ಸರಳ-ತೀವ್ರವಾದ ಭಾವನೆಗಳಿರುವ `ಹಾರುವ ಹಕ್ಕಿ ಮತ್ತು ಇರುವೆ’


ಕೋಮುವಾದವೆಂದರೆ ಯಾವುದೇ ವಿದೇಶದಲ್ಲಿ ಅಡಗಿ ಬಾಂಬ್ ತಯಾರಿಸುವ ಮೂಲಭೂತವಾದಿಗಳಲ್ಲ. ವರ್ಷಗಳಿಂದ ನೆರೆಹೊರೆಯವರಾದವರ ಬಗ್ಗೆ ವಿನಾಕರಣ ಅಪನಂಬಿಕೆ ಹುಟ್ಟುವುದೇ ಕೋಮುವಾದದ ಪರಿಣಾಮ. ದಕ್ಷಿಣ ಕನ್ನಡ ಮತ್ತು ಇತ್ತೀಚೆಗೆ ಉತ್ತರ ಕನ್ನಡ ಪ್ರಾಂತ್ಯಗಳಲ್ಲಿ ಹಬ್ಬುತ್ತಿರುವುದು ಇಂಥ ಕೋಮುವಾದ. 'ಮಿರ್ಜಾ ಬಷೀರ್ ಅವರ ‘ಹಾರುವ ಹಕ್ಕಿ ಮತ್ತು ಇರುವೆ’ ಕೃತಿಗೆ ರಾಜೇಂದ್ರ ಚೆನ್ನಿ ಬರೆದ ಬರೆಹ ಇಲ್ಲಿದೆ.

ಮಿರ್ಜಾ ಬಷೀರ್ ಅವರು ತಮ್ಮದೇ ಆದ ಸಣ್ಣಕತೆಗಳ ಮಾರ್ಗವೊಂದನ್ನು ಹುಡುಕಿಕೊಂಡಿದ್ದಾರೆ. ಅದನ್ನು ಹೀಗೆ ವಿವರಿಸಬಹುದೇನೋ. ಈ ಕತೆಗಳು ಒಟ್ಟಾರೆಯಾಗಿ ಭಾವನಾತ್ಮಕವಾದ ನೆಲೆಯೊಂದರಲ್ಲಿ ತಮ್ಮ ಶಕ್ತಿಯನ್ನು ಪಡೆದುಕೊಳ್ಳುತ್ತವೆ. ಅಂದರೆ ಅವು sentimental ಅಂತಲ್ಲ. ಸರಳವಾದರೂ ತೀವ್ರವಾದ ಭಾವನೆಗಳೇ ಈ ಕತೆಗಳ ಆಧಾರವಾಗಿವೆ. ಸ್ನೇಹ, ಪ್ರೀತಿ, ದ್ವೇಷ, ಕೃತಜ್ಞತೆ, ದುಃಖ ಇವೇ ಮುಂತಾದ ‘ಸಾಮಾನ್ಯ’ ವೆನ್ನುವ ಭಾವನೆಗಳು ಇವು. ತುಂಬಾ ಸಂಕೀರ್ಣವಲ್ಲದ ದಿನನಿತ್ಯದ ಸನ್ನಿವೇಷಗಳಲ್ಲಿ ಈ ಭಾವನೆಗಳ ಅಭಿವ್ಯಕ್ತಿಯಾಗುತ್ತದೆ. ಹೆಚ್ಚು ಕಡಿಮೆ ಸ್ಥಾಯಿಯಾಗಿರುವ ಅಂಶವೆಂದರೆ ಕತೆಗಳು ಸುಖಾಂತದೊಂದಿಗೆ ಮುಗಿಯುತ್ತವೆ. ಏಕೆಂದರೆ ಕತೆಗಾರರ ನಂಬಿಕೆಯೆಂದರೆ ಮನುಷ್ಯರು ಅನೇಕ ಕಾರಣಗಳಿಂದಾಗಿ ತಪ್ಪಾಗಿ ನಡೆದುಕೊಂಡು ನೋವಿಗೆ ಕಾರಣರಾಗುತ್ತಾರೆ. ಆದರೆ ಎಲ್ಲಾ ಮನುಷ್ಯರ ಸ್ವಭಾವದ ತಳಹದಿಯಲ್ಲಯೇ ಒಳ್ಳೆಯತನ, ಮಾನವೀಯತೆಗಳು ಇರುವುದರಿಂದ ತಮ್ಮ ತಪ್ಪನ್ನು ಅರಿತುಕೊಂಡು ಇತ್ಯಾತ್ಮಕವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಕತೆಗಾರರು ಮನುಷ್ಯರ ಒಳ್ಳೆಯತನದಲ್ಲಿ ಇಟ್ಟಿರುವ ನಂಬಿಕೆಗೆ ದೊಡ್ಡ ಸವಾಲುಗಳು ಎದುರಾಗುವುದಿಲ್ಲ. ಪ್ರಾಯಶಃ ಅವರಿಗೆ ಕೆಡುಕಿನಲ್ಲಿ ನಂಬಿಕೆ ಇಲ್ಲ. ಇದರಿಂದಾಗಿ ನಿಜವಾದ ಅರ್ಥದಲ್ಲಿ ಈ ಕತೆಗಳಲ್ಲಿ ಘರ್ಷಣೆಯು ನಡೆಯುವುದಿಲ್ಲ. ಮೇಲು ನೋಟಕ್ಕೆ ಘರ್ಷಣೆಯೆಂದು ಕಂಡರೂ ಬಹುಬೇಗನೇ ಅದಕ್ಕೆ ಪರಿಹಾರವು ದೊರಕಿಬಿಡುತ್ತದೆ. ಇದು ಇಲ್ಲಿಯ ಕೆಲವು ಕತೆಗಳ ದೌರ್ಬಲ್ಯವೂ ಆಗಿದೆ. ಉದಾಹರಣೆಗೆ ‘ಶರ್ಪಜ್ಜಿಯ ವಿಲ್ಲು’ ಎನ್ನುವ ಕತೆಯನ್ನು ನೋಡಬಹುದು. ಉದಾರಸ್ವಭಾವದ ಅತ್ತೆ, ಕ್ರೂರಿಯಾದ ಸೊಸೆ, ಅಸಹಾಯಕ ಮಗ ಈ ಮೂರು ಪಾತ್ರಗಳು ಪಡಿಯಚ್ಚು ಪಾತ್ರಗಳೆ. ಅನೇಕಾನೇಕ ಜನಪ್ರಿಯ ಸಣ್ಣಕತೆಗಳಲ್ಲಿ ಮರುಕಳಿಸುವ ಪಾತ್ರಗಳಿವು. ನಿರೀಕ್ಷೆಯಂತೆ ಮನನೊಂದ ಅತ್ತೆ ತೀರಿಹೋಗುತ್ತಾಳೆ. ಸಾಯುವ ಮೊದಲು ಹೇಳಿ ಬರೆಸಿದ್ದ ಅವಳ ವಿಲ್ಲಿನ ಪ್ರಕಾರ ತನ್ನದೆಲ್ಲವನ್ನೂ ಸೊಸೆಗೆ ಬಿಟ್ಟುಹೋಗಿರುತ್ತಾಳೆ. ಅದನ್ನು ಓದಿದ ಸೊಸೆಯು ತನ್ನ ದುಷ್ಟತನವನ್ನೆಲ್ಲಾ ಮರೆತು ಪಶ್ಚಾತ್ತಾಪ ಪಡುತ್ತಾಳೆ. ಇದನ್ನೇ ನಾನು ಭಾವಕತೆಯ ನೆಲೆಯೆಂದು ಕರೆದಿದ್ದು. ಸೊಸೆ ಆಶಮ್ಮಳು ಯಾಕೆ ಅಷ್ಟು ಹಿಸ್ಟೀರಿಕಲ್ ಆಗಿ ನಡೆದುಕೊಳ್ಳುತ್ತಾಳೆ ಎನ್ನುವುದಕ್ಕೆ ಕತೆಯಲ್ಲಿ ವಿವರಣೆಯಿಲ್ಲ. ಹೀಗಾಗಿ ಅವಳ ಧಿಡೀರ್ ಬದಲಾವಣೆಯು ಕತೆಗಾರರ ಒಳ್ಳೆಯತನದ ದ್ಯೋತಕವಾಗುತ್ತದೆಯೇ ಹೊರತು ಕತೆಯಲ್ಲಿ ಅನಿವಾರ್ಯವಾಗಿ ಕಂಡುಬರುವುದಿಲ್ಲ.

‘ಮುಂಜಿ’ ಎನ್ನುವ ಕತೆಯಲ್ಲಿಯೂ ಬೇಜವಬ್ದಾರಿ ಗಂಡನ ಗೈರು ಹಾಜರಿಯಲ್ಲಿ ಜೂಣಮ್ಮ ತನ್ನ ಮಗನ ಮುಂಜಿಗಾಗಿ ಪರದಾಡುತ್ತಾಳೆ. ಹೆಚ್ಚಾಗಿ ಮುಸ್ಲಿಮ್ ರಲ್ಲಿ ಬಡವರೇ ಆದ ಪಂಜಾರ ಜಾತಿಗೆ ಸೇರಿದ ಅನೇಕ ಕತೆಗಳ ಪಾತ್ರಗಳು ಕಿತ್ತಿ ತಿನ್ನುವ ಬಡತನದಲ್ಲಿ ಬಳಲುತ್ತವೆ. ಮೇಲು ವರ್ಗದ ಮುಸ್ಲಿಮ್ ರು ಉರ್ದು ಬಾರದ ಇವರುಗಳನ್ನು ಹೀಯಾಳಿಸುವುದನ್ನು ಈ ಕತೆಗಳಲ್ಲಿ ನೋಡುತ್ತೇವೆ. ಮಿರ್ಜಾ ಬಷೀರ್ ರ ಕತೆಗಳ ಶಕ್ತಿಯಿರುವುದು ಈ ಬಡತನದ ವರ್ಣನೆಯಲ್ಲಿ. ಅದು ಓದುವವರ ಮನಸ್ಸನ್ನು ತಲ್ಲಣಗೊಳಿಸಿಬಿಡುತ್ತದೆ. ಜೂಣಮ್ಮನ ಪರಿಸ್ಥಿತಿಯೂ ಹಾಗೇ ಇದೆ. ನೋವಿನಲ್ಲಿರುವ ಮಗನಿಗೆ ಒಂದಿಷ್ಟು ಕಲೀಜ ಕೊಡಲೂ ಅಸಹಾಯಕಳಾದ ಅವಳ ನೋವು ಮನಮಿಡಿಯುವಂತಿದೆ. ಆದರೆ ಕತೆಯ ಕೊನೆಗೆ ಅನಿರೀಕ್ಷಿತವಾಗಿ ದೊರೆಯುವ ಸಹಾಯದಿಂದ ಅವಳ ಸಮಸ್ಯೆ ಪರಿಹಾರವಾಗಿಬಿಡುತ್ತದೆ. ಇಲ್ಲಿ ಮತ್ತೆ ‘ರೆಹಮ್ ದಿಲ್’ ನ ಕತೆಗಾರರು ತಾವೇ ಅವಳ ನೋವಿಗೆ ಮುಲಾಮು ಹಚ್ಚುತ್ತಾರೆ. ಹಾಗೆ ನೋಡಿದರೆ ಅಶಕ್ತವಾದ ಈ ಸುಖಾಂತ್ಯಕ್ಕಿಂತ ಕತೆಯಲ್ಲಿ ಪ್ರಭಾವಿಯಾಗಿರುವುದು ಜನರ ಸಣ್ಣತನ. ಅದರಲ್ಲೂ ಈ ಎಲ್ಲಾಕತೆಗಳ ಹಿನ್ನೆಲೆಯಾಗಿರುವುದು ಮನಸ್ಸುಗಳು ಕೋಮುವಾದದ ಹುಚ್ಚಿನಲ್ಲಿ ಅದ್ದಿಹೋಗಿರುವ ನಮ್ಮ ಇಂದಿನ ಸನ್ನಿವೇಷ. ಒಂದು ಕೋವಿನವರು ಮತಾಂಧರಾಗಿ ಹಿಂಸೆಯಲ್ಲಿ ತೊಡಗುತ್ತಿದ್ದರೆ ಇನ್ನೊಂದು ಕೋಮಿನವರು ತಮ್ಮ ಸಂಪ್ರದಾಯಗಳ ಬಗ್ಗೆ ಭ್ರಮಾತ್ಮಕ ಕಲ್ಪನೆಗಳನ್ನು ಬೆಳೆಸಿಕೊಂಡಿದ್ದಾರೆ. ಈ ಕತೆಯಲ್ಲಿ ಮಾಂಸವನ್ನು ಹಲಾಲ್ ಮಾಡಲಾಗಿದಯೇ ಎನ್ನುವ ಕ್ಷುಲ್ಲಕ ವದಂತಿಯಿಂದಾಗಿ ಗಲಭೆಯೇ ಆಗಬಹುದಾದ ಸನ್ನಿವೇಷವು ನಿರ್ಮಾಣವಾಗಿದೆ. ಜೂಣಮ್ಮನ ಮಗನಿಗೆ ಕಲೀಜ ಸಿಕ್ಕುತ್ತಿಲ್ಲ. ಬಷೀರ್ ಇಂಥ ಅನೇಕ ಸೂಕ್ಷ್ಮಗಳ ಮೂಲಕ ನಮ್ಮ ಇಂದಿನ ಸ್ಥಿತಿಯನ್ನು ವಿವರಿಸುತ್ತಾರೆ. ಹಾಗೆ ನೋಡಿದರೆ ಮೊದಲಿನಿಂದಲೂ ಅವರ ಕತೆಗಳ ಬುನಾದಿಯೇ ಆಗಿರುವುದೆಂದರೆ ಎರಡೂ ಕೋಮಿನ ಸಾಮಾನ್ಯ ಜನರು ಮೂಲತಃ ಒಳ್ಳೆಯವರು, ಸಹನಶೀಲರು ಆದರೆ ಕೋಮುವಾದದ ಸಮೂಹ ಸನ್ನಿಗೆ ಸುಲಭವಾಗಿ ಪಕ್ಕಾಗುವರೂ ಹೌದು;ಆದರೆ ಅದನ್ನು ಮೀರಿ ತಮ್ಮ ಮೂಲತಃ ಒಳ್ಳೆಯತನಕ್ಕ ಮರಳಬಲ್ಲರು- ಎನ್ನುವ ಪ್ರಮೇಯವಾಗಿದೆ. ಹುಟ್ಟಿನಿಂದಲೇ ಅದ್ಭುತ ಆಟಗಾರ್ತಿಯಾಗಿರುವ ಜುಗುಣಮ್ಮ ನಿಕ್ಕರು ಹಾಕದೆಯೇ ಲಂಗಹಾಕಿಕೊಂಡು ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಲಿ ಎನ್ನುವ ಸಂಪ್ರದಾಯವಾದಿ ಚಿಕ್ಕಪ್ಪನಿಂದಾಗಿ ಊರಿನೆದುರು ಬೆತ್ತಲೆಯಾಗಿ ಅವಮಾನಕ್ಕೆ ಈಡಾಗುತ್ತಾಳೆ. ಆ ಘಟನೆಯಿಂದಾಗಿ ಊರೇ ಇಬ್ಭಾಗವಾಗಿಬಿಡುತ್ತದೆ. ಬಷೀರ್ ರ ಕತೆಗಳ ದೌರ್ಬಲ್ಯಗಳೇನೆ ಇರಲಿ, ಅವು ಮುಖ್ಯವೆನ್ನಿಸುವುದು ಈ ಕಾರಣಕ್ಕಾಗಿ. ಕೋಮುವಾದವೆಂದರೆ ಯಾವುದೇ ವಿದೇಶದಲ್ಲಿ ಅಡಗಿ ಬಾಂಬ್ ತಯಾರಿಸುವ ಮೂಲಭೂತವಾದಿಗಳಲ್ಲ. ವರ್ಷಗಳಿಂದ ನೆರೆಹೊರೆಯವರಾದವರ ಬಗ್ಗೆ ವಿನಾಕರಣ ಅಪನಂಬಿಕೆ ಹುಟ್ಟುವುದೇ ಕೋಮುವಾದದ ಪರಿಣಾಮ. ದಕ್ಷಿಣ ಕನ್ನಡ ಮತ್ತು ಇತ್ತೀಚೆಗೆ ಉತ್ತರ ಕನ್ನಡ ಪ್ರಾಂತ್ಯಗಳಲ್ಲಿ ಹಬ್ಬುತ್ತಿರುವುದು ಇಂಥ ಕೋಮುವಾದ. ಮಕ್ಕಳಿಗೆ ಚಾಕಲೇಟ್ ಕೊಡುತ್ತಿದ್ದವರನ್ನು ಕಳ್ಳರೆಂದುಕೊಂಡು ಕೊಲ್ಲಲು ಸಿದ್ಧರಾಗುವ ಜನ, ಮುಗ್ಧರನ್ನು ಗೋಹತ್ಯೆಕಾರರು ಎಂದು ಹಿಂಸಿಸಲು ಸಿದ್ಧರಾಗುವ ಜನರು ಇಂಥ ಕೋಮುವಾದದ ವಿಷಕ್ಕೆ ಬಲಿಯಾಗಿದ್ದಾರೆ. ಬಷೀರ್ ರ ಕತೆಗಳಲ್ಲಿ ಇದು ಅನಾವರಣಗೊಳ್ಳುತ್ತದೆ. ಆದರೆ ಅಷ್ಟೇ ಪ್ರಬಲವಾಗಿ ಕೋಮುವಾದವನ್ನು ಮೀರಿ ನಿಲ್ಲುವ ಉದಾರ ಸಹನಶೀಲತೆಯೂ ಈ ಕತೆಗಳಲ್ಲಿ ಅನಾವರಣವಾಗುತ್ತದೆ. ನನಗೂ ಈ ಒಳ್ಳೆಯತನದಲ್ಲಿ ನಂಬಿಕೆಯಿದೆ. ಆದರೆ ನಮ್ಮ ಕಾಲದ ಬರಹಗಾರರು ತೀವ್ರವಾಗಿ, ಆಳಕ್ಕಿಳಿದು ಕೆಡುಕನ್ನು ಎದುರು ಹಾಕಿಕೊಂಡು ಒಳ್ಳೆಯತನವನ್ನು ಸಾಬೀತು ಮಾಡಬೇಕು. ಇಲ್ಲದಿದ್ದರೆ ಅದು ಒಂದು ಬಗೆಯ wishfulfilment ಮಾತ್ರವಾಗಿಬಿಡುತ್ತದೆ. ನಾನು ಬಹಳ ಮೆಚ್ಚುವ ಇನ್ನೊಬ್ಬ ಬರಹಗಾರರಾದ ಬೊಳುವಾರು ಅವರ ‘ಸ್ವಾತಂತ್ರ್ಯದ ಓಟ’ ಕಾದಂಬರಿಯನ್ನು ನಾನು ಭಾವುಕನಾಗಿ ಓದಿದ್ದೇನೆ. ಅವರ ಪಾತ್ರಗಳ ಜೊತೆಗೆ ಅತ್ತಿದ್ದೇನೆ. ಅವರಿಗೆ ಒಳ್ಳೆಯದಾದಾಗ ಸಮಾಧಾನ ಪಟ್ಟಿದ್ದೇನೆ. ಆದರೆ ಮುತ್ತುಪ್ಪಾಡಿಯ ಗುಂಗಿನಿಂದ ಹೊರಬಂದಾಗ ನಮ್ಮ ಕಾಲದ ಬರಹಗಾರರು ಮಾಡಬೇಕಾದದ್ದು ಇನ್ನೇನೋ ಇದೆ ಎನ್ನಿಸುತ್ತದೆ. ಆದರೂ ಬಷೀರ್, ಬೊಳುವಾರರಂಥ ಬರಹಗಾರರು ನನಗೆ ಆಪ್ತರಾಗಿಯೇ ಕಾಣುತ್ತಾರೆ. ಇರಲಿ ಬಿಡಿ . ನನ್ನ ಸಂಧಿಗ್ಧಗಳು ನನಗೇ ಇರಲಿ. ಇವು ಕನ್ನಡ ವಿಮರ್ಶೆಯ ಮುಖ್ಯ ವಿಷಯಗಳಲ್ಲವಲ್ಲ! ಇವುಗಳಿಗಿಂತ ಭಿನ್ನವಾದ, ಗಟ್ಟಿಯಾದ ಕತೆಗಳು ಈ ಸಂಗ್ರಹದಲ್ಲಿವೆ. ‘ಹುಟ್ಟು’ ಯಾವ ಅವಸರವೂ ಇಲ್ಲದೆ ತನ್ನ ಸಾಂದ್ರವಾದ ವಿವರಗಳ ಮೂಲಕವೇ ಬಷೀರ್ ರ ಕಾಳಜಿಗಳಿಗೆ ಗಟ್ಟಿಯಾದ ರೂಪವನ್ನು ಕೊಡುತ್ತದೆ. ಈಯಲು ಬಂದ ಹಸುವಿಗೆ ಗರ್ಭಕೋಶದ ತೊಂದರೆಯಾಗಿದೆ. ಅದನ್ನು ಪಶುವೈದ್ಯರ ಬಳಿಗೆ ಕರೆದುಕೊಂಡು ಹೋಗಲು ಸಹಾಯ ಮಾಡುವವರು ಇಬ್ಬರು ಮುಸ್ಲಿಮ್ ಯುವಕರು. ಪಶುವೈದ್ಯರು ಕೂಡ ಮುಸ್ಲಿಮ್ ರೆ. ಹಸುವನ್ನು ಉಳಿಸುವ ಕಾಯಕದಲ್ಲಿ ಮೈಮರೆತು ಇವರು ದುಡಿಯುತ್ತಿರುವಾಗ ‘ನಾಮಧಾರಿ’ಯೊಬ್ಬರು ಈ ಪಶುವೈದ್ಯಶಾಲೆಯು ಕಸಾಯಿ ಖಾನೆಯಾಗಿದೆ, ಇಲ್ಲಿ ಹಸುಗಳನ್ನು ಕೊಲ್ಲಲಾಗುತ್ತದೆ ಎಂದು ಅಪಪ್ರಚಾರ ಮಾಡಿ ದೊಂಬಿ ಮಾಡಲು ಸಿದ್ಧರಾದ ಜನರೊಂದಿಗೆ ಬರುತ್ತಾನೆ. ದೇವರಂಥ ಮನುಷ್ಯನೆಂದು ಜನರು ಅಂದುಕೊಂಡಿರುವ ವೈದ್ಯನನ್ನೂ ಸಂಶಯದಿಂದ ನೋಡುವಂಥ ಪರಿಸ್ಥಿತಿಯಲ್ಲಿ ನಾಮಧಾರಿಯ ಕೈ ಮೇಲಾಗಬಹುದೆನ್ನಿಸುತ್ತದೆ. ಆದರೆ ಊರಿನವರ ವಿವೇಕ, ಹಿರಿಯರ ಉಪದೇಶದಿಂದಾಗಿ ಅನಾಹುತವು ತಪ್ಪುತ್ತದೆ. ಕತೆಯು ಸುಖಾಂತ್ಯದಲ್ಲಿ ಮುಗಿಯುತ್ತದೆ. ಆದರೆ ಜನರ ಭಾವನೆಗಳ ಏರಿಳಿತಗಳು, ಹಸು ಈಯುವುದರ ಗಟ್ಟಿ ವಿವರಗಳು, ಭೈರಪ್ಪ ಶಾಂತಕ್ಕರ ಒಳ್ಳೆಯತನ ಇವೆಲ್ಲವು ಕತೆಗೆ ಶಕ್ತಿಯನ್ನು ನೀಡುತ್ತವೆ. ಅಲ್ಲದೆ ಅಂತವೂ ಇನ್ನೇನೋ ಆಗಬಹುದಿತ್ತು ಎನ್ನುವ ಎಚ್ಚರದಿಂದಾಗಿ ಕತೆ ನಮ್ಮ ಸಂದರ್ಭದ ಅಪಾಯಗಳನ್ನು ಮನದಟ್ಟು ಮಾಡಿಕೊಡುತ್ತದೆ.

‘ಜುಗುಣಮ್ಮನ ಜಿಗಿತ’ ದ ಬಗ್ಗೆ ಈಗಾಗಲೇ ಪ್ರಸ್ತಾಪ ಮಾಡಿದ್ದೇನೆ. ಅನಾಥ ಮಗುವಾದ ಅವಳು ಚಿಕ್ಕಮ್ಮನ ನಡವಳಿಕೆಯಿಂದಾಗಿ ಅತ್ಯಂತ ಸಂಕೋಚದ ಹುಡುಗಿಯಾಗಿದ್ದಾಳೆ. ಸ್ಕೂಲ್ ನಲ್ಲಿಯೆ ‘ದೊಡ್ಡವಳಾಗಿ’ದ್ದರ ಅವಮಾನದಿಂದ ಇನ್ನೂ ಮುದುಡಿಕೊಂಡಿದ್ದಾಳೆ. ಈ ಮಧ್ಯ ಆಕಸ್ಮಾತ್ತಾಗಿ ಅವಳ ಕ್ರೀಡಾ ಪ್ರತಿಭೆಯು ಗೊತ್ತಾಗಿ ಅವಳ ಜೀವನಕ್ಕೊಂದು ತಿರುವು ದೊರೆಯುವಂತಾಗುತ್ತದೆ. ಆದರೆ ಸ್ಪೋಟ್ಸ್ ಉಡುಗೆ ತೊಡಬಾರದೆಂಬ ಚಿಕ್ಕಪ್ಪನ ಹಟದಿಂದಾಗಿ ಲಂಗದಲ್ಲಿಯೇ ಜಂಪ್ ಮಾಡಿ ಕೊನೇ ಕ್ಷಣದಲ್ಲಿ ಬೆತ್ತಲಾಗುವ ಸಂಕಟವನ್ನು ಅನುಭವಿಸುತ್ತಾಳೆ. ಅವಮಾನದ ಜೊತೆಗೆ ಆ ಘಟನೆಯನ್ನು ಕೋಮು ಗಲಭೆಗೆ ಬಳಸಿಕೊಳ್ಳಲು ಇಡೀ ಊರೇ ಮುಂದಾಗುತ್ತದೆ. ಸ್ಕೂಲ್ ನ ಮೇಡಮ್ ಸಹಾಯದೊಂದಿಗೆ ಅವಳು ಮನೆಬಿಟ್ಟುಹೋಗಿ ಕೊನೆಗೆ ಕ್ರೀಡೆಗಳಲ್ಲಿ ದಾಖಲೆ ಮಾಡಿ ಗೆಲ್ಲುವುದು ಸ್ವಲ್ಪ ಸಿನಿಮೀಯವಾಗಿ ಕಂಡರೂ ಬರಹಗಾರರ ಆಶಯವು ‘ಜಿಗಿತ’ ವಾಗಿರುವುದರಿಂದ ಅದನ್ನು ಒಪ್ಪಬೇಕಾಗಿದೆ. ಮುಖ್ಯವೆಂದರೆ 9ನೇ ತರಗತಿಯ ಹೆಣ್ಣುಮಗುವಿನ ಹೇಳಲಾಗದ ನೋವುಗಳನ್ನು ಈ ಕತೆಯು ಸಂವಹನಗೊಳಿಸುವ ರೀತಿ ಅಪರೂಪವಾಗಿದೆ. ಬಷೀರ್ ರ ಬಹುಪಾಲು ಕತೆಗಳಲ್ಲಿ ಗಂಡಸರು ಕೈಲಾಗದವರು ಅಥವಾ ಕಿರಾತಕರು ಆಗಿರುತ್ತಾರೆ. ಸ್ಕೂಲ್ ಗಳು ಕಿರಾತಕರ ಅಡ್ಡೆಗಳಾಗಿರುತ್ತವೆ. ಈ ಕತೆಯಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ಪ್ರಶ್ನೆಗಳನ್ನು ಕೇಳುವ ಹಿಂದಿ ಟೀಚರ್ ನಮ್ಮ ಇಂದಿನ ಶಾಲೆ ಕಾಲೇಜುಗಳಲ್ಲಿ ಖಾಯಂ ಹುದ್ದೆಯನ್ನು ಅಲಂಕರಿಸಿಕೊಂಡಿರುತ್ತಾನೆ!

ಹಿಂದಿನ ಕಥಾ ಸಂಕಲನದಲ್ಲಿ ‘ಬಟ್ಟೆಗಳೇ ಇಲ್ಲದ ಊರಿನಲ್ಲಿ’ ಕತೆಯನ್ನು ಬರೆದಿದ್ದ ಬಷೀರ್ ರು ಈ ಸಂಕಲನದಲ್ಲಿ ‘ಬಟ್ಟೆ ಮೆತ್ತಿಕೊಂಡ ಊರಿನಲಿ’ ಕತೆಯನ್ನು ಬರೆದಿದ್ದಾರೆ. ಇದು ಆ ಕತೆಯಂತೆಯೇ ಒಂದು ಸಾಂಕೇತಿಕವಾದ fantasy ಆಗಿದೆ. ಕ್ರಮೇಣವಾಗಿ ಈ ಇಂದಿನ ಬದುಕಿನ ವಿಶ್ಲೇಷಣೆಯಾಗಿ ಪರಿವರ್ತನೆಯಾಗುತ್ತದೆ. ಮನುಷ್ಯತ್ವ, ಮನುಷ್ಯ ಸಂಬಂಧಗಳನ್ನೇ ಕಳೆದುಕೊಂಡಿದ್ದ ಮನುಷ್ಯರು ವಿಚಿತ್ರವಾದ ಸಂದರ್ಭದಲ್ಲಿ ಅವುಗಳನ್ನು ಮತ್ತೆ ಪಡೆಯುವ ಪ್ರಯತ್ನವನ್ನು ಮಾಡತೊಡಗುತ್ತಾರೆ. ಕೇಂದ್ರ ಸಂಕೇತವಾಗಿರುವ ಬಟ್ಟೆ ಫ್ಯಾಕ್ಟರಿಯು ರಾಕ್ಷಸನಂತೆ ಊರು ಹಳ್ಳಿಗಳನ್ನು ನುಂಗಿ ಹಾಕಿದೆ. ಕುಟುಂಬದ ಮೌಲ್ಯಗಳು, ಸಾಮಾಜಿಕ ಸಂಬಂಧಗಳು ಸ್ವಾರ್ಥದಿಂದಾಗಿ ನಾಶವಾಗಿವೆ. ಮೊದಲ ಭಾಗದಲ್ಲಿ ಅತಿಶಯೋಕ್ತಿಯಂತೆ ಕಾಣುವ ವಿವರಗಳು ಎರಡನೇ ಭಾಗದಲ್ಲಿ ತಲ್ಲಣಗೊಳಿಸುತ್ತವೆ.

ಪುಟ್ಟದಾಗಿರುವ ಅಪೂರ್ಣವಾದಂತೆ ಅನ್ನಿಸುವ ‘ಸಲಾಮಲೈಕುಂ’ ಚಂದವಾದ ಕತೆ. ತುಂಬಾ ಅನಿರೀಕ್ಷಿತವಾದ ರೀತಿಯಲ್ಲಿ ಒಂದು ಚಿತ್ರ ಬಂದು ಹೋಗಿ ಗಾಢವಾದ ಪರಿಣಾಮವನ್ನು ಬೀರುವಂತೆ ಈ ಕತೆಯ ಶೈಲಿಯಿದೆ. ಸಂಪ್ರದಾಯಸ್ಥರಾದ ಕಲಾಂ ಸಾಹೇಬರ ಇಬ್ಬರು ಸಹೋದ್ಯೋಗಿಗಳು ಅವರ ಮನೆಗೆ ಬಂದಾಗ ಅವರ ವಯಸ್ಸಾದ ತಂದೆ ಮುಸ್ಲಿಮ್ ಸ್ನೇಹಿತರಿಗೆ ಸಲಾಮ್ ಹೇಳುವ ಬದಲು ನಮಸ್ಕಾರ ಮಾಡುತ್ತಾರೆ. ಇಷ್ಟರಿಂದಲೇ ತಳಮಳಗೊಂಡ ಕಲಾಂ ಸಾಹೇಬರು ಅವರಿಗೆ ಸಲಾಮ್ ಹೇಳಿ ಎಂದು ಒತ್ತಾಯಿಸುತ್ತಾರೆ. ಕಿವಿ ಕೇಳದ ತಂದೆ “ನಮ್ಮೆಲ್ಲರ ಮೇಲೆ ಶಿವನ ಆಶೀರ್ವಾದವಿರಲಿ’ ಎನ್ನುತ್ತಾ ಕುರಾನಿನ ಸೂರಾಗಳನ್ನು ಹೇಳತೊಡಗುತ್ತಾರೆ. ತುಂಬಾ ಭಿನ್ನವಾದ ಈ ಕತೆಯಲ್ಲದ ಕತೆ ಧಾರ್ಮಿಕ ಸೌಹಾರ್ದದ ಬಗ್ಗೆ ಸದ್ದಿಲ್ಲದೇ ಪರಿಣಾಮಕಾರಿಯಾಗಿ ಹೇಳಬೇಕಾದುದನ್ನು ಹೇಳುತ್ತದೆ.

ಬಷೀರ್ ರ ಕತೆಗಳನ್ನು ಓದಿದಾಗ ಹಿಂದೆ ಈಶ್ವರಚಂದ್ರರು, ಆನಂದ ಆಮೇಲೆ ಸದಾಶಿವರು ಬರೆದ ಕತೆಗಳು ನೆನಪಾಗುತ್ತವೆ. ಎಲ್ಲೋ ನವ್ಯದ ಭರಾಟೆಯಲ್ಲಿ ಕನ್ನಡ ಕತೆಗಳ ಈ ಸಂಪ್ರದಾಯವು ಮಸುಕಾಗಿ ಬಿಟ್ಟಿತು. ಅದು ಹೊಸದಾದ ರೂಪದಲ್ಲಿ ನಾಗವೇಣಿ ಯರ ‘ಮೀಯುವ ಆಟ’ದ ಕತೆಗಳಲ್ಲಿ ಮತ್ತು ಬಷೀರ್ ರ ಕಥಾ ಸಂಗ್ರಹಗಳಲ್ಲಿ ಮರುಹುಟ್ಟು ಪಡೆದಿದೆ. ಇದು ಸಂತೋಷದ ವಿಷಯ.

*

MORE FEATURES

ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ `ಮಹಾಪತನ’

26-04-2024 ಬೆಂಗಳೂರು

"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...

ಹಲವು ಭಾವಗಳ ಬಣ್ಣದ ಕೌದಿ ‘ಅಂಕುರ’

26-04-2024 ಬೆಂಗಳೂರು

"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಪುಸ್ತಕವಿದು!

26-04-2024 ಬೆಂಗಳೂರು

"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...