ಸಾಹಿತ್ಯದ ಅಭಿವ್ಯಕ್ತಿ ಮೂಲಕ ನಾನು ಯಾರೆಂಬ ಎಚ್ಚರ ಸಿಕ್ಕಿದ್ದೇ ನನ್ನೊಳಗಿನ ಬಹುಮುಖ್ಯ ಬದಲಾವಣೆ


‘ಹಳ್ಳಿಯಲ್ಲಿದ್ದು ಪರಿಸರ, ಕೃಷಿ, ಜಲ ಸಂರಕ್ಷಣೆಯ ರಚನಾತ್ಮಕ ಕಾರ್ಯ ಮಾಡುವಾಗ ನನ್ನದೇ ಅನುಭವ ದಾಖಲಿಸಲು ಹೊರಟೆ’ ಎಂದು ತಮ್ಮ ಬರವಣಿಗೆಯ ಪಯಣವನ್ನು ನೆನೆಯುತ್ತಾರೆ ಲೇಖಕ ಶಿವಾನಂದ ಕಳವೆ. ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2020ನೇ ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿಗೆ ಪಾತ್ರರಾಗಿರುವ ಅವರ ಜೊತೆ ‘ಬುಕ್ ಬ್ರಹ್ಮ’ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ಬುಕ್ ಬ್ರಹ್ಮ: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ನಿಮ್ಮ ಪ್ರತಿಕ್ರಿಯೆ?
ಶಿವಾನಂದ ಕಳವೆ:
ಕೃಷಿ ಬದುಕಿನ ನಡುವೆ ಕಾಡು, ನದಿ, ಕೆರೆಗಳನ್ನು ಸುತ್ತಾಡುತ್ತ ಪತ್ರಿಕೆಗಳಿಗೆ ಅಂಕಣ, ಲೇಖನ ಬರೆಯುತ್ತ ಬಂದವನು ನಾನು. ಜಲ ಸಂರಕ್ಷಣೆ, ವನ ಸಂರಕ್ಷಣೆಯ ನನ್ನ ಅನುಭವಕ್ಕೆ ಒದಗಿದ ತಿಳುವಳಿಕೆಯ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮಕ್ಕಳಿಗೆ ಪರಿಸರ ಶಿಕ್ಷಣ ಶಿಬಿರ ಮಾಡುತ್ತ ಹುಟ್ಟಿದ ಊರಲ್ಲಿಯೇ ಇದ್ದೇನೆ. ಪ್ರಶಸ್ತಿ ಘೋಷಣೆಯಾದಾಗ ಅಚ್ಚರಿಯಾಯ್ತು. ಪರಿಸರ, ಕೃಷಿ ಸಾಹಿತ್ಯ ಪರಿಗಣಿಸಿದ್ದು ಖುಷಿಯಾಯ್ತು.

