ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು

Date: 07-05-2022

Location: ಬೆಂಗಳೂರು


'ಸಂಸ್ಕ್ರುತದಲ್ಲಿ ಉಚ್ಚರಣೆಯ ಕ್ರಮದ ವಿವರಣೆ ಇರುವ ಕೆಲವು ದ್ವನಿಗಳು ಕನ್ನಡದಾಗ ಉಚ್ಚಾರವಾಗುವುದಿಲ್ಲ ಎಂದು ಗುರುತಿಸುವುದು ಸುಲಬ, ಆದರೆ, ಸಂಸ್ಕ್ರುತದಾಗ ಉಚ್ಚರಣೆಯ ಕ್ರಮವನ್ನು ಹೇಳಿಲ್ಲದ ಆದರೆ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳ ಕ್ರಮವನ್ನು ಕನ್ನಡದ ಅರಿಗರೆ ಹೊಸತಾಗಿ ಗುರುತಿಸುವ ಕೆಲಸ ಮಾಡುವಂತದ್ದು ತುಸು ಹೆಚ್ಚಿನ ವಿದ್ವತ್ತನ್ನು ಬಯಸುವಂತದ್ದು' ಎನ್ನುತ್ತಾರೆ ಲೇಖಕ, ಭಾಷಾ ವಿಶ್ಲೇಷಣಾಕಾರ ಡಾ.ಬಸವರಾಜ ಕೋಡಗುಂಟಿ ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳ ಕುರಿತು ವಿಶ್ಲೇಷಿಸಿದ್ದಾರೆ.

ಕೆಲವು ದ್ವನಿಗಳು ಸಂಸ್ಕ್ರುತದಾಗ ಇರಲಿಲ್ಲ ಮತ್ತು ಅವು ಕನ್ನಡದಾಗ ಸಹಜವಾಗಿ ಬಳಕೆಯಾಗುತ್ತಿದ್ದವು. ಇವುಗಳನ್ನು ಗುರುತಿಸುವುದಕ್ಕೆ ಸಾದ್ಯವಾಗಿರುವುದು ಮಾಹೇಶ್ವರ ಸೂತ್ರಗಳಾದಿ ಸಂಸ್ಕ್ರುತದಲ್ಲಿನ ದ್ವನಿವಿಗ್ನಾನದ ಸಿದ್ದಾಂತಗಳ ಸಹಾಯದಿಂದ ಎನ್ನುವುದು ನಿಜವಾದರೂ, ಆ ಸಿದ್ದಾಂತದ ಅನ್ವಯ ಸಾದ್ಯತೆಯನ್ನು ಕನ್ನಡದೊಳಗೆ ಬೆಳೆಸಿದ್ದು ಕೂಡ ಬಹು ಮಹತ್ವದ ಕಾರಣವಾಗಿರುತ್ತದೆ. ದ್ವನಿಗಳ ಉಚ್ಚರಣೆಯ ಜಾಗ ಮತ್ತು ರೀತಿಗಳನ್ನು ಅವಲೋಕಿಸಲು ಸಾದ್ಯವಾಗಿರುವುದೆ ಸಂಸ್ಕ್ರುತದಲ್ಲಿ ಇಲ್ಲದ ಕನ್ನಡದಲ್ಲಿ ಸಹಜವಾಗಿ ಬಳಕೆಯಲ್ಲಿರುವ ಈ ದ್ವನಿಗಳನ್ನು ಗುರುತಿಸಲು ಸಾದ್ಯವಾಗಿದ್ದು. ಹೀಗೆ ಗುರುತಿಸಿದ ಕನ್ನಡದ ದ್ವನಿಗಳೆಂದರೆ ಸ್ವರಗಳಾದ ಏ, ಓ, ಮತ್ತು ಅವರ‍್ಗೀಯ ವ್ಯಂಜನಗಳಾದ ಳ್, ೞ್, ಱ್. ಈ ಎಲ್ಲ ವಾಸ್ತವಗಳನ್ನು ಅಂದಿನ ವಿದ್ವಾಂಸರು ಹೇಗೆ ನಿರ‍್ವಹಿಸಿದರು ಎಂಬುದು ಬಹು ಮಹತ್ವದ ವಿಚಾರ. ಈ ವಿಚಾರಗಳನ್ನು ನಾವು ಅವಲೋಕಿಸಿದಾಗ ಅಂದಿನ ಕಾಲದಲ್ಲಿ ಇದ್ದ ದ್ವನಿವಿಗ್ನಾನದ, ಲಿಪಿಯ ಬಗೆಗಿನ ತಿಳುವಳಿಕೆ ಮತ್ತು ಅವುಗಳ ನಡುವಿನ ನಂಟು ಈ ವಿಚಾರಗಳು ಪ್ರಚಲಿತದಲ್ಲಿ ಇದ್ದವು ಮತ್ತು ಹೇಗಿದ್ದವು ಎಂಬುದು ತಿಳಿಯುತ್ತದೆ.

ಇಲ್ಲಿ ಒಂದು ವಿಚಾರವನ್ನು ಪ್ರಸ್ತಾಪಿಸಬಹುದು. ಸಂಸ್ಕ್ರುತದಲ್ಲಿ ಉಚ್ಚರಣೆಯ ಕ್ರಮದ ವಿವರಣೆ ಇರುವ ಕೆಲವು ದ್ವನಿಗಳು ಕನ್ನಡದಾಗ ಉಚ್ಚಾರವಾಗುವುದಿಲ್ಲ ಎಂದು ಗುರುತಿಸುವುದು ಸುಲಬ, ಆದರೆ, ಸಂಸ್ಕ್ರುತದಾಗ ಉಚ್ಚರಣೆಯ ಕ್ರಮವನ್ನು ಹೇಳಿಲ್ಲದ ಆದರೆ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳ ಕ್ರಮವನ್ನು ಕನ್ನಡದ ಅರಿಗರೆ ಹೊಸತಾಗಿ ಗುರುತಿಸುವ ಕೆಲಸ ಮಾಡುವಂತದ್ದು ತುಸು ಹೆಚ್ಚಿನ ವಿದ್ವತ್ತನ್ನು ಬಯಸುವಂತದ್ದು. ಇದೂ ಕೂಡ ಕನ್ನಡಕ್ಕೆ ಲಿಪಿ ಅಳವಡಿಸಿಕೊಳ್ಳುವ ಕಾಲಕ್ಕೆ ಆಗಿದ್ದು ಕನ್ನಡ ದ್ವನಿವಿಗ್ನಾನದ ಸಹಜ ಬೆಳವಣಿಗೆಯನ್ನು ಸ್ಪಶ್ಟವಾಗಿ ತೋರಿಸುತ್ತದೆ.

