿತ್ಯ ಸಮ್ಮೇಳನಗಳ ವರದಿಗಳಿರುವ ದಿನಪತ್ರಿಕೆಗಳನ್ನು ಸಂಗ್ರಹಿಸಿರುವೆ. ಅವೆಲ್ಲವೂ ನನ್ನ ಬಳಿ ಜೋಪಾನವಾಗಿವೆ. ವಾಸ್ತವವಾಗಿ ನನ್ನ ಈ ಹವ್ಯಾಸ ಆರಂಭವಾದದ್ದು ಮೈಸೂರಿನ 1985ರ ವಿಶ್ವಕನ್ನಡ ಸಮ್ಮೇಳನದಿಂದ. ಕಳೆದ ಎಂಟು ಸಮ್ಮೇಳನದ ನ್ಯೂಸ್‌ ಪೇಪರ್‌ ಕ್ಲಿಪ್ಪಿಂಗ್‌ಗಳು ಡಿಜಿಟಲ್‌ (ಪಿಡಿಎಫ್‌) ರೂಪದಲ್ಲಿವೆ.ಯಾರಾದರೂ ಸಾಹಿತ್ಯ ಸಮ್ಮೇಳನದ ವರದಿಗಾರಿಕೆಯಲ್ಲಿ ಆದ ಸ್ಥಿತ್ಯಂತರ ಬಗ್ಗೆ ಪಿಎಚ್‌.ಡಿ. ಮಾಡಿದರೆ ಅವರಿಗೆ ಅನುಕೂಲ ಆಗುವ ಎಲ್ಲ ಆಕರ ನನ್ನ ಬಳಿ ಇವೆ. ಅವುಗಳನ್ನು ಯಾರೂ ಪರಿಶೀಲಿಸಬಹುದು.

ಇಷ್ಟು ಹೇಳಿದ ಮೇಲೆ-

ಸಮ್ಮೇಳನಗಳನ್ನು ಗಮನಿಸಿದರೆ ಅವುಗಳ ಬಗೆಗೆ ಪ್ರಕಟವಾಗಿರುವ ವರದಿಗಳನ್ನು ಒಂದರ ಪಕ್ಕ ಮತ್ತೊಂದನ್ನು ಇಟ್ಟು ನೋಡಿದರೆ ’ವಿಷಾದ’ದ ಮೂಡುತ್ತದೆ. ಸಮ್ಮೇಳನದ ಸ್ವರೂಪದಲ್ಲಿಯೂ ಮೇಜರ್‌ ಬದಲಾವಣೆ ಆಗಿಲ್ಲ. ಬದಲಿಗೆ ಗುಣಮಟ್ಟ ಕುಸಿದಂತೆ ಭಾಸವಾಗುತ್ತದೆ. ಸಾಹಿತ್ಯ-ಚರ್ಚೆಯ ಕೇಂದ್ರ ’ಜಾತ್ರೆ’ಯಾಗಿದೆ. ಕನ್ನಡದ ’ಸಂಭ್ರಮ’ದ ನೆಪದಲ್ಲಿ ಹಲವರನ್ನು ಸಾಕುವ-ಸಲುಹುವ ಕ್ರಿಯಾವಿಧಿಯಾಗಿದೆ.

-ದೇವು ಪತ್ತಾರ

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...