ಬುಕ್ ಬ್ರಹ್ಮ: ಸಾಹಿತ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ..?
ಶಿವಾನಂದ ಕಳವೆ:
ಹಳ್ಳಿಯಲ್ಲಿದ್ದು ಪರಿಸರ, ಕೃಷಿ, ಜಲ ಸಂರಕ್ಷಣೆಯ ರಚನಾತ್ಮಕ ಕಾರ್ಯ ಮಾಡುವಾಗ ನನ್ನದೇ ಅನುಭವ ದಾಖಲಿಸಲು ಹೊರಟೆ. ಭಾಷಣ, ಉಪನ್ಯಾಸ ಕೇಳಿದವರು ಪ್ರಕಟಿತ ಪುಸ್ತಕದ ಬಗ್ಗೆ ವಿಚಾರಿಸಿದಾಗ ಪರಿಸರ, ಕೃಷಿ ಪುಸ್ತಕ ಬರೆಯಲು ಶುರುಮಾಡಿದೆ. ಫ್ರಾನ್ಸಿಸ್ ಬುಕಾನನ್ ಕ್ರಿ.ಶ. 1801 ರಲ್ಲಿ ನಡೆಸಿದ ಕೆನರಾ ಜಿಲ್ಲೆಯ ಅಧ್ಯಯನವನ್ನು ಅವರ ದಾಖಲೆ ಅನುಸರಿಸಿ 200 ವರ್ಷ ಬಳಿಕ ನಾನು ಮಾಡಿದ್ದೆ. ಅದನ್ನು ಆಧರಿಸಿ ಕ್ರಿ.ಶ. 2002 ರಲ್ಲಿ ‘ಕಾಡು ನೆಲದ ಕಾಲಮಾನ’ ಮೊದಲ ಪುಸ್ತಕ ಪ್ರಕಟವಾಯಿತು. ಅಲ್ಲಿಂದ ವರ್ಷಕ್ಕೆ ಒಂದೆರಡು ಪುಸ್ತಕ ಬರೆಯುತ್ತ ಕ್ಷೇತ್ರ ಅನುಭವಗಳನ್ನು ಕ್ರೋಡೀಕರಿಸುವ ಕೆಲಸ ಮಾಡಿದೆ. ಒಂದು ವಿಷಯದ ಸುತ್ತ ಮಾತ್ರ ಕೆಲಸ ಮಾಡುತ್ತ ಹೋದಾಗ ಕ್ಷೇತ್ರದ ಸಾಹಿತ್ಯ ಪ್ರಕಟಣೆಯ ಅಗತ್ಯ ಅರ್ಥವಾಯಿತು. ಪುಸ್ತಕ ಬರೆಯುವ ಏಕೈಕ ಉದ್ದೇಶದಿಂದ ಯಾವತ್ತೂ ನಾನೂ ಹೋಗಿಲ್ಲ. ನನಗೆ ಇಷ್ಟವಾಗಿದ್ದು, ಅರಿವು ದೊರಕಿದ್ದನ್ನು ಬರೆದಿದ್ದೇನೆ ಅಷ್ಟೇ ! ಕೃಷಿ-ಪರಿಸರ ಪ್ರೀತಿಯ ನನ್ನದೇ ಓದುಗ ಸಮೂಹ ಮಧ್ಯೆ ನಿರಂತರ ಸಂವಹನ ನಡೆಸುತ್ತ ಬದುಕಿದವನು. ಇದರಿಂದಾಗಿ ಪರಿಸರ-ಕೃಷಿ ಸಾಹಿತ್ಯ ಕೃತಿಗಳು ಬಂದಿವೆ.

ಬುಕ್ ಬ್ರಹ್ಮ: ಸಾಹಿತ್ಯಕ ಪಯಣದಲ್ಲಿ ನೀವು ಹೆಮ್ಮೆ ಪಡುವ ವಿಚಾರ ಯಾವುದು..?
ಶಿವಾನಂದ ಕಳವೆ:
ಕರೋನ ಲಾಕ್ ಡೌನ್ ಕಾಲದಲ್ಲಿ ಕಳೆದ ವರ್ಷ ನನ್ನ ಕಾದಂಬರಿ ‘ಮಧ್ಯ ಘಟ್ಟ’ ಪ್ರಕಟವಾಯ್ತು. ಪ್ರಕಟಣೆಯ ನಾಲ್ಕೇ ತಿಂಗಳಿನಲ್ಲಿ ಮೂರು ಮುದ್ರಣವಾಗಿದೆ. ಪ್ರಮುಖ ಪುಸ್ತಕ ಮಳಿಗೆಯಲ್ಲಿ ಇಂದಿಗೂ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗುವ ವಾರದ ಹತ್ತು ಪುಸ್ತಕಗಳಲ್ಲಿ ಈ ಕಾದಂಬರಿ ಇರುತ್ತಿದೆ. ಇದನ್ನು ಓದಿದವರು ಶತಮಾನದ ಹಿಂದಿನ ಬದುಕಿನ ಕಥೆಯಾದ ಶಿರಸಿಯ ಮತ್ತಿಘಟ್ಟ ಕಾಡು ಹಳ್ಳಿಗೆ ರಾಜ್ಯದ ನೂರಾರು ಜನ ನೋಡಲು ಬಂದಿದ್ದಾರೆ. ಕಾದಂಬರಿಯ ಕಥನ ಮಾರ್ಗದಲ್ಲಿ ಪಯಣ ಮಾಡುತ್ತ ನನ್ನ ಜೊತೆ ಮಾತಾಡುತ್ತಿದ್ದಾರೆ. ನೆಲ ಮೂಲದ ವಿಚಾರಗಳಿಗೆ ಓದುಗರ ಆಸಕ್ತಿ ನೋಡಿ ಹೆಮ್ಮೆಯಾಗುತ್ತಿದೆ. ಕಾದಂಬರಿ ಓದಿದವರು ಕಾಡಲ್ಲಿ ಊರು ಕಟ್ಟಿದ ರೀತಿ ನೋಡಲು ಬರುತ್ತಿರುವುದು ಸಾಹಿತ್ಯ ಪಯಣದ ಅತ್ಯಂತ ಖುಷಿಯ ಕ್ಷಣವಾಗಿದೆ. ನಾವು ಬರೆದಿದ್ದನ್ನು ಪುನಃ ಸ್ಥಳದಲ್ಲಿ ನಿಂತು ಓದುಗರ ಜೊತೆಗೆ ಮುಖಾಮುಖಿಯಾಗಿ ವಿವರಿಸುವಾಗ ಕ್ಷೇತ್ರಾಧ್ಯಯನ ಸವಾಲಿದೆ. ರಾಜ್ಯದ ನದಿ ಸಂರಕ್ಷಣೆ, ಏಕಜಾತಿಯ ಅರಣ್ಯ ನೆಡುತೋಪುಗಳ ಚಳುವಳಿಗಳಿಗೆ ನನ್ನ ಕೃತಿಗಳು ನೆರವಾಗಿವೆ. ರಾಜ್ಯದ ಕೃಷಿ ಅರಿವು ಪಡೆಯಲು ಕೃಷಿ ಪ್ರವಾಸ ಕಥನಗಳು ಸಹಾಯಕವಾಗಿವೆಯೆಂಬ ಸಂಗತಿಗಳು ಸಂತಸ ತಂದಿದೆ. ಪುಸ್ತಕ ಓದಿ ಕೆರೆ ಪುನರುಜ್ಜೀವನ ಕಾರ್ಯಮಾಡಿದವರು ಸಿಕ್ಕಾಗ ಖುಷಿಗೆ ಬೇರೆ ಕಾರಣ ಬೇಕೆ?

