ಸಖನೂ ಸುಖವೂ ಒಂದೇ ಆಗುವ ಕ್ಷಣ

Date: 12-10-2020

Location: ಬೆಂಗಳೂರು


’ಧನಾತ್ಮಕವಾಗಿ ಯೋಚಿಸಿದರೆ ಹತ್ತು ಹಲವು ಕಾರ್ಯಗಳನ್ನು ಮಾಡಿ ಸಾಧಿಸುವ ಶಕ್ತಿ ಮನಸ್ಸಿಗಿದೆ. ಆದರೆ ನಾವು ಅದನ್ನು ಪಳಗಿಸುವ ಗೋಜಿಗೆ ಮಾತ್ರ ಹೋಗುವುದಿಲ್ಲ. ಸಾಕು ಬಿಡು… ಎಂದು ಅಲ್ಪತೃಪ್ತರಾಗಿ ಬಿಡುತ್ತೇವೆ. ಹೇಳಬೇಕೆಂದರೆ ನಮ್ಮೊಳಗಿನ ಸಾಮರ್ಥ್ಯವನ್ನು ದ್ವಿಗುಣಗೊಳಿಸಿ, ಪೂರ್ಣ ಪ್ರಮಾಣದಲ್ಲಿ ವಿನಿಯೋಗಿಸಿಕೊಳ್ಳುವ ನಿಟ್ಟಿನತ್ತ ನಾವು ಯಾವತ್ತೂ ಕಾರ್ಯಪ್ರವೃತ್ತರಾದದ್ದೇ ಇಲ್ಲ.’ ಜೀವನದ ಏಳುಬೀಳುಗಳನ್ನು ದಾಟಿ ಮುನ್ನಡೆಯಬೇಕು ಎಂಬುದನ್ನು ವಿವರಿಸಿದ್ದಾರೆ ಸಂತೋಷ ಅನಂತಪುರ.

ಕ್ರಿಯೆಗಳು ಜರುಗಬೇಕಿದ್ದರೆ ನಡೆಯಬೇಕು…ನಡೆಯುತ್ತಲೇ ಇರಬೇಕು. ಬದುಕು ಒಂದು ಕ್ರಿಯಾಪದ. ಹಾಗಾಗಿ ಬದುಕಲ್ಲಿ ಹರಿಯುವಿಕೆಯು ಸಹಜವೇ. ಹರಯವೂ ಹರಿಯುವಂತದ್ದೇ. ಆದರೆ ಕೆಲವೊಮ್ಮೆ ಹರೆಯವೂ ಹರಿಯದೇ ನಿಂತ ನೀರಾಗಿ ಬಿಡುವುದುಂಟು. ಕತ್ತಲಿಂದ ಬೆಳಕಿನೆಡೆಗೆ ಚಲಿಸುವಂತೆ, ನಮ್ಮ ನಡೆಗೊಂದು ಗುರಿಯಿರಬೇಕು. ಮತ್ತದಕ್ಕೊಬ್ಬ ಗುರುವೂ ಬೇಕು. ಆಗಲೇ ಬೆಳಗಲು ಮತ್ತು ಬೆಳಗುತ್ತಲಿರಲು ಸಾಧ್ಯ.

ಬೆಳಕು ಬಂದು ಹೋಗುತ್ತಲಿದ್ದರೇನೇ ನಮ್ಮೊಳಗಿಗೆ ಬೆಳಕಿನತ್ತ ಚಲಿಸಲು ಪ್ರೇರಣೆಯಾಗುವುದು. ಕ್ಷಣ ಕ್ಷಣದಲ್ಲೂ ವ್ಯತ್ಯಸ್ತ ಸ್ತರಗಳಲ್ಲಿ ಕಾಲ-ದೇಶದ ಜೊತೆಗೆ ಜಗ್ಗಿಕೊಂಡೇ ಚಲನೆಯು ಪ್ರವಹಿಸುತ್ತಿರುತ್ತದೆ. ಹಾಗಾಗಿ, ಹುಟ್ಟು-ಸಾವೆರಡೂ ಈ ಕ್ಷಣದಲ್ಲೇ ಘಟಿಸುವುದರಿಂದ ಈ ಕ್ಷಣವೇ ಶಾಶ್ವತವಾದದ್ದು. ಹಾಗಾಗಿ, ಗತದ ಬಾಗಿಲನ್ನು ಮುಚ್ಚಿ ಭವಿಷ್ಯದ ಬಾಗಿಲನ್ನು ತೆರೆಯುವ ಗೋಜಿಗೆ ಹೋಗದೇ ವರ್ತಮಾನದಲ್ಲಿ ಬಾಳಿ ಬದುಕಲು ಕಲಿಯಬೇಕು. ಅದಕ್ಕೊಂದು ಮನಸ್ಸಿರಬೇಕು. ಮನಸ್ಸಿಗೆ ತಿಳಿ ಹೇಳುವ ಉತ್ತಮ ಹೃದಯವನ್ನು ಜೀವವು ಹೊಂದಿರಬೇಕಷ್ಟೆ.