ಸಂಸ್ಕ್ರುತದಲ್ಲಿ ಅ, ಇ ಮತ್ತು ಉ ಎಂಬ ಈ ಮೂರು ದ್ವನಿಗಳು ಗಿಡ್ಡಕ್ಕರ ಮತ್ತು ಉದ್ದಕ್ಕರ ಎಂಬ ಎರಡು ನೆಲೆಗಳಲ್ಲಿ ಬಳಕೆಯಾಗುತ್ತವೆ. ಗಿಡ್ಡಕ್ಕರದ ಉಚ್ಚರಣೆಗೆ ಬೇಕಾದ ಸಮಯಕ್ಕಿಂತ ಎರಡು ಪಟ್ಟು ಸಮಯವನ್ನು ಉದ್ದಕ್ಕರ ಬಯಸುತ್ತದೆ. ಎ ಮತ್ತು ಒ ಸ್ವರಗಳಿಗೆ ಹೀಗೆ ಗಿಡ್ಡಕ್ಕರ-ಉದ್ದಕ್ಕರ ವ್ಯತ್ಯಾಸ ಸಂಸ್ಕ್ರುತದಾಗ ಇಲ್ಲ. ಕನ್ನಡದಾಗ ಅ, ಇ, ಉ ಇವುಗಳ ಜೊತೆಗೆ ಎ ಮತ್ತು ಒ ದ್ವನಿಗಳಿಗೂ ಅವುಗಳ ಉದ್ದಕ್ಕರ ಜೋಡಿಗಳು ಬಳಕೆಯಲ್ಲಿವೆ. ಇದಕ್ಕೆ ಸಾಕಶ್ಟು ಬಳಕೆಗಳು ದೊರೆಯುತ್ತವೆ. ಇದರಿಂದಾಗಿ ಇವುಗಳನ್ನು ಗಮನಿಸುವುದು ಸಹಜವಾಯಿತು. ಅ, ಇ ಮತ್ತು ಉ ಇವುಗಳ ಉದ್ದಕ್ಕರ ಜೋಡಿಗಳಿಗೆ ಸಂಸ್ಕ್ರುತದಲ್ಲಿ ಈಗಾಗಲೆ ಬಿನ್ನ ಅಸ್ತಿತ್ವ ಇದ್ದಿತು ಮತ್ತು ಅವುಗಳಿಗೆ ಪಾಲಿಯಲ್ಲಿ ಲಿಪಿಯನ್ನು ಮಾಡಲಾಗಿದ್ದಿತು. ಇವುಗಳನ್ನು ಕನ್ನಡಕ್ಕೆ ನೇರವಾಗಿ ತೆಗೆದುಕೊಳ್ಳಲಾಯಿತು. ಇವುಗಳ ಜೊತೆಗೆ ಎ ಮತ್ತು ಒ ದ್ವನಿಗಳಿಗೂ ಉದ್ದಕ್ಕರ ವ್ಯತ್ಯಾಸ ಕನ್ನಡದಲ್ಲಿ ಇರುವುದನ್ನು ಗುರುತಿಸಲಾಯಿತು. ಇದು ಯಾವ ಕಾಲದಲ್ಲಿ ಆಯಿತು ಎಂಬುದರ ಬಗೆಗೆ ಇನ್ನೂ ಹೆಚ್ಚಿನ ತಿಳುವಳಿಕೆಯನ್ನು ಪಡೆದುಕೊಳ್ಳಬೇಕು. ಆರಂಬದ ಶಾಸನಗಳಲ್ಲಿ ಎ-ಏ ಮತ್ತು ಒ-ಓ ಇವುಗಳ ನಡುವೆ ಲಿಪಿಯಲ್ಲಿ ವ್ಯತ್ಯಾಸ ಅಶ್ಟಾಗಿ ಕಾಣಿಸುವುದಿಲ್ಲ. ಉಚ್ಚರಣೆಯಲ್ಲಿನ ಈ ವ್ಯತ್ಯಾಸವನ್ನು ಮೊದಮೊದಲ ಹಲವು ಶಾಸನಗಳಲ್ಲಿ ಲಿಪಿಯಲ್ಲಿ ಅಬಿವ್ಯಕ್ತಿಸುವುದು ಸರಿಯಾಗಿ ಕಾಣಿಸುವುದಿಲ್ಲ. ಕ್ರಮೇಣ ಇದು ಸ್ಪಶ್ಟನೆ ಪಡೆದುಕೊಂಡಿತು. ಆದರೆ ಇದು ಕನ್ನಡ ಅರಿಗರ ನಡುವೆ ಅರಿವಿನ ಬಾಗವಾಗಿ ಇದ್ದಿತು ಎನ್ನುವುದು ಸ್ಪಶ್ಟ. ಸಂಸ್ಕ್ರುತದ ವ್ಯಾಕರಣಗಳಲ್ಲಿ ಅ ಮತ್ತು ಆ ಹೀಗೆ ಸಮಸ್ತಾನಿಗಳಾದ ಸ್ವರಗಳನ್ನು ಅವುಗಳ ಗಿಡ್ಡಕ್ಕರ ರೂಪ ಬಳಸಿಕೊಂಡು ಅವರ‍್ಣ ಎಂದು ಕರೆಯುವ ಪದ್ದತಿ ಇದೆ. ಕನ್ನಡದಲ್ಲೂ ಕೂಡ. ಎ ಮತ್ತು ಒ ಇವುಗಳಿಗೂ ಹೀಗೆ ಎವರ‍್ಣ ಮತ್ತು ಒವರ‍್ಣ ಎಂದು ಕರೆಯುವುದು ಸಹಜವಾಗಿ ಪಾರಂಪರಿಕ ಕನ್ನಡ ವ್ಯಾಕರಣಗಳಲ್ಲಿ ಇದೆ. ಅಂದರೆ, ಇವುಗಳ ಗಿಡ್ಡಕ್ಕರ ಮತ್ತು ಉದ್ದಕ್ಕರ ವ್ಯತ್ಯಾಸದ ಸ್ಪಶ್ಟ ತಿಳುವಳಿಕೆ ಇದ್ದಿತೆಂಬುದು ಸ್ಪಶ್ಟವಾಗುತ್ತದೆ. ಇತರ ದ್ರಾವಿಡ ಬಾಶೆಗಳಲ್ಲಿಯೂ ಇಂತ ದ್ವನಿವ್ಯತ್ಯಾಸ ಇರುವುದೂ ಸಹಜವಾಗಿದೆ.