ಬುಕ್ ಬ್ರಹ್ಮ: ಯಾವ ಲೇಖಕರ ಕೃತಿಗಳು ನಿಮ್ಮನ್ನು ಹೆಚ್ಚು ಪ್ರೇರೇಪಿಸುತ್ತವೆ ಅಥವಾ ಕಾಡುತ್ತವೆ...?
ಶಿವಾನಂದ ಕಳವೆ:
ನಾನು ಎಲ್ಲರಂತೆ ಪತ್ತೇದಾರಿ ಕಾದಂಬರಿ ಓದುತ್ತ ಓದಿನ ಹುಚ್ಚು ಹತ್ತಿಸಿಕೊಂಡವನು. ನಂತರ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪರಿಸರದ ಕಥೆಗಳು ಸೇರಿದಂತೆ ಅವರ ಕಾದಂಬರಿ, ಪರಿಸರ ವಿಸ್ಮಯ ಕುರಿತ ಬರಹಗಳಿಂದ ಪ್ರೇರಣೆ ಪಡೆದಿದ್ದೇನೆ. ಕಾಲು ಬುಡದ ಸಂಗತಿಗಳನ್ನು ಸೂಕ್ಷ್ಮವಾಗಿ ನೋಡಲು ಕಲಿಸಿದ ಕಣ್ತೆರೆಸುವ ಕೃತಿಗಳು ಅವು.

ಬುಕ್ ಬ್ರಹ್ಮ: ಇದನ್ನು ನಾನು ಬರೆಯಬೇಕಿತ್ತು ಎನಿಸುವಂತಹ ಇತರೆ ಲೇಖಕರ ಕೃತಿ ಯಾವುದು...?
ಶಿವಾನಂದ ಕಳವೆ:
ತೇಜಸ್ವಿ ಪರಿಸರ ಕಥೆಗಳಲ್ಲಿನ ಅನುಭವಗಳು ನನಗೆ ಈಗಲೂ ಕಾಡು ಸುತ್ತಾಟದಲ್ಲಿ ಸಿಗುತ್ತಿದೆ. ನಾನೂ ಹಾಗೇ ಬರೆಯಬೇಕೆಂಬ ಹಂಬಲವಿದೆ. ಆದರೆ ಬರೆಯುವುದು ಸರಳವಲ್ಲ. ನಮ್ಮದೇ ಪರಿಕಲ್ಪನೆಯಲ್ಲಿ ನಡೆಯುತ್ತ ಪಕ್ವತೆ ಬಲಿತು ಕೃತಿ ಹೊರಬರಬೇಕು. ಹಂಬಲಕ್ಕಿಂತ ಅನುಭವದ ಬೆಂಬಲವೂ ಬೇಕಲ್ಲ. ಕಾಡು ಹಾಗೂ ನೆಡುತೋಪಿನ ನಡುವೆ ನಿಂತ ವನವಾಸಿಯೊಬ್ಬನ ತಲ್ಲಣದ ಕಾಂಡ ಬರೆಯಬೇಕಿದೆ. ಕಾಲ ಕಾಯಬೇಕು, ಕೆಲಸ ಸಾಗಿದೆ.