ಮನಸ್ಸು ಹತ್ತು ಹಲವು ಕಾರ್ಯಗಳನ್ನು ಒಂದೇ ಏಟಿಗೆ ಮಾಡಿ ಬಿಸಾಕುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಹಾಗಿದ್ದೂ ಸಮಯಕ್ಕೊಂದೇ ಕೆಲಸವನ್ನು ಮಾಡೆಂಬ ಸೂಚನೆಯನ್ನು ಒಳ ಮನಸ್ಸು ನೀಡುತ್ತಿರುತ್ತದೆ. ಇದು ನಮಗೆ ನಾವೇ ಹಾಕಿಕೊಳ್ಳುವ ಲಕ್ಷ್ಮಣರೇಖೆ. ಹೀಗಾಗಿ ಕೆಲವೊಮ್ಮೆ ಬೆಳಗಬೇಕಾದಷ್ಟು ಬೆಳಗುವುದಿಲ್ಲ.

ಧನಾತ್ಮಕವಾಗಿ ಯೋಚಿಸಿದರೆ ಹತ್ತು ಹಲವು ಕಾರ್ಯಗಳನ್ನು ಮಾಡಿ ಸಾಧಿಸುವ ಶಕ್ತಿ ಮನಸ್ಸಿಗಿದೆ. ಆದರೆ ನಾವು ಅದನ್ನು ಪಳಗಿಸುವ ಗೋಜಿಗೆ ಮಾತ್ರ ಹೋಗುವುದಿಲ್ಲ. ಸಾಕು ಬಿಡು… ಎಂದು ಅಲ್ಪತೃಪ್ತರಾಗಿ ಬಿಡುತ್ತೇವೆ. ಹೇಳಬೇಕೆಂದರೆ ನಮ್ಮೊಳಗಿನ ಸಾಮರ್ಥ್ಯವನ್ನು ದ್ವಿಗುಣಗೊಳಿಸಿ, ಪೂರ್ಣ ಪ್ರಮಾಣದಲ್ಲಿ ವಿನಿಯೋಗಿಸಿಕೊಳ್ಳುವ ನಿಟ್ಟಿನತ್ತ ನಾವು ಯಾವತ್ತೂ ಕಾರ್ಯಪ್ರವೃತ್ತರಾದದ್ದೇ ಇಲ್ಲ.

******

ವಿರಕ್ತಿಯು ಸಾಮಾನ್ಯವಾಗಿ ಸಂಚಾರಿ ಭಾವದಲ್ಲಿರುವುದೇ ಹೆಚ್ಚು. ಅದು ಸ್ಥಾಯಿಯಾಗಿ ಉಳಿಯುವಂತಹದ್ದಲ್ಲ. ಎಲ್ಲವನ್ನೂ ತೊರೆದು ನಡೆಯಬೇಕೆಂಬ ಯೋಚನೆಯು ತೀವ್ರವಾಗಿ ಕಾಡಿ, ಗುರಿ ರಹಿತರಾಗಿ ಕಂಡ ಕಂಡ ದಾರಿಯಲ್ಲಿ ನಡೆಯುವ ವೈರಾಗ್ಯವು ದೀರ್ಘ ಆಯಸ್ಸಿನದ್ದಾಗಿರುವುದಿಲ್ಲ. ಅದು ಸ್ಮಶಾನ ವೈರಾಗ್ಯದಂತೆ ಆಗಾಗ ಬಂದು ಕಾಡಿ ಹೋಗುವಂತದ್ದು. ತೊರೆದು ಜೀವಿಸುವದು ಅಷ್ಟು ಸುಲಭವಲ್ಲ. ಹಾಗಂತ ಎಲ್ಲವನ್ನೂ ತೊರೆಯುವ ಕ್ರಿಯೆಯು ಮೊದಲು ಜರುಗಬೇಕಾದದ್ದು ಅಂತರಂಗದಿಂದಲೇ ಹೊರತು ಬಹಿರಂಗದಿಂದಲ್ಲ.

ಉದ್ವೇಗಕ್ಕೆ ಒಳಗಾಗಿ ಎಲ್ಲವೂ ನಶ್ವರವೆಂದೋ, ಭ್ರಮೆಯೆಂದೋ ಮೈಗೊಡವಿ ನಡೆಯುತ್ತಿರುತ್ತೇವೆ. ಬಸವಳಿದ ಕಾಲುಗಳು ವಿಶ್ರಾಮವನ್ನು ಬಯಸಿದಾಗ ಮನಸ್ಸು ತಹಬದಿಗೆ ಬಂದು ನಿಂತಿರುವ ಘಳಿಗೆಯಲ್ಲಿ ಗಾಯದ ಗುರುತು ಉಳಿಯುವಂತೆ ಕೆಲವೊಂದು ನೆನಹುಗಳು ಅರಿವಿಲ್ಲದೆಯೇ ಬಂದು ಕಾಡತೊಡಗುತ್ತವೆ. ನೆನವರಿಕೆಯು ಬಾಡದೆ ಉಳಿಯಬೇಕಾದರೆ ನೆನಹುವಿನೊಳಗೆ ನಾವಿರಬೇಕು. ಅಂತಹ ಕ್ಷಣಗಳಲ್ಲಿ ಮನಸ್ಸು ಭಾವನಾತ್ಮಕ ಅವಲಂಬನೆಯನ್ನು ಬಯಸುತ್ತದೆ. ಅದು ಸಹಜವೂ ಹೌದು. ತಾದ್ಯಾತ್ಮತೆ ಇಲ್ಲದೆ ಮನದಲ್ಲಿ ಜರಗುವ ಕ್ರಿಯೆಗಳು ಜೀವ-ಭಾವವಿಲ್ಲದ ಕಾಂಕ್ರೀಟ್ ಜಂಗಲಿನಂತಿರುವಾಗ ಮನಸ್ಸು-ಹೃದಯಗಳೆರಡೂ ಸೇರಿರದ ಕಾರ್ಯದಿಂದ ಯಾವ ಪ್ರಯೋಜನವಿದೆ ಹೇಳಿ?

ಅಂತರಂಗದಲ್ಲಿ ನಿಸ್ಸಂಗರಾಗುತ್ತಾ ನಾವು ಚಿಂತಿಸುವ ಕಾರ್ಯವನ್ನು ಇಚ್ಚಾಪೂರ್ವಕವಾಗಿ ಮಾಡುತ್ತಿರಬೇಕು. ಹೀಗೆ ಆಂತರ್ಯದಿಂದಲೇ ವಿರಕ್ತರಾಗುತ್ತಾ ಹೋಗುತ್ತಿದ್ದಂತೆ ಬಾಹ್ಯವು ನಿರ್ಮಿಸುವ ಒತ್ತಡಗಳನ್ನು ಎದುರಿಸುವುದು ಸುಲಭವಾಗುತ್ತದೆ. ಮುಂದುವರಿದು ಯಾವುದೇ ಘಟನೆಯು ತಂದೊಡ್ಡುವ ಒತ್ತಡವು ಬಾಹ್ಯಕ್ಕೆ ತಟ್ಟಿ ಹೋಗುವುದೇ ಹೊರತು ಅದು ಅಂತರಂಗಕ್ಕೆ ತಟ್ಟಲಾರದು. ಅಂತರಗಂದಿಂದಲೇ ನಿಸ್ಸಂಗರಾಗುವುದು ಅಂದರೆ ಸುಮ್ಮನೇನು! ಅಂತಹ ಕ್ಷಮತೆಯೊಂದು ಎಲ್ಲರೊಂದಿಗೂ ಸಹಜವಾಗಿ ಬೆರೆಯುವಂತೆ ಪ್ರೇರೇಪಿಸುವುದಲ್ಲದೆ ಮಮತೆಯ ಹುಟ್ಟಿಗೂ ಕಾರಣವಾಗಿ ಬಿಡುತ್ತದೆ. ಪ್ರೀತಿಸುವುದು ಮತ್ತು ಪ್ರೀತಿಸಲ್ಪಡುವುದು ಸುಲಭವಾಗಿ ಕಾಣುವ ಬಹಳ ಕಷ್ಟದ ಕೆಲಸ.