ಇನ್ನು ವ್ಯಂಜನಗಳಾದ ಳ್, ೞ್, ಮತ್ತು ಱ್ ಇವುಗಳನ್ನು ಗಮನಿಸಬಹುದು. ಇವು ಮಡಿಚಿದ ಇಲ್ಲವೆ ಮೂರ‍್ದನ್ಯ ದ್ವನಿಗಳು. ಸಂಸ್ಕ್ರುತಕ್ಕೆ ಈ ಮಡಿಚಿದ ಇಲ್ಲವೆ ಪರಿವೇಶ್ಟಿತ ಇಲ್ಲವೆ ಮೂರ‍್ದನ್ಯ ದ್ವನಿಗಳು ಇತ್ತೀಚೆಗೆ ಅಂದರೆ ರುಗ್ವೇದ ಕಾಲಕ್ಕಿಂತ ತುಸು ಮೊದಲಿಗೆ ಬೆಳೆದಿವೆ. ಸಂಸ್ಕ್ರುತದ ಸಮೀಪಸಂಬಂದಿಗಳಾದ ಇಂಡೊ-ಇರಾನಿಯನ್, ತುಸು ದೂರಸಂಬಂದಿಗಳಾದ ಇಂಡೊ-ಜರ‍್ಮಾನಿಕ್ ಬಾಶೆಗಳಲ್ಲಿ ಇವು ಇಲ್ಲ. ಇದನ್ನು ಇಲ್ಲಿ ಉಲ್ಲೇಕಿಸಬೇಕಾದ ಕುತೂಹಲವೆಂದರೆ ಸಂಸ್ಕ್ರುತ ಮಾಹೇಶ್ವರಾದಿ ದ್ವನಿವಿಗ್ನಾನ ಪಟ್ಯಗಳಲ್ಲಿ ಹೆಚ್ಚಿನ ದ್ವನಿಗಳನ್ನು ಅವು ಹುಟ್ಟುವ ಜಾಗದ ಆದಾರದ ಮೇಲೆ ವಿವರಿಸಿದ್ದರೆ ಪರಿವೇಶ್ಟಿತಗಳನ್ನು ಅವು ಉಚ್ಚಾರವಾಗುವ ರೀತಿಯನ್ನು ಅವದರಿಸಿ ವಿವರಿಸಿದೆ. ಳ್ ದ್ವನಿಯು ರುಗ್ವೇದ ಕಾಲದಲ್ಲಿಯೆ ಸಂಸ್ಕ್ರುತದಲ್ಲಿ ಬಳಕೆಗೆ ಬಂದಿದ್ದಿತು ಎಂಬುದಕ್ಕೆ ರುಗ್ವೇದವೆ ಸಾಕ್ಶಿ ಒದಗಿಸುತ್ತದೆ. ಆದರೆ, ಅದಕ್ಕೆ ವರ‍್ಣಮಾಲೆಯಲ್ಲಿ ವಿವರಣೆ ಮತ್ತು ಜಾಗ ಇಲ್ಲದಿರುವುದು ಗಮನೀಯ. ಹೀಗೆ ಸಂಸ್ಕ್ರುತ ವರ‍್ಣಮಾಲೆಯಲ್ಲಿ ಕಾಣಿಸದ ಲ್ ದ್ವನಿಗೆ ಹತ್ತಿರವೆಂದು ಬಾವಿಸಿದ್ದ ಳ್ ದ್ವನಿಯ ಜೊತೆಗೆ ರ್ ದ್ವನಿಗೆ ಹತ್ತಿರವೆಂದು ವಿವರಿಸಿರುವ ಱ್ ಮತ್ತು ಡ್ ದ್ವನಿಗೆ ಹತ್ತಿರವೆಂದು ವಿವರಿಸಿರುವ ೞ್ ದ್ವನಿಗಳೂ ಕನ್ನಡದಲ್ಲಿ ಸಹಜವಾಗಿ ಬಳಕೆಯಲ್ಲಿದ್ದವು. ಇತರ ದ್ರಾವಿಡ ಬಾಶೆಗಳಲ್ಲಿಯೂ ಈ ದ್ವನಿಗಳ ಸಹಜ ಬಳಕೆ ಇದೆ. ಹಾಗಾಗಿ ಕನ್ನಡ ವಿದ್ವತ್ತು ಈ ದ್ವನಿಗಳನ್ನು ಗುರುತಿಸಿ ಅವುಗಳಿಗೆ ಲಿಪಿಗಳನ್ನೂ ಮಾಡಿಕೊಂಡಿರುವುದು ಗಮನೀಯ ವಿಚಾರ.