ಬುಕ್ ಬ್ರಹ್ಮ: ನಿಮ್ಮ ಸಾಹಿತ್ಯಿಕ ಬದುಕಿನ ಮೂಲ ಧ್ಯೇಯವೇನು...?
ಶಿವಾನಂದ ಕಳವೆ:
ನನಗೆ ಇಷ್ಟವಾದಂತೆ ಬದುಕುವುದು, ಅಗತ್ಯವೆನಿಸಿದಾಗ ಬರೆಯುವುದು

ಬುಕ್ ಬ್ರಹ್ಮ: ಸಾಹಿತ್ಯದಿಂದ ನಿಮ್ಮ ಬದುಕಿನಲ್ಲಾದ ಮಹತ್ವದ ಬದಲಾವಣೆಗಳೇನು...?
ಶಿವಾನಂದ ಕಳವೆ:
ಓದು, ಅಧ್ಯಯನಕ್ಕಾಗಿ ನನ್ನ ಹಿತ್ತಲು( ಪುಸ್ತಕ ಸಂಗ್ರಹ) ಬೆಳೆಯುತ್ತಿದೆ. ನಾಡಿನ ಹಲವೆಡೆ ತಮ್ಮ ಅನುಭವಗಳನ್ನು ಕನ್ನಡದ ಭಾಷಾ ವೈವಿದ್ಯದಲ್ಲಿ ಹಂಚಿಕೊಳ್ಳುವ ದೊಡ್ಡ ಸಮೂಹ ಸಿಕ್ಕಿದೆ. ನಾನು ಬರೆಯುವ ವಿಷಯದಲ್ಲಿ ಆಸಕ್ತಿ ಇರುವ ತಜ್ಞರು, ಅನುಭವಿಗಳು, ಓದುಗರ ಪ್ರೀತಿ, ಸ್ನೇಹ ಸಿಕ್ಕಿದೆ. ನಾನು ಕೆಲವೊಮ್ಮೆ ಏನೂ ಬರೆಯದಿದ್ದರೂ ಆಗಾಗ ವಿಚಾರಿಸಿ ಬರೆಯಲು ಹಚ್ಚುವ ಓದುಗರ ಅಭಿಮಾನವಿದೆ. ಬರೆದಿದ್ದನ್ನು ನಾಡಿಗೆ ಹಂಚುವ ಬಳಗವಿದೆ. ನಮ್ಮನ್ನು ಗಮನಿಸುವ ಜನರಿದ್ದಾರೆಂದು ಅರ್ಥವಾಗಿದ್ದರಿಂದ ಏನು ಮಾಡಬೇಕು? ಏನು ಮಾಡಬಾರದು? ಎಂಬುದು ಸ್ವಲ್ಪ ಅರಿವಾಗಿದೆ. ಸಾಹಿತ್ಯದ ಅಭಿವ್ಯಕ್ತಿ ಮೂಲಕ ನಾನು ಯಾರೆಂಬ ಎಚ್ಚರ ಸಿಕ್ಕಿದ್ದೇ ನನ್ನೊಳಗಿನ ಬಹುಮುಖ್ಯ ಬದಲಾವಣೆಯ ಕಾರಣವಾಗಿದೆ.