******

ಮನುಷ್ಯನಿಂದ ನಾಯಿಯಂತೆ ಪ್ರೀತಿಸುತ್ತಾ ಮುದ್ದಿಸಲ್ಪಡುವುದು ಸಾಧ್ಯವಿಲ್ಲದ ಮಾತು. ಮಮಕಾರವನ್ನು ಅರಿತುಕೊಳ್ಳಲು ಹೊರ ಪ್ರಪಂಚಕ್ಕೆ ನಮ್ಮನ್ನು ಒಡ್ಡಿಕೊಳ್ಳಬೇಕಾಗಿಲ್ಲ. ನಮ್ಮ ಒಳ ಪ್ರಪಂಚವನ್ನೊಮ್ಮೆ ಸುತ್ತು ಹಾಕಿದರೆ ಅಷ್ಟೇ ಸಾಕು. ಅಲ್ಲಿ ತರೇವಾರಿ ಒಲವಿನ ಮಕರಂದಗಳಿರುವುದನ್ನು ಕಾಣಬಹುದು. ಹಾಗೆ ಕಂಡುಂಡು ಸವಿದ ಮಕರಂದವನ್ನು ನಿರಂತರವಾಗಿ ಹಂಚುತ್ತಲೇ ಇರಬೇಕು ಮತ್ತು ಖಾಲಿಯಾದಂತೆಯೇ ತುಂಬುತ್ತಲೂ ಇರಬೇಕು. ಮುಫತ್ತಾಗಿ ಒದಗಿ ಬರುವ ಒಲವಿನ ಜೊತೆಗಿನ ಅನುಸಂಧಾನದಿಂದ ವಂಚಿತರಾಗದೆ ಅದರೊಂದಿಗೆ ಬೆರೆಯಬೇಕು, ಕಲೆಯಬೇಕು ಜೊತೆ ಜೊತೆಗೆ ನಾವೂ ಬೆಳೆಯಬೇಕು. ಮುಂದುವರಿದು ಒಳಗಿನಿಂದ ಹೊಮ್ಮುವ ದೈವಿಕ ಪ್ರೀತಿಯ ಒಸರನ್ನು ಚಿಮ್ಮಿಸುತ್ತಲಿರಬೇಕು.

ಪ್ರೀತಿಯ ಹರಿವನ್ನು ಬಲವಂತವಾಗಿ ನಿಲ್ಲಿಸುವ ಪ್ರಯತ್ನವು ಸಾಮಾನ್ಯವಾಗಿ ವಿಫಲವಾಗುವುದೇ ಹೆಚ್ಚು. ಬಂಧವನ್ನು ಮುರಿಯುವಂತಹ ನೂರು ಕಾರಣಗಳೇ ಇರಲಿ, ಬಂಧವನ್ನು ಹಿಡಿದಿಟ್ಟುಕೊಳ್ಳುವಂತಹ ಒಂದೇ ಒಂದು ಸಕಾರಣ ನಮ್ಮೆಲ್ಲರಲ್ಲಿರಲಿ. ಅಂತೆಯೇ ನಮ್ಮನ್ನು ಬಯಸುವವರ ಒಲವನ್ನು ಕಾಪಿಟ್ಟುಕೊಳ್ಳುವ ಶಕ್ತಿಯೂ ಒದಗಿ ಬರಲೆಂದು ಸದಾ ಯಾಚಿಸುತ್ತಿರಬೇಕು.

ಅಂತಹದ್ದೊಂದು ಸುಂದರ ಕ್ರಿಯೆಯ ಖುಷಿಯಲ್ಲಿರುವಾಗಲೇ ನಮ್ಮೊಳಗಿನ ನೋಟದ ಬಗ್ಗೆ ಸ್ಪಷ್ಟತೆಯು ಮೂಡಲು ಸಾಧ್ಯ. ಶಾಂತಿಯಿಂದಲೂ ಪ್ರೀತಿಯಿಂದಲೂ ಇರುವುದನ್ನು ಕಲಿಯುತ್ತಾ, ಕಲಿಸುತ್ತಾ ಕಳೆದುಕೊಂಡ ಜಾಗದಲ್ಲಿ ಹುಡುಕುತ್ತಾ, ಅವಮಾನಿಸಿದ ಜಾಗದಲ್ಲಿ ಬೆಳೆಯತ್ತಾ ನಮ್ಮ ಇರುವನ್ನು ಸ್ಥಾಪಿಸಿಕೊಳ್ಳುವಂತಿರಬೇಕು.

ಬದುಕಲ್ಲಿ ನಾವು ಮಾಡುವುದು ಹಾಗೂ ಸಾಧಿಸುವುದೆಲ್ಲಾ ಖುಷಿಗಾಗಿಯೇ ಆಗಿರುತ್ತದೆ. ಜೀವನದ ಮೂಲ ಗುರಿಯೇ ಖುಷಿ. ಹೀಗಿರುವಾಗ ಬಾಹ್ಯ ಲೋಕದ ಖುಷಿಯ ಬೆನ್ನುಹತ್ತಿ ಓಡುವ ಭರದಲ್ಲಿ ಅದಾಗಲೇ ಆಂತರಿಕವಾಗಿರುವ ಖುಷಿಯನ್ನು ಗಮನಿಸದೆ ಹೋಗಿಬಿಡುತ್ತೇವೆ. ಆಂತರಿಕ ಖುಷಿಯ ಹಿತವನ್ನರಿಯದ ಉದ್ದೇಶರಹಿತ ಹುಡುಕಾಟವು ಮೊತ್ತದಲ್ಲಿ ಖುಷಿಯನ್ನೂ ಅನುಭವಿಸದಂತೆ ಮಾಡಿ ಬಿಡುವುದುಂಟು.

******

ಒಮ್ಮೆ ಯೋಚಿಸಿ, ಇತರ ಪ್ರಾಣಿಗಳಂತೆ ನಾವೂ ಇದ್ದಿದ್ದರೆ ಹೊಟ್ಟೆ ತುಂಬಿಸಿಕೊಂಡು ಮಲಗುವುದು ಮಾತ್ರವೇ ನಮ್ಮ ನಿತ್ಯ ಕಾಯಕವಾಗುತ್ತಿತ್ತು. ಆದರೆ ನಾವು ಮನುಷ್ಯರಾಗಿಬಿಟ್ಟೆವು ನೋಡಿ. ಹಾಗೆಲ್ಲ ಮಾಡಲಾದೀತೆ? ಎಂದು ಪ್ರಶ್ನಿಸಿದರೆ, ಹಾಗೇನು ಇಲ್ಲಪ್ಪಾ… ನಮ್ಮ ನಡುವೆಯೂ ಪ್ರಾಣಿಗಳಂತಿರುವ ಕೆಲವು ಮನುಷ್ಯ ಪ್ರಾಣಿಗಳಿವೆ ಎಂದು ಹೇಳದೆ ಬೇರೆ ವಿಧಿಯಿಲ್ಲ!

ಆಕಾರದಲ್ಲಿ ಮನುಷ್ಯರಂತೆಯೂ ವಿಕಾರದಲ್ಲಿ ಪ್ರಾಣಿಗಳಂತೆಯೂ ಇದ್ದು ಹೊಟ್ಟೆ ಪೊರೆಯುವುದೇ ಮೂಲ ಉದ್ದೇಶವನ್ನಾಗಿಸಿಕೊಂಡು ಅಲೆದಾಡುತ್ತಿರುವ ಮನುಷ್ಯ ಪ್ರಾಣಿಗಳು ಮೈ-ಬಗ್ಗಿಸಿ ದುಡಿಯುವುದಿಲ್ಲ.ಯೋಚಿಸಿಯಂತೂ ನಡೆಯುವುದೇ ಇಲ್ಲ. ಗಾಳಿ ಬಂದತ್ತ ವಾಲುತ್ತಾ,ತೆವಳುತ್ತಾ ಪರಾವಲಂಬಿಗಳಾಗಿ ಬದುಕಿಗೇ ಸಾಕಪ್ಪಾ ಈ ಜೀವವು ಭವದಲ್ಲಿರುವುದು ಎನ್ನಿಸುವಷ್ಟರಮಟ್ಟಿಗೆ ಹೇವರಿಕೆಯನ್ನು ಸೃಷ್ಟಿಸುತ್ತವೆ.

ಕ್ರಿಯೆಯೇ ಬದುಕಿನ ಮೂಲ ಸೆಲೆ. ಕ್ರಿಯೆಗಳೇ ಇಲ್ಲವಾದಲ್ಲಿ ಬದುಕಾದರೂ ಬದುಕುವುದು ಹೇಗೆಂದು ಬೇಕಲ್ಲ? ಕ್ರಿಯೆಯ ಮೂಲ ಉದ್ದೇಶವೇ ಆಹ್ಲಾದಕತೆಯನ್ನು ಅನುಭವಿಸುವುದಾಗಿದೆ. ಆಹ್ಲಾದಕತೆಯನ್ನು ಕೆಲವರು ವೈನ್ ನಲ್ಲಿ ಕಂಡರೆ ಇನ್ನು ಕೆಲವರು ಡಿವೈನ್ ನಲ್ಲಿ ಕಾಣುತ್ತಾರೆ. ಭಾವ, ಭಕುತಿ ಬೇರೆ ಬೇರೆಯಾದರೂ ಉದ್ದೇಶವೊಂದೇ. ಜಗತ್ತು ನಾವಂದುಕೊಂಡಂತೆ ನಡೆಯದೆ ಇದ್ದರೂ ನಮ್ಮ ಚಿಂತನೆ, ಭಾವನೆಗಳಾದರೂ ನಾವಂದುಕೊಂಡಂತೆ ಚಲಿಸಬೇಕು. ಕೊನೇ ಪಕ್ಷ ನಮ್ಮ ಕನಸುಗಳನ್ನಾದರೂ ನಾವು ಅಂದುಕೊಂಡಂತೆ ಕಾಣುವ ಭಾಗ್ಯವಿರಬೇಕು.

ಹಂಬಲಗಳಿಗೆ ಯಾವುದೇ,ಯಾರದೇ ಹಂಗಿರಬಾರದು ನಿಜ. ಆದರೆ ಬದುಕಿಗೆ ಮಾತ್ರ ಪ್ರೀತಿಯ ಹಂಗಿರಬೇಕು ಕಣ್ರೀ. ಪ್ರೀತಿ ಇದ್ದಲ್ಲಿ ಹಣ ಮನ್ನಣೆಯ ನಿರೀಕ್ಷೆಗಳ್ಯಾವುವೂ ಇರುವುದಿಲ್ಲ. ನಿರೀಕ್ಷೆಗಳೇನಿದ್ದರೂ ಕೊಟ್ಟ ಪ್ರೀತಿಗೆ ಪ್ರತಿಯಾಗಿ ದೊರಕುವ ಪ್ರೀತಿಯತ್ತ ಮಾತ್ರ. ಬದುಕನ್ನು ಪ್ರೀತಿಯಿಂದ ಬಾಳಿ ಬದುಕಬಲ್ಲ ಶಿಕ್ಷಣವನ್ನು ಸಂಸ್ಕಾರ, ಅನುಭವಗಳು ನೀಡಬಲ್ಲವೇ ಹೊರತು ಪಠ್ಯಗಳಂತೂ ಅಲ್ಲವೇ ಅಲ್ಲ.

ನಮ್ಮ ಚಿಂತನೆಗಳು ನಮ್ಮ ಅನುಪಸ್ಥಿತಿಯಲ್ಲೂ ಮನೆಯೊಳಗೆ ಸುಳಿದಾಡುವಂತಿರಬೇಕು. ತಪ್ಪಿಯೂ ಅವುಗಳು ಹೊಸ್ತಿಲು ದಾಟಿ ಹೋಗಬಾರದು. ನಮ್ಮದೆನ್ನುವ ಎಲ್ಲವೂ ಇಂದು ಹಂಚಿ, ಹರಡಿ, ಕರಗಿ ಹೋಗಿರುವಾಗ ನಮ್ಮದೆನ್ನುವುದಿಲ್ಲದೆ ಹರಿದು ಹಂಚಿಹೋದ ಚಿಂತನೆಗಳ ಮುಂದೆ ನಿಂತು ನಮ್ಮದ್ಯಾವುದು ಇದರಲ್ಲಿ ಎಂಬ ಗೊಂದಲದ ಹುಡುಕಾಟದಲ್ಲಿ ನಾವಿರುತ್ತೇವೆ.

ಪರಸ್ಪರರೊಡನೆ ಒಡನಾಡುವ ಅನುಭೂತಿಯನ್ನು ಇಂದು ಕಳಕೊಂಡು ಬಿಟ್ಟಿದ್ದೇವೆ ಎಂದು ನಿಮಗನಿಸುವುದಿಲ್ಲವೇ? ಯಾವುದೇ ಸಂವೇದನೆಗಳಿರಲಿ ಅವುಗಳು ಆಯಾ ಕಾಲಘಟ್ಟಕ್ಕೆ ಮಾತ್ರ ಪ್ರಸ್ತುತವೂ, ಸೀಮಿತವೂ ಆಗಿರುತ್ತವೆ. ಸಾರ್ವಕಾಲಿಕವಾಗಿರುವುದು ಬೆರಳೆಣಿಕೆಯ ಕೆಲವಷ್ಟೇ. ಹಾಗಿರುತ್ತಲೂ ಅವುಗಳು ಪ್ರಸ್ತುತವಾಗದೇ ಹೋಗಿಬಿಡುವ ಅಪಾಯವಿದೆ.

******

ಬದುಕಿನ ಹಲವು ಅಧ್ಯಾಯಗಳು ಅಸಂಗತವಾಗಿರುವ ಹೊತ್ತಲ್ಲಿ ಅದೆಲ್ಲಿಯೋ ಮೊಳೆತ ಚಿಂತನೆಯನ್ನು ಅನಾಮತ್ತಾಗಿ ಎತ್ತಿ ಉಲ್ಲೇಖಿಸುವುದು ಸಂಗತವೆನಿಸುವುದಿಲ್ಲ. ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡುವುದು ಹಾಗೂ ಒಳ್ಳೆಯದನ್ನೇ ಬಯಸುವುದನ್ನು ಕರ್ತವ್ಯವೆಂದು ಕರೆಯುವುದಿಲ್ಲ. ಅದನ್ನು ಆತ್ಮಖುಷಿ ಎಂದು ಕರೆಯುತ್ತಾರೆ. ಖುಷಿ ಎನ್ನುವುದೊಂದು ಸುಲಭವಾಗಿ ಒಯ್ಯುವ ಭಾರವಿರದ ಸಾಧನ. ನಾವು ಹೋದಲ್ಲಿ ಬಂದಲ್ಲಿ ಅದನ್ನು ಜೊತೆಯಲ್ಲಿ ಒಯ್ಯುತ್ತಿರಬಹುದಾದ ಮತ್ತು ಒಯ್ಯುತ್ತಿರಬೇಕಾದ ಭಾವಸ್ಥಿತಿ.

ಕೆಲವೊಮ್ಮೆ ಕೆಲವೊಂದು ಕಾರಣಗಳು ಬಂಧಗಳನ್ನು ಅಮೂಲ್ಯವನ್ನಾಗಿಸಿದರೆ,ಇನ್ನು ಕೆಲವು ಬಂಧಗಳು ಕಾರಣವಿಲ್ಲದೆಯೇ ಬೆಸೆದುಕೊಂಡು ಅತ್ಯಮೂಲ್ಯವೆನಿಸಿಬಿಡುತ್ತವೆ. ಅಂತಹ ಬಂಧಗಳನ್ನು ಜೀವಂತವಿರಿಸಿಕೊಳ್ಳುವ ಅವಕಾಶ ನಮ್ಮದಾಗಬೇಕು.

ಬೇರು ಬಲವಾಗಿ ಆಳಕ್ಕೆ ಹೋದಷ್ಟೂ ರೆಂಬೆ-ಕೊಂಬೆಗಳು ಗಟ್ಟಿ-ಮುಟ್ಟಾಗಿರುತ್ತವೆ. ಆಪ್ತವಾದ ಬಂಧವನ್ನು ಬೇರಿನೊಂದಿಗೆ ಬೆಳೆಸಿಕೊಳ್ಳಬೇಕು. ಬೇರಿನಿಂದ ದೂರವಾದ ರೆಂಬೆ-ಕೊಂಬೆಗಳ ಬದುಕು ದುಸ್ತರವೆನಿಸಿ ಬಿಡುವುದಿದೆ. ಅಷ್ಟೇ ಯಾಕೆ, ಅನವರತವೂ ಆತಂಕ, ತಲ್ಲಣಗಳಿಂದ ಬದುಕನ್ನು ನೂಕಬೇಕಾಗುವ ಪರಿಸ್ಥಿತಿಯೂ ಉದ್ಭವಿಸುತ್ತದೆ. ಬೇರಿನಿಂದ ದೂರವಾಗುತ್ತಾ ಹೋದಹಾಗೆ ಹೆಚ್ಚೆಚ್ಚು ಸವಕಲಾಗಿ ಒಂಟಿಯಾಗಿ ಬಿಡುತ್ತೇವೆ. ಬಂಧವನ್ನು ಮತ್ತಷ್ಟು ಗಟ್ಟಿಯಾಗಿಸಿ ಬಾಳ ಗಾಡಿಯ ಹೊರೆಯನ್ನು ಎಳೆಯುವಂತಿದ್ದರೆ, ಹೊರೆಯ ಭಾರವು ಪ್ರೀತಿಯ ಭಾವದೆದುರು ಎಂದಿಗೂ ಭಾರವೆನಿಸಿಕೊಳ್ಳುವುದಿಲ್ಲ.

******

ಬದುಕಲ್ಲಿ ಸ್ವಲ್ಪಮಟ್ಟಿಗಾದರೂ ರಾಜಿ ಮಾಡಿಕೊಳ್ಳುವುದನ್ನು ಕರಗತ ಮಾಡಿಕೊಂಡಿರಬೇಕು. ಇಲ್ಲವೆಂದರೆ ಈ ನಮ್ಮ ಸ್ವ-ಪ್ರತಿಷ್ಠೆ, ಅಹಂಗಳೆಲ್ಲಜೀವನವನ್ನು ರಾಡಿಗೊಳಿಸಿ ಬಿಡುತ್ತವೆ. ಸುಂದರ ಬದುಕನ್ನು, ಚಂದದ ಬಂಧವನ್ನು ಕಡಿದು ಹಾಕುವ ಬದಲು ದೇಹ-ಮನಸ್ಸುಗಳೆರಡೂ ಒಂದಿಷ್ಟು ಬಾಗಿದರೆ ಅಂದದ ಬದುಕಲ್ಲಿ ಬಂಧಗಳನ್ನು ಕಡಿದುಕೊಳ್ಳುವ ಪ್ರಮೇಯವು ಉದ್ಭವಿಸುವುದಿಲ್ಲ. ದುಃಖಗಳು ಹೆಚ್ಚಿದಂತೆಲ್ಲ ವಯಸ್ಸಿನ ರೇಖೆಯು ಉದ್ದವಾಗುತ್ತಾ ಹೋಗುತ್ತದೆ. ಹೊಣೆಗಾರಿಕೆಯ ಪ್ರತಿಬಿಂಬವನ್ನು ಕಾಣುತ್ತಲೇ ಬದುಕಿನ ಮೋಜುಗಳು ಸಡಗರಗಳಲ್ಲಿ ಅಡಗಿರುವುದನ್ನು ಕಾಣಬಹುದು. ಕ್ಷಣಗಳು ಒಂದೇ ಆಗಿದ್ದರೂ ಅನುಭವದ ಬಗೆ ಮಾತ್ರ ಬೇರೆ ಬೇರೆ.

ದಿನಗಳು ಭರವಸೆಯಿಂದ ಆರಂಭಗೊಂಡು ಕನಸಿನ ಜೊತೆಗೆ ಮುಗಿಯುತ್ತವೆ. ಪ್ರತೀ ದಿನವೂ ನಿರೀಕ್ಷೆಗಳ ಜೊತೆಗೆ ಹುಟ್ಟಿಕೊಳ್ಳುತ್ತವೆ. ಆದರೆ ದಿನದ ಮುಕ್ತಾಯವಂತೂ ಹಲವು ಅನುಭವಗಳೊಂದಿಗೆ ವಿರಮಿಸುತ್ತವೆ ಎನ್ನುವ ಅನುಭವ ಎಲ್ಲರದ್ದೂ. ಸಖನೂ- ಸುಖವೂ ಒಂದೇ ಆಗಿ ಬಂದು, ಕೊನೇಪಕ್ಷ ಬೆಳಕ ಹಂಗು ಕಳೆವ ತನಕವಾದರೂ ಪರಸ್ಪರರ ಕಡಿತಗಳನ್ನು ತುರಿಸಿಕೊಳ್ಳುತ್ತಾ, ಪರಸ್ಪರರ ಭಾವ ಕೋಶದಲ್ಲಿ ಸುತ್ತಿಕೊಂಡಿರಲು ಪ್ರಯತ್ನಿಸಬೇಕು.

(ಚಿತ್ರಕೃಪೆ: ಕೋಟೆಗದ್ದೆ ಎಸ್. ರವಿ ಫಿಡಿಲಿಟಸ್ ಆರ್ಟ್‌ ಗ್ಯಾಲರಿ)

MORE NEWS

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...