ಮೇಲೆ ನೋಡಿದಂತೆ ಎ-ಏ ಮತ್ತು ಒ-ಓ ಇವುಗಳ ವಿಚಾರದಲ್ಲಿ ಪ್ರತ್ಯೇಕ ಲಿಪಿಯನ್ನು ಮೊದಮೊದಲಲ್ಲಿ ಬೆಳೆಸಿಕೊಂಡಿಲ್ಲದಿದ್ದರೂ ಈ ಮೂರು ವ್ಯಂಜನಗಳಿಗೆ ಬಹು ಹಿಂದೆಯೆ ಪ್ರತ್ಯೇಕ ಲಿಪಿಗಳನ್ನು ಬೆಳೆಸಿಕೊಂಡಿದ್ದರು. ಶಾತವಾಹನರ ಕಾಲದ ಶಾಸನಗಳಲ್ಲಿಯೆ ಳ್ ದ್ವನಿಗೆ ಲಿಪಿ ಬಳಕೆಯಾಗಿದೆ. ಶಾತವಾಹನರು ಬಳಸಿದ ಬಾಶೆ ಪ್ರಾಕ್ರುತವೆ. ಅದು ಮಹಾರಾಶ್ಟ್ರೀ-ಪ್ರಾಕ್ರುತ. ಅಂದರೆ, ಕನ್ನಡದ ರಚನೆಯನ್ನು ಇಡಿಯಾಗಿ ಆವಾಹಿಸಿಕೊಂಡ ಪ್ರಾಕ್ರುತ. ಹಾಗಾಗಿ ಈ ಪ್ರಾಕ್ರುತದಲ್ಲಿ ಳ್ ದ್ವನಿ ಅತ್ಯಂತ ಸಹಜವಾಗಿ ಬಳಕೆಗೆ ಅಂದಿಗೆ ಬಂದಿರಬೇಕು. ಮರಾಟಿಯಲ್ಲಿ ಇಂದಿಗೂ ಈ ದ್ವನಿ ಅತ್ಯಂತ ಸಹಜವಾಗಿ ಬಳಕೆಯಲ್ಲಿದೆ. ಹಾಗಾಗಿ ಶಾತವಾಹನರ ಕಲ್ಬರಹದಲ್ಲಿ ಕಾಣಿಸುವ ಳ್ ದ್ವನಿಯ ಲಿಪಿಯ ಬಳಕೆಯು ಆ ದ್ವನಿಯ ಉಚ್ಚರಣೆ ಕ್ರಮವನ್ನು ಅಂದಿಗೆ ಕನ್ನಡ ಪ್ರದೇಶದ ಅರಿಗರು ಗುರುತಿಸಿದ್ದರು ಎಂಬುದನ್ನು ತೋರಿಸುತ್ತದೆ.

ಹಾಗೆಯೆ ಕನ್ನಡ ಬಾಶೆಯ ಮೊದಮೊದಲ ಶಾಸನಗಳಾದ ಕದಂಬರ ಶಾಸನಗಳಲ್ಲಿಯೆ ೞ್ ಮತ್ತು ಱ್ ದ್ವನಿಗಳಿಗೆ ಪ್ರತ್ಯೇಕ ಲಿಪಿಗಳಿರುವುದನ್ನು ಕಾಣಬಹುದು. ಹಾಗಾದರೆ, ಈ ದ್ವನಿಗಳ ಬಿನ್ನತೆಯನ್ನು ಶಾತವಾಹನ-ಕದಂಬ ಕಾಲಕ್ಕೆ ಕನ್ನಡ ಅರಿಗರು ಅರಿತುಕೊಂಡಿದ್ದರು ಮಾತ್ರವಲ್ಲದೆ ಅದಕ್ಕೆ ಲಿಪಿಯನ್ನೂ ಬೆಳೆಸಿಕೊಂಡಿದ್ದರು ಎನ್ನುವುದು ಸ್ಪಶ್ಟವಾಗುತ್ತದೆ. ಅಸೋಕನ ಲಿಪಿಯಲ್ಲಿ ಈ ದ್ವನಿಗಳಿಗೆ ಲಿಪಿ ಇರಲಿಲ್ಲ ಎಂದಾದರೆ ಅವುಗಳಿಗೆ ಕನ್ನಡದಲ್ಲಿ ಲಿಪಿರೂಪವನ್ನು ಹೇಗೆ ಬೆಳೆಸಿಕೊಳ್ಳಲಾಯಿತು ಎಂಬ ಪ್ರಶ್ನೆ ಬರುತ್ತದೆ. ಬಹುಶಾ ಕನ್ನಡಕ್ಕೆ ಬೇಕಿಲ್ಲದ ಲೃ, ಲೂೃ ದ್ವನಿಗಳ, ಉಪಾದ್ಮಾನಿಯ, ಜಿಹ್ವಾಮೂಲಿಯ ದ್ವನಿಗಳ ಬಾಗವಾಗಿದ್ದ ಚಿನ್ನೆಗಳನ್ನು ಹೀಗೆ ಈ ದ್ವನಿಗಳಿಗೆ ಲಿಪಿಯಾಗಿ ಬೆಳೆಸಿಕೊಂಡಿರುವಂತಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಅದ್ಯಯನಗಳು ಅವಶ್ಯ.

ಇದೆಲ್ಲವೂ ಸ್ಪಶ್ಟವಾಗಿ ಶಾತವಾಹನರ ಕಾಲಕ್ಕೆ, ಅಂದರೆ ಕ್ರಿಸ್ತಶಕದ ಎಡಬಲಕ್ಕೆ ಕನ್ನಡ ಲಿಪಿ ಅಳವಡಿಕೆ ಆಗಿದ್ದಿತು ಎಂಬುದನ್ನು ಎತ್ತಿ ಹಿಡಿಯುತ್ತದೆ.

ಈ ಅಂಕಣದ ಹಿಂದಿನ ಬರೆಹ:
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

ಕನ್ನಡದಾಗ ದ್ವನಿವಿಗ್ನಾನ

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...