ಬುಕ್ ಬ್ರಹ್ಮ: ನಿಮ್ಮ ಬದುಕಿನಲ್ಲಿ ಬರವಣಿಗೆಯ ಪಾತ್ರ...?
ಶಿವಾನಂದ ಕಳವೆ:
ನಾನು ನೀರಿನ ಬಗ್ಗೆ ಬರಹ ಬರೆಯುವುದು, ಕಾಡು ಉಳಿಸಲು ಬರೆಯುವುದೆಲ್ಲ ಎರಡನೇಯ ಕಾರ್ಯವೆಂದು ತಿಳಿದಿದ್ದೇನೆ. ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಬಿಸಿಲ ಉರಿಯಲ್ಲಿ ನಿಂತು ಕೆರೆ ನಿರ್ಮಾಣಕ್ಕೆ ನಿಲ್ಲುವ ಖುಷಿಗಿಂತ ಯಾವ ಪುಸ್ತಕ ಬರವಣಿಗೆಯೂ ದೊಡ್ಡದಲ್ಲ. ಅಲ್ಲಿ ನಾವು ರೂಪಿಸಿದ ಕೆರೆ ಮಳೆ ನೀರಿಂದ ಭರ್ತಿಯಾಗಿ ರೈತರು ಖುಷಿ ಪಡುವಾಗ ಅವರ ಕೃಷಿ ಭೂಮಿಯಲ್ಲಿ ಜೀವಂತ ಮಹಾಕಾವ್ಯ ಓದಬಹುದು. ಮಳೆ ಸುರಿಯುವ ಆರಂಭದ ಜೂನ್ ತಿಂಗಳಿನಲ್ಲಿ ಪರಿಸರ ಭಾಷಣಕ್ಕಿಂತ ಸಸಿ ನೆಡುವುದು ಮುಖ್ಯವೆಂದು ಹೇಳುತ್ತೇನೆ. ಕರೆ ಮಾಡುತ್ತ, ಸಸಿ ನೆಡುತ್ತ ಹಲವು ವರ್ಷಗಳ ಅನುಭವಗಳ ಮೂಲಕ ಬರೆಯುವುದು ಅಥವಾ ಮಾತಾಡುವುದು ಉತ್ತಮ. ಬರಹಗಾರನಾಗಿ ಪುಸ್ತಕ, ಪತ್ರಿಕೆ ಮುಂತಾದ ಮಾಧ್ಯಮ ಮೂಲಕ ಸುಲಭದಲ್ಲಿ ಜನಕ್ಕೆ ಪರಿಚಯವಾಗಬಹುದು. ಕಾಯಕದ ಮೂಲಕ ಪರಿಚಯಿಸಿಕೊಳ್ಳುವುದು ಇಷ್ಟವಾಗಿದೆ. ಬರೆಯುವುದಕ್ಕಾಗಿ ಜಿದ್ದಿಗೆ ಬಿದ್ದಿಲ್ಲ. ಬದುಕನ್ನು ಪರಿಸರ ಮಾರ್ಗದಲ್ಲಿ ಅರಿಯುವ ಪ್ರಯತ್ನ ಮಾಡುತ್ತೇನೆ. ನಮ್ಮ ಪುಸ್ತಕ, ಪ್ರಶಸ್ತಿ, ಸಾಧನೆಯ ಅರಿವಿಲ್ಲದ ಜನಗಳ ಮಧ್ಯೆ ಕ್ಷಣ ನಿಂತು ಇವರ ಬದುಕಿನಲ್ಲಿ ನಮ್ಮ ಕಾಯಕ, ಬರವಣಿಗೆಯ ಆತ್ಮಾವಲೋಕನ ಅಗತ್ಯವೆಂದು ಯಾವತ್ತೂ ನಂಬಿದ್ದೇನೆ. ನನ್ನ ಮಿತಿಯಲ್ಲಿ ಕಾರ್ಯ ನಡೆಸಿದ್ದೇನೆ.

ಶಿವಾನಂದ ಕಳವೆ ಅವರ ಕುರಿತಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ವಿವಿಧ ಕಾರ್ಯಕ್ರಮಗಳಲ್ಲಿ ಲೇಖಕ ಶಿವಾನಂದ ಕಳವೆ:


MORE FEATURES

ಬದುಕಿಗೆ ಸಾಹಿತ್ಯವು ಕನಸುಗಳನ್ನು ...

18-04-2021 ಬಸವನಗುಡಿ, ಬೆಂಗಳೂರು-04

ಕನಸುಗಳಿಲ್ಲದ ಜೀವನ ವ್ಯರ್ಥ. ಸಾಹಿತ್ಯವು ನಮ್ಮ ಬದುಕಿಗೆ ಕನಸುಗಳನ್ನು ತುಂಬುತ್ತದೆ ಎಂದು ಸಾಹಿತಿ ಭುವನೇಶ್ವರಿ ಹೆಗಡೆ ಅ...

ಭಾವದೋಕುಳಿಗೊಂದು ಮೊದಲ ಮಾತು...

17-04-2021 ಬೆಂಗಳೂರು

ಲೇಖಕಿ ಅಂಜನಾ ಹೆಗಡೆ ಅವರ ಅಂಕಣ ಬರಹಗಳ ಸಂಕಲನ ‘ಬೊಗಸೆಯಲ್ಲೊಂದು ಹೂನಗೆ’. ಈ ಕೃತಿಗೆ ಲೇಖಕ, ನಾಟಕಕಾರ ಸೇತ...

‘ಒಳ್ಳೆಯ ಸಾಹಿತ್ಯ ಓದುವುದೆಂದರೆ ಒಳ...

16-04-2021 ಬೆಂಗಳೂರು

ಪತ್ರಿಕೋದ್ಯಮ, ಛಾಯಾಗ್ರಹಣ, ಸಾಹಿತ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಡಿ....